ಐವತ್ತರ ಹೊಸ್ತಿಲಲ್ಲಿ ಡಿವೈನ್ ಪಾರ್ಕ್
ಉಡುಪಿಯಿಂದ ಉತ್ತರಕ್ಕೆ 20 ಕಿಮೀ ದೂರದಲ್ಲಿರುವ ಈ ಡಿವೈನ್ ಪಾರ್ಕ್, ರಾಷ್ಟ್ರೀಯ ಹೆದ್ದಾರಿ NH66ರಲ್ಲಿ ಸಾಗುವಾಗ ಕೋಟಾದ ಬಳಿ ನಿಮ್ಮ ಕಣ್ಣಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಇಳಿದು ಒಳ ಹೊಕ್ಕರೆ ಕಣ್ಣೆದುರಿಗೆ, ಮನಃಪಟಲದಲ್ಲಿ ತುಂಬಿಕೊಳ್ಳುವುದೆಲ್ಲ ಅಕ್ಷರಶಃ ಆಧ್ಯಾತ್ಮ.
ಡಿವೈನ್ ಪಾರ್ಕ್ ಹೆಸರೇ ಹೇಳುವಂತೆ ಇಲ್ಲಿ ದಿವ್ಯತೆಯ ಅನುಭವ ಅಡಕವಾಗಿದೆ. ಜಾತಿ, ಧರ್ಮ, ಲಿಂಗ, ವರ್ಣ ಯಾವ ಭೇದಗಳು ಇಲ್ಲಿ ಇಲ್ಲ. ಸರ್ವ ಧರ್ಮೀಯರು ಇಲ್ಲಿಗೆ ಭೇಟಿ ನೀಡುತ್ತಾರೆ, ಆಧ್ಯಾತ್ಮಿಕ ಅನುಭೂತಿಗೆ ಶರಣಾಗುತ್ತಾರೆ. ಇಲ್ಲಿ ಎಲ್ಲಾ ಧರ್ಮದ ದೇವರುಗಳನ್ನು ಪೂಜಿಸಲಾಗುತ್ತದೆ. ಮುಖ್ಯ ದ್ವಾರದಲ್ಲೇ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಕಂಡು ಮುಂದೆ ಸಾಗಿದರೆ, ಡಿವೈನ್ ಪಾರ್ಕ್‌ನ ಮುಖ್ಯ ಮಂದಿರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅದರ ಸುತ್ತಲೂ ಪ್ರಭಾವಳಿಯಲ್ಲಿರುವಂತೆ ಸರ್ವ ಧರ್ಮಗಳ ಒಟ್ಟು 30 ದೇವತೆಗಳ ವಿಗ್ರಹಗಳನ್ನು ಸರದಿ ಅನ್ವಯ ಪೂಜಿಸಲಾಗುತ್ತಿದೆ. ರಾಮಕೃಷ್ಣ ಪರಮಹಂಸರ ಜತೆಗೆ ಆಯಾ ದಿನದ ಮಹತ್ವದ ದೇವರುಗಳಿಗೆ ಕುಂಕುಮಾರ್ಚನೆ ಜರುಗುತ್ತದೆ. ವಿಶೇಷವೆಂದರೆ ಇಲ್ಲಿ ಅಲ್ಲಾಹು, ಏಸು ಕ್ರಿಸ್ತರನ್ನೂ ಪೂಜಿಸಲಾಗುತ್ತಿದ್ದು, ವಾರದ ವಿಶೇಷ ದಿನಗಳಲ್ಲಿ ಅವರಿಗೂ ಕುಂಕುಮಾರ್ಚನೆಗಳು ನೆರವೇರುತ್ತವೆ. ʻದೇವನೊಬ್ಬ ನಾಮ ಹಲವುʼ ಎನ್ನುವುದು ನಿಮಗಲ್ಲಿ ಅರಿಯಲು ಸಿಗುವ ಸಂದೇಶ. ಯಾವ ಆಕಾರಕ್ಕೆ ನೀವು ಯಾವ ಹೆಸರನ್ನಿಟ್ಟು ಪೂಜಿಸಿದರೂ ಎಲ್ಲವೂ ಶಕ್ತಿಗೆ ಸಂದುವ ಪೂಜೆ ಎನ್ನುವುದು ಇದರ ತಾತ್ಪರ್ಯವಾಗಿದೆ. ಇದೊಂದು ಸ್ಪಿರಿಚುವಲ್ ಲ್ಯಾಬೊರೇಟರಿ.
ಇದರ ಪಕ್ಕದಲ್ಲೇ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ರಚಿಸಿದ ಶ್ರೀ ಬುಧ ಕೌಶಿಕ ಮಹರ್ಷಿಯ ಮೂರ್ತಿಯನ್ನು ಮರವೊಂದರ ಕೆಳಗೆ ಕುಳಿತಿರುವಂತೆ ರೂಪಿಸಲಾಗಿದೆ. ಬುಧ ಕೌಶಿಕ ಮಹರ್ಷಿಗಳು 1500 ವರ್ಷಗಳ ಹಿಂದೆ ಇಲ್ಲಿಯೇ ವಾಸವಾಗಿದ್ದರು ಎಂದು ನಂಬಲಾಗಿದೆ. ಅದರ ಎದುರಿಗೆ ವಾಸುಕಿ ವನವೂ ಇದೆ.
ಇಷ್ಟೆಲ್ಲಾ ಅದ್ಭುತಗಳ ಈ ಡಿವೈನ್ ಪಾರ್ಕ್ ಅನ್ನು 1986ರ ಜನವರಿ 14ರಂದು ಶ್ರೀ ರಾಮಕೃಷ್ಣ ಮಠದ ಹಿರಿಯ ಸನ್ಯಾಸಿ ಪೂಜ್ಯ ಸ್ವಾಮಿ ಜಗದಾತ್ಮಾನಂದಾಜೀ ಅವರು ಈ ಉದ್ಘಾಟಿಸಿದರು. ಅಂದಿನಿಂದ ಶ್ರೀ ಗುರೂಜಿ ಎಲ್ಲಾ ಆಧ್ಯಾತ್ಮಿಕ ಆಕಾಂಕ್ಷಿಗಳಿಗೆ ಸ್ವಯಂ ಸಾಕ್ಷಾತ್ಕಾರದ ಗುರಿಯತ್ತ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಉಡುಪಿಯಿಂದ ಉತ್ತರಕ್ಕೆ 20 ಕಿಮೀ ದೂರದಲ್ಲಿರುವ ಈ ಡಿವೈನ್ ಪಾರ್ಕ್, ರಾಷ್ಟ್ರೀಯ ಹೆದ್ದಾರಿ NH66ರಲ್ಲಿ ಸಾಗುವಾಗ ಕೋಟದ ಬಳಿ ನಿಮ್ಮ ಕಣ್ಣಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಇಳಿದು ಒಳ ಹೊಕ್ಕರೆ ಕಣ್ಣೆದುರಿಗೆ, ಮನಃಪಟಲದಲ್ಲಿ ತುಂಬಿಕೊಳ್ಳುವುದೆಲ್ಲ ಅಕ್ಷರಶಃ ಆಧ್ಯಾತ್ಮ.
ಕೃಪಾ ಕುಂಜ
ಇದರ ಪಕ್ಕದಲ್ಲೇ ಕೃಪಾ ಕುಂಜ ಹೆಸರಿನ ಬೃಹತ್ ಸಭಾಂಗಣ ಈಗಾಗಲೇ ತಲೆ ಎತ್ತಿ ನಿಂತಿದ್ದು, ಒಳ ನಡೆದರೆ ಎದುರಿಗೆ ಅಮೃತಶಿಲೆಯಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಮಾತೆ ಶಾರದಾ ದೇವಿಯ ಮೂರ್ತಿಗಳಿವೆ. ಇದರ ಎದುರಿಗೆ ಕೃಪಾ ಕುಂಜದ ತದ್ರೂಪವನ್ನು, ತದ್ರೂಪವಿದೆ. ಇದರ ಹಿಂದೆ ಇರುವ ಕಾಳಿ ಮಾತೆಯನ್ನು ನೀವು ಗಮನಿಸಬೇಕು. ಇದು 6D ಮಾದರಿಯ ಮೂರ್ತಿಯಾಗಿದ್ದು, ಸಭಾಂಗಣದ ಯಾವ ಭಾಗದಲ್ಲಿ ನೀವು ನಿಂತರೂ ಕಾಳಿ ಮಾತೆಯ ಕಣ್ಣು ಮಾತ್ರ ನಿಮ್ಮತ್ತಲೇ ಇರುವಂತೆ ತೋರುತ್ತದೆ. ಈ ಸಭಾಂಗಣವು ಸಂಪೂರ್ಣ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.
ಪ್ರತಿ ತಿಂಗಳಿನ ಎರಡನೇ ಮತ್ತು ನಾಲ್ಕನೇ ಭಾನುವಾರ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸುತ್ತಿ ನೋಡಲು ತಿಳಿಯಲು ಇಲ್ಲಿ ಸಾಕಷ್ಟು ವಿಷಯಗಳಿವೆ.
ವಿವೇಕ ಪ್ರಕಾಶನ ಹೊರತಂದ ಪುಸ್ತಕಗಳ ಗ್ರಂಥಾಲಯ
800 ಜನರು ಏಕಕಾಲದಲ್ಲಿ ಕುಳಿತು ಊಟ ಮಾಡಬಹುದಾದ ಭೋಜನಾಲಯ
1500 ಜನರು ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ಸುಸಜ್ಜಿತ ಮತ್ತು ವಿಶಾಲ ಆಡಿಟೋರಿಯಂ
ಯೋಗಬನದ ಮಾದರಿಯ ಸ್ವಾಮಿ ವಿವೇಕಾನಂದರ ಮೂರ್ತಿ

ಒಟ್ಟು ಮೂರು ಅಂತಸ್ತುಗಳ ಈ ಮಂದಿರದಲ್ಲಿ ಇರುವಷ್ಟು ಸಮಯ ಆಧ್ಯಾತ್ಮಿಕತೆಯತ್ತ ಸೆಳೆಯುವ ಶಕ್ತಿ ಅಡಕವಾಗಿದೆ.
ನೆನಪಿಡಿ ಇಲ್ಲಿ ಶ್ರೀ ಗುರೂಜಿ ಎಂದರೆ ಸ್ವಾಮಿ ವಿವೇಕಾನಂದ ಎಂಬ ಮಹಾ ಚೇತನ. ಡಾಕ್ಟರ್‌ಜೀ ಎಂದರೆ ಡಾ. ಎ. ಚಂದ್ರಶೇಖರ ಉಡುಪ ಅವರು. ಇದು ಜನರು ಶ್ರೀಯುತರನ್ನು ಅಕ್ಕರೆಯಿಂದ ಕರೆಯುವ ಪರಿ.
ಯಾವುದನ್ನು ನೋಡಲೂ ನೀವಿಲ್ಲಿ ಬೆಲೆ ತೆರಬೇಕಿಲ್ಲ ನಿಮ್ಮ ಅಮೂಲ್ಯ ಸಮಯ ತೆತ್ತರೆ ಸಾಕು, ಸುಂದರ ಅನುಭವವನ್ನು, ದಿವ್ಯ ಅನುಭೂತಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಹಲವು ಮಹನೀಯರು ಓಡಾಡಿದ, ಉಳಿದು ಜ್ಞಾನಾರ್ಜಿಸಿದ, ಸಂತ ಸಂದೇಶವನ್ನು ಸಾರಿದ ತಪೋಭೂಮಿಯನ್ನು ತಪ್ಪದೇ ಎಲ್ಲರೂ ವೀಕ್ಷಿಸಬೇಕು. ಅಲ್ಲಿನ ಚಿಂತನೆಗಳು ದೇಶವನ್ನು ಕಟ್ಟುವಂಥವು. ಒಂದು ಸಣ್ಣ ಭೇಟಿಯಿಂದ ನಿಮ್ಮಲ್ಲೊಂದು ದೊಡ್ಡ ಬದಲಾವಣೆಯಾಗುತ್ತದೆ ಎಂದರೆ, ಅದೂ ಸಕಾರಾತ್ಮಕ ಎಂದಾದರೆ ಬಿಡುವುದೇಕೆ? ಒಮ್ಮೆ ತಪ್ಪದೇ ಹೋಗಿಬನ್ನಿ ಈ ದಿವ್ಯ ತಾಣಕ್ಕೆ.

ಡಿವೈನ್ ಪಾರ್ಕ್‌ನ ದಿನಚರಿ
ಪ್ರತಿದಿನ ಬೆಳಗ್ಗೆ 7:00ರಿಂದ 8:00ರವರೆಗೆ
ವಿಷ್ಣು ಪೂಜೆ, ವಾಸುಕಿ ಪೂಜೆ, ಡಿವೈನ್ ಪಾರ್ಕ್‌ನಲ್ಲಿ ಕುಂಕುಮಾರ್ಚನೆ
ಪ್ರತಿದಿನ ಸಂಜೆ
7:00-8:00ರವರೆಗೆ ಭಜನೆ
ಭಜನೆಯ ನಂತರ ಆರತಿ ಮತ್ತು ಪ್ರಸಾದ ವಿತರಣೆ
ವಿಶೇಷ ಕಾರ್ಯಕ್ರಮಗಳು
ಶ್ರೀ ಗುರೂಜಿ ಸಂದೇಶ ಸುಧೆ (ಆಧ್ಯಾತ್ಮಿಕ ಪ್ರವಚನ) ಇದು ಸಾಮಾನ್ಯವಾಗಿ ಪ್ರತಿ ತಿಂಗಳ ಎರಡನೆಯ ಮತ್ತು ಕೊನೆಯ ಭಾನುವಾರದಂದು ಬೆಳಗ್ಗೆ 9:00ರಿಂದ ಮಧ್ಯಾಹ್ನ 1:00ರವರೆಗೆ ನಡೆಯುತ್ತದೆ.
ಶ್ರೀ ಗುರೂಜಿ ಸಂದೇಶ ಸುಧೆಯ ನಂತರ, ಪೂಜ್ಯ ಡಾಕ್ಟರ್‌ಜೀ ಮತ್ತು ಭಕ್ತರ ನಡುವೆ ಆಧ್ಯಾತ್ಮಿಕ ಚರ್ಚೆ.