Tuesday, October 28, 2025
Tuesday, October 28, 2025

ಆಪೇಕ್ಷಾಗೆ ಜಗತ್ತನ್ನೇ ಸುತ್ತುವ ಅಪೇಕ್ಷೆ!

ನನ್ನ ಮದುವೆಯಾದ ಸಂದರ್ಭಗಳಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಹನಿಮೂನ್ ಟೂರ್ ಅಂತ ಪ್ಲ್ಯಾನ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಖುಷಿಗಾಗಿ ಶ್ರೀಲಂಕಾಗೆ ಹೋಗಿದ್ದೆವು. ಶ್ರೀಲಂಕಾವನ್ನು ಸಾಂಸ್ಕೃತಿಕವಾಗಿ ಉತ್ತರ ಮತ್ತು ದಕ್ಷಿಣ ಎಂದು ಸ್ಪಷ್ಟವಾಗಿ ವಿಭಾಗಿಸಬಹುದು. ದಕ್ಷಿಣದಲ್ಲಿ ರಾವಣನನ್ನು ಪೂಜಿಸುವವರು ಕಾಣಿಸುತ್ತಾರೆ. ರಾವಣನಿಗೆ ಗುಡಿಗಳೂ ಇವೆ. ಉತ್ತರದಲ್ಲಿ ರಾಮನ ಆರಾಧನೆ ಗಮನಿಸಬಹುದು. ನಾನು ಆ ಬಗ್ಗೆ ಇನ್ನಷ್ಟು ಆಳವಾಗಿ ಅಭ್ಯಾಸ ಮಾಡಬೇಕಿದೆ. ಮೊದಲ ಬಾರಿ ಶ್ರೀಲಂಕಾಗೆ ಹೋದಾಗ ನಾನು ಒಂದು ಲೀಟರ್ ನೀರಿಗಾಗಿ 700 ರೂಪಾಯಿ‌ ಕೊಡಬೇಕಾಗಿತ್ತು. ಅಂದರೆ ನಮ್ಮ 350 ರುಪಾಯಿಗಳು.

  • ಶಶಿಕರ ಪಾತೂರು

ಅಪೇಕ್ಷಾ ಪುರೋಹಿತ್ ನಟಿಯಾಗಿ ಹೆಸರಾದವರು. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿಯಾದ ಬಳಿಕ ಕಾಸ್ಟ್ಯೂಮ್ ಡಿಸೈನರಾಗಿ ಗುರುತಿಸಿಕೊಂಡವರು. ಈ ಬಹುಮುಖ ಪ್ರತಿಭಾವಂತೆ ಪ್ರವಾಸದ ಮೂಲಕ ಪ್ರಪಂಚವನ್ನೇ ಸುತ್ತುವ ಕನಸು ಕಂಡವರು.

ನಿಮ್ಮ ಪ್ರಕಾರ ಪ್ರವಾಸ ಅಂದರೇನು?

ನಾನು ಆರಂಭದಿಂದಲೂ ಪ್ರವಾಸವನ್ನು ಮೂರು ವಿಭಾಗವಾಗಿ ಎಂಜಾಯ್ ಮಾಡುತ್ತೇನೆ. ಒಂದು ಲಕ್ಸುರಿ ಟ್ರಿಪ್, ಇನ್ನೊಂದು ಫನ್ ಇವೆಂಟ್ ಟ್ರಿಪ್ ಮತ್ತು ಟೆಂಪಲ್ ರನ್; ಹೀಗೆ ವರ್ಷದಲ್ಲಿ ಮೂರು ರೀತಿ ಟ್ರಿಪ್ ಪ್ಲ್ಯಾನ್ ಹಾಕಿಕೊಂಡಿರುತ್ತೇನೆ. ಇವುಗಳಲ್ಲಿ ಟೆಂಪಲ್ ರನ್ ಮತ್ತು ಫನ್ ಇವೆಂಟ್ ಖಂಡಿತವಾಗಿ ಆಗುತ್ತಿರುತ್ತದೆ. ಆದರೆ ಲಕ್ಸುರಿ ಟ್ರಿಪ್ ಕೆಲವೊಮ್ಮೆ ಎರಡು ವರ್ಷಕ್ಕೊಮ್ಮೆ ಹೋಗೋದೂ ಇದೆ. ದೇವಸ್ಥಾನ ಮತ್ತು ಫನ್ ಇವೆಂಟ್ ದೇಶದೊಳಗೆ ಇರುತ್ತೆ. ಲಕ್ಸುರಿ ಅಂದರೆ ವಿದೇಶ ಪ್ರವಾಸ. ಇದಲ್ಲದೆ ವೃತ್ತಿ ನಿಮಿತ್ತ ಕೂಡ ನಾನು ತುಂಬಾನೇ ಓಡಾಡ್ತಿರ್ತೀನಿ. ವೈಯಕ್ತಿಕವಾಗಿ ‌ನನಗೆ ಬೇರೆ ಬೇರೆ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡುವುದು ಅಂದರೆ ತುಂಬ ಇಷ್ಟ. ಅದೃಷ್ಟಕ್ಕೆ ಪವನ್ ಗೆ ಕೂಡ ಅಂಥದ್ದೇ ಆಸಕ್ತಿ ಇದೆ. ಹೀಗಾಗಿ ಸ್ವಲ್ಪ ಸಮಯ ಸಿಕ್ಕರೂ ನಾವು ಹೆಚ್ಚು ಪ್ರಯಾಣಕ್ಕೆ, ಪ್ರವಾಸಕ್ಕೆ ಆದ್ಯತೆ ಕೊಡುತ್ತೇವೆ.

ಪ್ರವಾಸಗಳಿಂದ‌ ನೀವು ಕಲಿತಿರುವುದೇನು?

ನಾವು ಹೋಗುವ ಪ್ರತಿಯೊಂದು ಜಾಗದಿಂದಲೂ ಏನಾದರೊಂದು ಒಳ್ಳೆಯದನ್ನು ಕಲಿಯುವ ಅವಕಾಶ ಇರುತ್ತದೆ. ಅದು ಹಳ್ಳಿಯಾಗಲೀ, ವಿದೇಶವಾಗಲೀ ಎಲ್ಲ ಪ್ರದೇಶವೂ ಹೊಸದೇನನ್ನೋ ಕಲಿಸುತ್ತದೆ. ಹಾಗೆ ಕಲಿಯುವ ಅಸಕ್ತಿ ನನ್ನದು. 2012 ರಲ್ಲಿ ಒಂದು ಪ್ರಾಜೆಕ್ಟ್ ಗಾಗಿ ಗಜೇಂದ್ರ ಘಡದ ಪಕ್ಕ ಹೋಗಿದ್ದೆ. ಅಲ್ಲಿ ಸುಮಾರು 15 ದಿನಗಳ‌ ಕಾಲ ಇದ್ದೆ. ಅಲ್ಲಿನ ರೈತರ ಬದುಕು ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ‌ಇದೇ ರೀತಿ ಇಡೀ ದೇಶ, ಜಗತ್ತು ಸುತ್ತುವ ಆಸೆ ಇದೆ.

apeksha

ನಿಮಗೆ ತುಂಬಾನೇ ವಿಶೇಷ ಅನುಭವ ತಂದುಕೊಟ್ಟ ಪ್ರವಾಸ ಯಾವುದು?

ನಾನು ಭೇಟಿ ಕೊಟ್ಟ ದೇಶಗಳಲ್ಲೇ ಅತ್ಯಂತ ವಿಭಿನ್ನ ಅನುಭವ ಎದುರಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ. ಭಾರತಕ್ಕೆ ಹೋಲಿಸಿದರೆ ಸಾಂಸ್ಕೃತಿಕವಾಗಿ ತುಂಬ ವ್ಯತ್ಯಾಸ ಇರುವ ದೇಶ ಅದು. ಬುಡಕಟ್ಟು ಮಾದರಿಯಲ್ಲಿರುವ ಅವರ ರೀತಿ ನೀತಿ ನೋಡಿದಾಗ ಬಹಳ ಕುತೂಹಲ ಮೂಡಿಸಿತ್ತು. ಅಲ್ಲಿನ ಜೀವನ, ಆಹಾರ ಪದ್ಧತಿ ಎಲ್ಲವೂ ಕೂಡ ಸಿಕ್ಕಾಪಟ್ಟೆ ವಿಭಿನ್ನವಾಗಿತ್ತು. ಒಂದು ಕಡೆ ಕಡಲತೀರ ಮತ್ತೊಂದೆಡೆ ಒಣಭೂಮಿ ಎನ್ನುವುದು ಕೂಡ ಆಸಕ್ತಿದಾಯಕ ವಿಚಾರವೇ ಆಗಿತ್ತು. ಜೊಹಾನ್ಸ್ ಬರ್ಗ್ ನಲ್ಲಿ ಸಫಾರಿಗೆ ಹೋಗಿದ್ದೆ. ಅಲ್ಲಿ ಸಿಂಹಗಳದ್ದೇ ಕಾರುಬಾರು. ನಾನು ಸಿಂಹದ ಮರಿಗಳನ್ನು ಕೈಗಳಲ್ಲೇ ಎತ್ತಾಡಿದ್ದೇನೆ. ಅವುಗಳ ಕುಟುಂಬದ ಜತೆ ಕಳೆದ ಸಮಯ ನಿಜಕ್ಕೂ ವಿಶೇಷವಾಗಿತ್ತು.

ನಿಮ್ಮ ಮೊದಲ‌ ಪ್ರವಾಸದ ನೆನಪುಗಳನ್ನು ಹಂಚಿಕೊಳ್ಳುವಿರಾ?

ನಾನು ಹುಟ್ಟಿ ಬೆಳೆದಿದ್ದು ಬಾಗಲಕೋಟೆಯಲ್ಲಿ. ಶಾಲಾ ದಿನಗಳಲ್ಲಿ ನಮ್ಮನ್ನು ಬೆಳಗಾವಿ ಜಿಲ್ಲೆಯ ನವಿಲು ತೀರ್ಥಕ್ಕೆ ಕರೆದುಕೊಂಡು‌ ಹೋಗಿದ್ದರು. ಆಗ ನವಿಲು ತೀರ್ಥದ ಜನಪದ ಇತಿಹಾಸದ ಬಗ್ಗೆ ಕೂಡ ವಿವರಿಸಿದ್ದರು. ಮಲಪ್ರಭಾ ನದಿ‌ ಗುಡ್ಡದ ಬದಿಯಿಂದ ಹರಿಯುವುದನ್ನು ಕಂಡು ಗುಡ್ಡದ ಮೇಲೆ ನವಿಲು ನಕ್ಕಿತ್ತಂತೆ. ನವಿಲಿನ ಕುಹಕ ಕಂಡು ಕುಪಿತಗೊಂಡ ನದಿ ಗುಡ್ಡವನ್ನೇ ಸೀಳಿಕೊಂಡು ಹರಿದಿದೆ. ಹೀಗಾಗಿ ನವಿಲಿನ‌ಗುಡ್ಡ ಸೀಳಿಕೊಂಡು ಹರಿವ ನದಿಗೆ ನವಿಲು ತೀರ್ಥ ಎನ್ನುವ ಹೆಸರಾಯಿತು ಎನ್ನಲಾಗಿದೆ. ಈ ಕಥೆಗೆ ಪೂರಕವಾಗಿ ಅಲ್ಲಿ ಕಲ್ಲಲ್ಲೇ ಎರಡು ಭಾಗವಾಗಿರುವ ನವಿಲನ್ನು ಕೆತ್ತಿರುವ ಶಿಲ್ಪವಿತ್ತು. ಐದಾರು ವರ್ಷಗಳ ಹಿಂದೆ ಮತ್ತೊಮ್ಮೆ ಅಲ್ಲಿಗೆ ಹೋಗಿದ್ದೆ. ಎರಡು ದಿನಗಳ ಟೂರ್ ಗೆ ಹೇಳಿ ಮಾಡಿಸಿದ ಜಾಗ ಅದು. ಈಗ ಅಲ್ಲೇ ಊಟ, ತಿಂಡಿ ವ್ಯವಸ್ಥೆಯೂ ಇದೆ. ಆದರೆ ಅದಕ್ಕಿಂತ ನಾವೇ ಅಲ್ಲಿಗೆ ಮನೆಯಿಂದ ಆಹಾರ ಕೊಂಡೊಯ್ದು ಸೇವಿಸಬಹುದಾದ ತಾಣ ಎನ್ನಬಹುದು.

ನಿಮ್ಮ ಮೊದಲ ವಿದೇಶ ಪ್ರವಾಸದ ಅನುಭವ ಹೇಗಿತ್ತು?

ನಾನು ಮೊದಲ ಬಾರಿ ವಿದೇಶಕ್ಕೆ ಹೋಗಿದ್ದು ಸಿನಿಮಾ ಪ್ರಚಾರಕ್ಕಾಗಿ.‌ ಕಾಫಿತೋಟ ಸಿನಿಮಾಗೆ ಸಂಬಂಧಿಸಿದಂತೆ ಕತಾರ್ ಗೆ ಹೋದ ನಾನು ಪ್ರಮೋಶನ್ಸ್ ಮುಗಿದ ಬಳಿಕ ಕೂಡ ಒಂದೆರಡು ದಿನ ಹೆಚ್ಚೇ ಇದ್ದು ಬಂದೆ. ನಾನು ಯಾವಾಗಲೂ ಪ್ರವಾಸ ಹೋದಾಗ ಅಲ್ಲಿನ ಲೈಫ್ ಸ್ಟೈಲ್ ಬಗ್ಗೆ ಗಮನ‌ಹರಿಸುತ್ತೇನೆ. ತುಂಬಾ ಸಿರಿವಂತಿಕೆ ತುಂಬಿದ ಕಟ್ಟಡಗಳಿದ್ದವು. ಮಾಲ್ ಗಳ‌ ಒಳಗೇ ಬೋಟ್ ಹೌಸ್ ಥರ ಮಾಡಿಕೊಂಡಿದ್ದಾರೆ. ಆನಂತರ ಕೂಡ ನಾನು ಮಿಡ್ಲ್ ಈಸ್ಟ್ ಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಡಿಸೆಂಬರ್ ಸಂದರ್ಭದಲ್ಲಿ ನಾವು ಹೆಚ್ಚು ದುಬೈಗೆ ಹೋಗಲು ಪ್ಲ್ಯಾನ್ ಮಾಡುತ್ತೇವೆ. ಅದಕ್ಕೆ ಪ್ರಮುಖ ಕಾರಣ ಈ ಸಮಯದಲ್ಲಿ ಬಿಸಿಲಿನ ತಾಪಮಾನ ಕಡಿಮೆಯಾಗಿರುತ್ತದೆ. ಎರಡನೆಯದಾಗಿ ಕ್ರಿಸ್ಮಸ್ ರಜಾದಿನಗಳು‌ ಕೂಡ ಇರುತ್ತವೆ. ಅದು ಕೂಡ ಶ್ರೀಮಂತಿಕೆಗೆ ಹೆಸರಾದ ದೇಶ. ಅರಬ್ ಮಹಿಳೆಯರು ಬುರ್ಖಾ ತೊಟ್ಟರು ಕೂಡ ಅವುಗಳು ಡಿಸೈನರ್ ವೇರ್ ಆಗಿರುತ್ತವೆ. ಜನಗಳೂ ಅಷ್ಟೇ. ನನಗೆ ಪರಿಚಿತರಾದ ಅಲ್ಲಿನ ಸಾಕಷ್ಟು ಮಂದಿ ತುಂಬ ಆತ್ಮೀಯವಾಗಿಯೇ ವರ್ತಿಸಿದ್ದಾರೆ.

apurva purohit 1

ವಿದೇಶ ಪ್ರವಾಸದ ಸಂದರ್ಭದಲ್ಲಿ ನಿಮಗೆ ಆಹಾರದ ವಿಚಾರದಲ್ಲಿ ಸಮಸ್ಯೆಗಳು ಎದುರಾಗಿದ್ದು ಇದೆಯೇ?

ನಾನು ಸಸ್ಯಾಹಾರಿ ಆಗಿರುವ ಕಾರಣ ವಿದೇಶಗಳಲ್ಲಿ ಆಹಾರ ಸಮಸ್ಯೆ ಎದುರಾಗುವುದು ಸಾಮಾನ್ಯ. ಆದರೆ ಕೆಲವೊಂದೆಡೆ ಬ್ರೆಡ್, ಮತ್ತೆ ಕೆಲವೆಡೆ ಬಾಯಿಲ್ಡ್ ರೈಸ್ ಇವುಗಳಿಗೆಲ್ಲ ಹೊಂದಿಕೊಳ್ಳುತ್ತೇನೆ. ಕತಾರ್ ನಲ್ಲಿ ಭಾರತೀಯ ಸ್ನೇಹಿತರು ಇರುವ ಕಾರಣ ಅಂಥ ಸಮಸ್ಯೆಗಳು ಆಗಿಲ್ಲ.‌ಆದರೆ ದಕ್ಷಿಣ ಆಫ್ರಿಕಾದಲ್ಲಿ ಸಮಸ್ಯೆ ಆಗಿದ್ದು ನಿಜ. ಹಾಗೆ ನೋಡಿದರೆ ಉತ್ತರ ಕರ್ನಾಟಕದವಳಾದ ನನ್ನ ಮೆಚ್ಚಿನ ಆಹಾರದಲ್ಲಿ ಪಾವ್ ಬಾಜಿ, ಪುಲ್ಕ ಮೊದಲಾದವು ಬೆಂಗಳೂರಿನಲ್ಲೂ ಅಪರೂಪ ಎಂದೇ ಹೇಳಬಹುದು. ಆಹಾರದ ವಿಚಾರದಲ್ಲಿ ಮುಂಬೈ ಅಂದರೆ ನನಗೆ ಆಪ್ತ.

ಮುಂಬೈ ಜತೆಗಿನ ನಿಮ್ಮ ಅನುಬಂಧದ ಬಗ್ಗೆ ಹೇಳಿ

ಆಗಲೇ ಹೇಳಿದಂತೆ ಮೂಲತಃ ನಾನು ಉತ್ತರ ಕರ್ನಾಟಕದವಳು. ನನಗೆ ಮಹಾರಾಷ್ಟ್ರದ ಇನ್ ಫ್ಲುಯೆನ್ಸ್ ಇರುವುದರಿಂದ ನನಗೆ ಮುಂಬೈ ಅಂದರೆ ತುಂಬಾ ಇಷ್ಟ. ಆದರೆ ಅಲ್ಲಿ ದಿನ ಶುರುವಾಗುವುದೇ ಮಧ್ಯಾಹ್ನ 12ರ ಬಳಿಕ. ತಡರಾತ್ರಿ ಎಲ್ಲ ಬೆಳಕಿನಿಂದ ಕೂಡಿರುತ್ತದೆ. ಪುಣೆ ಅಂದರೆ ನಮ್ಮ ಮೈಸೂರಿನ ಥರ ಪ್ರಶಾಂತವಾಗಿರುತ್ತದೆ. ಅದೇ ಮುಂಬೈ ನಮ್ಮ ಬೆಂಗಳೂರಿನಂತೆ. ಆದರೆ ಸಮುದ್ರ ತೀರ ಹೊಂದಿರುವ ಮುಂಬೈ ಸಿ ಆಕಾರದಲ್ಲೇ ಇದೆ. ಮುಂಬೈ ಎಷ್ಟೇ ಬೆಳೆದರೂ ಎತ್ತರಕ್ಕೆ ಬೆಳೆಯೋದಷ್ಟೇ ಸಾಧ್ಯ. ಉದ್ದುದ್ದ ಬೆಳೆಯಲು ಸಾಧ್ಯವಿಲ್ಲ. ನವೀ ಮುಂಬೈ ಕೂಡ ಅದ್ಭುತವಾಗಿದೆ. ಮುಂಬೈನಲ್ಲಿ ಜುಹು ನಮ್ಮ ಬೆಂಗಳೂರಿನ ಗಾಂಧಿನಗರದಂತೆ. ಬಾಂದ್ರ ಕೂಡ ಹಾಗೆಯೇ. ನಾನು ಹೋದಾಗಲೆಲ್ಲ ಜುಹುವಲ್ಲೇ ಉಳಿದುಕೊಳ್ಳುತ್ತೇನೆ. ಆ ಸರ್ವಿಸ್ ಅಪಾರ್ಟ್ ಮೆಂಟ್ ಮುಂದೆಯೇ ಬೀಚ್ ಇದೆ. ಸಂಜೆ ಹೋದರೆ ಪಾವ್ ಬಾಜಿ ಮೊದಲಾದ ಚಾಟ್ಸ್ ಎಲ್ಲವೂ ಇರುತ್ತವೆ. ಅಲ್ಲಿ ಕುರ್ಚಿಗಳಿರುವುದಿಲ್ಲ. ಮರಳಿನ ಮೇಲೆ ಜಮಖಾನೆ ಹಾಸಿ ಮಾರಾಟಕ್ಕಿಟ್ಟಿರುತ್ತಾರೆ. ಅಲ್ಲೇ ಕೆಳಗೆ ಕುಳಿತು ಅಲೆಗಳನ್ನು ನೋಡುತ್ತಾ ತಿನ್ನುವುದೊಂದು ಸೊಗಸು. ಬೆಂಗಳೂರಿನಲ್ಲಿ ತಂಗಲು ಶುರುಮಾಡಿದ ಬಳಿಕ ಮುಂಬೈಗಿಂತಲೂ ಬೆಂಗಳೂರು ಇಷ್ಟವಾಗಿದೆ.

ಪವನ್ ಮತ್ತು ನೀವು ಪ್ರೇಮಿಸಿ ವಿವಾಹವಾದವರು. ಮಧುಚಂದ್ರಕ್ಕಾಗಿ ಪಯಣಿಸಿದ್ದೆಲ್ಲಿಗೆ?

ಆ ಸಂದರ್ಭಗಳಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಹನಿಮೂನ್ ಟೂರ್ ಅಂತಾನೇ ಪ್ಲ್ಯಾನ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಖುಷಿಗಾಗಿ ಶ್ರೀಲಂಕಾಗೆ ಹೋಗಿದ್ದೆವು. ಶ್ರೀಲಂಕಾವನ್ನು ಸಾಂಸ್ಕೃತಿಕವಾಗಿ ಉತ್ತರ ಮತ್ತು ದಕ್ಷಿಣ ಎಂದು ಸ್ಪಷ್ಟವಾಗಿ ವಿಭಾಗಿಸಬಹುದು. ದಕ್ಷಿಣದಲ್ಲಿ ರಾವಣನನ್ನು ಪೂಜಿಸುವವರು ಕಾಣಿಸುತ್ತಾರೆ. ರಾವಣನಿಗೆ ಗುಡಿಗಳೂ ಇವೆ. ಉತ್ತರದಲ್ಲಿ ರಾಮನ ಆರಾಧನೆ ಗಮನಿಸಬಹುದು. ನಾನು ಆ ಬಗ್ಗೆ ಇನ್ನಷ್ಟು ಆಳವಾಗಿ ಅಭ್ಯಾಸ ಮಾಡಬೇಕಿದೆ. ಮೊದಲ ಬಾರಿ ಶ್ರೀಲಂಕಾಗೆ ಹೋದಾಗ ನಾನು ಒಂದು ಲೀಟರ್ ನೀರಿಗಾಗಿ 700 ರುಪಾಯಿ‌ ಕೊಡಬೇಕಾಗಿತ್ತು. ಅಂದರೆ ಅಂದಿನ ಲೆಕ್ಕಾಚಾರದಲ್ಲಿ ಅದು ನಮ್ಮ 350 ರುಪಾಯಿಗಳು ಎಂದೇ ಹೇಳಬಹುದು. ಅಲ್ಲಿ ಬೆಂಟೋಟ ಎನ್ನುವುದು ನಮ್ಮ ಸಕಲೇಶಪುರದಂತೆ. ಅಲ್ಲಿ ಪ್ಯಾರಾಗ್ಲೈಡಿಂಗ್ ಎಲ್ಲ ಮಾಡುತ್ತಾರೆ.‌

apeksha purohith

ಪ್ರಕೃತಿ ಮನೋಹರ ತಾಣಗಳಲ್ಲಿ ನಿಮಗೆ ಇಷ್ಟವಾಗುವ ಪ್ರದೇಶಗಳು ಯಾವುವು?

ರಾಜ್ಯದೊಳಗೆ ಸಕಲೇಶಪುರ. ಇನ್ನು ಬೆಳಗಾವಿಯಲ್ಲಿ ಒಳಭಾಗಕ್ಕೆ ಹೋದರೆ ಅದು ಕೂಡ ಸಕಲೇಶಪುರದ ಹಾಗೆ. ದಾಂಡೇಲಿ, ಅಂಬೋಲಿ ಘಾಟ್ ಮೊದಲಾದ ಅರಣ್ಯ ಪ್ರದೇಶ ಅತ್ಯಂತ ಸುಂದರವಾಗಿವೆ.‌ ವಾತಾವರಣ ಕೂಡ ಚೆನ್ನಾಗಿವೆ. ಕೆಲವೊಮ್ಮೆ ಪ್ರಕೃತಿಗೆ ಹೊಂದಿಕೊಂಡಂತೆ ಸಾಂಸ್ಕೃತಿಕ ಆಚರಣೆಗಳು ಕೂಡ ಇರುತ್ತವೆ. ಉದಾಹರಣೆಗೆ ರಾಜಸ್ಥಾನ ನನ್ನ ಫೇವರಿಟ್ ಪ್ಲೇಸ್. ಅಲ್ಲಿನ ಸಂಸ್ಜೃತಿ ಆಕರ್ಷಕ.

ನಿಮ್ಮ ಟೆಂಪಲ್ ರನ್ ಪ್ರವಾಸದ ರೂಪುರೇಷೆ ಹೇಗಿರುತ್ತವೆ?

ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಂತ್ರಾಲಯಕ್ಕೆ ಹೋಗುತ್ತಿರುತ್ತೇನೆ. ಶೃಂಗೇರಿ, ತಿರುಪತಿ ದೇವರಿಗೂ ನಾನು ಭಕ್ತೆಯೇ. ಆದರೆ ಪ್ಲ್ಯಾನ್ ಹಾಕದೆಯೇ ದೇಗುಲ ಸಂದರ್ಶನ ಮಾಡುವುದೂ ಇದೆ. ಉದಾಹರಣೆಗೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಕೊರಗಜ್ಜ ದೇವಸ್ಥಾನಕ್ಕೆ ಹೋಗಿದ್ದೆ. ಕಾರಣ, ಮುಂಬೈನಲ್ಲಿ ಕೊರಗಜ್ಜ ಎನ್ನುವ ಬೋರ್ಡ್ ನೋಡಿದಾಗ ಕುತ್ತಾರು ಕೊರಗಜ್ಜನ‌‌ ಮೂಲಸ್ಥಾನದ ಬಗ್ಗೆ ಕೇಳಿ ತಿಳಿದಿದ್ದೆ. ಇದೇ ದಾರಿಯಲ್ಲಿ ದೈವಸ್ಥಾನ ಇದೆ ಎಂದು ಅರಿತಾಗ ಅಲ್ಲಿಗೂ ಹೋಗಿದ್ದೆ. ಅಲ್ಲಿ ಚಕ್ಕುಲಿ, ಸಾರಾಯಿ ಪ್ರಸಾದ ನೀಡುವುದು ಕಂಡು ಅಚ್ಚರಿಯಾಗಿತ್ತು. ವಿವಿಧ ರೀತಿಯ ಆಚರಣೆಗಳನ್ನು ನಾನು ಸಂಭ್ರಮಿಸುತ್ತೇನೆ. ಶ್ರೀಲಂಕಾಗೆ ಹೋದಾಗ ಬುದ್ಧನ ಕ್ಷೇತ್ರಗಳನ್ನು ಸಂದರ್ಶಿಸಿದ್ದೇನೆ.‌

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್