Saturday, August 22, 2026
Saturday, August 22, 2026

ಚನ್ನಪಟ್ಟಣದ ಗೌಡಗೆರೆಯಲ್ಲಿ ನೆಲೆಸಿರುವ ಶಕ್ತಿದೇವತೆ

ದಾಸೋಹ ಕಷ್ಟ ಎಂದರೆ ಕಷ್ಟವಾಗುತ್ತದೆ, ಸುಲಭ ಎಂದರೆ ಸುಲಭವಾಗುತ್ತದೆ. ನಮ್ಮ ಮನಸ್ಥಿತಿಗೆ ಹೇಗೆ ತಂದುಕೊಳ್ಳುತ್ತೇವೆಯೋ ಅದು ಹಾಗೆ ಆಗುತ್ತದೆ. ಎಷ್ಟೇ ದೊಡ್ಡ ಬ್ಯುಸಿನೆಸ್‌ಮ್ಯಾನ್ ಆಗಿರಬಹುದು, ದೇವಸ್ಥಾನದ ಆಡಳಿತಗಾರರಾಗಿರಬಹುದು, ರಾಜಕಾರಣಿಗಳಾಗಿರಬಹುದು, ಯಾರೇ ಆದರೂ ನಾವು ಒಂದು ತುತ್ತು ಅನ್ನವನ್ನೇ ತಿನ್ನಬೇಕೇ ಹೊರತು ಬೇರೇನನ್ನೂ ತಿನ್ನಲು ಸಾಧ್ಯವಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಏನೇ ಕೆಲಸ ಮಾಡುವುದು ಅನ್ನಕ್ಕಾಗಿಯೇ ಹೊರತು ಮತ್ತೊಂದಕ್ಕಲ್ಲ. ಇಲ್ಲಿಗೆ ಬರುವ ಭಕ್ತಾದಿಗಳೆಲ್ಲರೂ ಒಂದು ತುತ್ತು ಅನ್ನಕ್ಕಾಗಿ ಕಷ್ಟಪಡುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿಯು ಇಂದು ಅನ್ನದಾಸೋಹ, ಪರಿಸರ ಕಾಳಜಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ವಿಶಿಷ್ಟ ಕೇಂದ್ರವಾಗಿ ರೂಪುಗೊಂಡಿದೆ. 'ದೇವರಿಗೆ ದುಡ್ಡು, ಚಿನ್ನ-ಬೆಳ್ಳಿ ಕೊಡುವ ಬದಲು ದಾಸೋಹಕ್ಕೆ ಒಂದು ಹಿಡಿ ಅಕ್ಕಿ ಅಥವಾ ತರಕಾರಿ ನೀಡಿ, ದೇವಸ್ಥಾನಕ್ಕೆ ಪ್ಲಾಸ್ಟಿಕ್ ತರಬೇಡಿ' ಎಂದು ಭಕ್ತರಲ್ಲಿ ಕಳಕಳಿಯಿಂದ ಕೇಳಿಕೊಳ್ಳುವ ಮೂಲಕ ಭಕ್ತಿಗೂ ಮೀರಿದ ಸಾಮಾಜಿಕ ಜವಾಬ್ದಾರಿಯನ್ನು ಸಾರುತ್ತಿದ್ದಾರೆ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಮಲ್ಲೇಶ್ ಗುರೂಜೀ. ಗೌಡಗೆರೆ ಕ್ಷೇತ್ರದ ಉಗಮ, ಅಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು, ಯುವಜನತೆಯ ಸ್ಪಂದನೆ ಹಾಗೂ ಮುಂಬರುವ 2027ರ ಬೃಹತ್ ಮಹಾಮಸ್ತಕಾಭಿಷೇಕದ ಕುರಿತು ಗುರೂಜಿಯವರು ಪ್ರವಾಸಿ ಪ್ರಪಂಚದ ಸಂದರ್ಶನದಲ್ಲಿ ಹಂಚಿಕೊಂಡ ವಿಶೇಷ ಮಾತುಕತೆ ಇಲ್ಲಿದೆ.

ಈ ಕ್ಷೇತ್ರವನ್ನು ಹಾಗೂ ಈ ವಿಗ್ರಹವನ್ನು ಸ್ಥಾಪನೆ ಮಾಡುವುದಕ್ಕೆ ನಿಮ್ಮ ಮೂಲ ಪ್ರೇರಣೆ ಏನು? ಈ ಜಾಗದ ಹಿನ್ನೆಲೆ ಏನು?

  • ಈ ಜಾಗದ ಹಿನ್ನೆಲೆ ಏನೆಂದರೆ, ನಾನು 14 ವರ್ಷದವನಿದ್ದಾಗ ಆಟ ಆಡುವಂಥ ಸಂದರ್ಭದಲ್ಲಿ ನನಗೊಂದು ದೇವಿಯ ಮೂರ್ತಿ ಸಿಕ್ಕಿತ್ತು. ಆ ಮೂರ್ತಿ ಸಿಕ್ಕಿದ ಮೇಲೆ ಈ ಕ್ಷೇತ್ರವು ಒಂದು ವರದಾಯಕ ಕ್ಷೇತ್ರವಾಗಲು ಸಾಧ್ಯವಾಯಿತು. ಅದಾದ ಮೇಲೆ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಇಷ್ಟಾರ್ಥ ಸಿದ್ಧಿಗಳು ಹೆಚ್ಚಾದ ಮೇಲೆ ಭಕ್ತರ ಆಗಮನ ಜಾಸ್ತಿಯಾಯಿತು. ದಿನೇದಿನೆ ಕ್ಷೇತ್ರವು ಅಭಿವೃದ್ಧಿಯಾಯಿತು. 2021ರ ಆಗಸ್ಟ್ 8ರಂದು ನಾವೀಗ ನೋಡುತ್ತಿರುವ ಈ ಪಂಚಲೋಹದ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಮೂರ್ತಿ ಮಾಡಿಸಲು ಪ್ರೇರಣೆ ನೀಡಿದವರು ಅಘೋರಿಗಳು. 2011ರಲ್ಲಿ ಅಘೋರಿಗಳು ಹೇಳಿದಂಥ ಮಾತಿನ ಪ್ರೇರಣೆಯಿಂದಾಗಿ, 2021ರಲ್ಲಿ ದೇವಿಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿದೆವು.

ಇದನ್ನೂ ಓದಿ: ಗೌಡಗೆರೆಯ ಶಕ್ತಿ ಧಾಮ

ಇಲ್ಲಿನ ವಿಧಿವಿಧಾನಗಳು ಹಾಗೂ ಆಚರಣೆಗಳ ಬಗ್ಗೆ ಹೇಳಬಹುದೇ?

  • ಖಂಡಿತ. ಇಲ್ಲಿನ ವಿಧಿವಿಧಾನಗಳೆಂದರೆ, ಇಲ್ಲಿ ಯಾವುದೇ ಜಾತಿ ಧರ್ಮ ಎಂಬ ಭೇದಭಾವವಿಲ್ಲ. ಸರ್ವರಿಗೂ ಮುಕ್ತ ಅವಕಾಶವಿರುತ್ತದೆ. ಪೂಜಾ ಕಾರ್ಯಗಳೆಂದರೆ, ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ದೇವಸ್ಥಾನದ ಗುಡಿಯ ಬಾಗಿಲು ತೆರೆಯುತ್ತದೆ. ಅದಾದ ಮೇಲೆ ದೇವಿಗೆ ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಗಳು ನಡೆಯುತ್ತವೆ. ಬೆಳಗ್ಗೆ 6.30ಕ್ಕೆ ಪ್ರತಿನಿತ್ಯ ದೇವಿಗೆ ಮಹಾಮಂಗಳಾರತಿ ಮತ್ತು ಮಹಾನೈವೇದ್ಯ ನಡೆಯುತ್ತದೆ. ಅದೇ ಪ್ರಕಾರವಾಗಿ ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ ಮತ್ತು ಮಹಾಮಂಗಳಾರತಿ ಇರುತ್ತದೆ. ಸಂಜೆ 6 ಗಂಟೆಯಿಂದ ಉಯ್ಯಾಲೋತ್ಸವ ಪ್ರಾರಂಭವಾಗುತ್ತದೆ. ಉಯ್ಯಾಲೋತ್ಸವದ ನಂತರ ಪ್ರಾಕಾರೋತ್ಸವ, ಹಾಗೂ ಪ್ರಾಕಾರೋತ್ಸವದ ನಂತರ ತಾಯಿಗೆ ಪ್ರತಿನಿತ್ಯ ತೇರಿನ ವ್ಯವಸ್ಥೆ ಇರುತ್ತದೆ. ಅದಾದ ಮೇಲೆ ಗಂಗಾರತಿ ಮಾಡುವಂಥ ಸಂದರ್ಭವಿರುತ್ತದೆ. ರಾತ್ರಿ 8.30ಕ್ಕೆ ಕೊನೆಯ ಮಹಾಮಂಗಳಾರತಿ ಆಗುತ್ತದೆ. ರಾತ್ರಿ 9 ಗಂಟೆಗೆ ದೇವಿಗೆ ಶಯನೋತ್ಸವ ಮಾಡಿ, ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಇದು ಪ್ರತಿನಿತ್ಯ ನಡೆಯುವಂಥ ಸೇವೆಗಳು.

ಇಲ್ಲಿಗೆ ಬರುವ ಸಾವಿರಾರು ಭಕ್ತಾದಿಗಳಿಗೆ ನಿತ್ಯವೂ ಅನ್ನದಾಸೋಹ ನಡೆಯುತ್ತದೆ. ಈ ಒಂದು ಬೃಹತ್ ಯೋಜನೆಯನ್ನು ಹೇಗೆ ನಿರ್ವಹಿಸುತ್ತೀರಿ?

  • ದಾಸೋಹ ಕಷ್ಟ ಎಂದರೆ ಕಷ್ಟವಾಗುತ್ತದೆ, ಸುಲಭ ಎಂದರೆ ಸುಲಭವಾಗುತ್ತದೆ. ನಮ್ಮ ಮನಸ್ಥಿತಿಗೆ ಹೇಗೆ ತಂದುಕೊಳ್ಳುತ್ತೇವೆಯೋ ಅದು ಹಾಗೆ ಆಗುತ್ತದೆ. ಎಷ್ಟೇ ದೊಡ್ಡ ಬ್ಯುಸಿನೆಸ್‌ಮ್ಯಾನ್ ಆಗಿರಬಹುದು, ದೇವಸ್ಥಾನದ ಆಡಳಿತಗಾರರಾಗಿರಬಹುದು, ರಾಜಕಾರಣಿಗಳಾಗಿರಬಹುದು, ಯಾರೇ ಆದರೂ ನಾವು ಒಂದು ತುತ್ತು ಅನ್ನವನ್ನೇ ತಿನ್ನಬೇಕೇ ಹೊರತು ಬೇರೇನನ್ನೂ ತಿನ್ನಲು ಸಾಧ್ಯವಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಏನೇ ಕೆಲಸ ಮಾಡುವುದು ಅನ್ನಕ್ಕಾಗಿಯೇ ಹೊರತು ಮತ್ತೊಂದಕ್ಕಲ್ಲ. ಇಲ್ಲಿಗೆ ಬರುವ ಭಕ್ತಾದಿಗಳೆಲ್ಲರೂ ಒಂದು ತುತ್ತು ಅನ್ನಕ್ಕಾಗಿ ಕಷ್ಟಪಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಬಂದು ದೇವರ ಬಳಿ ಬೇಡಿಕೊಳ್ಳಲು ಬಂದಾಗ, ಹಸಿವಿನಿಂದ ಹೋದರೆ ಎಷ್ಟೇ ಪೂಜೆ ಮಾಡಿದರೂ ಅದರ ಸಂಪೂರ್ಣ ಫಲ ಸಿಗುವುದಿಲ್ಲ. ಉದಾಹರಣೆಗೆ, ನಮಗೆ ಕಾಲಿಗೆ ಪೆಟ್ಟಾಗಿದ್ದರೆ ವೈದ್ಯರ ಬಳಿ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಚಿಕಿತ್ಸೆ ಪಡೆಯಬಹುದು. ಆದರೆ, ಹಸಿವನ್ನು ನೀಗಿಸುವ ಶಕ್ತಿ ಇರುವುದು ಆ ಒಂದು ತುತ್ತು ಅನ್ನಕ್ಕೆ ಮಾತ್ರ. ಹಸಿವಿನಲ್ಲಿರುವ ವ್ಯಕ್ತಿಯೊಬ್ಬನನ್ನು ಮಾತನಾಡಿಸಿದರೆ, ಅವನು ಬೆಂಕಿಯಂತೆಯೇ ಇರುತ್ತಾನೆ. ಮನುಷ್ಯನು 21 ದಿನಗಳ ಕಾಲ ಆಹಾರವಿಲ್ಲದೆ ಬದುಕಬಹುದು, ಆದರೆ 22ನೆಯ ದಿನಕ್ಕೆ ಅವನಿಗೆ ಆಹಾರ ಬೇಕೇಬೇಕು. ಇಂಥ ಸಂದರ್ಭದಲ್ಲಿ, ಇಲ್ಲಿಗೆ ಬರುವ ಭಕ್ತಾದಿಗಳಿಗೆ ನಾವು ಏಕೆ ಪ್ರಸಾದ ನೀಡಬಾರದು ಎಂದು ಆಲೋಚಿಸಿ, ಹಲವಾರು ವರ್ಷಗಳ ಹಿಂದೆಯೇ ಇದನ್ನು ಪ್ರಾರಂಭಿಸಿದೆವು. ಆರಂಭದಲ್ಲಿ 1ಕೆಜಿ ಅಕ್ಕಿಯಲ್ಲಿ ಪ್ರಾರಂಭವಾದ ಈ ದಾಸೋಹ, ಇವತ್ತು ನೂರಾರು ಕ್ವಿಂಟಾಲ್‌ಗಳಷ್ಟು ಆಹಾರ ತಯಾರಿಸುವ ಮಟ್ಟಕ್ಕೆ ಬೆಳೆದಿದೆ. ಇದೆಲ್ಲವೂ ಭಕ್ತರ ಸಹಕಾರ ಮತ್ತು ದೇವಿಯ ಆಶೀರ್ವಾದ.
Untitled design (10)

ಭಕ್ತಾದಿಗಳನ್ನು ಒಂದು ವ್ಯವಸ್ಥೆಗೆ ತಂದು, ದರ್ಶನವಾಗುವಂತೆ ಮಾಡುವುದು ಸುಲಭದ ಕೆಲಸವಲ್ಲ. ಈ ವ್ಯವಸ್ಥೆ ಇಲ್ಲಿ ಹೇಗೆ ನಡೆಯುತ್ತಿದೆ?

  • ನಮ್ಮ ಆಡಳಿತ ಮಂಡಳಿಯು ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಪ್ರತಿಯೊಂದು ವಿಭಾಗಕ್ಕೂ ಒಂದೊಂದು ತಂಡವನ್ನು ಸಿದ್ಧಪಡಿಸಿಕೊಂಡಿದ್ದೇವೆ. ಕ್ಷೇತ್ರದ ಭದ್ರತೆಗಾಗಿ ಪ್ರತ್ಯೇಕ ಭದ್ರತಾ ಸಿಬ್ಬಂದಿಯಿದ್ದಾರೆ. ಬರುವ ಭಕ್ತಾದಿಗಳಿಗೆ ಯಾವ ರೀತಿ ವ್ಯವಸ್ಥಿತವಾಗಿ ದರ್ಶನ ಮಾಡಲು ಅನುವು ಮಾಡಿಕೊಡಬೇಕು, ವಾಹನಗಳ ಪಾರ್ಕಿಂಗ್ ಹೇಗೆ ಮಾಡಿಸಬೇಕು, ಹೊರಗಡೆಯಿಂದ ಬರುವ ಬಸ್‌ಗಳನ್ನು ಎಲ್ಲಿ ನಿಲ್ಲಿಸಬೇಕು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಈ ಭದ್ರತಾ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಇದರ ಜತೆಗೆ ದಾಸೋಹಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿಯಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ದಿನದ 24 ಗಂಟೆಗಳ ಕಾಲವೂ ದಾಸೋಹದ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ, ನಮ್ಮಲ್ಲಿ ಅಡುಗೆಗೆ ಯಾವುದೇ ರೀತಿಯ ಗ್ಯಾಸ್ ವ್ಯವಸ್ಥೆ ಇಲ್ಲ. ಪ್ರತಿಯೊಂದನ್ನೂ ಕಟ್ಟಿಗೆಯಿಂದಲೇ ಮಾಡಲಾಗುತ್ತದೆ. ಅದು ಬಹಳ ಕಷ್ಟದ ಕೆಲಸ. ಆದರೂ, ನಮ್ಮ ಸಿಬ್ಬಂದಿ ನಗುನಗುತ್ತಾ ತಮ್ಮ ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸುತ್ತಾರೋ, ಅದೇ ರೀತಿ ಇಲ್ಲಿಗೆ ಬರುವ ಭಕ್ತಾದಿಗಳಿಗೆಲ್ಲರಿಗೂ ಊಟ ಬಡಿಸಿ, ಸತ್ಕರಿಸಿ ಕಳುಹಿಸುತ್ತಾರೆ.

ಇದರ ಹೊರತಾಗಿಯೂ ಹಲವು ಸಮಾಜಮುಖಿ ಕೆಲಸಗಳು ಇಲ್ಲಿಂದ ಆಗುತ್ತಿವೆ. ಅದರ ಬಗ್ಗೆ ಹೇಳಬಹುದೇ?

  • ಸಮಾಜಮುಖಿ ಕೆಲಸಗಳೆಂದರೆ, ಸರಕಾರಿ ಶಾಲೆಗಳಿಗೆ ಬಣ್ಣ ಬಳಿಸುವ ವ್ಯವಸ್ಥೆ, ಜೀರ್ಣೋದ್ಧಾರಗೊಳ್ಳುತ್ತಿರುವ ಪುರಾತನ ದೇವಸ್ಥಾನಗಳಿಗೆ ಕ್ಷೇತ್ರದ ವತಿಯಿಂದ ಅಳಿಲು ಸೇವೆ ಮಾಡುವುದು, ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಅಲ್ಲದೆ, 'ಉದ್ಯೋಗಿನಿ' ಎಂಬ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ. ನಾವೇ ಅವರಿಗೆ ಊಟ, ವಸತಿ ಎಲ್ಲ ವ್ಯವಸ್ಥೆ ಕಲ್ಪಿಸಿ ತರಬೇತಿ ನೀಡುತ್ತೇವೆ. ಇಂಥ ಹತ್ತು-ಹಲವು ಕಾರ್ಯಕ್ರಮಗಳನ್ನು ಕ್ಷೇತ್ರದ ವತಿಯಿಂದ ನಡೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರಗಳನ್ನು ನೀಡುತ್ತೇವೆ. ಜತೆಗೆ, ಇಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ರಕ್ತದಾನ ಶಿಬಿರ ನಡೆಯುತ್ತಲೇ ಇರುತ್ತದೆ.

ಈ ಕ್ಷೇತ್ರದ ಧನಾತ್ಮಕ ಶಕ್ತಿಯ ಬಗ್ಗೆ ಹೇಳಬಹುದೇ?

  • ಜೇನುತುಪ್ಪ ತಿಂದವರಿಗೆ ಮಾತ್ರ ಅದರ ಸಿಹಿಯ ಬೆಲೆ ಗೊತ್ತಿರುತ್ತದೆ ಎಂಬ ಮಾತಿದೆ. ಭಕ್ತಾದಿಗಳು ಬಂದು ತಮ್ಮ ಅನುಭವ ಹೇಳಿಕೊಳ್ಳುವಾಗ, ಇಲ್ಲಿ ಧನಾತ್ಮಕ ಶಕ್ತಿ ಹೆಚ್ಚಿದೆ ಎಂದು ಕೇಳಲು ಬಹಳ ಖುಷಿಯಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳಲ್ಲಿ ಶೇ.90ರಷ್ಟು ಜನ, 'ನನಗೆ ಒಳ್ಳೆಯದಾಯಿತು', 'ನಾನು ಅಂದುಕೊಂಡಿದ್ದೆಲ್ಲಾ ಈಡೇರಿತು' ಎಂದು ಹೇಳುವಂಥ ಫಲಿತಾಂಶಗಳೇ ಹೆಚ್ಚು. ಕಲ್ಲಿನಿಂದ ಮಾಡಿದ ಮೂರ್ತಿಯೊಳಗಿರುವ ಶಕ್ತಿ, ಭಕ್ತಾದಿಗಳ ಮೇಲೆ ಪ್ರಯೋಗವಾದಾಗ ಮಾತ್ರ ಅದರ ಮಹತ್ವ ತಿಳಿಯಲು ಸಾಧ್ಯ. ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸಿದಾಗ ಮಾತ್ರ ಗಾಡಿಯಲ್ಲಿ ಪೆಟ್ರೋಲ್ ಇದೆ ಎಂದು ತಿಳಿಯುತ್ತದೆ. ಅದೇ ರೀತಿ, ಭಕ್ತಾದಿಗಳು ಕೋರಿಕೊಂಡ ಇಷ್ಟಾರ್ಥ ಸಿದ್ಧಿಯಾದಾಗ, 'ತಾಯಿ ಎಲ್ಲರಿಗೂ ಒಳ್ಳೆಯದು ಮಾಡುತ್ತಾಳೆ' ಎಂಬ ನಂಬಿಕೆ ಬರುತ್ತದೆ. ಈ ಧನಾತ್ಮಕ ಶಕ್ತಿ ಎನ್ನುವುದು ಭಕ್ತಾದಿಗಳಿಂದ ಬರುವ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ನನ್ನ ಅನಿಸಿಕೆ.

ಯುವಜನತೆಯನ್ನು ಇಲ್ಲಿಗೆ ಸೆಳೆಯಲು ಹೇಗೆ ಸಾಧ್ಯವಾಗುತ್ತಿದೆ?

  • ಯುವಜನತೆಯನ್ನು ಕ್ಷೇತ್ರದ ಕಡೆಗೆ ಸೆಳೆಯುತ್ತಿರುವುದು ಆ ತಾಯಿಯ ಶಕ್ತಿ ಎಂಬುದು ನನ್ನ ಅನುಭವ. ಈಗಿನ ಯುವಪೀಳಿಗೆಯು ಹಲವು ದುಶ್ಚಟಗಳಿಗೆ ತುತ್ತಾಗುತ್ತಿರುವ ಸಂದರ್ಭದಲ್ಲಿ, ಆ ತಾಯಿಯಾದವಳು ಶಕ್ತಿದೇವತೆ, ನಾಡಿನ ಅಧಿದೇವತೆ ಹಾಗೂ ಜಗನ್ಮಾತೆಯಾಗಿದ್ದಾಳೆ. ನಾವು ಯಾರಿಗೆ ತಲೆಬಾಗದೇ ಇದ್ದರೂ, ಹೆತ್ತ ತಾಯಿಗೆ ತಲೆಬಾಗಲೇಬೇಕಲ್ಲವೇ? ಆಕೆ ನಮ್ಮ ನಾಡಿನ ಅಧಿದೇವತೆಯಾಗಿ ರುವುದರಿಂದ ಎಲ್ಲರೂ ಬಂದು ತಲೆಬಾಗುತ್ತಾರೆ. ಆ ತಾಯಿಯೇ ಎಲ್ಲರಿಗೂ ಸದ್ಬುದ್ಧಿ ಕೊಟ್ಟು ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದಾಳೆ.

ಇಲ್ಲಿನ ಮತ್ತೊಂದು ಮುಖ್ಯವಾದ ಆಕರ್ಷಣೆ 'ನಮ್ಮ ಪರಂಪರೆ' ಮ್ಯೂಸಿಯಂ. ಆ ಯೋಚನೆ ಹೇಗೆ ಬಂತು?

  • ಧಾರ್ಮಿಕ ಕ್ಷೇತ್ರಗಳಿಗೆ ಮಗುವೊಂದು ಬಂದಾಗ, ಅದು ಭಯ ಮತ್ತು ಭಕ್ತಿಯಿಂದ ಬರುತ್ತದೆ. ದರ್ಶನ ಮಾಡಿ ಹೋಗುವ ಆ ಎರಡು ನಿಮಿಷಗಳಲ್ಲಿ ಮಗುವಿಗೆ ಏನಾದರೂ ಒಂದು ಉತ್ತಮ ಸಂದೇಶ ನೀಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಇಂದಿನ ದಿನಗಳಲ್ಲಿ ಮಗುವಿನ ಕೈಗೆ ಮೊಬೈಲ್ ಕೊಟ್ಟರಷ್ಟೇ ಅದು ಊಟ ಮಾಡುವಂಥ ಪರಿಸ್ಥಿತಿ ಇದೆ. ದೇವಸ್ಥಾನಕ್ಕೆ ಬಂದಾಗಲೂ ಅವರ ಕೈಯಲ್ಲಿ ಮೊಬೈಲ್ ಇರುತ್ತದೆ. ಇದನ್ನು ತಪ್ಪಿಸಬೇಕು ಎಂಬುದು ನನ್ನ ಯೋಚನೆಯಾಗಿತ್ತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿವೆ. ನಾವಿಂದು ಸ್ವತಂತ್ರವಾಗಿ, ಒಳ್ಳೆಯ ಆಹಾರ ತಿನ್ನುತ್ತಾ ಬೇರೆಯವರ ಗುಲಾಮರಾಗದೆ ಬದುಕುತ್ತಿದ್ದೇವೆ. ಆದರೆ, ಈ ಸ್ವಾತಂತ್ರ್ಯ ತಂದುಕೊಡಲು ನಮ್ಮ ಹಿರಿಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ವಿಚಾರ ಇಂದಿನ ಯುವಪೀಳಿಗೆಗೆ ಗೊತ್ತಾಗಬೇಕು. ಆಗ ಮಾತ್ರ 'ನಾನು ಕೂಡ ನನ್ನ ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು' ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಜತೆಗೆ, ಸಮಾಜ ಸುಧಾರಣೆಗಾಗಿ ಬಸವಣ್ಣನವರಂಥ ಶರಣರು ಪಟ್ಟ ಶ್ರಮ, ಹಳೆಯ ಕಾಲದ ಕುಲಕಸುಬುಗಳು ಹಾಗೂ ನದಿಗಳ ಉಗಮಸ್ಥಾನಗಳ ಮಾಹಿತಿಯನ್ನು ಇಂದಿನ ಮಕ್ಕಳಿಗೆ ಪರಿಚಯಿಸಬೇಕಿತ್ತು. ಇನ್ನು ಮೈಸೂರು ಯದುವಂಶದ 25 ಮಹಾರಾಜರು ಮತ್ತು ಒಬ್ಬರು ರಾಜಕುಮಾರರು ಬರುತ್ತಾರೆ. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸತಿಸಹಗಮನ ಪದ್ಧತಿ ರದ್ದು ಮಾಡಿದ್ದು, ಅಕ್ಷರಾಭ್ಯಾಸ ತಂದಿದ್ದು, ವಿದ್ಯುತ್ ಕಂಡುಹಿಡಿದಿದ್ದು, ಕನ್ನಂಬಾಡಿ ಕಟ್ಟೆ ಕಟ್ಟಿದ್ದು, ಇವೆಲ್ಲವೂ ಇಂದಿನ ಪೀಳಿಗೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ಈ ಮ್ಯೂಸಿಯಂ ಮಾಡಿದೆವು. ಇದರ ಜತೆಗೆ 1947ರ ನಂತರದ ನಾಲ್ಕು ಜನ ಆದರ್ಶ ಸ್ವಾಮೀಜಿಗಳ ಪ್ರತಿಮೆಗಳನ್ನೂ ಇರಿಸಿದ್ದೇವೆ. ಪುಟ್ಟರಾಜ ಗವಾಯಿಗಳು ಅಂಧರಿಗೂ ಸಂಗೀತ ಒಲಿಯುತ್ತದೆ ಎಂದು ತೋರಿಸಿಕೊಟ್ಟ ಮಹಾತ್ಮರು. ಬಾಲಗಂಗಾಧರನಾಥ ಸ್ವಾಮೀಜಿಯವರು ಮುರುಕಲು ಎತ್ತಿನಗಾಡಿ ಮತ್ತು ಧಾನ್ಯಗಳೊಂದಿಗೆ ಪ್ರಾರಂಭಿಸಿ, ಚುಂಚನಗಿರಿಯನ್ನು 'ಚಿನ್ನದಗಿರಿ' ಮಾಡಿ 500ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಕಟ್ಟಿದವರು. ಸಿದ್ಧಗಂಗಾ ಶ್ರೀಗಳು 'ನಡೆದಾಡುವ ದೇವರು' ಎಂದೇ ಖ್ಯಾತರಾಗಿ ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದವರು. ಹಾಗೆಯೇ ಸಿದ್ಧೇಶ್ವರ ಸ್ವಾಮೀಜಿಗಳು, ಅಂಗಿಗೆ ಜೇಬಿಲ್ಲದೆ ಬದುಕಿ, ಪ್ರಶಸ್ತಿ-ಪುರಸ್ಕಾರಗಳನ್ನು ತ್ಯಜಿಸಿ ಸಮಾಜಕ್ಕೆ ಆದರ್ಶವಾದವರು. ಈ ಮಹನೀಯರ ಆದರ್ಶಗಳನ್ನು ಇಂದಿನವರು ಪಾಲಿಸಲಿ ಎಂಬ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಿಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಮತ್ತೊಂದು ಮ್ಯೂಸಿಯಂ ಕೂಡ ಲೋಕಾರ್ಪಣೆಯಾಗಲಿದೆ. ಅದು ರೈತರ ಜೀವನವನ್ನು ಬಿಂಬಿಸುತ್ತದೆ. ಅಂದಿನ ರೈತರು ಹೊಲದಲ್ಲಿ ಬೆಳೆ ಬೆಳೆಯುತ್ತಿದ್ದರೆ, ಇಂದಿನ ರೈತರ ಮಕ್ಕಳು ಮೊಬೈಲ್‌ನಲ್ಲಿ 'ಬೆಳೆ' ಬೆಳೆಯುತ್ತಿದ್ದಾರೆ. ಅಂದಿನ ಜನರ ಆರೋಗ್ಯ, ಪ್ರೀತಿ- ವಿಶ್ವಾಸ ಹಾಗೂ ಇಂದಿನ ಹಣದ ಪ್ರಭಾವ ಇವೆರಡರ ನಡುವಿನ ವ್ಯತ್ಯಾಸವನ್ನು ಆ ಮ್ಯೂಸಿಯಂನಲ್ಲಿ ತೋರಿಸಲಿದ್ದೇವೆ.
Untitled design (23)

ಈ ಕ್ಷೇತ್ರದ ಮುಂದಿನ ಅಭಿವೃದ್ಧಿ ಯೋಜನೆಗಳು ಏನೇನಿವೆ?

  • ಮುಂದಿನ ಎರಡು ತಿಂಗಳ ಒಳಗಾಗಿ ದೇವಿಗೆ ಸಂಬಂಧಪಟ್ಟಂತೆ ಒಂದು ವಿಶೇಷ ಲೇಸರ್ ಲೈಟ್ ಪ್ರದರ್ಶನವನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ನನಗೆ ದೇಶ ಕಾಯುವ ಸೈನಿಕರು ಹಾಗೂ ಅನ್ನ ಹಾಕುವ ರೈತರೆಂದರೆ ಅಪಾರ ಗೌರವ. ಹಾಗಾಗಿ ರೈತರಿಗಾಗಿ ಈ ಕ್ಷೇತ್ರದ ವತಿಯಿಂದ ಸಹಾಯ ಮಾಡುವ ಆಸೆ ಇದೆ. ರೈತರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದಿದ್ದಾಗ, ನಾವೇ ಅವರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸುವ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭವಿಷ್ಯದಲ್ಲಿ ರೈತರಿಗಾಗಿಯೇ ಒಂದು ಆಸ್ಪತ್ರೆ ಹಾಗೂ ಡಯಾಲಿಸಿಸ್ ಕೇಂದ್ರ ಸ್ಥಾಪಿಸುವ ಕಾನ್ಸೆಪ್ಟ್ ಇದೆ. ಅದೇ ರೀತಿ ದೇಶ ಕಾಯುವ ಸೈನಿಕರಿಗಾಗಿಯೂ ಯೋಜನೆಗಳನ್ನು ಹಮ್ಮಿಕೊಳ್ಳುವ ಗುರಿ ಇದೆ. ಜತೆಗೆ, ಆದಷ್ಟು ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಒದಗಿಸುವ ಪ್ರಯತ್ನ ಕೂಡ ನಡೆಯುತ್ತಿದೆ.

ಇಲ್ಲಿಗೆ ಬರುವ ಭಕ್ತಾದಿಗಳಿಗೆ ನೀವು ಏನು ಸಂದೇಶ ನೀಡುತ್ತೀರಿ?

  • ನನ್ನ ಸಂದೇಶ ಇಷ್ಟೇ. ಇದೊಂದು ದಾಸೋಹ ಕ್ಷೇತ್ರ. ನೀವು ಇಲ್ಲಿಗೆ ಬರುವಾಗ ದೇವರಿಗೆಂದು ದುಡ್ಡು, ಕಾಸು, ಚಿನ್ನ, ಬೆಳ್ಳಿಯನ್ನೇನೂ ತರಬೇಡಿ. ನಿಮ್ಮ ಮನೆಯಿಂದ ಬರುವಾಗ ಒಂದು ಹಿಡಿ ಅಕ್ಕಿ ತೆಗೆದುಕೊಂಡು ಬನ್ನಿ. ಹಳ್ಳಿಯ ರೈತರಾಗಿದ್ದರೆ ನಿಮ್ಮ ತೋಟದಲ್ಲಿ ಬೆಳೆದ ತರಕಾರಿಯನ್ನೇ ತಂದುಕೊಡಿ ಸಾಕು. ನೀವು ಕೊಡುವ ಒಂದು ಹಿಡಿ ಅಕ್ಕಿ ಮತ್ತೊಬ್ಬರಿಗೆ ಅನ್ನ ಹಾಕಲು ಸಹಾಯವಾಗುತ್ತದೆ. ಎರಡನೆಯದಾಗಿ, ದೇವಸ್ಥಾನಕ್ಕೆ ಬರುವಾಗ ನಂಬಿಕೆ ಮತ್ತು ಭಕ್ತಿಯಿಂದ ಬನ್ನಿ. 'ಯಾರೋ ಹೇಳಿದರಂತೆ, ನಾನು ನಾಳೆಯೇ ಕೋಟ್ಯಧಿಪತಿಯಾಗಬೇಕು' ಎಂಬ ದುರಾಸೆಯಿಂದ ಬರಬೇಡಿ. ದೇವರ ಬಳಿ ಬೇಡಿಕೆ ಇಡಬಾರದು, ಏಕೆಂದರೆ ದೇವಿಗೆ ಎಲ್ಲವೂ ಗೊತ್ತಿರುತ್ತದೆ. 'ತಾಯಿ, ನನ್ನ ಕಷ್ಟ-ಸುಖ ಎರಡೂ ನಿನಗೆ ತಿಳಿದಿದೆ. ಯಾವುದು ಸರಿ ಎನಿಸುತ್ತದೆಯೋ ಅದನ್ನು ನೀನೇ ಕರುಣಿಸು' ಎಂದು ಪ್ರಾರ್ಥಿಸಬೇಕು. ಆಡಂಬರ ಬಿಟ್ಟು ಭಕ್ತಿಯಿಂದ ಬನ್ನಿ. ಮತ್ತೊಂದು ಕಳಕಳಿಯ ವಿನಂತಿ ಎಂದರೆ, ಕ್ಷೇತ್ರಕ್ಕೆ ಬರುವಾಗ ದಯವಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ತರಬೇಡಿ. ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್‌ನಂಥ ಭೀಕರ ಕಾಯಿಲೆಗಳು ಬರುತ್ತಿವೆ. ಈಗಾಗಲೇ 17 ಲಕ್ಷ ಕ್ಯಾನ್ಸರ್ ಪೀಡಿತರಿದ್ದಾರೆ. ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸರಿಯಾದ ಜಾಗದಲ್ಲಿ ಶೇಖರಣೆ ಮಾಡಿ ಎಂದು ಭಕ್ತಿಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್