ಪೃಥ್ವಿಗೆ ಪೃಥ್ವಿ ಸುತ್ತುವಾಸೆ!
ಕಲಾವಿದರಿಗೆ ವೇದಿಕೆಯೇ ಎಲ್ಲವೂ ಆಗಿರುತ್ತೆ. ಆ ವೇದಿಕೆಗಳಲ್ಲಿ ಹಾಡೋದಕ್ಕೆ, ಶೋಗಳನ್ನು ನೀಡೋದಕ್ಕೆ ಅನೇಕ ಊರುಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ಎಲ್ಲಿಗೆ ಹೋದರೂ ಬೆಂಗಳೂರನ್ನು ಬೀಟ್ ಮಾಡುವ ಸಿಟಿ ಯಾವುದೂ ಇಲ್ಲ ಎಂದನಿಸಿದೆ ನನಗೆ.
ಪ್ರತಿಭಾವಂತ ಯುವಗಾಯಕಿ ಪೃಥ್ವಿ ಭಟ್ ಗಾಯನದಾಚೆ ವೈಯಕ್ತಿಕ ಬದುಕಿನ ಕಾರಣಗಳಿಗೆ ಕಳೆದ ಕೆಲವು ತಿಂಗಳು ಟ್ರೆಂಡಿಂಗ್ ನಲ್ಲಿದ್ದರು. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೃಥ್ವಿ ಭಟ್ ಪ್ರವಾಸಿಪ್ರಿಯೆಯೂ ಹೌದು. ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ’ಪ್ರೀತಿಸುವೆ .. ಪ್ರೀತಿಸುವೆ ಮಿತಿಮೀರಿ ನಿನ್ನನು ಪ್ರೀತಿಸುವೆ” ಗೀತೆ ಸೇರಿದಂತೆ ಹಲವು ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗುತ್ತಿರುವ ಈ ಗಾನಕೋಗಿಲೆ, ಸ್ಟೇಜ್ ಶೋಗಳಿಂದ ಇನ್ನಷ್ಟು ಖ್ಯಾತಿ ಗಳಿಸಿದವರು. ಸ್ಟೇಜ್ ಶೋಗಳ ನೆಪದಲ್ಲಿ ಹಲವು ಪ್ರವಾಸಗಳನ್ನೂ ಮಾಡಿದವರು. ದಕ್ಷಿಣ ಕನ್ನಡ ಮೂಲದ ಈ ಇಂಪುಕಂಠದ ಸುಂದರಿ ಸುಮಾರು 600ಕ್ಕೂ ಹೆಚ್ಚು ಲೈವ್ ಶೋಗಳನ್ನು ನೀಡಿದ್ದು, ಅದರ ಸಲುವಾಗಿಯೇ ದೇಶ ಸುತ್ತಿದ್ದಾರೆ. ತಮ್ಮ ಸುತ್ತಾಟದ ಅನುಭವಗಳನ್ನು ಪ್ರವಾಸಿ ಪ್ರಪಂಚದ ಓದುಗರೊಂದಿಗೆ ಪೃಥ್ವಿ ಭಟ್ ಹಂಚಿಕೊಂಡಿದ್ದು ಹೀಗೆ..

ಮಳೆಗಾಲದಲ್ಲಿ ಟ್ರಿಪ್ ಹೋಗೋದೇ ಖುಷಿ
ಪ್ರವಾಸಕ್ಕೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ. ಸ್ಕೂಲ್ ಡೇಸ್ ನಲ್ಲೂ ಯಾವುದೇ ಅವಕಾಶವನ್ನೂ ಬಿಡದೆ ಟ್ರಿಪ್ ಗಳಿಗೆ ಹೋಗುತ್ತಿದ್ದೆ. ಅದ್ರಲ್ಲೂ ಮಳೆಗಾಲದಲ್ಲಿ ಹಚ್ಚ ಹಸಿರಿನ ಪರಿಸರದ ನಡುವೆ ಪ್ರವಾಸಕ್ಕೆ ಹೋಗುವುದೆಂದರೆ ಅದರ ಖುಷಿಯೇ ಬೇರೆ. ಟ್ರಿಪ್ ಹೋದಾಗ, ಅಲ್ಲಿನ ಕಲ್ಚರ್, ಸ್ಥಳೀಯ ಜನರ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳದೆ ಹೋದರೆ ಪ್ರವಾಸ ಪೂರ್ತಿಯಾಗದು.
ನನ್ನೂರೇ ನನಗಿಷ್ಟ
ನಾನು ದಕ್ಷಿಣ ಕನ್ನಡದ ಹುಡುಗಿ. ನನ್ನೂರಿನಲ್ಲಿ ಅದೆಷ್ಟು ಪ್ರವಾಸಿ ತಾಣಗಳಿವೆಯೆಂದು ಲೆಕ್ಕ ಹಾಕುವುದೇ ಕಷ್ಟ. ಜಲಪಾತಗಳು, ಚಾರಣಕ್ಕೆ ಬೆಟ್ಟ ಗುಡ್ಡಗಳು, ಐತಿಹ್ಯವಿರುವ ಹಳೆಯ ದೇವಾಲಯಗಳು ಹೀಗೆ ಎಲ್ಲವನ್ನೂ ನೋಡಿ ಬರುವ ಸಂಭ್ರಮ ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ.

ಬೆಂಗಳೂರೇ ಬೆಸ್ಟ್…
ಕಲಾವಿದರಿಗೆ ವೇದಿಕೆಯೇ ಎಲ್ಲವೂ ಆಗಿರುತ್ತೆ. ಆ ವೇದಿಕೆಗಳಲ್ಲಿ ಹಾಡೋದಕ್ಕೆ, ಶೋಗಳನ್ನು ನೀಡೋದಕ್ಕೆ ಅನೇಕ ಊರುಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ಎಲ್ಲಿಗೆ ಹೋದರೂ ಬೆಂಗಳೂರನ್ನು ಬೀಟ್ ಮಾಡುವ ಸಿಟಿ ಯಾವುದೂ ಇಲ್ಲ ಎಂದನಿಸಿದೆ ನನಗೆ. ಬೆಂಗಳೂರನ್ನು ಹೊರತುಪಡಿಸಿದರೆ, ಮಂಗಳೂರು, ದಕ್ಷಿಣ ಕನ್ನಡ, ಗಡಿನಾಡು ಕಾಸರಗೋಡು, ಹಾಗೂ ಮೈಸೂರು ನನಗೆ ಆಪ್ತವಾದ ಊರುಗಳು.
ಮಲಯ ಮಾರುತ ಗಾನ!
ಪತಿ ಅಭಿಷೇಕ್ ಜತೆಗೆ ನನ್ನ ಮೊದಲ ಇಂಟರ್ ನ್ಯಾಷನಲ್ ಟ್ರಿಪ್ ಸಿಂಗಾಪೂರ್, ಮಲೇಷ್ಯಾ. ಅದ್ಭುತವಾಗಿತ್ತು. ಕ್ಲೀನ್ ಸಿಟಿ ಎಂದೇ ಹೆಸರಾಗಿರುವ ಈ ದೇಶಗಳನ್ನು ನೋಡಿದ ಮೇಲಂತೂ ನಾವೂ ಹಾಗೆಯೇ ನಮ್ಮ ಪರಿಸರವನ್ನು ನೀಟಾಗಿ ಇಟ್ಟುಕೊಳ್ಳಲೇಬೇಕು ಅನ್ನಿಸಿತ್ತು.

ಅವಳಿ ಒಲವ ನಗೆ...
ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಪೆಟ್ರೋನಾಸ್ ಟ್ವಿನ್ ಟವರ್ಸ್, ಬಟು ಕೇವ್ಸ್, ಬಟು ಗುಹೆಗಳ ಬಳಿಯೇ ಇರುವ ವಿಶ್ವ ಪ್ರಸಿದ್ಧ ಮುರುಗನ್ ಪ್ರತಿಮೆ ಹೀಗೆ ಅನೇಕ ಸ್ಥಳಗಳನ್ನು ನಾವು ಭೇಟಿ ಮಾಡಿದ್ವಿ. ಬಾನೆತ್ತರಕ್ಕೆ ನಿರ್ಮಿಸಿರುವ ವಿಭಿನ್ನ ಕಟ್ಟಡಗಳನ್ನು ನೋಡಿದರಂತೂ ವಾವ್ ಎನಿಸದೇ ಇರದು. ಒಂದಕ್ಕಿಂತ ಒಂದು ಭಿನ್ನ ಅನುಭವ, ಸಾಕಷ್ಟು ನೆನಪುಗಳೊಂದಿಗೆ ವಾಪಸ್ಸಾಗಿರೋದಂತೂ ಸುಳ್ಳಲ್ಲ.
ಸಿಂಗರ್ ಗಿಷ್ಟ ಸಿಂಗಾಪೂರ್ !
ನನಗೆ ಮಲೇಷ್ಯಾಗಿಂತಲೂ ಸಿಂಗಾಪುರ ತುಂಬಾನೇ ಇಷ್ಟವಾಯ್ತು. ಅಲ್ಲಿನ ಜನ ತುಂಬಾ ಸಾಫ್ಟ್ ಸ್ಪೋಕನ್, ಹೆಲ್ಪಿಂಗ್ ನೇಚರ್ ನವರು. ಇನ್ನೂ ವಿಶೇಷ ಅಂದರೆ ಭಯವಿಲ್ಲದೆ ಯಾವುದೇ ಸಮಯದಲ್ಲೂ ಆ ದೇಶದಲ್ಲಿ ಓಡಾಡಬಹುದು. ಆ ಧೈರ್ಯ ಮೊದಲ ನೋಟದಲ್ಲೇ ನಮಗೆ ಸಿಗುತ್ತದೆ. ಅಲ್ಲದೆ ಸಿಂಗಾಪುರ ರೋಡ್ ನ ಬದಿಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬಹುದು, ಅಷ್ಟೊಂದು ನೀಟ್ ಹಾಗೂ ಕ್ಲೀನ್ ಇದೆ.
ಬ್ಯಾಗು ಹಿಡಿ ಸೀದಾ ನಡಿ!
ಪ್ರವಾಸದ ವೇಳೆ ನಾನು ಕ್ಯಾಮೆರಾ ಬಳಸೋದು ಕಡಿಮೆ. ಬದಲಾಗಿ ಫೊಟೋ ತೆಗೆಯೋದಿಕ್ಕೆ ಮೊಬೈಲ್ ಕ್ಯಾಮೆರಾ ಹೆಚ್ಚು ಬಳಸ್ತೀನಿ. ಆದ್ದರಿಂದ ಮೊಬೈಲ್ ಇಲ್ಲದೆ ಟ್ರಾವೆಲ್ ಮಾಡೋದು ನಂಗೆ ಬಹಳ ಕಷ್ಟ. ಇನ್ನು ನನ್ನ ಬ್ಯಾಗ್ ನಲ್ಲಿ ಪ್ರಯಾಣಕ್ಕೆ ಅಗತ್ಯವಾದ ಎಲ್ಲವೂ ಇರುತ್ತದೆ. ಆ ಬ್ಯಾಗ್ ಜತೆಗೆ ಎಲ್ಲೇ ಹೋದರೂ ಜೀವನ ಮಾಡಬಹುದು ಅಷ್ಟರ ಮಟ್ಟಿಗೆ.

ಪ್ಯಾರಿಸ್ ಪ್ಯಾರಿಸ್ ಸಪ್ನೇ..
ಡ್ರೀಮ್ ಕಂಟ್ರಿ ಯಾವುದು ಅಂತ ಕೇಳಿದ್ರೆ ಹೇಳೋದು ಕಷ್ಟ. ಯಾಕೆಂದರೆ ಜೀವಮಾನದಲ್ಲಿ ಎಲ್ಲ ದೇಶಗಳನ್ನು ಸುತ್ತಿಬರುವ ಆಸೆ ನನಗಿದೆ. ಅಲ್ಲದೆ ಇಂಟರ್ ನ್ಯಾಷನಲ್ ಶೋಗಳನ್ನು ಕೊಡಬೇಕೆಂಬ ಆಸೆ ಎಲ್ಲದಕ್ಕೂ ಹೆಚ್ಚಿದೆ. ಮುಖ್ಯವಾಗಿ ಯುರೋಪಿಯನ್ ದೇಶ ಪ್ಯಾರಿಸ್‌ನಲ್ಲಿ ಸುತ್ತಾಡಬೇಕು. ಅಲ್ಲೂ ಕೂಡ ಬೆಸ್ಟ್ ಶೋ ಕೊಡಲೇಬೇಕು ಅಂದುಕೊಂಡಿದ್ದೇನೆ.
ಪ್ರವಾಸಿ ಪ್ರಪಂಚ ಪತ್ರಿಕೆ ಅಲ್ಲ ಗೈಡ್!
ಪ್ರವಾಸಿ ಪ್ರಪಂಚ ವಾರ ಪತ್ರಿಕೆಯ ಬಗ್ಗೆ ಹೇಳುವುದಾದರೆ ಇದೊಂದು ಒಳ್ಳೆಯ ಇನಿಶಿಯೇಟಿವ್. ಬೇರೆ ಬೇರೆ ದೇಶ, ಊರುಗಳ ಬಗ್ಗೆ ತಿಳಿದುಕೊಳ್ಳಬಹುದು. ಬೇರೆಯವರು ಹೋಗಿ ಬಂದು ಬರೆದ ಅನುಭವ ಕಥನವನ್ನು ಓದಿ, ಮುಂದೆ ನಾವು ಪ್ರವಾಸ ಹೋಗಬೇಕಾದರೆ ಹೇಗೆ ತಯಾರಿ ಮಾಡಿಕೊಳ್ಳಬೇಕು, ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವ ಅವಕಾಶ ಬೇರೆಲ್ಲಿ ಸಿಗುತ್ತೆ ಹೇಳಿ..?