ಅಣ್ಣಾವ್ರ ಹಾಡೇ ನನ್ನ ಪ್ರವಾಸಕ್ಕೆ ಸ್ಫೂರ್ತಿ- ಗಾನವಿ ಲಕ್ಷ್ಮಣ್
ಮಹಾರಾಷ್ಟ್ರದ ಅಜಂತಾ ಎಲ್ಲೋರ ಗುಹೆಗಳನ್ನು ನೋಡಿರುವುದು ನನ್ನ ಮರೆಯಲಾಗದ ಅನುಭವ. "ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು.." ಎಂದು ಅಣ್ಣಾವ್ರು ಸುಮ್ಮನೇ ಹಾಡಿಲ್ಲ ಎನ್ನುವ ಸತ್ಯದ ಅರಿವು ಆಗ ಆಯಿತು. ಮುಖ್ಯವಾಗಿ ಒಂದೇ ಬಂಡೆಯಿಂದ ಕೆತ್ತಿರುವಂಥ ಕೈಲಾಸನಾಥ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇವುಗಳನ್ನೆಲ್ಲ ನೋಡುತ್ತಿದ್ದರೆ, ಸಾಧನೆ ಎನ್ನುವುದೆಲ್ಲ ಈಗಾಗಲೇ ನಮ್ಮ ಹಿರಿಯರು ಮಾಡಿ ಮುಗಿಸಿದ್ದಾರೆ. ನಾವು ಏನಿದ್ದರೂ ಆ ಸಾಧನೆಗಳಿಗೆ ಭಂಗ ಬರದಂತೆ ಕಾಪಾಡಿಕೊಂಡು ಹೋಗುವುದಷ್ಟೇ ಮಾಡಬೇಕಾಗಿದೆ ಎಂದು ಅರ್ಥವಾಗುತ್ತದೆ.
- ಶಶಿಕರ ಪಾತೂರು
ಟಿ ಎನ್ ಸೀತಾರಾಮ್ ನಿರ್ದೇಶನ ಧಾರಾವಾಹಿಯಲ್ಲಿ ’ಮಗಳು ಜಾನಕಿ’ಯಾಗಿ ನಾಡಿನ ಮನಗೆದ್ದ ಗಾನವಿ ಲಕ್ಷ್ಮಣ್, ರಿಷಬ್ ಶೆಟ್ಟಿ ನಿರ್ಮಾಣದ ಹೀರೋ ಚಿತ್ರದಲ್ಲಿ ನಾಯಕಿಯಾಗಿದ್ದರು. ಪ್ರಸ್ತುತ ಹೆಚ್ಚಾಗಿ ಬೆಳ್ಳಿತೆರೆಯಲ್ಲೇ ಗುರುತಿಸಿಕೊಳ್ಳುತ್ತಿರುವ ಗಾನವಿ ತಮ್ಮ ಪ್ರವಾಸದ ಆಸಕ್ತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನೀವು ಪ್ರವಾಸಿ ಪ್ರಿಯೆನಾ?
ಖಂಡಿತವಾಗಿ. ಆದರೆ ನಾನು ಎಷ್ಟೊಂದು ಅದೃಷ್ಟವಂತೆ ಅಂದರೆ ಹುಟ್ಟಿರುವುದೇ ಪ್ರವಾಸಿ ತಾಣವಾದ ಚಿಕ್ಕಮಗಳೂರಿನ ಮಡಿಲಲ್ಲಿ. ಹೀಗಾಗಿ ಪ್ರವಾಸಿ ತಾಣ ನೋಡಲು ಪ್ರವಾಸವನ್ನೇ ಮಾಡಬೇಕಿಲ್ಲ. ಅಂಥ ಅದೃಷ್ಟವಂತೆ ನಾನು.
ನಿಮ್ಮ ಮೊದಲ ಪ್ರವಾಸದ ನೆನಪುಗಳೇನು?
ಮೊದಲ ಪ್ರವಾಸದ ನೆನಪು ಶಾಲೆಯಿಂದಲೇ ಶುರುವಾಗುತ್ತೆ. ಅಂದು ಮೈಸೂರು ಅರಮನೆ ನೋಡಿದ್ದೆವು. ಅದುವರೆಗೆ ಓದಿ, ಸಿನಿಮಾಗಳಲ್ಲಿ ನೋಡಿ ಮಾತ್ರ ತಿಳಿದಿದ್ದ ಮೈಸೂರನ್ನು ಕಣ್ಣಾರೆ ಕಂಡಿದ್ದೇ ಅದ್ಭುತ ಅನಿಸಿತ್ತು. ರವಿವರ್ಮನ ಚಿತ್ರಗಳನ್ನು ನೇರವಾಗಿ ನೋಡಿದ್ದು ಸೌಭಾಗ್ಯದಂತಾಗಿತ್ತು.

ರಾಜ್ಯದೊಳಗೆ ನಿಮ್ಮ ಮೈಮರೆಯುವಂತೆ ಮಾಡಿದ ಪ್ರವಾಸಿ ತಾಣ ಯಾವುದು?
ಇತ್ತೀಚೆಗಷ್ಟೇ ಹಂಪಿಗೆ ಹೋಗಿದ್ದೆ. ಬಾಲ್ಯದಲ್ಲಿ ಒಂದೆರಡು ಬಾರಿ ಹೋಗಿದ್ದರೂ ಈಗ ಮತ್ತೊಮ್ಮೆ ನೋಡಬೇಕು ಅನಿಸಿದ ಕಾರಣ ಹೋದಂಥ ಜಾಗ ಅದು. ಅಲ್ಲಿನ ವೇದಿಕೆ ಮತ್ತು ಆಸ್ಥಾನ ಜಾಗಕ್ಕೆ ಬಹಳ ದೂರವಿದೆ. ಅಂದರೆ ಅಲ್ಲಿಂದ ಇಲ್ಲಿಗೆ ಸ್ಪಷ್ಟವಾಗಿ ಕಾಣುವಂತೆ ಎಷ್ಟೊಂದು ವರ್ಣಾಕರ್ಷಕ ವಸ್ತ್ರಗಳಲ್ಲಿ ಕಾರ್ಯಕ್ರಮ ನೀಡಿರಬಹುದು ಎನ್ನುವ ಕಲ್ಪನೆಯೇ ಮೈನವಿರೇಳುವಂತೆ ಮಾಡಿತ್ತು.
ರಾಜ್ಯದ ಹೊರಗಿನ ಪ್ರವಾಸದ ಅನುಭವದ ಬಗ್ಗೆ ಹೇಳ್ತೀರ?
ರಾಜ್ಯ ಬಿಟ್ಟು ಹೊರಗಡೆ ಹೋಗಿದ್ದೆಲ್ಲ ಸ್ಪೋರ್ಟ್ಸ್ ರಿಲೇಟೆಡ್ ಆಗಿ ಹೋಗಿರುವಂಥದ್ದು. ವಿದ್ಯಾರ್ಥಿನಿಯಾಗಿದ್ದಾಗ ಜಾವೆಲಿನ್ ಥ್ರೋ ಮೂಲಕ ಗುರುತಿಸಿಕೊಂಡಿದ್ದ ನಾನು ಅಂತರ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಗುಜರಾತ್ ಗೆ ಹೋಗಿದ್ದೆ. ಪ್ರವಾಸಕ್ಕೆ ಎಂದೇ ಹೋಗಿ ಸುತ್ತಾಡಿದ್ದು ಅಂದರೆ ಪಾಂಡಿಚೇರಿಯಲ್ಲಿ. ಅಧಿಕೃತವಾಗಿ ಪುದುಚೇರಿ ಎಂದು ಹೆಸರಾಗಿರುವ ಇಲ್ಲಿ ಬ್ಲ್ಯಾಕ್ ಕಾಲನಿ, ವೈಟ್ ಕಾಲನಿ ಅಂತ ಎರಡು ಜಾಗಗಳಿವೆ. ಒಂದು ಸಣ್ಣ ಸೇತುವೆಯ ಎರಡು ಭಾಗಗಳಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿ ವಿಭಾಗಿಸಲ್ಪಟ್ಟಿದೆ.
ಒಂದು ಪ್ರದೇಶವನ್ನು ಎಷ್ಟು ಸುಂದರವಾಗಿ ಇರಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇಲ್ಲಿ ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು ತುಂಬಿದ ಸಾಂಸ್ಕೃತಿಕ ವೈಭವಗಳ ನಾಡು. ಅರೋವಿಲ್ಲೆಯಲ್ಲಿ ಗೋಲ್ಡನ್ ಗ್ಲೋಬ್ ನಂತೆ ಕಾಣುವ ಮಾಟ್ರಿಮಂದಿರ್ ಇದೆ. ಇದೊಂದು ಪ್ರವಾಸಿ ತಾಣ ಅಲ್ಲವಾದರೂ ಹೊರಗಡೆಯಿಂದ ವೀಕ್ಷಣೆಗೆ ಅವಕಾಶ ಇದೆ. ಅಧ್ಯಾತ್ಮಿಕತೆಯಲ್ಲಿ ಆಸಕ್ತರಾಗಿರುವವರು ಇಲ್ಲಿನ ಅರಬಿಂದೋ ಆಶ್ರಮದ ಒಳಗೆ ಒಮ್ಮೆ ಹೋಗಿ ಅನುಭವ ಪಡೆದುಕೊಳ್ಳಬಹುದು.
ಜೀವನದಲ್ಲಿ ಒಮ್ಮೆ ಈ ಜಾಗವನ್ನು ನೋಡಲೇಬೇಕು ಎನ್ನುವ ಅನುಭವ ಆಗಿದ್ದೆಲ್ಲಿ?
ಮಹಾರಾಷ್ಟ್ರದ ಅಜಂತಾ ಎಲ್ಲೋರ ಗುಹೆಗಳನ್ನು ನೋಡಿರುವುದು ನನ್ನ ಮರೆಯಲಾಗದ ಅನುಭವ. "ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು.." ಎಂದು ಅಣ್ಣಾವ್ರು ಸುಮ್ಮನೇ ಹಾಡಿಲ್ಲ ಎನ್ನುವ ಸತ್ಯದ ಅರಿವು ಆಗ ಆಯಿತು. ಮುಖ್ಯವಾಗಿ ಒಂದೇ ಬಂಡೆಯಿಂದ ಕೆತ್ತಿರುವಂಥ ಕೈಲಾಸನಾಥ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇವುಗಳನ್ನೆಲ್ಲ ನೋಡುತ್ತಿದ್ದರೆ, ಸಾಧನೆ ಎನ್ನುವುದೆಲ್ಲ ಈಗಾಗಲೇ ನಮ್ಮ ಹಿರಿಯರು ಮಾಡಿ ಮುಗಿಸಿದ್ದಾರೆ. ನಾವು ಏನಿದ್ದರೂ ಆ ಸಾಧನೆಗಳಿಗೆ ಭಂಗ ಬರದಂತೆ ಕಾಪಾಡಿಕೊಂಡು ಹೋಗುವುದಷ್ಟೇ ಮಾಡಬೇಕಾಗಿದೆ ಎಂದು ಅರ್ಥವಾಗುತ್ತದೆ.
ಡಾ.ರಾಜ್ ಹಾಡಿನಲ್ಲಿ ಬರುವ ಪ್ರತಿಯೊಂದು ಜಾಗವನ್ನು ಸುತ್ತಿ ನೋಡಬೇಕು ಎನ್ನುವ ಮನಸಾಗಿದೆ.
ಪ್ರವಾಸ ಹೋಗಿ ನಿರಾಸೆಗೊಂಡ ಉದಾಹರಣೆಗಳಿವೆಯೇ?
ಸಾಮಾನ್ಯವಾಗಿ ನಾನು ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತೇನೆ. ಹೈದರಾಬಾದ್ ಗೆ ಹೋದಾಗ ಚಾರ್ ಮಿನಾರ್ ಸಂದರ್ಶಿಸಿದ್ದೇನೆ. ಆದರೆ ಈ ಹಿಂದೆ ಓದಿ ಕೇಳಿದ್ದಂಥ ವೈಭವ ಅಲ್ಲಿ ಹೋದಾಗ ಕಣ್ಣೋಟಕ್ಕೆ ಸಿಗಲಿಲ್ಲ. ಇದೇನಾ ಅನಿಸುವಂತಿತ್ತು. ಚಾರ್ ಮಿನಾರ್ ಸಂದರ್ಶನ ವ್ಯವಸ್ಥೆಯನ್ನು ಪ್ರವಾಸಿಗಳಿಗೆ ಆಕರ್ಷಕವೆನಿಸುವಂತೆ ಇನ್ನಷ್ಟು ಚೆನ್ನಾಗಿ, ಅಚ್ಚುಕಟ್ಟಾಗಿ ನಿರ್ವಹಿಸಬಹುದಿತ್ತು ಅನಿಸಿತ್ತು.
ಪ್ರವಾಸಕ್ಕೆ ಹೋಗುವಾಗ ಅಧ್ಯಯನ ಮಾಡಿಕೊಳ್ಳುವುದು ಎಷ್ಟು ಮುಖ್ಯ?
ಕ್ಷಮಿಸಿ. ಅಧ್ಯಯನ ಮಾಡಿ ಹೊರಡುವವರ ಪಟ್ಟಿಯಲ್ಲಿ ನಾನಿಲ್ಲ. ಸಾಮಾನ್ಯವಾಗಿ ಪ್ರವಾಸಕ್ಕೆಂದು ಹೋಗುವಾಗ ತಲುಪಲಿರುವ ಜಾಗದ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಹೆಚ್ಚಿನ ನಿರೀಕ್ಷೆಯಿಂದ ನಿರಾಶೆ ಆಗಬಾರದು ಎನ್ನುವುದೇ ಮುಖ್ಯ ಉದ್ದೇಶ. ಅದೇ ರೀತಿ ಆ ಜಾಗದ ಮುಂದೆ ಹೋಗಿ ನಿಂತಾಗ ಫೊಟೋ, ವಿಡಿಯೋ ತೆಗೆಯುವುದು ಅಥವಾ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು ಇಂಥದ್ದೇನೂ ಮಾಡಲ್ಲ. ಪೂರ್ತಿಯಾಗಿ ಅದರಲ್ಲೇ ಮುಳುಗಿಕೊಂಡು ಆಸಕ್ತಿ ಮೂಡಿದಷ್ಟು ಆಳಕ್ಕಿಳಿದು ನೋಡುತ್ತಾ ಹೋಗುವುದು ನನ್ನ ಅಭ್ಯಾಸ. ಸಣ್ಣಪುಟ್ಟ ಜಾಗಕ್ಕೆ ಹೋದರೂ ನಾನು ಅಲ್ಲಿ ತುಂಬ ಸಮಯ ಕಳೆಯಲು ಬಯಸುತ್ತೇನೆ. ಒಂದೆರಡು ದಿನಗಳಿಂದ ಹಿಡಿದು ವಾರಗಳ ಕಾಲ ಇದ್ದಂಥ ಉದಾಹರಣೆಯೂ ಇದೆ. ಸಂಪೂರ್ಣವಾಗಿ ಅಲ್ಲೇ ಇದ್ದು ಅನುಭವಾತ್ಮಕವಾಗಿ ಅರ್ಥಮಾಡಿಕೊಳ್ಳುವುದು ನನ್ನ ಹವ್ಯಾಸ.
ನೀವು ಹೆಚ್ಚಾಗಿ ಒಂಟಿಯಾಗಿಯೇ ಪ್ರವಾಸಕ್ಕೆ ಹೋಗುತ್ತೀರಾ?
ಮೊದಲು ಹೆಚ್ಚು ಸೋಲೋ ಟ್ರಿಪ್ ಮಾಡಿದ್ದೇನೆ. ವಾಸ್ತವದಲ್ಲಿ ಪಾಂಡಿಚೇರಿಗೆ ಹೋಗಿದ್ದು ಕೂಡ ಒಂದು ಕಾರ್ಯಾಗಾರಕ್ಕಾಗಿಯೇ. ಹಾಗಾಗಿ ಒಬ್ಬಳೇ ಹೋಗಿದ್ದೆ. ಫ್ರಾನ್ಸ್ ನಿಂದ ಬಂದವರೊಬ್ಬರು ಅಲ್ಲಿ ವರ್ಕ್ ಶಾಪ್ ನಡೆಸಿದ್ದರು. ಐತಿಹಾಸಿಕ ಜಾಗಗಳಿಗೆ ಹೋಗುವಾಗ ಅಂಥ ಪ್ರದೇಶಗಳನ್ನು ಇಷ್ಟಪಡುವವರನ್ನು ಮಾತ್ರ ಜತೆಗೆ ಕರೆದೊಯ್ಯುತ್ತೇನೆ. ಒಬ್ಬೊಬ್ಬರಿಗೆ ಟ್ರೆಕ್ಕಿಂಗ್ ಮಾಡೋದು ಇಷ್ಟ. ಅಂಥ ಫ್ರೆಂಡ್ಸ್ ಬೇರೆ. ನಾವು ಪ್ರವಾಸ ಮಾಡುವ ಜಾಗದ ಬಗ್ಗೆ ಆಸಕ್ತಿ ಇರುವವರೊಂದಿಗೆ ಹೋದಾಗಲೇ ಹೆಚ್ಚು ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ.
ಒಬ್ಬರೇ ಹೋಗುವುದಾದರೆ ಒಂದಷ್ಟು ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರಬೇಕಾಗುತ್ತದೆ.

ಪ್ರವಾಸದಿಂದ ನೀವು ಕಲಿತಿರುವುದೇನು?
ಪ್ರವಾಸವೇ ಒಂದು ಕಲಿಕೆ. ನಾನು ತುಂಬಾ ಕಲಿತಿದ್ದೇನೆ. ಅದಕ್ಕಾಗಿಯೇ ಹೊರಡುವಾಗಲೇ ತಲೆ ಖಾಲಿ ಇಟ್ಟುಕೊಂಡೇ ಹೋಗಬೇಕು. ಕಲಾವಿದರಿಗೆ ವಿವಿಧ ಭಾವಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯ ಜನರಿಗೆ ಕೂಡ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಎಷ್ಟು ಅಗತ್ಯ ಎಂದು ಅರಿವಾಗುತ್ತದೆ. ಹೋದ ಕಡೆಯಲ್ಲಿ ಹೇಗೆ ಹೊಂದಿಕೊಳ್ಳಬೇಕು ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ ನನ್ನ ಪ್ರಕಾರ ಜೀವನವೇ ಒಂದು ಹೊಂದಾಣಿಕೆ. ನಾನು ಹೀಗೆಯೇ ಇರುತ್ತೇನೆ ಎಂದು ಕುಳಿತರೆ ನಾವೇ ಕಳೆದುಕೊಳ್ಳುವುದು ಹೆಚ್ಚು. ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸುವುದು, ಧೈರ್ಯದಿಂದ ಮುನ್ನುಗ್ಗುವುದನ್ನು ಪ್ರವಾಸ ಹೇಳಿಕೊಟ್ಟಿದೆ.
ನಮ್ಮ ಓದುಗರಿಗೆ ನೀವು ಸೂಚಿಸುವ ಪ್ರವಾಸಿತಾಣ ಯಾವುದು?
ಚಿಕ್ಕಮಗಳೂರಿನಲ್ಲಿ ಎಲ್ಲೇ ತಿರುಗಾಡಿದರೂ ಪ್ರಾಕೃತಿಕ ವೈಭವ ಗಮನಿಸಬಹುದು. ಮುಳ್ಳಯ್ಯನ ಗಿರಿ ಇತ್ತೀಚೆಗೆ ಹೆಚ್ಚು ಜನಪ್ರಿಯ. ಪ್ರಕೃತಿಯ ವೈವಿಧ್ಯವನ್ನು ನೋಡಬೇಕಾದರೆ ಅಲ್ಲಿಗೆ ಹೋಗುವುದು ಉತ್ತಮ.
ಪ್ರವಾಸದ ಆಸಕ್ತರಿಗೆ ನೀವು ನೀಡುವ ಸಲಹೆ ಏನು?
ಆಸಕ್ತಿ ಇದ್ದಾಗ ಆ ಶಕ್ತಿ ಸೃಷ್ಟಿಸಿಕೊಂಡು ಪ್ರವಾಸ ಮಾಡಬೇಕು. ಎಲ್ಲ ಮುಗಿದ ಮೇಲೆ ಪ್ರವಾಸ ಮಾಡುತ್ತೇನೆ ಎಂದು ಮುಂದೆ ಹಾಕುತ್ತಾ ಕುಳಿತರೆ ಆ ಕಾಲ ಬರದೇ ಇರಬಹುದು. ನನಗೆ ಇದುವರೆಗೆ ವಿದೇಶಕ್ಕೆ ಹೋಗಲು ಸಾಧ್ಯವಾಗಿಲ್ಲ. ಅದರೆ ಅವಕಾಶ ಸಿಕ್ಕೊಡನೆ ಹೋಗಲೇಬೇಕು ಅಂತ ನಿರ್ಧಾರ ಮಾಡಿದ್ದೇನೆ. ಮುಂದಿನ ಬಾರಿ ವಿದೇಶದ ಪಯಣದ ಅನುಭವಗಳೊಂದಿಗೆ ಹೆಚ್ಚಿನ ಸಲಹೆ ನೀಡುತ್ತೇನೆ.