ಕಾಶಿಯಲ್ಲಿದೆ ಖುಷಿ...
‘ಕಾಶಿಯಲ್ಲಿ ಎಲ್ಲ ಕಡೆಗಳಲ್ಲೂ ಶಿವ ತತ್ವ ಇದೆ ಎಂದು ನಾನು ನಂಬುತ್ತೇನೆ. ಶಿವತತ್ವದಲ್ಲಿ ಸಾವು ಕೂಡ ಒಂದು. ಆ ಸಾವು ಎಂಬುದರ ಅರಿವು ಅಲ್ಲಿನ ಜನರಿಗೆ ಇದೆ. ನಾವು ಒಂದಲ್ಲ ಒಂದು ದಿನ ಹೋಗಿಯೇ ಹೋಗುತ್ತೇವೆ ಎನ್ನುವ ಅರಿವು ಅವರಿಗೆ ಬಂದಿದೆ. ಅಲ್ಲಿನ ಜನರಿಗೆ ಸಾವಿನ ಅರಿವಿರುವುದರಿಂದ ಅವರು ಬದುಕನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ’.
ಸೆಲೆಬ್ರಿಟಿಗಳು ಎಂದಾಕ್ಷಣ ನೆನಪಿಗೆ ಬರೋದು ಅವರ ಐಷಾರಾಮಿ ಜೀವನ. ವರ್ಷಕ್ಕೆ ಒಂದೆರಡು ವಿದೇಶಿ ಟ್ರಿಪ್ ಮಾಡಿ, ದೇಶದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಸುತ್ತಾಟ ನಡೆಸೋದು ಅವರ ಹವ್ಯಾಸಗಳಲ್ಲಿ ಒಂದಾಗಿರುತ್ತದೆ. ಆದರೆ, ಎಲ್ಲಾ ಸೆಲೆಬ್ರಿಟಿಗಳು ಒಂದೇ ರೀತಿ ಆಗಿರೋದಿಲ್ಲ. ಕೆಲವರಿಗೆ ಪ್ರವಾಸ ಎಂದರೆ ಅಲರ್ಜಿ. ಈ ಸಾಲಿಗೆ ರಾಜ್ ಬಿ ಶೆಟ್ಟಿ ಕೂಡ ಇದ್ದಾರೆ. ಹಾಗಂತ ಅವರು ಟ್ರಿಪ್ ಮಾಡೋದೇ ಇಲ್ಲ ಎಂದಲ್ಲ. ಅವರು ಎಲ್ಲಿ ಇರುತ್ತಾರೋ ಅಲ್ಲಿ ಖುಷಿ ಕಾಣುತ್ತಾರೆ. ಈ ಸೆಲೆಬ್ರಿಟಿ ಚಾಯ್ಸ್ ಒಂದರ್ಥದಲ್ಲಿ ವಿಶೇಷವಾದದ್ದು.
ಕಾಶಿ ನನ್ನ ಅಲ್ಟಿಮೇಟ್ ಡೆಸ್ಟಿನೇಷನ್!
ಸೆಲೆಬ್ರಿಟಿಗಳಿಗೆ ನಿಮ್ಮಿಷ್ಟದ ಪ್ರದೇಶ ಹೇಳಿ ಎಂದಾಗ ಅನೇಕರು ವಿದೇಶಿ ಸ್ಥಳದ ಹೆಸರನ್ನು ತೆಗೆದುಕೊಳ್ಳುತ್ತಾರೆ. ರಾಜ್ ಬಿ. ಶೆಟ್ಟಿ ಎಲ್ಲ ವಿಚಾರದಲ್ಲೂ ಕೊಂಚ ವಿಭಿನ್ನ ವ್ಯಕ್ತಿ. ಅವರಿಗೆ ಕಾಶಿ ಎಂದರೆ ಬಹು ಪ್ರೀತಿ. ಅವರ ಅಲ್ಟಿಮೇಟ್ ಡೆಸ್ಟಿನೇಷನ್ ಪರಿಕಲ್ಪನೆ ಹೇಗಿದೆ ನೋಡಿ..
‘ಕಾಶಿಯಲ್ಲಿ ಎಲ್ಲ ಕಡೆಗಳಲ್ಲೂ ಶಿವ ತತ್ವ ಇದೆ ಎಂದು ನಾನು ನಂಬುತ್ತೇನೆ. ಶಿವತತ್ವದಲ್ಲಿ ಸಾವು ಕೂಡ ಒಂದು. ಆ ಸಾವು ಎಂಬುದರ ಅರಿವು ಅಲ್ಲಿನ ಜನರಿಗೆ ಇದೆ. ನಾವು ಒಂದಲ್ಲ ಒಂದು ದಿನ ಹೋಗಿಯೇ ಹೋಗುತ್ತೇವೆ ಎನ್ನುವ ಅರಿವು ಅವರಿಗೆ ಬಂದಿದೆ. ಅಲ್ಲಿನ ಜನರಿಗೆ ಸಾವಿನ ಅರಿವಿರುವುದರಿಂದ ಅವರು ಬದುಕನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ’.

ಕಾಶಿ ಮೇಲೆ ಯಾಕೆ ಈ ಪರಿ ಸೆಳೆತ ಎಂಬ ಪ್ರಶ್ನೆಗೆ, ರಾಜ್ ಶೆಟ್ಟರ ಉತ್ತರ ಬಹಳ ಇಂಟರೆಸ್ಟಿಂಗ್ ಇದೆ.
‘ಅಲ್ಲಿ ಎಲ್ಲರೂ ತುಂಬಾ ಸಂಭ್ರಮದಿಂದ ಮಾತನಾಡುತ್ತಾರೆ. ನೀವು ಅಲ್ಲಿ ಎಲ್ಲ ಕಡೆಗಳಲ್ಲೂ ಧ್ಯಾನ ಮಾಡಬಹುದು. ಕಾಶಿಯಲ್ಲಿ ಯಾರೂ ನಿಮ್ಮನ್ನು ಜಡ್ಜ್ ಮಾಡೋದಿಲ್ಲ. ಹುಚ್ಚನಂತೆ ಓಡಾಡಿದ್ರೂ ವಿಚಿತ್ರವಾಗಿ ನೋಡೋದಿಲ್ಲ. ರಾತ್ರಿ 2 ಗಂಟೆಗೆ ಹುಡುಗ-ಹುಡುಗಿ ಸುತ್ತಾಡಲಿ, ಶಿವ ಕಂಡ ಎಂದು ಕೂಗಾಡಲಿ ಯಾರೂ ನಿಮ್ಮನ್ನು ಗಮನಿಸಲ್ಲ. ಅಲ್ಲಿಗೆ ಬದುಕಲ್ಲಿ ಎಲ್ಲವನ್ನೂ ಕಳೆದುಕೊಂಡು ಬರುತ್ತಾರೆ. ನಾನು ಮನೆ ಬಿಟ್ಟು ಬೇರೆ ಎಲ್ಲಾದರೂ ಬದುಕುತ್ತೇನೆ ಎಂದರೆ ಅದು ಕಾಶಿ’ ಅಂತಾರೆ ರಾಜ್!
ಹಾಗಾದ್ರೆ ಕಾಶಿ ಬಿಟ್ರೆ ಇನ್ಯಾವ ಜಾಗಕ್ಕೂ ಹೋಗಬೇಕು ಎಂಬ ಕನಸು ರಾಜ್ ಶೆಟ್ಟರಿಗಿಲ್ಲವಾ? ಖಂಡಿತ ಇದೆ. ಅವರ ಬಾಯಲ್ಲೇ ಕೇಳಿ.
‘ಮಾನಸ ಸರೋವರ ನನ್ನಿಷ್ಟದ ಜಾಗ. ನಾನು ಅಲ್ಲಿಗೆ ಹೋಗಬೇಕು ಎಂದು ಯಾವಾಗಲೂ ಪ್ಲ್ಯಾನ್ ಮಾಡಿಲ್ಲ. ಆದರೆ, ಯಾರಾದರೂ ಬನ್ನಿ ಹೋಗೋಣ ಎಂದರೆ ನಾನು ರೆಡಿ. ಅದು ಡ್ರೀಮ್ ಡೆಸ್ಟಿನೇಷನ್ ಏಕಾಯಿತು ಎಂಬುದಕ್ಕೆ ಕಾರಣವೇ ಇಲ್ಲ’.

ಹಾಗಂತ ರಾಜ್ ಶೆಟ್ಟಿ ಅಧ್ಯಾತ್ಮಿಕ ಮೋಡ್ ಗೆ ಹೋಗಿದ್ದಾರೆಂದು ಭಾವಿಸಿದಿರಿ. ಇಲ್ಲಿ ನೋಡಿ ಅವರ ಪ್ರವಾಸದ ಪರಿಕಲ್ಪನೆ ಹೇಗಿದೆ ಅಂತ.
‘ನಾನು ಸುತ್ತಾಟ ಎಂದರೆ ಇಷ್ಟ ಪಡುವ ವ್ಯಕ್ತಿ ಅಲ್ಲ. ನನಗೆ ಅದು ಸೆಟ್ ಆಗೋದಿಲ್ಲ ಎನ್ನುವುದು ಇತ್ತೀಚೆಗೆ ಗೊತ್ತಾಯಿತು. ನಾನು ಎಲ್ಲಿರುತ್ತೇನೋ ಅಲ್ಲಿ ಖುಷಿ ಕಾಣುವ ವ್ಯಕ್ತಿ. ಬಸವನ ಹುಳುವಿನ ಥರ ನಾನು ನಿಧಾನಕ್ಕೆ ತೆವಳುತ್ತಾ ಸಾಗುತ್ತೇನೆ. ನನಗೆ ಇಂಥ ಸ್ಥಳಕ್ಕೆ ಹೋಗಲೇಬೇಕು ಎಂಬ ಹಠ ಇಲ್ಲ. ಹೋದಾಗ ನಾನು ಆ ಜಾಗವನ್ನು ಎಂಜಾಯ್ ಮಾಡುತ್ತೇನೆ’.
ಅಷ್ಟೊಂದು ಶೂಟಿಂಗ್ ಅಂತ ಸುತ್ತುವ ರಾಜ್ ಶೆಟ್ಟಿಯವರಿಗೆ ಯಾವುದಾದರೂ ಜಾಗ ಇಷ್ಟ ಆಗಿರ್ಲೇಬೇಕಲ್ವಾ? ಯೆಸ್. ಅವ್ರಿಗೆ ಊಟಿ ಬಹಳ ಇಷ್ಟವಾಗಿತ್ತಂತೆ. ಯಾಕೆ ಏನು ಅಂತ ಅವರ ಮಾತಲ್ಲೇ ಕೇಳಿ.
‘ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೂಟ್ಗೆ ಊಟಿಗೆ ತೆರಳಿದ್ದೆವು. ಅಲ್ಲಿ ರೆಡ್ ಹಿಲ್ಸ್ ಎಂಬ ಪ್ರದೇಶ ಅದ್ಭುತವಾಗಿದೆ. ಆ ತಾಣವನ್ನು ನಾನು ಬಹಳ ಇಷ್ಟಪಟ್ಟಿದ್ದೆ. ಆ ಭಾಗದಲ್ಲಿ ಭಾರದ ಚೇರ್ಗಳನ್ನು ಇಡಲಾಗುತ್ತದೆ. ಅದು ಎಷ್ಟು ಭಾರವಿರುತ್ತದೆ ಎಂದರೆ ಒಬ್ಬರಿಂದ ಎತ್ತಲು ಸಾಧ್ಯವಿಲ್ಲ. ಈ ರೀತಿಯ ಚೇರ್ ಇಡಲು ಕಾರಣ ಅಲ್ಲಿನ ಬಿರುಸಾದ ಗಾಳಿ. ಸೂರ್ಯ ಉದಯಿಸುವಾಗ ಕಿರಣಗಳು ಗುಡ್ಡದ ಮೇಲೆ ಬಿದ್ದು ಇಡೀ ಗುಡ್ಡ ಕೆಂಪಾಗುತ್ತದೆ. ಇದಕ್ಕೆ ರೆಡ್ ಹಿಲ್ ಎಂಬ ಹೆಸರು ಇಡಲಾಗಿದೆ’
ಮೊಟ್ಟೆ ಚಿತ್ರದ ಹೀರೋಗೆ ಯಾವ ಫುಡ್ ಇಷ್ಟವಿರಬಹುದು ಅಂತ ಓದುಗರು ಗೆಸ್ ಮಾಡಬಹುದಾ? ಅವ್ರೇ ಹೇಳ್ತಾರೆ ಕೇಳಿ.
‘ನಂಗೆ ಲೋಕಲ್ ಫುಡ್ ಇಷ್ಟ. ಎಲ್ಲಿಗೆ ಹೋದರೂ ಮಂಗಳೂರು ಫುಡ್ ಬೇಕು ಎಂದು ಕೇಳುವವನು ನಾನಲ್ಲ. ಮಂಡ್ಯಕ್ಕೆ ಹೋದರೆ ಮುದ್ದೆ ಬಸ್ಸಾರು ತಿಂತೀನಿ. ಎಲ್ಲೇ ಭೇಟಿ ನೀಡದರೂ ಸ್ಥಳೀಯವಾಗಿ ಯಾವ ಫುಡ್ ಜನಪ್ರಿಯ ಎಂದು ಕೇಳ್ತೀನಿ. ಅದನ್ನೇ ತಿಂತೀನಿ. ನನ್ನ ಹೊಟ್ಟೆ ಬೇಗ ಕೆಡಲ್ಲ. ಇದು ನನಗೆ ದೇವರು ಕೊಟ್ಟ ವರದಾನ’.

ನಮ್ಮ ಪ್ರವಾಸಿ ಪ್ರಪಂಚದ ವರದಿಗಾರ ಆಗುವ ಅವಕಾಶ ಸಿಕ್ರೆ ರಾಜ್ ಶೆಟ್ಟಿ ಯಾವ ಜಾಗದ ಬಗ್ಗೆ ವರದಿ ಮಾಡ್ತಾರೆ ಗೊತ್ತಾ?
ನನ್ನ ನೆಚ್ಚಿನ ಮಾನಸ ಸರೋವರ ಹಾಗೂ ಕೈಲಾಸ ಪರ್ವತದ ಬಗ್ಗೆ ವರದಿ ಮಾಡ ಬಯಸುತ್ತೇನೆ. ಮಾನಸ ಸರೋವರ ತುಂಬಾನೇ ದೊಡ್ಡದಿದೆ. ಅಷ್ಟು ಎತ್ತರದ ಬೆಟ್ಟದಲ್ಲಿ ನೀರು ಸದಾ ಇರುತ್ತದೆ. ಅದನ್ನು ಜನರಿಗೆ ತಿಳಿಸಬೇಕು’
ಇದರೊಂದಿಗೆ ಅವರಿಗೆ ಇನ್ನೊಂದು ಕಾಳಜಿ ಇದೆ. ಅವರ ಮಾತಲ್ಲೇ ಕೇಳಿ.
‘ಉತ್ತರ ಕನ್ನಡದಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಇವೆ. ಅಲ್ಲಿನ ಪ್ರವಾಸಿ ತಾಣಗಳನ್ನು ಬಿಡಿ, ಅದೊಂದು ಜಿಲ್ಲೆ ಇದೇ ಅನ್ನೋದು ಅನೇಕರಿಗೆ ಗೊತ್ತಿಲ್ಲ ಎಂಬುದು ಬೇಸರದ ವಿಚಾರ. ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಮಧ್ಯೆ ಇರುವ ವ್ಯತ್ಯಾಸ ಕೂಡ ಗೊತ್ತಿಲ್ಲ. ಯಾಣ, ದಾಂಡೇಲಿ ಹೀಗೆ ಹಲವು ಜಾಗಗಳು ಇಲ್ಲಿವೆ. ಅದರ ಬಗ್ಗೆ ಅರಿವು ಮೂಡಿಸಬೇಕು’.
ರಾಜ್ ಶೆಟ್ಟಿ ಅವರ ಪರಿಕಲ್ಪನೆ ನಿಜಕ್ಕೂ ಭಿನ್ನ ಅಲ್ವಾ?