ಕಝಕಿಸ್ತಾನದಲ್ಲೊಂದು ಊಸರವಳ್ಳಿ ಸರೋವರ ಕೊಲ್ಸಾಯ್ ಲೇಕ್
ಕೊಲ್ಸಾಯ್ ಲೇಕ್‌ನ್ನು ಮೇಲಿನಿಂದ ನೋಡಿದರೇ ಚೆಂದ. ಫೋಟೋ ತೆಗೆದುಕೊಳ್ಳಲು ಅದೇ ಹೇಳಿ ಮಾಡಿಸಿದ ಜಾಗ. ಆಲ್ಲೇ ಒಂದು ಹೊಟೇಲ್ ಇದ್ದು ಸರೋವರ ಕಾಣಿಸುವ ಕಿಟಕಿಯ ಪಕ್ಕದಲ್ಲಿ ಕುಳಿತುಕೊಳ್ಳಬೇಕೆಂದರೆ ದೊಡ್ಡ ಮೊತ್ತದ ಬಿಲ್ ಮಾಡಬೇಕು ಅಥವಾ ಎಕ್ಟ್ಸಾ ಕಾಸು ಕೊಡಬೇಕು.
- ಗೀತಾ ಕುಂದಾಪುರ
ಕೊಲ್ಸಾಯ್ ಲೇಕ್
ಕಝಕಿಸ್ತಾನ ಮಧ್ಯ ಏಷ್ಯಾದ ದೇಶ. ಇದು 20ನೇ ಶತಮಾನದ ಅಂತ್ಯದವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದು 1991ರಲ್ಲಿ ಯು ಎಸ್ ಎಸ್ ಆರ್ ಹದಿನೈದು ದೇಶಗಳಾಗಿ ಹೋಳಾದಾಗ ಸ್ವತಂತ್ರ ದೇಶವಾಯಿತು. ಕಝಕಿಸ್ತಾನದ ಆಗ್ನೇಯ ಭಾಗ ಪರ್ವತ ಶ್ರೇಣಿ, ಕಣಿವೆ ಪ್ರದೇಶ ಹಾಗೂ ಸುಂದರ ಸರೋವರಗಳ ಆಗರ. ಇಲ್ಲಿದೆ ʻಅಲ್ಮಾಟಿʼ ನಗರ. ಇದು ರಾಜಧಾನಿಯಲ್ಲದಿದ್ದರೂ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರ. ಹಾಗೆಯೇ ಪ್ರಕೃತಿ ಸೌಂದರ್ಯವೂ ಧಾರಾಳವಾಗಿದ್ದು ದೇಶ, ವಿದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಅಲ್ಮಾಟಿಯಲ್ಲಿ ದೃಷ್ಟಿ ಹರಿಸಿದಲೆಲ್ಲಾ ಹಸಿರಿನ ಬೆಟ್ಟಗಳು. ಅದರಾಚೆಗೆ ಮಂಜು ಮುಚ್ಚಿದ ಬೆಟ್ಟಗಳು ಕಣ್ಣನ್ನು ತಂಪಾಗಿಸುತ್ತದೆ.

ಟಿಯಾನ್ ಶಾನ್ ಮಧ್ಯ ಏಷ್ಯಾದಲ್ಲಿರುವ ಪರ್ವತ ಶ್ರೇಣಿ. ಇದರ ಉತ್ತರಭಾಗದಲ್ಲಿದೆ ಕೊಲ್ಸಾಯ್ ಲೇಕ್. ಇದು ʻಟಿಯಾನ್ ಶಾನ್ ನ ಹವಳʼ ಎಂದೇ ಪ್ರಖ್ಯಾತವಾಗಿದೆ. ಇದನ್ನು ಕಝಕಿಸ್ತಾನದ ಸ್ವಿಟ್ಜರ್ ಲ್ಯಾಂಡ್ ಎನ್ನುವವರೂ ಇದ್ದಾರೆ. ಕೊಲ್ಸಾಯ್ ಲೇಕ್ ಅಲ್ಮಾಟಿಯಿಂದ ಸುಮಾರು 300ಕಿಮೀ ದೂರದಲ್ಲಿದೆ.
ಇಲ್ಲಿ ಒಂದಲ್ಲ, ಎರಡಲ್ಲ ಮೂರು ಸರೋವರಗಳು ಕಡಿದಾದ ಪರ್ವತಗಳ ಕೊರಕಲಿನಲ್ಲಿ ಹರಿಯುತ್ತಿವೆ. ಕೆಳಗಿನ ಮಟ್ಟದಲ್ಲಿ ಹರಿಯುವ ಸರೋವರವೇ ಸಮುದ್ರ ಮಟ್ಟದಿಂದ ಸುಮಾರು 1,800 ಮೀಟರ್ ಎತ್ತರದಲ್ಲಿದೆ. ಇದು ಸುಮಾರು 80 ಮೀಟರ್ ಆಳ, 400 ಮೀಟರ್ ಉದ್ದವಿದೆ. ಈ ಸರೋವರ ಸೂರ್ಯನ ಕಿರಣಗಳು ಸೋಕಿದಂತೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುತ್ತದೆ. ಒಮ್ಮೆ ನೀಲಿ ಸಫೈರ್ ವಜ್ರದಂತೆ ಹೊಳೆದರೆ ಮತ್ತೊಮ್ಮೆ ಎಮರಾಲ್ಡ್ ಹಸಿರಾಗುತ್ತದೆ. ಸುತ್ತ ಇರುವ ಕಾಡೆಂದರೆ ಸೂಜಿ ಮೊನೆಯ ಮರಗಳದ್ದು, ಹಾಗೂ ಸ್ವರೌಸ್, ಮೇಪಲ್ ಮರಗಳೂ ಇವೆ. ಕರಡಿ, ತೋಳ, ಜಿಂಕೆ, ಸೈಬೀರಿಯನ್ ಆಡು, ಹಿಮ ಚಿರತೆ ಮುಂತಾದ ಪ್ರಾಣಿಗಳಿದ್ದಾವಂತೆ.
ಸರೋವರವನ್ನು ಇನ್ನೂ ಹತ್ತಿರದಿಂದ ನೋಡಬೇಕೆಂದರೆ, ಬೋಟಿಂಗ್ ಮಾಡಬೇಕೆಂದರೆ ಇನ್ನು 100 ಮೆಟ್ಟಿಲುಗಳಷ್ಟು ಕೆಳಗಿಳಿಯಬೇಕು. ಕೊಲ್ಸಾಯ್ ಲೇಕ್‌ನ್ನು ಮೇಲಿನಿಂದ ನೋಡಿದರೇ ಚೆಂದ. ಫೋಟೋ ತೆಗೆದುಕೊಳ್ಳಲು ಅದೇ ಹೇಳಿ ಮಾಡಿಸಿದ ಜಾಗ. ಆಲ್ಲೇ ಒಂದು ಹೊಟೇಲ್ ಇದ್ದು ಸರೋವರ ಕಾಣಿಸುವ ಕಿಟಕಿಯ ಪಕ್ಕದಲ್ಲಿ ಕುಳಿತುಕೊಳ್ಳಬೇಕೆಂದರೆ ದೊಡ್ಡ ಮೊತ್ತದ ಬಿಲ್ ಮಾಡಬೇಕು ಅಥವಾ ಎಕ್ಟ್ಸಾ ಕಾಸು ಕೊಡಬೇಕು. ಹೊಟೇಲ್ ಅಲ್ಲದೆ ಒಂದೆರಡು ಚಹಾ, ಐಸ್ ಕ್ರೀಮ್ ಮಾರುವ ಅಂಗಡಿಗಳೂ ಇವೆ. ಎಲ್ಲೂ ಗೌಜು, ಗಲೀಜು ಇಲ್ಲವೇ ಇಲ್ಲ. ಪಕ್ಕದಲ್ಲಿ ನೀರಿನ ತೊರೆಯೂ ಇದೆ. ಅಲ್ಲಿ ಚಾರಣ ಮಾಡುವವರು, ಟೆಂಟ್ ಕಟ್ಟಿ ರಾತ್ರಿ ತಂಗುವವರೂ ಇದ್ದಾರೆ.

ಬೇಸಿಗೆ ಕಾಲದಲ್ಲೇ ಇಲ್ಲಿನ ಉಷ್ಣಾಂಶ 10 ಡಿಗ್ರೀಗಿಂತ ಕಮ್ಮಿ. ಚಳಿಗಾಲದಲ್ಲಂತೂ ಸರೋವರದ ನೀರು ಮಂಜುಗಡ್ಡೆಯಾಗುತ್ತದೆ. ಚಳಿಗಾಲದಲ್ಲೂ ಇದನ್ನು ನೋಡಲೂ ಸಾಕಷ್ಟು ಪ್ರವಾಸಿಗರಿರುತ್ತಾರಂತೆ.
ಮತ್ತೆರಡು ಸರೋವರಗಳು ಸಮುದ್ರ ಮಟ್ಟದಿಂದ 200 ಮೀಟರಿಗೂ ಎತ್ತರದಲ್ಲಿದೆ, 8-10ಕಿಮಿ ದಾರಿ, ಆದರೆ ದಾರಿಯು ಅತ್ಯಂತ ಕಠಿಣವಿದ್ದು ಕುದುರೆ ಅಥವಾ ಕಾಲ್ನಡಿಗೆಯ ಮೂಲಕ ಸಾಗಬೇಕು.
ಚಾರಿನ್ ಕೆನ್‌ಯನ್
ಇದು ಅಮೆರಿಕದಲ್ಲಿರುವ ಗ್ರಾಂಡ್ ಕೆನ್‌ಯನ್ ಅಲ್ಲ. ಅದರ ತಮ್ಮ ಚಾರಿನ್ ಕೆನ್‌ಯನ್ ಎನ್ನಬಹುದು. ಅಂದರೆ ಗ್ರಾಂಡ್ ಕೆನ್‌ಯನ್‌ನಷ್ಟು ದೊಡ್ಡದಾಗಿಲ್ಲ ಇದು. ಆದರೆ ಇದರ ಅಂದ, ಚೆಂದ, ರುದ್ರ ಗಂಭೀರತೆ ಯಾವುದಕ್ಕೂ ಕಮ್ಮಿಯಲ್ಲ.
ಪ್ರಕೃತಿಯೇ ವಿಚಿತ್ರ, ಒಂದು ಕಡೆ ಪ್ರಕೃತಿ ನೀರಾಗಿ ಹರಿದರೆ ಮತ್ತೊಂದು ಕಡೆ ಗುಡ್ಡ ಬೆಟ್ಟಗಳು, ಇನ್ನೊಂದು ಕಡೆ ನೀರೇ ಇಲ್ಲದ ಮರಳುಗಾಡು. ಚಾರಿನ್ ನದಿಗೆ ಕಾವಲೋ ಎಂಬಂತೆ ಚಾರಿನ್ ಕಣಿವೆ ಪ್ರದೇಶದಲ್ಲಿ ಚಿತ್ರ ವಿಚಿತ್ರ ಆಕಾರದಲ್ಲಿರುವ ಮರಳು ಕಲ್ಲಿನ ಪ್ರಕೃತಿ ನಿರ್ಮಿತ ಕೋಟೆ ಅಥವಾ ಗೋಡೆ ಇದೆ. ಇದರ ಆಯಸ್ಸು 12 ಮಿಲಿಯನ್ ವರ್ಷಗಳಂತೆ. ನದಿಯ ಉದ್ದ 360 ಕಿಮೀ, ಕಣಿವೆ ಪ್ರದೇಶ 154 ಕಿಮೀ.
ಅಲ್ಮಾಟಿಯಿಂದ ಸುಮಾರು 215 ಕಿಮಿ ದೂರದಲ್ಲಿರುವ ಇದು ಅಲ್ಮಾಟಿಗೆ ಪ್ರವಾಸ ಬಂದವರ ಪ್ರಧಾನ ಆಕರ್ಷಣೆಯಲ್ಲೊಂದು. ಭೌಗೋಳಿಕವಾಗಿ ಹೇಳಬೇಕೆಂದರೆ ಇದು ಕಝಕಿಸ್ತಾನ ಮತ್ತು ಚೈನಾದ ಬಾರ್ಡರ್ ಪ್ರದೇಶ. ಚಾರಿನ್ ನದಿಯ ದಂಡೆಯ ಮೇಲಿರುವ ಕೆಂಪು ಮರಳು ಕಲ್ಲುಗಳು ವಾತಾವರಣದ ಪ್ರಕ್ರಿಯೆ, ಘನೀಕರಣ, ಬಲವಾಗಿ ಬೀಸುವ ಗಾಳಿಯೊಂದಿಗೆ ಜ್ವಾಲಾಮುಖಿಯ ಗಾಳಿಯೂ ಸೇರಿ ಕಲ್ಲುಗಳು ಚಿತ್ರವಿಚಿತ್ರ ಬಣ್ಣ ಮತ್ತು ಆಕಾರ ತಳೆದಿವೆ. ಕೆಲವು ಕಡೆ ಕಲ್ಲುಗಳು 300 ಮೀಟರಿನಷ್ಟು ಎತ್ತಕ್ಕೆ ಬೆಳೆದು ಪೆಡಂಭೂತದಂತೆ ಹೆದರಿಸಿದರೆ, ಕೆಲವು ಕಡೆ ಬಾಗಿ, ಬಳುಕಿ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಕೆಲವು ಕಡೆ ಗಂಭೀರವಾಗಿ ನಿಂತು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಹೆಚ್ಚಿನ ಕಡೆ ಮರಳು ಕಲ್ಲಿನ ಗೋಡೆಯ ಬಣ್ಣ ಕೆಂಪು ಬಣ್ಣವಿದ್ದರೂ ಕೆಲವು ಕಡೆ ಗೋಡೆ ಒತ್ತತ್ತಾಗಿದ್ದು ಬೂದು ಬಣ್ಣವಾಗಿ ಕಾಣಿಸುತ್ತದೆ, ಕೆಲವು ಕಡೆ ಹಳದಿ, ಕಪ್ಪು ಬಣ್ಣದಲ್ಲೂ ಇದೆ. ಒಟ್ಟಿನಲ್ಲಿ ಇದನ್ನು ನೋಡುತ್ತಾ ಹೋದಂತೆ ಕಲ್ಲುಗಳು ಕತೆ ಹೇಳುವಂತೆ ತೋರುತ್ತದೆ.
ಚಾರಿನ್ ಕೆನ್‌ಯನ್ ಸೌಂದರ್ಯವನ್ನು ಆಸ್ವಾದಿಸಬೇಕೆಂದರೆ ಕೆಂಪು ಕಲ್ಲಿನ ನಡುವೆ ಇರುವ ಕಣಿವೆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಬೇಕು. ಇದರ ದೂರ ಸುಮಾರು ಎರಡೂವರೆ ಕಿಲೋಮೀಟರ್. ಇದಕ್ಕೆ ಬೇಕಾಗುವ ಸಮಯ ಒಂದೂವರೆ ಗಂಟೆ. ಕಣಿವೆ ಪ್ರದೇಶಕ್ಕೆ ಹೋಗಲು ಮೆಟ್ಟಿಲಿಳಿದು ಸಾಗಬೇಕು. ಅಲ್ಲಿಂದ ಮುಂದೆ ಮಣ್ಣಿನ ದಾರಿ, ನಡೆಯಲು ಸಾಧ್ಯವಿಲ್ಲವೆಂದರೆ ತೆರೆದ ಗಾಡಿಯ ವ್ಯವಸ್ಥೆಯೂ ಇದೆ. ಮಧ್ಯೆಮಧ್ಯೆ ಅರ್ಧ ಗೋಳಾಕಾರದ ಕಲ್ಲಿನ ಮಂಟಪವಿದೆ. ಇದು ಮಾನವ ನಿರ್ಮಿತ. ನಡೆಯುವವರ ಅನುಕೂಲಕ್ಕಾಗಿ. ಮುಂದೆ ಸಾಗಿದಂತೆ ಕಲ್ಲುಗಳು ನಿಗೂಡವಾಗುತ್ತಾ ಹೋಗುತ್ತದೆ. ಕೊನೆಯಲ್ಲಿ ತಣ್ಣನೆ ಹರಿಯುವ ಚಾರಿನ್ ನದಿ ಎದುರಾಗುತ್ತದೆ. ನಡು ಮಧ್ಯಾಹ್ನವಾದರೂ ನೀರು ತಣ್ಣಗೆ ಕೊರೆಯುತ್ತಿರುತ್ತದೆ. ಮತ್ತೊಂದು ಕಡೆ ಕಡು ಕಪ್ಪು ಬಣ್ಣದ ಕಲ್ಲಿನ ಮಧ್ಯೆ ಹರಿಯುವ ಚಾರಿನ್ ನದಿ ಕಾಣುತ್ತದೆ.
ವ್ಯಾಲಿ ಆಫ್ ಕೇಸಲ್ಸ್, ರೆಡ್ ಕೆನ್‌ಯನ್, ಎಲ್ಲೋ ಕೆನ್‌ಯನ್, ಟೆಮಿರ್ಲಿಕ್ ಕೆನ್‌ಯನ್, ಬೆಸ್ತಾಮಾಕ್ ಕೆನ್‌ಯನ್, ಹೀಗೆ ಇಡೀ ಚಾರಿನ್ ಕಣಿವೆ ಪ್ರದೇಶವು 5 ಭಾಗದಲ್ಲಿದೆ. ಕೆಂಪು ಮರಳು ಕಲ್ಲಿನ ಬಂಡೆಗಳಿರುವ ಜಾಗವು ಬರಡು ಭೂಮಿಯಂತೆ ಕಂಡರೂ ನೂರಾರು ಬಗೆಯ ಗಿಡಗಳಿವೆ, ಕೆಲವಂತೂ ಅಪರೂಪದ್ದು. ಹದ್ದು, ಹಾವು, ಹಲ್ಲಿ, ನರಿ, ತೋಳ ಮುಂತಾದ ಪ್ರಾಣಿಗಳೂ ಇವೆ.
ಇದನ್ನು ನೋಡಲೇ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರಂತೆ.