Monday, August 18, 2025
Monday, August 18, 2025

ಸ್ವಚ್ಛ ಕನ್ನಡದ ಸುಚೇಂದ್ರಪ್ರಸಾದ್ ಹಿಮಾಲಯದಲ್ಲಿ ಸಂಸ್ಕೃತ ಧ್ವಜ ನೆಟ್ಟ ಕಥೆ!

ನಾನು ಪರಿಚಿತನಲ್ಲದ ಜಾಗದಲ್ಲಿ ಜನರ ನಡುವೆ ಸುತ್ತಾಡುವುದು ನನಗೆ ಹೊಸದಲ್ಲ. ಆದರೆ ಅಲ್ಲಿನ ಪರಿಸರವೇ ನನಗೆ ಅಪರಿಚಿತವಾಗಿತ್ತು - ಸುಚೇಂದ್ರಪ್ರಸಾದ್

  • ಶಶಿಕರ ಪಾತೂರು

ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಗೆ ಪ್ರವಾಸವೆಂದರೆ ಬಲು ಪ್ರೀತಿ. ಬಾಲ್ಯದಲ್ಲಿ ಬಾಡಿಗೆಗೆ ಸೈಕಲ್ ಪಡೆದು ಊರಿಂದ ಊರಿಂದ ಊರಿಗೆ ಸಂಚರಿಸಿ ಹೊಸ ಊರನ್ನು ನೋಡುವಂಥ ಪ್ರವಾಸದ ಹುಚ್ಚಿದ್ದ ಹುಡುಗ. ಹೇಳುವುದಾದರೆ ತಮ್ಮಲ್ಲಿ ಇನ್ನೂರಕ್ಕೂ ಅಧಿಕ ದೇಶ, ವಿದೇಶ ಪ್ರವಾಸದ ಕತೆಗಳಿವೆ ಎನ್ನುತ್ತಾರೆ ಸುಚೇಂದ್ರ ಪ್ರಸಾದ್. ಇತ್ತೀಚೆಗೆ ಹೋಗಿದ್ದ ಹಿಮಾಲಯಕ್ಕೆ ಪ್ರವಾಸದ ಜತೆ ಇಪ್ಪತ್ತು ವರ್ಷಗಳ ಹಿಂದೆ ಅದೇ ಹಿಮಾಲಯಕ್ಕೆ ಹೋದಾಗ ಆಗಿದ್ದ ರೋಚಕ ಅನುಭವಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.

ನೂರಾರು ಪ್ರವಾಸಗಳ ಮಧ್ಯೆ ಹಿಮಾಲಯ ಪ್ರವಾಸ ಕಥನವನ್ನೇ ಹೇಳಬೇಕು ಎಂದು ನಿಮಗೆ ಅನಿಸಿದ್ದೇಕೆ?

ಹಿಮಾಲಯ ಎಂದರೇನೇ ಹಾಗೆ. ಹಿಮಾಲಯ ಭಾರತದ ಮುಕುಟಮಣಿ ಎಂದೇ ನಂಬಿ ಬೆಳೆದವನು ನಾನು. ಅದೇ 20ಸಾವಿರ ಅಡಿ ಎತ್ತರದ ಪರ್ವತದ ಅಡಿಯಲ್ಲಿ ನಿಂತಾಗ ನಾನು ಅದೆಷ್ಟು ನಿಸ್ಸಹಾಯಕ, ಕುಬ್ಜ ಎನ್ನುವ ಅರಿವಾಗುತ್ತದೆ. ನಾನು ತುಂಬ ಧಾರ್ಮಿಕನೇ ಆದರೂ ಕಂಡೊಡನೆ ಕೈ ಮುಗಿಯುವುದಕ್ಕಿಂತಲೂ ಎಡತಾಕುವ ವ್ಯಕ್ತಿತ್ವ ನನ್ನದು. ಎರಡು ಬಾರಿ ಹೋದಾಗಲೂ ಅಲ್ಲಿ ಸ್ವಾರಸ್ಯಕಾರಿ ಅನುಭವಗಳು ಆಗಿರುವುದರಿಂದ ಆ ಬೆಳ್ಳಿಬೆಟ್ಟದೆಡೆಗಿನ ಪಯಣದ ಬಗ್ಗೆಯೇ ಹೇಳಬೇಕಾಗಿದೆ.

sucehndra prasad

ಇಪ್ಪತ್ತು ವರ್ಷಗಳ ಹಿಂದೆ ಹೋದಾಗ ಸಿಕ್ಕಂಥ ರೋಚಕ ಅನುಭವ ಏನು?

ಗಂಗೋತ್ರಿಗೆ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಹಿಮಾಲಯದತ್ತ ಸಾಗಬೇಕಿತ್ತು. ಅಲ್ಲಿರುವ ಗೋಮುಖ ಎನ್ನುವ ಜಾಗವನ್ನೇ ಗಂಗೆಯ ನಿಜವಾದ ಉಗಮಸ್ಥಾನ ಎನ್ನುತ್ತಾರೆ. ನಿಜಕ್ಕೂ ತುಂಬ ದುರ್ಗಮಸ್ಥಾನ. ಈಗ ದಾರಿ ಸುಧಾರಣೆ ಮಾಡಿಕೊಂಡಿರಬಹುದೇನೋ. ನಾನು ಹೋದ ಸಂದರ್ಭದಲ್ಲಿ ತುಂಬ ಮಂದಿ ಅನಾರೋಗ್ಯ ಪೀಡಿತರಾಗಿ ಮರಳಿ ಉತ್ತರ ಕಾಶಿಯಲ್ಲಿ ಚಿಕಿತ್ಸೆಗೊಳಗಾಗಿದ್ದನ್ನು ನೋಡಿದ್ದೇನೆ. ಅದನ್ನು ಕಂಡೇ ಎಲ್ಲರೂ ಮುಂದೆ ಹೋಗಬೇಡ ಎನ್ನುತ್ತಿದ್ದರೂ ಒಬ್ಬನೇ ಮುನ್ನುಗ್ಗುವ ಹುಚ್ಚು ಸಾಹಸಕ್ಕೆ ಮುಂದಾಗಿದ್ದೆ. ಯಾಕೆಂದರೆ ಇಂಥ ಪ್ರದೇಶಗಳಿಗೆ ಹೋದಾಗ ಸಂತರೊಂದಿಗೆ ಬೆರೆಯುವುದು ಮಾತುಕತೆ ನಡೆಸುವುದು ಪ್ರಶ್ನಿಸುವುದು ನನ್ನ ಹವ್ಯಾಸ. ಹಾಗೆ ಸವಾಲಿಗೆ ಮೈಯೊಡ್ಡಿ ಹೋದಾಗ ಅಲ್ಲಿ ಲಾಲ್ ಬಾಬಾ ಆಶ್ರಮ ಸಿಕ್ಕಿತ್ತು. ಮೈನಸ್ ಹನ್ನೆರಡರಷ್ಟು ಕೊರೆಯುವ ಚಳಿಯ ವಾತಾವರಣ. ಅಲ್ಲಿಂದಾಚೆಗೂ ಐದಾರು ಕಿ.ಮೀ ನಡೆದು ಹೋಗಬೇಕಿತ್ತು. ಬೆಂಗಳೂರಿನಲ್ಲಿ ಹಾಕುವ ಸಾಮಾನ್ಯ ಪಾದರಕ್ಷೆಗಳನ್ನೇ ತೊಟ್ಟು ನೀರ್ಗಲ್ಲಲ್ಲಿ ನಡೆಯಬೇಕಾಗಿತ್ತು. ನಾನಿದ್ದಲ್ಲಿಗೆ ಚೈನಾ ಕಾಣಿಸುತ್ತಿತ್ತು. ಅಲ್ಲಿದ್ದ ಮೌನಿಬಾಬಾ ನನಗೆ ಹಿಂದಿರುಗುವಂತೆ ಹೇಳಿದ್ದರು. ಗುಹೆಯ ಬಾಗಿಲು ಹಾಕಿಕೊಂಡಿದ್ದರು. ನಾನು ನಿಜಕ್ಕೂ ಒಬ್ಬಂಟಿಯಾಗಿದ್ದೆ.

ಆ ಕ್ಷಣ ನಿಮ್ಮಲ್ಲಿ ಭಯ ಮೂಡಿರಲಿಲ್ಲವೇ?

ಖಂಡಿತವಾಗಿಯೂ ಆತಂಕ ಮೂಡಿಸುವ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿಗೆ ಚಾರಣಕ್ಕೆ ಬಂದು ಅನಾರೋಗ್ಯಗೊಂಡವರನ್ನು ಕಣ್ಣೆದುರೇ ಕುರ್ಚಿಯಲ್ಲಿ ಕೂರಿಸಿ ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿರುವುದನ್ನು ನೋಡಿದೆ. ಎಂಥ ಜಾಗಕ್ಕೆ ಬಂದಿದ್ದೇನೆ ಎಂದು ಎದೆ ಝಲ್ ಎನಿಸಿತು. ಸಂಜೆ ನಾಲ್ಕು ಗಂಟೆಗೇ ಕತ್ತಲಾಗತೊಡಗಿತ್ತು. ನಡೆಯಲು ದಿಕ್ಕು ಯಾವುದು ಅಂತಾನೇ ಕಾಣಿಸ್ತಿರಲಿಲ್ಲ. ಗುರುತಿಗೆ ಇಟ್ಟಂಥ ಗೋಪುರಗಳಂಥ ಕಲ್ಲುಗಳಿಂದ ತುಂಬ ದೂರ ಬಂದು ಬಿಟ್ಟಿದ್ದೆ. ಅಲ್ಲಿ ಕಾಣಿಸುತ್ತಿದ್ದ ಬಿಳಿ ಮೈಯ ಮತ್ತು ಕೆಂಪು ಕೊಕ್ಕಿನ ಹಕ್ಕಿಗಳು ಕಾಗೆಗಳು ಎಂದು ಗೊತ್ತಾಗಿದ್ದು ಅವುಗಳ ಕೂಗಿನಿಂದ ಮಾತ್ರ. ಹೊಸದೊಂದು ಲೋಕದಲ್ಲಿದ್ದ ಹಾಗೆ ಅನಿಸುತ್ತಿತ್ತು. ಗುರಿ ಯಾವುದು ಎಂದು ಗೊತ್ತಾಗದಿದ್ದರೂ ನಾನು ಹಿಂದಿರುಗಲೇಬೇಕಾಗಿತ್ತು. ಚಂದ್ರನನ್ನು ನೋಡುತ್ತಾ ನಡೆದಿದ್ದ ನಾನು ಗಮ್ಯ ಸೇರಿದಾಗ ರಾತ್ರಿ 11 ಗಂಟೆಯಾಗಿತ್ತು. ನನ್ನ ಜತೆಗಿದ್ದವರು ನಾನಿನ್ನು ಬರುವುದಿಲ್ಲ ಎಂದು ತೀರ್ಮಾನಿಸಿದ್ದರು.

ಈ ಪ್ರವಾಸದಿಂದ ಜೀವಂತವಾಗಿ ಮರಳಿದ್ದನ್ನು ಪವಾಡವಾಗಿ ಪರಿಗಣಿಸುತ್ತೀರಾ?

ನಾನು ಮರಳಿ ಬಂದಾಗ ಅಲ್ಲಿದ್ದ ಸಂತರೇ ಅಚ್ಚರಿಗೊಂಡಿದ್ದರು. ಅವರೆಲ್ಲ ನನ್ನನ್ನು ಕುರ್ಚಿ ಮೇಲೆ ಕೂರಿಸಿ ಪಾದಕ್ಕೆ ವಂದಿಸಿದ್ದನ್ನು ನಾನು ಮರೆಯೋಕೆ ಸಾಧ್ಯವೇ ಇಲ್ಲ. ಆ ಪ್ರದೇಶಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ. ಹಾಗಾಗಿ ನೀವು ದೈವ ಸ್ವರೂಪರು ಎಂದಿದ್ದರು!

ನೀವು ಜನಪ್ರಿಯರಲ್ಲದ ಜಾಗದಲ್ಲಿನ ವಾತಾವರಣ ನಿಮಗೆ ಹೇಗೆ ವಿಭಿನ್ನವಾಗಿತ್ತು?

ನಾನು ಪರಿಚಿತನಲ್ಲದ ಜಾಗದಲ್ಲಿ ಜನರ ನಡುವೆ ಸುತ್ತಾಡುವುದು ನನಗೆ ಹೊಸದಲ್ಲ. ಆದರೆ ಅಲ್ಲಿನ ಪರಿಸರವೇ ನನಗೆ ಅಪರಿಚಿತವಾಗಿತ್ತು. ಉದಾಹರಣೆಗೆ ಮರುದಿನ ಮುಂದೆ ಸಾಗುವಾಗ ತುಂಬ ಸುಂದರವಾದ ಕಾರೆಹಣ್ಣುಗಳು ಕಾಣಿಸಿದ್ದವು. ನಾನು ಅವುಗಳನ್ನು ಕೀಳತೊಡಗಿದ್ದೆ. ಅಷ್ಟರಲ್ಲಿ ನಮ್ಮ ಭಾರತೀಯ ಸೇನಾ ತುಕಡಿಯ ಒಂದಷ್ಟು ಮಂದಿ ಆ ದಾರಿಯಲ್ಲಿ ವೇಗವಾಗಿ ಬಂದರು. ಒಬ್ಬ ಸೈನಿಕ ನನ್ನನ್ನು ಪಕ್ಕಕ್ಕೆ ಸೆಳೆದು ಆ ಹಣ್ಣುಗಳನ್ನು ಕೆಳಗೆ ಎಸೆಯುವಂತೆ ಹೇಳಿದರು. ಆಮೇಲೆ ಗೊತ್ತಾಗಿದ್ದೇನೆಂದರೆ ಅದು ಕಾರೆಹಣ್ಣುಗಳಾಗಿರಲಿಲ್ಲ. ತುಂಬ ವಿಷಪೂರಿತ ಹಣ್ಣುಗಳಾಗಿದ್ದವು! ಅವುಗಳು ನನ್ನ ತುಟಿಗೆ ಸೋಕಿದ್ದರೂ ನನ್ನ ಸಾವಾಗುತ್ತಿತ್ತು. ಮುಂದೆ ಇದೇ ಸೈನಿಕರು ಅದೇ ಮಾದರಿಯ ಬೇರೆಯ, ತಿನ್ನಬಲ್ಲ ಹಣ್ಣುಗಳನ್ನು ತೋರಿಸಿ ತಿನ್ನುವಂತೆ ಹೇಳಿದ್ದು ಮಾತ್ರವಲ್ಲದೆ, ತಮ್ಮ ಕೈನಲ್ಲಿದ್ದ ಒಂದಷ್ಟು ದ್ರಾಕ್ಷಿಗಳನ್ನು ಕೂಡ ನನಗೆ ಕೊಟ್ಟರು.

ಎರಡು ದಶಕದ ಬಳಿಕ ಮತ್ತೆ ಹಿಮಾಲಯ ಸೇರಿದಾಗ ಹೇಗೆ ಅನಿಸಿತು?

ಈ ಬಾರಿ ನನ್ನ ಜವಾಬ್ದಾರಿ ಹೆಚ್ಚಾಗಿತ್ತು. ದೆಹಲಿಯಲ್ಲಿನ ಕೇಂದ್ರೀಯ ಸಂಸ್ಕೃತ ವಿದ್ಯಾಲಯದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪಯಣ ಅದು. ಶಿವಮೊಗ್ಗದ ತರುಣೋದಯ ಸಂಸ್ಕೃತ ಸೇವಾಸಂಸ್ಥೆ ನನಗೊಂದು ಜವಾಬ್ದಾರಿ ನೀಡಿತ್ತು. ದೇಶವ್ಯಾಪಿ ಇರುವ 50 ಸಂಸ್ಕೃತಜ್ಞರನ್ನು ಸೇರಿಸಿ ಹಿಮಾಲಯ ಪರ್ವತದಲ್ಲಿ ಸಂಸ್ಕೃತದ ಧ್ವಜಾರೋಹಣಕ್ಕೆ ಹೊರಟಿದ್ದೆವು. ಹಿಮಾಲಯದಲ್ಲಿ ಸಂಸ್ಕೃತದ ಧ್ವಜ ನೆಟ್ಟರೆ ಸಾಧನೆ ಏನು ಎನ್ನುವುದು ಸಹಜ ಪ್ರಶ್ನೆ. ಆದರೆ ಹಿಮಾಲಯದ ಶಿಖರಗಳಲ್ಲಿ ಹಾಗೂ ಭಾರತದ ಗ್ರಾಮ ಗ್ರಾಮಗಳಲ್ಲಿ ಸಂಸ್ಕೃತವನ್ನು ಹರಡುತ್ತೇವೆ ಎನ್ನುವುದು ನಮ್ಮ ಘೋಷವಾಕ್ಯವಾಗಿತ್ತು. ಹೋಗುವ ಮೊದಲು ಬೇಕಾದ ಎಲ್ಲ ತಯಾರಿಗಳನ್ನು ಅವರೇ ಮಾಡಿಕೊಟ್ಟಿದ್ದರು. ಆದರೆ ಐವತ್ತು ಮಂದಿಯ ತಂಡದ ನೇತೃತ್ವವನ್ನು ನಾನು ವಹಿಸಿಕೊಂಡಿದ್ದೆ.

suchendra prasad  1

ಎರಡನೇ ಸಲದ ಭೇಟಿಯಲ್ಲಿ ಏನೆಲ್ಲ ಬದಲಾವಣೆಗಳಾಗಿದ್ದವು?

ಭಾರೀ ದುರಂತದ ಬದಲಾವಣೆಯೇ ನಡೆದಿತ್ತು. ಈ ಹಿಂದೆ ನಾನು ಭೇಟಿಯಾಗಿದ್ದವರೆಲ್ಲ ಉತ್ತರ ಕಾಶಿಯಲ್ಲಿ ನಡೆದ ಜಲಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಹೊರಟಿದ್ದ ರೊಲಿಖೊಲಿ ಎನ್ನುವ ಜಾಗ ಸೇರಲು ಬೆಟ್ಟಗಳನ್ನು ಏರಿ ಇಳಿಯಬೇಕಾಗಿತ್ತು. ಈ ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆ ತನಕ ಸೂರ್ಯ ದರ್ಶನವೇ ಆಗುತ್ತಿರಲಿಲ್ಲ. ಈ ಪಯಣಕ್ಕೆ ಹಲವಾರು ನಿಯಮಗಳಿದ್ದವು. 5.ಕೆ.ಜಿ ಮೀರದಂಥ ಚೀಲವನ್ನಷ್ಟೇ ಹೊತ್ತುಕೊಳ್ಳಬೇಕಾಗಿತ್ತು. ಡೇರೆಯಲ್ಲಿಯೇ ತಂಗಬೇಕಿತ್ತು. ಆದರೆ ಡೇರೆ ಒಳಗಡೆ ಉಸಿರುಗಟ್ಟಿಸುವ ವಾತಾವರಣ ಅನಿಸಿ ನಾನು ಇಡೀ ರಾತ್ರಿಯಲ್ಲಿ ನಿದ್ದೆ ಮಾಡದೆ ಹೊರಗಡೆ ಅಡ್ಡಾಡುತ್ತಿದ್ದೆ. ಬೆಳಗ್ಗೆ ಡೇರೆ ಒಳಗಿನಿಂದ ಬಂದವರು ತಮಗೂ ಕಷ್ಟವಾಗಿದ್ದಾಗಿ ಹೇಳಿದ್ರು. ಆದರೆ ಹೊರಗೆ ಬರಲು ಹಿಮಕರಡಿಯ ಭಯವಾಗಿತ್ತಂತೆ. ನನ್ನ ಪಾಲಿಗೆ ನಾನೇ ಕರಡಿಯಾಗಿದ್ದೆ!

ಹಿಮಾಲಯದಲ್ಲಿ ಸಂಸ್ಕೃತ ಧ್ವಜಾರೋಹಣದ ಸಂಭ್ರಮ ಹೇಗಿತ್ತು?

ಸಂಭ್ರಮಕ್ಕೂ ಮುನ್ನ ಈ ಬಾರಿಯೂ ಆತಂಕವೇ ಇತ್ತು. ಗುರಿ ತಲುಪಿ ನಾಳೆ ಧ್ವಜಾರೋಹಣ ಮಾಡೋಣ ಅಂದುಕೊಂಡರೆ ರಾತ್ರಿಯಿಡೀ ಬಿದ್ದ ಹಿಮ ನಮ್ಮ ಮೊಣಕಾಲಿನ ತನಕವೂ ಇತ್ತು. ನಮ್ಮ ಹಿಂದೆ ಇದ್ದ ಮತ್ತೊಂದು ಗುಂಪಿನ ಯಾರಿಗೋ ಹೃದಯಾಘಾತವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಒಯ್ದು ಉಳಿಸಿಕೊಳ್ಳಬೇಕಾಯಿತು. ಕೊನೆಗೂ ಧ್ವಜ ಹಾರಿಸಿದಾಗ ರೋಮಾಂಚನವಾಯಿತು. ಪ್ರವಾಸಗಳೆಂದರೇನೇ ಹಾಗೆ. ಅನುಭವ ಮಾತ್ರವಲ್ಲ. ಅನುಭಾವ ಕೂಡ ಹೌದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್