Come On ರಾಕೀ ಭಾಯ್!
ಎಲ್ಲಿಯಾದರೂ ನಾವು ದಾರಿ ತಪ್ಪಿರಬಹುದೇ? ಕಾರುಗಳ ಓಡಾಟವೂ ಕಡಿಮೆಯಾಗಹತ್ತಿತ್ತು. ನನಗೆ ಭಯವಾಗತೊಡಗಿತು. ಜೀಪನ್ನು ನಡೆಸುತ್ತಿದ್ದ ಮಗ ‘ನಾವು ದಾರಿ ತಪ್ಪಿರಬಹುದೇʼ ಎಂದು ಬೇರೆ ಹೇಳಿ ನನ್ನ ಹೆದರಿಕೆಯನ್ನು ಹೆಚ್ಚಿಸಿದ. ಅದು ಕೀಟಲೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಇನ್ನು ಪರಿಚಯವಿಲ್ಲದ ಜಾಗಕ್ಕೆ ಬರಬಾರದೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡೆ.
- ಗಿರಿಜಾ ಶಾಸ್ತಿ
“Guru is like a GPS in an unknown terrain” ಎಂದು ಹೇಳುತ್ತಾರೆ. ನನಗೆ ಇದರ ಗಾಢವಾದ ಅನುಭವಾದದ್ದು, ನಾವು ರಾಕೀ ಪರ್ವತ ರಾಷ್ಟ್ರೀಯ ಉದ್ಯಾನವನ್ನು ಹೊಕ್ಕಾಗ. ಅಮೆರಿಕದ ಡೆನ್ವರ್ ನಗರಕ್ಕೆ ಸು. 200 ಮೈಲಿ ದೂರವಿರುವ ರಾಕೀ ಪರ್ವತ ಸುಮಾರು 12000 ಅಡಿಗಳಷ್ಟು ಎತ್ತರದ ಮುನ್ನೂರು ಮೈಲಿಗಳ ವ್ಯಾಪ್ತಿಯ ಮಂಜಿನ ಪರ್ವತಗಳ ಸಾಲು. ಒಂದು ಬೆಟ್ಟ ಮುಗಿದರೆ ಇನ್ನೊಂದು, ಮತ್ತೊಂದು ಧುತ್ತೆಂದು ಎದುರಾಗುವ ಪರ್ವತ ಪಂಕ್ತಿ! ಒಂದು ಕಡೆ ಪೈನ್ ಮರಗಳ ಕಾಡು ಗುಡ್ಡ ಸರಿಯುತ್ತಿದ್ದರೆ, ಇನ್ನೊಂದು ಕಡೆ ಘನವಾಗಿ ಹೊಳೆಯುವ ದೈತ್ಯ ಬೆಳ್ಳಿ ಬೆಟ್ಟ ಎದುರಾಗುತ್ತಿತ್ತು. ಕಠೋರ ಪರ್ವತದ ಮಂಜು ಹತ್ತಿಗಿಂತ ಮೃದು! ಕೈಯೊಳಗೆ ಹಿಡಿದರೆ ಕರಗಿ ನೀರಾಗಿ ಬಿಡುವ ಆರ್ದ್ರತೆ.
ರಾಕೀ ಪರ್ವತ ಶ್ರೇಣಿಯ ನಡುವೆ ಚಲಿಸುವುದೆಂದರೆ ಮಂಜು ಬೆಟ್ಟಗಳು ಹತ್ತಿರ ಬಂದು ದೂರ ಸರಿಯುವ, ದೂರಾಗಿ ಹತ್ತಿರ ಸುಳಿಯುವ ಕಣ್ಣಾಮುಚ್ಚಾಲೆಯ ಆಟ. ಒಂದು ಎತ್ತರಕ್ಕೆ ಹೋದ ಮೇಲೆ ನೆಟ್‌ವರ್ಕ್ ಬಂದ್ ಆಯಿತು. ಇನ್ನು ಜಿ.ಪಿ.ಎಸ್. ಎಲ್ಲಿ? ಆದರೂ ಅಲ್ಲಲ್ಲಿ ಮಾರ್ಗ ಸೂಚಿ, ನಾಮ ಫಲಕಗಳು ಇದ್ದವು. ರಾಕೀ ಪರ್ವತ ಶ್ರೇಣಿಯ ಭೂಪಟವನ್ನೂ ವ್ಯವಸ್ಥಾಪಕರು ಒದಗಿಸಿದ್ದರು. ಅತಿ ಎತ್ತರದ ಆಲ್ಪೈನ್ ಶಿಖರ ತಲುಪಿ, ಕಾಫಿ ಕುಡಿದು, ದೇಹ ಬಾಧೆಗಳನ್ನು ತೀರಿಸಿಕೊಂಡಾಯಿತು. ಇನ್ನು ಮರಳಲು ಬೆಟ್ಟ ಇಳಿಯಬೇಕು! ಸಂಜೆಯೂ ಬೆಟ್ಟದ ಮೇಲೆ ಇಳಿಯುತ್ತಿದೆ. ಒಮ್ಮೆ ಮಳೆ, ಇನ್ನೊಮ್ಮೆ ಆಲಿಕಲ್ಲು ಮತ್ತೊಮ್ಮೆ ಬಿಸಿಲು, ಮೋಡ.. ಕ್ಷಣ ಚಿತ್ತ ಕ್ಷಣ ಪಿತ್ತ ಈ ಮಂಜುನಾಥನಿಗೆ!

ಅದ್ಭುತ, ಭೂಮಾನುಭೂತಿ, ಶಿವಾನುಭವ ಎಂದೆಲ್ಲಾ ಮುಂಬಯಿಯಲ್ಲಿರುವ ಮಗನಿಗೆ ಮನೆಗೆ ಬಂದ ಮೇಲೆ ಮೆಸೇಜ್ ಮಾಡಿದೆ. ಆದರೆ ಪ್ರವಾಸದ ಏರಿಳಿತದ ಹೊತ್ತಿನಲ್ಲಿ, ಏನಾದರೂ ಜೀಪು ಕೆಟ್ಟು ಹೋದರೆ? ಅದನ್ನು ಚಲಾಯಿಸುತ್ತಿರುವ ಮಗನಿಗೆ ಏನಾದರೂ ಆಗಿಬಿಟ್ಟರೆ, ಪ್ರಪಾತದ ಅಂಚಿನಲ್ಲಿ ಸರಿಯುವಾಗ ಆಯ ತಪ್ಪಿದರೆ? ಎನ್ನುವ ಭಯವೂ ಒಳಗೇ ಅವ್ಯಕ್ತವಾಗಿ ಅವಿತು ಕೂತು ಹೆದರಿಸುತ್ತಿತ್ತು. ವಾಹನ ಚಲಾಯಿಸಲು ಸ್ವಲ್ಪವೂ ಆಯಾಸವಾಗದ ಹಾಗೆ ಅದ್ಭುತ ರಸ್ತೆಗಳು! ಮತ್ತು ಅಷ್ಟೇ ಶಿಸ್ತಿನಿಂದ ಸಂಚಾರ ನಿಯಮಗಳನ್ನು ಪಾಲಿಸುವ ಚಾಲಕರು. ನಾವು ಕಲಿಯಬೇಕು. ತುಂಬಾ ಕಲಿಯಬೇಕು. ಇಳಿಯುತ್ತಾ ಇಳಿಯುತ್ತಾ ಮಂಜಿನ ಬೆಟ್ಟಗಳು ದೂರವಾಗತೊಡಗಿದವು. ಶಿವಾನುಭವವೊಂದು ಮಂಜಿನಂತೆ ಮೆಲ್ಲಗೆ ಕರಗತೊಡಗಿತು. ಮುಖ್ಯ ರಸ್ತೆ, ವಾಹನಗಳು ಕಾಣಿಸಿಕೊಂಡು ಒಂದು ರೀತಿಯಲ್ಲಿ ನಿರಾಳವಾಯಿತು. ಆದರೆ ಗಾಡಿ ಒಂದು ತಿರುವಿನಲ್ಲಿ ತಿರುಗಿದಾಗ ಮತ್ತೆ ಬೆಟ್ಟಗಳು, ಪೈನ್ ಮರಗಳ ಕಾಡು ಹತ್ತಿರ ಹತ್ತಿರ ಬರತೊಡಗಿದವು. ಬೆಟ್ಟಗಳ ಸಾಲನ್ನು ನಾವು ಸುತ್ತುತ್ತಿದ್ದೇವೆಯೋ? ಅಥವಾ ಬೆಟ್ಟಗಳೇ ನಮ್ಮನ್ನು ಗಿರಗಿಟ್ಟಲೆ ಆಡಿಸುತ್ತಿವೆಯೋ ಎನ್ನುವಂತೆ!
ಮತ್ತೆ ಮತ್ತೆ ಅನಿಸಿತು. ಮಂಜುನಾಥ ಹತ್ತಿರ ಬರತೊಡಗಿದ. ಆದರೆ ಈಗ ಮಂಜುನಾಥ ದೈವಿಕ ಎನಿಸಲಿಲ್ಲ ಭಯಂಕರ ಮೋಡಗಳು ನಮ್ಮ ಮುಖದ ಮೇಲೆ ಹಾದು ಹೋಗುತ್ತಿದ್ದವು. ಗಾಡಿಯನ್ನು ಆವರಿಸತೊಡಗಿದವು. ಮಂಜು ಮತ್ತೆ ಕೈಗೆ ಹತ್ತಿಗಿಂತ ಮೃದುವಾಗಿ ಹತ್ತಿತು. ಆದರೆ ಅದು ಈಗ ರೋಮಾಂಚನಗೊಳಿಸಲಿಲ್ಲ. ಊರು ಹತ್ತಿರವಾಗಿ ಕಾಡು ಬೆಟ್ಟ ದೂರಾಯಿತು ಎಂದು ನಿರಾಳವಾದ ನಮಗೆ ಅವು ಮತ್ತೆ ಮತ್ತೆ ಎದುರಾಗುತ್ತಿದ್ದವು ಏಕೆ? ಎಲ್ಲಿಯಾದರೂ ನಾವು ದಾರಿ ತಪ್ಪಿರಬಹುದೇ? ಕಾರುಗಳ ಓಡಾಟವೂ ಕಡಿಮೆಯಾಗಹತ್ತಿತ್ತು. ನನಗೆ ಭಯವಾಗತೊಡಗಿತು. ಜೀಪನ್ನು ನಡೆಸುತ್ತಿದ್ದ ಮಗ ‘ನಾವು ದಾರಿ ತಪ್ಪಿರಬಹುದೇʼ ಎಂದು ಬೇರೆ ಹೇಳಿ ನನ್ನ ಹೆದರಿಕೆಯನ್ನು ಹೆಚ್ಚಿಸಿದ. ಅದು ಕೀಟಲೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಇನ್ನು ಪರಿಚಯವಿಲ್ಲದ ಜಾಗಕ್ಕೆ ಬರಬಾರದೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡೆ. ಸುತ್ತಿ ಸುತ್ತಿ ಸುಳಿದು ಆವರಿಸುತ್ತಿದ್ದ ಮಂಜಿನ ಮಾಲೆ ಮುಗಿಯುತ್ತಲೇ ಇಲ್ಲ! ಒಂದು ಗಂಟೆ ಹಾಗೆ “ಬೆಟ್ಟ ಸಾಲು ಮಳೆಗಳ” ಮಧ್ಯೆ ತೊಯ್ದು, ಥರಥರ ನಡುಗುವಾಗ ಮುಖ್ಯ ದಾರಿಗೆ “ಎಕ್ಸಿಟ್” ಆಯಿತು ಗಾಡಿ. ಅದು ಹತ್ತಿರದ ದಾರಿಯೆಂದು ಆಮೇಲೆ ಗೊತ್ತಾಯಿತು. ಬದುಕಿದೆಯಾ ಬಡ ಜೀವವೇ ಎಂದು ಕೊಂಡೆ. ಮಗ, ಹೇಗೆ? ಎಂದು ಸೊಟ್ಟಗೆ ನಕ್ಕ. “ಹಿಡಿದ ಮಂಜು ಬೀಳುತ್ತಿತ್ತು” ಭಯ ಕರಗುತ್ತಿತ್ತು.

ಯಾವ ಜಿ.ಪಿ.ಎಸ್ ಇಲ್ಲದೇ ಸಾಹಸದಿಂದ ಧುಮುಕುವ ಮ್ಯಾನ್ vs ವೈಲ್ಡ್ ಖ್ಯಾತಿಯ ಬೇರ್‌ಗ್ರಿಲ್ಸ್ ನಂಥ ಧೀರರಿಗೆ ಮಾತ್ರ ಇಂಥದ್ದು ಸಾಧ್ಯ. ದುರ್ಗಮ್ಯದೆಡೆಗೆ ಚಲಿಸಬೇಕೆಂದರೆ, ನೆಟ್ ವರ್ಕ್ ನ ಯಾವುದೇ ಹಂಗಿಲ್ಲದೇ, ಹೆಲಿಕಾಪ್ಟರ್ ನಿಂದ ಪೆಸಿಫಿಕ್, ಅಟ್ಲಾಂಟಿಕ್ ಒಳಗೆ ನೇರ ಧುಮುಕುವ, ಆಫ್ರಿಕಾ, ಅಮೆಜಾನ್ ಕಾಡುಗಳಲ್ಲಿ ಒಂಟಿಯಾಗಿ ಓಡಾಡುವ ಸಾಹಸ ಕೈಗೊಳ್ಳುವ ಬೇರ್ ಗ್ರಿಲ್ ನ ಎಂಟೆದೆ ಇರಬೇಕು. ನೆಟ್ ವರ್ಕ್ ಎಂದಿದ್ದರೂ ಕೈಕೊಡುವಂಥದ್ದೇ. ಇನ್ನು ಜಿ.ಪಿ.ಎಸ್. ಯಾವ ಖಾತರಿ? ಜಿ.ಪಿ.ಎಸ್. ಇದ್ದರೂ ಒಂದು ಪಕ್ಷ ಏನು ಮಾಡೀತು? ಅದು ಕೇವಲ ರಸ್ತೆ ತೋರಿಸುತ್ತದೆ ಅಷ್ಟೇ. ಚಲಿಸಬೇಕಾದವರು ನಾವು ತಾನೇ?
ಮೊದಲು ವಾಹನ ಚಲಾಯಿಸುವುದನ್ನು ಕಲಿಯಬೇಕು ಅಮೇಲೆ ಜಿ.ಪಿ.ಎಸ್. ಅನ್ನು ಗ್ರಹಿಸುವುದನ್ನು ಆತ್ಮಗತ ಮಾಡಬೇಕು. ಆಮೇಲೆ ಅದನ್ನು ಮರೆತು ಬಿಡಬೇಕು. ಕಲಿಯುವುದೇ ಮರೆಯುವುದಕ್ಕಾಗಿ. ಇಲ್ಲದಿದ್ದರೆ ಹೊಸದಾಗಿ ಕಲಿಯುವುದು ಹೇಗೆ? ಒಮ್ಮೆ ರಸ್ತೆ ಪರಿಚಯವಾಯಿತೆಂದರೆ ಯಾವ ಜಿ.ಪಿ.ಎಸ್ ಕೂಡ ಬೇಡ. ರಸ್ತೆ ಗುರುತು ಹತ್ತುವವರೆಗೆ ಮಾತ್ರ ಜಿ.ಪಿ.ಎಸ್. ಆಮೇಲೆ ಅದನ್ನು ಒಗೆಯಬೇಕಾದುದೇ ಸರಿ. ಆಗಸಕ್ಕೆ ಒಯ್ಯುವ ಕಾಡ ಪಥಗಳಲ್ಲಿ ಜಿ.ಪಿ.ಎಸ್ ಕೆಲಸ ಮಾಡಲಾರದು.