ಶೀಘ್ರದಲ್ಲೇ ಜಪಾನ್‌ನಲ್ಲಿ ಚಂದನಾ ಠೀವಿ !!
ಮದುವೆಯಾದ ಹೊಸದರಲ್ಲಿ ಪತಿ ಪ್ರತ್ಯಕ್ಷ್ ಅವರ ಜತೆ ಬಾಲಿಗೆ ಮೊದಲ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಹೋಗಿದ್ದೆ. ಬಾಲಿಯಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿನ ಸಂಸ್ಕೃತಿಯಂತೂ ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಂತಿದೆ. ರಾಮಾಯಣವನ್ನು ಅನುಸರಿಸುವ, ಮೆಚ್ಚಿಕೊಂಡಿರುವವರೇ ಅಲ್ಲಿ ಹೆಚ್ಚಿದ್ದಾರೆ. ರಾಮ ಹಾಗೂ ವಿಷ್ಣುವನ್ನು ಪ್ರೀತಿಯಿಂದ ಪೂಜಿಸುತ್ತಾರೆ. ನಾನು ಅಲ್ಲಿದ್ದಷ್ಟೂ ದಿನ ಎಲ್ಲರನ್ನೂ ಎಲ್ಲವನ್ನೂ ಭಾರತೀಯರೊಂದಿಗೆ, ನಮ್ಮ ದೇಶದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಲೇ ಇದ್ದೆ. ಅಲ್ಲಿ ಎಲ್ಲವೂ ನಮ್ಮ ಬೇರಿನೊಂದಿಗೆ ಬೆರೆತುಕೊಂಡಿರುವುದಂತೂ ನಿಜ.
‘ರಾಜ ರಾಣಿ' ಧಾರಾವಾಹಿಯ ಎಡವಟ್ಟು ಚುಕ್ಕಿಯಾಗಿ, 'ಬಿಗ್ ಬಾಸ್ ಕನ್ನಡ ಸೀಸನ್ 7' ಶೋನಲ್ಲಿ ಸ್ಪರ್ಧಿಯಾಗಿ, 'ಹಾಡು ಕರ್ನಾಟಕ' ಶೋನಲ್ಲಿ ನಿರೂಪಕಿಯಾಗಿಯೂ ಗುರುತಿಸಿಕೊಂಡವರು ನಟಿ ಚಂದನಾ ಅನಂತಕೃಷ್ಣ. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನಾನು ಹಾಡಬಲ್ಲೆ, ಭಾವನಾತ್ಮಕ ದೃಶ್ಯಗಳಿಗೆ ಜೀವ ತುಂಬಬಲ್ಲೆ ಎಂದು ತೋರಿಸಿಕೊಟ್ಟ ಈ ಬಹುಮುಖ ಪ್ರತಿಭೆ, ಈ ನಡುವೆ ʻಇನ್ ಹಿಸ್ ನೇಮ್ʼ ಕಿರುಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಹೆಸರುಮಾಡಿದ್ದಾರೆ. ಅವರ ವೈವಾಹಿಕ ಜೀವನಕ್ಕೆ ವರುಷ ತುಂಬುವ ಈ ಸಂದರ್ಭದಲ್ಲಿ ಪ್ರವಾಸ – ಪ್ರಯಾಸದ ಅನುಭವಗಳೊಂದಿಗೆ ಚಂದನಾ ಪ್ರವಾಸಿ ಪ್ರಪಂಚದಲ್ಲಿ ಮಾತನಾಡಿದ್ದು ಹೀಗೆ.
ಟ್ರಾವೆಲ್ ಫ್ರೀಕ್ ಜೋಡಿ ನಮ್ಮದು
ಚಿಕ್ಕವಯಸ್ಸಿನಿಂದಲೂ ನನಗೆ ಸುತ್ತಾಡುವುದೆಂದರೆ ಬಹಳ ಹುಚ್ಚು. ಆದರೆ ಒಬ್ಬಳೇ ಆಗಿ ಹೋಗುವುದಕ್ಕೆ ಮನೆಯಲ್ಲಿ ಬಿಡುತ್ತಿರಲಿಲ್ಲ, ಆರ್ಥಿಕ ಸಮಸ್ಯೆ ಕಾರಣದಿಂದ ಎಲ್ಲಾದರೂ ಪ್ರವಾಸಕ್ಕೆಂದು ಕರೆದುಕೊಂಡು ಹೋಗಲು ಅವರಿಂದ ಆಗುತ್ತಲೂ ಇರಲಿಲ್ಲ. ಅಮ್ಮ ಆಗಾಗ ಹೇಳುತ್ತಲೇ ಇದ್ದಳು,” ಮದ್ವೆ ಆದ್ಮೇಲೆ ಗಂಡನ್ ಜತೆಗೆ ಹೇಗಾದರೂ ಸುತ್ತಾಡು, ಈಗ ಬೇಡ” ಅಂತ..ಈಗ ಮದುವೆಯಾಗಿದೆ. ಗಂಡನೂ ಟ್ರಾವೆಲ್ ಫ್ರೀಕ್. ಅವರ ಜತೆ ಬಿಡುವಾದಾಗಲೆಲ್ಲಾ ಪ್ರವಾಸ ಹೋಗುತ್ತೇನೆ.
ಕರುನಾಡು ನನ್ನುಸಿರು
ಕರ್ನಾಟಕದ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ಹೆಸರು ಮಾಡಿರುವ ರಾಜ್ಯ. ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲೂ ಇತಿಹಾಸವನ್ನು ಸಾರುವ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ತಾಣಗಳಿವೆ. ಅಂಥ ತಾಣಗಳಿಗೆ ಭೇಟಿ ನೀಡುವುದೆಂದರೆ ನನಗಿಷ್ಟ. ನಾನು ಯಾವುದೇ ಜಾಗಕ್ಕೆ ಹೋದರೂ ಅಲ್ಲಿನ ಪರಿಸರ, ಇತಿಹಾಸ, ಸ್ಥಳ ಮಹಿಮೆಯ ಬಗ್ಗೆ ತಿಳಿದುಕೊಳ್ಳುತ್ತೇನೆ. ಕನ್ನಡಿಗಳಾಗಿ, ಕನ್ನಡದ ಮಣ್ಣಲ್ಲಿ ಹುಟ್ಟಿ ಅಷ್ಟೂ ಮಾಡದಿದ್ದರೆ ಹೇಗೆ ?

ಹೋಗುವಾ ಹೋಗುವಾ ಶ್ರೀಲಂಕಾ..
ಲಕ್ಷ್ಮೀ ನಿವಾಸ ಚಿತ್ರೀಕರಣಕ್ಕಾಗಿ ಆಯ್ದ ತಂಡದೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಆ ತಂಡದಲ್ಲಿ ನಾನೂ ಇದ್ದೆ. ಆದರೆ ಬೇಸರದ ವಿಚಾರವೆಂದರೆ ಶೂಟಿಂಗ್ ಗೆ ಎಂದು ಹೋದಾಗ ಅಲ್ಲಿ ಯಾವುದೇ ಜಾಗವನ್ನು ನೋಡುವುದಕ್ಕಾಗುವುದಿಲ್ಲ. ಜಾಮ್ ಪ್ಯಾಕ್ಡ್ ಆಗಿ ಶೆಡ್ಯೂಲ್ ಪ್ಲ್ಯಾನ್ ಮಾಡಿ, ಇಷ್ಟು ಸೀನ್ ಮಾಡಲೇಬೇಕೆಂದಿರುತ್ತೆ. ಆದ್ದರಿಂದ ಟ್ರಿಪ್ ರೀತಿಯಲ್ಲಿ ಎಂಜಾಯ್ ಮಾಡಲಾಗಲಿಲ್ಲ. ಆದರೆ ಅದೊಂಥರಾ ಬೇರೆಯದೇ ಅನುಭವ. ಶೂಟಿಂಗ್ ಮಾಡಿದ್ದ ಜಾಗದಲ್ಲಿಯೇ ಒಳ್ಳೆಯ ಸಮಯ ಕಳೆದೆವು. ನಾವು ಹೋಗಿದ್ದ ಸಮಯದಲ್ಲಿ ಸಿಕ್ಕಾಪಟ್ಟೆ ಬಿಸಿಲಿತ್ತು. ಶೂಟಿಂಗ್ ಮಾಡುತ್ತಲೇ ಬಿಸಿಲಿನ ಬೇಗೆಗೆ ಬೆಂಡಾಗಿಬಿಟ್ಟಿದ್ದೆವು. ಆದರೂ ತಂಡದ ಎಲ್ಲರ ಜತೆ ಹೊರದೇಶದಲ್ಲಿ ಶೂಟಿಂಗ್ ಮಾಡಿದ ಅನುಭವ ಲೈಫ್ ಟೈಮ್ ಮೆಮೊರೀಸ್ ನೀಡಿದೆ.
ಡ್ಯಾನ್ಸ್ ವಿಥ್ ಶ್ರೀಲಂಕನ್ ಆರ್ಟಿಸ್ಟ್
ನಾನು ಮೂಲತಃ ಭರತನಾಟ್ಯ ಕಲಾವಿದೆಯಾಗಿರುವುದರಿಂದ ಯಾವುದೇ ದೇಶ ಅಥವಾ ರಾಜ್ಯಗಳಿಗೆ ಹೋದರೂ ಅಲ್ಲಿನ ಶಾಸ್ತ್ರೀಯ ಅಥವಾ ಜಾನಪದ ನೃತ್ಯ ಪ್ರಕಾರಗಳನ್ನು ತಿಳಿಯುವ ಆಸೆಯಿದೆ. ಬಾಲಿಗೆ ಹೋದಾಗ ಬಲಿನೀಸ್ ಶೋಗೆ ಹೋಗಿದ್ದೆ, ಕೇರಳಕ್ಕೆ ಹೋದಾಗ ಮೋಹಿನಿಯಾಟ್ಟಂ ನೋಡಿದ್ದೆ, ಶ್ರೀಲಂಕನ್ ಡ್ಯಾನ್ಸ್ ನೋಡಿದ್ದೆ, ತಿಳಿದುಕೊಂಡಿದ್ದೆ. ಆದರೆ ಶ್ರೀಲಂಕಾದಲ್ಲೇ ಹೋಗಿ ಅಲ್ಲಿನ ನೃತ್ಯ ಪ್ರಕಾರವನ್ನು ನೋಡುವ, ಅವರ ಜತೆ ಹೆಜ್ಜೆ ಹಾಕುವ ಅವಕಾಶವೂ ನನಗೆ ಸಿಕ್ಕಿದ್ದು ಖುಷಿ ತಂದಿದೆ.
ಇನ್ ಹಿಸ್ ನೇಮ್
ಇನ್ ಹಿಸ್ ನೇಮ್ ನನ್ನ ಮನಸ್ಸಿಗೆ ತೀರಾ ಆಪ್ತವಾದ ಸುಂದರ ದೃಶ್ಯಕಾವ್ಯ. ಪಹಲ್ಗಾಮ್ ಅಟ್ಯಾಕ್‌ನಲ್ಲಿ ಕರ್ನಾಟಕದವರು ಕೂಡ ಜೀವ ಕಳೆದುಕೊಂಡಿದ್ದರು. ಮದುವೆಯಾಗಿ ಗಂಡನ ಜತೆಗೆ ಹನಿಮೂನ್‌ಗೆ ಬಂದಿದ್ದ ಮಹಿಳೆ, ಮನೆಗೆ ಹೋಗುವಾಗ ವಿಧವೆಯಾಗಿ ಹೋಗಿದ್ದನ್ನು ಇಡೀ ವಿಶ್ವ ನೋಡಿದೆ. ಇದೇ ಕಥೆಯನ್ನು ನಾನು ತೆರೆ ಮೇಲೆ ತಂದಿದ್ದೆ. ಮೊದಲ ಬಾರಿಗೆ ನಟನೆ ಹಾಗೂ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದೆ. ಕಾಶ್ಮೀರದಲ್ಲಿ ಈ ಕಿರುಚಿತ್ರದ ಚಿತ್ರೀಕರಣ ಸಾಧ್ಯವಾಗದ ಕಾರಣ ಕಾಶ್ಮೀರದ ಅನುಭವ ನೀಡುವ ಊಟಿಯಲ್ಲಿರುವ ಬೆಟ್ಟಗಳಲ್ಲಿ ಚಿತ್ರೀಕರಣ ನಡೆಸಬೇಕಾಗಿತ್ತು. ಅದೂ ಸುಲಭವಾಗಿರಲಿಲ್ಲ. ಅಲ್ಲಿನ ಮಿಲಿಟರಿಗೆ ಸೇರಿದ ಜಾಗದಲ್ಲಿ ಶೂಟಿಂಗ್ ಮಾಡುವುದಕ್ಕೆ ಸಾಕಷ್ಟು ಪ್ರೊಸೀಜರ್‌ಗಳನ್ನು ಅನುಸರಿಸಬೇಕಾಗಿತ್ತು. ಆ ದಿನಗಳ ಅನುಭವಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ಬಿಗ್ ಬಾಸ್ ಮನೆ ಟೂರಿಸ್ಟ್ ಸ್ಪಾಟ್
ನಾನು ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದೆ. ಆ ದಿನಗಳು ಜೀವನದ ಹೊಸ ಪಾಠಗಳನ್ನು ನನಗೆ ಹೇಳಿಕೊಟ್ಟಿದೆ. ಖುಷಿಯೆಂದರೆ ಬಿಗ್ ಬಾಸ್ ಎಂಬುದು ಸದ್ಯದ ಟ್ರೆಂಡಿಂಗ್ ಟಾಪಿಕ್. ಬಿಗ್ ಬಾಸ್ ಶೋ ಎಂದರೆ ಎಲ್ಲರಿಗೂ ಒಂಥರಾ ಖುಷಿ, ಅದಕ್ಕಿಂತ ಹೆಚ್ಚಿಗೆ ಕ್ರೇಜ್. ಆದರೆ ಜನರಿಗೆ ಬಿಗ್ ಬಾಸ್ ಮನೆ ಹೇಗಿರುತ್ತದೆ ಎಂದು ತಿಳಿಯುವ ಆಸೆಯಿರುತ್ತದೆ. ಈ ನಿಟ್ಟಿನಲ್ಲಿ ಜಾಲಿವುಡ್ ಯೋಚಿಸಿ, ಶೋ ಮುಗಿದ ನಂತರ ಬಿಗ್ ಬಾಸ್ ಮನೆಯನ್ನು ಪ್ರವಾಸಿ ತಾಣವಾಗಿ ಮಾಡುತ್ತಾರೆ. ಪಬ್ಲಿಕ್ ಗೆ ಇಲ್ಲಿಗೆ ವಿಸಿಟ್ ಮಾಡುವ ಅವಕಾಶ ನೀಡುವುದು ಖುಷಿಯ ವಿಚಾರ.
ʻಪ್ರತ್ಯಕ್ಷʼವಾಗಿ ಕಂಡ ಬಾಲಿ
ಮದುವೆಯಾದ ಹೊಸದರಲ್ಲಿ ಪತಿ ಪ್ರತ್ಯಕ್ಷ್ ಅವರ ಜತೆ ಬಾಲಿಗೆ ಮೊದಲ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಹೋಗಿದ್ದೆ. ಬಾಲಿಯಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿನ ಸಂಸ್ಕೃತಿಯಂತೂ ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಂತಿದೆ. ರಾಮಾಯಣವನ್ನು ಅನುಸರಿಸುವ, ಮೆಚ್ಚಿಕೊಂಡಿರುವವರೇ ಅಲ್ಲಿ ಹೆಚ್ಚಿದ್ದಾರೆ. ರಾಮ ಹಾಗೂ ವಿಷ್ಣುವನ್ನು ಪ್ರೀತಿಯಿಂದ ಪೂಜಿಸುತ್ತಾರೆ. ನಾನು ಅಲ್ಲಿದ್ದಷ್ಟೂ ದಿನ ಎಲ್ಲರನ್ನೂ ಎಲ್ಲವನ್ನೂ ಭಾರತೀಯರೊಂದಿಗೆ, ನಮ್ಮ ದೇಶದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಲೇ ಇದ್ದೆ. ಅಲ್ಲಿ ಎಲ್ಲವೂ ನಮ್ಮ ಬೇರಿನೊಂದಿಗೆ ಬೆರೆತುಕೊಂಡಿರುವುದಂತೂ ನಿಜ.

ದೇಗುಲ ದರ್ಶನ
ನಾನು ಕಲಾವಿದೆಯಷ್ಟೇ ಅಲ್ಲ ದೈವ ಭಕ್ತೆ, ಅದರಲ್ಲೂ ವಿಷ್ಣುವಿನ ಭಕ್ತೆ. ಆದ್ದರಿಂದಲೇ ತಿರುಪತಿ ನನ್ನ ನೆಚ್ಚಿನ ದೇವಾಲಯ. ತಿರುಮಲದ ಶ್ರೀನಿವಾಸನನ್ನು ನೋಡುವಾಗ ತುಂಬ ಭಾವುಕಳಾಗುತ್ತೇನೆ. ತಿರುಪತಿಯಷ್ಟೇ ಅಲ್ಲ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗುತ್ತಿರುತ್ತೇನೆ. ಅಲ್ಲಿನ ಸ್ಥಳ ಮಹಿಮೆ ತಿಳಿದ ಮೇಲಂತೂ ನನ್ನ ನೆಚ್ಚಿನ ದೇವಾಲಯಗಳಲ್ಲಿ ಅದೂ ಪ್ರಮುಖವೆನಿಸಿದೆ. ಇನ್ನು ಶೃಂಗೇರಿ ಶಾರದೆಯ ಮೇಲಂತೂ ಸ್ಪೆಷಲ್ ಒಲವು ನನಗೆ. ಆಕೆಯೇ ವಿದ್ಯೆ ಕರುಣಿಸುವವಳು, ಕಲೆಯ ಆರಾಧಿಸುವವರಿಗೆ ತಾಯಿಯ ಅನುಗ್ರಹ ಸದಾ ಬೇಕು.
ಸಾಂಸ್ಕೃತಿಕ ತಾಣ ಸೌತ್ ಕೊರಿಯಾ
ನನಗೆ ಸೌತ್ ಕೊರಿಯಾ ಅಂದರೆ ಬಹಳ ಪ್ರೀತಿ. ಹೆಚ್ಚಿಗೆ ಕೊರಿಯನ್ ಸೀರೀಸ್ ನೋಡುವುದರಿಂದಲೋ ಏನೋ ಅಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದೇನೆ. ಮದುವೆಯಾದ ಹೊಸತರಲ್ಲಿ ಅಲ್ಲಿಗೆ ಹೋಗಬೇಕೆಂದುಕೊಂಡಿದ್ದೆ. ಅದಾಗಲಿಲ್ಲ. ಇದೇ ನವೆಂಬರ್ 28 ಬಂದರೆ ಮದುವೆ ವಾರ್ಷಿಕೋತ್ಸವವೂ ಬಂದೇ ಬಿಡುತ್ತಿದೆ. ಈಗಲಾದರೂ ಹೋಗೋಣವೆಂದುಕೊಂಡರೆ, ಕೆಲಸ, ಒತ್ತಡಗಳ ನಡುವೆ ಅದು ಸಾಧ್ಯವಾಗುತ್ತಿಲ್ಲ. ಆದರೆ ಮುಂದಿನ ವರ್ಷಕ್ಕೂ ಮುನ್ನ ಹೋಗಲೇ ಬೇಕು ಅಂದುಕೊಂಡಿದ್ದೇನೆ. ನೋಡೋಣ.
ಜಪಾನ್ ಕಾಲಿಂಗ್…
ಮದುವೆಯಾದಾಗಿನಿಂದ ನನ್ನ ಕುಟುಂಬದ ಜತೆ ಅನೇಕ ಪ್ರವಾಸಗಳನ್ನು ಕೈಗೊಂಡಿದ್ದೇನೆ. ಸಕಲೇಶಪುರ, ಚಿಕ್ಕಮಗಳೂರಿನ ಹೀಗೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೇವೆ. ದೇವಾಲಯಗಳಿಗೆ ಹೋಗಿರುವುದಂತೂ ಲೆಕ್ಕವೇ ಇಲ್ಲ. ಆದರೆ ಜಪಾನ್‌ಗೆ ಹೋಗಬೇಕೆಂದುಕೊಂಡ ನಮ್ಮ ಪ್ಯ್ಲಾನ್ ನಾನಾ ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇದೆ. ಸದ್ಯದಲ್ಲೇ ಅದೊಂದು ಫಾರಿನ್ ಟ್ರಿಪ್ ಆಗಲಿದೆ.