Saturday, September 6, 2025
Saturday, September 6, 2025

ಇದು ಚೈತ್ರಯಾತ್ರೆ

ಕೆಲಸದ ವಿಚಾರವಾಗಿ ನಾನು ಮಾಡಿದ ಪ್ರವಾಸಗಳೆಲ್ಲವೂ ಕ್ರಿಸ್ಪಿಯಾಗಿರುತ್ತದೆ. ಸಾಮಾನ್ಯವಾಗಿ ಶೋಗಳಿಗೆ, ಬ್ರಾಂಡ್‌ಗಳ ಪ್ರಮೋಷನ್‌ಗಾಗಿ, ಮತ್ತು ವಿದೇಶಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳನ್ನು ಪ್ರತಿನಿಧಿಸುವುದಕ್ಕಾಗಿ ಪ್ರಪಂಚಾದ್ಯಂತ ಪ್ರಯಾಣಿಸಿದ್ದೇನೆ. ನನ್ನ ಹೆಚ್ಚಿನ ಕಾರ್ಯಕ್ರಮಗಳು ಲೋಕಲ್‌ ಫ್ಲೇವರ್‌ ಹೊಂದಿರುವುದರಿಂದ ನನ್ನ ಪ್ರದರ್ಶನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಲು ಹೆಮ್ಮೆಯೆನಿಸುತ್ತದೆ.

ಹೆಸರಾಂತ ನಿರೂಪಕಿ, ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಗೆ ದೇಶ ಸುತ್ತುವುದೆಂದರೆ ಅಚ್ಚುಮೆಚ್ಚಿನ ಕೆಲಸ. ಕೆಲಸದ ಕಾರಣಕ್ಕಾಗಿ ಅಷ್ಟೇ ಅಲ್ಲದೆ ವರ್ಕ್‌ ಪ್ರೆಷರ್‌ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಕೂಲ್‌ ಆಗಿ ದೇಶ-ವಿದೇಶಗಳನ್ನು ಸುತ್ತುತ್ತೇನೆ ಎನ್ನುವ ಅವರು, ಪ್ರವಾಸಿ ಅನುಭವದ ಜತೆಗೆ, ಫೇವರಿಟ್‌ ಫುಡ್‌ , ಟ್ರಾವೆಲ್‌ ಟಿಪ್ಸ್‌ ಹೀಗೆ ಅನೇಕ ವಿಚಾರಗಳನ್ನು ಪ್ರವಾಸ ಪ್ರಪಂಚದೊಟ್ಟಿಗೆ ಹಂಚಿಕೊಂಡಿರುವುದು ಹೀಗೆ ...

ರೆಸ್ಟ್ ಗಾಗಿ ಆದೆ ಟೂರಿಸ್ಟ್..!

ನಾನು ಹೆಚ್ಚಿಗೆ ಟ್ರಾವೆಲ್‌ ಮಾಡುತ್ತಲೇ ಇರುತ್ತೇನೆ. ಬಿಡುವಿರದ ಕೆಲಸದ ನಡುವೆ ವಿರಾಮ ಬೇಕನಿಸಿದಾಗೆಲ್ಲ ಪ್ರಯಾಣದ ಮೊರೆಹೋಗುತ್ತೇನೆ. ವಿಶ್ರಾಂತಿ ಪಡೆಯಲು, ಚಿಂತೆ- ಗೊಂದಲಗಳಿಂದ ಮುಕ್ತಿ ಹೊಂದುವುದಕ್ಕಾಗಿಯೂ ಪ್ರವಾಸ ಹೋಗುತ್ತೇನೆ. ಅಲ್ಲದೆ ಪ್ರವಾಸದ ನಂತರ ಹೊಸ ಹುರುಪಿನೊಂದಿಗೆ ಕೆಲಸಕ್ಕೆ ಮರಳಲು ಮತ್ತು ಜೀವನವನ್ನು ಮುಕ್ತ ಮನಸ್ಸಿನಿಂದ ಎದುರಿಸಲು ಇದು ನನಗೆ ಸಹಕಾರಿ. ಇತರ ದೇಶಗಳ ಸಾಂಸ್ಕೃತಿಕ ಸಂಪ್ರದಾಯಗಳನ್ನು ಮತ್ತು ಜನರು ಹೇಗೆ ಬದುಕುತ್ತಾರೆ, ಅವರ ಜೀವನಶೈಲಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನನಗಿಷ್ಟ.

ಮೊದಲು ಹಾರಿದ್ದೇ ದುಬೈಗೆ!

ಅಂತಾರಾಷ್ಟ್ರೀಯ ಪ್ರಯಾಣ ನನಗೀಗ ಹೊಸತೇನಲ್ಲ. ಶಾಲಾ ದಿನಗಳಲ್ಲೇ ಕುಟುಂಬದೊಂದಿಗೆ ನಾನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರವಾಸವನ್ನು ಕೈಗೊಂಡಿದ್ದೆ.. ಮೋಡಿ ಮಾಡುವ ದುಬೈಗೆ.

ಗ್ರೀಸ್‌ - ಸರ್ಪ್ರೈಸ್‌

ಮದುವೆಯಾಗಿ 5 ತಿಂಗಳು ಕಳೆದಿವೆ. ಅನೇಕ ಕಡೆ ಸುತ್ತಾಡಿದ್ದೇವೆ. ಇತ್ತೀಚೆಗೆ ನಾವು ಊಟಿಗೆ ಟ್ರಾವೆಲ್‌ ಮ್ಯಾರಥಾನ್‌ ಹೋಗಿದ್ದೆವು. ನಂತರ ಹೈದರಾಬಾದ್‌ನಲ್ಲಿ ಕಾರ್ಪೊರೇಟ್ ಪ್ರದರ್ಶನಕ್ಕೆ, ಅಲ್ಲಿಂದ ಥೈಲ್ಯಾಂಡ್‌ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವಿದ್ದಿದ್ದರಿಂದ ವಿಮಾನದಲ್ಲಿ ಅಲ್ಲಿಗೂ ಹೋಗಿದ್ದೆವು. ಅಲ್ಲದೆ ಗ್ರೀಸ್‌ಗೆ ಸರ್ಪ್ರೈಸ್‌ ವೆಕೇಷನ್‌ ಹೋಗಿರುವುದಂತೂ ತುಂಬಾ ಚೆನ್ನಾಗಿತ್ತು. ಇದೆಲ್ಲವೂ ಒಂದೇ ತಿಂಗಳಲ್ಲಿ ನಡೆದಿತ್ತು. ಇದಿಷ್ಟೇ ಅಲ್ಲದೆ ನಾನು ಎಲ್ಲಿಗೆ ಹೋದರೂ ಆ ಸ್ಥಳದಲ್ಲಿರುವ ಪ್ರವಾಸಿ ತಾಣಗಳು, ಸ್ಥಳೀಯ ಆಹಾರ ಮತ್ತು ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ.

chaitra vasudevan

ವಿದೇಶಿ ನೆಲದಲ್ಲಿ ಕನ್ನಡದ ಕಂಪು

ಕೆಲಸದ ವಿಚಾರವಾಗಿ ನಾನು ಮಾಡಿದ ಪ್ರವಾಸಗಳೆಲ್ಲವೂ ಕ್ರಿಸ್ಪಿಯಾಗಿರುತ್ತದೆ. ಸಾಮಾನ್ಯವಾಗಿ ಶೋಗಳಿಗೆ, ಬ್ರಾಂಡ್‌ಗಳ ಪ್ರಮೋಷನ್‌ಗಾಗಿ, ಮತ್ತು ವಿದೇಶಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳನ್ನು ಪ್ರತಿನಿಧಿಸುವುದಕ್ಕಾಗಿ ಪ್ರಪಂಚಾದ್ಯಂತ ಪ್ರಯಾಣಿಸಿದ್ದೇನೆ. ನನ್ನ ಹೆಚ್ಚಿನ ಕಾರ್ಯಕ್ರಮಗಳು ಲೋಕಲ್‌ ಫ್ಲೇವರ್‌ ಹೊಂದಿರುವುದರಿಂದ ನನ್ನ ಪ್ರದರ್ಶನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಲು ಹೆಮ್ಮೆಯೆನಿಸುತ್ತದೆ. ನನ್ನ ದೇಶವನ್ನು ಪ್ರತಿನಿಧಿಸುವುದಂತೂ ಇನ್ನೂ ಖುಷಿಯ ವಿಚಾರ. ಇದಿಷ್ಟೇ ಅಲ್ಲದೆ ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಪ್ರದರ್ಶನಕ್ಕಾಗಿಯೇ ನಾನು ಕರ್ನಾಟಕದ ಕನಿಷ್ಠ 2-3 ನಗರಗಳಿಗೆ ಪ್ರಯಾಣಿಸುತ್ತೇನೆ.

ಒಮ್ಮೆ ಹಿಮಪಾತ ನೋಡಬೇಕು

ಹಿಮದಿಂದ ಕೂಡಿರುವ ಪ್ರದೇಶವೆಂದರೆ ನನಗೆ ತುಂಬಾ ಇಷ್ಟ. ಅಲ್ಲಿಗೆ ಭೇಟಿ ನೀಡುವುದು ನನ್ನ ಬಹುದೊಡ್ಡ ಕನಸು. ಆದರೆ ಈವರೆಗೂ ನಾನು ಹಿಮಪಾತವನ್ನು ನೋಡಿಲ್ಲ..ಅನುಭವಿಸಿಲ್ಲ.. ಜೀವನದಲ್ಲಿ ಒಮ್ಮೆ ಅಂತ ಸೀಮಿತವಾಗಿರಿಸಿಕೊಳ್ಳಲು ಬಕೆಟ್ ಲಿಸ್ಟ್ ನಲ್ಲಿರುವ ಕಾಶ್ಮೀರ ಮತ್ತು ಕ್ರಿಸ್‌ಮಸ್ ಸಂದರ್ಭದಲ್ಲಿ ಲಂಡನ್ ಗೆ ಅವಕಾಶ ಸಿಕ್ಕಾಗಲೆಲ್ಲ ಭೇಟಿ ನೀಡಬೇಕೆಂದುಕೊಂಡಿದ್ದೇನೆ.

ಟರ್ಕಿಶ್ ಬಕ್ಲಾವಾ ನನ್ನ ಫೇವರಿಟ್‌

ಮಾಲ್ಡೀವ್ಸ್‌ಗೆ ಹೋಗಿದ್ದ ವೇಳೆ ತೆಂಗಿನ ಹಾಲಿನೊಂದಿಗೆ ಬೆರೆತ ಫೇಮಸ್‌ ಸೀ ಫುಡ್‌ ಸವಿದಿದ್ದೆ. ನಾನು ಮಂಗಳೂರಿನವಳಾಗಿರುವುದರಿಂದ ಈ ಕಾಂಬಿನೇಷನ್‌ ನನಗೆ ತುಂಬಾ ಇಷ್ಟ. ಗ್ರೀಕ್ ಫುಡ್‌ ಬೆಸ್ಟ್‌ ಎನ್ನುವುದು ಅನೇಕರ ಅಭಿಪ್ರಾಯ, ಆದರೆ ನಾನು ಅದಕ್ಕೆ ಹೊರತಾದವಳು. ಟರ್ಕಿಶ್ ಬಕ್ಲಾವಾ ನನ್ನ ನೆಚ್ಚಿನ ಆಹಾರ.

chaira vasista 5

ಹೋಮ್‌ ಫುಡ್‌ ಜತೆಗಿರಲಿ

ಮೂರು ತಿಂಗಳಿಗೊಮ್ಮೆಯಾದರೂ ನಾನು ನನ್ನ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುತ್ತೇನೆ. ವಿಶೇಷವಾಗಿ ಹೆತ್ತವರಿಗೆ ಹೀಗಾದರೂ ಸ್ವಲ್ಪ ವಿಶ್ರಾಂತಿ ಸಿಗುವುದೆಂಬ ಯೋಚನೆ ನನ್ನದು. ಅವರನ್ನು ವಿಶ್ವ ಪರ್ಯಟನೆಗೆ ಕರೆದೊಯ್ಯಬೇಕೆಂಬುದು ನನ್ನ ಕನಸು. ಆದರೆ ಅವರ ವಯಸ್ಸು ಮತ್ತು ಆರೋಗ್ಯದ ಕಾರಣದಿಂದಾಗಿ ಅದ್ಯಾವುದೂ ಸಾಧ್ಯವಾಗಿಲ್ಲ. ಹಾಗಾಗಿಯೇ ಬಿಡುವಾದಾಗಲೆಲ್ಲ ರೋಡ್‌ ಟ್ರಿಪ್‌ ಹೋಗುತ್ತಿರುತ್ತೇವೆ. ಹೋಗುವ ವೇಳೆ ಮನೆ ಆಹಾರವನ್ನೇ ಹೆಚ್ಚಿಗೆ ಪ್ಯಾಕ್‌ ಮಾಡಿಕೊಂಡಿರುತ್ತೇವೆ.

ಪ್ಯಾರಿಸ್‌ ನಲ್ಲಿ ಪ್ರಿ ವೆಡ್ಡಿಂಗ್‌ ಫೊಟೋಶೂಟ್‌

ಪ್ರೀತಿ ಮತ್ತು ಫ್ಯಾಷನ್‌ ಗೆ ಹೆಸರಾಗಿರುವ ಪ್ಯಾರಿಸ್ ನಗರ ನನ್ನ ಡ್ರೀಮ್‌ ಡೆಸ್ಟಿನೇಷನ್‌ ಗಳಲ್ಲಿ ಒಂದು. ಪ್ಯಾರಿಸ್ ಬೀದಿಗಳಲ್ಲಿ ಪ್ರಯಾಣಿಸಿದ ಅನುಭವ, ವಿಶೇಷವಾದ ಔಟ್‌ಫಿಟ್ ತೊಟ್ಟುಕೊಂಡು ಫೊಟೋಶೂಟ್‌ ಮಾಡಿಸಿಕೊಂಡ ನೆನಪುಗಳು ಇಂದಿಗೂ ಹಸಿರಾಗಿದೆ.

chaitra vasudevan 1

ಮಲ್ಲೇಶ್ವರಂ ಸುತ್ತಿ ನೋಡಿ

ಬೆಂಗಳೂರಿನಲ್ಲಿ ನಗರದ ಮಧ್ಯಭಾಗದಲ್ಲಿರುವ ನನ್ನ ಮನೆಯೇ ನನ್ನ ನೆಚ್ಚಿನ ಸ್ಥಳ. ಕಾರಿನಲ್ಲಿ ಬೆಂಗಳೂರು ರೌಂಡ್ಸ್‌ ಹೋಗಬೇಕೆನ್ನಿಸಿದರೂ ಟ್ರಾಫಿಕ್‌ ಕಿರಿಕಿರಿಯಿಂದ ಸುಮ್ಮನಾಗುವುದಿದೆ. ಆದರೆ ಸಾಮಾನ್ಯವಾಗಿ ಕೆಲಸದ ಕಾರಣಕ್ಕಾಗಿ ಇಲ್ಲವೇ ತಿರುಗಾಡುವುದಕ್ಕೆ ನಾನು ನನ್ನ ಬೈಕನ್ನು ಬಳಸುತ್ತೇನೆ. ಬೆಂಗಳೂರಿನಲ್ಲಿ ನನ್ನಿಷ್ಟದ ಸ್ಥಳ ಮಲ್ಲೇಶ್ವರಂ. ಯಾಕೆಂದರೆ ಸಾಕಷ್ಟು ಇತಿಹಾಸವಿರುವ ಈ ಪ್ರದೇಶದಲ್ಲಿ ಪುರಾತನ ದೇವಾಲಯಗಳು, ಮಾರುಕಟ್ಟೆ ಮತ್ತು ಹಳೆಯ ಶಾಲೆ, ಕಾಲೇಜುಗಳೂ ಇವೆ.

ಚಂದ್ರಾಲೇಔಟ್ ದುರ್ಗಾಪರಮೇಶ್ವರಿ

ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಆದರೆ ನಗರದ ಚಂದ್ರ ಲೇಔಟ್‌ನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನ ನನಗೆ ಹೆಚ್ಚು ಆಪ್ತವಾಗುತ್ತದೆ.

ಮೈಸೂರು ಫಸ್ಟು-ಮಡಿಕೇರಿಯೂ ಬೆಸ್ಟು

ಕರ್ನಾಟಕದಲ್ಲಿ ಯಾವ ಪ್ರದೇಶ ಬೆಸ್ಟ್‌ ಎಂದು ಕೇಳಿದರೆ ಉತ್ತರ ನೀಡುವುದು ಕಷ್ಟವೆನಿಸುತ್ತದೆ. ಯಾಕೆಂದರೆ ಒಂದೊಂದು ಪ್ರದೇಶಕ್ಕೂ ಅದರದ್ದೇ ಆದ ವಿಶೇಷತೆ, ಐತಿಹ್ಯಗಳಿವೆ. ಆದರೂ ಒಂದೆರಡು ಆಯ್ಕೆ ಮಾಡಿ ಹೇಳುವುದಾದರೆ ಶಾಂತವಾದ ವಾತಾವರಣ, ಪ್ರಯಾಣಕ್ಕೂ ಹಿತವೆನಿಸುವ ಮೈಸೂರು ಫಸ್ಟ್‌ ಬೆಸ್ಟ್‌ ಸಿಟಿ. ಅದನ್ನು ಹೊರತುಪಡಿಸಿದರೆ ರಜೆಯನ್ನು ಕಳೆಯುವುದಕ್ಕೆ ಮಡಿಕೇರಿಯ ವಾತಾವರಣ ನನಗೆ ಖುಷಿ ನೀಡುತ್ತದೆ.

chaitra vasudevan 3

ಏನು ತಂದೆ ಅಂದ್ರೆ...

ಯಾವುದೇ ಪ್ರವಾಸ ಕೈಗೊಂಡಾಗಲೂ, ಇನ್ಯಾವುದೇ ಸ್ಥಳಗಳಿಗೆ ಭೇಟಿ ಕೊಟ್ಟಾಗಲೂ ಅಲ್ಲಿನ ಸ್ಥಳೀಯ ಆಹಾರವನ್ನು ಸೇವಿಸುವುದೇ ನನ್ನ ಮೊದಲ ಕೆಲಸ. ಜತೆಗೆ ಟೂರ್‌ ನಿಂದ ಬರುವಾಗ ನೆನಪಿಗಾಗಿ ಏನು ತರುತ್ತೀರಿ ಎಂದು ಕೇಳಿದರೆ, ಸದ್ಯಕ್ಕೆ ನನ್ನ ಉತ್ತರ, ಚೈತ್ರ ವಾಸುದೇವನ್ ಯೂಟ್ಯೂಬ್ ಚಾನೆಲ್‌ನಲ್ಲಿ ನನ್ನ ಪ್ರಯಾಣದ ಅನುಭವವನ್ನು ಜನರಿಗೆ ತೋರಿಸಲು ನೆನಪುಗಳನ್ನು ಹಂಚಿಕೊಳ್ಳಲು ವ್ಲಾಗ್‌ಗಾಗಿ ಸಾಕಷ್ಟು ಚಿತ್ರಗಳನ್ನು ಕ್ಲಿಕ್ ಮಾಡುತ್ತೇನೆ, ವಿಡಿಯೋ ಚಿತ್ರಣ ಮಾಡಿ ತರುತ್ತೇನೆ.

ಸುತ್ತಾಡಿ..ಸುತ್ತಾಡುತ್ತಲೇ ಇರಿ...

ಪ್ರಯಾಣ, ಪ್ರವಾಸ ಎಂದಿಗೂ ಹಗುರವಾಗಿರಲಿ. ಹೋದ ಸ್ಥಳಗಳಲ್ಲೇ ಬೇಕೆನಿಸುವಷ್ಟು ಶಾಪಿಂಗ್ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ನೆನಪುಗಳು ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುತ್ತವೆ. ಲಾಡ್ಜ್‌, ರೂಮುಗಳಲ್ಲಿ ಕುಳಿತು, ಮಲಗಿ ಕಾಲಹರಣ ಮಾಡುವ ಬದಲು ನೀವು ಭೇಟಿ ನೀಡುವ ಸ್ಥಳದ ಪ್ರತಿಯೊಂದು ಇಂಚನ್ನೂ ಅರಿತುಕೊಳ್ಳು ಸುತ್ತಾಡಿ..ಸುತ್ತಾಡುತ್ತಲೇ ಇರಿ. ಈ ಅನುಭವಗಳು ಜೀವನದಲ್ಲಿ ಅನೇಕ ಬಾರಿ ನಿಮ್ಮ ನೆರವಿಗೆ ಬರುತ್ತವೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್