ಕೂಲ್ ಗರ್ಲ್ ದಿಯಾಗೆ ಹಿಮಪಾತ ನೋಡುವಾಸೆಯಂತೆ !
ಷೋಗಳಿಗಾಗಿ ಕರ್ನಾಟಕದಾದ್ಯಂತ ಮತ್ತು ದೇಶದಾದ್ಯಂತ ಸುತ್ತಾಡಿದ್ದೇನೆ. ಎಲ್ಲ ಕಡೆಯೂ ನಮಗೆ ವಿಭಿನ್ನ ಹಾಗೂ ವಿಶೇಷವಾದ ಅನುಭವಗಳೇ ಆಗಿವೆ. ಉದಾಹರಣೆಗೆ ಭಾಷೆಯ ಸ್ಲ್ಯಾಂಗನ್ನೇ ತೆಗೆದುಕೊಳ್ಳಿ, ಬೆಂಗಳೂರು ಕಡೆ ಹೋದರೆ – “ಹಲೋ! ಹೌ ಆರ್ ಯು, ಹೇಗಿದಿರಾ, ಚೆನ್ನಾಗಿದಿರಾ?” ಅಂತ ಕೇಳ್ತಾರೆ. ಉತ್ತರ ಕರ್ನಾಟಕದ ಕಡೆ ಹೋದಾಗ- “ನಮಸ್ಕಾರ್ರೀ ಮೇಡಂ ಅವರ, ಹೆಂಗದರೀ, ಚಲೋ ಅದಿರೀ?” ಅಂತ ಕೇಳ್ತಾರೆ. ಅದೇ, ಕೋಸ್ಟಲ್ ಕಡೆ ಹೋದರೆ-“ಹೋಯ್! ಹೆಂಗದ್ರಿ ಮಾರ್ರೆ?” ಅಂತಾರೆ.
ದಿಯಾ ಹೆಗಡೆ, ವಯಸ್ಸಿನಲ್ಲಿ ಚಿಕ್ಕವಳಾದರೂ ಇವಳು ಮಾಡಿರುವ ಸಾಧನೆ ಅಪಾರ. 'ಸರಿಗಮಪ' ಸೀಸನ್ 10 ರ ಫೈನಲಿಸ್ಟ್ ಆಗಿದ್ದ ದಿಯಾ, ಹಿಂದಿಯ 'ಸೋನಿ ಸೂಪರ್‌ಸ್ಟಾರ್ ಸಿಂಗರ್' ಮತ್ತು 'ಇಂಡಿಯನ್ ಐಡಲ್' ನಂಥ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಗಾಯಕಿ, ನಟಿ, ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಈ ಪುಟಾಣಿ, ಕಾರ್ಯಕ್ರಮಗಳಿಗಾಗಿ ಸುತ್ತಾಡಿರುವುದೇ ಹೆಚ್ಚು. ದಿಯಾ ಹೆಗಡೆ ಟ್ರಾವೆಲ್ ಸ್ಟೋರಿಯನ್ನು ಮಕ್ಕಳ ದಿನಾಚರಣೆಯಂದು ಮಿಸ್ ಮಾಡ್ಕೊಳ್ಳೋದುಂಟಾ?
ಮೃಗಾಲಯಕ್ಕೆ ಹೋಗುವಾಸೆ
ನನಗೆ ಪ್ರವಾಸ ಅಂದ ತಕ್ಷಣ ಮೃಗಾಲಯವೇ ಮೊದಲು ನೆನಪಾಗುತ್ತದೆ. ವೈಲ್ಡ್‌ಲೈಫ್ ಸ್ಯಾಂಕ್ಚುರೀಸ್, ಬರ್ಡ್ ಸ್ಯಾಂಕ್ಚುರೀಸ್ ಇವೆಲ್ಲಾ ನನಗೆ ತುಂಬ ಇಷ್ಟವಾಗುವ ಜಾಗ. ಯಾಕೆಂದರೆ ನನಗೆ ಪ್ರಾಣಿ, ಪಕ್ಷಿಗಳನ್ನು ನೋಡುವುದೆಂದರೆ ಬಹಳ ಇಷ್ಟ. ಅಲ್ಲಿಗೆ ಹೋದಾಗ ಡಿಫರೆಂಟ್ ಸ್ಪೀಶೀಸ್ ಮತ್ತು ಡಿಫರೆಂಟ್ ಕಲರ್ಡ್ ಕ್ರಿಯೇಚರ್ಸ್‌ನ ನೋಡುವ ಅವಕಾಶ ಸಿಗುವುದು ನಿಜಕ್ಕೂ ಅದ್ಭುತ.

ಯುನೀಕ್ ಎಕ್ಸ್‌ಪೀರಿಯನ್ಸ್ ನೀಡಿದ ದುಬೈ ಪ್ರವಾಸ
ನಾನು ಅನೇಕ ಕಾರ್ಯಕ್ರಮಗಳಿಗಾಗಿ ಹೆತ್ತವರೊಂದಿಗೆ ವಿದೇಶಗಳಿಗೂ ಪ್ರಯಾಣಿಸಿದ್ದೇನೆ. ಜತೆಗೆ ಇವೆಂಟ್ ಮುಗಿಸಿ ಬಿಡುವು ಮಾಡಿಕೊಂಡು ಅಲ್ಲಿನ ಟೂರಿಸ್ಟ್ ಪ್ಲೇಸ್‌ಗಳನ್ನು ನೋಡಲು ಹೋದಾಗ ನನಗಂತೂ ತುಂಬಾ ಯುನೀಕ್ ಎಕ್ಸ್‌ಪೀರಿಯನ್ಸ್‌ಗಳಾಗಿವೆ. ನಾನು ಕೈಗೊಂಡ ವಿದೇಶಿ ಪ್ರವಾಸಗಳಲ್ಲಿ ತುಂಬಾ ಖುಷಿ ಕೊಟ್ಟ ಪ್ರವಾಸವೆಂದರೆ ದುಬೈಗೆ ಹೋಗಿದ್ದು. ಅಲ್ಲಿ ಶೋ ಮುಗಿಸಿಕೊಂಡು ದುಬೈ ರೌಂಡ್ಸ್ ಹೋಗಿದ್ದೆವು. ಅಲ್ಲಿನ ನೀಟ್ ಆಗಿರುವ ರಸ್ತೆಗಳಲ್ಲಿ ನಡೆದಾಡುವುದೇ ಖುಷಿ.
ಭಾಷೆಯ ಸ್ಲ್ಯಾಂಗ್ ಮೋಡಿ ಮಾಡುತ್ತೆ
ಷೋಗಳಿಗಾಗಿ ಕರ್ನಾಟಕದಾದ್ಯಂತ ಮತ್ತು ದೇಶದಾದ್ಯಂತ ಸುತ್ತಾಡಿದ್ದೇನೆ. ಎಲ್ಲ ಕಡೆಯೂ ನಮಗೆ ವಿಭಿನ್ನ ಹಾಗೂ ವಿಶೇಷವಾದ ಅನುಭವಗಳೇ ಆಗಿವೆ. ಉದಾಹರಣೆಗೆ ಭಾಷೆಯ ಸ್ಲ್ಯಾಂಗನ್ನೇ ತೆಗೆದುಕೊಳ್ಳಿ, ಬೆಂಗಳೂರು ಕಡೆ ಹೋದರೆ – “ಹಲೋ! ಹೌ ಆರ್ ಯು, ಹೇಗಿದಿರಾ, ಚೆನ್ನಾಗಿದಿರಾ?” ಅಂತ ಕೇಳ್ತಾರೆ. ಉತ್ತರ ಕರ್ನಾಟಕದ ಕಡೆ ಹೋದಾಗ- “ನಮಸ್ಕಾರ್ರೀ ಮೇಡಂ ಅವರ, ಹೆಂಗದರೀ, ಚಲೋ ಅದಿರೀ?” ಅಂತ ಕೇಳ್ತಾರೆ. ಅದೇ, ಕೋಸ್ಟಲ್ ಕಡೆ ಹೋದರೆ-“ಹೋಯ್! ಹೆಂಗದ್ರಿ ಮಾರ್ರೆ?” ಅಂತಾರೆ. ಹೀಗೆ ಅವರ ಭಾಷೆ ಇರಬಹುದು, ಫುಡ್ ಇರಬಹುದು, ಕಲ್ಚರ್ ಇರಬಹುದು, ಎಲ್ಲವೂ ವಿಭಿನ್ನ ಮತ್ತು ನನಗೆ ತುಂಬಾ ಖುಷಿ ಕೊಟ್ಟಿದೆ. ಯಾವುದೋ ಒಂದು ಪ್ಲೇಸ್ ಬೆಸ್ಟ್ ಅಂತ ಹೇಳಲಿಕ್ಕಾಗುವುದಿಲ್ಲ, ಎಲ್ಲ ಜಾಗಗಳೂ ನನಗೆ ಅದ್ಭುತ ಅನುಭವ ನೀಡಿವೆ.
ಕರುನಾಡ ಹೆಮ್ಮೆ ನಮ್ಮ ಜೋಗ
ನಾನು ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ ಆಗಿರೋದ್ರಿಂದ ಜಗತ್‌ಪ್ರಸಿದ್ಧ ಜೋಗ ಜಲಪಾತ ಅಂದ್ರೆ ನನಗೆ ತುಂಬಾನೇ ಇಷ್ಟ. ಅದರಲ್ಲೂ ಮಳೆಗಾಲದಲ್ಲಿ ಎಲ್ಲ ಗೇಟ್‌ಗಳನ್ನು ತೆರೆದಾಗ ಆ ದೃಶ್ಯ ವೈಭವವನ್ನು ನೋಡಲು ಎರಡು ಕಣ್ಣುಗಳು ಸಾಲದು. ನಾನು ಆಗಾಗ ಹೋಗುವ ತಾಣವೂ ಕೂಡ ಜೋಗ ಜಲಪಾತವೇ. ಅದು ಎಷ್ಟು ಸುಂದರವಾಗಿದೆ ಎಂಬುದನ್ನು ವರ್ಣಿಸುವುದೇ ಕಷ್ಟ ನನಗೆ. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿರುವುದೇ ನನ್ನ ಭಾಗ್ಯ, ನಮ್ಮ ರಾಷ್ಟ್ರಕವಿ, ಕರ್ನಾಟಕ ರತ್ನ ಕುವೆಂಪು ಅವರು ಹೇಳಿದಂತೆ- “ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ, ಮೊರೆವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ, ಅಲ್ಲಿ ಗಿಳಿಗೊರವಂಕಕೋಗಿಲೆಗಳಿಂಚರವು ಕಲೆಯುತಲೆ ಎಲೆಯಾಗಿ ತೇಲಿಬರುತಿರಲಿ” ಅಂತ. ಇಂಥ ಅದ್ಭುತ ಮಲೆನಾಡಿನಲ್ಲಿ ಹುಟ್ಟಿರುವ ನಾವೇ ಪುಣ್ಯವಂತರು. ಸುಂದರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಡು ನಮ್ಮ ಮಲೆನಾಡು. ಈ ಮಲೆನಾಡಿನಲ್ಲಿ ನನಗೆ ತುಂಬಾನೇ ಇಷ್ಟ ಆಗಿರುವ ಜಾಗ ಅಂದ್ರೆ ಅದು ನಮ್ಮ ಜೋಗ ಜಲಪಾತ.

ಟ್ರಾವೆಲ್ ಬ್ಯಾಗ್‌ನಲ್ಲಿ ಫುಡ್ ಕಿಟ್
ನಾವು ಪ್ರವಾಸಕ್ಕೆ ಹೊರಡುವಾಗ ನನ್ನ ಅಮ್ಮ ಇಟ್ಟುಕೊಳ್ಳುವ ಮೊದಲ ವಸ್ತು ಫಸ್ಟ್ ಏಡ್ ಕಿಟ್. ಯಾಕೆಂದರೆ safety is the first priority. ಆದರೆ, ನಾನು ನನ್ನ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವ ಮೊದಲ ವಸ್ತು ಫುಡ್‌ಬ್ಯಾಗ್. ಅದರಲ್ಲಿ ನಾನು ಚಾಕೊಲೆಟ್, ಫ್ರೂಟ್ಸ್, ಡ್ರೈ ಫ್ರೂಟ್ಸ್, ಸ್ನ್ಯಾಕ್ಸ್ ಇಟ್ಟುಕೊಂಡಿರುತ್ತೇನೆ. ಟ್ರಾವೆಲ್ ಮಾಡುವುದೇ ಒಂದು ಸುಂದರ ಅನುಭವ, ಅದರಲ್ಲೂ ಸ್ನ್ಯಾಕ್ಸ್ ತಿಂದುಕೊಂಡು ಎಂಜಾಯ್ ಮಾಡುತ್ತಾ ಟ್ರಾವೆಲ್ ಮಾಡುವುದು ಇನ್ನಷ್ಟು ಚೆನ್ನಾಗಿರುತ್ತೆ.
ಸ್ನೋ ಫಾಲ್ ನೋಡುವಾಸೆ
ಡ್ರೀಮ್ ಪ್ಲೇಸ್ ಯಾವುದು ಎಂದು ಯಾರೇ ಕೇಳಿದರೂ ನನ್ನ ಉತ್ತರ ಒಂದೇ. ಅದುವೇ ಸ್ನೋ ಫಾಲ್ ಆಗುವ ಜಾಗಗಳು. ಚಿಕ್ಕಂದಿನಿಂದಲೂ ಸ್ನೋ ಬೀಳುವ ಜಾಗಗಳಿಗೆ ಹೋಗಬೇಕೆಂದುಕೊಳ್ಳುತ್ತಲೇ ಇದ್ದೇನೆ. ಇನ್ನೂ ಹೋಗುವುದಕ್ಕಾಗಿಲ್ಲ.
ರಿಯಾಲಿಟಿ ಷೋಗಾಗಿ ಸುತ್ತಾಟ
ʼಝೀ ಸರಿಗಮಪʼ ಶೂಟಿಂಗ್ ನಡೆದದ್ದು ಬೆಂಗಳೂರಿನಲ್ಲಿ, ನಾವೆಲ್ಲ ಕಂಟೆಸ್ಟಂಟ್‌ಗಳು ಸೇರಿಕೊಂಡು ರಿಹರ್ಸಲ್ಸ್‌ಗಾಗಿ ಅನೇಕ ಕಡೆಗಳಿಗೆ ಟ್ರಾವೆಲ್ ಮಾಡುತ್ತಿದ್ದೆವು. ಹಾಗೆ ಟ್ರಾವೆಲ್ ಮಾಡುವಾಗ ಹಾಡು ಹಾಡಿಕೊಂಡು, ಗೇಮ್ಸ್ ಆಡುತ್ತಲೇ ಆ ಪ್ರಯಾಣವನ್ನು ತುಂಬಾ ಎಂಜಾಯ್ ಮಾಡಿರುವುದೇ ಹೆಚ್ಚು. ಇನ್ನು ಹಿಂದಿಯ ʻಸೂಪರ್ ಸ್ಟಾರ್ ಸಿಂಗರ್ಸ್ʼ ಕಾರ್ಯಕ್ರಮ ಮುಂಬೈನಲ್ಲಿ ನಡೆದಿತ್ತು. ಅದಕ್ಕಾಗಿ ನಾವು ತುಂಬಾನೇ ಫ್ಲೈಟ್ ಜರ್ನಿ ಮಾಡಬೇಕಾಗಿತ್ತು. ಆದರೂ ಅದೊಂದು ಥರದ ವಿಶೇಷ ಅನುಭವಗಳನ್ನು ಕಟ್ಟಿಕೊಟ್ಟಿದೆ.

ಚಿಕ್ಕಮಗಳೂರಿನಲ್ಲಿ ‘ಶೋಧ’
ನಾನು ನಟಿಸಿರುವ ʻಶೋಧʼ ವೆಬ್ ಸೀರೀಸ್ ಚಿತ್ರೀಕರಣ ಇತ್ತೀಚೆಗಷ್ಟೇ ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ನಡೀತು. ಚಳಿಯಲ್ಲಿ ಕಾಫಿ ಕುಡಿದುಕೊಂಡು ಶೂಟಿಂಗ್ ಮಾಡುವ ಅನುಭವ ತುಂಬಾ ಮಜವಾಗಿತ್ತು. ಅಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಅಲ್ಲಿನ ಕಾಫಿ ಎಸ್ಟೇಟ್ಸ್ ಮತ್ತು ಪ್ರಮುಖ ಪ್ರವಾಸಿತಾಣಗಳಿಗೂ ಭೇಟಿ ನೀಡಿದ್ದೇನೆ. ಒಟ್ಟಾರೆ ಅನುಭವ ತುಂಬಾ ಚೆನ್ನಾಗಿತ್ತು.
ಚಾರಣ ಕಷ್ಟವಪ್ಪಾ
ನನಗೆ ಬೀಚ್, ನೇಚರ್ ಎರಡೂ ತುಂಬಾನೇ ಇಷ್ಟ. ಯಾಕೆಂದರೆ ಎರಡೂ ನೋಡಲು ತುಂಬಾ ಚೆನ್ನಾಗಿರುತ್ತದೆ. ಅಲ್ಲಿ ಕಾಲ ಕಳೆಯುವುದೆಂದರೂ ನನಗೆ ತುಂಬ ಇಷ್ಟವಾಗುತ್ತದೆ. ಇನ್ನು ಟ್ರೆಕ್ಕಿಂಗ್ ಇಷ್ಟವೇ ಆದರೂ ನಾನು ಚಿಕ್ಕವಳಾಗಿರುವುದರಿಂದ ಬೆಟ್ಟ ಏರುವುದು ತುಂಬ ಕಷ್ಟ.
ಗೆಳೆಯರ ಜತೆ ಕಾಲ ಕಳೆಯಲು ಶಾಲಾ ಪ್ರವಾಸ
ನಾನು ಬಹಳಷ್ಟು ಸಮಯವನ್ನು ಕಾರ್ಯಕ್ರಮ, ಇವೆಂಟ್ಸ್‌ಗಳಲ್ಲೇ ಕಳೆಯೋದರಿಂದ ಇದುವರೆಗೂ ಶಾಲೆಯ ಪ್ರವಾಸಕ್ಕೆಂದು ಹೋಗಿದ್ದು ಕಡಿಮೆ. ಆದರೆ ಶಾಲೆಯ ಪ್ರವಾಸದ ಬಗ್ಗೆ ಮಾತನಾಡೋದಾದರೆ, ನಾವು ಯಾವ ಜಾಗಕ್ಕೆ ಹೋಗುತ್ತಿದ್ದೇವೆ ಎನ್ನುವುದಕ್ಕಿಂತ ಸ್ನೇಹಿತರ ಜತೆ ಹೇಗೆ ಪ್ರವಾಸವನ್ನು ಎಂಜಾಯ್ ಮಾಡುತ್ತೇವೆ ಎನ್ನುವುದೇ ಮುಖ್ಯವಾಗುತ್ತದೆ.