Saturday, August 23, 2025
Saturday, August 23, 2025

ಬುಡಾಪೆಸ್ಟ್ ನಲ್ಲೊಂದು ಟಂಗ್ ಟ್ವಿಸ್ಟ್ ಕಹಾನಿ!

" ಅಯ್ಯೋ ಸಿಂಹಗಳ ಬಾಯಲ್ಲಿ ನಾಲಗೆಯೇ ಇಲ್ಲ" ಎಂದು ಕೂಗಿದನಂತೆ. ಅವಾಕ್ಕಾದ ಶಿಲ್ಪಿ ಇನ್ನೊಂದು ಬಾರಿ ಸಿಂಹಗಳನ್ನು ನೋಡಿ ಬಾಯಿಯಲ್ಲಿ ತಾನು ನಾಲಗೆ ಇಡುವುದನ್ನು ಹೇಗೆ ಮರೆತೆ ಎಂದು ಆಘಾತಕ್ಕೆ ಸಿಲುಕಿ ಅವಮಾನ ತಾಳಲಾಗದೆ ಅದೇ ಸೇತುವೆಯ ಮೇಲಿಂದ ಕೆಳಗಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನಂತೆ!

  • ಜಯಶ್ರೀ ದೇಶಪಾಂಡೆ.

ನಾಲಗೆಯಿಲ್ಲದ ಗಜಗಾತ್ರದ ನಾಲ್ಕು ಸಿಂಹಗಳು ಡಾನ್ಯೂಬ್ ನದಿಯ ಚೇನ್ ಬ್ರಿಜ್ ಮೇಲಿನ ನಾಲ್ಕೂ ನಿಟ್ಟಿನಲ್ಲಿ ಭವ್ಯವಾಗಿ ಕೂತು ಹೋಗುಬರುವವರನ್ನೇ ದಿಟ್ಟಿಸುತ್ತಿವೆಯಲ್ಲ ಅನಿಸಿ, ಆ ಸಿಂಹಗಳ ಜಿಹ್ವಾರಹಿತ ಕಥನದ ಏನಿರಬಹುದು‌ ಎಂದು ನಾನು ಕೆದಕಿದೆ. ನದೀತಟದ ಎರಡು ಬದಿಗಳನ್ನು ಬೆಸೆಯಲು ಸೇತುವೆ ಕಟ್ಟುವುದು ಸಹಜ ಅಲ್ಲವೇ? ಹಾಗೆ ಬುಡಾ ಮತ್ತು ಪೆಸ್ಟ್ ಎಂಬ ನಗರಗಳನ್ನು ಒಂದು ಮಾಡಲು ಅಲ್ಲಿನ ಡಾನ್ಯೂಬ್ ನದಿಯ ಮೇಲೆ ಚೇನ್ ಹೆಸರಿನ ಸೇತುವೆ ಎದ್ದು ನಿಂತಿತು.‌ (ಸೇತುವೆಯನ್ನು ಬ್ರಿಟಿಷ್ ಇಂಜಿನಿಯರುಗಳು ಕಟ್ಟಿದರು) ಅನಂತರ ಅದರ ನಾಲ್ಕು ತುದಿಗಳ ಮೇಲೆ ಭವ್ಯವಾದ ನಾಲ್ಕು ಸಿಂಹಗಳು ಬಂದು ಕೂತವು. 1849 ಸಮಯದ ಸಂಗತಿ ಇದು.

Budapest 1

ಇನ್ನು ದಂತಕತೆಗಳು ಹುಟ್ಟಿ ಹರಡಿದ ಬಗೆ ನೋಡಿ. ಸೇತುವೆಯ ಉದ್ಘಾಟನೆಯ ದಿನ ಎಲ್ಲ ಗೌಜಿ ನಡೆದು ಇನ್ನೇನು ಬ್ರಿಜ್ ಆರಂಭ ಎಂದು ಘೋಷಿಸಬೇಕು, ಆಗ ಸೇತುವೆ ಮೇಲಿನ ಸಿಂಹಗಳನ್ನು ಕಡೆದ ಶಿಲ್ಪಿ ಇಶ್ತ್ವಾನ್ ಶ್ಕೆನ್ಯಿಯ (ತಂಡದವನೇ ಒಬ್ಬ ಸಹಾಯಕ‌) " ಅಯ್ಯೋ ಸಿಂಹಗಳ ಬಾಯಲ್ಲಿ ನಾಲಗೆಯೇ ಇಲ್ಲ" ಎಂದು ಕೂಗಿದನಂತೆ. ಅವಾಕ್ಕಾದ ಶಿಲ್ಪಿ ಇನ್ನೊಂದು ಬಾರಿ ಸಿಂಹಗಳನ್ನು ನೋಡಿ ಬಾಯಿಯಲ್ಲಿ ತಾನು ನಾಲಗೆ ಇಡುವುದನ್ನು ಹೇಗೆ ಮರೆತೆ ಎಂದು ಆಘಾತಕ್ಕೆ ಸಿಲುಕಿ ಅವಮಾನ ತಾಳಲಾಗದೆ ಅದೇ ಸೇತುವೆಯ ಮೇಲಿಂದ ಕೆಳಗಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನಂತೆ!

ಕಥೆ ವಿಶೇಷವಾಗಿದೆ ಅಲ್ವಾ? ಆದರೆ ಇದು ಸತ್ಯವಲ್ಲ, ಇದೊಂದು ಸಂಪೂರ್ಣ ಮಿಥ್ಯೆ. ಆ ಥರ ಏನೂ ನಡೆದಿಲ್ಲ ಎಂದು ಹೇಳುವವರೂ ಇದ್ದಾರೆ ಇಲ್ಲಿ. ಹಾಗಾದ್ರೆ ಇದು ಮಿಥ್ಯೆಯೋ? ತಥ್ಯವೋ?

ಅದೇನೇ ಇರಲಿ ಈ ನಾಲಗೆ ಇಲ್ಲದ ಸಿಂಹಗಳು ಮಾತ್ರ ತುಂಬ ಚಂದ. ಭವ್ಯ. ಡಾನ್ಯೂಬ್ ನದಿಯ ಸೇತುವೆಗೆ ಭೂಷಣಪ್ರಾಯವಾಗಿ ಕೂತು ನೋಡು ಬಾ ಎಂದು ಕರೆಯುತ್ತವೆ.

ಕಪ್ಪು ಸಮುದ್ರಕ್ಕೆ ಧಾವಿಸುವ ಯುರೋಪಿನ ಮಹಾ ನದಿಗಳಲ್ಲಿ ಎರಡನೆಯ ಜಾಗ ಗಿಟ್ಟಿಸಿಕೊಂಡಿರುವ ಡಾನ್ಯೂಬ್ ಡೊನಾವ್, ದುನೆರಾ, ದೂನಾ, ದುನಾಜ್, ದೂನೈ, ದೂನಾವ್ ಅಂತ ಹಲವಾರು ಹೆಸರಿನ ಹೊಸ ವೇಷಗಳ ತೊಟ್ಟು ಹರಿಯುವ ಮೊದಲು ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್ ಗಳಲ್ಲಿ ಹುಟ್ಟುತ್ತದೆ. ರಷ್ಯಾದ ಓಲ್ಗಾ ಬಿಟ್ಟರೆ ಯೂರೋಪಿನ ತುಂಬೆಲ್ಲ ಸಮುದ್ರದಷ್ಟು ನೀರನ್ನು ಹೊತ್ತು‌ ಹರಿಯುವುದೇ ಈ ಡಾನ್ಯೂಬ್.

Budapest

ಎರಡುಸಾವಿರದ ಎಂಟುನೂರು ಕಿಲೋಮೀಟರ್ ಹರಿಯುವ ಇದು ಬಳಸಿ ಬರುವ ದೇಶಗಳು ಆಸ್ಟ್ರಿಯಾ, ಸ್ಲೋವಾಕಿಯಾ, ಹಂಗರಿ, ಜರ್ಮನಿ, ಕ್ರೋವೇಶಿಯಾ, ಸೆರ್ಬಿಯಾ , ಬಲ್ಗೇರಿಯಾ, ರೋಮಾನಿಯಾ, ಮೊಲ್ಡೋವಾ ಮತ್ತು ‌ಉಕ್ರೇನ್.

ಅಬ್ಬಬ್ಬಾ ಅನಿಸುವುದಿಲ್ಲವೇ? ಅಲ್ಲ ಒಂದು ದೇಶವನ್ನೇ ದಾಟಲಾಗದೆ ಒದ್ದಾಡಿ ಅಲ್ಲಲ್ಲೇ ಹರಿದು‌ ಸಮುದ್ರ ಸಿಕ್ಕೊಡನೆ ಮಾಯವಾಗುವ ನದಿಗಳ ಎದುರು ಇದು ಅದ್ಭುತವಲ್ಲವೇ? ಅಂದಹಾಗೆ ಹತ್ತು ದೇಶಗಳನ್ನು ಸುತ್ತಿಬರುವ ನದಿ ಪ್ರಪಂಚದಲ್ಲಿ ಇದೊಂದೇ ಅಂತೆ!

ಯೂರೋಪಿಗೆ ಹೋದರೆ ಡ್ಯಾನೂಬ್ ಅದ್ಭುತ ನದಿ ಇರುವ ಬುಡಾಪೆಸ್ಟ್ ಮಾತ್ರ ಮಿಸ್ ಮಾಡಿಕೊಳ್ಳಬೇಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!