Sunday, January 11, 2026
Sunday, January 11, 2026

ನನ್ನ ಟ್ರಾವೆಲ್ ಪ್ಲಾನರ್ ನಾನೇ! -ಕಾವ್ಯಾ ಶಾಸ್ತ್ರಿ

2025ರಲ್ಲಿ ಮಾಡಿರುವ ಮೆಮೊರೆಬಲ್‌ ಟ್ರಿಪ್‌ ಪ್ರಯಾಗ್‌ರಾಜ್‌ ವಾರಾಣಸಿ. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿರುವುದು ನಮ್ಮ ಪೀಳಿಗೆಯ ಸೌಭಾಗ್ಯ. ಕುಂಭಮೇಳಕ್ಕೆ ಎರಡು ಬಾರಿ ಹೋಗಿದ್ದೇನೆ. ಒಮ್ಮೆ ಹೆತ್ತವರೊಂದಿಗೆ, ಮತ್ತೊಮ್ಮೆ ಕುಂಭಮೇಳ ಮುಗಿಯುವುದಕ್ಕೂ ಮುನ್ನ ಹೋಗಿಬಂದೆ.

ಕಿರುತೆರೆ ನಿರೂಪಕಿಯಾಗಿ ಪರಿಚಿತರಾಗಿ, ನಂತರ ಸಿನಿಮಾ ನಾಯಕಿಯಾಗಿ, ಕಿರುತೆರೆ ಧಾರಾವಾಹಿಗಳ ಮುಖ್ಯಪಾತ್ರಧಾರಿಯಾಗಿ, ನಾನ್ ಫಿಕ್ಷನ್ ಶೋಗಳ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ ಕಾವ್ಯಾಶಾಸ್ತ್ರಿಗೆ, ದೊಡ್ಡ ಮಟ್ಟದಲ್ಲಿ ಫಾಲೋವಿಂಗ್ ಬೆಳೆದದ್ದು ಬಿಗ್ ಬಾಸ್ ನಂತರ. ಪರಭಾಷೆಯಲ್ಲೂ ತಮ್ಮ ಅಭಿಮಾನಿ ಬಳಗ ಹೊಂದಿರುವ ಕಾವ್ಯಾಶಾಸ್ತ್ರಿ ತಮ್ಮ ಸ್ವಚ್ಛಕನ್ನಡದಿಂದ ಜನಮನ ಗೆದ್ದವರು. ಇತ್ತೀಚಿನ ದಿನಗಳಲ್ಲಿ ಪ್ರವಾಸಗಳ ಮೂಲಕ ಹಾಗೂ ಆಧ್ಯಾತ್ಮಿಕ ಮಾತುಗಳ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ವೀಕ್ಷಕವರ್ಗ ಸೃಷ್ಟಿಸಿಕೊಂಡಿದ್ದಾರೆ. ಕೋಶ ಓದುವ ಹವ್ಯಾಸವುಳ್ಳ ಈ ಬೆಡಗಿಗೆ ದೇಶ ಸುತ್ತುವ ಅಭ್ಯಾಸವೂ ಇದೆ. ಐ ಲವ್‌ ಟು ಟ್ರಾವೆಲ್ ಎನ್ನುವ ಕಾವ್ಯಾ ಶಾಸ್ತ್ರಿಯವರ ಟ್ರಾವೆಲ್‌ ಲೈಫ್‌ ಡಿಟೇಲ್ಸ್‌ ಪ್ರವಾಸಿ ಓದುಗರಿಗಾಗಿ.

ಟ್ರಾವೆಲ್‌ ಪ್ಲ್ಯಾನಿಂಗ್ ನನಗಿಷ್ಟ

kavya4

2025ರಲ್ಲಿ ಮಾಡಿರುವ ಮೆಮೊರೆಬಲ್‌ ಟ್ರಿಪ್‌ ಪ್ರಯಾಗ್‌ ರಾಜ್‌ ವಾರಾಣಸಿ. ಪ್ರಯಾಗ್‌ ರಾಜ್‌ ನಲ್ಲಿ ನಡೆದ ಕುಂಭಮೇಳಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿರುವುದು ನಮ್ಮ ಪೀಳಿಗೆಯ ಸೌಭಾಗ್ಯ. ಕುಂಭಮೇಳಕ್ಕೆ ಎರಡು ಬಾರಿ ಹೋಗಿದ್ದೇನೆ. ಒಮ್ಮೆ ಹೆತ್ತವರೊಂದಿಗೆ, ಮತ್ತೊಮ್ಮೆ ಕುಂಭಮೇಳ ಮುಗಿಯುವುದಕ್ಕೂ ಮುನ್ನ ಹೋಗಿಬಂದೆ. ಈ ಹಿಂದೆಯೂ ಪ್ರಯಾಗ್‌, ವಾರಾಣಸಿಗೆ ಹೋದ ಅನುಭವ ಇರುವುದರಿಂದ ನನಗೆ ಪ್ಲಾನಿಂಗ್‌ ಮಾಡುವುದರಲ್ಲಿ ಏನೂ ಸಮಸ್ಯೆಯಾಗಿಲ್ಲ. ನಾನು ಯಾವುದೇ ಏಜೆನ್ಸಿಗಳ ಮೂಲಕ ಹೋಗುವುದಿಲ್ಲ. ನನ್ನಷ್ಟಕ್ಕೆ ನಾನೇ ಪ್ಲಾನ್ ಮಾಡಿಕೊಂಡು ಹೋಗುತ್ತೇನೆ. ನಾನು ಮೊದಲ ಬಾರಿ ಹೋದಾಗ ಅಷ್ಟು ದುಬಾರಿಯಾಗಿರಲಿಲ್ಲ. ಆದರೆ ಎರಡನೇ ಬಾರಿ ಹೋಗುವಾಗ ಇನ್ ಕಾಗ್ನಿಟೋ ಮೋಡ್‌ ನಲ್ಲಿ ಫಾರಿನ್‌ ಕರೆನ್ಸಿಯಲ್ಲಿ ಪೇ ಮಾಡುವ ಆಪ್ಶನ್‌ ಬಳಕೆಮಾಡಿಕೊಂಡೆ. ಅದರಿಂದ 16 ಸಾವಿರದಲ್ಲಿ ನನಗೆ ಫ್ಲೈಟ್‌ ಟಿಕೆಟ್‌ ಸಿಕ್ಕಿತ್ತು. ಮೊದಲೇ ಎರಡು ಬಾರಿ ಹೋಗಿ ಬಂದ ಸಂಪರ್ಕಗಳು ಇದ್ದುದರಿಂದ ಇಂಟರ್ನಲೀ ಓಡಾಡುವುದಕ್ಕೆ, ಉಳಿದುಕೊಳ್ಳುವುದಕ್ಕೆ ಯಾವುದೇ ಸಮಸ್ಯೆಗಳಾಗಿಲ್ಲ. ಟ್ರಾವೆಲ್‌ ಪ್ಲಾನ್‌ ಮಾಡುವುದಾಗ ಸ್ಮಾರ್ಟ್‌ ಪ್ಲಾನ್‌ ಮಾಡಿದರೆ ಒಳ್ಳೆಯ ಅನುಭವಗಳ ಜತೆಗೆ ಹಣ, ಸಮಯದ ಉಳಿತಾಯವಾಗುತ್ತದೆ.

ಅಧ್ಯಾತ್ಮ- ಧರ್ಮ ಬೇರೆಬೇರೆ

kavya

ನಾವು ಈ ಭೂಮಿಯ ಮೇಲೆ ಇದ್ದೇವೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದೇವೆಂದ ಮೇಲೆ, ನಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆದ್ದರಿಂದಲೇ ಆಧ್ಯಾತ್ಮಿಕತೆ ಎಂಬುದು ನನ್ನ ಪ್ರತಿ ಪ್ರವಾಸದಲ್ಲಷ್ಟೇ ಅಲ್ಲ, ಎಲ್ಲ ಕೆಲಸಗಳಲ್ಲೂ ಇರುತ್ತದೆ. ನಾನು ಬರಿಯ ದೇವಸ್ಥಾನಗಳಿಗಷ್ಟೇ ಹೋಗುವುದಲ್ಲ. ಎಲ್ಲ ರೀತಿಯ ಪ್ರವಾಸಗಳನ್ನೂ ಕೈಗೊಂಡಿದ್ದೇನೆ. ಆಧ್ಯಾತ್ಮಿಕತೆ ಹಾಗೂ ಧರ್ಮ ಎರಡೂ ಭಿನ್ನವಾದುದು. ಕಲಿಕೆಯ ಭಾಗವಾಗಿ ನಾನು ತುಂಬಾ ಟ್ರಾವೆಲ್‌ ಮಾಡುತ್ತೇನೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ಜೀವನವನ್ನು ತಿಳಿಯುವುದಕ್ಕೆ ಸಾಕಷ್ಟು ಪ್ರಯಾಣ ಮಾಡುತ್ತಿರುತ್ತೇನೆ. ಐ ಲವ್‌ ಟು ಟ್ರಾವೆಲ್.‌

ಶೃಂಗೇರಿ, ಕಮಲಶಿಲೆ ನೆಮ್ಮದಿಯ ತಾಣ

ಕರ್ನಾಟಕದಲ್ಲಿ ಮತ್ತೆ ಮತ್ತೆ ಭೇಟಿ ನೀಡಬೇಕೆನಿಸುವ ಧಾರ್ಮಿಕ ಕ್ಷೇತ್ರಗಳು ಬಹಳಷ್ಟಿವೆಯಾದರೂ ಶೃಂಗೇರಿ ಮತ್ತು ಉಡುಪಿ ಜಿಲ್ಲೆಯ ಕಮಲಶಿಲೆ ನನಗೆ ನೆಮ್ಮದಿ ನೀಡುವ ದೇವಾಲಯಗಳು. ಅಲ್ಲಿಗೆ ಬಹಳಷ್ಟು ಬಾರಿ ಹೋಗಿ ಬಂದಿದ್ದೇನೆ, ಹೋಗುತ್ತಿರುತ್ತೇನೆ.

ಕಾಶಿ ಕರೆಯುತ್ತಿರುತ್ತದೆ…

ಭಾರತದಲ್ಲಿ ಕಾಶಿ ನನ್ನಿಷ್ಟದ ಧಾರ್ಮಿಕ ಕ್ಷೇತ್ರ. ಕಾಶಿಯ ಇಡೀ ವಾತಾವರಣಕ್ಕಿರುವ ಪಾಸಿಟಿವ್‌ ವೈಬ್‌, ಘಾಟ್‌ಗಳಲ್ಲಿ ನಡೆಯುವ ಆಚಾರಗಳು, ಅಲ್ಲಿನ ಪರಿಸರದಲ್ಲಿ ಓಡಾಡುವುದು ಬಹಳ ಪವಿತ್ರವೆಂಬ ಭಾವನೆ ನನಗಿದೆ. ಈಗಾಗಲೇ ಮೂರು ಬಾರಿ ಕಾಶಿಗೆ ಹೋಗಿದ್ದೇನೆ. ಇನ್ನೂ ಮೂವತ್ತು ಬಾರಿ ಹೋಗು ಅಂದರೂ ಹೋಗಬೇಕೆನಿಸುವ ಕ್ಷೇತ್ರವದು.

ಗೋ ವಿತ್‌ ದಿ ಫ್ಲೋ

ಟ್ರಾವೆಲ್‌ ಮಾಡಬೇಕೆಂದುಕೊಂಡರೆ ಮೊದಲು ಸಕಾರಾತ್ಮಕ ಮನೋಭಾವವಿರಬೇಕು. ಪ್ರವಾಸವೆಂದರೆ ಅಲ್ಲಿನ ಸಂಸ್ಕೃತಿ, ನಡೆ-ನುಡಿ, ಆಚಾರ ವಿಚಾರಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದಾಗಿರುವಾಗ, ಮುಕ್ತ ಮನಸಿನಿಂದ ಎಲ್ಲವನ್ನೂ ಸ್ವೀಕರಿಸುವುದನ್ನು ರೂಢಿಸಿಕೊಳ್ಳಲೇಬೇಕು. ಫಸ್ಸೀ ಟ್ರಾವೆಲ್‌ ಅಂದರೆ ಬಹಳ ಕಷ್ಟವಾಗುತ್ತದೆ. ನಾವಂದುಕೊಂಡಂತೆಯೇ ಪ್ರವಾಸವಿರಬೇಕೆಂದುಕೊಂಡರೆ ಸ್ವಲ್ಪ ಬದಲಾವಣೆಯಾದರೂ ಅದಕ್ಕೆ ನಾವು ಹೊಂದಿಕೊಳ್ಳಲಾಗುವುದಿಲ್ಲ. ತೀರಾ ನಮಗೆ ಆಗುವುದೇ ಇಲ್ಲವೆನ್ನುವ ಸಮಯದಲ್ಲಿ ಮುಂಚಿತವಾಗಿ ಊಟ ತಿಂಡಿಯ ಬಗ್ಗೆ ತಯಾರಿ ಮಾಡಿಕೊಂಡು ಹೋಗುವುದು ಉತ್ತಮ. ಆದರೂ ನನ್ನ ಸಲಹೆ; ಟ್ರಾವೆಲ್‌ ಲೈಟ್.‌ ಅಲ್ಲಿನ ಸ್ಥಳೀಯರ ಜತೆಗೆ ಬೆರೆಯಲು ಪ್ರಯತ್ನಿಸಿ, ಅವರೊಂದಿಗೆ ನೀವೂ ಒಬ್ಬರಾಗಿ. ಯಾವುದಕ್ಕೆ ಅಗತ್ಯವಿದೆಯೋ ಅದಕ್ಕೆ ಖರ್ಚುಮಾಡಿ. ಅನಗತ್ಯವಾಗಿ ಖರ್ಚು ಒಳ್ಳೆಯದಲ್ಲ.

ಮತ್ತೆ ಮತ್ತೆ ಕಾಮಾಕ್ಯ

ಕಾಮಾಕ್ಯ ದೇವಾಲಯದ ʻಸೆವೆನ್‌ ಸಿಸ್ಟರ್ಸ್‌ʼನ ಹೆಬ್ಬಾಗಿಲು ಗುವಾಹಟಿ. ನಾನು ನಾರ್ಥ್ ಈಸ್ಟ್‌ನ ಯಾವುದೇ ಭಾಗಕ್ಕೆ ಹೋಗಬೇಕಾದರೂ ಗುವಾಹಟಿಯಿಂದಲೇ ಸಂಪರ್ಕವಿರುವುದರಿಂದ ಪ್ರತಿ ಬಾರಿಯೂ ನಾನು ಕಾಮಾಕ್ಯಕ್ಕೆ ಹೋಗುತ್ತೇನೆ. ಮೇಘಾಲಯ, ಅರುಣಾಚಲ ಪ್ರದೇಶ, ಇತ್ತೀಚೆಗೆ ನಾಗಾಲ್ಯಾಂಡ್‌ಗೆ ಹೋದಾಗಲೂ ಕಾಮಾಕ್ಯಕ್ಕೆ ಹೋಗಿಯೇ ಬಂದಿದ್ದೆ.

ಕೊರಗಜ್ಜನ ದರ್ಶನ ಭಾಗ್ಯ

kavya2

ಕರಾವಳಿ ಕರ್ನಾಟಕದ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಆಚರಣೆಗಳನ್ನೂ ನಂಬುತ್ತೇನೆ. ಅಲ್ಲಿನವರು ದೇವ, ದೈವಗಳ ಬಗ್ಗೆ ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ನನ್ನೊಳಗಿನ ಶಕ್ತಿಯನ್ನು ಮತ್ತೊಮ್ಮೆ ಉತ್ತೇಜಿಸುವುದಕ್ಕಾಗಿ ಹೆತ್ತವರೊಂದಿಗೆ ಅಲ್ಲಿಗೆ ಹೋಗಿದ್ದೆ. ಹಿಂದೊಮ್ಮೆ ಕೊರಗಜ್ಜನೇ ನನ್ನನ್ನು ಕರೆಸಿಕೊಂಡಿದ್ದ. ನನ್ನ ತಂದೆಗೆ ಆರೋಗ್ಯ ಕೆಟ್ಟಿದ್ದ ಸಂದರ್ಭದಲ್ಲಿ ನಾನು ಹರಕೆ ಹೊತ್ತುಕೊಂಡು ಮರೆತಿದ್ದೆ. ಆದರೆ ಹೆಬ್ರಿಯಲ್ಲಿರುವ ಕ್ಷೇತ್ರವೊಂದರ ಬಗ್ಗೆ ಪದೇಪದೆ ಕನಸಿನಲ್ಲಿ ಬರುತ್ತಿತ್ತು. ಆ ಕ್ಷೇತ್ರವನ್ನು ಹುಡುಕಿಕೊಂಡು ಹೋದಾಗ ಗೊತ್ತಾಯ್ತು, ಸರಿಯಾಗಿ ವರ್ಷದ ಹಿಂದೆ ನಾನು ಹರಕೆ ಹೊತ್ತಿದ್ದ ವಿಚಾರ. ಕಾಕತಾಳೀಯವೋ ಅಥವಾ ದೈವ ನಿರ್ಣಯವೋ ಅದೇ ದಿನದಂದು ಕೊರಗಜ್ಜನ ದರ್ಶನಕ್ಕೆ ಹೋಗಿದ್ದೆ. ಮಿರಾಕಲ್‌ ನನ್ನ ಜೀವನದಲ್ಲೂ ಆಗಿದೆ.

ವಾವ್ ಸೌತ್‌ ಆಫ್ರಿಕಾ !

10ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಬಂದಿದ್ದೇನೆ. ಪ್ರತಿ ಪ್ರವಾಸವೂ ಸಾಕಷ್ಟು ಒಳ್ಳೆಯ ಅನುಭವಗಳನ್ನೇ ಕಟ್ಟಿಕೊಟ್ಟಿದೆ. ಅವುಗಳ ಪೈಕಿ ಸೌತ್‌ ಆಫ್ರಿಕಾ, ರೋಮ್‌ ಪ್ರವಾಸ ನನಗೆ ಬಹಳ ಇಷ್ಟವಾಗಿದೆ. ಸೌತ್‌ ಆಫ್ರಿಕಾದ ಶ್ರೀಮಂತ ಸಂಪ್ರದಾಯ ನನಗಿಷ್ಟವಾಯಿತು. ಬಡತನದ ನಡುವೆಯೂ ಅಲ್ಲಿನ ಜನರ ಆಪ್ತವಾದ ನಡವಳಿಕೆ ಬಹಳ ಮೆಚ್ಚುಗೆಯಾಯ್ತು. ರೋಮ್‌ ನ ವಾಸ್ತುಶಿಲ್ಪಗಳ ಬಗೆಗಂತೂ ಹೇಳಲು ಪದಗಳೇ ಇಲ್ಲ.

ಬೈಕ್‌ ರೈಡ್‌ ಕ್ರೇಜ್‌

kavya1

ಪುಟಾಣಿ ಪಂಟ್ರು ಕಾರ್ಯಕ್ರಮದ ನಿರೂಪಣೆಗಾಗಿ ಕೇವಲ ಅರ್ಧ ಗಂಟೆಯಲ್ಲೇ ನಾನು ಬೈಕ್‌ ಕಲಿತಿದ್ದೆ. ಬೈಕ್‌ ರೈಡಿಂಗ್‌ ಎಂಬುದು ಫ್ರೀಡಂ ಹಾಗೂ ಇಂಡಿಪೆಂಡೆನ್ಸ್‌ನ ಸಂಕೇತ ಎಂದುಕೊಂಡಿದ್ದೇನೆ. ಸಾಕಷ್ಟು ರೈಡ್‌ ಹೋಗಿದ್ದರೂ, ಬೆಂಗಳೂರಿನಿಂದ ಹೈದರಾಬಾದ್‌ವರೆಗೂ ರೈಡ್‌ಮಾಡಿ ಲಾಂಗ್‌ ಡಿಸ್ಟೇನ್ಸ್‌ ಕವರ್‌ ಮಾಡಿದ್ದೆ. ಅದೇನೇ ಹೇಳಿ, ಈಗಂತೂ ಪ್ರಯಾಣಕ್ಕೆ ಬೈಕ್‌ಗಿಂತಲೂ ಕಾರ್‌ ಅಥವಾ ಬೇರೆ ಸುಲಭ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅಡ್ವೆಂಚರ್‌ ಮಾಡಬೇಕು ನಿಜ. ಆದರೆ ಈಗ ನಾನು ಸ್ವಲ್ಪ ಮಟ್ಟಿನ ಕಂಫರ್ಟ್‌ ಹಾಗೂ ಸೇಫ್ಟಿಯನ್ನು ನೋಡುತ್ತೇನೆ.

ಗೋವಾ ಎರಡನೇ ತವರು

ಬಹಳ ದೇಶಗಳಿಗೆ ನಾನು ಸೋಲೋ ಟ್ರಾವೆಲ್‌ ಮಾಡಿದ್ದೇನೆ. ಗೋವಾಗೆ ತಿಂಗಳಿಗೆ ಒಂದು ಬಾರಿಯಾದರೂ ಹೋಗುತ್ತಲೇ ಇರುತ್ತೇನಾದ್ದರಿಂದ ಅದು ನನ್ನ ಎರಡನೇ ತವರು ಎಂದು ಸ್ನೇಹಿತರ ಬಳಗ ರೇಗಿಸುವುದಿದೆ. ದುಬೈ, ಥೈಲ್ಯಾಂಡ್ ಗೆ ಸೋಲೋ ಹೋಗಿದ್ದೇನೆ. ಸೋಲೋ ಟ್ರಾವೆಲ್‌ ಮಾಡುವುದರಿಂದ ನಮ್ಮ ಬಗ್ಗೆ ನಾವೇ ತಿಳಿಯುವುದಕ್ಕೆ, ನಮ್ಮ ಜತೆಗೆ ನಾವೇ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತದೆ.

ಅಡ್ವೆಂಚರ್‌ ಮುನ್ನ ಎಚ್ಚರ

kavya3

ಟ್ರಾವೆಲ್‌ನಲ್ಲಿ ಅಡ್ವೆಂಚರ್‌ ಮಾಡುವುದು ಬಹಳ ಒಳ್ಳೆಯದು. ಥೈಲ್ಯಾಂಡ್‌ಗೆ ಹೋದಾಗ ನಾನು ಸ್ಕೂಬಾ ಟ್ರೈ ಮಾಡಿದ್ದೆ, ನಾಗಾಲ್ಯಾಂಡ್‌ಗೆ ಹೋಗಿದ್ದಾಗ ಝೋಕೋವ್ಯಾಲಿ ಟ್ರೆಕ್‌ ಮಾಡಿದ್ದೆ, ಹೃಷಿಕೇಶದಲ್ಲಿ ಬಂಜೀ ಜಂಪ್‌ ಮಾಡಿದ್ದೆ, ಹೀಗೆ ಯಾವುದೇ ಜಾಗಕ್ಕೆ ಹೋದಾಗ ಅಲ್ಲಿನ ಅಡ್ವೆಂಚರ್‌ಗಳನ್ನು ಪ್ರಯತ್ನಿಸಬೇಕು. ಆದರೆ ಟ್ರಾವೆಲ್‌ ಮಾಡುವ ದಿನ ಅದನ್ನು ಪ್ಲ್ಯಾನ್‌ ಮಾಡಿಕೊಳ್ಳುವುದಲ್ಲ. ಅದಕ್ಕೂ ಮುನ್ನವೇ ನೀವು ದೈಹಿಕವಾಗಿ ಎಷ್ಟು ಆರೋಗ್ಯವಾಗಿದ್ದೀರೆಂದು ಯೋಚಿಸಬೇಕು.

ಸೂಶೀ ದಿ ಬೆಸ್ಟ್‌

ನಾನು ಪ್ಯೂರ್‌ ವೆಜಿಟೇರಿಯನ್‌. ಅದಕ್ಕಾಗಿಯೇ ಬೆಂಗಳೂರಿನ ತುಂಬೆಲ್ಲಾ ಸಾಕಷ್ಟು ವೆಜ್‌ ರೆಸ್ಟೋರೆಂಟ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡುತ್ತಿರುತ್ತೇನೆ. ಅವುಗಳ ಪೈಕಿ ಖ್ಮೇರ್ ಕಿಚನ್‌, ಫುರ್ರ್‌ ನನ್ನ ಫೇವರಿಟ್.‌ ಸೂಶೀ ಎಂದರೆ ನನಗೆ ಬಹಳ ಇಷ್ಟ. ಹೊಸ ಹೊಸ ಪುಡ್‌ ಸೆಂಟರ್‌ ಗಳಿಗೆ ಹೋಗುತ್ತಿರುತ್ತೇನೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್