ಸುತ್ತಿ ಸುತ್ತಿ ಪಾಸ್ ಪೋರ್ಟ್ ಪುಟಗಳೇ ತುಂಬಿಹೋದವು! - ಅಶ್ವಿನಿ ಚಂದ್ರಶೇಖರ್
ಪ್ರತಿ ವರ್ಷವೂ ಕನಿಷ್ಠ ಒಂದೊಂದು ಹೊಸ ದೇಶಕ್ಕೆ ಹೋಗುವ ಗುರಿ ನನ್ನದು. ಅದಕ್ಕಿಂತ ಹೆಚ್ಚೇ ಹೋಗಲು ಸಾಧ್ಯವಾಗಿದೆ ಎನ್ನುವುದು ನನ್ನ ಅದೃಷ್ಟ. ಇದುವರೆಗೆ ಸುಮಾರು 25 ದೇಶಗಳನ್ನು ಸುತ್ತಾಡಿದ್ದೇನೆ. ಈಗ ಚಾಲ್ತಿಯಲ್ಲಿರುವುದು ನನ್ನ ಎರಡನೇ ಪಾಸ್‌ಪೋರ್ಟ್. ಕಳೆದ ವರ್ಷ ಯುರೋಪ್ ಗೆ ಹೋಗಿದ್ದೆ. ಈ ವರ್ಷ ಯು.ಕೆ ಹೋಗಿದ್ದೀನಿ. ಮುಂದಿನ ವರ್ಷ ಯುಎಸ್ ಹೋಗುವ ಯೋಜನೆ ಹಾಕಿದ್ದೇನೆ.
- ಶಶಿಕರ ಪಾತೂರು
ರಿಪ್ಪನ್ ಸ್ವಾಮಿ ಮೂಲಕ ವಿಜಯರಾಘವೇಂದ್ರ ಜೋಡಿಯಾಗಿ ಗಮನ ಸೆಳೆದವರು ಅಶ್ವಿನಿ ಚಂದ್ರಶೇಖರ್. ಮೂಲತಃ ಮಲೆನಾಡಿನ ಈ ಚೆಲುವೆ ನಟಿಯಾಗಿ ತಮಿಳು, ಮಲಯಾಳಂನಲ್ಲೂ ಗುರುತಿಸಿಕೊಂಡಿದ್ದಾರೆ. ಅತಿ ಹೆಚ್ಚು ಪ್ರವಾಸ ಮಾಡಿದ ನಟಿಯರಲ್ಲಿ ಈಕೆಯೂ ಒಬ್ಬರೆಂದು ಹೇಳಬಹುದು. ಪ್ರವಾಸದ ಬಗ್ಗೆ ಅಶ್ವಿನಿಯ ಮಾತುಗಳು ಇಲ್ಲಿವೆ.
ನಿಮಗೆ ಪ್ರವಾಸದ ಆಸಕ್ತಿ ಮೂಡಿದ್ದು ಹೇಗೆ?
ನನಗೆ ಪ್ರವಾಸ ಎನ್ನುವುದೇ ಒಂದು ರೀತಿ ಚಿಕಿತ್ಸೆ ಇದ್ದ ಹಾಗೆ. ಒಂದು ಸಿನಿಮಾ ಶೂಟಿಂಗ್ ಮುಗಿಸಿದೊಡನೆ ಸಿಗುವ ವಿಶ್ರಾಮವನ್ನು ನಾನು ಪ್ರವಾಸಕ್ಕೆ ಮೀಸಲಿಡುತ್ತೇನೆ. ಆ ಮೂಲಕ ನಮ್ಮನ್ನು ನಾವು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಯಾವುದೇ ಜಾಗಕ್ಕೆ ಹೋದಾಗ ಅಲ್ಲಿನ ಜನರೊಂದಿಗೆ ಬೆರೆಯುವುದು, ಆಹಾರವನ್ನು ಅರಿಯುವುದು, ಸವಿಯುವುದು ನನ್ನ ಹವ್ಯಾಸ. ನಾನು ಕ್ಲಾಸಿಕಲ್ ಡಾನ್ಸರ್ ಆಗಿರುವ ಕಾರಣ ನನ್ನದೇ ಟ್ರೂಪ್ ಹೊಂದಿದ್ದೆ. ತಂಡದೊಡನೆ ದೆಹಲಿ, ಡೆಹ್ರಾಡೂನ್ ಅಂತ ನೃತ್ಯನಾಟಕಗಳಿಗಾಗಿ ಸುತ್ತಾಡುವುದು ಇರುತ್ತಿತ್ತು. ಅದರಲ್ಲೂ ನವರಾತ್ರಿ ಸಮಯದಲ್ಲಿ ಸಾಕಷ್ಟು ಶೋಗಳು ಗಳು ಸಿಗುತ್ತಿದ್ದವು. ಕೊಲ್ಕತ್ತಾ ರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಸರ್ಕಾರದಿಂದ ನಡೆಸುವ ಶೋಗಳಲ್ಲಿ ಭಾಗಿಯಾಗಿದ್ದೇನೆ. ಹೀಗೆ ವಿವಿಧೆಡೆ ನೂರಾರು ಪ್ರದರ್ಶನಗಳನ್ನು ನೀಡಿದ್ದೇನೆ. ವಿವಿಧ ಪ್ರದೇಶಗಳ ಸುತ್ತಾಟದೊಂದಿಗೆ ನನ್ನಲ್ಲಿ ಪ್ರವಾಸದ ಆಸಕ್ತಿ ಬೆಳೆದಿರಬಹುದು.

ನಿಮ್ಮ ಮೊದಲ ಪ್ರವಾಸದ ನೆನಪುಗಳೇನು?
ಮೊದಮೊದಲು ನಾನು ಪ್ರವಾಸ ಹೋಗಿದ್ದು ಯಾಣಕ್ಕೆ. ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಯಿಂದ ಪ್ರವಾಸ ಕರೆದುಕೊಂಡು ಹೋಗಿದ್ದರು. ಅದಾಗಲೇ 'ನಮ್ಮೂರ ಮಂದಾರ ಹೂವೇ' ಸಿನಿಮಾ ಬಂದ ಕಾರಣ ಆ ಜಾಗ ತುಂಬ ಜನಪ್ರೀತಿ ಗಳಿಸಿತ್ತು. ನಾವು ಹೋಗುವಾಗ ಅಲ್ಲಿಗೆ ಈಗಿನಂತೆ ಸುಲಭದ ದಾರಿ ಇರಲಿಲ್ಲ. ಬಹಳ ನಡೆದಾಡಬೇಕಾಗಿತ್ತು. ಪರಿಣಾಮ ಮನೆಗೆ ಬಂದು ಎರಡು ದಿನ ಜ್ವರದಲ್ಲಿ ಮಲಗಿದ್ದೆ.
ತೀರಾ ಇತ್ತೀಚೆಗೆ ನೀವು ಪ್ರವಾಸ ಕೈಗೊಂಡಿದ್ದು ಎಲ್ಲಿಗೆ?
ಇತ್ತೀಚೆಗೆ ನಾನು ಯು.ಕೆ.ಗೆ ಹೋಗಿದ್ದೆ. ಅಲ್ಲಿ ನನಗೆ ಕಸಿನ್ಸ್ ಇದ್ದಾರೆ. ಸುಮಾರು 20 ದಿನ ಟೂರ್ ಮಾಡಿ, ಸ್ಕಾಟ್ಲೆಂಡ್, ಇಂಗ್ಲೆಂಡ್ ಎಲ್ಲ ನೋಡಿಕೊಂಡು ಬಂದೆ. ಚೆನ್ನಾಗಿತ್ತು.
ಇದುವರೆಗೆ ನೀವು ಎಷ್ಟು ದೇಶಗಳನ್ನು ಸುತ್ತಾಡಿದ್ದೀರಿ?
ಪ್ರತಿ ವರ್ಷವೂ ಕನಿಷ್ಠ ಒಂದೊಂದು ಹೊಸ ದೇಶಕ್ಕೆ ಹೋಗುವ ಗುರಿ ನನ್ನದು. ಅದಕ್ಕಿಂತ ಹೆಚ್ಚೇ ಹೋಗಲು ಸಾಧ್ಯವಾಗಿದೆ ಎನ್ನುವುದು ನನ್ನ ಅದೃಷ್ಟ. ಇದುವರೆಗೆ ಸುಮಾರು 25 ದೇಶಗಳನ್ನು ಸುತ್ತಾಡಿದ್ದೇನೆ. ಈಗ ಚಾಲ್ತಿಯಲ್ಲಿರುವುದು ನನ್ನ ಎರಡನೇ ಪಾಸ್‌ಪೋರ್ಟ್. ಕಳೆದ ವರ್ಷ ಯುರೋಪ್ ಗೆ ಹೋಗಿದ್ದೆ. ಈ ವರ್ಷ ಯು.ಕೆ ಹೋಗಿದ್ದೀನಿ. ಮುಂದಿನ ವರ್ಷ ಯುಎಸ್ ಹೋಗುವ ಯೋಜನೆ ಹಾಕಿದ್ದೇನೆ. ಪ್ರತಿ ಜನ್ಮದಿನವನ್ನು ಒಂದೊಂದು ಹೊಸ ದೇಶದಲ್ಲಿ ಕಳೆಯುತ್ತೇನೆ. ಆ ಮೂಲಕ ಬರ್ತ್ ಡೇಯನ್ನು ಸ್ಮರಣೀಯವಾಗಿಸುವ ಪ್ರಯತ್ನ ಮಾಡುತ್ತೇನೆ. ಸಾಯುವ ಮೊದಲು ಪೂರ್ತಿ ಜಗತ್ತನ್ನೇ ನೋಡಬೇಕು ಎನ್ನುವ ಆಸೆ ಇದೆ.

ನಿಮ್ಮ ಪ್ರವಾಸದಲ್ಲಿ ನಿಮಗೆ ಹೆಚ್ಚು ಮೆಚ್ಚುಗೆಯಾದ ದೇಶ ಯಾವುದು?
ಯುರೋಪ್ ನಲ್ಲಿ ಈಗಾಗಲೇ 12 ದೇಶಗಳನ್ನು ಸುತ್ತಾಡಿದ್ದೇನೆ. ಮುಂದೆ 9 ದೇಶಗಳನ್ನು ಸುತ್ತಾಡಿ ಬರುವ ಯೋಜನೆ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯೂ ಯಾರಾದರೊಬ್ಬರು ಸಂಬಂಧಿಕರು ಇರುತ್ತಾರೆ. ಅವರ ಸಂಪರ್ಕದೊಂದಿಗೆ ಪ್ರವಾಸ ಮಾಡುತ್ತಿರುತ್ತೇನೆ.
ಪ್ರತಿ ದೇಶಗಳು ಕೂಡ ಒಂದೊಂದು ಕಾರಣಕ್ಕೆ ವಿಶಿಷ್ಟ ಅನಿಸುತ್ತವೆ. ಆದರೆ ನನಗೆ ಇದುವರೆಗೆ ನೋಡಿದ ದೇಶಗಳಲ್ಲಿ ವೈಯಕ್ತಿಕವಾಗಿ ಪ್ಯಾರಿಸ್ ಇಷ್ಟ. ಮೊದಲನೆಯ ಕಾರಣ ಆಹಾರ. ಮಾತ್ರವಲ್ಲ ಫ್ಯಾಷನ್ ಸ್ಟಾರ್ಟ್ಸ್ ಫ್ರಮ್ ಪ್ಯಾರಿಸ್. ಐಫೆಲ್ ಟವರ್ ನೋಡುವ ಆಸೆ ಮೊದಲಿಂದಲೂ ಇತ್ತು.
ನಮ್ಮದೇಶದಲ್ಲಿ ನಿಮ್ಮ ಫೇವರಿಟ್ ಪ್ರವಾಸದ ಜಾಗಗಳು ಯಾವುವು?
ನಮ್ಮ ದೇಶದೊಳಗೆ, ರಾಜ್ಯದೊಳಗೆ ನೋಡಬೇಕಾದಂಥ ಬಹಳ ಜಾಗಗಳಿವೆ. ಪ್ರಾಕೃತಿಕ ತಾಣದಲ್ಲಿರುವ ದೇವಾಲಯಗಳು ನನಗೆ ಇಷ್ಟ. ಕುಮಟ, ಗೋಕರ್ಣ, ಕೇರಳದಲ್ಲಿ ಕೊಚ್ಚಿನ್, ವಯನಾಡು, ತಮಿಳುನಾಡಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ನಾನು ಆರ್ಕಿಟೆಕ್ಟ್ ಕಲಿತಿರುವ ಕಾರಣ, ವಿವಿಧ ಮಾದರಿ ವಾಸ್ತುಶಿಲ್ಪಗಳನ್ನು ನೋಡುವ ಆಸಕ್ತಿಯೂ ಸೇರಿಕೊಂಡಿದೆ. ಅಷ್ಟೇ ಅಲ್ಲದೆ ಲಲಿತ ಮಹಲ್ ಅರಮನೆ ಮತ್ತು ಕೇರಳ ಪ್ರವಾಸೋದ್ಯಮ ಇಲಾಖೆಯ ಜಾಹೀರಾತುಗಳಲ್ಲಿಯೂ ನಟಿಸಿದ್ದೇನೆ.
ನೀವು ಮಿಸ್ ಮಾಡಿಕೊಳ್ಳಲು ಬಯಸದ ಪ್ರವಾಸ ಯಾವುದು?
ನಾನು ತಿರುಪತಿ, ಕೊಲ್ಲೂರು ದೇವಾಲಯ ಮತ್ತು ನನ್ನ ತೀರ್ಥಹಳ್ಳಿಯ ಮನೆದೇವ್ರು ದುರ್ಗಾಪರಮೇಶ್ವರಿ, ಪಂಜುರ್ಲಿಯ ಭಕ್ತೆಯಾಗಿರುವ ಕಾರಣ ಇಲ್ಲಿನ ಭೇಟಿಯನ್ನು ಪ್ರತಿವರ್ಷವೂ ತಪ್ಪಿಸುವುದಿಲ್ಲ.
ರಾಮಕೃಷ್ಣಪುರದ ಲಕ್ಷ್ಮೀ ನರಸಿಂಹ ದೇವಸ್ಥಾನದ ಭೇಟಿಯನ್ನು ಮಾಡುತ್ತಲೇ ಇರುತ್ತೇನೆ. ಇವೆಲ್ಲವೂ ಪುಣ್ಯಕ್ಷೇತ್ರ ಪ್ರವಾಸ. ಅದೇ ರೀತಿ ನನಗೆ ಸಮುದ್ರ ಅಂದರೆ ತುಂಬ ಇಷ್ಟ. ಮರೀನ್ ಡ್ರೈವ್ ಮಾಡೋದು ಹವ್ಯಾಸ. ಹೈವೇಯಲ್ಲಿ ವಾಹನ ಓಡಿಸುವುದು ಕೂಡ ಇಷ್ಟವೇ. ಒಬ್ಬಳೇ ಕಾರಲ್ಲಿ ಕೇರಳಕ್ಕೆ ಹೋಗುತ್ತೇನೆ. ಮಂಗಳೂರು, ಬೆಂಗಳೂರು ರಸ್ತೆಯನ್ನು ಸಿಂಗಲ್ ಸ್ಟ್ರೆಚ್ ನಲ್ಲಿ ಡ್ರೈವ್ ಮಾಡುತ್ತೇನೆ.

ಪ್ರತಿ ಪ್ರವಾಸದಲ್ಲಿಯೂ ನೀವು ಮರೆಯದೇ ಕೊಂಡೊಯ್ಯುವ ವಸ್ತುಗಳೇನು?
ನಮ್ಮನೇಲಿ ಯಾವಾಗಲೂ ಒಂದು ಟ್ರಾಲಿ ರೆಡಿಯಾಗಿ ಇರಿಸಿರುತ್ತೇನೆ. ಅಂದರೆ ಒಂದು ಬ್ಯಾಗ್ ಯಾವ ಕ್ಷಣಕ್ಕೂ ಪ್ರವಾಸಕ್ಕೆ ರೆಡಿಯಾಗಿಯೇ ಇಟ್ಟಿರುತ್ತೇನೆ. ಅದರಲ್ಲಿ ಟಾಯ್ಲೆಟ್ರಿ ಕಿಟ್ ಇರುತ್ತದೆ. ಆಮೇಲೆ ಒಂದು ಟವೆಲ್ ಇರುತ್ತದೆ. ಒಂದು ಪಾಶ್ಚಾತ್ಯ ಮತ್ತು ಒಂದು ಸಾಂಪ್ರದಾಯಿಕ ಔಟ್ ಫಿಟ್ ಇರುತ್ತದೆ. ಯಾಕೆಂದರೆ ಯಾವ ಜಾಗಕ್ಕೆ ಹೋದರೂ ಅಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡುವುದು ನನ್ನ ಹವ್ಯಾಸ. ಇವುಗಳೊಂದಿಗೆ ಒಂದು ಚೂರಿ ಮತ್ತು ಟಾರ್ಚ್ ಕೂಡ ಇಟ್ಟುಕೊಂಡಿರುತ್ತೇನೆ.
ನೀವು ಪ್ರವಾಸಗಳಿಂದ ಕಲಿತಿರುವುದೇನು?
ಯುರೋಪ್ ನಲ್ಲಿ ಡಿಸ್ನಿ ವರ್ಲ್ಡ್ ಗೆ ಹೋಗಿದ್ದೆ. ಅಲ್ಲಿಂದ ಮರಳಿ ಬರುವಾಗ ಟ್ರೇನ್ ಏರಲೇಬೇಕಿತ್ತು. ಆದರೆ ನನ್ನಲ್ಲಿ ಫಾರಿನ್ ಕಾಯಿನ್ಸ್ ಇರಲಿಲ್ಲ. ಅಲ್ಲಿದ್ದ ಭಾರತೀಯರಲ್ಲಿ ಸಹಾಯ ಕೇಳಿದೆ. ಅವರು ಅಲ್ಲಿ ಸಹಾಯ ಮಾಡಲಿಲ್ಲ. ಆದರೆ ಯುರೋಪಿಯನ್ನರೇ ನನಗೆ ಸಹಾಯ ಮಾಡಿದರು. ಹೀಗಾಗಿ ನಾವು ನಮ್ಮವರು ಅಂದ್ಕೊಂಡವರು ಸಂದರ್ಭಕ್ಕೆ ಸಿಗದೇ ಹೋಗಬಹುದು. ಆದರೆ ಬೇರೆ ಯಾರಾದರೂ ಸಹಾಯ ಮಾಡುತ್ತಾರೆ. ನಮ್ಮಿಂದ ಸಹಾಯ ಪಡೆದವರೇ ನಮಗೆ ಸಹಾಯ ನೀಡಬೇಕಿಲ್ಲ. ಅದೇ ರೀತಿ ನಾವು ಅಪರಿಚಿತರಿಗೆ ಮಾಡುವ ಸಹಾಯ ಹೀಗೆ ಅಪರಿಚಿತರ ಮೂಲಕ ಮರಳುವುದಾಗಿ ಅಂದ್ಕೊಳ್ಳುತ್ತೇನೆ.
ನಿಮ್ಮ ಪ್ರವಾಸದಲ್ಲಿ ಆತಂಕ ಎದುರಾದ ಸಂದರ್ಭ ಏನಾದರೂ ನಡೆದಿದೆಯೇ?
ಒಮ್ಮೆ ಬ್ಯಾಂಕಾಕ್ ಗೆ ಹೋಗುವಾಗ ಎಂಟು ಜನ ಹುಡುಗೀರು ಹೋಗಿದ್ದೆವು. ಮರಳುವಾಗ ಆರೇ ಮಂದಿ ಬರಬೇಕಾಯಿತು. ಯಾಕೆಂದರೆ ಒಬ್ಬಾಕೆ ಪಾಸ್ ಪೋರ್ಟ್ ಕಳ್ಕೊಂಡು ಬಿಟ್ಟಿದ್ದಳು. ನಾವು ದೇಶ ಸೇರಿ ಇಲ್ಲಿಂದ ಐಡಿ ಕಾಪಿ ಕಳಿಸಿ ಅದು ಓಕೆ ಆಗಬೇಕಾದರೆ ಐದು ದಿನಗಳಾಗಿತ್ತು. ಬ್ಯಾಂಕಾಕ್ ನಲ್ಲಿ ಚೆನ್ನೈನ ನನ್ನ ಪರಿಚಯದವರ ಮನೆ ಇತ್ತು. ಪಾಸ್‌ಪೋರ್ಟ್ ಕಳೆದುಕೊಂಡಾಕೆಯ ಜತೆ ನಮ್ಮ ಮತ್ತೋರ್ವ ಸ್ನೇಹಿತೆ ಅಲ್ಲೇ ಇದ್ದು ಸಾಥ್ ನೀಡಿದ್ದಾಳೆ. ಹೀಗಾಗಿ ಜತೆಯಾಗಿ ಹೋದ 8 ಮಂದಿಯಲ್ಲಿ 6 ಮಂದಿ ಮಾತ್ರ ಜತೆಯಾಗಿ ಮರಳಿದ್ದೆವು. ಅವರಿಬ್ಬರು ಮರಳುವ ತನಕ ಆತಂಕವೇ ಇತ್ತು.