ಬದುಕಿನ ದೋಣಿಯಲಿ.. ಪಯಣಿಗ ನಾನಮ್ಮಾ..!
ಒಂದು ಚೌಕಟ್ಟಿನ ಒಳಗೆ ನಾವು ಜೀವನ ನಡೆಸುತ್ತಿರುವಾಗ, ಟ್ರಾವೆಲ್ ಎಂಬ ಬ್ರೇಕ್ ಅತೀ ಅವಶ್ಯಕ. ನಮ್ಮೊಳಗಿರುವ ನಮ್ಮನ್ನು ಇನ್ನಷ್ಟು ತಿಳಿದುಕೊಳ್ಳಲು ಪ್ರವಾಸ ಸಹಕಾರಿ. ಈ ಉದ್ದೇಶದೊಂದಿಗೆ ನಾನು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದೆ. ಕಾಶ್ಮೀರ ನಮ್ಮ ದೇಶದ ಭಾಗವೇ ಆಗಿದ್ದರೂ ಸೌತ್ ಇಂಡಿಯಾದಲ್ಲೇ ನಾನು ಜೀವನ ಮಾಡಿರುವುದರಿಂದ ಸ್ನೋ ಅಥವಾ ಸ್ನೋ ಫಾಲ್‌ನ್ನು ನಾನು ಯಾವತ್ತೂ ನೋಡಿರಲಿಲ್ಲ. ಅದೊಂದು ವಿಭಿನ್ನ ಅನುಭವ.
ಕನ್ನಡ ಕಿರುತೆರೆಯಲ್ಲಿ ಸೈಕೋ ಜಯಂತ್ ಪಾತ್ರದಲ್ಲಿ ಗುರುತಿಸಿಕೊಂಡಿರುವ ಭರವಸೆಯ ನಟ ದೀಪಕ್ ಸುಬ್ರಹ್ಮಣ್ಯ, ರಂಗಭೂಮಿ ಹಿನ್ನೆಲೆಯಿಂದ ಬಂದು, ಬಿಗ್ ಸ್ಕ್ರೀನ್ ನಲ್ಲಿ ಸಾಕಷ್ಟು ಸದ್ದು ಮಾಡಿದವರು. ರಂಗಭೂಮಿ, ಸಿನಿಮಾಗಳಿಗಾಗಿ ಸಾಕಷ್ಟು ಪ್ರಯಾಣ ಮಾಡುತ್ತಲೇ ಇರುವ ದೀಪಕ್ ಅವರ ಪ್ರವಾಸಿ ಪರಪಂಚ ನಿಮಗಾಗಿ.
ಟ್ರಾವೆಲ್‌ನೊಂದಿಗೆ ನಂಟು
ಜೀವನದಲ್ಲಿ 10 ಅಂಕಗಳಲ್ಲಿ 6.5 ಅಂಕಗಳನ್ನು ನಾನು ಟ್ರಾವೆಲಿಂಗ್‌ಗೆ ಕೊಡುತ್ತೇನೆ. ಸಾಮಾನ್ಯವಾಗಿ ಬದುಕಿನ ಉಳಿದೆಲ್ಲ ಚಟುವಟಿಕೆಗಳ ಜತೆಗೆ ಟ್ರಾವೆಲ್ ಸಹ ಬೆಸೆದುಕೊಂಡಿದೆ. ಉದ್ಯೋಗದ ಸಲುವಾಗಿಯೂ ನಾನು ಅನೇಕ ಬಾರಿ ಪ್ರಯಾಣಿಸಬೇಕಾಗಿ ಬಂದಿದೆ. ಇಂದಿಗೂ ಪಯಣಿಗನಾಗಿಯೇ ಇದ್ದೇನೆ. ಹೀಗಾಗಿ ಪ್ರಯಾಣಕ್ಕೂ ನನಗೂ ಬಹಳ ನಂಟಿದೆ.
ಪ್ರವಾಸ ಹೀಗಿದ್ದರೆ ಮಾತ್ರ ಚೆನ್ನ!
ಅಡ್ವೆಂಚರಸ್ ಆಗಿರುವುದು, ಅಡ್ವೆಂಚರ್ ಟೂರ್‌ಗಳಿಗೆ ಹೋಗುವ ಖುಷಿಯೇ ಬೇರೆ. ಅಂಥ ಅನೇಕ ಕಡೆಗಳಿಗೆ ನಾನು ಹೋಗಿ ಬಂದಿದ್ದೇನೆ. ಟೆಂಪಲ್ ರನ್ ಕೂಡಾ ಮಾಡಿದ್ದೇನೆ. ಆದರೆ ಸಂಸ್ಕೃತಿಯ ಜತೆಗೆ ಬೆರೆತುಹೋಗಿರುವ ತಾಣಗಳಿದ್ದರೆ ನನಗದು ತುಂಬಾ ಆಪ್ತವಾಗುತ್ತದೆ. ಇವೆರಡರನ್ನೂ ಬೆಸೆಯುವಂಥ ತಾಣಗಳ ಭೇಟಿ ಮಾಡುವುದಕ್ಕಾಗಿ ಅನೇಕ ಬಾರಿ ಪ್ಲ್ಯಾನ್ ಮಾಡಿ ಹೋಗಿರುವುದೂ ಇದೆ.

ರಂಗಭೂಮಿ ಪ್ರವಾಸ
20 ವರ್ಷಗಳಿಂದಲೂ ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಫಾರಿನ್‌ನಲ್ಲಿ ಪ್ರದರ್ಶನ ನೀಡುವ ಅವಕಾಶ ಥಿಯೇಟರ್‌ನಿಂದ ಸಿಕ್ಕಿಲ್ಲ. ಆದರೆ ನಮ್ಮ ದೇಶದೊಳಗೆಯೇ ಸಾಕಷ್ಟು ಕಡೆಗಳಲ್ಲಿ ಟ್ರಾವೆಲ್ ಮಾಡಿದ್ದೇವೆ. ದೆಹಲಿಯ ನ್ಯಾಷನಲ್ ಸ್ಟೂಲ್ ಆಫ್ ಡ್ರಾಮಾದಲ್ಲಿ ಹೋಗಿ ಪರ್ಫಾರ್ಮ್ ಮಾಡಿದ್ದೇನೆ. ರಂಗಶಂಕರದಲ್ಲಿ ನಾನು ಡೇ ಆಕ್ಟರ್ ಆಗಿದ್ದೆ. ಅಲ್ಲಿಂದ ಲೋಕಸಂಚಾರವನ್ನೂ ಮಾಡಿದ್ದೆವು. ಕರ್ನಾಟಕದ ವಿವಿಧ ಭಾಗಗಳಿಗೆ ಹೋಗಿ ನಾಟಕ ಪ್ರದರ್ಶನಗಳನ್ನೂ ನೀಡಿದ್ದೇನೆ. ಎಲಿಮಿನೇಟಿಂಗ್ ವಿಂಡೋಸ್ ಎಂಬ ನಮ್ಮದೇ ಒಂದು ಸಂಸ್ಥೆಯಿದ್ದು, ಅದರ ಮೂಲಕ ಭಾರತದ ವಿವಿಧ ಭಾಗಗಳಿಗೆ ಹೋಗಿ, ಶೋ ಗಳನ್ನು ನೀಡಿದ್ದೇನೆ. ಜತೆಗೆ ಇಂಪ್ರಾವ್, ಪ್ಲೇ ಬ್ಯಾಕ್ ನಂಥ ಬೇರೆ ಬೇರೆ ಥಿಯೇಟರ್ ಟೆಕ್ನಿಕ್ ಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿರುತ್ತೇವೆ. ಇಂಥ ಪ್ರಯತ್ನಗಳು ಮಾಡುವಾಗೆಲ್ಲಾ ಪ್ರಯಾಣ, ಪ್ರವಾಸವೆಂಬುದು ವೃತ್ತಿಯ ಭಾಗವಾಗಿಬಿಡುತ್ತದೆ.
ಕಾಶ್ಮೀರವೆಂಬ ಭೂಲೋಕ ಸ್ವರ್ಗ
ಒಂದು ಚೌಕಟ್ಟಿನ ಒಳಗೆ ನಾವು ಜೀವನ ನಡೆಸುತ್ತಿರುವಾಗ, ಟ್ರಾವೆಲ್ ಎಂಬ ಬ್ರೇಕ್ ಅತೀ ಅವಶ್ಯಕ. ನಮ್ಮೊಳಗಿರುವ ನಮ್ಮನ್ನು ಇನ್ನಷ್ಟು ತಿಳಿದುಕೊಳ್ಳಲು ಪ್ರವಾಸ ಸಹಕಾರಿ. ಈ ಉದ್ದೇಶದೊಂದಿಗೆ ನಾನು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದೆ. ಕಾಶ್ಮೀರ ನಮ್ಮ ದೇಶದ ಭಾಗವೇ ಆಗಿದ್ದರೂ ಸೌತ್ ಇಂಡಿಯಾದಲ್ಲೇ ನಾನು ಜೀವನ ಮಾಡಿರುವುದರಿಂದ ಸ್ನೋ ಅಥವಾ ಸ್ನೋ ಫಾಲ್‌ನ್ನು ನಾನು ಯಾವತ್ತೂ ನೋಡಿರಲಿಲ್ಲ. ಅದೊಂದು ವಿಭಿನ್ನ ಅನುಭವ. ಅಲ್ಲಿನ ಜನರ ಜೀವನ ಶೈಲಿ ಹೇಗಿದೆ ? ನಿಸರ್ಗದ ಜತೆ ಅವರು ಒಗ್ಗಿಕೊಂಡಿರುವ ರೀತಿ ಇವೆಲ್ಲವನ್ನೂ ತಿಳಿಯುವುದೇ ಖುಷಿ ನೀಡುತ್ತದೆ. ಲಶ್ ವ್ಯಾಲಿಯಿಂದ ತೊಡಗಿ, ಎತ್ತರೆತ್ತರ ಹಿಮಚ್ಛಾದಿತ ಬೆಟ್ಟ ಗುಡ್ಡಗಳು, ಇವೆಲ್ಲವನ್ನೂ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು.

ಕಲೆ-ಸಾಹಿತ್ಯದ ಅರಿವಿಗಾಗಿ ಪ್ರವಾಸ
ದೇಶ ವಿದೇಶಗಳನ್ನು ಸುತ್ತಿ ಅಲ್ಲಿನ ಕಲೆ ಸಂಸ್ಕೃತಿಯನ್ನು ತಿಳಿಯುವ ಮೊದಲು, ನಮ್ಮ ರಾಜ್ಯದ ಕಲೆ- ಸಂಪ್ರದಾಯ, ಆಹಾರ, ರೀತಿ ನೀತಿಗಳನ್ನು ತಿಳಿದುಕೊಳ್ಳಬೇಕಿದೆ. ಇಂಥ ಪ್ರಯತ್ನವನ್ನು ನಾನು ಅನೇಕ ಬಾರಿ ಮಾಡಿದ್ದೇನೆ. ಕರ್ನಾಟಕದ ಸುತ್ತಲಿನ ಬುಡಕಟ್ಟು ಸಮಾಜವನ್ನು ತಿಳಿಯುವುದು, ರಂಗಗೀತೆಗಳ ಹುಟ್ಟು, ಜನಪದ ಕಲಾ ಪ್ರಕಾರಗಳ ಪರಿಚಯ, ಅದರಲ್ಲೂ ತೊಗಲು ಗೊಂಬೆಯಾಟ, ಅಳಿವಿನಂಚಿನಲ್ಲಿರುವ ಹರಿಕಥೆ ಹಾಗೂ ಹರಿಕಥೆ ದಾಸರ ಪರಿಚಯ ಇವೆಲ್ಲವೂ ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸಿದೆ. ಅದಕ್ಕಾಗಿ ಸಾಕಷ್ಟು ಕಡೆ ಸುತ್ತಾಡಿದ್ದೇನೆ, ಮಾಹಿತಿಗಳನ್ನು ಕಲೆ ಹಾಕಿದ್ದೇನೆ.
ಶ್ರೀಲಂಕನ್ ಡೈರೀಸ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಆಯ್ದ ತಂಡದ ಜತೆಗೆ ಶ್ರೀಲಂಕಾಕ್ಕೆ ಹೋಗಿದ್ದೆ. ಇದುವೇ ನನ್ನ ಮೊದಲ ವಿದೇಶ ಪ್ರವಾಸ. ಶ್ರೀಲಂಕಾದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು.ಚಿತ್ರೀಕರಣ ಮಾಡಿದ ಸ್ಥಳವನ್ನು ಬಿಟ್ಟು ಬೇರೆ ಯಾವುದೇ ಪ್ರವಾಸಿ ತಾಣಕ್ಕೂ ಹೋಗುವುದಕ್ಕಾಗಿಲ್ಲವಾದರೂ, ಇದ್ದ ಪರಿಸರದಲ್ಲೇ ತಂಡದೊಂದಿಗೆ ಎಂಜಾಯ್ ಮಾಡಿದ್ದೆ. ʻಎಕ್ಸ್ಟ್ರೀಮ್ ನೇಚರ್ʼ ಎನ್ನುವ ಪದಕ್ಕೆ ಶ್ರೀಲಂಕಾವನ್ನು ಉದಾಹರಣೆ ನೀಡಬಹುದು.
ʻಅಂಬುಜಾʼ ನೆನಪು..
ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಕೆಲವು ಸಿನಿಮಾಗಳ ಚಿತ್ರೀಕರಣ ಬೆಂಗಳೂರು ಆಸುಪಾಸಿನಲ್ಲೇ ಇದ್ದರೆ ಮತ್ತೊಂದಷ್ಟು ಸಿನಿಮಾಗಳ ಹಾಡುಗಳಿಗಾಗಿ ರಾಜ್ಯವನ್ನೇ ಸುತ್ತಾಡಿದ್ದೇವೆ. ಕರ್ನಾಟಕದಾದ್ಯಂತ ಅನೇಕ ಸೀನಿಕ್ ಲೊಕೇಶನ್ ಗಳಿಗೂ ಹೋಗಿದ್ದೇವೆ. ಆದರೆ ಶುಭಾ ಪೂಂಜಾ ಅವರೊಂದಿಗೆ ಅಭಿನಯಿಸಿರುವ ಅಂಬುಜಾ ಸಿನಿಮಾದ ಚಿತ್ರೀಕರಣ ನನಗೆ ಸಾಕಷ್ಟು ನೆನಪುಗಳನ್ನು ಕೊಟ್ಟಿದೆ. ಸಕಲೇಶಪುರ ಹಿಲ್ ಸ್ಟೇಷನ್ ನಲ್ಲಿ ಸುಮಾರು 5ಕಿಮೀ ಕ್ರಮಿಸಲು ಸುಮಾರು 4-5 ಗಂಟೆಗಳ ಚಾರಣ ಮಾಡಿದ್ದೆವು. ಮೌಂಟೆನ್ ಟಾಪ್ ತಲುಪುತ್ತಲೇ ವಿಪರೀತ ಗಾಳಿಯಿಂದಾಗಿ ಸುಮಾರು 24 ಗಂಟೆಗಳ ಕಾಲ ಚಿತ್ರೀಕರಣ ಮಾಡಿದ್ದೆವು. ಆ ದಿನಗಳು ಕಣ್ಣಿಗೆ ಕಟ್ಟಿದಂತಿದೆ.

ಬರುವಾಗ ಏನು ತಂದೆ ?
ಯಾವುದೇ ಪ್ರವಾಸ ಮುಗಿಸಿ ಬರುವಾಗಲೂ ನಾನು ನೆನಪುಗಳ ಜತೆಗೆ ಅಲ್ಲಿನ ಹೂವಿನ ಗಿಡಗಳನ್ನು, ಮರವಾಗಿ ಬೆಳೆಯುವ ಹಣ್ಣಿನ ಗಿಡಗಳನ್ನು ತರುತ್ತೇನೆ. ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ವೇಳೆ ಈ ಪ್ರಯತ್ನ ಮಾಡಿದ್ದೆ. ಆದರೆ ಅಲ್ಲಿನ ಗಿಡಗಳು ನಮ್ಮ ವಾತಾವರಣಕ್ಕೆ ಒಗ್ಗಿಕೊಳ್ಳದ ಕಾರಣ ಅದು ಬದುಕುಳಿಯಲಿಲ್ಲ. ಆದರೂ ನನ್ನ ಪ್ರಯತ್ನವನ್ನು ಮುಂದುವರಿಸುತ್ತಲೇ ಇರುತ್ತೇನೆ.
ಕಾರ್ಪೊರೇಟ್ ಟು ಸಿನಿಮಾ ಟೂರ್
ನಾನು ಸಿನಿಮಾ ರಂಗಕ್ಕೆ ಬರುವ ಮೊದಲು ಸೇಲ್ಸ್ ಆಂಡ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಕೆಲಸಕ್ಕಾಗಿ ಪ್ರಯಾಣ ಮಾಡುವ ವಿಚಾರದಲ್ಲಿ ಎರಡೂ ಒಂದೇ ಎನಿಸಿದೆಯಾದರೂ ಕಾರ್ಪೊರೇಟ್ ಫೀಲ್ಡ್ ನಲ್ಲಿ ʻವಿ ಗೋ ಬ್ಯಾಕ್ ಟು ಸಿಟೀಸ್ʼ. ಆದರೆ ಸಿನಿಮಾ ಹಾಗೂ ರಂಗಭೂಮಿಯ ಕಲ್ಚರ್ ಹಾಗಿಲ್ಲ. ಚಿತ್ರೀಕರಣಕ್ಕಾಗಿ ಹೋಗುವಾಗ ನಾವು ಹೋಗುವ ಜಾಗವೇ ತುಂಬಾ ವಿಭಿನ್ನವಾಗಿರುತ್ತದೆ. ಆ ಜಾಗಗಳಲ್ಲಿ ಶೂಟಿಂಗ್ ಮುಗಿಸಿದ ನಂತರವೂ ಒಂದಷ್ಟು ಒಳ್ಳೆಯ ಸಮಯವನ್ನು ನಾವು ಕಳೆಯಬಹುದು. ವಿಭಿನ್ನ ಅನುಭವಗಳನ್ನು ಪಡೆಯಬಹುದು. ಇಟ್ಸ್ ಮೋರ್ ಬ್ಯೂಟಿಫುಲ್.