Saturday, November 15, 2025
Saturday, November 15, 2025

ಪ್ರೇಮಾ ಬಲು ಸುಖಮಯ ಈ ಪ್ರೇಮಾ!

ʼಕೌಂಡಿನ್ಯನಿಗೆ ಮನಸೋತ ಸೋಮಾರ ದೈವಿಕ ವಿವಾಹ ನಡೆಯಿತು. ಅವರ ವಿವಾಹದಿಂದ ಈ ನಾಡು ಹುಟ್ಟಿತು. ಭಾರತದಿಂದ ಬಂದ ಧರ್ಮ, ಶಿಲ್ಪ, ಸಂಗೀತ, ಪಾಕಶಾಸ್ತ್ರ ಎಲ್ಲವೂ ಇಲ್ಲಿ ಬೇರೂರಿತುʼಮನಸ್ಸು ಕಥೆಯೊಳಗೆ ಇಳಿಯುತ್ತಿತ್ತು. ಕೌಂಡಿನ್ಯ ಸಮುದ್ರದ ನಾದದಲ್ಲಿ ತೇಲುತ್ತಿದ್ದ ನಾವಿಕನಂತೆ ಮನಸ್ಸಿನಲ್ಲಿ ಮೂಡಿದ. ಸೋಮಾ, ಸಮುದ್ರದ ಆಳದಿಂದ ಏರಿ ಬಂದ ನಾಗಕನ್ಯೆಯಂತೆ, ಕಮಲದ ಹೂವಿನ ಮೇಲೆ ನಿಂತ ಚಿತ್ರಣ ಮೂಡಿಬಂತು.

  • ಗಾಯತ್ರಿ ರಾಜ್

ಸೀಮ್‌ರೀಪ್‌ನ ದೇವಾಲಯಗಳ ವೀಕ್ಷಣೆಯ ನಂತರ ನಾವು ದಕ್ಷಿಣಕ್ಕೆ ಪ್ರಯಾಣಿಸಿ ದಾರಿಯ ಮಧ್ಯೆ ಒಂದು ದಿನ ವಿಶ್ರಾಂತಿ ಪಡೆದು ಸಂಜೆ ವೇಳೆಗೆ ಸಿಹನೂಕ್ವಿಲ್ಲೆ ತಲುಪಿದಾಗ, ಆಕಾಶವು ಕಿತ್ತಳೆ ಬಣ್ಣದ ಸಂಜೆಯಲಿ ಕರಗುತ್ತಿತ್ತು.

‘ಇವತ್ತಿನ ಪ್ರಯಾಣದಲ್ಲಿ ನಾವು ಸಮುದ್ರದ ತೀರದಲ್ಲಿರುವ ಪ್ರಸಿದ್ಧ ಶಿಲ್ಪವನ್ನು ನೋಡಲಿದ್ದೇವೆ. ಅದೇ ಪ್ರೇಹ ಥೋಂಗ್ ನೀಯಾಂಗ್ ನೀಕ್ – the statue of Kaundinya and Soma’ ಎಂದರು ಗೈಡ್. ಕೌಂಡಿನ್ಯ... ಸೋಮಾ... ಆ ಹೆಸರುಗಳು ಕೇಳುತ್ತಿದ್ದಂತೆಯೇ ಹೃದಯದೊಳಗೆ ಯಾವುದೋ ಪನ್ನೀರಿನ ಸಿಂಚನವಾದಂತೆನಿಸಿತು...

ನೀವು ಎಂದಾದರೂ ಸಾಂಪ್ರದಾಯಿಕ ಖ್ಮೇರ್ ಮದುವೆಗೆ ಹಾಜರಾಗಿದ್ದರೆ ಅಥವಾ ಅದರ ಭಾಗವಾಗಿದ್ದರೆ, ವರನು ವಧುವಿನ ಹಿಂದೆ, ಅವಳ ವಸ್ತ್ರದ ಒಂದು ಭಾಗವನ್ನು ಹಿಡಿದು ನಡೆಯುವುದನ್ನು ಗಮನಿಸಿರಬಹುದು. ಈ ಸಂಪ್ರದಾಯ ಈ ಪ್ರತಿಮೆಗಳಿಂದಲೇ ಹುಟ್ಟಿದ್ದಂತೆ. ಕಿಟಕಿಯ ಬಳಿ ಕುಳಿತುಕೊಂಡೆ. ಬಸ್ ರಸ್ತೆ ಬೀದಿಗಳಿಂದ ಹೊರಟು ಹಸಿರು ಪ್ರದೇಶಗಳ ನಡುವೆ ನುಗ್ಗಿತು. ದಾರಿಯ ಬದಿಯಲ್ಲಿ ಮಣ್ಣಿನ ಬಣ್ಣದ ಮನೆಗಳು, ಬಾಳೆ ಮರಗಳು, ಅಕ್ಕಿಹೊಲಗಳ ಮಧ್ಯೆ ಆಡುವ ಮಕ್ಕಳು – ಪ್ರತಿಯೊಂದು ದೃಶ್ಯವೂ ಜೀವಂತ ಚಿತ್ರಪಟದಂತಿತ್ತು. ಎಲ್ಲವನ್ನೂ ಸೆರೆ ಹಿಡಿಯುತ್ತಾ, ಅವುಗಳನ್ನು ಮನದ ಕ್ಯಾಮೆರಾದಲ್ಲೂ ಲಗತ್ತಿಸುತ್ತಾ ನಡೆದೆ.

Untitled design (1)

ನಾಲ್ಕೈದು ವರ್ಷಗಳ ಹಿಂದೆ ಓದಿದ ಇತಿಹಾಸದ ಪುಸ್ತಕಗಳ ಸಾಲುಗಳು ದಾರಿಗುಂಟ ನೆನಪಾಗುತ್ತಿದ್ದವು. ʼಕೌಂಡಿನ್ಯ, an Indian Brahmin who crossed the seas to reach the land of Funan and married the Naga princess Somaʼ ಅದು ಒಂದು ಪ್ರಚಲಿತ ಪೌರಾಣಿಕ ಕಥೆಯೋ, ಇತಿಹಾಸದ ಪುಟವೋ? ಇಂದು ಅದೇ ಕಥೆಯ ಶಿಲೆಯ ರೂಪವನ್ನು ನೋಡಲಿದ್ದೇನೆ ಎನ್ನುವುದು ನೆನಪಿಸಿಕೊಂಡೇ ಪುಳಕಗೊಂಡಿದ್ದೆ. ಅರ್ಧಗಂಟೆ ಪ್ರಯಾಣದ ನಂತರ ಬಸ್ ನಿಧಾನವಾಗಿ ಹಸಿರು ಪರ್ವತಗಳ ನಡುವೆ ನಿಂತಿತು. ಆಕಾಶದಲ್ಲಿ ಬೂದು ಮೋಡಗಳು, ಸಮುದ್ರದ ತಂಪು ಗಾಳಿ ಮುಖವನ್ನು ತಟ್ಟುತ್ತಿದ್ದಂತೆಯೇ ಉಪ್ಪಿನ ವಾಸನೆ. ಸಮುದ್ರದ ಅಂಚಿನಲ್ಲಿ, ಅಲೆಗಳ ಮಧ್ಯೆ ಹೊಳೆಯುತ್ತಿದ್ದ ಶ್ವೇತ ಪೀಠದ ಮೇಲೆ ನಿಂತ ಎರಡು ಬೃಹತ್ ಆಕಾರಗಳು ಬಸ್‌ನಿಂದ ಇಳಿಯುತ್ತಿದ್ದಂತೆಯೇ ಕಣ್ಣು ತುಂಬಿಕೊಂಡಿತು. ಬಲು ಎತ್ತರದ ಶಿಲಾ ರೂಪ, ಕತ್ತಿ ಹಿಡಿದ ಕೈಯಲ್ಲಿ ಆಕರ್ಷಕ ಭಂಗಿಯಲ್ಲಿ ನಿಂತ ಒಬ್ಬ ರಾಜಪುತ್ರ. ಕೈಯಲ್ಲಿ ಹೂವಿನ ತಟ್ಟೆ ಹಿಡಿದು, ಕಣ್ಣಲ್ಲಿ ಮೌನದ ಕಾವ್ಯ ಬರೆಯುತ್ತಾ ನಾಚಿ ಅವನಿಗೆ ಬೆನ್ನು ಮಾಡಿ ನಿಂತ ಒಬ್ಬ ನಾಗಕುಮಾರಿ.

ಪ್ರತಿಮೆಯ ವಿವರಣೆ

ಈ ಕಂಚಿನ ದೈತ್ಯ ಶಿಲ್ಪವು ಸುಮಾರು 27 ಮೀಟರ್ ಎತ್ತರದಲ್ಲಿದೆ. ಪ್ರೇಹ್ ಥಾಂಗ್ – ಕೌಂಡಿನ್ಯನ ರೂಪದಲ್ಲಿ ಕೈಯಲ್ಲಿ ಕತ್ತಿಯನ್ನು ಹಿಡಿದು ನಿಂತಿದ್ದಾನೆ, ಅವನ ಮುಂದೆ ನೀಂಗ್ ನೀಕ್ – ನಾಗರಾಣಿಯ ಶರೀರವು ಕಂಚಿನ ಅಲೆಗಳಂತೆ ಹೊಳೆಯುತ್ತಿದೆ. ಕಂಚಿನ ಆ ಮೂರ್ತಿಗಳು ಸಮುದ್ರದತ್ತ ಮುಖಮಾಡಿ ನಿಂತಿದ್ದವು. ಅದಾಗಲೇ ನಮ್ಮ ಗೈಡ್ ಚಮ್ಮೋನಿ ವಿವರಿಸಲು ಆರಂಭಿಸಿದ್ದರು. ʼThis is Preah Thong and Neang Neak, symbol of the birth of Cambodia. He the Indian prince Kaundinya. She Soma, the Naga princess. Their union gave birth to the first kingdom, Funanʼ

ಆ ಮಾತುಗಳು ಕೇಳುತ್ತಿದ್ದಂತೆಯೇ ನನ್ನೊಳಗೆ ಅನೇಕ ಯುಗಗಳು ಧುತ್ತೆಂದು ಪಾದಸ್ಪರ್ಶವಾದಂಥ ಕಂಪನ. ನಾನು ಆ ಶಿಲ್ಪದ ಹತ್ತಿರ ಹೋದೆ. ಅವುಗಳ ಪಾದದ ಬಳಿ ಬಿಳಿಯ ಪೀಠದ ಮೇಲೆ ಚಿಕ್ಕ ಚಿಕ್ಕ ಹೂವಿನ ಹಾರ, ಧೂಪದ ಹೊಗೆ. ಕೆಲ ಸ್ಥಳೀಯರು ತಲೆ ತಗ್ಗಿಸಿ ಪ್ರಾರ್ಥನೆ ಮಾಡುತ್ತಿದ್ದದು ಕಾಣಿಸಿತು. ಅವರ ಮುಖದಲ್ಲಿ ಅದು ಕೇವಲ ಸ್ಮಾರಕವಲ್ಲ, ಮಾತೃಭೂಮಿಯ ಮೂಲದ ದೇವತೆಗಳ ಪಾದ ಸ್ಪರ್ಶ ಮಾಡಿದ ಧನ್ಯತೆ. ನಾನು ಶಿಲೆಯ ಎದುರು ನಿಂತೆ. ಗಾಳಿಯೊಳಗೆ ಯಾವುದೋ ದೈವಿಕ ಮೌನವಿದ್ದರೂ ಏನೋ ಗುನುಗುವಿಕೆ. ಒಂದು ಕಥೆಯ/ ಚರಿತ್ರೆಯ ಮಣಮಣಿಕೆ. ಚಮ್ಮೋನಿ ನಿಧಾನವಾಗಿ ಕಥೆ ಹೇಳತೊಡಗಿದಳು. ʼಕೌಂಡಿನ್ಯ ಸಮುದ್ರಯಾನಿ. ಅವನು ಭಾರತದಿಂದ ಹೊರಟಾಗ ದೇವತೆಗಳಿಂದ ಒಂದು ಪವಿತ್ರ ಬಾಣ ಪಡೆದ್ದಿದ್ದ. ಬಿರುಗಾಳಿಯಲ್ಲಿ ಸಿಲುಕಿ, ಮುಳುಗಿ, ತೇಲುತ್ತ, ಅವನು ಈ ನಾಡಿಗೆ ಬಂದ. ಇಲ್ಲಿನ ನಾಗ ಜನಾಂಗವು ಸಮುದ್ರದ ತೀರದಲ್ಲಿ ವಾಸಿಸುತ್ತಿದ್ದರು. ಸೋಮಾ ಅವರ ರಾಜಕುಮಾರಿ. ತನ್ನ ಜನಾಂಗದ ಜವಾಬ್ದಾರಿಯನ್ನು ಹೊತ್ತವಳು. ಕೌಂಡಿನ್ಯನ ಶೌರ್ಯಕ್ಕೆ ಶರಣಾದ ಆ ಕ್ಷಣದಿಂದಲೇ ಕೌಂಡಿನ್ಯನಿಗೆ ಮನಸೋತ ಸೋಮಾರ ದೈವಿಕ ವಿವಾಹ ನಡೆಯಿತು. ಅವರ ವಿವಾಹದಿಂದ ಈ ನಾಡು ಹುಟ್ಟಿತು. ಭಾರತದಿಂದ ಬಂದ ಧರ್ಮ, ಶಿಲ್ಪ, ಸಂಗೀತ, ಪಾಕಶಾಸ್ತ್ರ ಎಲ್ಲವೂ ಇಲ್ಲಿ ಬೇರೂರಿತುʼಮನಸ್ಸು ಕಥೆಯೊಳಗೆ ಇಳಿಯುತ್ತಿತ್ತು. ಕೌಂಡಿನ್ಯ ಸಮುದ್ರದ ನಾದದಲ್ಲಿ ತೇಲುತ್ತಿದ್ದ ನಾವಿಕನಂತೆ ಮನಸ್ಸಿನಲ್ಲಿ ಮೂಡಿದ. ಸೋಮಾ, ಸಮುದ್ರದ ಆಳದಿಂದ ಏರಿ ಬಂದ ನಾಗಕನ್ಯೆಯಂತೆ, ಕಮಲದ ಹೂವಿನ ಮೇಲೆ ನಿಂತ ಚಿತ್ರಣ ಮೂಡಿಬಂತು.

Untitled design (2)

ಆ ಶಿಲೆಯ ಕಡೆ ಮತ್ತೊಮ್ಮೆ ನೋಡಿದೆ. ಹೂವಿನ ತಟ್ಟೆ ಹಿಡಿದು ನಿಂತ ಸೋಮಾ ನಾವಿಕನಿಗೆ ಅಪ್ಪಣೆ ನೀಡಿದಂತೆ, ಒಂದು ನಾಡು ಮತ್ತೊಂದು ನಾಡಿಗೆ ಸ್ವಾಗತ ಹೇಳುತ್ತಿರುವಂತೆಯೂ... ಅವನು ಅದನ್ನ ಸ್ವೀಕರಿಸಿ ಅವಳ ಹಿಂದೆ ನಡೆಯುತ್ತಿರುವಂತೆಯೂ ಕಲ್ಪಿಸುತ್ತಾ ಆ ಪ್ರತಿಮೆಗಳನ್ನೇ ಧೇನಿಸಿದೆ. ಅವರಿಬ್ಬರ ನಡುವಿನ ಪರಿಣಿಯದಲ್ಲಿ ಎರಡು ನಾಡುಗಳ ನಂಟು ಬೆಸೆಯುವ ಪ್ರಮಾಣದ ಸಂಕೇತದಂತೆನಿಸಿತು. ʼಪ್ರೀತಿಯಿಂದ ದೇಶಗಳೇ ನಾಶವಾಗಿದ್ದು ಕೇಳಿದ್ದೆ. ಆದರೆ ಹೀಗೇ ಒಂದು ಪ್ರೇಮ ಕಥೆಯಿಂದ ಒಂದು ರಾಷ್ಟ್ರದ ಉಗಮದ ಕಥೆ ಕೇಳಿದ್ದು ಇದೇ ಮೊದಲ ಬಾರಿ.... ಒಂದು ಪ್ರೇಮ ಒಂದು ಸಂಸ್ಕೃತಿಯ ಉಗಮಕ್ಕೆ ಮೂಲವಾಗಬಹುದೇ?ʼ ಎಂದು ಅಚ್ಚರಿಗೊಳ್ಳುತ್ತಾ ಶಿಲೆಯ ಹತ್ತಿರವಿದ್ದ ಫಲಕದಲ್ಲಿ ಓದಿದೆ:

ʼThis statue symbolizes the origin of the Khmer people – the union of land and water, heaven and earth.ʼ ಒಬ್ಬ ಸ್ಥಳೀಯ ವೃದ್ಧ ಬಂದು ನಗುತ್ತಾ ಹೇಳಿದರು, ʼPreah Thong( ಕೌಂಡಿನ್ಯ)and Neang Neak(ಸೋಮಾ) are not gods for us, they are parents. Without them, we wouldn’t existʼ ಅವರ ಮಾತುಗಳಲ್ಲಿ ಭಕ್ತಿ ಮಾತ್ರವಲ್ಲ, ಸಂವೇದನೆಯಿತ್ತು. ಅವರು ಶಿಲೆಯ ಪಾದದ ಬಳಿ ಹೂವಿನ ಹಾರವಿಟ್ಟು ತಲೆ ತಗ್ಗಿಸಿದರು. ನನ್ನೊಳಗೆ ನಿಶ್ಶಬ್ದ ಚಿಂತನೆ ಮಥಿಸುತ್ತಿತ್ತು. ನಾವು ದೇವರನ್ನು ಆರಾಧಿಸುತ್ತೇವೆ, ಆದರೆ ಇಲ್ಲಿಯ ಜನ ತಮ್ಮ ಇತಿಹಾಸವನ್ನೇ ಆರಾಧಿಸುತ್ತಾರೆ. ಕೌಂಡಿನ್ಯ ಮತ್ತು ಸೋಮಾ ಎಂಬ ಇತಿಹಾಸದ ದೇವತೆಗಳ ಆರಾಧನೆ. ಒಬ್ಬ ನಾವಿಕನ ಕನಸು, ಒಬ್ಬ ನಾಗಕುಮಾರಿಯ ಪ್ರೇಮದ ಜತೆಗೆ ಬೆರೆತ ಎರಡು ನಾಡುಗಳ ಹೃದಯಧಾರಾಧನೆ... ಎಲ್ಲವೂ ಈ ಶಿಲೆಯೊಳಗೆ ಶಾಶ್ವತವಾಗಿವೆ. ಪ್ರೇಮಕ್ಕೆ ಗಡಿ ಇಲ್ಲ! ಸಮುದ್ರದ ಮೇಲಮೈ ಗಾಳಿ ಮೆಲ್ಲಗೆ ತಂಪಾಗತೊಡಗಿತು. ಮತ್ತೊಮ್ಮೆ ಬಸ್‌ನ ಕಿಟಕಿಯ ಬಳಿ ಕುಳಿತುಕೊಂಡೆ. ಹಿಂದೆ ಬಿಳಿಯ ಪೀಠದ ಮೇಲೆ ನಿಂತ ಶಿಲೆ ನಿಧಾನವಾಗಿ ದೂರ ಸರಿಯುತ್ತಿತ್ತು. ಮನಸ್ಸಲ್ಲಿ ಮೂಡುತ್ತಿದ್ದ ಆಲೋಚನೆಗೆ ಶುರುವಾದ ಸಣ್ಣ ಮಳೆ ಮುನ್ನುಡಿ ಬರೆಯುತ್ತಿತ್ತು. ನೀವು ಕಾಂಬೋಡಿಯ ಪ್ರವಾಸಕ್ಕೆ ಹೋದರೆ, ಸೀಮ್‌ರೀಪ್‌ನ ಅಂಕೋರ್ ವಾಟ್ ದೇವಾಲಯಗಳು ಮುಗಿದ ಬಳಿಕ ಈ ತೀರದ ಶಿಲೆಗೆ ತಪ್ಪದೇ ಹೋಗಿ. ಅವು ಕೇವಲ ಕಂಚಿನ ಮೂರ್ತಿಗಳಲ್ಲ. ಕಾಂಬೋಡಿಯ ಪ್ರವಾಸದಲ್ಲಿ ನೀವು ಈ ಶಿಲೆಯನ್ನು ನೋಡಲು ಸೇರಿಸಿಕೊಳ್ಳದಿದ್ದರೆ, ಆ ನಾಡಿನ ಆತ್ಮವನ್ನೇ ತಾಕದೇ ಹೋಗುತ್ತೀರಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!