ಅಚ್ಚರಿಗಳ ಆಗರ ಈ ನಯಾಗರ
ನಯಾಗರ ಎಂಬುದು ರೆಡ್ ಇಂಡಿಯನ್ ಭಾಷೆಯ ಪದ. ಅದರ ಅರ್ಥ ಗುಡುಗುವ ಜಲ. ಇದೊಂದು ಮಹಾ ಚೈತನ್ಯದ ಧ್ವನಿ ಎಂಬ ಭಾವನೆ. ಬಹಳ ಹಿಂದೆ ದೋಣಿಯ ತುಂಬಾ ಹೂವು ತುಂಬಿ ಕನ್ಯೆಯನ್ನು ಕೂರಿಸಿ ಬಲಿ ಕೊಡುತ್ತಿದ್ದರಂತೆ ಎಂಬ ಕಥೆಯೂ ಇದೆ.
- ಹು ವಾ ಶ್ರೀಪ್ರಕಾಶ್
ಭಗವಂತನ ಸೃಷ್ಟಿಯೇ ಅದ್ಭುತ! ಈ ಬುವಿಯಲ್ಲಿ ಅದೆಷ್ಟು ಸುಂದರ ತಾಣಗಳು! ಭಗವಂತನಾನಂದ ರೂಪಗೊಂಡಿವುದಿಲ್ಲಿ ಎಂದು ಕವಿ ಕುವೆಂಪು ಹೇಳಿರುವುದನ್ನು ನೆನೆಯಬಹುದು. ಮೈಮನ ಮರೆಸುವ ಮನಸ್ಸು ತುಂಬಿ ಬರುವ ಇಂಥ ಅದ್ಭುತ ತಾಣಗಳನ್ನು ನೋಡಿದಾಗ ಧನ್ಯತೆಯ ಕುಸುಮಗಳನರ್ಪಿಸಿದ ಭಾವದೊಂದೆಗೆ ಮರಳುವುದರಲ್ಲೇ ಅತ್ಯಾನಂದ.
ನಯಾಗರದ ಸೌಂದರ್ಯ ವರ್ಣಿಸಲು, ಅದರ ಬಗ್ಗೆ ಬರೆಯಲು ನನ್ನಲ್ಲಿ ಮಾತುಗಳಿಲ್ಲ. ಏಕೆಂದರೆ ಇದು ವರ್ಣಿಸಬಹುದಾದ ತಾಣ ಅನ್ನುವುದಕ್ಕಿಂತಲೂ ಹೋಗಿ ಅನುಭವಿಸಬೇಕಾದ ತಾಣ.
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂಬ ಕನ್ನಡ ಹಾಡನ್ನು ನೀವು ಕೇಳಿರುತ್ತೀರಿ. ಕರ್ನಾಟಕದಲ್ಲಿ ಜೋಗ ಅತ್ಯಂತ ಸುಂದರ ನೋಡಬೇಕಾದ ಸ್ಥಳ. ಇಳಿವ ನಾಲ್ಕು ಜಲಧಾರೆಗಳು ಮೋಹಕ.
ಆದರೆ ನಯಾಗರ ಸಂಪೂರ್ಣವಾಗಿ ಭಿನ್ನ ರೀತಿಯದು. ಇದು ಸಾಮಾನ್ಯವಾಗಿ ಕಾಣಸಿಗುವ ಬಹಳ ಎತ್ತರದಿಂದ ಧುಮುಕುವ ಜಲಧಾರೆಯಂಥ ಜಲಪಾತವಲ್ಲ. ಅಗಾಧ ಜಲರಾಶಿಯೇ ನಿಮ್ಮ ಮುಂದೆ ಕಂಗೊಳಿಸಿ ಭೋರ್ಗರೆಯುತ್ತದೆ.

ಭೂ ಭಾಗದ ಮತ್ತೊಂದು ಭಾಗದಲ್ಲಿರುವ ಈ ನಯಾಗರವನ್ನು ಮನುಷ್ಯರಾಗಿ ಹುಟ್ಟಿದ ಮೇಲೆ ನೋಡಲೇಬೇಕು ಎನ್ನುವುದು ತಪ್ಪಾದೀತು. ಏಕೆಂದರೆ ಅದಕ್ಕಾಗಿ ಲಕ್ಷಾಂತರ ಹಣವನ್ನು ವ್ಯಯಿಸಬೇಕಾಗುತ್ತದೆ. ಆದರೆ ಅಮೆರಿಕಕ್ಕೆ ಹೋದವರು ಮಾತ್ರ ಖಂಡಿತ ನೋಡಲೇಬೇಕಾದ ಸ್ಥಳ ಇದು .
ನಾನು ಕೆಲವು ಆಪ್ತ ಸ್ನೇಹಿತರಿಗೆ ಹೇಳುವುದುಂಟು ನೀವು ಪ್ರವಾಸ ಹೋಗಬೇಕಾದರೆ ಸಿಂಗಾಪುರಕ್ಕೆ ಹೋಗಿ ಎಂದು. ಏಕೆಂದರೆ ಆ ಪುಟ್ಟ ದೇಶ ಪ್ರವಾಸಿಗರಿಗಾಗಿಯೇ ಮಾಡಲ್ಪಟ್ಟಂತಿದೆ. ಅಲ್ಲಿ ಯುನಿವರ್ಸಲ್ ಸ್ಟುಡಿಯೋ ಮತ್ತೆಲ್ಲವೂ ಇದೆ. ಇಡೀ ಪ್ರಪಂಚ ಪರ್ಯಟನೆ ಮಾಡಿ ನೋಡಿ ಬರುವಂಥ ಹಲವು ಸಂಗತಿಗಳನ್ನು ಸಮೀಪದ ಸಿಂಗಾಪುರದಲ್ಲಿ ನೋಡಿಬಿಡಬಹುದು .ಆದರೆ ನಯಾಗರದಂಥ ಸುಂದರ ಪ್ರಕೃತಿ ವಿಶೇಷಗಳು ಮಾತ್ರ ಸಿಗುವುದಿಲ್ಲ.
ನಯಾಗರ ಜಲಪಾತ ಕೆನಡಾದ ಓಂಟಾರಿಯೋ ಹಾಗೂ ಅಮೆರಿಕದ ನ್ಯೂಯಾರ್ಕ್ ನ ಬಫೆಲೋ ನಡುವೆ ಬರುತ್ತದೆ.
ಮೂರು ಸುಂದರ ಜಲಪಾತಗಳ ತಾಣವಿದು. ಅಮೆರಿಕನ್ ಫಾಲ್ಸ್ , ಬ್ರೈಡಲ್ ವೇಲ್ ಫಾಲ್ಸ್ ಹಾಗೂ ಹಾರ್ಸ್ ಶೂ ಫಾಲ್ಸ್ ಎಂದು ಇವನ್ನು ಕರೆಯುತ್ತಾರೆ. ಹಾರ್ಸ್ ಶೂ ಫಾಲ್ಸ್ ಬಹಳ ದೊಡ್ಡದು. ಕುದುರೆ ಲಾಳದ ಆಕಾರದಲ್ಲಿದೆ. ಇದು ಕೆನಡಾಕ್ಕೆ ಸೇರಿದೆ. ಅಮೆರಿಕ ಹಾಗೂ ಕೆನಡಾ ಎರಡು ಕಡೆಗಳಿಂದಲೂ ಬೋಟ್ ಗಳಲ್ಲಿ ಫಾಲ್ಸ್ ಗೆ ಹೋಗುವ ವ್ಯವಸ್ಥೆ ಇದೆ. ಬೋಟುಗಳು ಜಲಪಾತದ ಸನಿಹ ಹೋಗುತ್ತಿರುವಂತೆ ಅದರ ಅದ್ಭುತ ಸೌಂದರ್ಯದ ಜೊತೆಗೆ ಶಬ್ದ ನಿಮ್ಮನ್ನು ಸಂಪೂರ್ಣವಾಗಿ ಮೈಮರೆಸಿಬಿಡುತ್ತದೆ. ಹತ್ತಿರವಾದಂತೆ ಸಾಗರವೇ ನಮ್ಮ ಮುಂದೆ ಮುಗಿ ಬೀಳುತ್ತಿರುವಂತೆ ಬೆಳ್ಳನೆಯ ಜಲರಾಶಿ.

ದಟ್ಟ ಮಂಜು ಆವರಿಸಿ ತುಂತುರು ನೀರ ಹನಿಗಳು ಮೈಮೇಲೆ ಬೀಳುತ್ತಿದ್ದರೆ ಹತ್ತಿರ ಹೋದಂತೆ ನೀರ ಸಿಂಚನ ನಿಮ್ಮನ್ನು ಆನಂದದ ಕಡಲಲ್ಲಿ ತೇಲಿಸುತ್ತದೆ. ತೀರ ಸನಿಹಕ್ಕೆ ಹೋದಾಗ ಮಂಜು ಮತ್ತು ಜೋರಾಗಿ ಮಳೆ ಸುರಿದಂತೆ ಭಾಸವಾಗುತ್ತದೆ. ಏನೂ ಕಾಣದಂಥ ಅತ್ಯಂತ ರೋಮಾಂಚಕಾರಿ ಅನುಭವ. ಆನಂದದ ಚೀತ್ಕಾರ ಕೇಕೆ ಸಿಳ್ಳೆ! ಕೆಲವರು ಮೂಕವಿಸ್ಮಿತರಾದರೆ ಕೆಲವರು ಅರಚಿ ಆನಂದ ವ್ಯಕ್ತಪಡಿಸುತ್ತಾರೆ.
ಬೋಟ್ ಒಂದು ಸುತ್ತು ಪೂರ್ಣ ಸುತ್ತಿ ಮತ್ತೆ ಹೊರಟ ಸ್ಥಳಕ್ಕೆ ತಂದುಬಿಡುತ್ತದೆ. ಅಮೆರಿಕದ ಕಡೆಯ ಬೋಟಿನ ಸಂಚಾರವನ್ನು ಮೇಯ್ಡ್ ಆಫ್ ದಿ ಮಿಸ್ಟ್ (Maid of the mist) ಎಂದರೆ ಕೆನಡಾ ಕಡೆಯದು ಹಾರ್ನ್ ಬ್ಲೋವರ್. ಬೋಟಿನಲ್ಲಿ ಮತ್ತು ಹೋಗಲು ಕೊಡುವ ರೇನ್ ಕೋಟಿನಲ್ಲಿ ಈ ಹೆಸರುಗಳಿರುತ್ತವೆ.
ಕೆನಡಾ ಕಡೆಯಿಂದ ನಯಾಗರದ ನೇರ ನೋಟ ಸಿಗುತ್ತದೆ. ಬೋಟ್ ವಿಹಾರವಲ್ಲದೆ ಮತ್ತಿತರ ಕೆಲವು ತಾಣಗಳಲ್ಲಿ ಜಲಪಾತದ ಸೌಂದರ್ಯ ಆನಂದಿಸಬಹುದಾಗಿದೆ. ಕೇವ್ ಆಫ್ ದ ವಿಂಡ್ಸ್ ಎಂಬಲ್ಲಿ ಜಲಪಾತದ ಅದ್ಭುತ ರಭಸವನ್ನು ಹತ್ತಿರದಿಂದ ನೋಡಬಹುದು. ಹಾಗೆಯೇ ಜಲಪಾತದ ಅಡಿಯಲ್ಲಿ ಗುಹೆಯಂಥ ಪ್ರದೇಶದಲ್ಲಿ ಹೋಗಿ ಜಲಪಾತದ ಹಿಂದಿನಿಂದ ಒಂದು ನೋಡಬಹುದು.
ಕೆನಡಾದವರು ಒಟ್ಟಾವದಿಂದ ರೈಲು ಮಾರ್ಗದಲ್ಲಿ ಟೊರಾಂಟೋಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ನಯಾಗರ ತಲುಪಬಹುದು. ಬಸ್ಸುಗಳು ಯಾವ ಗೇಟ್ ಗೆ ಬರುತ್ತವೋ ಅಲ್ಲಿ ನಿಂತಿರಾಯ್ತು. ಸರದಿ ಸಾಲಲ್ಲಿ ಹತ್ತಬೇಕು. ನುಗ್ಗಾಟ ಇಲ್ಲ. ನಿರ್ವಾಹಕನೂ ಇಲ್ಲ.
ಇನ್ನು ನೇರವಾಗಿ ಜಲಪಾತದ ವ್ಯೂ ಸಿಗುವಂಥ ಹೊಟೇಲ್ ಗಳೂ ಇಲ್ಲಿವೆ. ಅಲ್ಲಿ ರೂಮ್ ಬುಕ್ ಮಾಡಿದರೆ ಗಂಟೆಗಟ್ಟಲೆ ನಯಾಗರ ಜಲಪಾತವನ್ನು ನೋಡುತ್ತಲೇ ಇರಬಹುದು.

ರಾತ್ರಿಯ ಹೊತ್ತಿನಲ್ಲಿ ನಯಾಗರ ಅದ್ಭುತ ಸುಂದರ ಸ್ವರ್ಗ ಲೋಕವನ್ನು ತೆರೆದಿಡುತ್ತದೆ ಬಣ್ಣ ಬಣ್ಣದ ಬೆಳಕಿನಲ್ಲಿ ನಯಾಗರ ಕಂಗೊಳಿಸುತ್ತದೆ . ಆಗಾಗ್ಗೆ ಈ ಬಣ್ಣಗಳು ಬದಲಾಗುತ್ತಾ ಮೋಹಕವಾಗಿ ಕಾಣುತ್ತದೆ. ನೋಡಿ ಕಣ್ಣು ದಣಿಯಬೇಕೇ ಹೊರತು ಮನಸು ತಣಿಯುವುದೇ ಇಲ್ಲ.
ಜಲಪಾತದ ವ್ಯಾಪ್ತಿಯಲ್ಲಿ ಎಲ್ಲೇ ಸುತ್ತಾಡಿದರೂ ನಯಾಗರದ ಭೋರ್ಗರೆತ ಕೇಳುತ್ತಲೇ ಇರುತ್ತದೆ. ಇಲ್ಲಿ ಜರ್ನಿ ಬಿಹೈಂಡ್ ದಿ ಫಾಲ್ಸ್ ಎಂದು ಫಾಲ್ಸ್ ಹಿಂದೆ ಹೋಗಿ ನೋಡಲು ಕೂಡ ಸಾಧ್ಯವಿದೆ. ಅದಕ್ಕೆ ಪ್ರತ್ಯೇಕ ಟಿಕೆಟ್ ಇದೆ. ಹತ್ತಿರದ ರಸ್ತೆಗಳ ಮೇಲೆ ಓಡಾಡುವಾಗ ಕೊಡೆ ಅಥವಾ ರೇನ್ ಕೋಟ್ ಅಗತ್ಯ. ಪ್ರವಾಸಿಗರನ್ನು ಆಕರ್ಷಿಸುವ ಹಲವಾರು ಮನರಂಜನೆಗಳು ಈ ನಗರದಲ್ಲಿವೆ.
ಗಿಫ್ಟ್ ಸೆಂಟರ್ ಗಳು, ಮ್ಯೂಸಿಯಂ, ಅಕ್ವೇರಿಯಂ, ಸುಂದರ ಪಾರ್ಕ್, ವಿವಿಧ ಹೊಟೇಲ್ ಗಳು, ನಾನಾ ರೀತಿಯ ಮಳಿಗೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಮಕ್ಕಳಿಗೆ, ಯುವಕರಿಗೆ ಇಲ್ಲಿ ಯಥೇಚ್ಛವಾಗಿ ಸಮಯ ಕಳೆಯಲು ಆಡಬಹುದಾದ ವೈವಿಧ್ಯಮಯ ಆಟಗಳಿವೆ. ಕ್ಯಾಸಿನೋಗಳೂ ಇವೆ. ನಯಾಗರದ ಇತಿಹಾಸ, ಪುರಾತನ ಕಟ್ಟಡಗಳ ಹಿನ್ನೆಲೆ, ವಿದ್ಯುಚ್ಛಕ್ತಿ ಉತ್ಪಾದನೆ ಇತ್ಯಾದಿಗಳ ಬಗೆಗಿನ ಮಾಹಿತಿ ತಿಳಿಸುವ ಚಿತ್ರಗಳು ವಿವರಗಳು ಇಲ್ಲಿ ಕಾಣಿಸುತ್ತವೆ. ದೇಶ ವಿದೇಶದ ಪ್ರವಾಸಿಗರಿಂದ ನಗರ ಸದಾ ತುಂಬಿರುತ್ತದೆ. ಇಲ್ಲಿ ಬಗೆಬಗೆಯ ಉಡುಪು ಧರಿಸಿ ಬರುವ ಪ್ರವಾಸಿಗರನ್ನುನೋಡುವುದೂ ಚಂದವೇ.
ಅಮೆರಿಕ ಮತ್ತು ಕೆನಡಾ ಮಧ್ಯೆ ಗೋಟ್ ಐಲ್ಯಾಂಡ್ ಎಂಬ ದ್ವೀಪವಿದೆ .ನಯಾಗರ ಜಲಪಾತ ಸುಮಾರು 110 ಅಡಿ ಅಗಲ 187 ಅಡಿ ಎತ್ತರ ಇದೆ. ಇದು ಕೆನಡಾ ಕಡೆಯಲ್ಲಿ ಹರಿದು ಮುಂದೆ ಅಟ್ಲಾಂಟಿಕ್ ಸಮುದ್ರವನ್ನು ಸೇರುತ್ತದೆ. ನಯಾಗಾರದ ಅರ್ಧಭಾಗವನ್ನು ಕೆನಡಾ ಮತ್ತು ಅರ್ಧ ಭಾಗವನ್ನು ಅಮೆರಿಕದವರು ವಿದ್ಯುಚ್ಛಕ್ತಿ ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ.
1063ರಲ್ಲಿ ಫ್ರೆಂಚ್ ಪ್ರವಾಸಿಯೊಬ್ಬನಿಗೆ ಈ ಜಲರಾಶಿ ಕಂಡಿತಂತೆ. ರೆಡ್ ಇಂಡಿಯನ್ ರಿಗೆ ಸೇರಿದ್ದ ನಯಾಗರ ಆಮೇಲೆ ಫ್ರೆಂಚರ ಹತೋಟಿಗೆ ಬಂದು ನಂತರ ಬ್ರಿಟಿಷರ ಹತೋಟಿಗೆ ಬಂದ ದೊಡ್ಡ ಕತೆಯಿದೆ. 1796ರಲ್ಲಿ ಅಮೆರಿಕ ಕಡೆ ಜಲಪಾತ ಅಮೆರಿಕ ದೇಶಕ್ಕೂ ಕೆನಡಾ ಕಡೆ ಜಲಪಾತ ಕೆನಡಾ ದೇಶಕ್ಕೂ ಸೇರಿತು. ನಯಾಗರ ಎಂಬುದು ರೆಡ್ ಇಂಡಿಯನ್ ಭಾಷೆಯ ಪದ ಅದರ ಅರ್ಥ ಗುಡುಗುವ ಜಲ. ಇದೊಂದು ಮಹಾ ಚೈತನ್ಯದ ಧ್ವನಿ ಎಂಬ ಭಾವನೆ. ಬಹಳ ಹಿಂದೆ ದೋಣಿಯ ತುಂಬಾ ಹೂವು ತುಂಬಿ ಕನ್ಯೆಯನ್ನು ಕೂರಿಸಿ ಬಲಿ ಕೊಡುತ್ತಿದ್ದರಂತೆ ಎಂಬ ಕಥೆಯೂ ಇದೆ. ಇಲ್ಲಿ ಚಳಿಗಾಲದಲ್ಲಿ ಎಲ್ಲವೂ ಹಿಮಗಡ್ಡೆಯಿಂದ ಆವರಿಸಲ್ಪಟ್ಟು ಕೆಲವು ಸಮಯ ಬೋಟಿಂಗ್ ಇರುವುದಿಲ್ಲ. ಅಂದ ಹಾಗೆ ಪ್ರಪಂಚದ ಏಳು ಅದ್ಭುತಗಳಲ್ಲಿ ಇದೂ ಒಂದು ಎಂಬುದು ನಿಮಗೆ ತಿಳಿಯದ ವಿಷಯವೇನಲ್ಲ.