ಬಾಂಗ್ರದ ಮರಿರಾಜಕುಮಾರಿಗೆ ಹಿಮದಲ್ಲಿ ಆಡುವಾಸೆಯಂತೆ !
ಝೀ ವಾಹಿನಿಯ ಧಾರಾವಾಹಿಗಳ ಅಭಿನಯದ ಮೂಲಕ ನನಗೆ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕತು. ರಿಷಬ್ ಶೆಟ್ಟಿ ಸರ್ ಅವರ ಸಿನಿಮಾದಲ್ಲಿ ಅಭಿನಯಿರುವುದು ಹೆಮ್ಮೆಯೆನಿಸಿದೆ. ಆದರೆ ದಿನವೂ ಬೆಳಗ್ಗೆ 3 ಗಂಟೆಗೆ ಎದ್ದು ತಯಾರಾಗಿ ಕುಂದಾಪುರ ಸೇರಿದಂತೆ ಅನೇಕ ಶೂಟಿಂಗ್ ಸ್ಪಾಟ್‌ಗೆ ಹೋಗಬೇಕಾಗುತ್ತಿತ್ತು. ಅದು ಕಷ್ಟವಾದರೂ ಇಷ್ಟವಾಗುತ್ತಿತ್ತು.
ಕಾಂತಾರ ಚಾಪ್ಟರ್ 1 ಚಿತ್ರ ತೆರೆಕಂಡು ತಿಂಗಳು ಕಳೆದಿದೆ. ಚಿತ್ರದ ನಾಯಕ ರಿಷಬ್ ಶೆಟ್ಟಿ ಮಾತ್ರವಲ್ಲದೇ ಪ್ರತಿ ಪಾತ್ರವೂ ಅಪಾರ ಜನಮೆಚ್ಚುಗೆ ಗಳಿಸಿಕೊಂಡಿದೆ. ಚಿತ್ರದಲ್ಲಿ ಬಾಂಗ್ರದ ರಾಜ ಮನೆತನದ ಕುಡಿಯಾಗಿ ಕಾಣಿಸಿಕೊಂಡಿದ್ದ ಆರು ವಯಸ್ಸಿನ ಮುದ್ದು ಪೋರಿ ಪ್ರಾನ್ವಿ ಅಕ್ಷಯ್, ಈಗ ಎಲ್ಲರ ಮುದ್ದಿನ ಕಣ್ಮಣಿ ಆಗಿದ್ದಾಳೆ. ಕಿರುತೆರೆಯಲ್ಲಿ ಅದಾಗಲೇ ಸದ್ದು ಮಾಡಿದ್ದ ಮುದ್ದುಪೋರಿ ಈಗ ಬಿಗ್ ಸ್ಕ್ರೀನ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಪ್ರಾನ್ವಿ ಅಕ್ಷಯ್ ಟ್ರಾವೆಲ್ ಡೈರೀಸ್ ಪ್ರವಾಸಿ ಪ್ರಪಂಚದ ಓದುಗರಿಗಾಗಿ.
ನನ್ನ ಮೊದಲ ಪ್ರವಾಸ
ಪ್ರವಾಸ ಹೋಗುವುದೆಂದರೆ ನನಗಿಷ್ಟ. ಆದರೆ ಶಾಲೆ, ಅಭಿನಯ ಎರಡರ ನಡುವೆ ನನಗೆ ಬಿಡುವಾಗುವುದೇ ಇಲ್ಲ. ಆದರೂ ಶಾಲೆಯಿಂದ ಮೊದಲ ಪ್ರವಾಸ ಅಂತ ಹೋಗಿದ್ದು ಅಲ್ಲೇ ಹತ್ತಿರದ ಕೆಟಲ್ ಫಾರ್ಮ್ ಗೆ. ಟೀಚರ್ಸ್ ಹಾಗೂ ಸ್ನೇಹಿತರ ಜತೆ ಸೇರಿ, ಪುಟ್ಟ ಪ್ರವಾಸ ಹೋಗಿದ್ದು ನನಗಂತೂ ಫುಲ್ ಖುಷಿ ತಂದಿದೆ.
ಮೃಗಾಲಯ ಸುತ್ತೋಣ
ಪ್ರವಾಸವೆಂದರೆ ನನಗೆ ಮೃಗಾಲಯವೇ ಮೊದಲು ನೆನಪಾಗುತ್ತದೆ. ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಲು ಅಲ್ಲಿ ಮಾತ್ರವೇ ಸಿಗುವುದು. ಸ್ಕೂಲ್ ಟೆಕ್ಸ್ಟ್ ಬುಕ್ ನಲ್ಲಿ ಇರುವ ಅನೇಕ ಪ್ರಾಣಿ ಪಕ್ಷಿಗಳನ್ನು ನಾನು ಝೂ ನಲ್ಲಿ ನೋಡಿದ್ದೇನೆ. ಸಿಂಹ, ಹುಲಿ, ಕರಡಿಗಳೆಲ್ಲವೂ ಬೋನಿನೊಳಗಿದ್ದರೂ ನೋಡುವುದಕ್ಕೆ ಭಯವೆನಿಸುತ್ತದೆ. ಹಕ್ಕಿಗಳನ್ನು ನೋಡುವುದು, ಅವುಗಳ ಚಿಲಿಪಿಲಿ ಸದ್ದನ್ನು ಕೇಳಲು ಮಜವೆನಿಸುತ್ತದೆ.

ಕನ್ಯಾಕುಮಾರಿಯ ಕಡಲು
ನನ್ನ ಅಪ್ಪ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮ್ಮ ಗೃಹಿಣಿ. ಅಪ್ಪ ರಜೆಯಲ್ಲಿ ಮನೆಗೆ ಬಂದಾಗ ನಾವು ಪ್ರವಾಸಕ್ಕೆ ಹೋಗುತ್ತೇವೆ. ಇತ್ತೀಚೆಗಷ್ಟೇ ಅಪ್ಪ-ಅಮ್ಮ ನನ್ನನ್ನು ಕನ್ಯಾಕುಮಾರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾನು ಕಡಲಿನ ಅಲೆಗಳ ಜತೆಗೆ ಆಟವಾಡಿದ್ದೆ. ನಾನು ಮಂಗಳೂರಿನವಳಾದ್ದರಿಂದ ನನಗೆ ಕಡಲು ಹೊಸತಲ್ಲ. ವಾರಾಂತ್ಯಗಳನ್ನು ಕಡಲ ತೀರಗಳಲ್ಲೇ ಕಳೆಯುತ್ತೇವೆ. ಆದರೂ ಕನ್ಯಾಕುಮಾರಿಗೆ ಹೋದಾಗ ಅಲ್ಲಿನ ಕಡಲಿನಲ್ಲೂ ನಾನು ಎಂಜಾಯ್ ಮಾಡಿದೆ. ಫೊಟೋಗಳನ್ನು ತೆಗೆದುಕೊಂಡು ಸ್ನೇಹಿತರಿಗೆ ಶೇರ್ ಮಾಡಿಕೊಂಡಿದ್ದೆ.
ಮಂಗಳೂರು ಟು ಕುಂದಾಪುರ ಫಾರ್ ಕಾಂತಾರ ಚಾಪ್ಟರ್ 1
ಝೀ ವಾಹಿನಿಯ ಧಾರಾವಾಹಿಗಳ ಅಭಿನಯದ ಮೂಲಕ ನನಗೆ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕತು. ರಿಷಬ್ ಶೆಟ್ಟಿ ಸರ್ ಅವರ ಸಿನಿಮಾದಲ್ಲಿ ಅಭಿನಯಿರುವುದು ಹೆಮ್ಮೆಯೆನಿಸಿದೆ. ಆದರೆ ದಿನವೂ ಬೆಳಗ್ಗೆ 3 ಗಂಟೆಗೆ ಎದ್ದು ತಯಾರಾಗಿ ಕುಂದಾಪುರ ಸೇರಿದಂತೆ ಅನೇಕ ಶೂಟಿಂಗ್ ಸ್ಪಾಟ್‌ಗೆ ಹೋಗಬೇಕಾಗುತ್ತಿತ್ತು. ಅದು ಕಷ್ಟವಾದರೂ ಇಷ್ಟವಾಗುತ್ತಿತ್ತು. ಶೂಟಿಂಗ್ ಇರುವಾಗಲೆಲ್ಲಾ ಮಂಗಳೂರಿನಿಂದ ಕುಂದಾಪುರಕ್ಕೆ ಅಮ್ಮನ ಜತೆ ಪ್ರಯಾಣ ಮಾಡುತ್ತಿದ್ದೆ. ನನ್ನ ಎಲ್ಲ ಬೇಕು ಬೇಡಗಳನ್ನು ಅಮ್ಮನೇ ನೋಡಿಕೊಳ್ತಿದ್ದರು.

ಹಿಮದ ನಡುವೆ ಆಡುವಾಸೆ
ನನಗೆ ಓದೋದು, ಅಭಿನಯಿಸುವುದು ಇದರ ನಡುವೆ ಸ್ವಲ್ಪವೂ ಸಮಯವೇ ಸಿಗುವುದಿಲ್ಲ. ಆದರೆ ಒಮ್ಮೆ ಬೇಸಗೆ ರಜೆ ಸಿಕ್ಕಿತೆಂದರೆ, ಆಗ ಅಪ್ಪನೂ ಸೈನ್ಯದಿಂದ ರಜೆಪಡೆದು ಬಂದರೆಂದರೆ ಮೊದಲು ಅಪ್ಪ ಅಮ್ಮನ ಜತೆಗೆ ಹಿಮವಿರುವ ಯಾವುದಾದರೂ ಪ್ರದೇಶಕ್ಕೆ ಹೋಗಬೇಕು. ತುಂಬಾ ಚಳಿಯಾದರೂ ಪರವಾಗಿಲ್ಲ, ಹಿಮದಲ್ಲಿ ಆಟವಾಡಬೇಕು. ಅಪ್ಪನ ಬಳಿ ಈಗಾಗಲೇ ನನ್ನ ಆಸೆಯ ಬಗ್ಗೆ ಹೇಳಿದ್ದೇನೆ.
ಧಾರಾವಾಹಿಗಾಗಿ ಬೆಂಗಳೂರು ರೌಂಡ್ಸ್
ನಾನು ಪಾರು ಸೀರಿಯಲ್ ನಲ್ಲಿ ಅಭಿನಯಿಸಿದ್ದೆ. ಅದೀಗ ಮುಗಿದಿದೆ. ಆದರೆ ಅಮೃತಧಾರೆ ಧಾರಾವಾಹಿಯಲ್ಲಿ ಈಗಲೂ ಅಭಿನಯಿಸುತ್ತಿದ್ದೇನೆ. ಇದರ ಚಿತ್ರೀಕರಣವೆಲ್ಲವೂ ನಡೆಯುವುದು ಬೆಂಗಳೂರಿನಲ್ಲೇ. ಶೂಟಿಂಗ್ ಡೇಟ್ ಕೊಟ್ಟ ಒಂದು ದಿನ ಮುಂಚಿತವಾಗಿ ಅಮ್ಮ ನನ್ನನ್ನು ಮಂಗಳೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲದೆ ಶೂಟಿಂಗ್ ಮುಗಿಸಿ ಮರಳಿ ಬಂದ ದಿನವೇ ಶಾಲೆಗೆ ಹೋಗುತ್ತೇನೆ. ಶೂಟಿಂಗ್ ನೆಪದಲ್ಲಿ ನಾನು ಶಾಲೆಗೆ ಸುಮ್ಮನೇ ಚಕ್ಕರ್ ಹಾಕುವುದಿಲ್ಲ. ಜತೆಗೆ ನಾನು ನನ್ನ ಶಾಲೆಯ ದಿನಗಳನ್ನು ಎಷ್ಟು ಆಗುತ್ತೋ ಅಷ್ಟು ಹಾಜರಾಗುತ್ತಿದ್ದೆ.

ನನ್ನ ಟ್ರಾವೆಲ್ ಬ್ಯಾಗ್ ಹೀಗಿರುತ್ತೆ
ಪ್ರವಾಸಕ್ಕೆ ಹೋಗುವಾಗ ಅಮ್ಮನೇ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡುತ್ತಾಳೆ. ಆದರೆ ನಾನು ಬೆನ್ನಿಗೇರಿಸುವ ಬ್ಯಾಗ್ ನಲ್ಲಿ ನನಗಿಷ್ಟವಾದ ಐಟಂಗಳನ್ನು ಇರಿಸಿಕೊಳ್ಳುತ್ತೇನೆ. ಅದರಲ್ಲಿ ನೀರಿನ ಬಾಟಲ್, ಚಾಕೊಲೆಟ್ಸ್, ಹಣ್ಣು ಮತ್ತು ನನಗಿಷ್ಟವಾದ ಕಲರ್ ಬುಕ್ಸ್ ಇಟ್ಟುಕೊಂಡಿರುತ್ತೇನೆ. ಬಿಡುವಾದಾಗಲೆಲ್ಲಾ ಕಲರ್ ಮಾಡುತ್ತಾ ಟೈಮ್ ಪಾಸ್ ಮಾಡುತ್ತೇನೆ.