ರೋಮ್ ನಗರ ಇದು ಸಹಸ್ರ ಕಾರಂಜಿಗಳ ಕಾಂತಾರ
ಶಿಲ್ಪಿ, ಚಿತ್ರ ಕಲಾವಿದರಾದ ಮೈಕೆಲೇಂಜಲೊ ಹಾಗೂ ಲಿಯೋನಾರ್ಡೊ ಡಾ ವಿಂಚಿಯ ಕೈಚಳಕನ್ನು ಕಾಣಲು ಮ್ಯೂಸಿಯಮ್‌ನ ಒಳಹೋಗುವ ಮುನ್ನ, ಅಲ್ಲಿನ ವಿಶಾಲ ಚೌಕಗಳಲ್ಲಿ ನಿರ್ಮಿಸಿರುವ ಕಲಾತ್ಮಕ ಕಾರಂಜಿಗಳ ಸೊಬಗು ನಮ್ಮನ್ನು ಬರಸೆಳೆಯಿತು. ವಿಶ್ವದ ಯಾವುದೇ ನಗರದಲ್ಲಿ ಕಾಣಸಿಗದಷ್ಟು (ಸುಮಾರು 2000) ಕಾರಂಜಿಗಳನ್ನು ಹೊಂದಿರುವ ರೋಮ್ ನಗರದಲ್ಲಿ ಯಾವುದನ್ನು ನೋಡಬೇಕೆಂದು ಆದ್ಯತೆ ನೀಡುವುದೇ ತುಸು ಕಷ್ಟ.
- ಎಸ್. ಶಿವಲಿಂಗಯ್ಯ
ದಶಕಗಳ ಹಿಂದೆ, ಮಾಧ್ಯಮಿಕ ಶಾಲೆಗಳಲ್ಲಿ ಚರಿತ್ರೆ ಮತ್ತು ಭೂಗೋಳವನ್ನು ಎರಡು ಪ್ರತ್ಯೇಕ ವಿಷಯಗಳಾಗಿ ಬೋಧಿಸಲಾಗುತ್ತಿತ್ತು. ಭೂಗೋಳ ಪುಸ್ತಕದ ಪ್ರಸ್ತಾವನೆಯಲ್ಲಿ ʻನೇಪಲ್ಸ್ ಪಟ್ಟಣ ನೋಡಿ ಸಾಯಿ, ಭೂಗೋಳ ಓದಿ ಸಾಯಿʼ ಎಂಬ ಸಾಲನ್ನು ಓದಿದ ನೆನಪು. ಭೂಗೋಳ ವಿಷಯದ ಮಹತ್ವವನ್ನು ಒತ್ತಿಹೇಳುವುದಕ್ಕಾಗಿ ಈ ಮಾತು ಬಳಕೆಗೆ ಬಂದಿರಬಹುದು. ಓದಿದ್ದಾಯಿತು, ಆದರೆ ನೇಪಲ್ಸ್ ಪಟ್ಟಣ ನೋಡುವುದೆಂದು? ಮನಸಿನಲ್ಲಿದ್ದ ಈ ಮಾತು ನನ್ನ ಮಗ ನೌಕರಿಗಾಗಿ ಯೂರೋಪಿನಲ್ಲಿ ನೆಲೆಸಿದಾಗ, ಈ ಕುರಿತು ಪ್ರಸ್ತಾವವಿಟ್ಟೆ. ʻನೇಪಲ್ಸ್ ಒಂದೇ ಏಕೆ, ಪೂರ್ತಿ ಇಟಲಿಯನ್ನೇ ನೋಡೋಣ ಬನ್ನಿʼ ಎಂದು ನನ್ನನ್ನು ಆಹ್ವಾನಿಸಿದ.
ಹೀಗಾಗಿ ನಾವು ಇಟಲಿಯ ರಾಜಧಾನಿ ರೋಮ್ ನಗರಕ್ಕೆ ಬಂದಿಳಿದೆವು. ಪುರಾತನ ರೋಮನ್ನರ ಅಭಿರುಚಿ ಮತ್ತು ನೈಪುಣ್ಯವನ್ನು ಅವರ ಚಿತ್ರಕಲೆ ಮತ್ತು ಶಿಲ್ಪಗಳಲ್ಲಿ ಕಾಣಬಹುದು ಎಂದು ಓದಿದ್ದು ನೆನಪಾಯಿತು. ಶಿಲ್ಪಿ / ಚಿತ್ರ ಕಲಾವಿದರಾದ ಮೈಕೆಲೇಂಜಲೊ ಹಾಗೂ ಲಿಯೋನಾರ್ಡೊ ಡಾ ವಿಂಚಿಯ ಕೈಚಳಕನ್ನು ಕಾಣಲು ಮ್ಯೂಸಿಯಮ್‌ನ ಒಳಹೋಗುವ ಮುನ್ನ, ಅಲ್ಲಿನ ವಿಶಾಲ ಚೌಕಗಳಲ್ಲಿ ನಿರ್ಮಿಸಿರುವ ಕಲಾತ್ಮಕ ಕಾರಂಜಿಗಳ ಸೊಬಗು ನಮ್ಮನ್ನು ಬರಸೆಳೆಯಿತು. ವಿಶ್ವದ ಯಾವುದೇ ನಗರದಲ್ಲಿ ಕಾಣಸಿಗದಷ್ಟು (ಸುಮಾರು 2000) ಕಾರಂಜಿಗಳನ್ನು ಹೊಂದಿರುವ ರೋಮ್ ನಗರದಲ್ಲಿ ಯಾವುದನ್ನು ನೋಡಬೇಕೆಂದು ಆದ್ಯತೆ ನೀಡುವುದೇ ತುಸು ಕಷ್ಟದ ಕೆಲಸ.

ಸರಿ, ಗೂಗಲ್ ಗುರುವಿಗೆ ಮೊರೆಹೋದ ನಮಗೆ ದೊರೆತ ಪಟ್ಟಿಯಲ್ಲಿ ʻಫೊಂಟಾನ ಡಿ ಟ್ರೇವಿʼ ಕಾರಂಜಿ ಮೊದಲ ಸ್ಥಾನವನ್ನು ಅಲಂಕರಿಸಿತ್ತು. ಈಗ ಸುಮಾರು 26ಮೀ ಎತ್ತರ ಮತ್ತು 49ಮೀ ಅಗಲವಿರುವ ಈ ಕಾರಂಜಿ ಕ್ರಿಪೂದಲ್ಲೇ ರೂಪಿತವಾಗಿದ್ದರೂ ದೀರ್ಘಾವಧಿಯವರೆಗೆ ಪಾಳುಬಿದ್ದಿತ್ತು. ಕ್ರಿಶ 1400ರ ಸುಮಾರಿಗೆ ಲಿಯಾನ್ ಬಟಿಸ್ಟ ಅಲ್ಬರ್ಟಿ, ಹದಿನೆಂಟನೇ ಶತಮಾನದಲ್ಲಿ ಕಲಾವಿದ ನಿಕೊಲ ಸಾಲ್ವಿ ಇದನ್ನು ಮರುವಿನ್ಯಾಸಗೊಳಿಸಿ ಕೆಲವು ಗೂಡುಗಳು ಮತ್ತು ಶಿಲ್ಪ ಸಮೂಹವನ್ನು ಸೇರಿಸಿ ಮತ್ತಷ್ಟು ಸುಂದರಗೊಳಿಸಿದರು. ಟ್ರಾವರ್ಟೈನ್ ಕಲ್ಲು ಬಳಸಿ, ಬರೊಕ್ ಶೈಲಿಯಲ್ಲಿ ನಿರ್ಮಿತವಾಗಿರುವ ಇದು ವಿಶ್ವದ ಪ್ರಸಿದ್ದ ಕಾರಂಜಿಗಳಲ್ಲಿ ಒಂದಾಗಿದೆ.
ನೀರುಕುದುರೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಮತ್ಸ್ಯವೀರರೂ ಸೇರಿದಂತೆ, ಬೃಹತ್ ಕಪ್ಪೆಚಿಪ್ಪಿನ ಮೇಲೆ ನಿಂತ ಓಸಿಯಾನಸ್ ಎಂಬ ಪುರಾಣ ದೈವವನ್ನು ಈ ಶಿಲ್ಪಸಮೂಹ ಕೇಂದ್ರವಾಗಿ ಹೊಂದಿದೆ. ಜನ ಸಮೂಹದ ನಡುವೆ ಕಾರಂಜಿಯನ್ನು ನೋಡಿ, ಫೊಟೋ ಕ್ಲಿಕ್ಕಿಸಿ, ಎಲ್ಲರಂತೆ ಶಿಲ್ಪಕ್ಕೆ ಬೆನ್ನು ತಿರುಗಿಸಿ, ನನ್ನ ಸೊಸೆಯೂ ಬಲಗೈಯಲ್ಲಿದ್ದ ಒಂದು ನಾಣ್ಯವನ್ನು ಎಡಭುಜದ ಮೇಲಿಂದ ನೀರಿಗೆ ಒಗೆದಳು. ಅದೇಕೆಂದು ಕೇಳಿದಾಗ, ಮತ್ತೊಮ್ಮೆ ಬರುವಂತಾಗಲೆಂದು ಆಶಿಸಿ, ಎಂದು ತನಗೆ ತಿಳಿದಂತೆ ವಿವರಿಸಿ, ನನಗೂ ಹಾಗೆ ಮಾಡುವಂತೆ ಪ್ರೇರೇಪಿಸಿದಳು.

ನಮ್ಮ ಮುಂದಿನ ನಿಲ್ದಾಣ ಕಲಾವಿದ ಗಿಯಾನ್ ಲೊರೆಂಜೊ ಬೆರ್ನಿನಿ ಕಲ್ಪನೆಯ, 1643ರಲ್ಲಿ ನಿರ್ಮಿತ ಟ್ರೈಟಾನ್ ಫೌಂಟನ್. ಟ್ರಾವರ್ಟೈನ್ ಶಿಲೆಯ ನಾಲ್ಕು ಡಾಲ್ಫಿನ್ಗಳು ತಮ್ಮ ಬಾಲದಿಂದ ಎತ್ತಿಹಿಡಿದಿರುವ, ಬೃಹತ್ ಕಪ್ಪೆಚಿಪ್ಪಿನ ಮೇಲೆ ಕುಳಿತು ಶಂಖನಾದ ಮಾಡುತ್ತಿರುವಂತೆ ಮತ್ಸ್ಯವೀರನಿದ್ದಾನೆ. ಈ ಶಂಖದ ಮೂಲಕ ನೀರು ಹೊರಚಿಮ್ಮುತ್ತದೆ. ನೋಡುಗನಿಗೆ ಇದೊಂದು ಅದ್ಭುತ.
ಬೆರ್ನಿನಿಯಿಂದಲೇ ರೂಪಿಸಲ್ಪಟ್ಟ ಮತ್ತೊಂದು ಆಕರ್ಷಕ ಕಾರಂಜಿ ʻಫೊಂಟೆನಾ ಡೈ ಕ್ವಾಟ್ರೊ ಫಿಯೂಮಿʼ. 30ಮೀ ಎತ್ತರದ ಈಜಿಪ್ಟ್ ಮಾದರಿಯ ಕೇಂದ್ರ ಶಿಲಾಸ್ಥಂಬದ ಮೇಲೆ ಕುಳಿತಿರುವ ಪಾರಿವಾಳ, ಅದರ ಬಾಯಲ್ಲಿ ಆಲೀವ್ ಗಿಡದ ಕೊಂಬೆಯಿದೆ. ಸ್ಥಂಬಕ್ಕೆ ಆಸರೆಯಾಗಿ ಬುಡದಲ್ಲಿ ನಾಲ್ಕು ಪೌರಾಣಿಕ ದೇವತೆಗಳ ಶಿಲ್ಪಗಳಿವೆ. ಅಲ್ಲಿ ಹರಿಯುವ ನೀರು ಪ್ರಾತಿನಿಧಿಕವಾಗಿ ಜಗತ್ತಿನ ನಾಲ್ಕು ಪ್ರಮುಖ ನದಿಗಳಾದ ಆಫ್ರಿಕಾದ ನೈಲ್, ಯೂರೋಪಿನ ಡನುಬೆ, ಏಷ್ಯಾದ ಗಂಗಾ, ಅಮೆರಿಕದ ರಿಯೊ ಡೆ ಲಾ ಪ್ಲಾಟ ಎಂದು ಹೇಳಲಾಗುತ್ತದೆ. ಹಾಗಾಗಿ ಇದು ನಾಲ್ಕು ನದಿಗಳ ಕಾರಂಜಿ ಎಂದೇ ಪ್ರಸಿದ್ಧವಾಗಿದೆ.
ರೋಮ್ ನಗರದಲ್ಲಿರುವ ಮತ್ತೊಂದು ಆಕರ್ಷಣೆ ಟರ್ಟಲ್ ಫೌಂಟನ್. ಇದು 1581 - 1588ರ ಅವಧಿಯಲ್ಲಿ ಕಲಾವಿದ ಜಿಯಾಕೊಮೊ ಡೆಲ್ಲಾ ಪೋರ್ಟ, ಪಾಲಿಕ್ರೋಮ್ ಮಾರ್ಬಲ್ನಲ್ಲಿ ಕುಸುರಿಮಾಡಿ ರೂಪಿಸಲಾಗಿದೆ. ಮಕ್ಕಳು ಡಾಲ್ಫಿನ್, ಆಮೆಗಳ ಜತೆಯಲ್ಲಿರುವಂತೆ ಕಲ್ಪಿಸಿ ಕಂಚಿನ ಆಕೃತಿಗಳು ಇಲ್ಲಿವೆ.

ನೆಪ್ಚ್ಯೂನ್ ದೇವತೆಯನ್ನು ವಿವಿಧ ಆಯಾಮಗಳಲ್ಲಿ ತೋರಿಸಿರುವ ಅನೇಕ ಕಾರಂಜಿಗಳಲ್ಲಿ ಫೊಂಟೆನಾ ಡೆಲ್ ನೆಟ್ಟುನೊ ಸಹ ಒಂದು. ಇದರಲ್ಲಿ ದೇವತೆಯು ಆಕ್ಟೊಪಸ್ ನೊಂದಿಗೆ ಸೆಣಸುತ್ತಿರುವಂತೆ ತೋರುವ ಕೇಂದ್ರದ ಪ್ರತಿಮೆಯನ್ನು ರೂಪಿಸಿದವನು ಕಲಾವಿದ ಆಂಟೋನಿಯೊ ಡೆಲ್ಲಾ ಬಿಟ್ಟ. ಪೌರಾಣಿಕ ಹಿನ್ನೆಲೆಯ ಇತರ ಪ್ರತಿಮೆಗಳನ್ನು ರೂಪಿಸಿದವನು ಗ್ರೆಗೋರಿಯೊ ಝಪ್ಪಾಲ. ನಾಲ್ಕು ನದಿಗಳ ಕಾರಂಜಿಯ ಒಂದು ಪಕ್ಕದಲ್ಲಿ ರೂಪಿಸಲ್ಪಟ್ಟಿರುವ ಇದನ್ನು ಸರಿದೂಗಿಸುವಂತೆ ಅಭಿಮುಖವಾಗಿ ಇನ್ನೊಂದು ಬದಿಯಲ್ಲಿ ಮೂರ್ ಫೌಂಟನ್ ಎಂಬ ಮತ್ತೊಂದು ಕಾರಂಜಿಯಿದೆ.
ನಾವು ವೀಕ್ಷಿಸಿದ ಅನೇಕ ಕಾರಂಜಿಗಳಲ್ಲಿ, ಇವು ರೋಮನ್ ಪೌರಾಣಿಕ ಪ್ರತಿಮೆಗಳನ್ನು ಪ್ರಧಾನವಾಗಿ ಬಳಸಿಕೊಂಡಿರುವ ಕೆಲವು ಮಾತ್ರ. ಇವುಗಳಲ್ಲಿ ಮಧ್ಯ ಯುಗದ ಇಟಲಿಯ ಸಾಂಪ್ರದಾಯಿಕ ಶೈಲಿಯನ್ನು ಕಾಣಬಹುದು. ಇವಲ್ಲದೆ ಸರಳವೂ, ಆಧುನಿಕ ಪರಿಕಲ್ಪನೆಯನ್ನು ಒಳಗೊಂಡ, ರೋಮ್ ಪರಂಪರೆಯ ಚಹರೆಯಿಂದ ಮುಕ್ತವಾದ ಅನೇಕ ಕಾರಂಜಿಗಳೂ ಇಲ್ಲಿ ನೋಡಲು ಸಿಗುತ್ತವೆ.
ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ನೋಡಲಾಗದ ನಾವು, ಇನ್ನೊಮ್ಮೆ ರೋಮ್ ನಗರ ವೀಕ್ಷಣೆಗೆ ಮರಳುವ ಆಶಯದಿಂದ ಒಗೆದ ನಾಣ್ಯವಿನ್ನೂ ಫಲನೀಡಿಲ್ಲ. ಬಹುಶಃ, ನನ್ನ ಸೊಸೆಯೂ ಸೇರಿದಂತೆ ಅಲ್ಲಿ ಕಂಡ ಎಲ್ಲರೂ ಎಸೆದಿದ್ದು ಡಾಲರ್ ಅಥವಾ ಯೂರೊ ನಾಣ್ಯ. ನಾನು ಎಸೆದಿದ್ದು ಭಾರತೀಯ ಒಂದು ರೂಪಾಯಿ, ನಮ್ಮ ದೇವರ ಮಂಗಳಾರತಿ ತಟ್ಟೆಗೆ ಹಾಕಿದಂತೆ. ಫಲಾಫಲಗಳು ಅವರವರ ಕೊಡುಗೆಗೆ ಅನುಸಾರವೇನೊ?