ಡೊಮೆಸ್ಟಿಕ್ ಟೂರಿಸಂ ನಮ್ಮ ಬೆನ್ನೆಲುಬು- ಪ್ರಶಾಂತ್ ಕುಮಾರ್ ಮಿಶ್ರಾ
ಡೊಮಸ್ಟಿಕ್ ಟೂರಿಸಂ ನಮ್ಮ ಬೆನ್ನೆಲುಬು. ನಮ್ಮ ಮೂಲ ಉದ್ದೇಶ ಕೂಡ ಡೊಮಸ್ಟಿಕ್ ಟೂರಿಸಂ ಗಟ್ಟಿಗೊಳಿಸೋದು. ಗೈಡೆಡ್ ಟೂರ್, ಅಡ್ವೆಂಚರ್ ಸ್ಪೋರ್ಟ್ಸ್, ವೆಲ್‌ನೆಸ್ ರಿಟ್ರೀಟ್ಸ್, ಟೆಂಪಲ್ ಸರ್ಕ್ಯೂಟ್ಸ್, ಎಕೋ ಟೂರಿಸಂ ಇವೆಲ್ಲದರ ಮೂಲಕ ನಮ್ಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಬೇಕಿದೆ.
ಸಂದರ್ಶನ: ನವೀನ್ ಸಾಗರ್
ಪ್ರಶಾಂತ್ ಕುಮಾರ್ ಮಿಶ್ರಾ ಕೆಎಸ್‌ಟಿಡಿಸಿ ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡು ಎರಡು ತಿಂಗಳುಗಳು ಕಳೆದಿವೆ. ಬಿಹಾರ ಮೂಲದ ಪ್ರಶಾಂತ್ ಕುಮಾರ್ ಮಿಶ್ರಾ, 2014ರ ಐಎಎಸ್ ಬ್ಯಾಚ್‌ನವರು. ಈ ಮೊದಲು, ಕೆಎಸ್‌ಟಿಡಿಸಿ ನಿರ್ದೇಶಕರಾಗಿದ್ದವರು. ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿಯೂ ಜನಪ್ರಿಯರಾದವರು. ಕನ್ನಡದಲ್ಲಿ ಸುಲಲಿತವಾಗಿ ಮಾತನಾಡಬಲ್ಲ ಪ್ರಶಾಂತ್ ಈಗಾಗಲೇ ಕೆಎಸ್‌ಟಿಡಿಸಿಯಲ್ಲಿ ತಮ್ಮ ಛಾಪು ಮೂಡಿಸಲಾರಂಭಿಸಿದ್ದಾರೆ. ಈ ಹುದ್ದೆಗೆ ಬಂದು ಕೂತಾಗಿನಿಂದ, ಇಲಾಖೆಯ ಬಗ್ಗೆ ಮತ್ತು ಪ್ರವಾಸೋದ್ಯಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಪ್ರಶಾಂತ್ ಕುಮಾರ ಮಿಶ್ರಾ, ಕೆಎಸ್‌ಟಿಡಿಸಿ ಮತ್ತು ರಾಜ್ಯ ಪ್ರವಾಸೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈಗಾಗಲೇ ಕಾರ್ಯತತ್ಪರರೂ ಆಗಿದ್ದಾರೆ. ತಮ್ಮ ಯೋಜನೆಗಳ ಬಗ್ಗೆ, ತಮಗಿರುವ ಸವಾಲುಗಳ ಬಗ್ಗೆ, ಈ ಕಿರುಸಂದರ್ಶನದಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟವಾಗಿ ಮಾತನಾಡಿದ್ದಾರೆ.
ನಿಮ್ಮ ಈವರೆಗಿನ ಇತರೇ ಕ್ಷೇತ್ರಗಳಲ್ಲಿನ ಅನುಭವ ಮತ್ತು ಕೌಶಲ ಕೆಎಸ್‌ಟಿಡಿಸಿ ಯ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಸಹಕಾರಿ ಆಗಲಿದೆ?
ನಾನು ಸಾರ್ವಜನಿಕ ಆಡಳಿತ ಮತ್ತು ಪಾಲಿಸಿ ಇಂಪ್ಲಿಮೆಂಟೇಶನ್‌ನಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡಿರೋ ಬಹಳಷ್ಟು ಯೋಜನೆಗಳಲ್ಲಿ ಸ್ಟ್ರಾಟಜಿಕ್ ಪ್ಲಾನಿಂಗ್, ಸ್ಟೇಕ್ ಹೋಲ್ಡರ್ ಎಂಗೇಜ್ ಮೆಂಟ್ ಮತ್ತು ಸಸ್ಟೇನಬಲ್ ಡೆವಲಪ್‌ಮೆಂಟ್ ಇಂಥ ಅಂಶಗಳು ಇದ್ದವು. ಇಲ್ಲಿಯೂ ಅಂಥ ಅಂಶಗಳಿವೆ. ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಸಮಯದಲ್ಲಿ ಮೂಲಸೌಕರ್ಯಕ್ಕೆ ಸಂಬಂಧ ಪಟ್ಟ ಹಾಗೆ ಏನೇನು ಸವಾಲುಗಳು ಬರ್ತವೆ, ಸ್ಟೇಕ್ ಹೋಲ್ಡರ್‌ಗಳ ಜತೆ ಸಮನ್ವಯ ಸಾಧಿಸೋಕೆ ಏನೇನು ಅಡ್ಡಿಆತಂಕಗಳು ಎದುರಾಗ್ತವೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೆ. ಅದು ಇಲ್ಲಿ ಉಪಯೋಗಕ್ಕೆ ಬರಲಿದೆ.
ನಾವೀಗ ಸಂಗನಕಲ್ಲು ಮತ್ತು ಸಂಡೂರು ಈ ಜಾಗಗಳನ್ನು ನೂತನ ಪ್ರವಾಸಿ ವಿಭಾಗಗಳನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ. ಸಿರುಗುಪ್ಪ ಮತ್ತು ಕುರುಗೋಡು ಕೂಡ ಪ್ರವಾಸಿ ತಾಣಗಳಾಗುವ ತಾಕತ್ತು ಹೊಂದಿವೆ. ಅಲ್ಲಿ ಅಭಿವೃದ್ಧಿ ಕಾರ್ಯ ಸಾಧ್ಯವಿದೆ.
ಕೆಎಸ್ಆರ್‌ಟಿಸಿಯಲ್ಲಿ ನಿರ್ದೇಶಕನಾಗಿ(ಸಿಬ್ಬಂದಿ) ಕಾರ್ಯ ನಿರ್ವಹಿಸುತ್ತಿದ್ದಾಗ ಬಹಳ ದೊಡ್ಡ ಮಟ್ಟದಲ್ಲಿ ಟ್ರಾನ್ಸ್‌ಪೋರ್ಟ್ ಆಪರೇಶನ್ಸ್ ಮತ್ತು ಮಾನವಸಂಪನ್ಮೂಲ ನಿರ್ವಹಣೆ ಮಾಡಿ ಅನುಭವ ಗಳಿಸಿದ್ದೇನೆ. ಕೆಎಸ್‌ಟಿಡಿಸಿಯ ಸಾರಿಗೆ ವಿಭಾಗ ಕೂಡ ಪ್ರಮುಖವೇ ಆಗಿರುವುದರಿಂದ, ಕೆಎಸ್‌ಆರ್‌ಟಿಸಿಯ ಅನುಭವವನ್ನು ಇಲ್ಲಿ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ.
ಕೆಎಸ್‌ಟಿಡಿಸಿಯ ಮೂಲಸೌಕರ್ಯಗಳಲ್ಲಿ ಹೊಸತನ ತರುವುದು, ಸೇವಾ ಗುಣಮಟ್ಟವನ್ನು ಹೆಚ್ಚಿಸುವುದು, ತಂತ್ರಜ್ಞಾನದ ಸಂಪೂರ್ಣ ಉಪಯೋಗ ಪಡೆದು ಪ್ರವಾಸೋದ್ಯಮವನ್ನು ಬೆಳೆಸುವುದು ನನ್ನ ಮೊದಲ ಗುರಿ. ಆತಿಥ್ಯ ಗುಣಮಟ್ಟ ಹೆಚ್ಚಿಸಿ, ಸುಸ್ಥಿರ ಪ್ರವಾಸೋದ್ಯಮವನ್ನು ಗಟ್ಟಿಗೊಳಿಸಿ, ಕೆಎಸ್‌ಟಿಡಿಸಿಗೆ ಜಾಗತಿಕ ಖ್ಯಾತಿ ತಂದುಕೊಡುವುದು ನನ್ನ ಉದ್ದೇಶವಾಗಿದೆ.
ಕೆಎಸ್‌ಟಿಡಿಸಿ ಯಲ್ಲಿ ಪದಗ್ರಹಣ ಮಾಡಿದ ತಕ್ಷಣ ನಿಮ್ಮನ್ನು ಎದುರಾದ ಸವಾಲು ಯಾವುದು?
ಮೂಲಸೌಕರ್ಯಗಳಿಗೆ ನವಚೈತನ್ಯ ಕೊಡುವುದು ಮತ್ತು ನಿಗಮಕ್ಕೆ ಆರ್ಥಿಕ ಸ್ಥಿರತೆ ನೀಡುವುದು ನನ್ನ ಎದುರಿಗಿರುವ ಸವಾಲು. ನಮ್ಮ ಅಡಿಯಲ್ಲಿರುವ ಹಲವಾರು ಹೊಟೇಲ್, ಲಾಡ್ಜಿಂಗ್‌ಗಳಿಗೆ ಈಗಿಂದೀಗಲೇ ಕಾಯಕಲ್ಪ ಆಗಬೇಕಿದೆ. ನಮ್ಮ ನಿಗಮದ ಹಲವಾರು ಸಾರಿಗೆ ವಾಹನಗಳು ರಿಪೇರಿ ಆಗಬೇಕಿದೆ. ಒಂದಷ್ಟು ಇಂದಿನ ಕಾಲಮಾನದ ಹೊಸ ವಾಹನಗಳೂ ಬೇಕಾಗಿವೆ.
ಬಹಳಷ್ಟು ಮಯೂರ ಹೊಟೇಲ್‌ಗಳು ಹಳತಾಗಿ ಹೋಗಿದ್ದವು. ಅವ್ಯವಸ್ಥೆಯ ಆಗರವಾಗಿತ್ತು. ಇದರಿಂದಾಗಿ ಜನರ ಬರುವಿಕೆಯೂ ಕುಂಠಿತಗೊಂಡಿತ್ತು. ಮಡಿಕೇರಿ ಮತ್ತು ಹಂಪಿಯಲ್ಲಿ ಆದ್ಯತೆಯ ಮೇರೆಗೆ ನವೀಕರಣ, ಜೀರ್ಣೋದ್ಧಾರ ಶುರುವಾಗಿದೆ.
ಇನ್ನೊಂದು ಪ್ರಮುಖ ಸವಾಲು ಏನೆಂದರೆ ಮಾನವ ಸಂಪನ್ಮೂಲಗಳ ಬಳಕೆಯಲ್ಲಿ ಹಿಂದೆ ಬಿದ್ದಿರುವುದು. ಬಹಳಷ್ಟು ಹುದ್ದೆಗಳು ಇಂದಿಗೂ ಖಾಲಿ ಉಳಿದಿವೆ. ಅವುಗಳನ್ನು ಸಮರ್ಥ ನೌಕರರಿಂದ ಭರ್ತಿ ಮಾಡಬೇಕಾಗಿದೆ. ನೌಕರ ಶಕ್ತಿ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಗ್ರಾಹಕರಿಗೆ ಸೇವೆ ನೀಡುವುದೂ ಕಷ್ಟ. ಇದನ್ನು ಕೂಡಲೇ ಸರಿ ಪಡಿಸಿಕೊಂಡರೆ ಪವಾಡ ಸೃಷ್ಟಿಸಬಹುದು.

ಕರ್ನಾಟಕ ಪ್ರವಾಸೋದ್ಯಮದ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಏನು? ನಿಮ್ಮ ವಿಶನ್ ಏನು?
2024-29ರ ಪ್ರವಾಸೋದ್ಯಮ ನೀತಿ ನಿಜಕ್ಕೂ ಅದ್ಭುತವಾಗಿದೆ. ಅದರಲ್ಲಿರೋ ಪ್ರತಿ ಅಂಶಗಳು ನನ್ನ ಮನದಲ್ಲಿರುವ ಅಂಶಗಳೇ. ಕರ್ನಾಟಕದ ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಪ್ರವಾಸದ ನೆಲೆಗಟ್ಟಿನಲ್ಲಿ ನಂಬರ್ ಒನ್ ಮಾಡುವಾಸೆ. ಹಾಗೆಯೇ ಸುಸ್ಥಿರ ಪ್ರವಾಸೋದ್ಯಮವನ್ನು ಶಕ್ತಗೊಳಿಸುವುದು ನನ್ನ ಉದ್ದೇಶ. ಕರ್ನಾಟಕ ಹೆರಿಟೇಜ್ ಟೂರಿಸಂ, ವೆಲ್‌ನೆಸ್ ಟೂರಿಸಂ ಮತ್ತು ಅಡ್ವೆಂಚರ್ ಟೂರಿಸಂನ ಕೇಂದ್ರಸ್ಥಾನ ಅನ್ನಬಹುದು. ಇಲ್ಲಿನ ಪ್ರವಾಸಿತಾಣಗಳಿಗೆ ಮೂಲಸೌಕರ್ಯ ಮತ್ತು ಸ್ಥಳೀಯ ಸಮುದಾಯದ ಬೆಂಬಲ ಇದೆ. ಕರ್ನಾಟಕ ಪ್ರವಾಸೋದ್ಯಮಕ್ಕೆ ಜಾಗತಿಕ ಗುಣಮಟ್ಟ ತರಬೇಕು ಹಾಗೂ ಪ್ರವಾಸಿಗರಿಗೆ, ಸ್ಥಳೀಯ ಸಮುದಾಯಗಳಿಗೆ ಪ್ರವಾಸದಿಂದ ಲಾಭವಾಗುವಂತೆ ಮಾಡಬೇಕು ಎಂಬುದು ನನ್ನ ಆಶಯ. ಅದೇ ರೀತಿ ಕೆಎಸ್‌ಟಿಡಿಸಿಯನ್ನು ಲಾಭದಾಯಕ ಹಾಗೂ ವೃತ್ತಿಪರ ಸಂಸ್ಥೆಯಾಗಿಸುವ ಹೊಣೆ ಕೂಡ ನನ್ನದು. ಸೇವಾ ಗುಣಮಟ್ಟ ಹೆಚ್ಚಿಸೋದು, ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳೋದು ಇವೆಲ್ಲದರ ಮೂಲಕ ಒಂದು ಬೆಂಚ್ ಮಾರ್ಕ್ ಸೆಟ್ ಮಾಡುವ ಉದ್ದೇಶವಿದೆ.
ಸದ್ಯಕ್ಕೆ ಕೆಎಸ್‌ಟಿಡಿಸಿ ಯಾವ ವಿಭಾಗಕ್ಕೆ ಪ್ರಥಮ ಆದ್ಯತೆ ನೀಡುತ್ತಿದೆ?
ಆದ್ಯತೆ ಅನ್ನೋದು ಮಾರುಕಟ್ಟೆಯಲ್ಲಿನ ಬೇಡಿಕೆ ಮೇಲೆ ಹೆಚ್ಚು ಅವಲಂಬಿತ. ಆದರೂ ನಾವು ಹೊಟೇಲ್ ವಿಭಾಗ ಮತ್ತು ಸಾರಿಗೆ ವಿಭಾಗದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಮಯೂರ ಹೊಟೇಲ್‌ಗಳನ್ನು ಹೆಚ್ಚು ಮಂದಿ ಆಯ್ಕೆಮಾಡುವಂತೆ ಮಾಡುವುದು ಮತ್ತು ಅದನ್ನು ಲಾಭದಾಯಕ ಹಂತಕ್ಕೆ ತೆಗೆದುಕೊಂಡು ಹೋಗುವುದು ಒಂದು ಆದ್ಯತೆಯಾದರೆ, ನಮ್ಮಲ್ಲಿರುವ ಮೂವತ್ಮೂರಕ್ಕೂ ಹೆಚ್ಚು ಟೂರ್ ಬಸ್‌ಗಳ ನವೀಕರಣಗೊಳಿಸುವುದು ಮತ್ತೊಂದು ಆದ್ಯತೆ. ಸಫಾರಿ ಸವಾರಿಗಳನ್ನು ಜಾಸ್ತಿ ಮಾಡುವುದೂ ನಮ್ಮ ಯೋಜನೆಯಲ್ಲಿದೆ. ಗ್ರಾಹಕರನ್ನು ಸಂತೃಪ್ತಿಗೊಳಿಸುತ್ತಲೇ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವುದು ಸದ್ಯದ ಗುರಿ.
ಸ್ಥಳೀಯ ಅಂದ್ರೆ ರಾಜ್ಯದ ಒಳನಾಡ ಪ್ರವಾಸೋದ್ಯಮ ಅಭಿವೃದ್ಧಿಗೆ ನಿಮ್ಮ ಕಾರ್ಯತಂತ್ರಗಳೇನು?
ಡೊಮಸ್ಟಿಕ್ ಟೂರಿಸಂ ನಮ್ಮ ಬೆನ್ನೆಲುಬು. ನಮ್ಮ ಮೂಲ ಉದ್ದೇಶ ಕೂಡ ಡೊಮಸ್ಟಿಕ್ ಟೂರಿಸಂ ಗಟ್ಟಿಗೊಳಿಸೋದು. ಗೈಡೆಡ್ ಟೂರ್, ಅಡ್ವೆಂಚರ್ ಸ್ಪೋರ್ಟ್ಸ್, ವೆಲ್‌ನೆಸ್ ರಿಟ್ರೀಟ್ಸ್, ಟೆಂಪಲ್ ಸರ್ಕ್ಯೂಟ್ಸ್, ಎಕೋ ಟೂರಿಸಂ ಇವೆಲ್ಲದರ ಮೂಲಕ ನಮ್ಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಬೇಕಿದೆ.

ಜಾಗತಿಕ ಮಟ್ಟದಲ್ಲಿ ಕರ್ನಾಟಕ ಪ್ರವಾಸಿ ತಾಣಗಳನ್ನು ಪ್ರಚಾರ ಮಾಡೋಕೆ ಯಾವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದೀರಿ?
ಇದಕ್ಕೆ ಸಹಭಾಗಿತ್ವ ಮತ್ತು ಬ್ರ್ಯಾಂಡಿಂಗ್ ತುಂಬ ಅಗತ್ಯ. ಐಆರ್‌ಸಿಟಿಸಿ ಸಹಭಾಗಿತ್ವದಲ್ಲಿ ತಂದಿರುವ ಗೋಲ್ಡನ್ ಚಾರಿಯಟ್, ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು. ಅದರ ಬಗ್ಗೆ ಹೆಚ್ಚು ಪ್ರಚಾರ ಮಾಡುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದ್ದೇವೆ. ಇದರ ಜತೆಜತೆಗೆ ಜಗತ್ತಿನಾದ್ಯಂತ ನಡೆಯುವ ಅಂತಾರಾಷ್ಟ್ರೀಯ ಟ್ರಾವೆಲ್ ಮಾರ್ಟ್‌ಗಳಲ್ಲಿ ಭಾಗವಹಿಸುವ ಮೂಲಕ, ಡಿಜಿಟಲ್ ಅಭಿಯಾನಗಳ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುವ ಯೋಜನೆ ಇದೆ. ರಾಯಭಾರಿ ಕಚೇರಿಗಳೊಂದಿಗೆ ಒಡಂಬಡಿಕೆ, ಡಿಜಿಟಲ್ ಇನ್‌ಫ್ಲುಯೆನ್ಸರ್‌ಗಳ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಇವೆಲ್ಲವನ್ನೂ ಪ್ರಯತ್ನಿಸುತ್ತಿದ್ದೇವೆ. ವಿದೇಶೀಯರ ಮನಸಲ್ಲಿ ಕರ್ನಾಟಕ ಎಂಬುದು ನೋಡಲೇಬೇಕಾದ ರಾಜ್ಯ ಎಂಬ ಭಾವ ಮೂಡಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ.
ವಿದೇಶಿಯರನ್ನು ಆಕರ್ಷಿಸೋಕೆ ಯಾವ ವಿಶೇಷ ಅಭಿಯಾನ ಮಾಡಲಿದ್ದೀರಿ?
ಒಂದೊಂದು ಪ್ರವಾಸಕ್ಕೆ ಒಂದೊಂದು ಥೀಮ್ ಮಾಡುವ ಮೂಲಕ ಆಕರ್ಷಿಸುವ ಯೋಜನೆ ಹಾಕಿದ್ದೇವೆ. ಯುನೆಸ್ಕೋ ಗುರುತಿಸಿದ ಜಾಗಗಳನ್ನು ಸುತ್ತಿಸೋದು, ವೆಲ್‌ನೆಸ್ ರಿಟ್ರೀಟ್ ಗಳದ್ದೇ ಒಂದು ಸೆಗ್ಮೆಂಟ್, ಸದರ್ನ್ ಸ್ಪ್ಲೆಂಡರ್ ಎಂಬ ಪ್ಯಾಕೇಜ್ ಮೂಲಕ ಹಂಪಿ ಮುಂತಾದ ಶಿಲ್ಪಕಲೆ, ದೇವಾಲಯ ಮುಂತಾದ ತಾಣಗಳು, ಗೋಲ್ಡನ್ ಚಾರಿಯಟ್‌ನ ಪ್ರೈಡ್ ಆಫ್ ಕರ್ನಾಟಕ, ಜುವೆಲ್ಸ್ ಆಫ್ ಸೌತ್ ಎಂಬ ಪ್ರಚಾರ, ವೈಲ್ಡ್ ಕರ್ನಾಟಕ ಪ್ಯಾಕೇಜ್ ಮೂಲಕ ನ್ಯಾಷನಲ್ ಪಾರ್ಕ್‌ಗಳನ್ನು ತೋರಿಸುವುದು, ನಂದಿ ಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್, ರೋಪ್ ಕೋರ್ಸ್ ಥರದ ಸಾಹಸಮಯ ಆಟಗಳನ್ನಾಡಿಸುವುದು, ಇವೆಲ್ಲವೂ ವಿದೇಶಿಗರನ್ನು ಆಕರ್ಷಿಸುವುದು ಖಚಿತ.
ಪ್ರವಾಸಿ ಪ್ರಪಂಚದ ಓದುಗರಿಗೆ ಮತ್ತು ರಾಜ್ಯದ ಪ್ರವಾಸಿಗರಿಗೆ ಏನು ಹೇಳಬಯಸುತ್ತೀರಿ?
ನಮ್ಮ ಟ್ಯಾಗ್‌ಲೈನ್ ಹೇಳುವ ಹಾಗೆ, ಕರ್ನಾಟಕ ಅಂದರೆ ಒಂದು ರಾಜ್ಯ ಹಲವು ಜಗತ್ತು. ಪಾರಂಪರಿಕ ಹಂಪಿಯಿಂದ ಕಾರವಾರದ ಬೀಚುಗಳು, ಕೊಡಗಿನ ಕಾಫೀ ತೋಟಗಳಿಂದ ಮೈಸೂರಿನ ರಾಜವೈಭವದ ತನಕ ಇಲ್ಲಿ ಏನುಂಟು ಏನಿಲ್ಲ? ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಕರ್ನಾಟಕ ಆ ಪ್ರವಾಸಿಯನ್ನು ಸಂತೃಪ್ತಿಗೊಳಿಸುತ್ತದೆ. ಇಲ್ಲಿಯವರು ಈ ರಾಜ್ಯದ ತಾಣಗಳ ಬಗ್ಗೆ ಹೆಮ್ಮೆ ಮತ್ತು ಜವಾಬ್ದಾರಿ ತೋರಲಿ ಎಂದು ಬಯಸುತ್ತೇನೆ. ಕೆಎಸ್‌ಟಿಡಿಸಿ ಎಂದಿಗೂ ನಿಮ್ಮೊಂದಿಗಿರುತ್ತದೆ. ಅತ್ಯುತ್ತಮ ಸೇವೆಯನ್ನು ನೀವು ಖಂಡಿತ ನಿರೀಕ್ಷಿಸಬಹುದು. ಕರ್ನಾಟಕ ನೀವು ಅನ್ವೇಷಿಸಿದಷ್ಟೂ ಅಚ್ಚರಿ ಮೂಡಿಸುವ ರಾಜ್ಯ. ಇಲ್ಲಿ ಪ್ರತಿ ಮೈಲಿಗೊಂದು ಕಥೆಯಿದೆ.