ಸ್ಟಾರ್ ಹೊಟೇಲ್ ಬದಲು ಮಣ್ಣಿನ ಮನೆ..!
ಕ್ಯಾಲಿಕಟ್ ಬಳಿ ಇರುವ ಗ್ರೀನಾರಾ, 6 ಎಕರೆ ವಿಸ್ತೀರ್ಣದ ಹಿಂದಿನ ಗಣಿಗಾರಿಕೆ ಸ್ಥಳದಲ್ಲಿ ನಿರ್ಮಿಸಲಾದ ಸುಸ್ಥಿರ ಮಣ್ಣಿನ ಹೋಂಸ್ಟೇ ಆಗಿದೆ. ಹಚ್ಚ ಹಸಿರಿನ ಉಷ್ಣವಲಯದ ಅರಣ್ಯವಾಗಿ ರೂಪಾಂತರಗೊಂಡ ಇದು ಎರಡು ಮಣ್ಣಿನ ಕುಟೀರಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಮಾಡಿದ 12 ಹಾಸಿಗೆಗಳ ಡಾರ್ಮೆಟ್ರಿ ಒಳಗೊಂಡಿದೆ. ಅತಿಥಿಗಳು ಇಲ್ಲಿ ಫಾರ್ಮ್-ಟು-ಟೇಬಲ್ ಮಲಬಾರ್ ಖ್ಯಾತಿಯ ಊಟವನ್ನು ಸವಿಯಬಹುದು.
- ಚಿನ್ಮಯ್ ದಿವಾಕರ್
ಭಾರತದ ವಿವಿಧ ರಾಜ್ಯಗಳ ಪ್ರವಾಸವೇ ಒಂದು ರೋಮಾಂಚಕ ಅನುಭವ. ಇಲ್ಲಿನ ವಿವಿಧ ಸಂಸ್ಕೃತಿ, ಆಚಾರ, ವಿಚಾರ, ಜನರು, ವಿಭಿನ್ನ ವಾತಾವರಣಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡ್ಯೊಯುತ್ತದೆ. ಇನ್ನು ನೀವು ಭಾರತ ಪರ್ಯಟನೆ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡುವುದು ಎಲ್ಲಿ? ಎಲ್ಲಿ ಉಳಿಯಬೇಕು? ಎಂಬ ಗೊಂದಲ ಹುಟ್ಟುವುದು ಸಹಜ. ಕೆಲವರು ಬಹುಮಹಡಿಯ ಐಷಾರಾಮಿ ರೆಸ್ಟೋರೆಂಟ್ ಗಳನ್ನು ಇಷ್ಟಪಟ್ಟರೆ, ಇನ್ನೂ ಕೆಲವರು ಪ್ರಕೃತಿಯ ಮಧ್ಯೆ ತಂಗಲು ಇಷ್ಟಪಡುತ್ತಾರೆ. ನಿಮ್ಮ ಮುಂದಿನ ಪ್ರವಾಸದಲ್ಲಿ ನೀವು ಕೂಡ ಪ್ರಕೃತಿಯ ಮಧ್ಯೆ ತಂಗಲು ಬಯಸಿದರೆ ಈ ಮಣ್ಣಿನ ಹೋಂ ಸ್ಟೇಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಅತ್ಯುತ್ತಮವಾದ ಸ್ಥಳೀಯ ಅನುಭವವನ್ನು ಪಡೆಯುತ್ತೀರಿ. ಸ್ವಾದಿಷ್ಟವಾದ ಆಹಾರದ ಜೊತೆ ಜೊತೆಗೆ ಕುಟುಂಬದ ಜೊತೆ ಕೂಡ ಉಲ್ಲಾಸಮಯವಾದ ಕ್ಷಣಗಳನ್ನು ಕಳೆಯುತ್ತೀರಿ.
ಭಾರತದ ಈ 10 ಸುಂದರ ಮಣ್ಣಿನ ಹೋಂಸ್ಟೇಗಳ ಬಗ್ಗೆ ಚಿಕ್ಕ ಪರಿಚಯ ಇಲ್ಲಿದೆ.
1. ಅಫ್ಸಾನಾ ಹೋಂಸ್ಟೇ, ಹಿಮಾಚಲ ಪ್ರದೇಶ
ಮನಾಲಿಯ ಹಡಿಂಬಾ ದೇವಸ್ಥಾನದ ಬಳಿ ಇರುವ ಅಫ್ಸಾನಾ ಹೋಂಸ್ಟೇ, ಕಾಡುಗಳು ಮತ್ತು ಸೇಬಿನ ತೋಟಗಳಿಂದ ಆವೃತವಾದ 50 ವರ್ಷ ಹಳೆಯದಾದ ಮಣ್ಣು, ಮರ ಮತ್ತು ಕಲ್ಲಿನ ಮನೆಯಾಗಿದೆ. ಹೀನಾ ಮಹಾಂತ್ ಸ್ಥಾಪಿಸಿದ ಇದು ಸಾಂಪ್ರದಾಯಿಕ ಹಿಮಾಚಲಿ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. 600ರೂ ರಿಂದ ಪ್ರಾರಂಭವಾಗುವ ಕೊಠಡಿಗಳು ಮತ್ತು ಉತ್ತಮವಾದ ಸೌಲಭಗಳೊಂದಿಗೆ, ಇದು ಪ್ರಕೃತಿಯ ಸಂಪರ್ಕವನ್ನು ಬಯಸುವವರಿಗೆ ಪರಿಪೂರ್ಣವಾದ ಹೊಸ ಅನುಭವ ನೀಡುತ್ತದೆ.

2. ನಂದಾ ಸ್ಟೋನ್, ಉತ್ತರಾಖಂಡ
ಉತ್ತರಾಖಂಡದ ಜಿಲ್ಲಿಂಗ್ ನಲ್ಲಿರುವ ನಂದಾ ಸ್ಟೋನ್ ಹೋಂಸ್ಟೇ ಅದ್ಭುತವಾಗಿದೆ. ಸಾಂಪ್ರದಾಯಿಕ ಕುಮೌನಿ ವಿಧಾನಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಿ ಆಶಿಶ್ ವರ್ಮಾ ನಿರ್ಮಿಸಿದ ಈ ಮಣ್ಣಿನ ಹೋಂಸ್ಟೇ ಆಯಾ ಋತುಗಳಲ್ಲಿ ನೈಸರ್ಗಿಕವಾಗಿ ತಂಪಾಗಿ ಮತ್ತು ಬೆಚ್ಚಗಿರುತ್ತದೆ. ಮಣ್ಣಿನ ಒಳಾಂಗಣ, ಪ್ಲಾಸ್ಟಿಕ್ ಬಳಕೆ ಇಲ್ಲ ಮತ್ತು ರುಚಿಕರವಾದ ಕುಮೌನಿ ಪಾರಂಪರಿಕ ಊಟಗಳೊಂದಿಗೆ, ಇದು ಪರಿಸರ ಸ್ನೇಹಿ ಹೋಂಸ್ಟೇಯಾಗಿದೆ.
3. ದಿ ಮಡ್ ಹೌಸ್, ಮರಯೂರ್, ಕೇರಳ
ಚಿನ್ನಾರ್ ವನ್ಯಜೀವಿ ಅಭಯಾರಣ್ಯದ ಬಳಿ ಇರುವ ಮರಯೂರಿನ ’ದಿ ಮಡ್ ಹೌಸ್’ ನಲ್ಲಿ ಪ್ರತಿ ಕಾಟೇಜ್ ನಲ್ಲಿ ಎರಡು ಮಲಗುವ ಕೋಣೆಗಳಿವೆ. ಅವು ಮಣ್ಣಿನ ಕಾಟೇಜ್ ಗಳು ಎಂಬುದು ನಿಮ್ಮ ಗಮನಕ್ಕಿರಲಿ. ಸಾಂಪ್ರದಾಯಿಕ ಮರದ ಮನೆಯೊಂದಿಗೆ ಪರಿಸರ ಸ್ನೇಹಿ ವಾಸ್ತವ್ಯಕ್ಕೂ ಇದು ಹೇಳಿಮಾಡಿಸಿದ ಸ್ಥಳ. ಒಟ್ಟಿಗೆ ಆರು ಜನ ಅತಿಥಿಗಳು ಇರಬಹುದಾದ ಈ ಕಾಟೇಜ್ ನಲ್ಲಿ ಅಡುಗೆಮನೆ, ಊಟದ ಪ್ರದೇಶ ಮತ್ತು ವಿಶ್ರಾಂತಿ ಕೋಣೆ ಎಲ್ಲವೂ ಇದೆ. ಅತಿಥಿಗಳು ಹೊರಗಡೆ ಬಾರ್ಬೆಕ್ಯೂಗಳು ಮತ್ತು ಕ್ಯಾಂಡಲ್ ಲೈಟ್ ಡಿನ್ನರ್ ಗಳನ್ನು ಪ್ಲಾನ್ ಮಾಡಿಕೊಳ್ಳಬಹುದು.
4. ಕುಂದನ್ ಹೋಂಸ್ಟೇ, ಹಿಮಾಚಲ ಪ್ರದೇಶ
ಕುಲ್ಲು ಬಳಿಯ ಕೈಸ್ ಗ್ರಾಮದಲ್ಲಿ, ಕುಂದನ್ ಹೋಂಸ್ಟೇ 100 ವರ್ಷ ಹಳೆಯದಾದ ಮಣ್ಣು ಮತ್ತು ಕಲ್ಲಿನ ಮನೆಯಾಗಿದ್ದು, ಕುಂದನ್ ಸಿಂಗ್ ಮತ್ತು ಅವರ ಪತ್ನಿ ಕಲಾ ನಡೆಸುತ್ತಿದ್ದಾರೆ. ಸಾಂಪ್ರದಾಯಿಕ ಭೂಕಂಪ-ನಿರೋಧಕ ವಿಧಾನಗಳೊಂದಿಗೆ ನಿರ್ಮಿಸಲಾದ ಇದು ಬೆಚ್ಚಗಿನ ಪಹಾಡಿ (ಪರ್ವತ) ಜೀವನಶೈಲಿಯ ಅನುಭವ ನೀಡುತ್ತದೆ. ಅತಿಥಿಗಳು ಸ್ಥಳೀಯ ಆತಿಥ್ಯ ಮತ್ತು ಕುಟುಂಬದ ಫಾರ್ಮ್ ನ ಉತ್ಪನ್ನಗಳಿಂದ ತಯಾರಿಸಿದ ಸಾವಯವ ಊಟವನ್ನು ಆನಂದಿಸಬಹುದು.
5. ಗ್ರೀನಾರಾ, ಕೇರಳ
ಕ್ಯಾಲಿಕಟ್ ಬಳಿ ಇರುವ ಗ್ರೀನಾರಾ, 6 ಎಕರೆ ವಿಸ್ತೀರ್ಣದ ಹಿಂದಿನ ಗಣಿಗಾರಿಕೆ ಸ್ಥಳದಲ್ಲಿ ನಿರ್ಮಿಸಲಾದ ಸುಸ್ಥಿರ ಮಣ್ಣಿನ ಹೋಂಸ್ಟೇ ಆಗಿದೆ. ಹಚ್ಚ ಹಸಿರಿನ ಉಷ್ಣವಲಯದ ಅರಣ್ಯವಾಗಿ ರೂಪಾಂತರಗೊಂಡ ಇದು ಎರಡು ಮಣ್ಣಿನ ಕುಟೀರಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಮಾಡಿದ 12 ಹಾಸಿಗೆಗಳ ಡಾರ್ಮೆಟ್ರಿ ಒಳಗೊಂಡಿದೆ. ಅತಿಥಿಗಳು ಇಲ್ಲಿ ಫಾರ್ಮ್-ಟು-ಟೇಬಲ್ ಮಲಬಾರ್ ಖ್ಯಾತಿಯ ಊಟವನ್ನು ಸವಿಯಬಹುದು.

6. ಹೊಡ್ಕಾ ರಾನ್ ಸ್ಟೇ, ಗುಜರಾತ್
ಗುಜರಾತ್ ನ ಹೊಡ್ಕಾ ಗ್ರಾಮದಲ್ಲಿರುವ ಹೊಡ್ಕಾ ರಾನ್ ಸ್ಟೇ, ರಾನ್ ಉತ್ಸವ್ ಟೆಂಟ್ ಸಿಟಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಮಣ್ಣಿನ ಗುಡಿಸಲುಗಳ ಈ ಕಾಟೇಜ್ ಗುಡಿಸಲು ಮಾದರಿಯಲ್ಲಿ ಕಟ್ಟಲಾಗಿದೆ. ಪರಿಸರ ಸ್ನೇಹಿ ಗುಡಿಸಲುಗಳು, ನಕ್ಷತ್ರಗಳಿಂದ ಕೂಡಿದ ಆಕಾಶ ಮತ್ತು ಶಾಂತಿಯುತ ಸೂರ್ಯೋದಯಗಳೊಂದಿಗೆ, ಅತಿಥಿಗಳು ಸಸ್ಯಾಹಾರಿ ಕಚ್ಚಿ ಊಟ, ಜಾನಪದ ಸಂಗೀತ ಮತ್ತು ಕಸೂತಿ ಮತ್ತು ಚರ್ಮದ ಕೆಲಸಕ್ಕೆ ಹೆಸರುವಾಸಿಯಾದ ಸ್ಥಳೀಯ ಕುಶಲಕರ್ಮಿಗಳೊಂದಿಗೆ ಸಂವಹನವನ್ನು ಆನಂದಿಸಬಹುದು.
7. ಬನಾಸುರ ಹಿಲ್ ರೆಸಾರ್ಟ್, ಕೇರಳ
ಏಷ್ಯಾದ ಅತಿದೊಡ್ಡ ಮಣ್ಣಿನ ರೆಸಾರ್ಟ್ ಆಗಿರುವ ವಯನಾಡಿನ ಬನಾಸುರ ಹಿಲ್ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಮಣ್ಣಿನಿಂದ ನಿರ್ಮಿಸಲಾಗಿದೆ. ಹಚ್ಚ ಹಸಿರಿನ ಬನಾಸುರ ಬೆಟ್ಟಗಳಲ್ಲಿ ಅಡಗಿರುವ ಇದು ತಂಪಾದ ಮಣ್ಣಿನ ಕೊಠಡಿಗಳು, ಅರಣ್ಯಮಾರ್ಗಗಳು, ಜಲಪಾತಗಳು ಇಲ್ಲಿನ ವೈಶಿಷ್ಟ್ಯ.
8. ಕಾಶಿ ವಿಲ್ಲಾ, ಹಿಮಾಚಲ ಪ್ರದೇಶ
ಕಸೌಲಿಯಲ್ಲಿರುವ ಕಾಶಿ ವಿಲ್ಲಾ 180 ವರ್ಷಗಳಷ್ಟು ಹಳೆಯದಾದ ಮಣ್ಣು ಮತ್ತು ಕಲ್ಲಿನ ಹೋಂಸ್ಟೇ ಆಗಿದ್ದು, ಇದನ್ನು ರಚನಾ ಮತ್ತು ಕಪಿಲ್ ಟಂಡನ್ ಪುನಃಸ್ಥಾಪಿಸಿದ್ದಾರೆ. ದೇವದಾರು ಮತ್ತು ಓಕ್ ಮರಗಳಿಂದ ಸುತ್ತುವರಿದಿರುವ ಇಲ್ಲಿ ಕೊಠಡಿಗಳು, ಫೈರ್ ಕ್ಯಾಂಪ್ ಗಳು ಜನಮೆಚ್ಚುಗೆ ಗಳಿಸಿದೆ. ಈ ಕಾಟೇಜ್ ಸಾಂಪ್ರದಾಯಿಕ ಹಿಮಾಲಯನ್ ಆಹಾರಗಳಿಂದ ಹೆಸರು ಮಾಡಿದೆ. ಸ್ಥಳೀಯ ಹವಾಮಾನ ಹಿತಕರವಾಗಿದ್ದು, ಇದೊಂದು ಶಾಂತಿಯುತ ಪರ್ವತ ತಾಣವಾಗಿದೆ.

9. ಮತಿರ್ ಘೋರ್, ಅಸ್ಸಾಂ
ಅಸ್ಸಾಂನ ಗುವಾಹಟಿಯಲ್ಲಿರುವ ಮತಿರ್ ಘೋರ್, ಸಾಂಪ್ರದಾಯಿಕ ಮಣ್ಣಿನ ವಾಸ್ತುಶಿಲ್ಪ ಮತ್ತು ಸುಸ್ಥಿರ ಜೀವನವನ್ನು ಕೇಂದ್ರೀಕರಿಸುವ ಹಳ್ಳಿಗಾಡಿನ, ಪರಿಸರ ಪ್ರಜ್ಞೆಯ ಹೋಂಸ್ಟೇ. ಅಸ್ಸಾಮಿ ಸಂಸ್ಕೃತಿಯಲ್ಲಿ ಬೇರೂರಿರುವ ಮಣ್ಣಿನ, ಕನಿಷ್ಠ ಅನುಭವವನ್ನು ನೀಡುವ ಇದು, ಏಕಾಂತ ಬಯಸುವವರಿಗೆ ಸೂಕ್ತವಾದ ಸ್ಥಳವಾಗಿದೆ.
10. ಮೇದಿನಿ ಹೋಂಸ್ಟೇ, ಅಸ್ಸಾಂ
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ, ಮೇದಿನಿ ಹೋಂಸ್ಟೇ ಬಿದಿರು, ಮಣ್ಣು ಮತ್ತು ಮರದಿಂದ ನಿರ್ಮಿಸಲಾಗಿದೆ. ಇಲ್ಲಿ ನೀವು ಅಸ್ಸಾಮಿ ಸಾಂಸ್ಕೃತಿಕ ಸ್ಥಳೀಯ ಆಹಾರವನ್ನು ಸವಿಯಬಹುದು. ಜೊತೆಗೆ ರೇಷ್ಮೆ ನೇಯ್ಗೆಯ ಮಾಹಿತಿಯನ್ನು ಪಡೆಯಬಹುದು. ರಾಷ್ಟ್ರೀಯ ಉದ್ಯಾನವನಕ್ಕೆ ಇದರ ಸಾಮೀಪ್ಯವು ಇರುವುದರಿಂದ ವನ್ಯಜೀವಿ ಪ್ರಿಯರಿಗೆ ಸೂಕ್ತವಾದ ತಾಣವಾಗಿದೆ.ಈ ಹತ್ತು ಮಣ್ಣಿನ ಹೋಂಸ್ಟೇಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತವೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ಈ ಪರಿಸರ ಸ್ನೇಹಿ ವಿಶ್ರಾಂತಿ ತಾಣಗಳಿಗೆ ಭೇಟಿ ನೀಡಿ. ಈ ಸ್ಥಳ ನಿಮಗೆ ಉಲ್ಲಾಸಕರ ಭಾವನೆಯನ್ನು ನೀಡುವುದಂತೂ ಖಂಡಿತ.