ಸೆಂಚುರಿ ಸ್ಟಾರ್ ಸಿಟಿಆರ್
ಹೆಸರು ಬದಲಾದರೂ ರುಚಿ ಮತ್ತು ಗುಣಮಟ್ಟ ಎಂದಿನಂತೆ ಉತ್ಕೃಷ್ಟವಾಗಿರುವುದು ಸಿಟಿಆರ್ ಹೆಗ್ಗಳಿಕೆ. ಇಲ್ಲಿ ಒಮ್ಮೆ ದೋಸೆ ತಿಂದವರನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು, ಮತ್ತೊಮ್ಮೆ ದೋಸೆ ತಿನ್ನಿಸಿ ಕೇಳಿ.. ಅವರು ಇದು ಸಿಟಿಆರ್ ದೋಸೆ ಎಂದು ಕಂಡು ಹಿಡಿಯದೇ ಇರುವುದಿಲ್ಲ.
- ಅಕ್ಷಯ್ ಆತ್ರೇಯ
ಬೆಂಗಳೂರಿನ ಪ್ರತಿ ಪ್ರತಿಷ್ಟಿತ ಏರಿಯಾಗಳಲ್ಲೂ ಒಂದೇ ಒಂದಾದ್ರೂ ಗತಕಾಲದ, ಪಾರಂಪರಿಕ ಎಂಬಷ್ಟು ಹೆಸರು ಮಾಡಿದ ಹೊಟೇಲ್ ಸಿಕ್ಕೇ ಸಿಗುತ್ತದೆ. ಎಂಟಿಆರ್, ವಿದ್ಯಾರ್ಥಿ ಭವನ, ಎನ್ ಎಮ್ ಹೆಚ್, ಎಸ್ ಎಲ್ ವಿ, ಜನತಾ ಹೀಗೆ ಹತ್ತಾರು ಹೊಟೇಲ್‌ಗಳು ಇಂದಿಗೂ ತಮ್ಮ ಖ್ಯಾತಿಯನ್ನು ಉಳಿಸಿಕೊಂಡು ಬಂದಿವೆ. ಐವತ್ತು ನೂರು ವರ್ಷದ ಇತಿಹಾಸ ಹೊಂದಿರುವ ಈ ಹೊಟೇಲ್ ಗಳು ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿವೆ. ಇಂದಿನ ಜಮಾನಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಅಂದಿನ ಗುಣಮಟ್ಟ, ಪರಂಪರೆ, ಆತಿಥ್ಯವಿಧಾನ ಇವೆಲ್ಲವನ್ನೂ ಮುಂದುವರಿಸಿಕೊಂಡು ಈ ಜಮಾನದ ಹೊಟೇಲ್ ಗಳನ್ನೇ ಪೈಪೋಟಿಯಲ್ಲಿ ಸೋಲಿಸಿ ಮುನ್ನುಗ್ಗುತ್ತಿವೆ. ಅಂಥ ಒಂದು ಎವರ್ ಗ್ರೀನ್ ಹೊಟೇಲ್ ಅಂದರೆ ಅದು ಮಲ್ಲೇಶ್ವರದ ಸಿಟಿಆರ್. ಸೆಂಟ್ರಲ್ ಟಿಫಿನ್ ರೂಂ
ಮಲ್ಲೇಶ್ವರ ಅಂದರೆ ಅದು ಅಚ್ಚಕನ್ನಡಿಗರ ಪ್ರದೇಶ. ಆಧುನಿಕತೆಯ ಭರಾಟೆಯಲ್ಲೂ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಚೆಲುವಿನ ಏರಿಯಾ. ಮಲ್ಲೇಶ್ವರ ಅಂದರೆ ಹೂವು, ಹಣ್ಣು, ಸೀರೆ ಬಟ್ಟೆಗಳ ಅಂಗಡಿ, ಬೀದಿಬದಿಯ ವ್ಯಾಪಾರ, ತಿನಿಸುಗಳ ಆಗರ. ಇಂಥ ಮಲ್ಲೇಶ್ವರದ ಏಳನೇ ಕ್ರಾಸ್ ಕಾರ್ನರ್ ನಲ್ಲಿ ಲ್ಯಾಂಡ್ ಮಾರ್ಕ್ ಆಗಿ ನಿಂತಿರುವ ಹಳೆಯ ಕಟ್ಟಡವೇ ಸಿಟಿಆರ್ ಹೊಟೇಲ್. ಶ್ರೀಸಾಗರ್ ಎಂಬ ಹೆಸರು ಹೊತ್ತರೂ, ಸೆಂಟ್ರಲ್ ಟಿಫಿನ್ ರೂಮ್ ಎಂಬ ಉದ್ದ ಹೆಸರಿದ್ದರೂ ಇದು ಫೇಮಸ್ ಆಗಿದ್ದು ಮಾತ್ರ ಸಿಟಿಆರ್ ಎಂದೇ. ಮಲ್ಲೇಶ್ವರ ಮಾತ್ರವಲ್ಲ ಬೆಂಗಳೂರಲ್ಲಿ ಯಾರನ್ನೇ ಕೇಳಿದರೂ ಸಿಟಿಆರ್ ಗೊತ್ತಿಲ್ಲ ಎನ್ನುವುದಿಲ್ಲ. ಮಲ್ಲೇಶ್ವರದ ಏಳನೇಕ್ರಾಸ್ ಗೆ ಬಂದು ಸಿಟಿಆರ್ ನಿಮ್ಮ ಕಣ್ಣಿಗೆ ಕಾಣಲಿಲ್ಲವೆಂದರೆ ಅತಿ ಉದ್ದದ ಕ್ಯೂ ಇರುವ ಜಾಗ ಎಲ್ಲಿದೆಯೋ ಅದೇ ಸಿಟಿಆರ್ ಅಂದುಕೊಳ್ಳಬಹುದು. ಹೌದು ಇಲ್ಲಿ ದೋಸೆ ತಿನ್ನೋದಕ್ಕೆ ನಿಲ್ಲುವ ಕ್ಯೂ ಸ್ಟಾರ್ ಸಿನಿಮಾದ ಮೊದಲ ಶೋಗೆ ಟಿಕೆಟ್ ಗಾಗಿ ನಿಲ್ಲುವ ಕ್ಯೂ ಇದ್ದಂತೆ ಇರುತ್ತದೆ.

ಸಾಂಪ್ರದಾಯಿಕ ಶೈಲಿಯ ಚೇರ್, ಟೇಬಲ್, ಸರ್ವರ್ ಗಳು ಎಲ್ಲದರ ಜತೆಗೆ ಇಂದಿನ ಆಧುನಿಕ ಜಗತ್ತಿನ ವಸ್ತು ಉಪಕರಣಗಳನ್ನೂ ಬಳಸಿಕೊಂಡು, ಹಳೇಬೇರು ಹೊಸ ಚಿಗುರು ಎಂಬಂತೆ ರಾರಾಜಿಸುತ್ತಿದೆ ಸಿಟಿಆರ್. ಹೊರಗಿನಿಂದ ಹಳೆಯ ಕಾಲದ ಒಂದು ಬಾಗಿಲು ಕಾಣುತ್ತದೆ. ಅದನ್ನು ನೋಡಿ ಇದು ಚಿಕ್ಕ ಹೊಟೇಲ್ ಎಂದು ಭಾವಿಸಿದರೆ ಮೋಸಹೋದಂತೆ. ಒಳಗೆ ಬ್ರಹ್ಮಾಂಡವೇ. ಏಕಕಾಲದಲ್ಲಿ ನೂರಕ್ಕೂ ಹೆಚ್ಚು ಮಂದಿ ತಿಂಡಿ ತಿನ್ನುವಷ್ಟು ಜಾಗವಿದೆ. ತಮಾಷೆಯೆಂದರೆ ಹೊಟೇಲ್ ಹೊರಗೆ ಕ್ಯೂ ಕೂಡ ಅದೇ ಸಂಖ್ಯೆಯಲ್ಲಿ ಇರುತ್ತದೆ.
ಇತಿಹಾಸ ಬಲ್ಲಿರಾ?
ಸಿಟಿಆರ್ ಹೊಟೇಲನ್ನು 1920 ರಲ್ಲಿ ವೈ.ವಿ ಸುಬ್ರಹ್ಮಣ್ಯನವರು ಪ್ರಾರಂಭಿಸುತ್ತಾರೆ. ಎಪ್ಪತ್ತು ವರ್ಷಗಳ ಜನಪ್ರಿಯತೆಯನ್ನು ಬೆನ್ನಲ್ಲಿಟ್ಟುಕೊಂಡ ಸಿ ಟಿ ಆರ್ 1992 ರಲ್ಲಿ ಸಂಜೀವ ಪೂಜಾರಿಯವರ ನೇತೃತ್ವದಲ್ಲಿ ಶ್ರೀಸಾಗರ್ ಆಗಿ ಬದಲಾಗುತ್ತದೆ. ಆದರೆ ಜನಮಾನಸದಿಂದ ಸಿಟಿಆರ್ ಎಂಬ ಹೆಸರು ಮಾಸುವುದೇ ಇಲ್ಲ. ಹೀಗಾಗಿ ಶ್ರೀ ಸಾಗರ್ ಮತ್ತು ಸಿ ಟಿ ಆರ್ ಎರಡೂ ಹೆಸರುಗಳು ಬೋರ್ಡ್ ನಲ್ಲಿ ಕಾಣಸಿಗುವಂತಾಗುತ್ತದೆ. ಹೆಸರು ಬದಲಾದರೂ ರುಚಿ ಮತ್ತು ಗುಣಮಟ್ಟ ಎಂದಿನಂತೆ ಉತ್ಕೃಷ್ಟವಾಗಿರುವುದು ಸಿಟಿಆರ್ ಹೆಗ್ಗಳಿಕೆ. ಇಲ್ಲಿ ಒಮ್ಮೆ ದೋಸೆ ತಿಂದವರನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು, ಮತ್ತೊಮ್ಮೆ ದೋಸೆ ತಿನ್ನಿಸಿ ಕೇಳಿ.. ಅವರು ಇದು ಸಿಟಿಆರ್ ದೋಸೆ ಎಂದು ಕಂಡು ಹಿಡಿಯದೇ ಇರುವುದಿಲ್ಲ.
ಸಿಟಿಆರ್ ಬೆಣ್ಣೆ ದೋಸೆ
ಸಿಟಿಆರ್ ನಲ್ಲಿ ದೋಸೆಯಲ್ಲದೇ ಹಲವಾರು ತಿಂಡಿಗಳಿವೆ. ಎಲ್ಲವೂ ವಾಹ್ ಅನಿಸುವಷ್ಟು ರುಚಿಯೂ ಇದೆ. ಆದರೂ ಆಹಾರ ಪ್ರಿಯರು ಇಲ್ಲಿ ಬಂದು ಕ್ಯೂ ನಿಲ್ಲುವುದು ತಮ್ಮ ಫೇವರಿಟ್ ಬೆಣ್ಣೆ ದೋಸೆಗಾಗಿ. ಮೊದಲು ಒಂದು ಬೆಣ್ಣೆ ದೋಸೆ ತಿನ್ನೋಣ ಆನಂತರ ಬೇರೆ ತಿಂಡಿ ಆರ್ಡರ್ ಮಾಡೋಣ ಎಂಬುದು ಇಲ್ಲಿನ ಗ್ರಾಹಕರ ಪಾಲಿಸಿ.

ಇಲ್ಲಿನ ಇಡ್ಲಿ ಚಟ್ನಿ, ಮದ್ದೂರು ವಡೆ, ರವೆ ಇಡ್ಲಿ, ವಡಾ, ಪೂರಿ-ಸಾಗು, ಸ್ಪೆಷಲ್ CTR ಇಡ್ಲಿ, ಖಾರಾಬಾತ್, ಕೇಸರಿಬಾತ್, ಮಂಗಳೂರು ಬಜ್ಜಿ ಇಷ್ಟೆಲ್ಲ ಇವೆಲ್ಲದಕ್ಕೂ ಅದರದ್ದೇ ಆದ ಫ್ಯಾನ್ಸ್ ಇದ್ದಾರೆ. ಕೇವಲ ಚಟ್ನಿಗಾಗಿಯೇ ಕಿಲೋಮೀಟರ್ ಗಟ್ಲೆ ದೂರದಿಂದ ಬರ್ತಾರೆ ಅಂದ್ರೆ ಸಿಟಿಆರ್ ನ ಸಿಗ್ನೇಚರ್ ಹೇಗಿರಬಹುದು ಊಹಿಸಿ.
ಸಿಟಿಆರ್ ಮುಂದೆ ಇಷ್ಟೊಂದು ಜನ ಕ್ಯೂ ನಿಲ್ತಾರೆ, ಇವರೇಕೆ ದೊಡ್ಡ ಹೊಟೇಲ್ ಮಾಡೋ ಬದಲು ಇಲ್ಲೇ ಮುಂದುವರಿಯುತ್ತಿದ್ದಾರೆ, ಇವರೇಕೆ ಫ್ರಾಂಚೈಸ್ ಮಾಡಿಲ್ಲ ಅಂತೆಲ್ಲ ಪ್ರಶ್ನೆಗಳಿರಬಹುದು. ಸಿಟಿಆರ್ ಇಲ್ಲಿಂದ ಸ್ಥಳಾಂತರವಾದರೆ ಅದರ ಐತಿಹಾಸಿಕ ಸೊಬಗು ಕಳೆದುಕೊಳ್ಳುತ್ತದೆ. ಸಿಟಿಆರ್ ಎಂಬುದು ಕೇವಲ ದೋಸೆ ಅಲ್ಲ, ಕೇವಲ ತಿಂಡಿ ತಿನಿಸು ಅಲ್ಲ. ನೂರು ವರ್ಷಗಳ ಲೆಗೇಸಿ ಅದು. ಅಲ್ಲಿನ ಚೇರು ಟೇಬಲ್ಲು, ಕ್ಯೂ ನಿಲ್ಲುವ ಫುಟ್ ಪಾತು, ವೇಟರ್ ಗಳು, ಕ್ಯಾಶ್ ಟೇಬಲ್ಲು, ನೀರಿನ ಲೋಟ, ಹೊಟೇಲಿನ ಘಮ ಎಲ್ಲದರೊಂದಿಗೆ ವರ್ಷಾನುವರ್ಷಗಳ ಬಾಂಧವ್ಯ ಬೆಳೆಸಿಕೊಂಡುಬಿಟ್ಟಿದ್ದಾರೆ ಗ್ರಾಹಕರು. ಹೀಗಾಗಿ ಸಿಟಿಆರ್ ಎಷ್ಟೇ ಜನಪ್ರಿಯವಾದರೂ, ಎಷ್ಟೇ ಲಾಭದಲ್ಲಿದ್ದರೂ ಈಗಿನ ಸ್ವರೂಪ ಮತ್ತು ಜಾಗವನ್ನು ಬದಲಿಸಿಲ್ಲ.
ಇನ್ನೂ ನೂರು ವರ್ಷಗಳು ಮುಂದಿನ ಹತ್ತಾರು ಪೀಳಿಗೆಗೂ ಸಿಟಿಆರ್ ನ ನೋಟ ಇದೇ ರೀತಿ ಸಿಕ್ಕಬಹುದು. ಹಾಗಾಗಲಿ ಎಂಬುದು ಸಿಟಿಆರ್ ನಲ್ಲಿ ತಿಂದವರ ಮನಃಪೂರ್ವಕ ಹಾರೈಕೆ. ಬೈ ದ ವೇ ಸಿಟಿಆರ್ ಸದ್ಯದಲ್ಲೇ ಹೊಸ ಸುದ್ದಿಯೊಂದನ್ನು ಕೊಡುತ್ತಿದೆ. ನಿರೀಕ್ಷೆ ಇರಲಿ.