Wednesday, October 8, 2025
Wednesday, October 8, 2025

ಇಷ್ಟಕಾಮ್ಯದ ಹುಡುಗನಿಗೆ ಟೆಂಪಲ್ ಟ್ರಿಪ್ ಇಷ್ಟ!

ಧಾರಾವಾಹಿಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದ ನನಗೆ ವಿದೇಶಗಳಲ್ಲಿ ಅಭಿಮಾನಿಗಳು ಎದುರಾಗುವುದು ಸದಾ ವಿಶೇಷ ಅನಿಸುತ್ತದೆ. ದುಬೈನಂಥ ದೇಶಗಳಲ್ಲಿ ಕನ್ನಡಿಗರು ಹೆಚ್ಚಾಗಿರುವ ಕಾರಣ ಅದು ಸಹಜ ಅನಿಸಿತ್ತು. ಆದರೆ ಲಂಡನ್‌ನಲ್ಲಿ ಜರ್ಮನ್ ಹುಡುಗಿಯರು ಬಂದು ನನ್ನ ಜತೆ ಫೊಟೋ ತೆಗೆಸಿಕೊಂಡರು. ಅದು ನನಗೇನೇ ಅಚ್ಚರಿ ತರಿಸಿತ್ತು. ನಾನು ನಿಮಗೆ ಹೇಗೆ ಗೊತ್ತು ಎಂದು ಅವರಲ್ಲೇ ಪ್ರಶ್ನಿಸಿದೆ. ಆಗ ಅವರು ʼನಮ್ಮ ಕರ್ನಾಟಕದ ಫ್ರೆಂಡ್ಸ್ ನಿಮ್ಮ ಧಾರಾವಾಹಿ ತೋರಿಸಿ ಅಭ್ಯಾಸ ಮಾಡಿಸಿದ್ದಾರೆ. ನಾವು ಕೂಡ ಅಗ್ನಿಸಾಕ್ಷಿ ನೋಡಿ ಅಭಿಮಾನಿಯಾದೆವುʼ ಅಂದರು!

-ಶಶಿಕರ ಪಾತೂರು

ವಿಜಯ ಸೂರ್ಯ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಭರವಸೆ ಮೂಡಿಸಿದ ನಾಯಕ ನಟ. ಅಗ್ನಿಸಾಕ್ಷಿ ಧಾರಾವಾಹಿ ಮತ್ತು ಇಷ್ಟಕಾಮ್ಯ ಸಿನಿಮಾದಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದವರು. ತಮ್ಮ ಅಸಾಮಾನ್ಯ ಕಲಾ ಪ್ರತಿಭೆಯಿಂದ ಪ್ರಸಿದ್ಧಿಗಳಿಸಿರುವ ವಿಜಯ್‌ ಅವರಿಗೆ ಸುತ್ತುವ ಖಯಾಲಿಯೂ ಇದೆ. ಅದರಲ್ಲೂ ಇವರಿಗೆ ಧಾರ್ಮಿಕ ಪ್ರವಾಸವೆಂದರೆ ಅಚ್ಚುಮೆಚ್ಚು. ಅದಕ್ಕೆ ಕಾರಣವಾದ ಅಂಶ ಮತ್ತು ವಿಶಿಷ್ಟ ಅನುಭವವನ್ನು ಸ್ವತಃ ವಿಜಯ ಸೂರ್ಯ ಅವರು ಹಂಚಿಕೊಂಡಿದ್ದಾರೆ.

ನೀವು ಇತ್ತೀಚೆಗೆ ಪ್ರವಾಸ ಹೋದಂಥ ಜಾಗ ಯಾವುದು?

ನಾನು‌ ಪ್ರವಾಸ ಹೋಗುವುದೆಲ್ಲ ನನ್ನೊಳಗಿನ ಅಧ್ಯಾತ್ಮಿಕ ಬೆಳವಣಿಗೆಯ ಕಾರಣಕ್ಕಾಗಿಯೇ ಹೊರತು ಬೇರ್ಯಾವುದಕ್ಕೂ ಅಲ್ಲ. ಇತ್ತೀಚೆಗೆ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿಂದ ಶ್ರೀರಂಗಂಗೆ ಹೋಗಿ ಮರಳಿದ್ದೇನೆ. ಬಹುಶಃ ತಮಿಳುನಾಡಿನ ಈ ದೇವಸ್ಥಾನಗಳಿಗೆ ಇದು ನನ್ನ ಮೂರನೇ ಬಾರಿಯ ಪಯಣ. ಮಹಾಲಕ್ಷ್ಮಿ ನಮ್ಮ ಮನೆದೇವತೆ. ನಾರಾಯಣ ಕೂಡ ಆಕೆಯ ಜತೆಯಲ್ಲೇ ಇರುವ ಕಾರಣ ಶ್ರೀನಿವಾಸನ ಈ ಕ್ಷೇತ್ರಗಳು ಕೂಡ ನನಗೆ ಸದಾ ಪ್ರಿಯವಾದವು. ಮೊನ್ನೆ ನಾನು ಹೋಗಿದ್ದು ಅನಂತಪದ್ಮನಾಭ ವ್ರತದ ದಿವಸ. ಆ ದಿನ ಶ್ರೀನಿವಾಸ ಕುಳಿತು ಅಭಯಹಸ್ತ ತೋರುತ್ತಾನೆ ಎನ್ನುವುದು ಪ್ರತೀತಿ. ಈ ನಂಬಿಕೆಯಿಂದ ಮೊನ್ನೆ ಪ್ರಯಾಣ ಬೆಳೆಸಿದ್ದೆ.

ಕರ್ನಾಟಕದಲ್ಲಿ ನೀವು ಹೆಚ್ಚು ಬಾರಿ ದರ್ಶನ ಮಾಡಿರುವ ದೇವಾಲಯ ಯಾವುದು?

ನಾವು ದೇವಿ ದೇವಸ್ಥಾನಗಳಿಗೆ ಹೋಗುತ್ತಲೇ ಇರುತ್ತೇವೆ. ಅದರಲ್ಲೂ ಶೃಂಗೇರಿ ಶಾರದೆಯ ದರ್ಶನಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಯಾಕೆಂದರೆ ನಾವು ಕಲಾ ಸೇವೆ ಮಾಡುವವರು. ಹಾಗಾಗಿ ತಾಯಿಯ ಕೃಪೆ ಯಾವತ್ತಿಗೂ ಇರಬೇಕೆಂದು ಬಯಸುತ್ತೇನೆ. ಈ ಪಯಣದಲ್ಲಿ ಪ್ರಕೃತಿಯ ಮಡಿಲಲ್ಲಿರುವ ಆ ದೇವಾಲಯಕ್ಕೆ ಹೋಗಿ ಗುರುಗಳ ದರ್ಶನ ಮಾಡುವುದು ಮುಖ್ಯವಾಗಿರುತ್ತದೆ. ಈ ದೇವಾಲಯದ ಮೇಲಿನ ಭಕ್ತಿಗೆ ನನ್ನ ತಾಯಿಯೇ ಕಾರಣ. ಅಲ್ಲಿ ನದಿಯಲ್ಲಿನ ಮೀನುಗಳಿಗೆ ಕಡ್ಲೆಪುರಿ ಹಾಕುವುದು ಬಾಲ್ಯದಲ್ಲಿನ ನನ್ನ ಇಷ್ಟದ ಅಭ್ಯಾಸ. ಉಳಿದಂತೆ ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಗೋಕರ್ಣ, ಗುಲ್ಬರ್ಗದಲ್ಲಿ ಗಾಣಗಾಪುರ, ದತ್ತಾತ್ರೇಯ ಸ್ವಾಮಿಯ ದೇವಸ್ಥಾನ, ಬೆಂಗಳೂರಲ್ಲಿ ಚಿಕ್ಕ ತಿರುಪತಿ ದೇವಸ್ಥಾನಗಳಿಗೂ ಹೋಗುತ್ತಿರುತ್ತೇನೆ.

ಕರ್ನಾಟಕದ ಹೊರತು ಬೇರೆ ಯಾವ ರಾಜ್ಯಗಳ ದೇವಾಲಯಗಳು ನಿಮ್ಮನ್ನು ಆಕರ್ಷಿಸಿವೆ?

ಎಲ್ಲ ದೇವಾಲಯಗಳು ಆಕರ್ಷಕವೇ. ನಾನು ಯಾವುದಾದರೂ ದೇವಸ್ಥಾನಕ್ಕೆ ಹೋಗಲಾಗಿಲ್ಲವೆಂದರೆ ಅದಕ್ಕೆ ಕಾಲಕೂಡಿ ಬಂದಿಲ್ಲ ಎಂದು ನಂಬುತ್ತೇನೆ. ಯಾಕೆಂದರೆ ದೇವಾಲಯಗಳ ದರ್ಶನ ಎನ್ನುವುದು ಹಣ ಇದ್ದ ಮಾತ್ರಕ್ಕೆ ಮಾಡಬಹುದಾದಂಥದ್ದು ಖಂಡಿತ ಅಲ್ಲ. ಅದಕ್ಕೆ ಯೋಗ ಬೇಕು. ಅದನ್ನು ದೇವರು ತಾನಾಗಿಯೇ ನೀಡಿ ಆಹ್ವಾನಿಸಿದಾಗ ಮಾತ್ರ ನಾವು ಯಶಸ್ವಿಯಾಗಿ ಕ್ಷೇತ್ರ ದರ್ಶನ ಮಾಡಲು ಸಾಧ್ಯ ಎನ್ನುವ ಬಲವಾದ ನಂಬಿಕೆ‌ ನನ್ನದು. ಕರ್ನಾಟಕದ ಹೊರತಾಗಿ ನಾನು ಹೆಚ್ಚು ದೇವಸ್ಥಾನಗಳಿಗೆ ಭೇಟಿಕೊಟ್ಟ ರಾಜ್ಯ ಅಂದರೆ ತಮಿಳುನಾಡು. ತಮಿಳುನಾಡಿನಲ್ಲಿ ನಾನು ಪಳನಿ ಸುಬ್ರಮಣ್ಯ ದೇವಸ್ಥಾನಕ್ಕೆ ವರ್ಷಕ್ಕೆ ಒಂದೆರಡು‌ ಬಾರಿಯಾದರೂ ಹೋಗುತ್ತಿರುತ್ತೇನೆ. ಹಾಗೆ ಕೇರಳದಲ್ಲಿ ಗುರುವಾಯೂರು ಕ್ಷೇತ್ರಕ್ಕೆ ಹೋಗಿದ್ದೇನೆ. ಆಂಧ್ರದಲ್ಲಿ ತಿರುಪತಿಗೆ ಹೋಗುತ್ತಿರುತ್ತೇನೆ. ಅಲ್ಲಿಗೆ ಹೋಗುವ ಮೊದಲು ಕಾಣಿಪಾಕಂ ಗಣೇಶನ ದರ್ಶನ ಮಾಡಿಯೇ ಹೋಗುತ್ತೇವೆ. ಅದು ಉದ್ಭವ ಮೂರ್ತಿ ಎನ್ನುವುದು ವಿಶೇಷ.

ಉತ್ತರ ಭಾರತದ ಪ್ರಾಕೃತಿಕ ಶ್ರೀಮಂತಿಕೆಯ ದೇವಸ್ಥಾನಗಳನ್ನು ನೋಡಿದ ಅನುಭವ?

ಉತ್ತರದಲ್ಲಿ ನೇಪಾಳದ ಪಶುಪತಿನಾಥ ಮಂದಿರಕ್ಕೆ ಹೋಗಿದ್ದೇವೆ. ಅಲ್ಲಿಂದ ಒಂದು ಗಂಟೆಗಳ ಕಾಲ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿ ಮುಕ್ತಿನಾಥ ದೇವಾಲಯದ ದರ್ಶನ ಮಾಡಿದ್ದೇವೆ. ಅದು ಹಿಮಾಲಯದ ತಪ್ಪಲಿನಲ್ಲಿದೆ. ನಾನು ಹಿಮಾಲಯವನ್ನು ಕೂಡ ಅಧ್ಯಾತ್ಮಿಕ ದೃಷ್ಟಿಯಿಂದಲೇ ನೋಡುತ್ತೇನೆ.‌ ಚಾರ್ ಧಾಮ್‌ಗೆ ಹೋಗಬೇಕು ಅಂತ ಇದೆ. ಅಮರನಾಥ ಯಾತ್ರೆ ಮಾಡಬೇಕು. ವೈಷ್ಣೋದೇವಿ ಮಂದಿರವನ್ನು ನೋಡಬೇಕು. ಇದೆಲ್ಲ ನಾನು ಹೋಗಬೇಕು ಎಂದುಕೊಂಡಿರುವ ಜಾಗಗಳು. ಇನ್ನು ಅಮ್ಮನಿಗೆ ಮಾನಸ ಸರೋವರ ದರ್ಶನ ಮಾಡಿಸಬೇಕು ಎನ್ನುವ ಆಸೆಯಿದೆ. ಅದು ಮಗನಾಗಿ ನನ್ನ ಕರ್ತವ್ಯ ಎಂದುಕೊಂಡಿದ್ದೇನೆ.

Vijay Surya

ಮದುವೆಯ ನಂತರ ಹನಿಮೂನ್‌ಗೆ ಪ್ರವಾಸ ಹೋದ ನೆನಪುಗಳು?

ನನ್ನ ಪತ್ನಿ ಕೂಡ ದೈವ ಭಕ್ತೆ. ಹೀಗಾಗಿ ಮದುವೆಯ ನಂತರವೂ ದೇವರ ಆಶೀರ್ವಾದಕ್ಕಾಗಿ ದೇವಸ್ಥಾನಗಳನ್ನು ಸುತ್ತಿದ್ದೇವೆ.‌ ಬಳಿಕ ಮಕ್ಕಳ ಮುಡಿ ಕೊಡುವುದಕ್ಕಾಗಿ ದೇಗುಲಗಳಿಗೆ ಹೋಗಿದ್ದೇವೆ. ಮೂರು ಸಲ ಮುಡಿಕೊಡಿಸುವ ಕಾರಣ ಇದೇ ಒಂದು ಟ್ರಿಪ್ ಥರ ಆಗಿದೆ. ನನ್ನ ಪತ್ನಿಗೆ ಆಂಜನೇಯ ಇಷ್ಟ ದೈವ. ಕೊಪ್ಪಳದಲ್ಲಿನ ಬಂಗಾರಮಕ್ಕಿ ದೇವಾಲಯ ಆಕೆಯ ಮೆಚ್ಚಿನ ದೇವಸ್ಥಾನ. ಇತ್ತೀಚೆಗೆ ಅಲ್ಲಿಗೂ ಹೋಗಿ ಬಂದಿದ್ದೇವೆ. ನನ್ನ ವೈಯಕ್ತಿಕ ಜೀವನದಲ್ಲಾಗಲೀ, ವೃತ್ತಿ ಬದುಕಲ್ಲಾಗಲೀ ದೇವರ ನಂಟು ಕಾಣುತ್ತಲೇ ಇರುತ್ತದೆ. ಉದಾಹರಣೆಗೆ ನೆಲಮಂಗಲದ ಆಂಜನೇಯ ದೇವಸ್ಥಾನದ ಆಸುಪಾಸಲ್ಲೇ ಅಗ್ನಿಸಾಕ್ಷಿಯ ಮೊದಲ ಸಂಚಿಕೆಯನ್ನು ಚಿತ್ರೀಕರಿಸಲಾಗಿತ್ತು. ಅಂಜನಾದ್ರಿ ಬೆಟ್ಟಕ್ಕೆ ಹೋಗಿದ್ದೆ. 'ದೃಷ್ಟಿ ಬೊಟ್ಟು' ಧಾರಾವಾಹಿಯ ಪ್ರಥಮ ದೃಶ್ಯದ ಚಿತ್ರೀಕರಣವೂ ಅಲ್ಲೇ ನಡೆದಿತ್ತು. ಕುಟುಂಬ ಸಮೇತ ಹೋಗಿ ದೇವರ ದರ್ಶನ ಮಾಡಿದ್ದೆವು. ಈಗ ನಾವಿರುವ ಮನೆಗೆ ಸನಿಹದಲ್ಲೇ ರಾಮಾಂಜನೇಯ ದೇವಸ್ಥಾನವಿದೆ.

ಶೂಟಿಂಗ್ ತಾಣಗಳಲ್ಲಿ ಯಾವತ್ತೂ ನಿಮಗೆ ಪ್ರವಾಸ ಹೋದಂಥ ಅನುಭವ ಆಗಿಲ್ಲವೇ?

ನಾನು ಇದುವರೆಗೆ ಸಕಲೇಶಪುರ, ಸಂಡೂರು, ಬಳ್ಳಾರಿ, ಹೈದರಾಬಾದ್ ಭಾಗಗಳಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. 'ಇಷ್ಟಕಾಮ್ಯ' ಸಿನಿಮಾ‌ ಶೂಟಿಂಗ್ ನಡೆದ ಜಾಗ ತುಂಬಾನೇ ಆಕರ್ಷಕವಾಗಿತ್ತು. ಮಲೆನಾಡು ಭಾಗದ ಚಿತ್ರೀಕರಣದ ವೇಳೆ ಬೆಟ್ಟ, ಗುಡ್ಡಗಳಲ್ಲಿ, ಜಲಪಾತದ ಪಕ್ಕದಲ್ಲೇ ಶೂಟಿಂಗ್ ನಡೆಸಿದ್ದು ಮರೆಯಲಾಗದ ಅನುಭವ ನೀಡಿತ್ತು. ಆ ಜಾಗಗಳಲ್ಲಿ ನಟನೆ ಕಷ್ಟವಾದರೂ ಪ್ರಕೃತಿ ಮಾತ್ರ ಕಣ್ಣಿಗೆ ಹಬ್ಬವಾಗಿತ್ತು ಎನ್ನುವುದಂತೂ ಸತ್ಯ.

ದೇವಸ್ಥಾನಗಳ ಪ್ರವಾಸ ಉಳಿದ ಪ್ರವಾಸಗಳಿಗಿಂತ ನಿಮಗೆ ಯಾಕೆ ಹೆಚ್ಚು ಆಪ್ತ?

ಪ್ರವಾಸ ಎಂದು ಹೋಗುವ ಎಲ್ಲ‌ ಕಡೆಗಳಲ್ಲಿ ನಿಮಗೆ ಉತ್ತಮ ಅನುಭವವೇ ಆಗಬೇಕಾಗಿಲ್ಲ. ಯಾಕೆಂದರೆ ಬರಿಗಣ್ಣಿಗೆ ಆಕರ್ಷಕವಾಗಿ ಕಾಣುವ ಜಾಗವೆಲ್ಲ ಪಾಸಿಟಿವ್ ಆಗಿ ಇರುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಆ ಜಾಗಗಳಿಂದ ವಾಪಸಾದ ಬಳಿಕ ನಮ್ಮೊಳಗೆ ನೆಗೆಟಿವ್ ಎನರ್ಜಿ ತುಂಬುವ ಸಾಧ್ಯತೆ ಇರುತ್ತದೆ. ಆದರೆ ದೇವಸ್ಥಾನಗಳ‌ ದರ್ಶನ ಅಂದರೆ ಹಾಗಲ್ಲ. ಯಾವುದೇ ದೇವಸ್ಥಾನಗಳ ದರ್ಶನ‌ ಮಾಡಿದಾಗಲೂ ಅಲ್ಲಿಂದ ಪಾಸಿಟಿವ್ ಎನರ್ಜಿಯನ್ನಷ್ಟೇ ಪಡೆದುಕೊಳ್ಳುತ್ತೇವೆ. ನಾನು ಕ್ಷೇತ್ರದ ಕಡೆಗಿನ ಪ್ರಯಾಣವನ್ನು ಕೂಡ ಪ್ರೀತಿಸುತ್ತೇನೆ. ನನಗೆ ಡ್ರೈವಿಂಗ್‌ನಲ್ಲೂ ಕ್ರೇಜ್‌ ಇದೆ. ಕರ್ನಾಟಕದ ಒಳಗಿರುವ ಸಾಕಷ್ಟು ದೇವಸ್ಥಾನಗಳಿಗೆ ನಾನೇ ಡ್ರೈವ್ ಮಾಡಿಕೊಂಡು ಹೋಗಿದ್ದೇನೆ. ಐನೂರು ಕಿಮೀ ಒಳಗೆ ಎಂದಾದರೆ ರಾಜ್ಯದ ಹೊರಗೂ ನಾನೇ ವಾಹನ ಚಲಾಯಿಸುತ್ತೇನೆ. ಅದಕ್ಕಿಂತ ದೂರ ಎಂದಾದಾಗ ವಿಮಾನ ಪ್ರಯಾಣ ಆಯ್ಕೆ ಮಾಡುತ್ತೇವೆ. ಯಾಕೆಂದರೆ ಮಕ್ಕಳಿಗೆ ಕಷ್ಟವಾಗಬಾರದು ಎನ್ನುವುದು ಮುಖ್ಯ ಉದ್ದೇಶ.

Vijay

ನಿಮ್ಮ ಪ್ರಕಾರ ಪ್ರವಾಸದ ತಯಾರಿ ಯಾವ ರೀತಿಯಲ್ಲಿದ್ದರೆ ಉತ್ತಮ?

ಪ್ರವಾಸ ಹೋಗುವಾಗ ಪುಟ್ಟ ಮಕ್ಕಳಿದ್ದರೆ ಅವರಿಗೆ ಆಹಾರವನ್ನು ಮನೆಯಿಂದಲೇ ತೆಗೆದುಕೊಂಡು ಹೋಗುವುದು ಉತ್ತಮ. ಯಾಕೆಂದರೆ ಹೋದ ಜಾಗಗಳಲ್ಲಿನ ಆಹಾರದ ಬದಲಾವಣೆ ಅವರಿಗೆ ಒಗ್ಗಿಕೊಳ್ಳಬೇಕು ಅಂತ ಏನಿಲ್ಲ. ಆದಷ್ಟು ಮುಂಜಾನೆ ಹೊತ್ತಲ್ಲೇ ಹೊರಟು ಸಂಜೆಯೊಳಗೆ ಜಾಗ ತಲುಪಿಕೊಳ್ಳುವುದು ಉತ್ತಮ. ಅದರಲ್ಲೂ ಕುಟುಂಬ ಸಮೇತ ಪ್ರಯಾಣ ಮಾಡುವಾಗ ಹಗಲೇ ಚೆನ್ನಾಗಿರುತ್ತದೆ. ಯಾಕೆಂದರೆ ವಾಹನಕ್ಕೆ ಸಮಸ್ಯೆ ಎದುರಾದರೂ ರಾತ್ರಿ ಹೊತ್ತಲ್ಲಿ ಹೆಚ್ಚು ಕಷ್ಟ ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಪ್ರಯಾಣದ ಹಿಂದಿನ‌ ದಿನವೇ ವಾಹನ ಸುಸ್ಥಿತಿಯಲ್ಲಿದೆಯಾ ಅಂತ ಸಂಪೂರ್ಣವಾಗಿ ನೋಡಿಕೊಳ್ಳುವುದು ಬೆಸ್ಟ್.

ಪ್ರಿಪರೇಷನ್‌ ಇಲ್ಲದೆ ಹೊರಟ ಟ್ರಿಪ್‌ಗಳಲ್ಲಿ ಸಂಕಷ್ಟಕ್ಕೆ ಈಡಾದ ಅನುಭವಗಳಿವೆಯೇ?

ನಮಗೆ ಒಮ್ಮೆ ತಂಗುವ ವಿಚಾರದಲ್ಲಿ ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ನಾವು ಒಂದು ಪ್ರವಾಸದಿಂದ ಹಿಂದಿರುಗುವಾಗ ರಾತ್ರಿ ಕೊಯಂಬತ್ತೂರಿನಲ್ಲಿ ತಂಗಬೇಕಾಯಿತು. ಆದರೆ ಫೈವ್ ಸ್ಟಾರ್‌ನಿಂದ ಚಿಕ್ಕ‌ಹೋಟೆಲ್‌ಗಳ ತನಕ ಪ್ರತಿಯೊಂದು ಹೋಟೆಲ್‌ಗಳು ಕೂಡ ಬುಕ್ ಆಗಿದ್ದವು. ಅವತ್ತು ಅಲ್ಲೇನೋ ಕಾರ್ಯಕ್ರಮ ಇತ್ತು ಎನ್ನುವ ಕಾರಣಕ್ಕೆ ಹೀಗಾಗಿತ್ತು. ಇದೇ ಹುಡುಕಾಟದಲ್ಲಿ 4 ಗಂಟೆಗಳ‌ ಕಾಲ‌ ಅಲೆದಾಡಿದ್ದೆವು. ಕೊನೆಗೂ ನಮ್ಮ ಅದೃಷ್ಟಕ್ಕೆ ಅದೇ ದಿನ ಉದ್ಘಾಟನೆಗೊಂಡಿದ್ದ ಹೊಟೇಲ್ ಒಂದರಲ್ಲಿ ಒಂದು ರೂಮ್ ಸಿಕ್ಕಿತ್ತು. ಆಗಿನಿಂದ ತಂಗುವ ಯೋಜನೆ ಇದ್ದರೆ ಮೊದಲೇ ರೂಮ್ ಬುಕ್ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ.

Surya

ಪ್ರತಿ ಪ್ರಯಾಣದಲ್ಲಿ ಕೊಂಡೊಯ್ಯಲೇಬೇಕು ಎಂದುಕೊಳ್ಳುವ ವಸ್ತುಗಳು ಯಾವುವು?

ಮುಖ್ಯವಾಗಿ ನನಗೆ ಕಂಫರ್ಟೆಬಲ್ ಅನಿಸುವಂಥ ಬಟ್ಟೆ ಬೇಕೇ ಬೇಕು. ಸಾಮಾನ್ಯವಾಗಿ ಪ್ರಯಾಣದ ವೇಳೆ ಟ್ರ್ಯಾಕ್ ಪ್ಯಾಂಟ್ ಹಾಕಿರುತ್ತೇನೆ. ತಮಿಳುನಾಡು, ಆಂಧ್ರಗಳಲ್ಲಿ ಬಿಸಿಲು ಹೆಚ್ಚು. ಈ ಸಂದರ್ಭದಲ್ಲಿ ಕಾಟನ್ ಕುರ್ತಾಗಳಿಗೆ ಹೆಚ್ಚು ಒತ್ತು ನೀಡುತ್ತೇನೆ. ಪೂರ್ತಿ ಮೈ ಕವರ್ ಆಗುವುದರಿಂದ ಸನ್ ಬರ್ನ್ ಆಗದಂತೆ ತಪ್ಪಿಸಿಕೊಳ್ಳಬಹುದು. ನೀರಿನ ಬಾಟಲಿಗಳು, ಫೋನ್ ಚಾರ್ಜರ್ ಮತ್ತು ಹೆಚ್ಚುವರಿ ಬಟ್ಟೆಗಳು ತೆಗೆದುಕೊಳ್ಳುವುದು ಉತ್ತಮ. ಅಕೌಂಟ್ ನಲ್ಲಿ ಸ್ವಲ್ಪ ಹಣ ಇರಬೇಕಾಗುತ್ತದೆ. ಅದೇ ರೀತಿ ಒಂದಷ್ಟು ಕ್ಯಾಶ್ ಕೂಡ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ.

ವಿದೇಶ ಪ್ರಯಾಣದ ವೇಳೆ ಎದುರಾದ ವಿಶೇಷ ಅನುಭವವನ್ನು ಹಂಚಿಕೊಳ್ಳುತ್ತೀರ?

ಧಾರಾವಾಹಿಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದ ನನಗೆ ವಿದೇಶಗಳಲ್ಲಿ ಅಭಿಮಾನಿಗಳು ಎದುರಾಗುವುದು ಸದಾ ವಿಶೇಷ ಅನಿಸುತ್ತದೆ. ದುಬೈನಂಥ ದೇಶಗಳಲ್ಲಿ ಕನ್ನಡಿಗರು ಹೆಚ್ಚಾಗಿರುವ ಕಾರಣ ಅದು ಸಹಜ ಅನಿಸಿತ್ತು. ಆದರೆ ಲಂಡನ್‌ನಲ್ಲಿ ಜರ್ಮನ್ ಹುಡುಗಿಯರು ಬಂದು ನನ್ನ ಜತೆ ಫೊಟೋ ತೆಗೆಸಿಕೊಂಡರು. ಅದು ನನಗೇನೇ ಅಚ್ಚರಿ ತರಿಸಿತ್ತು. ನಾನು ನಿಮಗೆ ಹೇಗೆ ಗೊತ್ತು ಎಂದು ಅವರಲ್ಲೇ ಪ್ರಶ್ನಿಸಿದೆ. ಆಗ ಅವರು ʼನಮ್ಮ ಕರ್ನಾಟಕದ ಫ್ರೆಂಡ್ಸ್ ನಿಮ್ಮ ಧಾರಾವಾಹಿ ತೋರಿಸಿ ಅಭ್ಯಾಸ ಮಾಡಿಸಿದ್ದಾರೆ. ನಾವು ಕೂಡ ಅಗ್ನಿಸಾಕ್ಷಿ ನೋಡಿ ಅಭಿಮಾನಿಯಾದೆವುʼ ಅಂದರು!

ಇಷ್ಟೆಲ್ಲ ಪ್ರವಾಸಗಳಿಂದ ನೀವು ಕಲಿತ ಪಾಠವೇನು?

ಪ್ರವಾಸದಿಂದ ಮುಖ್ಯವಾಗಿ ತಾಳ್ಮೆ ಕಲಿತಿದ್ದೇನೆ. ಅಂತಿಮವಾಗಿ ಯಾವುದು ಕೂಡ ನಮ್ಮ ಕೈಯಲ್ಲಿ ಇರುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ತಾಳ್ಮೆ ಕಳೆದುಕೊಳ್ಳುವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಅನುಭವದ ಮೂಲಕ ಅರಿಯುವ ಅವಕಾಶ ಲಭಿಸಿದೆ. ಜಾತಿಗಳನ್ನು ದಾಟಿ ಹೇಗೆ ಮನುಷ್ಯತ್ವ ಕೆಲಸ ಮಾಡುತ್ತದೆ ಎನ್ನುವುದರ ಅನುಭವ ಸಿಕ್ಕಿದೆ. ಹೀಗಾಗಿ ಯಾರ ಬಗ್ಗೆಯೂ ಪೂರ್ವಾಗ್ರಹ ಇರಿಸಿಕೊಳ್ಳಬಾರದು ಎನ್ನುವುದನ್ನೆಲ್ಲ ಪ್ರವಾಸ ಕಲಿಸುತ್ತಾ ಹೋಗುತ್ತದೆ. ಆದರೆ ಕಲಿಯುವ ಮನಸ್ಥಿತಿ ಬೇಕು ಅಷ್ಟೇ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್