Monday, December 8, 2025
Monday, December 8, 2025

ಕೆನಡಾದಲ್ಲಿ ಕಂಡಾಪಟ್ಟೆ ಹಿಮಪಾತ ಮಾರಾಯ!

ವಯಸ್ಕರ ದೃಷ್ಟಿಯಲ್ಲಿ ಇದು ಕೇವಲ ಮೋಜಿನ ಕಾಲವಲ್ಲ. ಮನೆ ಮತ್ತು ಸುತ್ತಮುತ್ತಲಿನ ಹಾದಿಗಳಲ್ಲಿನ ಹಿಮವನ್ನು ತೆರವುಗೊಳಿಸುವುದು ದೈನಂದಿನ ಕರ್ತವ್ಯವಾಗುತ್ತದೆ. ಕಾರಿನ ಬಾಗಿಲುಗಳನ್ನು ತೆಗೆಯುವ ಮುನ್ನ ಅದರ ಮೇಲಿನ ಹಿಮವನ್ನು ತೆಗೆಯಬೇಕು. ಮನೆಯ ಮುಂದೆ ಬಿದ್ದ ಹಿಮವನ್ನು ತೆಗೆಯಲು ಸ್ನೋ ಶವಲ್, ಕೆಲವು ಕಡೆ ʻಸ್ನೋ ಬ್ಲೋಯರ್ʼಗಳನ್ನೂ ಹಾರಿಸುವುದು ಸಾಮಾನ್ಯ. ಇದು ಕಷ್ಟವಾದರೂ ಕಾನೂನುಬದ್ಧ ಜವಾಬ್ದಾರಿ ಆಗಿದೆ. ಕಾರಣ, ಯಾರಾದರೂ ಆ ಹಿಮದ ಮೇಲೆ ಜಾರಿ ಬಿದ್ದರೆ ಅದರ ಹೊಣೆ ಮನೆಯವರದ್ದೇ!

  • ಡಾ. ಕೆ. ಬಿ. ಸೂರ್ಯಕುಮಾರ್

ಕೆನಡಾ, ಇದು ಹಿಮದ ನಾಡು ಎಂದೇ ಪ್ರಸಿದ್ಧ. ಇಲ್ಲಿ ಚಳಿಗಾಲ ಅಕ್ಟೋಬರ್ ಅಂತ್ಯದಿಂದಲೇ ಶುರುವಾಗಿ ಮಾರ್ಚ್–ಏಪ್ರಿಲ್ ತನಕ ಮುಂದುವರಿಯುತ್ತದೆ. ಇಲ್ಲಿ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ ಪ್ರಕೃತಿಯು ತನ್ನ ಬಿಳಿ ಚಾದರವನ್ನು ಹಾಸಿ, ಭೂಮಿಯನ್ನು, ಮರಗಳನ್ನು ಮತ್ತು ಮನೆಗಳ ಮೇಲ್ಚಾವಣಿಗಳನ್ನು ಹೊಳೆಯುವ ಹಿಮದಿಂದ ಮುಚ್ಚಿಬಿಡುತ್ತದೆ.

ಇತ್ತೀಚೆಗೆ ಅಲ್ಲಿನ ನಮ್ಮ ಮನೆಯ ಹಿಂದೆ–ಮುಂದೆ ಎಲ್ಲೆಡೆ ಹಿಮ ಬೀಳಲು ಪ್ರಾರಂಭವಾಗಿದೆ. ಕಿಟಕಿಯಿಂದ ಹೊರಗೆ ನೋಡಿದಾಗ ಕಾಣುವ ಆ ಬಿಳಿಯ ಶಾಂತ ದೃಶ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕತ್ತಲೆಯ ರಾತ್ರಿ ಬೀದಿಯ ದೀಪದ ಬೆಳಕಿನಲ್ಲಿ ಬೀಳುವ ಮಂಜಿನ ಕಣಗಳು ವಿಸ್ಮಯದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತವೆ.

snowfall in canada

ಹಿಮ ಬೀಳುವ ಮೊದಲ ದಿನವೇ ನಿಜವಾದ ಚಳಿಗಾಲದ ಪ್ರಾರಂಭವೆಂದು ಹೇಳಬಹುದು. ತಾಪಮಾನ ಹತ್ತಾರು ಡಿಗ್ರಿ ಸೆಲ್ಸಿಯಸ್ ಹಿಮದಡಿ ಇಳಿಯುತ್ತದೆ. ಇಂಥ ಸಮಯದಲ್ಲಿ ಹೊರಗೆ ಹೋಗುವುದು ಒಂದು ಸವಾಲು. ಆದರೆ ಸರಿಯಾದ ಉಡುಪು ತೊಟ್ಟರೆ ಅದು ಒಂದು ಅದ್ಭುತ ಅನುಭವ. ಹಿಮದೊಳಗೆ ಕಾಲಿಡಲು ʻವಿಂಟರ್ ಜಾಕೆಟ್ʼ, ʻಥರ್ಮಲ್ ಉಡುಪುʼ, ʻಕೈಗವಸುʼ ಕಿವಿಗಳಿಗೆ ʻಇಯರ್ ಕವರ್ಸ್ʼ, ಕಾಲಿಗೆ ಹಿಮದೊಳಗೆ ನುಗ್ಗದಂಥ ಬೂಟುಗಳು ಇರುವುದು ಅಗತ್ಯ. ಇಲ್ಲದಿದ್ದರೆ ಆ ಚಳಿ ತಾಳಲಾಗದು.

ಮಕ್ಕಳಿಗೆ ಇದಕ್ಕಿಂತ ಹೆಚ್ಚು ಖುಷಿಯ ಸಮಯವೇ ಇಲ್ಲ. ನಮ್ಮ ಮೊಮ್ಮಗನಿಗೆ ಇದು ಒಂದು ಆಟದ ಮೈದಾನವಾಗಿದೆ. ಹಿಮದೊಳಗೆ ಓಡಾಡುವುದು, ಕೈಯಿಂದ ಹಿಮದ ಚೆಂಡು ಮಾಡಿ ಎಸೆದಾಡುವುದು, ಸ್ನೋಮ್ಯಾನ್ ನಿರ್ಮಿಸುವುದು ಇವೆಲ್ಲವೂ ಅವರಿಗೆ ಸಂಭ್ರಮದಂತಾಗಿರುತ್ತದೆ. ಆದರೆ ವಯಸ್ಕರ ದೃಷ್ಟಿಯಲ್ಲಿ ಇದು ಕೇವಲ ಮೋಜಿನ ಕಾಲವಲ್ಲ. ಮನೆ ಮತ್ತು ಸುತ್ತಮುತ್ತಲಿನ ಹಾದಿಗಳಲ್ಲಿನ ಹಿಮವನ್ನು ತೆರವುಗೊಳಿಸುವುದು ದೈನಂದಿನ ಕರ್ತವ್ಯವಾಗುತ್ತದೆ. ಕಾರಿನ ಬಾಗಿಲುಗಳನ್ನು ತೆಗೆಯುವ ಮುನ್ನ ಅದರ ಮೇಲಿನ ಹಿಮವನ್ನು ತೆಗೆಯಬೇಕು. ಮನೆಯ ಮುಂದೆ ಬಿದ್ದ ಹಿಮವನ್ನು ತೆಗೆಯಲು ಸ್ನೋ ಶವಲ್, ಕೆಲವು ಕಡೆ ʻಸ್ನೋ ಬ್ಲೋಯರ್ʼಗಳನ್ನೂ ಹಾರಿಸುವುದು ಸಾಮಾನ್ಯ. ಇದು ಕಷ್ಟವಾದರೂ ಕಾನೂನುಬದ್ಧ ಜವಾಬ್ದಾರಿ ಆಗಿದೆ. ಕಾರಣ, ಯಾರಾದರೂ ಆ ಹಿಮದ ಮೇಲೆ ಜಾರಿ ಬಿದ್ದರೆ ಅದರ ಹೊಣೆ ಮನೆಯವರದ್ದೇ!

snowfal

ಹಿಮ ಬೀಳುವ ಸಮಯದಲ್ಲಿ ಎಚ್ಚರಿಕೆ ಅಗತ್ಯವಾಗಿರುತ್ತದೆ. ರಸ್ತೆ ಮೇಲೆ ಹಿಮದ ಜಾರುವ (ಸ್ಲಿಪ್ಪರಿ) ಪದರ ಇರಬಹುದು. ವಾಹನ ಚಲಾಯಿಸುವಾಗ ನಿಧಾನವಾಗಿ ಓಡಿಸುವುದು, ʻವಿಂಟರ್ ಟೈರ್ʼ ಬಳಸುವುದು ಮತ್ತು ಲೈಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಾತರಿ ಪಡಿಸಿಕೊಳ್ಳುವುದು ಎಲ್ಲವನ್ನು ಗಮನದಲ್ಲಿಡಬೇಕು. ಪಾದಚಾರಿಗಳು ಹಿಮದ ಹಾದಿಯಲ್ಲಿ ನಡೆಯುವಾಗ ಚಪ್ಪಲಿ ಜಾರದಂತೆ ಜಾಗ್ರತೆ ವಹಿಸಬೇಕು. ಹಿಮದೊಳಗೆ ಆಡುತ್ತಿರುವ ಮಕ್ಕಳನ್ನು ಕಣ್ಣಿನ ಕಾವಲಿನಲ್ಲಿಡಬೇಕು. ಹಿಮದಡಿ ಐಸ್‌ನಂಥ ಕಠಿಣ ಭಾಗಗಳು ಇರಬಹುದು.

ಇನ್ನೂ ಮುಖ್ಯ ವಿಷಯ, ಚಳಿಯಿಂದ ರಕ್ಷಣೆಯ ಜತೆಗೆ ತಾಪಮಾನ ವ್ಯತ್ಯಾಸದಿಂದ ಉಂಟಾಗುವ ಸಮಸ್ಯೆಗಳಿಗೆ ಎಚ್ಚರಿಕೆ. ಬಿಸಿ ಕೋಣೆಯಿಂದ ಹೊರಗೆ ತಂಪಾದ ವಾತಾವರಣಕ್ಕೆ ಏಕಾಏಕಿ ಹೋಗಬಾರದು. ಚಳಿಗಾಲದಲ್ಲಿ ನೀರಿನ ಸೇವನೆ ಕಡಿಮೆ ಆಗುವುದರಿಂದ ಶರೀರದಲ್ಲಿ ನಿರ್ಜಲೀಕರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಸಿ ಚಹಾ ಅಥವಾ ಸೂಪ್ ಸೇವನೆ ಮಾಡುವುದು ಉತ್ತಮ.

children enjoying snowfall in canada

ಕೆನಡಾದಲ್ಲಿ ಹಿಮ ಬೀಳುವ ದಿನಗಳು ನಮ್ಮಂಥ ಹೊಸಬರಿಗೆ ಆಶ್ಚರ್ಯ ಮತ್ತು ಆನಂದದ ಕಾಲ. ಪ್ರಕೃತಿಯ ಬದಲಾವಣೆಯೊಂದಿಗೆ ಮಾನವನ ಜೀವನವೂ ಬದಲಾಗುತ್ತದೆ. ಈ ಹಿಮದ ಋತು ನಮಗೆ ಪ್ರಕೃತಿ ಮಹಿಮೆಯ ಅರಿವು ಕೊಡುತ್ತದೆ, ಅದರೊಂದಿಗೆ ಹೊಂದಿಕೊಳ್ಳುವ ಕಲೆಯನ್ನೂ ಕಲಿಸುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!