Saturday, December 20, 2025
Saturday, December 20, 2025

ಮೂರುವರ್ಷಗಳಿಂದ ಶೇ.100ರಷ್ಟು ಪ್ಲೇಸ್‌ಮೆಂಟ್‌: ಡಾ. ಕೆ.ಬಿ. ಉಮೇಶ್‌ ಶೆಟ್ಟಿ

ಇಲ್ಲಿಗೆ ಪ್ರಾಂಶುಪಾಲನಾಗಿ ನಿಯುಕ್ತಿಯಾದ ನಂತರ ನಮ್ಮ ಸಂಸ್ಥೆಯ ಅಧ್ಯಕ್ಷ ಬಿ.ಎಂ. ಸುಕುಮಾರ್‌ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಇಲ್ಲಿ ಕೆಲಸ ಮಾಡುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಸುಕುಮಾರ್‌ ಶೆಟ್ಟಿಯವರು ಸುಲಭವಾಗಿ ಯಾರನ್ನೂ ಒಪ್ಪುವುದಿಲ್ಲ, ಆದರೆ, ಯಾರನ್ನಾದರೂ ಒಪ್ಪಿದರೆ ಅವರಿಗೆ ಸದಾ ಬೆಂಬಲ ನೀಡುತ್ತಾರೆ. ಅಂಥ ಬೆಂಬಲ ನಂಗೂ ನೀಡುತ್ತಾರೆಂದರೆ ನನಗೆ ಬಹಳ ಖುಷಿಯಾಗುತ್ತದೆ ಎನ್ನುತ್ತಾರೆ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಬಿ. ಉಮೇಶ್‌ ಶೆಟ್ಟಿ.

ಸಂಸ್ಥೆಗೆ 50 ವರ್ಷ ತುಂಬಿದೆ, ಈ ಸಂಭ್ರಮ ನಿಮಗೆ ಹೇಗನ್ನಿಸುತ್ತಿದೆ?

  • ಸಾಮಾನ್ಯವಾಗಿ ಬೆಳ್ಳಿ ಮಹೋತ್ಸವ, ಸುವರ್ಣ ಮಹೋತ್ಸವಗಳು ಒಬ್ಬ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜೀವನದಲ್ಲಿ ಸಿಗೋದು ಬಹಳ ಕಡಿಮೆ. ಹಾಗಾಗಿ ನನಗೆ ಬಹಳ ಸಂತೋಷವಾಗುತ್ತದೆ. ನಾನು ವಿದ್ಯಾರ್ಥಿಯಾಗಿದ್ದಾಗ ಮತ್ತು ಪ್ರಾಧ್ಯಾಪಕನಾದ ಮೇಲೂ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂಥ ಅವಕಾಶ ಸಿಕ್ಕಿರಲಿಲ್ಲ. ಇದನ್ನು ನನ್ನ ಸುಯೋಗ ಎಂದುಕೊಂಡಿದ್ದೇನೆ. ಈ ಕಾರ್ಯಕ್ರಮದ ಉಸ್ತುವಾರಿಯಲ್ಲಿ ನನ್ನನ್ನು ನಾನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದೇನೆ.

ನೀವು ಪ್ರಾಂಶುಪಾಲರಾದ ಸಮಯದಲ್ಲಿ ಕಾಲೇಜು ಹೇಗಿತ್ತು?

  • 2019ರಲ್ಲಿ ಈ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನಿಯುಕ್ತಿಯಾದ ಸಮಯದಲ್ಲಿ ಇಲ್ಲಿ 1072 ವಿದ್ಯಾರ್ಥಿಗಳು ಓದುತ್ತಿದ್ದರು. ಈಗ ಆ ಸಂಖ್ಯೆ 1800ರಷ್ಟಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣವಾಗಿದೆ. ಆಗ ಮಾಮೂಲಿ ಬಿಕಾಂ, ಬಿಬಿಎ, ಬಿಸಿಎ ಕೋರ್ಸ್‌ಗಳಿದ್ದವು. ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಲವಾರು ಹೊಸ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭ ಮಾಡಿದ್ದೇವೆ.

ಕಾಲೇಜಿನ ಸಾಧನೆಗಳೇನು?

  • 2010 ರಿಂದ ಇಲ್ಲಿಯವರೆಗೆ 10ಕ್ಕೂ ಹೆಚ್ಚು ರ್ಯಾಂಕ್‌ಗಳನ್ನು ಪದವಿಗಳಲ್ಲಿ ಪಡೆದಿದ್ದೇವೆ. ಪ್ರತಿವರ್ಷ ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಲಿ ಎಂಬ ದೃಷ್ಟಿಯಿಂದ ಐಐಟಿ ಮದ್ರಾಸ್‌ನವರು ಆರಂಭಿಸಿದ ಎನ್‌ಪಿಟಿಎಲ್‌ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿದ್ದೇವೆ. ಅದರ ಜತೆಗೆ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲಿ ಎಂಬ ಯೋಚನೆಯಿಂದ ಹಲವಾರು ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಶುರುಮಾಡಿದ್ದೇವೆ. ತೃತೀಯ ವರ್ಷದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಊದ್ಯೋಗ ಸಿಗಬೇಕೆಂದು, ಪ್ಲೇಸ್‌ಮೆಂಟ್‌ ಡಿಪಾರ್ಟ್‌ಮೆಂಟ್‌ ಮಾಡಿದ್ದೇವೆ. ಪ್ಲೇಸ್‌ಮೆಂಟ್‌ ಅಧಿಕಾರಿಗಳಿದ್ದಾರೆ. ಕಳೆದ ಮೂರು ವರ್ಷಗಳಿಂದ 100 ಪರ್ಸೆಂಟ್‌ ಪ್ಲೇಸ್‌ಮೆಂಟ್‌ ಆಗುತ್ತಿದೆ.
Untitled design (25)

ಬದಲಾಗುತ್ತಿರುವ ಕಾಲದಲ್ಲಿ ಅಧ್ಯಾಪಕರು ಹೇಗೆಲ್ಲ ಅಪ್‌ಡೇಟ್‌ ಆಗುತ್ತಿದ್ದಾರೆ?

  • ಯುಜಿಸಿ ಯವರು 2 ವರ್ಷಗಳ ಹಿಂದೆ ಎನ್‌ಇಪಿ ಮತ್ತು ಎಸ್‌ಇಪಿ ಶುರುಮಾಡಿದರು. ಬೇರೆಬೇರೆ ಕಾರ್ಯಗಾರಗಳಿಗೆ ಕಳಿಸುವುದರ ಮೂಲಕ, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರಿಂದ ಬೋಧನೆ ಮಾಡಿಸುತ್ತೇವೆ. ಕಾಲಕ್ಕೆ ತಕ್ಕಂತೆ ಪ್ರಾಧ್ಯಾಪಕರನ್ನು ನಿರಂತರವಾಗಿ ತರಬೇತಿ ಮಾಡುತ್ತಿದ್ದೇವೆ.

ನಿಮ್ಮ ಕೆಲಸಗಳಿಗೆ ನಿಮ್ಮ ತಂಡ ಮತ್ತು ಮ್ಯಾನೇಜ್‌ಮೆಂಟ್‌ನ ಬೆಂಬಲ ಹೇಗಿರುತ್ತದೆ?

  • ಇಲ್ಲಿಗೆ ಪ್ರಾಂಶುಪಾಲನಾಗಿ ನಿಯುಕ್ತಿಯಾದ ನಂತರ ನಮ್ಮ ಸಂಸ್ಥೆಯ ಅಧ್ಯಕ್ಷ ಬಿ.ಎಂ. ಸುಕುಮಾರ್‌ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಇಲ್ಲಿ ಕೆಲಸ ಮಾಡುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಸುಕುಮಾರ್‌ ಶೆಟ್ಟಿಯವರು ಸುಲಭವಾಗಿ ಯಾರನ್ನೂ ಒಪ್ಪುವುದಿಲ್ಲ, ಆದರೆ, ಯಾರನ್ನಾದರೂ ಒಪ್ಪಿದರೆ ಅವರಿಗೆ ಸದಾ ಬೆಂಬಲ ನೀಡುತ್ತಾರೆ. ಅಂಥ ಬೆಂಬಲ ನಂಗೂ ನೀಡುತ್ತಾರೆಂದರೆ ನನಗೆ ಬಹಳ ಖುಷಿಯಾಗುತ್ತದೆ. ನಾನು ಕಳೆದ 7 ವರ್ಷಗಳಿಂದ ಈ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಇವತ್ತಿನ ವರೆಗೆ ಯಾವುದೇ ವಿಚಾರದಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಅಥವಾ ಮ್ಯಾನೇಜ್‌ಮೆಂಟ್‌ನಿಂದ ಯಾವೊಬ್ಬರೂ ಯಾವುದೇ ವಿಚಾರದಲ್ಲಿ ಮೂಗನ್ನು ತೂರಿಸದ ಕಾರಣದಿಂದ, ಜೀರೊ ಇಂಟರ್‌ಫಿಯರೆನ್ಸ್‌ನಿಂದಾಗಿ ಇವತ್ತು ನಮ್ಮ ತಂಡ ಬಹಳಷ್ಟು ವಿಶಿಷ್ಟವಾಗಿ, ಚಾಕಚಕ್ಯತೆಯಿಂದ ಕೆಲಸ ಮಾಡಲು ಅವಕಾಶವಾಗುತ್ತಿದೆ.

ಇಲ್ಲಿನ ಬೋಧನಾ ತಂಡ ಹೇಗಿದೆ?

  • ನಮ್ಮ ಬೋಧನಾ ತಂಡದಲ್ಲಿ ಬಹಳಷ್ಟು ಯುವ ಪ್ರಾಧ್ಯಾಪಕರಿದ್ದಾರೆ. ಅದರಲ್ಲಿ ಹಲವರು ಪಿಎಚ್‌ಡಿ ಮಾಡಿ ಹಲವಾರು ಸರಕಾರಿ ಪರೀಕ್ಷೆಗಳನ್ನು ಪಾಸ್ ಮಾಡಿದವರೂ ಇದ್ದಾರೆ. ನಿರಂತರವಾಗಿ ನಮ್ಮ ಅಥವಾ ಬೇರೆ ವಿದ್ಯಾಸಂಸ್ಥೆ ಗಳಲ್ಲಿ ನಡೆಸುವ ವರ್ಕ್‌ಶಾಪ್‌, ತರಬೇತಿ ಕಾರ್ಯಗಾರ, ಸೆಮಿನಾರ್‌, ಕಾನ್ಫರೆನ್ಸ್‌ ಹಾಗೂ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ಗಳಲ್ಲಿ ತಮ್ಮ ರಿಸರ್ಚ್‌ ಪೇಪರ್‌ಗಳನ್ನು ಪಬ್ಲಿಷ್‌ ಮಾಡಿದವರಾಗಿದ್ದಾರೆ. ಅದರಿಂದಲೇ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯುತ್ತಿದೆ, ಇದಕ್ಕಾಗಿ ನನ್ನ ಪ್ರಾಧ್ಯಾಪಕರಿಗಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ವಿದ್ಯಾರ್ಥಿಗಳಿಗೆ ನೀವು ಹೇಳುವ ಕಿವಿಮಾತು?

  • ವಿದ್ಯಾರ್ಥಿಗಳು ಪ್ರಾಧ್ಯಾಪಕರು ಹೇಳಿದ ಮಾರ್ಗದಲ್ಲಿ ನಡೆಯಬೇಕು. ಅವರ ಸಲಹೆ ಸೂಚನೆಗಳನ್ನು ಕಾಲಕಾಲಕ್ಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲಿ ಎಂಬ ಭಾವನೆ ನನ್ನಲ್ಲಿದೆ.

--

ಸತತ ಮೂರು ವರ್ಷ ಜಿಲ್ಲೆಗೆ ಪ್ರಥಮ ರ್ಯಾಂಕ್‌ ಬಂದಿತ್ತು: ನವೀನ್‌ ಶೆಟ್ಟಿ

ಆರ್‌ಎನ್‌ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು

ಸಂಸ್ಥೆಗೆ ಈಗ ಗೋಲ್ಡನ್‌ ಜುಬಿಲಿಯ ಸಂಭ್ರಮ, ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಿಮಗೆ ಏನೆನಿಸುತ್ತಿದೆ?

  • ಎಲ್ಲರಿಗೂ ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ ಸಿಗುವಂಥದ್ದೇ ಅಪರೂಪ. ನಮ್ಮ ವೃತಿ ಜೀವನದಲ್ಲಿ ಸುವರ್ಣ ಮಹೋತ್ಸವ ಆಚರಣೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಕುಂದಾಪುರ ಎಜುಕೇಷನ್‌ ಸೊಸೈಟಿಯ ಧ್ಯೇಯೋದ್ದೇಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ.

ಕಳೆದ 10 ವರ್ಷಗಳಲ್ಲಿ ಸಂಸ್ಥೆ ಹೇಗೆಲ್ಲ ಬೆಳೆದಿದೆ?

  • ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ ಸಂಸ್ಥೆ ಹಲವಾರು ಸಾದನೆಗಳನ್ನು ಮಾಡಿದೆ. ಅದರ ಜತೆಗೆ ನಮ್ಮೆಲ್ಲ ಕಾರ್ಯಕ್ರಮಗಳಿಗೂ ಮ್ಯಾನೇಜ್‌ಮೆಂಟ್‌ ಫಂಡಿಂಗ್‌ ಮಾಡಿ, ಹಲವಾರು ಯೋಜನೆಗಳನ್ನು ಆರಂಭ ಮಾಡಿದೆ. ಎಲ್ಲ ರೀತಿಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಮ್ಯಾನೇಜ್‌ಮೆಂಟ್‌ ಪ್ರಯತ್ನ ಮಾಡುತ್ತಿದೆ. ಇಲ್ಲಿ ಜಾಸ್ತಿ ಬರುವವರೇ ಬಡ ವಿದ್ಯಾರ್ಥಿಗಳು ಅವರಿಗೆ ಒಳ್ಳೆಯ ಶಿಕ್ಷಣ ಕೊಡುವಂಥದ್ದೇ ನಮ್ಮ ಸಂಸ್ಥೆಯ ಆಧಾರಸ್ತಂಭ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರ ಕನಸು. ಅದಕ್ಕೆ ಸರಿಯಾಗಿ ನಾವೂ ಸ್ಪಂದಿಸಿ, ನಮ್ಮ ಕೆಲಸವನ್ನು ಮಾಡುತ್ತ ಬಂದಿದ್ದೇನೆ.

ಶೈಕ್ಷಣಿಕವಾಗಿ ಸಂಸ್ಥೆ ಏನೆಲ್ಲ ಸಾಧನೆಗಳನ್ನು ಮಾಡಿದೆ?

  • ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು 98, 99 ಮತ್ತು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಅದರ ಜತೆಗೆ ರಾಜ್ಯ ಮಟ್ಟದ ಟಾಪ್‌ 10ನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸತತ ಮೂರು ವರ್ಷ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ. ನೀಟ್‌ ಮತ್ತು ಸಿಇಟಿಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ.

ಈಗ ಎಲ್ಲ ಕ್ಷೇತ್ರದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಏರ್ಪಡುತ್ತಿದೆ. ಆ ನಿಟ್ಟಿನಲ್ಲಿ ನೀವು ಅವರಿಗೆ ಹೇಗೆ ತರಬೇತಿ ನೀಡುತ್ತಿದ್ದೀರಿ?

  • ನಮ್ಮ ವಿದ್ಯಾರ್ಥಿಗಳಿಗೆ ನುರಿತ ತರೇಬೇತುದಾರರಿಂದ ತರಬೇತಿ ನೀಡುತ್ತೇವೆ. ಹಲವಾರು ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಕೆರಿಯರ್‌ ಗೈಡೆನ್ಸ್‌, ನಾಲೆಜ್ ಇಂಪ್ರೂವ್‌ ಮಾಡಲು ಹಲವಾರು ಕೆಲಸಗಳನ್ನು ಮಾಡುತ್ತಿದ್ದೇವೆ. ಕ್ಯಾಂಪಸ್‌ ವಿಸಿಟ್‌, ಇಂಡಸ್ಟ್ರಿಯಲ್‌ ವಿಸಿಟ್‌ ಮಾಡಿಸುವುದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನ ತುಂಬಲು ಸಹಕರಿಸುತ್ತಿದ್ದೇವೆ.
Untitled design (24)

ಇಲ್ಲಿನ ಟೀಚಿಂಗ್‌ ಸ್ಟಾಫ್‌ ಹೇಗಿದೆ?

  • ನಮ್ಮದು ಡೆಡಿಕೇಟೆಡ್‌ ಟೀಚಿಂಗ್‌ ಸ್ಟಾಫ್‌, ತಮ್ಮದೇ ಸಂಸ್ಥೆಯನ್ನುವ ಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ. 22 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಅಧ್ಯಾಪಕರಿದ್ದಾರೆ. ಅಂದರೆ, ಇಲ್ಲಿನ ಅಧ್ಯಾಪಕರು ಸಂಸ್ಥೆಯ ಜತೆಗೆ ಬಾಂಧವ್ಯವನ್ನು ಹೊಂದಿದ್ದಾರೆ. ನಮ್ಮ ಸಂಸ್ಥೆಯ ಮುಖ್ಯಸ್ಥರ ಕನಸಿಗೆ ಬೆಂಬಲ ನೀಡಲು ಎಲ್ಲರೂ ಶ್ರಮಿಸುತ್ತಿದ್ದಾರೆ.

ಕ್ಯಾಂಪಸ್‌ ಕಲ್ಚರ್‌ ಹೇಗಿದೆ?

  • ಇಲ್ಲಿನ ಹಲವಾರು ವಿದ್ಯಾರ್ಥಿಗಳು ಹಳ್ಳಿಯಿಂದ ಬರುವವರು ಮತ್ತು ಆರ್ಥಿಕವಾಗಿ ಹಿಂದುಳಿದ ಮನೆಯವರು. ಇನ್ನೊಬ್ಬರನ್ನು ಗೌರವಿಸುವುದು, ಸಮಾಜದ ಎಲ್ಲರ ಜತೆಗೆ ಬೆರೆಯುವಂಥ ಒಳ್ಳೆಯ ಗುಣಗಳನ್ನು ಹೊಂದಿದವರೇ ಇಲ್ಲಿ ವಿದ್ಯಾರ್ಥಿಗಳಾಗಿದ್ದಾರೆ. ನಾವೂ ಅವರೆಲ್ಲರೂ ಒಳ್ಳೆಯ ನಾಗರಿಕರಾಗಲು ಬೇಕಾದ ಎಲ್ಲ ರೀತಿಯ ತರಬೇತಿಯನ್ನು ನೀಡುತ್ತಿದ್ದೇವೆ. ಎಲ್ಲರೂ ಕಲ್ಚರ್ಡ್‌ ಸ್ಟೂಡೆಂಟ್ಸ್‌.

ಶಿಕ್ಷಕರು ಅಪ್ಡೆಟ್‌ ಆಗಲು ಏನೆನೆಲ್ಲ ತಯಾರಿ ನಡೆಸುತ್ತೀರಿ?

  • ಸಬ್ಜೆಕ್ಟ್‌ ಫೋರಂನಲ್ಲಿ ನಡೆಯುವ ಎಲ್ಲ ತರಬೇತಿಗಳಿಗೂ ಅಧ್ಯಾಪಕರನ್ನು ಕಳಿಸುತ್ತೇವೆ. ನಮ್ಮಲ್ಲಿಯೂ ಅಧ್ಯಾಪಕರಿಗೆ ಬೇಕಾದ ಮಾರ್ಗದರ್ಶನವನ್ನು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಾಡಿಸುತ್ತಿದ್ದೇವೆ. ಕೆಲವು ಅಧ್ಯಾಪಕರು ಬೇರೆ ಬೇರೆ ಕೋರ್ಸ್‌ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಾನೂ ಈಗ ಪಿಎಚ್‌ಡಿ ಮಾಡುತ್ತಿದ್ದೇನೆ. ಎಲ್ಲರೂ ತಮ್ಮ ಸಬ್ಜೆಕ್ಟ್‌ನಲ್ಲಿ ಹೋಲ್ಡ್‌ ಬರಲು ಶ್ರಮಿಸುತ್ತಿದ್ದಾರೆ.

ಹಳೆಯ ಕಾಲದ ಕ್ಲಾಸ್‌ರೂಮ್‌ಗೂ ಇವತ್ತಿನ ಕಾಲದ ಕ್ಲಾಸ್‌ ರೂಮ್‌ ಗೂ ಏನೆಲ್ಲ ಬದಲಾವಣೆಗಳಾಗಿವೆ?

  • ಮುಂಚೆ ಬರೀ ಬ್ಲ್ಯಾಕ್‌ ಬೋರ್ಡ್‌ ಬಳಸಿ ಅಷ್ಟೇ ಬೋಧನೆ ಮಾಡುತ್ತಿದ್ದರು. ಆದರೆ, ಈಗ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಸ್ಮಾರ್ಟ್‌ ಕ್ಲಾಸ್‌ನಲ್ಲಿ ಕ್ಲಾಸ್‌ ಮಾಡುವುದು, ಗೂಗಲ್‌ಗಳನ್ನೆಲ್ಲ ಬಳಸಿ ಕ್ಲಾಸ್‌ ಮಾಡುತ್ತಿದ್ದೇವೆ. ಆಯಾ ಸಬ್ಜೆಕ್ಟ್‌ ಗೆ ಬೇಕಾದ ಹೊಸ ಥರದ ಬೋಧನೆಗಳನ್ನು ಮಾಡುತ್ತಿದ್ದೇವೆ.

ಮುಂದಿನ 10 ವರ್ಷಗಳಲ್ಲಿ ಸಂಸ್ಥೆಯನ್ನು ಹೇಗೆಲ್ಲ ಬೆಳೆಸಬೇಕೆಂಬ ಯೋಜನೆ ಇದೆ?

  • ಈಗಾಗಲೇ ಮ್ಯಾನೇಜ್‌ಮೆಂಟ್‌ನವರು ವಿಶಾಲವಾದ ಕ್ಯಾಂಪಸ್‌ ಮಾಡುವ ಯೋಜನೆಯನ್ನು ಹೊಂದಿದ್ದಾರೆ. ನಮ್ಮ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುವ ಯೋಜನೆ ಇದೆ. ವಿದ್ಯಾರ್ಥಿಗಳಿಗೆ ಹೊಸ ಹೊಸ ಕೋರ್ಸ್‌ಗಳನ್ನು ಅಳವಡಿಸುವುದು. ವಿದ್ಯಾರ್ಥಿಗಳನ್ನು ಏಮ್ಸ್‌ ಮತ್ತು ಐಐಟಿಗೆ ಹೋಗಬಹುದಾದ ಶಿಕ್ಷಣವನ್ನು ಕಲಿಸುವ ಯೋಜನೆ ಇದೆ.
Vinay Khan

Vinay Khan

Travel blogger and adventurer passionate about exploring new cultures and sharing travel experiences.

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

Read Next

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್