ಜರ್ಮನಿಯಲ್ಲೊಂದು ಮೌಂಟ್ ಪಿಲಾಟಸ್ ಎಂಬ ಹಿಮಾಲಯ!
ಚಾಪೆಲ್ ಸೇತುವೆ ಸುಮಾರು 204 ಮೀಟರ್ ಉದ್ದವಿರುವ ಮರದ ಸೇತುವೆಯಾಗಿದ್ದು, ಇದನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ವಿಶ್ವದ ಅತ್ಯಂತ ಹಳೆಯ ಮರದ ಸೇತುವೆಗಳಲ್ಲಿ ಒಂದಾಗಿದೆ. ಸೇತುವೆಯ ಒಳಗೆ ಹಲವಾರು ವರ್ಣಚಿತ್ರಗಳಿವೆ. 1993 ರ ಅಗ್ನಿ ಅವಘಡದಿಂದಾಗಿ ಐತಿಹಾಸಿಕ ವರ್ಣಚಿತ್ರಗಳು ಹಾನಿಗೊಳಗಾದವು.
- ಸುಜಯ ಆರ್ ಕೊಣ್ಣೂರ್
ಏಪ್ರಿಲ್ ತಿಂಗಳ ಮಧ್ಯಭಾಗ. ಜರ್ಮನಿಯಲ್ಲಿ ಆಗ ಕೊರೆಯುವ ಚಳಿ ಇತ್ತು. ಬೆಂಗಳೂರಿನ ಬಿಸಿಲ ಧಗೆಯಿಂದ ಹೋಗಿದ್ದರಿಂದ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ವಾರವೇ ಬೇಕಾಯ್ತು. ನಂತರ ಮನೆಯೊಳಗೆ ಕಾಲಿಗೆ ಕಾಲ್ಚೀಲ, ಕೈಗೆ ಕೈಗವಸು ಹಾಕುವುದು ಬೇಕಾಗಲಿಲ್ಲ. ಹೊರಗೆ ಹೊರಟಾಗ ಮಾತ್ರ, ಮುಖ ಒಂದನ್ನು ಬಿಟ್ಟು ಉಳಿದದ್ದೆಲ್ಲಾ ಪ್ಯಾಕ್ ಆಗಿರುತ್ತಿತ್ತು.

ಸ್ಟುಟ್ ಗಾರ್ಟ್ ನಲ್ಲಿ ನಾವಿರುವ ಮನೆಯ ಮುಂದೆ ಹಸಿರು ತುಂಬಿದ ಹುಲ್ಲಿನ ಹಾಸು, ಬಣ್ಣ ಬಣ್ಣದ ಹೂಗಳ ತೋಟ, ರಸ್ತೆಯ ಇಕ್ಕೆಲಗಳಲ್ಲೂ ಹೂ ರಾಶಿಗಳ ತೊನೆದಾಟ. ಪಕ್ಕದಲ್ಲೇ ತಿಳಿನೀರಿನ ಜುಳುಜುಳು ನಾದದ ನದಿ. ಸ್ವಚ್ಛ ಸುಂದರ ಪ್ರಕೃತಿಯ ಕಣ್ಣ ತಣಿಸುವ ನೋಟ.
ಅಲ್ಲಿ ನಗರದ ಮಧ್ಯಭಾಗದಲ್ಲಿ ನದಿ ಹರಿಯುತ್ತದೆ. ಇಡೀ ಊರಿನ ಸುತ್ತ ಗಿರಿವನ ರಾಜಿಗಳು. ಕಣ್ಣಿಗೆ ಹಸಿರಿನ ಹಾಗೂ ಬಣ್ಣದ ಹೂವಿನ ಹಬ್ಬ. ವಾಹನಗಳ ಅಬ್ಬರವಿಲ್ಲ. ಜನಗಳ ಗದ್ದಲವಿಲ್ಲ. ಸಂಜೆ ಆರು ಗಂಟೆಗೆಲ್ಲಾ ರಸ್ತೆ, ಅಂಗಡಿ ಮುಗ್ಗಟ್ಟುಗಳು ಮುಚ್ಚಿ, ಊರಿಗೆ ಊರೇ ಸ್ತಬ್ಧ. ಕೆಲವು ಹೊಟೇಲ್ ಗಳು ಮಾತ್ರ ತೆರೆದಿರುತ್ತವೆ.
ನಾವು ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಲೂಸೆರ್ನ್ ಎಂಬ ಪಟ್ಟಣವನ್ನು ತಲುಪಿದಾಗ ಜಿಟಿಜಿಟಿ ಮಳೆ ಪ್ರಾರಂಭವಾಗಿತ್ತು. ತಣ್ಣಗೆ ಬೀಸುವ ಸುಳಿಗಾಳಿ ಕೊರೆದು ಮೈಯನ್ನು ಸಣ್ಣಗೆ ನಡುಗಿಸುತ್ತಿತ್ತು.
ಲೂಸೆರ್ನ್ ನಗರದ ಮಧ್ಯಭಾಗದಲ್ಲಿ ರಾಯಸ್ ನದಿ. ಅದಕ್ಕೆ ಚಾಪೆಲ್ ಸೇತುವೆ (Chapel Bridge) ಕಟ್ಟಲಾಗಿದೆ. ಇದು ಸುಮಾರು 204 ಮೀಟರ್ ಉದ್ದವಿರುವ ಮರದ ಸೇತುವೆಯಾಗಿದ್ದು, ಇದನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ವಿಶ್ವದ ಅತ್ಯಂತ ಹಳೆಯ ಮರದ ಸೇತುವೆಗಳಲ್ಲಿ ಒಂದಾಗಿದೆ. ಸೇತುವೆಯ ಒಳಗೆ ಹಲವಾರು ವರ್ಣಚಿತ್ರಗಳಿವೆ. 1993 ರ ಅಗ್ನಿ ಅವಘಡದಿಂದಾಗಿ ಐತಿಹಾಸಿಕ ವರ್ಣಚಿತ್ರಗಳು ಹಾನಿಗೊಳಗಾದವು.

ಅಲ್ಲಿಯೇ ಹತ್ತಿರದಲ್ಲಿದೆ ಪಿಲಾಟಸ್ ಪರ್ವತ (Mount Pilatus). ಇದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಒಂದು ಪ್ರಸಿದ್ಧ ಪರ್ವತ ಶ್ರೇಣಿಯಾಗಿದ್ದು, ಆಲ್ಫ್ಸ್ ಪರ್ವತ ಶ್ರೇಣಿಯ ಭಾಗವಾಗಿದೆ. 7000 ಅಡಿ ಎತ್ತರದಲ್ಲಿರುವ ಈ ಶಿಖರ ತಲುಪಲು ಕ್ರಿಯೆನ್ಸ್ (Kriens) ಎಂಬ ಹಳ್ಳಿಯಿಂದ ಕೇಬಲ್ ಕಾರ್‌ಗಳು ಮತ್ತು ಗೊಂಡೋಲಾ ಲಿಫ್ಟ್‌ಗಳ ವ್ಯವಸ್ಥೆಯಿದೆ. ಅಷ್ಟು ಎತ್ತರದ ಪರ್ವತಕ್ಕೆ ಕೆಳಗಿನಿಂದ ಕೇಬಲ್ ಕಾರನ್ನು ಹತ್ತಿಸುವ ತಂತ್ರಜ್ಞಾನವೇ ಅಚ್ಚರಿ. ಒಮ್ಮೆಗೆ 55 ಜನರನ್ನು ಕೊಂಡೊಯ್ಯುವ ಅದರ ಪ್ರಯಾಣವೇ ಒಂದು ವಿಸ್ಮಯ ಜಗತ್ತು. ಕೆಳಗೆ ವನರಾಶಿಯ ಹಸಿರು. ಗುಡ್ಡಗಳ ಸಾಲು ಸಾಲು, ನೀಲಾಗಸದ ಹೊದಿಕೆ, ಅಲ್ಲಲ್ಲಿ ಬಿಳಿ ಅರಳೆಯಂತೆ ಹರಡಿದ ಮೋಡಗಳು, ಮೈಗೆ ಸೋಕುವ ತಂಪು ಗಾಳಿ, ಸ್ವರ್ಗ ಅಂದರೆ ಇದೇ ಏನೋ ಅನ್ನುವ ಭಾವನೆ.
ಅಲ್ಲಿಗೆ ಪ್ರತಿವರ್ಷ ಲಕ್ಷಗಟ್ಟಲೆ ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದೊಂದು ಹವಾಮಾನದಲ್ಲಿ ಒಂದೊಂದು ಅನುಭವ ನೀಡುವ ಈ ಪರ್ವತದ ತುದಿಯಲ್ಲಿ ಕೆಫೆಟೇರಿಯಾ, ಬಾರ್, ಕಾಫಿ ಬಾರ್, ಸ್ಮರಣಿಕೆಗಳ ಅಂಗಡಿಗಳು ಇವೆ. ಪರ್ವತದ ತುತ್ತ ತುದಿ ತಲುಪಲು ಅಚ್ಚುಕಟ್ಟಾದ ಕಾಲು ದಾರಿ, ಹಿಡಿದುಕೊಳ್ಳಲು ಎರಡೂ ಕಡೆ ಸರಳುಗಳು. ಶಿಖರದ ಕೊನೆ ತಲುಪಿದಾಗ ಓಹ್!! ಪ್ರಕೃತಿಯೇ ನೀನೆಷ್ಟು ಮೋಹಕ, ನಿಗೂಢ ಅನ್ನಿಸದಿರದು. ಅದೊಂದು ಅನೂಹ್ಯ ಭಾವಯಾನ. ಮೈ ಪುಳಕ.

ಹಾಲಿನ ಹೊಳೆಯಂತೆ ಅಲ್ಲಲ್ಲಿ ಕಾಣುವ ಹಿಮದ ರಾಶಿ ಸೌಂದರ್ಯದ ಖಣಿ. ಹಿಮಾಚ್ಛಾದಿತ ಬೆಟ್ಟಗಳ ನಡುವೆ ಅದೊಂದು ರೋಚಕ ಅನುಭವ. ಬೆಳಗಿನ ಸೂರ್ಯನ ಕಿರಣಗಳು ಹಿಮದ ಮೇಲೆ ಬಿದ್ದು ಅವು ಥಳಥಳ ಹೊಳೆಯುತ್ತಿದ್ದವು. ಶಿಖರದ ತುದಿಯಲ್ಲಿ ನಿಂತು ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಬಿಳಿಬಿಳಿಯ ಹಾಸು. ಶುಭ್ರ ಹಿಮಾವೃತ ಶಿಖರಗಳಿಂದಾಗಿ ಮಂಜಿನ ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು. ಅವುಗಳ ಎತ್ತರ ಮತ್ತು ಗಾತ್ರವು ಭವ್ಯವಾದ ನೋಟವನ್ನು ನೀಡುತ್ತಿತ್ತು. ಪ್ರಕೃತಿ ಮಡಿಲ ಸೊಬಗು ವರ್ಣಿಸಲಸದಳ.
ಹಕ್ಕಿಗಳಿಗೆ ಸವಾಲ್ ಎಂಬಂತೆ ಮನುಷ್ಯನೂ ರೆಕ್ಕೆ ಕಟ್ಟಿಕೊಂಡು (ಪ್ಯಾರಾ ಗ್ಲೈಡಿಂಗ್) ಹಾರುವುದನ್ನು ಕಂಡು ಮೈ ಜುಂ ಎಂದಿತು.
ಅಷ್ಟು ಎತ್ತರದ ಜಾಗವನ್ನು ನೋಡಲು ಅನಾಯಾಸವಾಗಿ ಹೋಗಿ ಬರುವ ವ್ಯವಸ್ಥೆ, ಪ್ರವಾಸೋದ್ಯಮವನ್ನು ಬೆಳೆಸಿಕೊಂಡು ಹೋಗುತ್ತಿರುವ ರೀತಿ, ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಪರ್ವತಾರೋಹಣ ಮಾಡಲು ಬಯಸುವವರಿಗೆ, ಬೇರೆ ಪಥಗಳಲ್ಲಿ ಅವಕಾಶವಿದೆ.
ಪಿಲಾಟಸ್ ಎಂಬ ಹೆಸರು ಪಾಂಟಿಯಸ್ ಪಿಲಾಟ್ (Pontius Pilate) ಎಂಬ ಪ್ರಾಚೀನ ರೋಮನ್ ಗವರ್ನರ್‌ನಿಂದ ಬಂದಿದೆ ಎನ್ನುವ ನಂಬಿಕೆ ಇದೆ. ಪಿಲಾಟ್‌ನ ಆತ್ಮವು ಈ ಪರ್ವತದ ಸುತ್ತಲೂ ತಿರುಗುತ್ತಿದೆಯೆಂಬ ದಂತಕಥೆಯೂ ಇದೆ. ಹಾಗಂತ ನೀವೇನೂ ಭಯಪಡಬೇಡಿ!!
ನೀವು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುವ ಯೋಜನೆ ಮಾಡುತ್ತಿದ್ದರೆ, ಪಿಲಾಟಸ್ ಪರ್ವತಕ್ಕೆ ಭೇಟಿ ನೀಡಿ.