Monday, December 8, 2025
Monday, December 8, 2025

ಗೀತಾ ಲೇಖನ ಕೇವಲ ಬರಹವಲ್ಲ,ಅದೊಂದು ಯಜ್ಞ - ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು

ದೇಶ ಎಂದರೆ ಏನು ಎಂದು ಮೊದಲು ಅರ್ಥೈಸಿಕೊಳ್ಳಬೇಕು. ನಿಜವಾದ ದೇಶವೆಂದರೆ ಅಲ್ಲಿನ ಜನರು. ಅವರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದರೆ ಅದೇ ಅಭಿವೃದ್ಧಿ. ಇದು ಆತ್ಮ ನಿರ್ಭರತೆಯಲ್ಲಿ ಅಡಗಿದೆ. ಮತ್ತೊಬ್ಬರ ಮೇಲೆ ನಾವು ಅವಲಂಬಿತರಾಗಿ ಇರಬಾರದು. ಜನರ ಮನಸ್ಥಿತಿ ಸುಧಾರಿಸಬೇಕು.

  • ಜಿತೇಂದ್ರ ಕುಂದೇಶ್ವರ

ಉಡುಪಿಯ ಸಣ್ಣ ಊರಿನಲ್ಲಿ ಹುಟ್ಟಿದವರಾದರೂ ವಿಶ್ವ ಮಟ್ಟದಲ್ಲಿ ಭಗವದ್ಗೀತೆಯನ್ನು ಪ್ರಚಾರ ಮಾಡುವಲ್ಲಿ ನಿಮಗೆ ಸಾಧ್ಯವಾದದ್ದು ಹೇಗೆ?

ಭಗವದ್ಗೀತೆಯ ಕುರಿತು ಬಹಳ ಕುತೂಹಲ ಸದಾ ಇದ್ದೇ ಇದೆ. ಅದು ಅತ್ಯಂತ ಉತ್ಕೃಷ್ಟ ಮತ್ತು ಸತ್ವಯುತ ಗ್ರಂಥ. ಹಾಗಾಗಿ ಅದನ್ನು ಪ್ರಚುರ ಪಡಿಸಿದರೆ ಸಾಕು ತನ್ನಂತಾನೇ ಪ್ರಚಾರವಾಗುತ್ತದೆ. ಇದಕ್ಕೆ ಯಾವ ಜಾಹೀರಾತುಗಳೂ ಬೇಡ.

ಗೀತೆಯ ಮೇಲೆ ಭಕ್ತಿ ಭಾವ ಮೂಡಿದ್ದು ಹೇಗೆ?

ನನಗೆ ವಿಮರ್ಶೆ ಅತ್ಯಂತ ಪ್ರಿಯ. ಇಂಥ ವಿಮರ್ಶೆಯ ಆಸಕ್ತಿಗೆ ಅಪರಿಮಿತ ವಸ್ತು ಒದಗಿಸಿದ್ದು ಭಗವದ್ಗೀತೆ. ಹಾಗಾಗಿ ನನಗೆ ಅಪ್ಯಾಯಮಾನವಾಯಿತು.

ಕೋಟಿ ಗೀತಾ ಲೇಖನ ಯಜ್ಞ ಮಾಡುತ್ತಿದ್ದೀರಿ. ಇದನ್ನು ಬರೆಯುವುದರಿಂದ ಪ್ರಯೋಜನವೇನು?

ಇದು ಕೇವಲ ಬರವಣಿಗೆಯಲ್ಲ ಯಜ್ಞ ಎಂದು ನಾವು ಕರೆದಿದ್ದೇವೆ. ಹಾಗಾಗಿ ಇದೊಂದು ಯಜ್ಞದ ಫಲವನ್ನು ನೀಡುತ್ತದೆ. ಬರೆಯುವುದರಿಂದ ಮನಸಿನ ಅಭೀಷ್ಟಗಳು ಸಿದ್ಧಿಸುತ್ತವೆ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಸಾಕಷ್ಟು ಜನರು ನಮ್ಮಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ದೇವೇಂದ್ರ ಫಡ್ನವೀಸ್‌ ಅವರು ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಮಠಕ್ಕೆ ಬಂದಿದ್ದರು ಗೀತೆಯನ್ನು ಬರೆಯುವಂತೆ ಹೇಳಿದ್ದೆ ಬರೆದ ನಂತರ ಮುಖ್ಯಮಂತ್ರಿಯಾಗಿದ್ದಾರೆ. ಇದರಿಂದ ಫಲಪಡೆದ ಹಲವರು ಹತ್ತಾರು ಬಾರಿ ಗೀತೆ ಬರೆದಿದ್ದಾರೆ. ಎಲ್ಲವೂ ನಮ್ಮಲ್ಲಿ ದಾಖಲಿಸಲಾಗಿದೆ.

geeta yajna 2

ನರೇಂದ್ರ ಮೋದಿ ಅವರು ಲಕ್ಷ ಕಂಠ ಗೀತೆ ಪಾರಾಯಣದಲ್ಲಿ ಭಾಗವಹಿಸುತ್ತಿದ್ದಾರೆ ಈ ಕುರಿತು?

ಕೃಷ್ಣನ ಕುರಿತು ಹಾಗೂ ಭಗವದ್ಗೀತೆಯ ಮೇಲೆ ಅವರಿಗೆ ಅಪಾರ ನಂಬಿಕೆ, ಗೌರವವಿದೆ. ಇದೇ ಕಾರಣಕ್ಕೆ ಅವರು ಭಾಗವಹಿಸುತ್ತಿದ್ದಾರೆ.

ವಿಶ್ವ ಶಾಂತಿಯ ಬಗ್ಗೆ ಪ್ರವಚನದ ವೇಳೆ ಜಾರ್ಜ್‌ಬುಷ್‌ ಅವರೊಂದಿಗಿನ ಸಮಯದ ಕುರಿತು?

ಸಿಗುವ ಅವಕಾಶಗಳನ್ನು ನಾನು ಕಳೆದುಕೊಳ್ಳುವುದಿಲ್ಲ. ಭಗವಂತ ಮಾಡಿಕೊಟ್ಟ ಅವಕಾಶ ಎಂದು ಭಾವಿಸುತ್ತೇನೆ. ನ್ಯೂಯಾರ್ಕ್‌ನಲ್ಲಿ ನಾನಿರುವಾಗ ಜೋರ್ಡನ್‌ ಕಿಂಗ್‌ ಕರೆಮಾಡಿ ನಮ್ಮ ದೇಶಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಪೂಜೆಗೆ ಬೇಕಾದ ಅಗತ್ಯಗಳ ಕುರಿತು ಹೇಳಿದೆ ಅದಕ್ಕೆ ಅವರು ಒಪ್ಪಿಕೊಂಡರು. ಅಲ್ಲಿ ದೇಶ-ವಿದೇಶಗಳಿಂದ ಸುಮಾರು 2000 ಜನರ ಒಂದು ಸಮ್ಮೇಳನ ನಡೆದಿತ್ತು. ಒಬ್ಬರು ಬಂದು ನಾವೀಗ ಈ ಸಂಸ್ಥೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ, ಯಾರ ಭಾಷಣ ಉತ್ತಮವಾಗಿರುತ್ತದೆಯೋ ಅವರನ್ನು ಆಯ್ಕೆಮಾಡಿಕೊಳ್ಳುತ್ತೇವೆ. ನೀವೊಂದು ಭಾಷಣ ಮಾಡಬಹುದಾ ಎಂದರು. ಭಗವದ್ಗೀತೆಯ ʻಪರಿತ್ರಾಣಾಯ ಸಾಧೂನಾಂ ವಿನಾಶಯಚ ದುಷ್ಕೃತʼ ಎಂಬ ಸಾಲುಗಳು ಜತೆಗೆ ಭಾಷಣ ನೀಡಿದೆ. ನನ್ನನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಭಗವದ್ಗೀತೆಯ ಭಾವ ವಿಚಾರಕ್ಕೆ ಅಷ್ಟು ಶಕ್ತಿಯಿದೆ.

ವಿದೇಶಗಳಲ್ಲಿ ಮಂದಿರಗಳನ್ನು ಸ್ಥಾಪಿಸಲು ನಿಮಗೆ ಹೇಗೆ ಸಾಧ್ಯವಾಯಿತು?

ವಿದೇಶಗಳಲ್ಲಿ ನಾವು ಧರ್ಮ ಪ್ರಚಾರ ಸಂಚಾರಕ್ಕೆ ಹೋದಾಗ ಅಲ್ಲಿನ ಪ್ರಜೆಗಳು ನನಗೆ ಸ್ವಾಮಿಗಳೇ ಈ ಸಂಚಾರದ ವೇಳೆ ನೀವು ನೀಡುವ ಭಾಷಣಗಳು ಕೆಲವು ತಿಂಗಳುಗಳ ಕಾಲ ಪ್ರಚಲಿತದಲ್ಲಿರುತ್ತವೆ. ಹಾಗಾಗಿ ಇದಕ್ಕೆ ಇಲ್ಲಿ ಶಾಶ್ವತ ನೆಲೆಯನ್ನು ನೀಡಲು, ಮಠ ಮಂದಿರಗಳನ್ನು ಸ್ಥಾಪಿಸುವಂತೆ ಕೋರಿದರು. ಅದರಂತೆ ನಾವು ಅಲ್ಲಿ ಮಠ ಮಂದಿರಗಳನ್ನು ಮಾಡಿದೆವು.

ನಿಮ್ಮ ಕುರಿತು ವಿದೇಶಗಳಲ್ಲಿ ನೆಲೆಸಿರುವ ಜನರ ರಿಯಾಕ್ಷನ್‌ ಹೇಗಿರುತ್ತದೆ?

ಇಲ್ಲಿಂದ ಅಲ್ಲಿಗೆ ಹೋದ ಜನರಿಗೆ ಇಲ್ಲಿನ ಕುರಿತು ಹೆಚ್ಚು ಶ್ರದ್ಧೆ ಮೂಡುತ್ತದೆ. ಇಲ್ಲಿದ್ದಾಗ ನಾಸ್ತಿಕರಾಗಿದ್ದವರೂ ಅಲ್ಲಿಗೆ ಹೋದಮೇಲೆ ಆಸ್ತಿಕರಾಗಿ ಪರಿವರ್ತನೆ ಹೊಂದಿದ್ದಾರೆ. ಅಲ್ಲಿನ ಮಕ್ಕಳಿಗೆ ಸಂಸ್ಕಾರ ಕಡಿಮೆಯಾಗಿದೆ. ಮಕ್ಕಳನ್ನು ತಂದೆ ತಾಯಿಗಳು ಹಚ್ಚಿಕೊಳ್ಳುವುದೇ ಇಲ್ಲ. ಅವರೊಂದಿಗೆ ಬೆರೆಯುವ ನಮ್ಮ ದೇಶದ ಮಕ್ಕಳಿಗೂ ಇದು ಮುಂದುವರಿಯುತ್ತಿರುವುದು ಬೇಸರದ ಸಂಗತಿ. ಇದೇ ಕಾರಣಕ್ಕೆ ಮಠ- ಮಂದಿರಗಳ ಮೂಲಕ ಸಂಸ್ಕಾರ ಸಿಗಲಿ ಎಂದು ಅಲ್ಲಿನ ತಂದೆ ತಾಯಿಗಳು ನಮ್ಮನ್ನು ಕರೆಯುತ್ತಾರೆ.

ಇಲ್ಲಿನ ಮಕ್ಕಳಿಗಾಗಿ ಗುರುಕುಲ ಶಿಕ್ಷಣ ನೀಡಲು ಯಾವುದಾದರೂ ಸಂಸ್ಥೆಗಳನ್ನು ಆರಂಭಿಸಿದ್ದೀರಾ?

ಹೌದು, ಪಾಡಿಯಾರದಲ್ಲಿನ ಶ್ರೀ ಪುತ್ತಿಗೆ ಸುಗುಣಾ ಸ್ಕೂಲ್‌ ಈ ಕುರಿತು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಗುಣವನ್ನು ಪ್ರಧಾನವಾಗಿ ಕಲಿಸಲಾಗುತ್ತಿದೆ. ತಂದೆ ತಾಯಿಯನ್ನು ಗೌರವಿಸುವುದು, ಅತಿಥಿಗಳನ್ನು ಸತ್ಕರಿಸುವುದು ಎಲ್ಲವನ್ನು ಮೊಳಕೆಯಿಂದಲೇ ಹೇಳಿಕೊಡಲಾಗುತ್ತದೆ.

ಈ ಮೊದಲು ಶಾಲೆಗಳಲ್ಲಿ ದಂಡಿಸಿ ಶಿಕ್ಷಣ ನೀಡುತ್ತಿದ್ದರು. ಈಗ ಎಲ್ಲವೂ ಸಲೀಸಾಗಿದೆ ಈ ಕುರಿತು ನಿಮ್ಮ ಅನಿಸಿಕೆ ಏನು?

ಮಕ್ಕಳಿಗೆ ಸ್ವಲ್ಪ ಹೆದರಿಕೆ ಇರಬೇಕು, ತಾಡಯೇತ್‌ ದಶ ವರ್ಷಾಣಿ ಎನ್ನುತ್ತಾರೆ. ಕಲ್ಲಿಗೆ ಪೆಟ್ಟಾಗುತ್ತದೆ ಎಂದರೆ ಮೂರ್ತಿ ಹೇಗೆ ರೂಪಗೊಳ್ಳುವುದಿಲ್ಲವೋ ಹಾಗೆ ಉತ್ತಮ ಸಂಸ್ಕಾರ ನೀಡಲು ಅಗತ್ಯವಾದುದನ್ನು ಮಾಡಬೇಕು. ಪ್ರೆಷರ್‌ ಮತ್ತು ಪ್ಲೆಷರ್‌ ಎರಡೂ ಇರಬೇಕು. ಕೆಲವು ಕೆಲಸಗಳನ್ನು ಒತ್ತಡದಿಂದ ಕೆಲವನ್ನು ಪ್ರೀತಿಯಿಂದ ಹೇಳಿಕೊಡಬೇಕು. ಎಲ್ಲವೂ ಸಮತೋಲಿತವಾಗಿರಬೇಕು.

ಮೊದಲೆಲ್ಲ ಹೆಣ್ಣು ಎಂದರೆ ಮಾತೆ ಎನ್ನಲಾಗುತ್ತಿತ್ತು ಈಗ ಸಮಾನತೆ, ಸಮತೆ ಎಂದಾಗುತ್ತಿದೆ ಈ ಕುರಿತು ನಿಮ್ಮ ಮಾತು?

ಇದು ವಿಕೃತ ಚಿಂತನೆ. ರಾಜಕೀಯವಾಗಿ ಹುಟ್ಟಿಕೊಂಡ ವಿಷಯವಸ್ತು. ಮಧ್ವಾಚಾರ್ಯರು ಹೇಳುವಂತೆ ಜಗತ್ತಿನಲ್ಲಿ ಯಾವ ವಸ್ತುವೂ ಒಂದಕ್ಕೆ ಮತ್ತೊಂದು ಸಮಾನವಾಗಿಲ್ಲ. ಜೀವನ ವೈವಿಧ್ಯದಿಂದ ಕೂಡಿದೆ. ಹಾಗಾಗಿ ಎಲ್ಲವೂ ಹೊಂದಾಣಿಕೆಯಿಂದಲೇ ಸಾಗಬೇಕು. ಲೈಫ್‌ ಈಸ್‌ ಆರ್ಟ್‌ ಆಫ್‌ ಬ್ಯಾಲೆನ್ಸಿಂಗ್‌.

ವಿಶ್ವಮಟ್ಟದಲ್ಲಿ ಪ್ರಭಾವ ಬೀರಬಲ್ಲ ನಿಮ್ಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ನಿಮ್ಮ ಬಾಲ್ಯ ಹೇಗಿತ್ತು?

ನಾನು ಚಿಕ್ಕ ವಯಸ್ಸಿನಲ್ಲಿ ಖಗೋಳ ವಿಜ್ಞಾನಿಯಾಗುವ ಆಸೆಯನ್ನು ಹೊಂದಿದ್ದೆ. ಆಗಿನಿಂದಲೇ ಖಗೋಳದ ವಿಷಯಗಳನ್ನು ಶ್ರದ್ಧೆಯಿಂದ ಓದಿಕೊಂಡಿದ್ದೆ. ವಿಮರ್ಶಾತ್ಮಕ ಗ್ರಂಥಗಳನ್ನು ಓದುವುದು ನನಗೆ ಅತ್ಯಂತ ಪ್ರಿಯವಾಗಿತ್ತು.

ಬಡ ಕುಟುಂಬ, ಸ್ವಂತ ಮನೆಯಿರಲಿಲ್ಲ. ಆಸ್ತಿಯೂ ಇರಲಿಲ್ಲ. ತಂದೆಗೆ 75 ರುಪಾಯಿ ಸಂಬಳ ಬರುತ್ತಿತ್ತು. ಹೊಟೇಲ್‌ ಸರ್ವರ್‌, ಪೂಜೆಗೆ ಯಾರಾದರೂ ಕರೆದರೆ ಅದರಿಂದ ಬರುವ ದಕ್ಷಿಣೆ, ಹೀಗೆ ಕೆಲಸ ಮಾಡಿಕೊಂಡು ಬಂದ ಹಣದಿಂದ ಓದಲಿಕ್ಕೆ ಬಳಸುತ್ತಿದ್ದೆವು.

ಒಮ್ಮೆ ನನಗೆ ಪರೀಕ್ಷೆಯಲ್ಲಿ ಶೇ.98 ಅಂಕ ಬಂದಾಗ ಇನ್ನು ಎರಡು ಶೇಕಡಾ ಅಂಕ ಯಾಕೆ ಬರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಹೊಡೆದಿದ್ದರು, ಇಂಥವುಗಳಿಂದ ನಾವು ಕಲಿತೆವು.

ಟ್ರಂಪ್‌ ಪ್ರತಿಬಾರಿ ಭಾರತ ಮತ್ತು ಮೋದಿಯನ್ನು ಟೀಕಿಸುತ್ತಾರೆ ಈ ಕುರಿತು ನಿಮ್ಮ ಅನಿಸಿಕೆ ಏನು?

ಮೋದಿ ಟ್ರಂಪ್‌ಗೆ ಸಿಂಹಸ್ವಪ್ನವಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿಯವರು ಹೆಚ್ಚು ಜನಾಕರ್ಷಣೆಯನ್ನು ಗಳಿಸುತ್ತಿದ್ದಾರೆ. ಇದು ಟ್ರಂಪ್‌ ಅವರ ನಿದ್ದೆಗೆಡಿಸಿದೆ. ಹಾಗಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಅಷ್ಟೆ.

ಜಾಗತಿಕವಾಗಿ ಹೆಚ್ಚು ಶಸ್ತ್ರಾಸ್ತ್ರ ಹೊಂದುವುದು ಅಭಿವೃದ್ಧಿಯ ಸಂಕೇತವಾಗುತ್ತಿದೆ ಈ ಕುರಿತು ನಿಮ್ಮ ಅನಿಸಿಕೆ ಏನು?

ದೇಶ ಎಂದರೆ ಏನು ಎಂದು ಮೊದಲು ಅರ್ಥೈಸಿಕೊಳ್ಳಬೇಕು. ನಿಜವಾದ ದೇಶವೆಂದರೆ ಅಲ್ಲಿನ ಜನರು. ಅವರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದರೆ ಅದೇ ಅಭಿವೃದ್ಧಿ. ಇದು ಆತ್ಮ ನಿರ್ಭರತೆಯಲ್ಲಿ ಅಡಗಿದೆ. ಮತ್ತೊಬ್ಬರ ಮೇಲೆ ನಾವು ಅವಲಂಬಿತರಾಗಿ ಇರಬಾರದು. ಜನರ ಮನಸ್ಥಿತಿ ಸುಧಾರಿಸಬೇಕು.

ಈ ವಿಚಾರದ ಕುರಿತು ಪುಟಿನ್‌ ಅವರು ಮಾಸ್ಕೋದಲ್ಲಿ ಸಮಾವೇಶವನ್ನು ನಡೆಸಿ ಜಗತ್ತಿನ ವಿವಿಧ ಭಾಗಗಳಿಂದ 50ಜನ ಚಿಂತಕರನ್ನು ಕರೆಸಿದ್ದರು. ನನ್ನನ್ನು ಕರೆದಿದ್ದರು. ಅಲ್ಲಿ ಅವರು ನಾವು ಇಂದಿಗೆ ಅಭಿವೃದ್ಧಿ ಹೊಂದಿದ ದೇಶವವಾಗಿ ಗುರುತಿಸಿಕೊಂಡಿದ್ದೇವೆ. ಆದರೆ ಇದು ನಿಜವಾದ ಅಭಿವೃದ್ಧಿಯಲ್ಲ ಎನಿಸುತ್ತಿದೆ. ಹಾಗಾಗಿ ನಿಜವಾದ ಅಭಿವೃದ್ಧಿಗೆ ಏನು ಮಾಡಬೇಕು ಎಂದರು. ಆಗ ನಾನು ನೀವು ಅಭಿವೃದ್ಧಿ ಎಂಬುದರ ವ್ಯಾಖ್ಯಾನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ, ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಜನರ ಶಾಂತಿಯಲ್ಲಿ ಅಡಗಿದೆ. ಹಣದಲ್ಲಿ ಅಲ್ಲ ಎಂದಿದ್ದೆ. ಹಣ ಬಂದ ಮೇಲೆ ಜನರು ದುಶ್ಚಟಗಳ ಪಾಲಾದರೆ ಅದು ಅಭಿವೃದ್ಧಿ ಹೇಗಾಗುತ್ತದೆ?

ನಮ್ಮ ಭಾರತದಲ್ಲಿದ್ದ ಜಾತಿ ಕಲ್ಪನೆ ಮತ್ತು ಕರಕುಶಲೆ ನಶಿಸುತ್ತಿದೆ ಈ ಕುರಿತು ನಿಮ್ಮ ಅನಿಸಿಕೆ ಏನು?

ಜಾತೀಯತೆಯಿಂದಾಗಿ ಹಿಂದೂ ಧರ್ಮ ಉಳಿದಿದೆ. ಆದರೆ ಜಾತಿ ತಾರತಮ್ಯ ಒಳಿತಲ್ಲ. ಜಾತೀಯತೆಯಲ್ಲಿ ಇಂಥವರಿಗೆ ಇಂಥ ಕೆಲಸಗಳು ಎಂದು ಹಂಚಲಾಗಿತ್ತು. ಪುರೋಹಿತನ ಮಗ ಪುರೋಹಿತ, ಬಡಗಿಯ ಮಗ ಬಡಗಿ ಹೀಗೆ ಎಲ್ಲವೂ ಪೀಳಿಗೆಯಿಂದ ನಡೆದುಕೊಂಡು ಬಂದಿದ್ದರಿಂದ ಎಲ್ಲದರಲ್ಲೂ ಉತ್ಕೃಷ್ಟತೆ ಮೂಡಿತ್ತು. ಉದಾಹರಣೆಗೆ ಪುರೋಹಿತನಿಗೆ ಬಡಗಿತನ ಮಾಡಲು ಹೇಳಿದರೆ ಅದು ಕಷ್ಟಸಾಧ್ಯವಾಗುತ್ತದೆ. ಆದರೆ ಇದಕ್ಕೆ ಜಾತಿ ತಾರತಮ್ಯದ ಬಣ್ಣ ನೀಡಿದ್ದು ರಾಜಕಾರಣದ ದಾಳ.

ಸುಮಾರು 15-20 ವರ್ಷಗಳ ಹಿಂದೆ ಬ್ರಾಹ್ಮಣರ ವೈದಿಕ, ಉತ್ಸವ, ಪೂಜೆಗಳಿಗೆ ಸಮಾಜದಲ್ಲಿ ಬಹಳ ಬೆಲೆಯಿತ್ತು. ಆದರೆ ಈಗ ಕೋಲ, ನೇಮ, ಕೊರಗಜ್ಜನ ದರ್ಶನದ ಕಡೆಗೆ ಸಮಾಜ ವಾಲುತ್ತಿದೆ. ಇದರ ಬಗ್ಗೆ ನಿಮಗೇನನಿಸುತ್ತದೆ?

ವಾಸ್ತವವಾಗಿ ಹೇಳಬೇಕಾದರೆ ಎಲ್ಲಿ ಬೇಗ ಫಲ ಸಿಗುತ್ತದೆಯೇ ಜನ ಅಲ್ಲಿಗೆ ಹೋಗುತ್ತಾರೆ. ನಾಳೆ ಹೇಗಾದರೂ ಇರಲಿ, ಈಗ ನಾವು ಸುಖವಾಗಿರಬೇಕೆಂದಷ್ಟೇ ಇಂದಿನ ಜನ ಬಯಸುತ್ತಾರೆ. ಸಾಮಾನ್ಯವಾಗಿ ಭೂತಾರಾಧನೆಯಿಂದ ಬೇಗ ಫಲ ಸಿಗುತ್ತದೆ. ಅದಕ್ಕೆ ಜನರು ಅದರ ಹಿಂದೆ ಹೋಗುತ್ತಾರೆ. ಈಗ ಜನರ ಮನಸ್ಥಿತಿಯೇ ಬದಲಾಗಿದೆ. ತಾಳ್ಮೆ ಇಲ್ಲ, ಪ್ರತಿಫಲಕ್ಕೆ ಕಾಯುವ ಸಹನೆಯಂತೂ ಮೊದಲೇ ಇಲ್ಲ. ಆದರೆ ಹಿಂದಿನವರು ಹೀಗಿರಲಿಲ್ಲ. ಬೇಗ ಫಲ ಸಿಗುವುದಕ್ಕಿಂತ ದೀರ್ಘ ಕಾಲದ ಫಲ ಸಿಗುವುದರ ಬಗ್ಗೆ, ಮೋಕ್ಷ ಹೊಂದುವ ಬಗ್ಗೆ ಜನ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗ ಮೋಕ್ಷದ ಬಗ್ಗೆ ಜನ ಚಿಂತಿಸುವುದಿಲ್ಲ, ಸತ್ತಮೇಲೆ ಏನು ಬೇಕಾದರೂ ಆಗಲಿ ಎಂಬುದು ಜನರ ಚಿಂತನೆ. ನಾವು ಖುಷಿಯಾಗಿರಬೇಕೆಂಬ ಕಾರಣಕ್ಕಾಗಿ ಸಾಲ ಮಾಡಿಯಾದರೂ ತುಪ್ಪ ತಿನ್ನುತ್ತಾರೆ. ಅಂದರೆ ಜನರ ಈ ರೀತಿಯ ಚಿಂತನೆಗೆ ಕಾರಣವಾಗುವುದು ಶಿಕ್ಷಣ ಸಂಸ್ಥೆಗಳು. ಗಿಡವಾಗಿರುವಾಗಲೇ ಮಕ್ಕಳಲ್ಲಿ ಇಂಥ ಬೀಜಗಳನ್ನು ಬಿತ್ತುವ ಅನೇಕ ಶಿಕ್ಷಣ ಸಂಸ್ಥೆಗಳು ನಮ್ಮ ನಿಮ್ಮ ನಡುವೆಯೇ ಇವೆ.

ಕಮ್ಯುನಿಸಂನಿಂದ ಹಿಂದೂ ಸಂಸ್ಕೃತಿಗೆ ಏನಾದರೂ ತೊಂದರೆಯಾಗುತ್ತಿದೆಯಾ? ನಾಸ್ತಿಕವಾದವೂ ಹಿಂದೂ ಧರ್ಮದ ಒಂದು ಅಂಗ ಅಲ್ವಾ?

ನಾಸ್ತಿಕವಾದವೆಂಬುದು ಅಮಾನ್ಯವಾದುದಲ್ಲ. ಅದನ್ನು ನಾವು ತಿರಸ್ಕಾರ ಮಾಡುವುದಿಲ್ಲ. ಹಿಂದೂ ಧರ್ಮದ ಪ್ರಮುಖ ವಿಚಾರವೆಂದರೆ ನಾವು ಯಾವುದನ್ನೂ ತಿರಸ್ಕಾರ ಮಾಡಬಾರದು ಎಂಬುದು.

geeta yajna

ನಮ್ಮ ಧರ್ಮಕ್ಷೇತ್ರಗಳ ಮೇಲೆ ಅನೇಕ ಕಡೆ ಸಂಘಟಿತವಾಗಿ ದಾಳಿಗಳಾಗುತ್ತಿವೆ. ಅಪಪ್ರಚಾರಗಳು ಹೆಚ್ಚುತ್ತಿವೆ.. ಈ ಬಗ್ಗೆ ನಿಮಗೇನನಿಸುತ್ತದೆ?

ಇವೆಲ್ಲವೂ ಅಧಿಕಾರಕ್ಕಾಗಿ ಮಾಡುವ ತಂತ್ರಗಳಷ್ಟೇ. ಧರ್ಮದ ಹೆಸರಿನಲ್ಲಿ ಗುಂಪುಗಾರಿಕೆ ಮಾಡುವುದು ಸುಲಭ. ನೀವು ನಾಯಕನಾಗಬೇಕಾದರೆ 50 ಮಂದಿಯಾದರೂ ಅನುಯಾಯಿಗಳು ಬೇಕು. ಹೀಗೆ ಅನುಯಾಯಿಗಳಾದ ಮೇಲೆ ನಾಯಕನಾದವನು ಒಡೆದು ಆಳುವ ನೀತಿಯನ್ನು ಬಳಸುತ್ತಾರೆ. ಜಾತಿ, ಧರ್ಮದಂಥ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಜನರಲ್ಲಿ ಬಿರುಕು ಮೂಡಿಸುವುದು ಬಹಳ ಸುಲಭ. ಆದ್ದರಿಂದ ಪ್ರಜಾಪ್ರಭುತ್ವ ಬಂದಮೇಲೆ ಈ ಒಡೆದು ಆಳುವ ನೀತಿ ಬಹಳ ಜಾಲ್ತಿಯಲ್ಲಿದೆ. ಇದರಿಂದಾಗಿಯೇ ನಮ್ಮದೇ ಧರ್ಮದವರ ಮೇಲೆ ನಮ್ಮವರೇ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಅಧಿಕಾರ ವಹಿಸಿಕೊಂಡವರೇ ಕಾರಣನಾಗುತ್ತಾನೆ.

ಹಿಂದೂ ಧರ್ಮದ ರಕ್ಷಣೆಗೆ ಮೂರ್ನಾಲ್ಕು ಮಕ್ಕಳನ್ನು ಮಾಡಿ ಎನ್ನುತ್ತಾರೆ. ಅದರಲ್ಲಿ ಏನಾದರೂ ಅರ್ಥವಿದೆಯಾ?

ಅದು ಹಿಂದೂ ಧರ್ಮದ ನಾಶಕ್ಕೆ ಉಳಿದವರು ಪಣತೊಟ್ಟಿರುವಾಗ, ಅದರ ರಕ್ಷಣೆಗೆ ಹಿಂದೂಗಳೇ ಆಗಿರುವ ನಮ್ಮವರ ಸಂಖ್ಯೆಯಲ್ಲೂ ಏರಿಕೆಯಾಗಬೇಕಾಗುತ್ತದೆ. ಈಗ ಇರುವುದು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಅಂದರೆ ಸಂಖ್ಯೆ. ಯಾವ ಸಂಖ್ಯೆ ಹೆಚ್ಚಿದೆಯೋ ಅವರಿಗೆ ಅಧಿಕಾರ.

ಸನ್ಯಾಸತ್ವ ಸ್ವೀಕರಿಸಿದ ಮೇಲೆ ಎಂದಾದರೂ ಗೃಹಸ್ಥನಾಗಬೇಕಿತ್ತು ಅನಿಸಿರುವುದಿದೆಯಾ?

ಸಂಸಾರದ ನಡುವೆ ಬಂಧಿಯಾದರೆ ಸ್ವಾಮೀಜಿಯಾದವರಿಗೆ ಸಮಾಜ ಸೇವೆ ಮಾಡುವುದು ಸಾಧ್ಯವಾಗುವುದೇ ಇಲ್ಲ. ಸಮಾಜದ ಬಗ್ಗೆ ಚಿಂತಿಸಬೇಕಾದರೆ ಅವರಿಗೆ ಇನ್ಯಾವುದೇ ಕಿರಿಕಿರಿ ಇರಬಾರದು. ನನಗಂತೂ ಎಂದಿಗೂ ಗೃಹಸ್ಥನಾಗಬೇಕೆಂದು ಅನಿಸಲೇ ಇಲ್ಲ. ಯಾವುದು ವಾಸ್ತವವೋ ಅದರಲ್ಲೇ ನಾವಿರಬೇಕು. ಆತ್ಯಂತಿಕವಾದದ್ದು ಯಾವುದೋ ಅದೇ ನಮಗಿಷ್ಟ.

ನೀವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರು ಮಾತ್ರವಲ್ಲದೆ, ಸಂಪಾದಕದರೂ ಹೌದು. ಸುಗುಣ ಮಾಲಾ ಪತ್ರಿಕೆಗೆ ಬರೆಯುತ್ತೀರಿ. ಹೇಗೆ ಇಷ್ಟೆಲ್ಲಾ ಸಾಧ್ಯವಾಗುತ್ತದೆ ?

ನಾವು ಎಂದಿಗೂ ಚಿಂತನಾಶೀಲರು. ಯಾವುದೇ ವಿಚಾರವಾದರೂ ಅದರ ಬಗ್ಗೆ ವಿಮರ್ಶೆ ಮಾಡಿ ತಿಳಿದುಕೊಳ್ಳುವುದು ನಮ್ಮ ಸ್ವಭಾವ. ಆದ್ದರಿಂದ ಅದು ಎಲ್ಲ ಕ್ಷೇತ್ರಗಳಿಗೂ ನಮ್ಮನ್ನು ಪ್ರವೇಶ ಮಾಡಿಸುತ್ತದೆ. ಆಧ್ಯಾತ್ಮಿಕ, ಆರ್ಥಿಕ ಹೀಗೆ ಅನೇಕ. ನಾವು ಅನೇಕ ಕಂಪನಿಗಳಿಗೆ ಇಂದಿಗೂ ಫೈನ್ಯಾಶಿಯಲ್‌ ಅಡ್ವೈಸರ್‌ ಆಗಿದ್ದೇನೆ. ಅಂದರೆ ಅರ್ಥಶಾಸ್ತ್ರದ ಬಗ್ಗೆ ಕೇಳಲು ನಮ್ಮ ಬಳಿ ಬರುತ್ತಾರೆ. ಅದರರ್ಥ ನಾವು ಅರ್ಥಶಾಸ್ತ್ರಜ್ಞ ಎಂದಲ್ಲ. ಬದಲಾಗಿ ನಾವೇನು ತಿಳಿದುಕೊಂಡಿದ್ದೇನೋ, ಅದನ್ನು ಅವರಿಗೆ ತಿಳಿಸಿಕೊಡುತ್ತೇವೆ ಎಂದಷ್ಟೇ.

ನಿಮ್ಮಿಷ್ಟದ ಗುರುಗಳು ಯಾರು ?

ಮಧ್ವಾಚಾರ್ಯರು ನನ್ನಿಷ್ಟದ ಗುರುಗಳು. ಯಾಕೆಂದರೆ ನಾನೊಬ್ಬ ಮಾಧ್ವನಾಗಿ, ಮಾಧ್ವ ಪೀಠಾಧಿಪತಿಯಾಗಿ ಈ ಮಾತನ್ನು ಹೇಳುತ್ತಿಲ್ಲ. ನಾನೊಬ್ಬ ಚಿಂತಕನಾಗಿ ಸತ್ಯಾನ್ವೇಷಣೆ ಮಾಡುವವನಾಗಿ ಮಧ್ವಾಚಾರ್ಯರು ಅದ್ಭುತವಾದ ಗುರುಗಳು ಎಂಬುದಾಗಿ ಹೇಳಲು ಬಯಸುತ್ತೇನೆ. ಮಧ್ವಾಚಾರ್ಯರ ವಿಚಾರಗಳಲ್ಲಿ ನಿಖರತೆ ಇರುತ್ತದೆ. ಇದನ್ನು ನಾವಷ್ಟೇ ಅಲ್ಲದೆ, ಒಬ್ಬ ಪಾಶ್ಚಾತ್ಯ ವಿಮರ್ಶಕನೂ ಇದೇ ಮಾತುಗಳನ್ನು ಹೇಳಿದ್ದ. ಜಗತ್ತಿನ ಅದ್ಭುತಗಳಲ್ಲಿ ಮಧ್ವಾಚಾರ್ಯರೂ ಒಬ್ಬರೆಂದು ವರ್ಣಿಸಿದ್ದ.

ಪ್ರವಾಸಿ ಪ್ರಪಂಚ ವಾರಪತ್ರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ವಿಶ್ವೇಶ್ವರ ಭಟ್ಟರು ಒಬ್ಬ ಒಳ್ಳೆಯ ಚಿಂತಕರು. ಹೊಸ ಹೊಸ ಪ್ರಯತ್ನಗಳಿಗೆ ನಾಂದಿ ಹಾಡಿದವರು ಅವರು. ಪ್ರವಾಸಕ್ಕೆ ಸಂಬಂಧಿಸಿದ 24 ಪುಟಗಳ ಈ ವಾರಪತ್ರಿಕೆಯಂತೂ ನಮಗೆ ದೇಶ ವಿದೇಶಗಳ ಅನುಭವವನ್ನು ಹಂಚುತ್ತದೆ. ಬರೀ ಪ್ರವಾಸಿ ಸುದ್ದಿಯನ್ನಷ್ಟೇ ಕೊಡುವುದಲ್ಲ. ಒಳನೋಟಗಳು, ಅಂಕಣಗಳು, ಬೇರೆ ಬೇರೆ ದೃಷ್ಟಿಕೋನಗಳ ಬರಹಗಳು, ವಿಮರ್ಶೆಗಳು..ಇವನ್ನು ನಾವು ಇಂದಿನ ಪತ್ರಿಕೆಗಳಲ್ಲಿ ಬಯಸುತ್ತೇವೆ. ಆ ದೃಷ್ಟಿಕೋನದಿಂದ ಪ್ರವಾಸಿ ಪ್ರಪಂಚ ವಾರಪತ್ರಿಕೆ ಬಹಳ ವಿಮರ್ಶಾತ್ಮಕವಾಗಿ ಮೂಡಿ ಬಂದಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ