'24th Main'ನಲ್ಲೊಂದು ಸ್ಟಾಪ್ ಕೊಡಿ
ಬೆಂಗಳೂರಿನಲ್ಲಿ ಪಕ್ಕಾ ವೆಜಿಟೇರಿಯನ್ ರೆಸ್ಟೋರೆಂಟ್‌ಗಾಗಿ ಗೂಗಲ್ ಸರ್ಚ್ ಮಾಡುತ್ತಲೇ ಇದ್ದೀರಾ? ಭೋಜನವಂತೂ ಬೊಂಬಾಟ್ ಆಗಿರಬೇಕು. ಸ್ಟಾರ್ಟರ್ಸ್, ಮೇನ್ ಕೋರ್ಸ್, ಡೆಸರ್ಟ್ಸ್ ಎಲ್ಲದರಲ್ಲೂ ಆಯ್ಕೆಗಳು ಇರಲೇಬೇಕು. ಅನ್ ಲಿಮಿಟೆಡ್ ಫುಡ್ ಸವಿಯೋದಕ್ಕೆ ದುಬಾರಿ ದುಡ್ಡು ತೆರುವಂತಾಗಬಾರದು ಅಂತಿದ್ದರೆ ನಿಮಗೆ ಬೆಸ್ಟ್ ಆಯ್ಕೆ ʻ24ನೇ ಮೇನ್ʼ.
ಒಂದು ಕಾಲಕ್ಕೆ ಜೆಪಿ ನಗರ ಭಾಗದಲ್ಲಿ ಶುದ್ಧ ಸಸ್ಯಾಹಾರ ಹೊಟೇಲ್ ಗಳಿಗಾಗಿ ಆಹಾರ ಪ್ರಿಯರು ಪರದಾಡಬೇಕಿತ್ತು. ಎಲ್ಲೇ ಹೋದರೂ ವೆಜ್ ಆಂಡ್ ನಾನ್ ವೆಜ್ ಎಂಬ ಬೋರ್ಡ್‌ಗಳೇ ಕಣ್ಣಿಗೆ ಕಾಣಸಿಗುತ್ತಿತ್ತು. ಒಳ್ಳೆಯ ಆಂಬಿಯನ್ಸ್ ಜತೆಗೆ ಪ್ಯೂರ್ ವೆಜಿಟೇರಿಯನ್ ರೆಸ್ಟೋರೆಂಟ್ ಗಾಗಿ ಎಲ್ಲೋ ದೂರದಲ್ಲಿರುವ ಕೊಣಾರ್ಕ್ ಹೊಟೇಲ್, ಸುಖಸಾಗರ್ ಹೊಟೇಲ್, ದೋಸೆಗೆ ಫೇಮಸ್ ಆಗಿದ್ದ ಏರ್ ಲೈನ್ಸ್ ಹೊಟೇಲ್‌ಗಳನ್ನು ಅರಸಿಕೊಂಡು ಹೋಗಬೇಕಿತ್ತು. ಅಂಥ ಸಂದರ್ಭದಲ್ಲಿ ಬೆಂಗಳೂರಿನ ಜೆಪಿ ನಗರದ 24ನೇ ಮುಖ್ಯರಸ್ತೆಯಲ್ಲಿ ತಲೆ ಎತ್ತಿರುವುದೇ ʻ24th Mainʼ ರೆಸ್ಟೋರೆಂಟ್. ಸಾಹಿತಿ ಗೀತಾ ಬಿ ಯು ದಂಪತಿ 16 ವರ್ಷಗಳ ಹಿಂದೆಯೇ ಹುಟ್ಟುಹಾಕಿರುವ ಈ ವೆಜಿಟೇರಿಯನ್ ರೆಸ್ಟೋರೆಂಟ್ ಅಂದಿನಿಂದಲೇ ಆಹಾರಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಎಳನೀರಿನ ಪಾಯಸಕ್ಕೆ ಬಲು ಬೇಡಿಕೆ
ಹೊಟೇಲ್ ಉದ್ಯಮಕ್ಕೆ ಇಳಿಯುವುದೆಂದರೆ ಸುಲಭದ ಮಾತಲ್ಲ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಹಾರದಲ್ಲಿ ವಿಭಿನ್ನ ಆಯ್ಕೆಗಳನ್ನು ಕೊಡಬೇಕಾಗುತ್ತದೆ. ಆಹಾರ ರುಚಿಸಿಲ್ಲವೆಂದರೆ ಇನ್ಯಾವ ಹೊಟೇಲ್ ಇದೆಯೆಂದು ಹುಡುಕುತ್ತಲೇ ಹೋಗಿಬಿಡುತ್ತಾರೆ. ಮತ್ತೊಮ್ಮೆ ಇದೇ ಹೊಟೇಲ್ ಬೇಕು ಎಂದು ಹುಡುಕಿಕೊಂಡು ಬರಬೇಕೆಂದರೆ ಅಂಥ ರುಚಿಕರ ಖಾದ್ಯಗಳನ್ನು ಉಣಬಡಿಸಲೇಬೇಕು. ಹಾಗೆ ನೋಡಿದರೆ 24ನೇ ಮೇನ್ ರೆಸ್ಟೋರೆಂಟ್‌ನಲ್ಲಿ ಎಲ್ಲವೂ ಸ್ಪೆಷಲ್. ದಿನವೂ ಅದೇ ಮೆನುವಿರೋದಿಲ್ಲ. ದಿನದಿಂದ ದಿನಕ್ಕೆ ಅನೇಕ ಬದಲಾವಣೆಗಳನ್ನು ತಂದಿರುವ ದಾಖಲೆಗಳೇ ಇವೆ. ವಾಂಗಿಬಾತ್, ಬಿಸಿಬೇಳೆ ಬಾತ್‌ನಂಥ ಅಥೆಂಟಿಕ್ ಕರ್ನಾಟಕದ ಡಿಶ್ ಗಳ ಜತೆಗೆ ನಾರ್ತ್ ಆಂಡ್ ಸೌತ್ ಕಂಬೈನ್ಡ್ ಡಿಶ್ ಗಳೂ ಕೂಡ ಹಿಟ್ ಲಿಸ್ಟ್ ನಲ್ಲಿವೆ. ಯುವ ಜನತೆಯನ್ನು ಸೆಳೆಯುವುದಕ್ಕಾಗಿ ಪಾಸ್ತಾ ಲೈವ್ ಕೌಂಟರ್ ತೆರೆಯಲಾಗಿದ್ದು, ಕಾಲಕ್ಕೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅನೇಕ ಬದಲಾವಣೆಗಳಾಗಿವೆ. ಅದೇನೇ ಆದರೂ ಇಲ್ಲಿ ಗ್ರಾಹಕರ ಆಲ್ ಟೈಮ್ ಫೇವರಿಟ್ ಐಟಂ ಅಂದರೆ ಎಳನೀರಿನ ಪಾಯಸ. ಮೂರ್ನಾಲ್ಕು ವರ್ಷಗಳಿಂದಲೂ ವಿಶೇಷ ದಿನಗಳಲ್ಲಂತೂ ಎಳನೀರಿನ ಪಾಯಸಕ್ಕಾಗಿ ಗ್ರಾಹಕರು ಇಲ್ಲಿಗೆ ಬರುವುದಿದೆ.

ಫುಡ್ ಫೆಸ್ಟಿವಲ್ ಹವಾ…
ಇದು ಯಂಗ್ ಜನರೇಷನ್ ಹೊಟೇಲ್ ಆಗಿ ಗುರುತಿಸಿಕೊಂಡಿರುವುದರ ಜತೆಗೆ ಫ್ಯಾಮಿಲಿ ರೆಸ್ಟೋರೆಂಟ್ ಎಂದು ಕರೆಸಿಕೊಂಡಿರುವುದೇ ಹೆಚ್ಚು. ಆದರೆ ಇಲ್ಲಿ ವರ್ಷಕ್ಕೆ ಮೂರು-ನಾಲ್ಕು ಬಾರಿ ನಡೆಯುವ ಫುಡ್ ಫೆಸ್ಟಿವಲ್ ಗಂತೂ ಬೆಂಗಳೂರಿನ ಮೂಲೆ ಮೂಲೆಯಿಂದ ಆಹಾರ ಪ್ರಿಯರು ಸೇರಿಬಿಡುತ್ತಾರೆ. ಮಾವಿನ ಹಣ್ಣಿನ ಸಮಯದಲ್ಲಿ ಮ್ಯಾಂಗೋ ಫುಡ್ ಫೆಸ್ಟ್, ದಸರಾ ವೇಳೆ ಸ್ಟ್ರೀಟ್ ಫುಡ್ ಫೆಸ್ಟಿವಲ್, ಡಿಸೆಂಬರ್ ನಿಂದ ಜನವರಿಯ ಅವರೆಕಾಳಿನ ಸಂದರ್ಭದಲ್ಲಂತೂ ಅವರೆಕಾಳು ಮೇಳ ಫೇಮಸ್ ಆಗಿದ್ದು, ಆರ್ಟಿಫಿಶಿಯಲ್ ಕಲರ್ ಹಾಗೂ ಫ್ಲೇವರ್ ಗಳಿಂದ ದೂರವಿರುವ ತರಹೇವಾರಿ ಖಾದ್ಯಗಳಿಗೆ ಬಲು ಬೇಡಿಕೆಯಿದೆ.

ಸಾಹಿತ್ಯದ ಜತೆಗೆ ಹೊಟೇಲ್ ಉದ್ಯಮ
ಎಲ್ಲರಿಗೂ ತಿಳಿದಿರುವಂತೆ ಈ ರೆಸ್ಟೋರೆಂಟ್‌ನ ಸಂಸ್ಥಾಪಕಿಯಾಗಿರುವ ಗೀತಾ ಬಿ. ಯು ಸಾಹಿತಿಯೂ ಹೌದು. ಬರವಣಿಗೆಯ ಜತೆ ಜತೆಗೆ ರುಚಿಕರವಾದ ಅಡುಗೆಯನ್ನು ಆಹಾರಪ್ರಿಯರಿಗೆ ಒದಗಿಸುವ ನಿಟ್ಟಿನಲ್ಲಿ ಇವರ ಶ್ರಮವನ್ನು ಮೆಚ್ಚಲೇ ಬೇಕು. ಸದ್ಯ ಈ ರೆಸ್ಟೋರೆಂಟ್ ಸುತ್ತಮುತ್ತಲೂ 10-20 ಸಸ್ಯಾಹಾರಿ ಹೊಟೇಲ್ ಗಳೇ ಹುಟ್ಟಿಕೊಂಡು, ವಿಭಿನ್ನ ಶೈಲಿಯ ಇಂಟೀರಿಯರ್ಸ್ ಮೂಲಕವೇ ಎಲ್ಲರನ್ನೂ ಆಕರ್ಷಿಸುತ್ತಿವೆ. ಆದರೆ ಇಂಟೀರಿಯರ್ಸ್ ವಿಚಾರದಲ್ಲಿ ಕಂಫರ್ಟ್‌ಗೆ ಕೊರತೆಯಾಗದಂತಿದ್ದು, ಹಳೆಯ ಶೈಲಿಯಲ್ಲೇ ಮೋಡಿ ಮಾಡುವ ಈ ರೆಸ್ಟೋರೆಂಟ್, ಆಹಾರ ವಿಚಾರದಲ್ಲಂತೂ ಆಲ್ವೇಸ್ ಬೆಸ್ಟ್ ಎನಿಸಿಕೊಂಡಿದೆ.
ಒಟ್ಟಿನಲ್ಲಿ ಅನೇಕ ವರ್ಷಗಳಿಂದಲೂ ಗ್ರಾಹಕ ಸ್ನೇಹಿಯಾಗಿಯೇ ಗುರುತಿಸಿಕೊಂಡಿರುವ ಜೆಪಿ ನಗರದ ʻ24ನೇ ಮೇನ್ʼ ರೆಸ್ಟೋರೆಂಟ್ ಬಜೆಟ್ ಫ್ರೆಂಡ್ಲೀ ದರದಲ್ಲಿ ಅಚ್ಚುಕಟ್ಟಾದ ರುಚಿಕರ ಆಹಾರವನ್ನು ಉಣಬಡಿಸುತ್ತಲೇ ಬಂದಿದ್ದು, ಫ್ಯಾಮಿಲಿ ರೆಸ್ಟೋರೆಂಟ್ ಆಗಿ ಗುರುತಿಸಿಕೊಂಡಿದೆ. ಹಾಗಾದರೆ ಮಕ್ಕಳು, ಕುಟುಂಬದ ಜತೆ ಹೋಗಲು ಒಳ್ಳೆಯ ಸಸ್ಯಾಹಾರಿ ಹೊಟೇಲ್ ಹುಡುಕುವವರು ನೀವಾದರೆ ಬೇರೆಲ್ಲೂ ಹುಡುಕಬೇಕಿಲ್ಲ. ನೇರ ಜೆಪಿ ನಗರದ ʻ24ನೇ ಮೇನ್ʼ ಗೆ ವಿಸಿಟ್ ಮಾಡಿನೋಡಿ.
24ನೇ ಮೇನ್ ಹೈಲೈಟ್ಸ್
ಬಫೆ ಸಿಸ್ಟಮ್
8 ಬಗೆಯ ಸ್ಟಾರ್ಟರ್ಸ್
ಪಾಸ್ತಾ ಗೆ ಲೈವ್ ಕೌಂಟರ್.
ಮಕ್ಕಳಿಗಾಗಿ ಸ್ಪೆಷಲ್ ಡೆಸರ್ಟ್ಸ್
ಸಾಮಾನ್ಯವಾಗಿ ಪ್ರಾಫಿಟ್ ಬೇಕೆಂದರೆ ವೆಜ್ ಆಂಡ್ ನಾನ್ ವೆಜ್ ಮಾಡಿ ಅಂತ ಸಲಹೆ ನೀಡುವವರಿದ್ದರು. ಅದು ನಿಜವೇ ಆಗಿರಬಹುದು. ಆದರೆ ಪಕ್ಕಾ ಸಸ್ಯಾಹಾರಿಗಳಾಗಿರುವುದರಿಂದ ಧೈರ್ಯ ಮಾಡಿ ಈ ಹೊಟೇಲ್ ಉದ್ಯಮದ ಸಾಹಸಕ್ಕೆ ಇಳಿದೇಬಿಟ್ಟೆವು. ನಮ್ಮಲ್ಲಿ ತಯಾರಾದ ಆಹಾರವನ್ನು ನಾವೇ ಸವಿಯದೇ ಇತರರಿಗೆ ಉಣಬಡಿಸುವುದು ಹೇಗೆ? ಈ ಖಾದ್ಯ ಚೆನ್ನಾಗಿಲ್ಲ ಎಂದು ದೂರು ಬಂದರೆ, ಹೌದಾ ಎಂದು ಪ್ರಶ್ನಿಸಿ, ಬೌಲ್ ಹಾಕಿ ರುಚಿ ನೋಡಿ ಅವರಿಗೆ ಉತ್ತರ ನೀಡಬೇಕಲ್ಲವೇ..? ಆಹಾರದಲ್ಲಿ ತಿದ್ದಿಕೊಳ್ಳುವ ಸಂದರ್ಭಗಳು ಅನೇಕ ಬಾರಿ ಬರುವುದರಿಂದ ವೆಜಿಟೇರಿಯನ್ ಹೊಟೇಲ್, ಅದೂ ಕೂಡ, ಫೈನ್ ಡೈನ್ ಇರಬೇಕು ಅಂತ ʻ24ನೇ ಮೈನ್ʼ ಶುರುಮಾಡಿದೆವು. ಆಮೇಲೆ ಬೇಡಿಕೆಯನ್ನು ನೋಡಿಕೊಂಡು ಫೈನ್ ಡೈನ್ ಬದಲಾಗಿ ಬಫೆ ಸಿಸ್ಟಮ್ ಗೆ ಬದಲಾಯಿಸಿಕೊಂಡೆವು. ಬಫೆ ಹೊಟೇಲ್ ಅಂತಲೇ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.
– ಗೀತಾ ಬಿ.ಯು, ಸಾಹಿತಿ ಹಾಗೂ 24ನೇ ಮೈನ್ ರೆಸ್ಟೋರೆಂಟ್‌ನ ಸಂಸ್ಥಾಪಕಿ