Saturday, August 16, 2025
Saturday, August 16, 2025

ಕೇರಳದ ಪಾಲಕ್ಕಾಡ್ ನಲ್ಲೊಂದು ಟಿಪ್ಪೂ ಕೋಟೆ!

ಇತಿಹಾಸವನ್ನು ತನ್ನ ಒಡಲಿನಲ್ಲಿ ಹಿಡಿದಿಟ್ಟುಕೊಂಡ ಟಿಪ್ಪು ಕೋಟೆಯು ಪ್ರವಾಸಿಗರನ್ನು ಸೆಳೆಯುವುದು ತನ್ನ ಸುತ್ತಲ ವಾತಾವರಣದ ಸೌಂದರ್ಯ ಮತ್ತು ಆಕರ್ಷಣೆಯಿಂದ. ಕೋಟೆಯ ಹೊರವಲಯವನ್ನು ನೋಡಿದ ತಕ್ಷಣ ‘ಹಸಿರು ಸುತ್ತಲೂ ಕಾವಲಿಹುದು ಕಾಣ್!’ ಎಂದು ಉದ್ಗರಿಸುವಂತೆನಿಸುತ್ತದೆ. ಇಲ್ಲಿನ ಹಚ್ಚ ಹಸಿರಿಗೂ ಕೊಟ್ಟ ಅಲಂಕಾರಿಕ ಸ್ಪರ್ಶವು ಎಲ್ಲರನ್ನೂ ಮೋಡಿಗೊಳಿಸುವಂಥ ಭಾವ ಉಂಟಾಗುತ್ತದೆ.

- ಮಣಿಕಂಠ ಗೊದಮನಿ

ಪ್ರವಾಸವೆಂದರೆ ಸಾಕು ಅದೆಂಥದ್ದೋ ಪುಳಕ ನಮ್ಮ ಮೈದಡವುತ್ತದೆ. ಎಲ್ಲಿಲ್ಲದ ಉಲ್ಲಾಸ ಆವರಿಸಿಕೊಂಡು ಗರಿಬಿಚ್ಚಿ ಹಾರುವ ಅನುಭವ ಉಂಟಾಗುತ್ತದೆ. ಹೊಸದೇನನ್ನೋ ಕಾಣುವ ಕನಸು ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸುತ್ತದೆ. ಪ್ರವಾಸದ ಪ್ರತಿ ನೆನಪೂ ನಮ್ಮೊಂದಿಗೆ ಕಡೆತನಕ ಬೆಚ್ಚಗಿದ್ದುಬಿಡುತ್ತದೆ. ಅದೊಂದು ದಿವ್ಯ ಅನುಭೂತಿ!

ಅದು ಬಿಡಿ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತುವುದು ನಿಮಗಿಷ್ಟವೇ? ನೀವು ಪ್ರಕೃತಿ ಮತ್ತು ಇತಿಹಾಸವೆರಡನ್ನೂ ಏಕಕಾಲಕ್ಕೆ ತಿಳಿದುಕೊಳ್ಳಲು ಹವಣಿಸುವ ಚಾರಣ ಪ್ರಿಯರೇ? ಹೌದಾದರೆ; ಪಾಲಕ್ಕಾಡ್‌ ಕೋಟೆಯೂ ನಿಮಗೊಂದು ಬೆಸ್ಟ್‌ ಆಪ್ಷನ್‌ ಆಗಬಲ್ಲದು. ಕೇರಳದ ಪಾಲಕ್ಕಾಡ್‌ ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿರುವ ಈ ಕೋಟೆಯು ತನ್ನ ಸಮೃದ್ಧ ವನಸಿರಿಯಿಂದ ಪ್ರವಾಸಿಗರನ್ನು ಆಕರ್ಷಿಸುವ ಅದ್ಭುತ ಐತಿಹಾಸಿಕ ತಾಣವಾಗಿದೆ. ಕೋಟೆಯ ಸುತ್ತಲೂ ಹಸಿರೇ ಮೈದುಂಬಿ ನಿಂತ ಪ್ರಶಾಂತ ಉದ್ಯಾನವನವಿದೆ. ಈ ಉದ್ಯಾನವನದ ನಡುವೆಯೇ ಇತಿಹಾಸವನ್ನು ಸಾರಿ ಹೇಳುವ ಐತಿಹಾಸಿಕ ಭವ್ಯ ಕೋಟೆ; ಟಿಪ್ಪು ಸುಲ್ತಾನ್‌ ಕೋಟೆ! ಹೌದು, ಪಾಲಕ್ಕಾಡ್‌ ಕೋಟೆಯನ್ನು ಟಿಪ್ಪು ಸುಲ್ತಾನ್‌ ಕೋಟೆ ಎಂದೂ ಕರೆಯುವರು.

sulthan fort 2

ಗತಕಾಲದ ಕಥೆ

ಮೂಲತಃ 1766 ರಲ್ಲಿ ಹೈದರಾಲಿಯು ಮೈಸೂರು ಸಂಸ್ಥಾನದ ದೊರೆಯಾಗಿದ್ದಾಗ ನಿರ್ಮಿಸಿದ ಭವ್ಯ ಕೋಟೆಯಾಗಿದ್ದು, ಇದಕ್ಕೆ ಅವನ ಮಗ ಟಿಪ್ಪುವಿನ ಹೆಸರನ್ನೇ ಇಡಲಾಗಿದೆ. ಆಗಲೇ ಹೇಳಿದಹಾಗೆ ಒಂದು ಕಾಲದ ಇತಿಹಾಸಕ್ಕೆ ಈ ಕೋಟೆಯು ನಿರ್ಣಾಯಕ ನೆಲೆ ಮತ್ತು ನೇರಾನೇರ ಸಾಕ್ಷಿಯೂ ಹೌದು. ಈ ಕೋಟೆಯು ಮೈಸೂರು ಸಾಮ್ರಾಜ್ಯ ಮತ್ತು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ನಡುವಿನ ಸಂಘರ್ಷದ ಅವಧಿಯಲ್ಲಿ ದಕ್ಷಿಣ ಪ್ರದೇಶಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಹಾಗೂ ವಿರೋಧಿಗಳ ಆಕ್ರಮಣದಿಂದ ರಕ್ಷಿಸಿಕೊಳ್ಳಲು ಕೇರಳಕ್ಕೆ ಪ್ರವೇಶ ದ್ವಾರವಾದ ಪಾಲಕ್ಕಾಡ್‌ನಲ್ಲಿ ಹೈದರಾಲಿಯು ಈ ಭವ್ಯ ಕೋಟೆಯನ್ನು ಕಟ್ಟಿಸಿದನು. ಅವನ ಮರಣದ ನಂತರ ಟಿಪ್ಪುವಿನ ತೆಕ್ಕೆಗೆ ಸಿಕ್ಕ ಕೋಟೆ, ಆಗಲೂ 1783 ರ ಪಾಲಕ್ಕಾಡ್‌ ಕದನವನ್ನೂ ಸೇರಿದಂತೆ ಹಲವಾರು ಯುದ್ಧಗಳು ಹಾಗೂ ಮುತ್ತಿಗೆಗಳಿಗೆ ಸಾಕ್ಷಿಯಾಯಿತು. ಕೊನೆಗೆ ಇದರ ಕಾರ್ಯತಂತ್ರದ ಹೊರತಾಗಿಯೂ ಈ ಕೋಟೆ ಅಂತಿಮವಾಗಿ 1790 ರಲ್ಲಿ ಬ್ರಿಟಿಷರ ವಶವಾಯಿತು. ಈ ಕೋಟೆಯ ವಾಸ್ತುಶಿಲ್ಪದ ಶೈಲಿ ಕೂಡ ತನ್ನ ಆಕರ್ಷಣೆಯಿಂದ ನಿಜಕ್ಕೂ ಬೆರಗಾಗಿಸುವಂಥದ್ದು.

ಐಕಾನಿಕ್‌ ವಾಸ್ತುಶಿಲ್ಪ

ಕೋಟೆಯು ದ್ರಾವಿಡ ಹಾಗೂ ಇಸ್ಲಾಮಿಕ್‌ ಶೈಲಿಯ ಮಿಶ್ರಣವನ್ನು ಹೊಂದಿದ್ದು ಮಿಲಿಟರಿ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಚೌಕಾಕಾರದ ಆಕಾರವನ್ನು ಹೊಂದಿದ್ದು, ಗೋಡೆಗಳು ಹಾಗೂ ಕೊತ್ತಲಗಳಿಂದ ಆವೃತವಾಗಿದೆ. ಇಲ್ಲಿಯ ಕೋಟೆ ಗೋಡೆಗಳು, ಕೊತ್ತಲಗಳು ಕೂಡ ವಿರುದ್ಧ ದಾಳಿಗಳನ್ನು ತಡೆಯುವಂತೆ ದೃಢವಾದ ವಿನ್ಯಾಸದಿಂದ ಗ್ರಾನೈಟ್‌ನೊಂದಿಗೆ ಕಟ್ಟಲ್ಪಟ್ಟಿವೆ. ಕಾಲ ಸರಿದಂತೆ ಈ ರಚನೆಯಲ್ಲಿ ಹಲವು ಬದಲಾವಣೆಗಳಾದರೂ ಇದರ ಐತಿಹಾಸಿಕ ದೃಷ್ಟಿಕೋನಕ್ಕೆ ಕುಂದಾಗಿಲ್ಲ. ಕೋಟೆಯ ಪ್ರವೇಶದಲ್ಲಿ ಆಂಜನೇಯನ ಗುಡಿಯನ್ನು, ಎತ್ತರವಾದ ಹಾಗೂ ಯೋಜಿತ ದ್ವಾರಗಳನ್ನು ಕಾಣಬಹುದಾಗಿದೆ. ರಪ್ಪಾಡಿ ಎಂಬ ಸಭಾಂಗಣ, ಹುತಾತ್ಮರ ಸ್ತಂಭ ಮತ್ತು ಆವರಣದಲ್ಲಿ ವಾಟಿಕಾ ಶಿಲಾವಾಟಿಕಾ ಎಂಬ ಉದ್ಯಾನವನವಿದೆ.

ಟಿಪ್ಪು ಸುಲ್ತಾನ್‌ ಮತ್ತು ಕೋಟೆಗೆ ಸಂಬಂಧಿಸಿದ ಅನೇಕ ಕುರುಹುಗಳು, ಶಸ್ತ್ರಾಸ್ತ್ರಗಳು, ಕಲಾಕೃತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಒಂದು ಸಣ್ಣ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದು ಇತಿಹಾಸ ಪ್ರಿಯರಿಗೆ ಅನುಕೂಲವಾಗಬಹುದು.

sulthan fort

ಹೀಗೆ ಇತಿಹಾಸವನ್ನು ತನ್ನ ಒಡಲಿನಲ್ಲಿ ಹಿಡಿದಿಟ್ಟುಕೊಂಡ ಟಿಪ್ಪು ಕೋಟೆಯು ಪ್ರವಾಸಿಗರನ್ನು ಸೆಳೆಯುವುದು ತನ್ನ ಸುತ್ತಣ ವಾತಾವರಣದ ಸೌಂದರ್ಯ ಹಾಗೂ ಆಕರ್ಷಣೆಯಿಂದ. ಕೋಟೆಯ ಹೊರವಲಯವನ್ನು ನೋಡಿದ ತಕ್ಷಣ ‘ಹಸಿರು ಸುತ್ತಲೂ ಕಾವಲಿಹುದು ಕಾಣ್!’(-ಕುವೆಂಪು) ಎಂದು ಉದ್ಗರಿಸುವಂತೆನಿಸುತ್ತದೆ. ಇಲ್ಲಿನ ಅಚ್ಚಹಸಿರಿಗೂ ಕೊಟ್ಟ ಅಲಂಕಾರಿಕ ಸ್ಪರ್ಶವು ಎಲ್ಲರನ್ನೂ ಮೋಡಿಗೊಳಿಸುವಂಥ ಭಾವ ಉಂಟಾಗುತ್ತದೆ. ಕೋಟೆಯ ಒಳನೋಟವನ್ನು ನೋಡುವಾಗ ಅದರ ವಿನ್ಯಾಸವೂ ಎಷ್ಟು ಚಂದವೆನ್ನಿಸಿ, ಮತ್ತದೇ ಇತಿಹಾಸವನ್ನು ನೆನಪಿಸುತ್ತದೆ.

ಈ ಕೋಟೆ ಸದಾ ಪ್ರವಾಸಿಗರಿಂದ ಕಂಗೊಳಿಸುತ್ತಿರುತ್ತದೆ. ಕೇವಲ ಸ್ಥಳೀಯರು ಮಾತ್ರವಲ್ಲದೆ ಹೊರ ರಾಜ್ಯಗಳ ಪ್ರವಾಸಿಗರೂ ಇಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ಬಂದಿರುತ್ತಾರೆ. ಬಂದವರ ಕಣ್ಣುಗಳಲ್ಲಿ ತೃಪ್ತಿ ಮತ್ತು ಆನಂದ ತುಂಬಿರುತ್ತದೆ. ಅದನ್ನು ಕಂಡ ಕೋಟೆಗೂ ಸಾರ್ಥಕತೆಯಿರುತ್ತದೇನೋ. ಪ್ರೇಮಿಗಳಂತೂ ಕೈಗೆ- ಕೈ ಬಂಧಿಸಿಕೊಂಡು ಶಾಂತ ವಾತಾವರಣದಲ್ಲಿ ಕಳೆದುಹೋಗಿರುತ್ತಾರೆ. ಮಕ್ಕಳು, ವಯಸ್ಕರು, ಹಿರಿಯರೆನ್ನದೆ ಮನಸ್ಸಿನ ಆಹ್ಲಾದಕ್ಕಾಗಿ ಎಲ್ಲ ವಯೋಮಾನದವರೂ ಇಲ್ಲಿ ಬಂದು ಹಗುರಾಗುತ್ತಾರೆ. ಕೋಟೆಯೂ ಅವರಿಗೆ ಅದೇ ಪ್ರೀತಿ ತೋರುತ್ತದೆ.

ನೀವೂ ಅಷ್ಟೇ! ಬದುಕಿನ ಜಂಜಾಟದಲ್ಲಿ ರೋಸಿಹೋಗಿ ಒಂದಿಷ್ಟು ಏಕಾಂತ ಬಯಸುತ್ತಿದ್ದಿರಬಹುದು. ಅದಕ್ಕಾಗಿ ಕೇರಳದ ಕಡೆಗೆ ಪ್ರವಾಸ ಬೆಳೆಸುವ ಯೋಚನೆಯಲ್ಲಿದ್ದರೆ ಇಲ್ಲಿಗೊಮ್ಮೆ ಭೇಟಿಕೊಡಿ. ಖಂಡಿತ ನಿಮಗೂ ಇಷ್ಟವಾಗಬಹುದು. ಸಾಧ್ಯವಾದರೆ ಕೋಟೆಯಿಂದ ಹತ್ತೇ ಕಿ.ಮೀ ದೂರದಲ್ಲಿರುವ ಮಲಂಪುಳ ಡ್ಯಾಮ್‌ ಗಾರ್ಡನ್‌ ಗೂ ಭೇಟಿಕೊಡಿ. ಅಲ್ಲಿ ನಿಮಗಾದ ಅನುಭವವನ್ನು ಅಕ್ಷರ ರೂಪಕ್ಕಿಳಿಸಿ. ಹ್ಯಾಪಿ ಜರ್ನಿ!

ದಾರಿ ಹೇಗೆ?

ಬೆಂಗಳೂರಿನಿಂದ ಪಾಲಕ್ಕಾಡ್‌ ಗೆ – 393 ಕಿ.ಮೀ
ಪಾಲಕ್ಕಾಡ್‌ ನಗರದಿಂದ ಟಿಪ್ಪು ಕೋಟೆಗೆ- 2 ಕಿ.ಮೀ
ಸೇಲಂ ಮೂಲಕ ಪಾಲಕ್ಕಾಡ್‌ ತಲುಪಬಹದು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!