ಪರಿಚಿತನಾಗಲೀ ಹೇಗೆ..ಪ್ರಯಾಣಕು ಮುನ್ನವೇ...!
ಅಪರಿಚಿತರೊಂದಿಗೆ ನೀವು ಯಾವತ್ತಾದ್ರೂ ಪ್ರಯಾಣಿಸಿದ್ದೀರಾ? ಇಲ್ಲವಾದರೆ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಪ್ರಯತ್ನಿಸಲೇಬೇಕು. ಅಪರಿಚಿತರೊಂದಿಗಿನ ಪ್ರವಾಸ ನಮಗೆ ಅನಿರೀಕ್ಷಿತ ಅಚ್ಚರಿಗಳನ್ನು ತೆರೆದಿಡುತ್ತದೆ. ಹಾಸ್ಟೆಲ್ ಸ್ನೇಹಿತರೊಂದಿಗೆ ಹೊರಟ ಗುಂಪು ಪ್ರವಾಸ, ಬಸ್ಸಿನಲ್ಲಿ ಸಿಕ್ಕ ಅಪರಿಚಿತರ ಗೆಳೆಯರು ಇವೆಲ್ಲವೂ ಅಪರಿಚಿತ ಸಂದರ್ಭಗಳನ್ನು ಸುಂದರ ಸ್ಮರಣೀಯ ಕ್ಷಣಗಳಾಗಿ ತಿರುಗಿಸುತ್ತವೆ.
- ಅಮರ್ ಎಂ ಡಿ
ಟ್ರಿಪ್‌ಗೆ ಹೊರಟಾಗ ನಮ್ಮ ತಂದೆ, ತಾಯಿ ಕುಟುಂಬ ಇಲ್ಲವೇ ಫ್ರೆಂಡ್ಸ್ ಜತೆ ಹೋಗೋದು ತುಂಬಾ ಸಾಮಾನ್ಯ. ಆದ್ರೆ ಅಪರಿಚಿತರೊಂದಿಗೆ ನೀವು ಯಾವತ್ತಾದ್ರೂ ಪ್ರಯಾಣಿಸಿದ್ದೀರಾ? ಇಲ್ಲವಾದರೆ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಪ್ರಯತ್ನಿಸಲೇಬೇಕು. ಅಪರಿಚಿತರೊಂದಿಗಿನ ಪ್ರವಾಸ ನಮಗೆ ಅನಿರೀಕ್ಷಿತ ಅಚ್ಚರಿಗಳನ್ನು ತೆರೆದಿಡುತ್ತದೆ. ಹಾಸ್ಟೆಲ್ ಸ್ನೇಹಿತರೊಂದಿಗೆ ಹೊರಟ ಗುಂಪು ಪ್ರವಾಸ, ಬಸ್ಸಿನಲ್ಲಿ ಸಿಕ್ಕ ಅಪರಿಚಿತರ ಗೆಳೆಯರು ಇವೆಲ್ಲವೂ ಅಪರಿಚಿತ ಸಂದರ್ಭಗಳನ್ನು ಸುಂದರ ಸ್ಮರಣೀಯ ಕ್ಷಣಗಳಾಗಿ ತಿರುಗಿಸುತ್ತವೆ. ಆದ್ದರಿಂದಲೇ ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅಪರಿಚಿತರೊಂದಿಗೆ ನಿಮ್ಮ ಪ್ರವಾಸವನ್ನು ಯೋಜಿಸಲು ನೀವು ಖಂಡಿತವಾಗಿಯೂ ಪ್ರಯತ್ನಿಸಬೇಕು. ಇದರಿಂದ ಉಂಟಾಗುವ ಪ್ರಯೋಜನಗಳು ಏನು? ಮುಂದೆ ಓದಿ.
ನೀವು ಬೇರೆಯವರ ದೃಷ್ಟಿಕೋನದ ಜಗತ್ತನ್ನು ನೋಡುತ್ತೀರಿ...
ಪ್ರವಾಸದಲ್ಲಿ ಅಪರಿಚಿತರನ್ನು ಭೇಟಿಯಾದಾಗ ನೀವು ಅವರ ಕಥೆಗಳು, ಅವರ ದೃಷ್ಟಿಕೋನಗಳು, ಮತ್ತು ಅವರು ಎಡವಿರುವ ಸ್ಥಳಗಳ ಬಗ್ಗೆ ಅವರ ಪ್ರತಿಕ್ರಿಯೆಗಳನ್ನು ಕೇಳುವ ಅವಕಾಶ ಪಡೆಯುತ್ತೀರಿ. ನಿಮಗೆ ಸಾಮಾನ್ಯವಾಗಿ ಕಂಡುಬರುವುದು ಅವರಿಗೆ ಅದ್ಭುತವಾಗಿ ಅನುಭವವಾಗಬಹುದು. ಹಾಗೆಯೇ ಅವರು ಮೆಚ್ಚಿದ ಸಣ್ಣ ಪುಟ್ಟ ವಿಷಯಗಳು ನಿಮಗೆ ಹೊಸದಾಗಿ ಕಾಣಬಹುದು. ನೀವು ಗಮನಿಸದ ಹಾಗೂ ಎಂದಿಗೂ ಯೋಚಿಸದ ದೃಷ್ಟಿಕೋನಗಳ ಬಗ್ಗೆ ಅಥವಾ ವಿಷಯಗಳ ಬಗ್ಗೆ ತಿಳಿಯಬಹುದು. ಎಲ್ಲರೂ ಜಗತ್ತನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ. ಆದರೆ, ಇತರರ ಕಣ್ಣುಗಳಿಂದ ನೋಡಿದಾಗ, ಅದು ಹೊಸ ಪ್ರಪಂಚವನ್ನೇ ಪರಿಚಯಿಸುತ್ತದೆ.

ಕಂಫರ್ಟ್ ವಲಯದಿಂದ ಹೊರಬರುತ್ತೀರಿ...
ನಿಮ್ಮ ಪರಿಚಯಸ್ತರು, ಸ್ನೇಹಿತರೊಂದಿಗೆ ನೀವು ಪ್ರಯಾಣಿಸುತ್ತೀರಿ ಎಂದಾದ್ರೆ ಅಲ್ಲಿ ಹೊಸತನಕ್ಕೆ ಅವಕಾಶವಿರೋದಿಲ್ಲ. ಒಂದೇ ಸ್ಥಳ, ಒಂದೇ ತೆರನಾದ ನಿರ್ಣಯಗಳು ಮತ್ತು ಒಂದೇ ರೀತಿಯ ಆಹಾರಗಳನ್ನು ಸವಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ನೀವು ಅಪರಿಚಿತರೊಂದಿಗೆ ಪಯಣಿಸುತ್ತಿದ್ರೆ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ನೀವು ಹೊಸಬರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತೀರಿ. ಇಬ್ಬರ ನಿರ್ಣಯಗಳು ಬೇರೆ ಆಗಿದ್ದಾಗ ನಿಮ್ಮ ಪಯಣ ಮತ್ತಷ್ಟು ಮಜವಾಗಿರುತ್ತದೆ.
ಹೊಸ ಸ್ನೇಹಿತರು ಪರಿಚಯವಾಗುತ್ತಾರೆ. ಕೆಲವೊಂದು ಪ್ರಯಾಣದಲ್ಲಿ ನಿಮಗೆ ಸಿಕ್ಕ ಅಪರಿಚಿತರು ನೀವು ಊಹಿಸಲೂ ಸಾಧ್ಯವಾಗದಂಥ ಸ್ನೇಹಿತರಾಗಿಬಿಡ್ತಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಳಿತುಕೊಳ್ಳುವ ಸೀಟ್‌ನಿಂದ ಹಿಡಿದು ಒಟ್ಟಿಗೆ ಉಪಾಹಾರ, ಊಟ ಸವಿಯೋದು ನಿಮ್ಮನ್ನು ಆಪ್ತರನ್ನಾಗಿಸಿಬಿಡುತ್ತದೆ. ನಿಮಗೆ ಪರಿಚಯವಿಲ್ಲದವರೊಂದಿಗೆ ಸ್ನೇಹ ಇನ್ನಷ್ಟು ಪ್ರವಾಸವನ್ನು ಗಾಢವಾಗಿಸುತ್ತದೆ. ಆಗ ನಿಮ್ಮ ಪ್ರವಾಸ ಮತ್ತಷ್ಟು ಸಾಹಸಮಯವಾಗಿರುತ್ತದೆ. ಹೊಂದಾಣಿಕೆಯನ್ನು ಕಲಿಸುತ್ತದೆ. ನಿಮ್ಮ ಸಹ-ಪ್ರಯಾಣಿಕರ ಬಗ್ಗೆ ನಿಮಗೆ ಹೆಚ್ಚು ತಿಳಿದಿಲ್ಲದಿದ್ದಾಗ ನೀವು ಸ್ವಾಭಾವಿಕವಾಗಿ ಸ್ವಂತವಾಗಿ ಯೋಚಿಸೋದಿಲ್ಲ. ಉದಾಹರಣೆಗೆ ಊಟದ ಸಮಯ, ಮಾರ್ಗಗಳು ಅಥವಾ ನೀವು ಮುಂದೆ ದೇವಸ್ಥಾನಕ್ಕೆ ಹೋಗಬೇಕೆ ಅಥವಾ ಶಾಪಿಂಗ್ ಮಾಡಬೇಕೆ ಎಂದು ನಿರ್ಧರಿಸುವಾಗಲೂ ಸಹಪ್ರಯಾಣಿಕರ ಜೊತೆ ಚರ್ಚಿಸುತ್ತೀರಿ. ಕೆಲವೊಮ್ಮೆ ನಿಮ್ಮ ಆಲೋಚನೆಗಿಂತಲೂ ನಿಮ್ಮೊಂದಿಗೆ ಪ್ರಯಾಣಿಸುವವರ ಯೋಚನೆ ಇನ್ನೂ ವಿಭಿನ್ನವಾಗಿರಬಹುದು ಮತ್ತು ಅದ್ಭುತವಾಗಿರಬಹುದು.

ಅಪರಿಚಿತರೊಂದಿಗಿನ ಪ್ರವಾಸದಿಂದ ನೀವು ಹೊಸತನವನ್ನು ಮೈಗೂಡಿಸಿಕೊಳ್ಳುತ್ತೀರಿ. ನಿಮ್ಮಲ್ಲಿ ಹೊಸತನವನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಜತೆ ಪ್ರಯಾಣಿಸುವ ಅಪರಿಚಿತ ಸಹಪ್ರಯಾಣಿಕರಿಗೆ ನಿಮ್ಮ ಕೆಲಸ, ನಿಮ್ಮ ಬಾಲ್ಯದ ಅಡ್ಡಹೆಸರು ಹೀಗೆ ನಿಮ್ಮ ಬಗ್ಗೆ ಏನೇನೂ ತಿಳಿದಿರೋದಿಲ್ಲ. ಅವರ ಬಗ್ಗೆ ನಿಮಗೂ ತಿಳಿದಿರೋದಿಲ್ಲ. ಇದು ನೀವು ಸಂಪೂರ್ಣವಾಗಿ ಮೊದಲಿನಿಂದ ಹೊಸ ದಿನಚರಿಯನ್ನು ಆರಂಭಿಸುವಂಥ ಅನುಭವ ನೀಡುತ್ತದೆ. ಈ ಮೂಲಕ ಮತ್ತೊಮ್ಮೆ ನೀವು ನಿಮ್ಮನ್ನು ಹೊಸ ರೂಪದಲ್ಲಿ ಕಂಡುಕೊಳ್ಳುವಂತೆ ಮಾಡುತ್ತದೆ.
ಅಂದಹಾಗೆ ಅಪರಿಚಿತರ ಜತೆ ಪ್ರವಾಸ ಹೊರಡುವುದಕ್ಕೂ ಮುನ್ನ ನಿಮ್ಮ ಬಗೆಗಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಆದ್ದರಿಂದ ನೀವು ವಿಶ್ವಾಸಾರ್ಹ ಗುಂಪಿನೊಂದಿಗೆ ಪ್ರಯಾಣ ಬೆಳೆಸುವುದು ಒಳ್ಳೆಯದು.