Tuesday, November 17, 2026
Tuesday, November 17, 2026

ಕಾಡಿನ ಒಡನಾಡಿ ಪುಟ್ಟ ನಾಯ್ಕ

ಕಾಡು ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಕಾಡಿನ ನಡುವೆ 27 ವರ್ಷಗಳ ಸುದೀರ್ಘ ಅನುಭವ ಹೊಂದಿರುವ, ನ್ಯಾಚುರಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಪುಟ್ಟ ನಾಯ್ಕ ಅವರ ಸಂದರ್ಶನ ಇಲ್ಲಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಳನಕಟ್ಟೆ ಗ್ರಾಮದವರಾದ ಇವರು, ಕಾಡಿನೊಂದಿಗಿನ ತಮ್ಮ ಒಡನಾಟ, ಪ್ರವಾಸಿಗರ ವರ್ತನೆ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

*ನಿಮ್ಮ ವೃತ್ತಿಜೀವನ ಶುರುವಾಗಿದ್ದು ಹೇಗೆ?

- ನಮ್ಮ ಊರು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಹಲಗೂರು ಹೋಬಳಿಯ ದಾಳನಕಟ್ಟೆ. ನಾನು 2005 ಜನವರಿ 1ರಂದು ಜಂಗಲ್ ಲಾಡ್ಜಸ್‌ಗೆ ರೂಮ್ ಬಾಯ್, ಬೇರರ್ ಆಗಿ ಸೇರಿಕೊಂಡೆ. ಆಸಕ್ತಿಯಿಂದ ಒಂದೊಂದೇ ಕಲಿತು, ಕಳೆದ 15-20 ವರ್ಷಗಳಿಂದ ನ್ಯಾಚುರಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟು 27 ವರ್ಷಗಳ ಸರ್ವಿಸ್ ನನ್ನದು. ಗಾಳಿಬೋರೆ, ಭೀಮೇಶ್ವರಿ, ದೊಡ್ಡಮಕ್ಲಿ, ದುಬಾರೆ (13.5 ವರ್ಷ) ಗಳಲ್ಲಿ ಕೆಲಸ ಮಾಡಿ, ಈಗ ಎರಡು ವರ್ಷದಿಂದ ಬನ್ನೇರುಘಟ್ಟದ ಜಂಗಲ್ ಲಾಡ್ಜಸ್‌ನಲ್ಲಿದ್ದೇನೆ.

*ನ್ಯಾಚುರಲಿಸ್ಟ್ ಆಗಿ ನೀವು ಎದುರಿಸುವ ಸವಾಲುಗಳೇನು?

-ಕಲಿಯಬೇಕು ಎಂಬ ಹಂಬಲವಿರಬೇಕು, ಇಲ್ಲದಿದ್ದರೆ ಯಾವುದನ್ನೂ ಮಾಡಲು ಸಾಧ್ಯವಿಲ್ಲ. ನಿಸರ್ಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡವರು ಯಾರೂ ಇಲ್ಲ. ಕಲಿಯುವುದಕ್ಕೇ ಆಗಲ್ಲ, ಹೊಸ ಹೊಸ ವಿಷಯಗಳು ಬರುತ್ತಲೇ ಇರುತ್ತವೆ. ಆ ಕಲಿಯಬೇಕಾಗಿರುವುದನ್ನೇ ನಾನು ಸವಾಲು ಎಂದು ಅಂದುಕೊಂಡಿದ್ದೇನೆ.

Untitled Design (25)

*ನಿಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದಾದರೂ ಇದೆಯಾ?

-ಪ್ರಾಣಿಗಳಿಂದ ಅಂಥ ತೊಂದರೆ ಏನಿಲ್ಲ. ಆದರೆ, ಒಮ್ಮೆ ಆನೆಗಳಿಂದ ಆದ ಘಟನೆ ಮರೆಯಲಾಗದು. ನಾನು ಜೀಪ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ, ಮದ ಬಂದಿದ್ದ ಆನೆಯೊಂದು ದಿಢೀರನೆ ಅಡ್ಡ ಬಂದು ಚೇಸ್ ಮಾಡಿಕೊಂಡು ಬಂತು. ಆನೆಗಳು ನಮ್ಮನ್ನು ಚೇಸ್ ಮಾಡಿಕೊಂಡು ಬಂದಾಗ, ನಾವು ರಿವರ್ಸ್ ಹೋದರೆ ನಮ್ಮನ್ನು ಹೆದರಿಸಿದ್ದೇವೆ ಎಂದುಕೊಂಡು ಇನ್ನೂ ವೇಗವಾಗಿ ಬರುತ್ತವೆ. ಇದು ನನಗೆ ತಿಳಿದಿತ್ತು. ಹಾಗಾಗಿ, ಸ್ವಲ್ಪ ದೂರ ಹೋಗಿ ಗಾಡಿ ನಿಲ್ಲಿಸಿದೆ. ಗೆಸ್ಟ್‌ಗಳು ಹೆದರಿ ಕಿರುಚಾಡಲು ಆರಂಭಿಸಿದರು. ಅವರಿಗೆ ಧೈರ್ಯ ಹೇಳಿ, ಆನೆ ವಾಹನ ಮುಟ್ಟುವುದಿಲ್ಲ ಎಂದು ಸಮಾಧಾನ ಪಡಿಸಿದೆ. ಅದು ಹತ್ತಿರ ಬಂದು ಸುಮ್ಮನೆ ನಿಂತು, ನಂತರ ಹಿಂದಕ್ಕೆ ಹೋಯಿತು.

*ಕಾಡು, ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಹೇಗಿರಬೇಕು?

- ಮನುಷ್ಯ ಕಾಡು ಪ್ರಾಣಿಗಳನ್ನು ಕಾಡಲ್ಲಿ ಹೇಗಿವೆಯೋ ಹಾಗೆ ಬಿಟ್ಟುಬಿಡಬೇಕು. ಅವುಗಳಿಗೆ ತೊಂದರೆ ಕೊಡಬಾರದು. ನಾವು ಸ್ವಲ್ಪ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಾಗ, ಪ್ರಾಣಿಗಳಿಗೆ ಇದು ಕಾಡು ಅಥವಾ ನಾಡು ಎಂದು ಗೊತ್ತಾಗದೆ ಊರೊಳಗೆ ಬರುತ್ತವೆ. ಆಗ ನಾವು ಪಟಾಕಿ ಹೊಡೆದು ಓಡಿಸುತ್ತೇವೆ. ಇದರಿಂದ ಅವುಗಳಿಗೆ ಇನ್ನಷ್ಟು ಕೋಪ ಬರುತ್ತದೆ. ಪ್ರಾಣಿಗಳು ಯಾವುದೇ ಕಾರಣಕ್ಕೂ ಮನುಷ್ಯರಿಗೆ ತೊಂದರೆ ಮಾಡಲ್ಲ, ನಾವು ತೊಂದರೆ ಕೊಡಬಾರದು ಅಷ್ಟೆ.

*ಕಾಡಿಗೆ ಬರುವ ಪ್ರವಾಸಿಗರು ಯಾವ ರೀತಿ ನಡೆದುಕೊಳ್ಳಬೇಕು?

- ಪ್ರವಾಸಿಗರು ಕಾಡು ರಕ್ಷಣೆ ಮಾಡಬೇಕು ಎನ್ನುವ ಮನಸಿನಿಂದ ಬರಬೇಕು. ಬಂದು, ಕೀಟ, ಪಕ್ಷಿ, ಗಿಡಮರಗಳನ್ನು ತೊಂದರೆ ಮಾಡಬಾರದು. ಕಾಡು ಪ್ರಾಣಿಗಳ ಭಾವಚಿತ್ರ ತೆಗೆದುಕೊಂಡು ಹೋಗುತ್ತಾರೆಯೇ ಹೊರತು, ಅವುಗಳನ್ನು ರಕ್ಷಿಸಬೇಕು ಎಂಬ ಮನಸ್ಥಿತಿ ಹೆಚ್ಚಿನವರಿಗೆ ಇರುವುದಿಲ್ಲ. ಅದು ಎಲ್ಲರಲ್ಲೂ ಫಸ್ಟ್ ಬರಬೇಕು.

*ಇಷ್ಟು ವರ್ಷದ ನಿಮ್ಮ ಅನುಭವದಲ್ಲಿ ನೀವು ಕಲಿತ ಪಾಠ ಏನು?

-ಕಾಡು ಬೆಳೆಯಬೇಕು ಅಂದರೆ, ಫಸ್ಟ್ ಕೀಟಗಳು ಬೇಕು. ಕೀಟಗಳಿಲ್ಲದಿದ್ದರೆ ಪರಾಗಸ್ಪರ್ಶ ಆಗಲ್ಲ. ಹಣ್ಣು ಆಗಲ್ಲ, ಹಣ್ಣು ಆಗಿಲ್ಲ ಅಂದರೆ ಪ್ರಾಣಿ ಪಕ್ಷಿಗಳಿಗೆ ತಿನ್ನಲು ಸಿಗಲ್ಲ. ಪ್ರಾಣಿ, ಪಕ್ಷಿ, ಕೀಟಗಳಿಲ್ಲ ಅಂದರೆ ನಾವೂ ಬದುಕಲು ಸಾಧ್ಯವಿಲ್ಲ. ನಾವು ಉಸಿರಾಡುವ ಆಕ್ಸಿಜನ್ ಕಾಡಿನಿಂದಲೇ ಸಿಗುವುದು. ಹಾಗಾಗಿ, ನಾವು ಬದುಕಿರಬೇಕೆಂದರೆ ಕಾಡು ಇರಲೇಬೇಕು.

*ಪ್ರವಾಸಿಗರಿಗೆ ಮತ್ತು ಕಾಡಿಗೆ ಬರುವವರಿಗೆ ನಿಮ್ಮ ಸಂದೇಶ ಏನು?

-ಎಲ್ಲಿಗೇ ಹೋಗಿ, ಏನೇ ಮಾಡಿ, ಕಾಡನ್ನು ಹಾಳು ಮಾಡಬೇಡಿ. ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಬೇಕು. ಪ್ಲಾಸ್ಟಿಕ್ ಬಿಸಾಡುವುದರಿಂದ ನೀರು ಭೂಮಿಯೊಳಗೆ ಇಂಗುವುದಿಲ್ಲ. ಇವತ್ತು ನಾವು ಕಾಡನ್ನು ಉಳಿಸಲಿಲ್ಲ ಎಂದರೆ ಮುಂದಿನ ಪೀಳಿಗೆಗೆ ಏನು ತೋರಿಸಲು ಸಾಧ್ಯವಿಲ್ಲ. ʼಪ್ಲೀಸ್ ಡೋಂಟ್ ಸ್ಪಾಯಿಲ್ ದ ಫಾರೆಸ್ಟ್ʼ ಎಂದು ಹೇಳುತ್ತೇನೆ.

Untitled Design (23)

* ಬನ್ನೇರುಘಟ್ಟದ ವಿಶೇಷತೆ ಏನು?

-ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ 261 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿದೆ. ಕಾವೇರಿ ವೈಲ್ಡ್ ಲೈಫ್ ಸ್ಯಾಂಚುರಿಯೊಂದಿಗೆ ಇದು ಸೇರಿಕೊಳ್ಳುತ್ತದೆ. ಇಲ್ಲಿ ದಟ್ಟವಾದ ಮರಗಳು, ಹುಲಿ, ಚಿರತೆ, ಕಾಡುನಾಯಿ, ಆನೆ, ಕರಡಿ ಮುಂತಾದ ಪ್ರಾಣಿಗಳಿವೆ. ನಾವು ಸಫಾರಿಗೆ ಹೋದಾಗ 100% ಪ್ರಾಣಿಗಳನ್ನು ತೋರಿಸಿಕೊಂಡು ಬರುತ್ತೇವೆ.

*ಸಫಾರಿಗೆ ಯಾವ ಸಮಯದಲ್ಲಿ ಹೋಗುವುದು ಉತ್ತಮ?

-ನಾವು ಬೆಳಗ್ಗೆ ಸಸ್ಯಾಹಾರಿ ಪ್ರಾಣಿಗಳಿರುವ ಪ್ರದೇಶಕ್ಕೆ ವಾಕ್ ಕರೆದುಕೊಂಡು ಹೋಗುತ್ತೇವೆ. ಅಲ್ಲಿ ನ್ಯಾಷನಲ್ ಪಾರ್ಕ್ ಒಳಗೆ ಅಲೋ ಮಾಡಲ್ಲ. ಬೆಳಗ್ಗೆ ಪ್ರಾಣಿಗಳು, ಪಕ್ಷಿಗಳು ಚೆನ್ನಾಗಿ ಕಾಣಸಿಗುತ್ತವೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್