ಉಡುಪಿ ಶ್ರೀಕೃಷ್ಣ ಭವನಕ್ಕೆ ನೂರು ವರ್ಷ!
ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟೇ ಹೊಸತನವನ್ನು ಮೈದಳೆದಿದ್ದರೂ ಇಲ್ಲಿ ಇಂದಿಗೂ ಅನೇಕ ಹಳೆಯ, ಪಾರಂಪರಿಕ ಹೊಟೇಲ್, ರೆಸ್ಟೋರೆಂಟ್ಗಳಿವೆ. ವರ್ಷಗಳಿಂದಲೂ ಗ್ರಾಹಕರ ಹಸಿವನ್ನು ತಣಿಸುತ್ತಿರುವ ಈ ಹೊಟೇಲ್ಗಳು ಕಾಲಕ್ಕೆ ತಕ್ಕಂತೆ ಬದಲಾಗುವ ಬದಲು ಲುಕ್ ಅಂಡ್ ಫೀಲ್‌ಗಳನ್ನು ಹಳೆಯ ಶೈಲಿಯಲ್ಲಿಯೇ ಉಳಿಸಿಕೊಂಡು, ಅಂದಿನ ಹಳೆಯ ರುಚಿಯನ್ನೇ ಮೇಂಟೇನ್ ಮಾಡಿಕೊಂಡು ಇಂದಿಗೆ ವಿಂಟೇಜ್ ಅಥವಾ ಆಂಟಿಕ್ ಎಂಬ ಹಿರಿಮೆ ಗಳಿಸಿ ಜನರನ್ನು ಸೆಳೆಯುತ್ತಿವೆ. ಅಂಥ ಹೊಟೇಲ್ಗಳ ಪೈಕಿ ಪ್ರಮುಖವಾದುದು ಬಳೇಪೇಟೆಯ ಶ್ರೀ ಕೃಷ್ಣ ಭವನ.
ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಬ್ಬನ್ ಪೇಟೆ, ತಿಗಳರ ಪೇಟೆ, ಗಾಣಿಗರ ಪೇಟೆ ಹೀಗೆ ಸುತ್ತಮುತ್ತಲೂ ಇರುವ ಅನೇಕ ಬಗೆಯ ಹಳೆಯ ವ್ಯಾಪಾರಿ ಏರಿಯಾಗಳಲ್ಲಿ ಸುತ್ತಾಡುತ್ತಾ ದಣಿದು ಬರುವ ಮಂದಿ ಬೆಳಗಿನ ರುಚಿಕರ ತಿಂಡಿ, ಮಧ್ಯಾಹ್ನದ ಸೌತ್ ಹಾಗೂ ನಾರ್ತ್ ಇಂಡಿಯನ್ ಊಟ, ಸಂಜೆಯ ವೇಳೆ ಚಿಕ್ಕದಾಗಿ ಸ್ನ್ಯಾಕ್ಸ್ ಮಾತ್ರವಲ್ಲದೆ ರಾತ್ರಿಯ ಊಟ ಬೇಕೆಂದರೆ ಮರು ಯೋಚನೆ ಮಾಡದೆ ಹೋಗುವ ಜಾಗವೊಂದಿದೆ. ಅದುವೇ ಬಳೇಪೇಟೆ ಮುಖ್ಯರಸ್ತೆಯಲ್ಲಿರುವ ʻಯುಎಸ್‌ಕೆಬಿʼ ಅಂದರೆ ಉಡುಪಿ ಶ್ರೀ ಕೃಷ್ಣ ಭವನ ಹೊಟೇಲ್.
ಹೆಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಎಂಬ ಸಾರಥಿ
ಹೆಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಕಳೆದ ಅನೇಕ ವರ್ಷಗಳಿಂದಲೂ ಈ ಹೊಟೇಲ್‌ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಮುನ್ನಡೆಯುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿರುವ ಅನೇಕ ಸಿಬ್ಬಂದಿ ಬಳಗ ಕಳೆದ 40-50 ವರ್ಷಗಳಿಂದಲೂ ಈ ಹೊಟೇಲ್‌ನ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. ಸಿಬ್ಬಂದಿಯೊಂದಿಗಷ್ಟೇ ಅಲ್ಲದೆ ಗ್ರಾಹಕರೊಂದಿಗೂ ಬೆರೆತು, ಅವರ ಬೇಕು ಬೇಡಗಳಿಗೆ ಸ್ಪಂದಿಸುವ ಸುಬ್ರಹ್ಮಣ್ಯ ಹೊಳ್ಳರವರು, ಗ್ರಾಹಕ ಸ್ನೇಹಿ ಮಾಲೀಕರಾಗಿ ಗುರುತಿಸಿಕೊಂಡಿದ್ದಾರೆ.

ಹೀಗೊಂದು ಇತಿಹಾಸ:
ಉಡುಪಿಯ ಕೋಟ ಮೂಲದವರಾದ ಶ್ರೀ ರಾಮ ಹೊಳ್ಳ ಅವರು 1902 ರಲ್ಲಿ ಬೆಂಗಳೂರಿನ ಬಳೇಪೇಟೆ ವೃತ್ತದಲ್ಲಿ ಪ್ರಾರಂಭಿಸಿರುವುದೇ "ಉಡುಪಿ ಹೊಟೇಲ್". ಅಂದಿನ ಕಾಲದಲ್ಲೇ ಶುಚಿ, ರುಚಿಗೆ ಹೆಸರಾಗಿದ್ದ ಹೊಟೇಲನ್ನು ನಂತರ ದಿನಗಳಲ್ಲಿ ಅವರ ಸೋದರ ಅಳಿಯ ಹೆಚ್ ವಿ ಜನಾರ್ದನಯ್ಯ ನಡೆಸಿಕೊಂಡು ಬಂದರು. ಆದರೆ ಮುಂದೆ ಈ ಹೊಟೇಲ್ ತೊರೆದ ಹೆಚ್ ವಿ ಜನಾರ್ದನಯ್ಯನವರು, 1919-1920 ರಲ್ಲಿ, ಬಳೇಪೇಟೆ ಮುಖ್ಯ ರಸ್ತೆಯಲ್ಲಿ ಒಂದು ಸ್ಥಳವನ್ನು ಖರೀದಿಸಿ, 1926 ರಲ್ಲಿ, "ಉಡುಪಿ ಶ್ರೀ ಕೃಷ್ಣ ಭವನ" ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದರು.

ಸಾಗು ದೋಸೆ, ಬಾದಾಮ್ ಹಲ್ವಾ, ಧಮ್‌ರೂಟ್
ಉಡುಪಿ ಶ್ರೀ ಕೃಷ್ಣ ಭವನ ಹೊಟೇಲ್ ಅಂದರೆ ಎಲ್ಲ ಹೊಟೇಲ್‌ಗಳಂಥಲ್ಲ. ಇಲ್ಲಿನ ಮೆನುವಿನಲ್ಲಿ ಲೆಕ್ಕವಿಲ್ಲದಷ್ಟು ಫುಡ್ ಲಿಸ್ಟ್‌ಗಳಿಲ್ಲ. ಇರುವುದು ಬೆರಳೆಣಿಕೆಯಷ್ಟೇ ಐಟಂಗಳಾದರೂ ಅವು ʻಯುಎಸ್‌ಕೆಬಿʼ ಯ ಟ್ರೇಡ್ ಮಾರ್ಕ್. ಅನೇಕ ವರ್ಷಗಳಿಂದಲೂ ಇಲ್ಲಿಗೆ ಬರುತ್ತಲೇ ಇರುವ ಗ್ರಾಹಕರು, ಈ ಹೋಟೆಲ್ನ ಸ್ಪೆಷಲ್ ಮಸಾಲೆ ದೋಸೆ, ಸಾಗು ದೋಸೆ, ಇಡ್ಲಿ, ಸಾಂಬಾರ್, ಗುಲಾಬ್ ಜಾಮೂನ್, ಧಮ್‌ರೂಟ್ ಮತ್ತು ಬಾದಾಮ್ ಹಲ್ವಾವನ್ನು ತಪ್ಪದೇ ಟೇಸ್ಟ್ ಮಾಡುತ್ತಾರೆ. ಅಲ್ಲದೇ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
ಬದಲಾಗದ ವಿಂಟೇಜ್ ಲುಕ್
ಬಳೇಪೇಟೆಯ ಮುಖ್ಯರಸ್ತೆಯಲ್ಲಿ 1926ರಿಂದಲೂ ನೆಲೆ ನಿಂತಿರುವ ಉಡುಪಿ ಶ್ರೀ ಕೃಷ್ಣ ಭವನ ಹೊಟೇಲ್ ಅಂದಿನಿಂದ ಇಂದಿನವರೆಗೂ ನೋಡುವುದಕ್ಕಾಗಿಯೂ, ಆಹಾರ ವಿಚಾರದಲ್ಲಾಗಲೀ ಅಷ್ಟಾಗಿ ಬದಲಾವಣೆಗಳನ್ನು ಕಂಡಿಲ್ಲ. ಅದೇ ಕಾರಣದಿಂದ ಇಂದು ಈ ಹೊಟೇಲ್ ಬೆಂಗಳೂರಿನ ಜೀವಂತ ಪರಂಪರೆಯಾಗಿ ಗುರುತಿಸಿಕೊಂಡಿದೆ. ಗಮನಿಸಬೇಕಿರುವ ಅಂಶವೆಂದರೆ ಈ ಹೊಟೇಲ್‌ನ ರಚನೆಯಲ್ಲಿ ಮೊಘಲ್ ವಾಸ್ತುವಿನ ಪ್ರಭಾವ ಸೂಕ್ಷ್ಮವಾಗಿ ಕಾಣಿಸುತ್ತಿದ್ದು, ವಿಶಿಷ್ಟವಾದ ಇಂಡೋ-ಯುರೋಪಿಯನ್ ಶೈಲಿಯೂ ಬೆರೆತುಕೊಂಡಂತಿದೆ. ಅಲ್ಲದೆ ಇಲ್ಲಿರುವ ಪೀಠೋಪಕರಣಗಳಂತೂ ಪ್ರಾಚೀನ ತೇಗದ ಮರಗಳಿಂದ ನಿರ್ಮಾಣಗೊಂಡಿದ್ದು, ಆಕರ್ಷಕವಾದ ವಿಂಟೇಜ್ ಸ್ಪರ್ಶವನ್ನು ನೀಡುತ್ತವೆ.
ಹೊಟೇಲ್ ಒಳಗೆ ಮಿನಿ ಬೇಕರಿ
ಹೊಟೇಲ್ ಪ್ರವೇಶಿಸುತ್ತಲೇ ಬಲಭಾಗದಲ್ಲಿ ಚಿಕ್ಕದಾದ ಬೇಕರಿಯನ್ನೇ ತೆರೆದಿರಿಸಲಾಗಿದ್ದು, ಇಲ್ಲಿ ಹೋಮ್ ಮೇಡ್ ಚಕ್ಲಿ, ಕೋಡ್ಬಳೆಯಂಥ ಖಾರ, ಬಾದಾಮ್ ಹಲ್ವಾ, ಜಾಮೂನು, ಧಮ್ ರೂಟ್‌ನಂಥ ಅನೇಕ ಬಗೆಯ ಸಿಹಿ ತಿನಿಸುಗಳು, ಸ್ಪೆಷಲ್ ಗ್ರೇಪ್ ಜ್ಯೂಸ್, ಬಾದಾಮಿ ಹಾಲು ಹೀಗೆ ಎಲ್ಲವೂ ಲಭ್ಯವಿದೆ. ಹೊಟೇಲಲ್ಲಿ ಕುಳಿತು ತಿನ್ನುವ ಸಮಯವಿಲ್ಲವೆನ್ನುವವರು ಮಿನಿ ಬೇಕರಿಯೇ ಬೆಸ್ಟ್ ಎನ್ನುತ್ತಾರೆ.

ಗಾಂಧೀ ಬಜಾರ್‌ನಲ್ಲೂ ಉಡುಪಿ ವೈಭವ
100 ವರ್ಷಗಳ ಹಳೆಯ ಹೊಟೇಲ್‌ನಲ್ಲಿ ಆಹಾರ ಸೇವಿಸಬೇಕೆನ್ನುವವರು ಬಳೇಪೇಟೆಯ ವರೆಗೂ ಬರಬೇಕಾ..ಆ ರುಚಿ ಬೇರೆಲ್ಲೂ ಸಿಗೋದಿಲ್ಲವಾ ಅಂತ ಪ್ರಶ್ನಿಸುವ ಫುಡೀಸ್‌ಗಾಗಿ ಗಾಂಧೀ ಬಜಾರ್‌ನಲ್ಲೂ ಉಡುಪಿ ಶ್ರೀ ಕೃಷ್ಣ ಭವನ ಇನ್ನೊಂದು ಬ್ರಾಂಚ್ ತೆರೆದಿದೆ. ಕಟ್ಟಡವಷ್ಟೇ ಬೇರೆಯದು, ಆದರೆ ಹೊಟೇಲ್‌ನ ಮೆನುವಿನಲ್ಲಿ, ಸಿಗುವ ಆಹಾರಗಳ ರುಚಿಯಲ್ಲಿ ಒಂದಿಷ್ಟೂ ಬದಲಾವಣೆಯಿಲ್ಲ..
ಬಾಕ್ಸ್ ಐಟಂ:
ಇಂದು ಹೊಟೇಲ್ ರೆಸ್ಟೋರೆಂಟ್‌ಗಳು ಒಂದು ವರ್ಷ, ಎರಡು ವರ್ಷಗಳ ಕಾಲ ಉಳಿದು ಮುನ್ನಡೆಸುವುದೇ ಕಷ್ಟ. ಆದರೆ ನಮ್ಮ ಈ ಹೊಟೇಲ್ ಸುಮಾರು 100 ವರ್ಷಗಳಿಂದಲೂ ಇದೆ. ಹೊಟೇಲ್ ಉದ್ಯಮದಲ್ಲಿಇದು ಸುಲಭದ ಮಾತಲ್ಲ. ಆದರೆ ಇದಕ್ಕೆ ಪ್ರಮುಖ ಕಾರಣ ನಮ್ಮ ಸಿಬ್ಬಂದಿ ವರ್ಗ. ಗ್ರಾಹಕರಿಗಾಗಿ ಆಹಾರ ತಯಾರಿಸ ಬೇಕಾದರೆ ಅದರ ಬಗ್ಗೆ ನಿಮ್ಮಲ್ಲಿ ಆಸಕ್ತಿಯಿರಲಿ, ಆಹಾರ ತಯಾರಿಕೆಯಲ್ಲಿ ಖುಷಿ ಇರಲಿ ಎಂಬುದಾಗಿ ಮಾತ್ರ ನಾನು ಮಾರ್ಗದರ್ಶನ ನೀಡಿದ್ದೇನೆ. ಆದರೆ ಅವರು ಆ ಮಾತುಗಳಿಗೆ ಬೆಲೆ ಕಲ್ಪಿಸಿ, ಇದು ತಮ್ಮದೇ ಹೊಟೇಲ್ ಎನ್ನುವಂತೆ ಕೆಲಸ ಮಾಡುತ್ತಾರೆ. ಯಾವುದೇ ಸಂಸ್ಥೆಯ ಗೆಲುವಿರುವುದು ಅಲ್ಲಿಯೇ. ಈ ಬಗ್ಗೆ ನನಗೂ ಹೆಮ್ಮೆಯಿದೆ.
- ಹೆಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ವಿಳಾಸ:
ಬಳೇಪೇಟೆ
ಉಡುಪಿ ಶ್ರೀಕೃಷ್ಣ ಭವನ, ಜನಾರ್ಧನ್ ಬಿಲ್ಡಿಂಗ್ಸ್, ನಂ.123-124, ಬಳೇಪೇಟೆ, ಬೆಂಗಳೂರು, ಕರ್ನಾಟಕ - 560053
ದೂ: 080-22284777/22284999
--
ಗಾಂಧೀ ಬಜಾರ್
ನಂ.115/116, ಗಾಂಧೀ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -560004
ದೂ: 080-22676565/9513244111