ಗಾಳಿಬೋರ್... ಯೇ ದಿಲ್ ಮಾಂಗೇ ಮೋರ್..!
ತೆಪ್ಪದಲ್ಲಿ ತೇಲುತ್ತಾ, ನದಿ ಬಿಟ್ಟರೆ ಕಾಡು, ಕಾಡು ಬಿಟ್ಟರೆ ನದಿ, ಬೆಟ್ಟಗುಡ್ಡಗಳ ಸಾಲನ್ನು ನೋಡುತ್ತಾ, ಸುತ್ತಮುತ್ತ ಓಡಾಡುತ್ತ, ನೇಚರ್ ವಾಕ್ ಮಾಡುತ್ತಾ. ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಅಲೆಯುತ್ತಾ, ನಗುತ್ತಾ, ಖುಷಿಯಾಗಿ ಸಮಯಕಳೆಯಬಹುದಾದ ಸ್ಥಳ ಇದು.
ʼದಿನಾ ಅದೇ ಆಫೀಸು, ಅದೇ ಮನೆ, ಅದದೇ ಮುಖಗಳು, ಅದೇ ಹುಡುಗೀರು, ಥತ್ ಬೆಂಗಳೂರು ಲೈಫ್ ಸಾಕಪ್ಪ, ಎಲ್ಲಾದ್ರೂ ದೂರ ಹೋಗ್ಬೇಕು. ಎಲ್ಲಿಗೆ ಹೋಗ್ಬೇಕು ಅಂದ್ರೆ ವಾಪಸ್ ಬರೋದನ್ನೂ ಮರೀಬೇಕುʼ! ಅಂತ ಒಂದು ಸಿನಿಮಾ ಡೈಲಾಗ್ ಇದೆ. ಅದು ಯಾವ ಸಿನಿಮಾದ್ದು ಅಂತ ಗೊತ್ತಲ್ವಾ? ಸ್ವಲ್ಪ ನೆನಪು ಮಾಡ್ಕೊಳ್ಳಿ! ಅದು ಗಾಳಿಪಟ ಚಿತ್ರದ್ದು. ಸಿನಿಮಾ ಶುರುವಾದ ಕೆಲವು ಸಮಯಕ್ಕೆ ಗಣೇಶ್ ಈ ಮಾತನ್ನು ಹೇಳುತ್ತಾರೆ. ಅದಾದ ನಂತರ ಗಣೇಶ್ ಮತ್ತವರ ಸ್ನೇಹಿತರು ಸೇರಿ ಮುಗಿಲುಪೇಟೆಗೆ ಹೋಗುತ್ತಾರೆ.
ಹಾಗೆ ಈ ಮಳೆಗಾದಲ್ಲಿ ಅಥವಾ ವರ್ಷದ ಹಲವು ದಿನಗಳಲ್ಲಿ ನಮಗೆಲ್ಲ ನಿಸರ್ಗದ ಜತೆ ಕನೆಕ್ಟ್ ಆಗಬೇಕು ಎಂದು ಆಸೆಯಾಗುತ್ತದೆ. ಎಲ್ಲಿಗಾದರೂ ಹೋಗಿ ನಮ್ಮನ್ನು ನಾವೇ ಮರೆತುಬಿಡಬೇಕು ಎಂದು ಅನಿಸಲು ಶುರುವಾಗುತ್ತದೆ. ಕಾಡಿನ ನಡುವೆ, ಬೆಟ್ಟಗಳ ನಡುವೆ, ನದಿಯ ತಟದಲ್ಲೇಲ್ಲೋ ಶಾಂತಿಯಿಂದ ಕುಳಿತುಕೊಳ್ಳಬೇಕು ಎಂದು ಮನಸ್ಸಾಗುತ್ತದೆ. ತೆಪ್ಪದಲ್ಲಿ ಪ್ರಯಾಣಮಾಡಬೇಕೆಂದೆನ್ನಿಸುತ್ತದೆ. ಇನ್ನೂ ಕೆಲವೊಮ್ಮೆ ನಿಧಾನವಾಗಿ ಚಲಿಸುವ ಸಮಯದ ಜತೆಗೆ ಒಂದೊಳ್ಳೆ ಸುಮಧುರ ಹಾಡನ್ನು ಕೇಳುತ್ತಾ, ಯಾವುದೋ ಗಿಡದ ಪೊಟರೆಯಲ್ಲಿ ಕುಳಿತಿರುವ ಹಕ್ಕಿಯನ್ನೋ, ಎಲ್ಲೋ ಒಂದು ಕಡೆ ಏನನ್ನೋ ತಿನ್ನುತ್ತಾ, ಕಿತಾಪತಿಗಳನ್ನು ಮಾಡುತ್ತ, ಮರದಿಂದ ಮರಕ್ಕೆ ಹಾರುತ್ತಿರುವ ಕೋತಿಗಳನ್ನು ನೋಡುತ್ತಲೋ, ನದಿಯ ದಂಡೆಯಲ್ಲಿರುವ ಮೊಸಳೆಗಳನ್ನು ನೋಡುತ್ತಲೋ. ಹಾಡುತ್ತಾ, ಕುಣಿಯುತ್ತಾ, ಹಾರುತ್ತಿರುವ ಹಕ್ಕಿ- ನವಿಲುಗಳನ್ನು ನೋಡುತ್ತಲೋ, ಸ್ವಚ್ಛಂದ ಪ್ರಶಾಂತ ವಾತಾವರಣದಲ್ಲಿ ನಮ್ಮನ್ನು ನಾವೇ ಮರೆತು, ದಿನನಿತ್ಯದ ಗೋಜಲಿಂದ, ಟೆನ್ಷನ್‌ನಿಂದ, ತಲೆನೋವಿಂದ ದೂರ ಸರಿದುಬಿಡಬೇಕಪ್ಪ ಅನಿಸುತ್ತದೆ. ಹೀಗೆ ಅನಿಸದಾಗೆಲ್ಲ ಜನರಿಗೆ ಕಾಡು ಬೆಟ್ಟ, ಬೀಚುಗಳು ನೆನಪಾಗುವುದು ಕಾಮನ್!

ಅಂಥದ್ದೇ ಒಂದು ಕಾಡು, ಬೆಟ್ಟ ಇರುವ ಪ್ರದೇಶದ ಬಗ್ಗೆ ಈ ಲೇಖನ. ಇದು ಅಂತಿಂಥ ಕಾಡಲ್ಲ, ಬೆಂಗಳೂರಿನಿಂದ ಅತೀ ಸಮೀಪ, ಅಂದರೆ, 100 ಕಿಮೀ ದೂರದಲ್ಲೇ ಒಂದು ಕಾಡಿದೆ. ಅರ್ಕಾವತಿ, ಕಾವೇರಿ ಸಂಗಮದಲ್ಲಿ!
ಸುತ್ತಲೂ ಬೆಟ್ಟ, ಕಣ್ಣಿಗೆ ಕಂಡಷ್ಟು ಹಸಿರು. ವನ್ಯಜೀವಿಗಳ ಸಮಾಗಮ, ಹೋದರೆ, ವಾಪಸ್ ಬರೋಕೆ ಮನಸ್ಸುಬಾರದಂಥ ಸ್ಥಳ, “ಪೀಸ್, ಪೀಸ್” (piece piece ಅಲ್ಲ peace peace, ಓದುತ್ತಲೇ 2 ಬೆರಳನ್ನು ತೋರಿಸಿ ವಿಕ್ಟರಿ ಸಿಂಬಲ್ ಮಾಡಿಕೊಂಡುಬಿಡಿ) ಸಿಗುವಂಥ ಸ್ಥಳ.
ಇದು ಎಂಥ ಸ್ಥಳವೆಂದರೆ, ಫೋನನ್ನು ಮರೆತು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದನ್ನೂ ಮರೆತು, ಮೀನು ಹಿಡಿಯುತ್ತಾ. ತೆಪ್ಪದಲ್ಲಿ ತೇಲುತ್ತಾ, ನದಿ ಬಿಟ್ಟರೆ ಕಾಡು, ಕಾಡು ಬಿಟ್ಟರೆ ನದಿ, ಬೆಟ್ಟಗುಡ್ಡಗಳ ಸಾಲನ್ನು ನೋಡುತ್ತಾ, ಸುತ್ತ ಮುತ್ತ ಓಡಾಡುತ್ತ, ನೇಚರ್ ವಾಕ್ ಮಾಡುತ್ತಾ. ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಅಲೆಯುತ್ತಾ, ನಗುತ್ತಾ, ಖುಷಿಯಾಗಿ ಸಮಯ ಕಳೆಯಬಹುದಾದ ಸ್ಥಳ. ಇಂಥ ಕಾಡಿನಲ್ಲಿ ನಮ್ಮ ಆತಿಥ್ಯ ವಹಿಸುವವರು ಯಾರು? ನಮ್ಮ ಬೇಕು ಬೇಡಗಳ ಆಲಿಸುವವರು ಯಾರು? ಹೊತ್ತೊತ್ತಿಗೆ ಹೊಟ್ಟೆ ತುಂಬಾ ಊಟ ತಂದಿಡುವವರು ಯಾರು? ಈ ಪ್ರಶ್ನೆ ಬಾರದೇ ಇರುತ್ತದೆಯೇ? ಕೇವಲ ಹೀಗೊಂದು ಸ್ಥಳಕ್ಕೆ ಹೋಗಿಬನ್ನಿ ಎಂದು ಬರೆಯುವುದಷ್ಟೇ ಆಗಿದ್ದರೆ ಈ ಲೇಖನದ ಅಗತ್ಯವೇ ಇರಲಿಲ್ಲ. ಈ ಲೇಖನ ಬರೀ ನೀವು ಒಂದು ಕಾಡಿಗೆ ಹೋಗುವುದರ ಬಗ್ಗೆ ಅಷ್ಟೇ ಅಲ್ಲ, ಅಲ್ಲಿ ಉಳಿದುಕೊಳ್ಳುವ ಸ್ಥಳದ ಬಗ್ಗೆಯೇ ಅರಿವು ಮೂಡಿಸುವುದು.

ಹೀಗೆ ಈ ಗಾಳಿಬೋರ್ ನಲ್ಲಿ ಉಳಿಯಲು ಜೆಎಲ್‌ಆರ್‌ನವರ ಗಾಳಿಬೋರ್ ನೇಚರ್ ಕ್ಯಾಂಪ್‌ಗಿಂತ ಪ್ರಶಸ್ತವಾಗಿರುವ ಸ್ಥಳ ಬೇರೆ ಏನಾದರೂ ಇದೆಯಾ?
ಕಾವೇರಿ ನದಿಯ ದಡದ ಕಾಡುಗಳ ನಡುವೆ ಇರುವ ಗಾಳಿಬೋರ್ ಪ್ರಕೃತಿ ಶಿಬಿರವು ಈ ರೀತಿಯ ಪ್ರವಾಸಕ್ಕೆ ಉತ್ತಮ ಆಯ್ಕೆ. ಇದರ ಹೆಸರು, ರೆಸಾರ್ಟ್‌ನ ಹಿಂದಿರುವ ಗಾಳಿ ಬೀಸುವ ಗುಡ್ಡದ ಹೆಸರಿನಿಂದ ಬಂದಿದೆ. ಬೆಟ್ಟಗಳಿಂದ ಸುತ್ತುವರೆದಿರುವ ಈ ರೆಸಾರ್ಟ್ ಹಸಿರು ಕಾಡು ಮತ್ತು ನದಿಯ ಸೊಬಗಿನಿಂದ ಆವೃತವಾಗಿದೆ.
ಈ ಶಿಬಿರ ಸದಾಕಾಲ ಮೀನುಗಾರರಿಗೆ ಫೇವರಿಟ್. ಕಾವೇರಿಯಲ್ಲಿ ಹೇರಳವಾಗಿ ಸಿಗುವ ಮಶೀರ್ ಮೀನಿಗೆ ತುಂಬಾ ಫೇಮಸ್. ಈ ಮೀನನ್ನು ರೆಕ್ಕೆಗಳನ್ನು ಹೊಂದಿರುವ ಹುಲಿ ಎಂದೂ ಕರೆಯುತ್ತಾರೆ. ನೀವು ಈ ನೀರಿನಲ್ಲಿ ಮೀನು ಹಿಡಿಯಲು ಸಾಧ್ಯವಾಗದಿದ್ದರೂ, ಶಿಬಿರದಲ್ಲಿ ಮೀನನ್ನು ಹಿಡಿಯುವ ಪ್ರಯತ್ನವಂತೂ ಮಾಡಬಹುದು. ಅದ್ಭುತ ವನ್ಯಜೀವಿ ಅನುಭವ, ಚುಕ್ಕೆ ಜಿಂಕೆಗಳು, ಅಳಿವಿನಂಚಿನಲ್ಲಿರುವ ಬೂದು ಬಣ್ಣದ ದೈತ್ಯ ಅಳಿಲು, ಮೊಸಳೆಗಳು, ಆಮೆಗಳು ಮತ್ತು ಹಾವುಗಳು ಗಾಳಿಬೋರ್ ನಲ್ಲಿ ನಿಮಗೆ ಸ್ನೇಹಿತರಾಗಬಹುದು. ಇಲ್ಲಿ ಪಕ್ಷಿ ವೀಕ್ಷಕರಿಗಂತೂ ಫುಲ್ ಟೈಂ ಕೆಲಸ. ಏಕೆಂದರೆ, ಹದ್ದುಗಳು, ಹಸಿರು ಪಾರಿವಾಳಗಳು, ಕಿಂಗ್‌ಫಿಶರ್‌ಗಳು, ಗೂಬೆಗಳು ಇತ್ಯಾದಿ ಸೇರಿದಂತೆ 230 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ನಿಮ್ಮ ಕ್ಯಾಮೆರಾ ಅಥವಾ ಕಣ್ಣಲ್ಲಿ ಸೇವ್ ಆಗಬಹುದು.

ಇಲ್ಲಿನ ಸಿಬ್ಬಂದಿ ನಿಮಗೆ ಪಾಯಿಂಟರ್ ಗಳನ್ನು ನೀಡಲು ಮತ್ತು ಪ್ರಕೃತಿಯ ಸೂಕ್ಷ್ಮ ಅಂಶಗಳನ್ನು ತಿಳಿಸಲು, ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಲು ಖುಷಿಯಿಂದ ನಿಮ್ಮ ಜತೆಗೆ ಹೆಜ್ಜೆಹಾಕುತ್ತಾರೆ. 360 ಡಿಗ್ರೀ ಓಪನ್ ಆಗಿರುವ ಗೋಲ್ ಘರ್ ನಲ್ಲಿ ಕಾಡಿನ ನಡುವೆ ಊಟ ಮಾಡುವ ಅನುಭವವೇ ಬೇರೆ. ಏಕೆಂದರೆ, ಯಾವ ಕಡೆ ನೋಡಿದರೂ ಕಾಡು ಪಕ್ಷಿಗಳ ಸಮಾಗಮ. ಅದರ ಜತೆಗೆ ಸಖತ್ ರುಚಿಯಾದ ಊಟ, ಡಯಟ್‌ನಲ್ಲಿರುವವರೂ ಮತ್ತೆ ಮತ್ತೆ ಬಡಿಸಿಕೊಂಡು ಊಟಮಾಡಬಹುದು.
ಸಂಜೆಯ ಸಮಯ ನದಿ ದಡದಲ್ಲಿ ಬಾರ್ಬಿಕ್ಯೂ ಮತ್ತು ಫೈರ್‌ಕ್ಯಾಂಪ್ ನೊಂದಿಗೆ ಅತಿಥಿಗಳು ಪರಸ್ಪರ ತಿಳಿದುಕೊಳ್ಳುವ ಬಂಧದ ಅವಧಿಗಳಾಗಿವೆ. ಯಾರ ಜತೆಗೂ ಮಾತನಾಡಲು ಮನಸ್ಸಿಲ್ಲದಿದ್ದರೆ, ನೀವು ನಕ್ಷತ್ರಗಳೊಂದಿಗೆ ಡೈರೆಕ್ಟ್ ಮಾತನಾಡಬಹುದು, ಹುಲ್ಲುಹಾಸಿನ ಕುರ್ಚಿಯ ಮೇಲೆ ಒರಗಬಹುದು ಅಥವಾ ಸುಟ್ಟ ಮೀನು, ಕೋಳಿ ಅಥವಾ ತರಕಾರಿಗಳು ಬರುವವರೆಗೆ ತೂಗಾಡಬಹುದು. ಪ್ರತಿಯೊಂದು ಟೆಂಟ್‌ನ ಹೊರಗೆ ಒಂದು ತೂಗಾಡುವ ತೊಟ್ಟಿಲಿದೆ. ಅದರಲ್ಲಿ ಮಗುವಿನ ರೀತಿಯಲ್ಲಿ ಆಗಸವನ್ನು ನೋಡುತ್ತಾ ಟೈಂಪಾಸ್ ಮಾಡಬಹುದು.
ಸೀಸನ್
ಗಾಳಿಬೋರೆ ನೇಚರ್ ಕ್ಯಾಂಪ್‌ಗೆ ಭೇಟಿ ನೀಡಲು ಉತ್ತಮ ಸಮಯ ಆಗಸ್ಟ್ ಮತ್ತು ಫೆಬ್ರವರಿಯ ನಡುವೆ, ಆ ಸಮಯದಲ್ಲಿ ಮಳೆಗಾಲವು ಶಿಬಿರಕ್ಕೆ ಮತ್ತಷ್ಟು ಬೆರಗನ್ನು ತಂದಿರುತ್ತದೆ. ನದಿ ಭರ್ಜರಿಯಾಗಿ ಹರಿಯುತ್ತಿರುತ್ತದೆ. ಕಾಡು ಶ್ರೀಮಂತವಾಗಿ ಹಸಿರಿನಿಂದ ತುಂಬಿರುತ್ತದೆ. ನದಿಯ ಟರ್ನ್‌ಗಳು, ಮೀನು ಹದ್ದುಗಳು, ಮರಕುಟಿಗಗಳು, ಮಿಂಚುಳ್ಳಿಗಳು ಮತ್ತು ಇತರ ಹಲವು ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಪಕ್ಷಿಗಳನ್ನು ನೋಡಲು ಇದು ಸೂಕ್ತ ಸಮಯ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು. ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಗೆಯ ತಿಂಗಳುಗಳು ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಅತ್ಯಂತ ಬೆಚ್ಚಗಿರುತ್ತದೆ.
ಪ್ಯಾಕೇಜ್‌ಗಳು
ರಾಯಲ್ ಕಾವೇರಿ ಪ್ಯಾಕೇಜ್
ಪ್ಯಾಕೇಜ್ನಲ್ಲಿ: ಆಯ್ದ ವಸತಿ ಸ್ಥಳ, ವಾಸ್ತವ್ಯ, ಭೋಜನ ಮತ್ತು ಉಪಹಾರ, ತೆಪ್ಪದ ಸವಾರಿ, ಮಾರ್ಗದರ್ಶಿ ಚಾರಣ. ಅರಣ್ಯ ಪ್ರವೇಶ
ಜಂಗಲ್ ಕ್ಯಾಂಪ್‌ಗಳು ಮತ್ತು ಟ್ರಯಲ್ಸ್
ಪ್ಯಾಕೇಜ್‌ನಲ್ಲಿ: ಸ್ವಾಗತ ಪಾನೀಯ, ಬಫೆ ಊಟ, ಸಂಜೆ ಚಹಾ / ತಿಂಡಿಗಳೊಂದಿಗೆ ಕಾಫಿ, ಕೊರಕಲ್ ಸವಾರಿ, ಪ್ರಕೃತಿ ನಡಿಗೆ / ಪಕ್ಷಿ ವೀಕ್ಷಣೆ / ಚಾರಣ ಮತ್ತು ಅರಣ್ಯ ಪ್ರವೇಶ
ಜೆಎಲ್‌ಆರ್‌ನಲ್ಲಿ ದಿನಚರಿ
ದಿನ 1
ಮಧ್ಯಾಹ್ನ 1:00 -ಚೆಕ್ ಇನ್ ಮಾಡಿ, ಕುಳಿತು ಫ್ರೆಶ್ ಅಪ್ ಆಗಿ
ಮಧ್ಯಾಹ್ನ 1:30 - 2:30- ಗೋಲ್‌ಘರ್‌ನಲ್ಲಿ ರುಚಿಕರವಾದ ಊಟವನ್ನು ಸವಿಯಿರಿ
ಸಂಜೆ 4:00 - 4:30- ಗೋಲ್‌ಘರ್‌ನಲ್ಲಿ ಚಹಾ/ಕಾಫಿಯೊಂದಿಗೆ ದೋಣಿ ವಿಹಾರಕ್ಕೆ ಸಿದ್ಧರಾಗಿ
ಸಂಜೆ 4:30 - 6:00 -ಕಾವೇರಿ ನದಿಯಲ್ಲಿ ದೋಣಿ ವಿಹಾರ, ಪಕ್ಷಿ ವೀಕ್ಷಣೆ ಮತ್ತು ಇತರ ಸಸ್ತನಿಗಳನ್ನು ವೀಕ್ಷಿಸಲು ಸೂಕ್ತ ಸಮಯ.
ಸಂಜೆ 6:30 - 7:30- ಬೀಚ್‌ನಲ್ಲಿ ಮಾಂಸಾಹಾರಿ ತಿಂಡಿಗಳು ಮತ್ತು ಪಕೋಡಗಳೊಂದಿಗೆ ಕ್ಯಾಂಪ್‌ಫೈರ್ (ಬಿಯರ್‌ಗಳೂ ಸಿಗುತ್ತವೆ)
ಸಂಜೆ 7:45 - 8:30- ಗೋಲ್ ಘರ್ ನಲ್ಲಿ ವನ್ಯಜೀವಿ ಚಲನಚಿತ್ರವನ್ನು ವೀಕ್ಷಿಸಿ
ಸಂಜೆ 8:30 - 10:00- ನೀವು ಗೋಲ್ ಘರ್‌ನಲ್ಲಿ ಊಟ ಮಾಡುವಾಗ, ಇತರ ಅತಿಥಿಗಳು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳಿ
ದಿನ 2
ಬೆಳಗ್ಗೆ 6:30 - 7:00- ಗೋಲ್ ಘರ್‌ನಲ್ಲಿ ಚಹಾ / ಕಾಫಿ
ಬೆಳಗ್ಗೆ 7:00 - 8:15- ಪಕ್ಷಿ ವೀಕ್ಷಣೆಯೊಂದಿಗೆ ನದಿಯ ಬದಿಯ ನಡಿಗೆ / ಚಾರಣ
ಬೆಳಗ್ಗೆ 8:30 - 10:00- ಗೋಲ್ ಘರ್‌ನಲ್ಲಿ ಉಪಾಹಾರ
ಬೆಳಗ್ಗೆ 10:30 -ಚೆಕ್‌ಔಟ್

ದಾರಿ ಹೇಗೆ?
ರಸ್ತೆಯ ಮೂಲಕ : ಈ ಶಿಬಿರವು ಬೆಂಗಳೂರಿನಿಂದ ಸುಮಾರು 102 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಬೆಂಗಳೂರು - ಕನಕಪುರ-ಸಂಗಮ- ಗಾಳಿಬೋರ್ ಪ್ರಕೃತಿ ಶಿಬಿರ (8 ಕಿ.ಮೀ. ಚಾಲನೆ ಮಾಡಬಹುದಾದ ಕಾಡಿನ ಮಾರ್ಗ)
ರೈಲಿನ ಮೂಲಕ : ಬೆಂಗಳೂರು ನಗರ ಜಂಕ್ಷನ್ ಮತ್ತು ಯಶವಂತಪುರ ಜಂಕ್ಷನ್ ಹತ್ತಿರದ ರೈಲು ನಿಲ್ದಾಣಗಳಾಗಿವೆ.
ವಿಮಾನದ ಮೂಲಕ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ದೇಶದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.