Tuesday, October 28, 2025
Tuesday, October 28, 2025

'ಕಾಂತಾರ: ಚಾಪ್ಟರ್‌ 1' ಚಿತ್ರದ ಫೈಟಿಂಗ್‌ ಹಿಂದಿದೆ ಆತ್ಮ ಕಳರಿ ಗ್ರಾಮ

ನಿರಂತರವಾಗಿ ಅಭ್ಯಾಸ ನಡೆಸಿದ್ದ ರಿಷಬ್‌ ಚಿತ್ರದಲ್ಲಿ ಪ್ರಾಣಿಗಳ ಚಲನೆಯ ರೀತಿಯನ್ನು ಅಳವಡಿಸಲು ಪ್ರಾಮುಖ್ಯ ನೀಡಿದ್ದಾರೆ. ಕಳರಿಯ ಅಷ್ಟವಡಿವುಗಳ್‌, ಮೊದಲ ಚಡಕ್ಕಂ ಮೊದಲಾದ ಮೂಮೆಂಟ್‌ ಪ್ರದರ್ಶಿಸಿದ್ದಾರೆ. ಸಾಕಷ್ಟು ಗಾಯಗಳಾಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ತರಬೇತಿ ಪಡೆದುಕೊಂಡಿದ್ದಾರೆ. ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ರೀತಿ ಇತರರಿಗೆ ಮಾದರಿʼʼ ಎಂದು ಹೇಳಿದ್ದಾರೆ.

  • ರಮೇಶ್‌ ಬಳ್ಳಮೂಲೆ

ಕೆಲವು ದಿನಗಳಿಂದ ಸಿನಿಪ್ರಿಯರು ʼಕಾಂತಾರ: ಚಾಪ್ಟರ್‌ 1' ಎನ್ನುವ ಟೈಮ್‌ ಮೆಷಿನ್‌ ಮೂಲಕ 4ನೇ ಶತಮಾನಕ್ಕೆ ಹೋಗಿದ್ದಾರೆ. ದಟ್ಟ ಕಾಡು, ಅಲ್ಲಿನ ಮೌನ, ನಿಗೂಢತೆ, ಬೆಟ್ಟ, ನದಿ, ಜಲಪಾತ, ಅಂದಿನ ರಾಜ ಮನೆತನ, ಬುಡಕಟ್ಟು ಜನಾಂಗ, ಅವರ ಮುಗ್ಧತೆ, ಅಸ್ತಿತ್ವಕ್ಕಾಗಿ ನಡೆಸುವ ಹೋರಾಟ...ಹೀಗೆ ರಿಷಬ್‌ ಶೆಟ್ಟಿ ಸೃಷ್ಟಿಸಿದ 'ಕಾಂತಾರ' ಜಗತ್ತನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಚಿತ್ರ ಸದ್ದು ಮಾಡುತ್ತಿದ್ದು, ರಿಲೀಸ್‌ ಆದ 8 ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ.ಗಿಂತ ಅಧಿಕ ಕಮಾಯಿ ಮಾಡಿದೆ. ಸಿನಿಮಾಟೋಗ್ರಫಿ, ಸಂಗೀತ, ಹಿನ್ನೆಲೆ ಸಂಗೀತ, ಕಲಾವಿದರ ನಟನೆ-ಹೀಗೆ ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳು ಹಲವು. ಇದರ ಜತೆಗೆ ಚಿತ್ರದಲ್ಲಿನ ಸಾಹಸ ದೃಶ್ಯಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಹಾಗೆ ನೋಡಿದರೆ ಫೈಟಿಂಗ್‌ ಸೀನ್‌ಗಳೇ ʼಕಾಂತಾರ: ಚಾಪ್ಟರ್‌ 1' ಚಿತ್ರದ ಹೈಲೈಟ್‌. ಈ ಫೈಟಿಂಗ್‌ನ ಹಿಂದೆ ಕೇರಳದ ಅತೀ ಪ್ರಾಚೀನ ಯುದ್ಧಕಲೆ ಕಳರಿ ಪಯಟ್ಟು ಮುಖ್ಯ ಪಾತ್ರ ವಹಿಸಿದೆ.

ರಿಷಬ್‌ ಶೆಟ್ಟಿ ಚಿತ್ರದ ಹಲವು ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಡ್ಯೂಪ್‌ ಸಹಾಯವಿಲ್ಲದೆ, ಸ್ವತಃ ಅವರೇ ಇಂಥ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ಕಳರಿಯಿಂದ. ಕೇರಳದ ಮಲಪ್ಪುರಂನಲ್ಲಿ ಆತ್ಮ ಕಳರಿ ಗುರುಕುಲ ನಡೆಸುತ್ತಿರುವ ವಿಪಿನ್‌ ದಾಸ್‌ ಎನ್ನುವ ಕಳರಿ ಮಾಂತ್ರಿಕ ಇದರ ಹಿಂದಿನ ಶಕ್ತಿ. ರಿಷಬ್‌ ಶೆಟ್ಟಿ ಬರೋಬ್ಬರಿ 2 ವರ್ಷಗಳ ಕಾಲ ವಿಪಿನ್‌ ಮತ್ತು ತಂಡದ ಬಳಿ ಕಳರಿ ಅಭ್ಯಾಸ ನಡೆಸಿದ್ದಾರೆ. ಈ ಬಗ್ಗೆ ವಿಪಿನ್‌ ಮಾಹಿತಿ ನೀಡಿದ್ದಾರೆ.

aatma kalari

ಆತ್ಮ ಕಳರಿ ಗ್ರಾಮ ಎಂಬ ವಿಸ್ಮಯ

ಕೇರಳದ ಮಲಪ್ಪುರಂ ಜಿಲ್ಲೆಯ ಚೆಮ್ಮಲಶ್ಶೆರಿಯಲ್ಲಿದೆ ಆತ್ಮ ಕಳರಿ ಗ್ರಾಮ. ಇದು ಕಳರಿ ತರಬೇತಿ ನೀಡುವ ವಸತಿ ಶಾಲೆಯಾಗಿದ್ದು, ಗುರುಕುಲ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮದ ಭಾಗವೂ ಹೌದು. ವಿಪಿನ್‌ ಗುರುಕ್ಕಳ್‌ ಎಂದು ಕರೆಯಲ್ಪಡುವ ವಿಪಿನ್‌ ದಾಸ್‌ ನೇತೃತ್ವದಲ್ಲಿ ಇಲ್ಲಿ ಶತಮಾನಗಳ ಇತಿಹಾಸವಿರುವ ಕಳರಿಯನ್ನು ಕಲಿಸಲಾಗುತ್ತದೆ. ದೇಶದ ವಿವಿಧ ಭಾಗಗಳ ಮಾತ್ರವಲ್ಲದೆ ವಿದೇಶದ ವಿದ್ಯಾರ್ಥಿಗಳೂ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ʼಕಾಂತಾರ: ಚಾಪ್ಟರ್‌ 1' ಚಿತ್ರದ ಮ್ಯಾಜಿಕ್‌ ಹಿಂದೆ ಆತ್ಮ ಕಳರಿ ಗ್ರಾಮದ ಕೈಚಳಕವಿದೆ ಎನ್ನುವುದು ಗೊತ್ತಾದ ಬಳಿಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ವಿಪಿನ್‌. ʼʼಕಾಂತಾರʼದಂಥ ದೊಡ್ಡ ಚಿತ್ರದ ಭಾಗವಾಗಿರುವುದಕ್ಕೆ ಸಂತಸವಿದೆʼʼ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕರೆ ಮಾಡಿದ್ದ ರಿಷಬ್‌

ಕೇರಳದ ಆತ್ಮ ಕಳರಿ ಗ್ರಾಮಕ್ಕೂ ಕರ್ನಾಟಕದ ʼಕಾಂತಾರʼ ಚಿತ್ರತಂಡಕ್ಕೂ ಎತ್ತಣಿಂದೆತ್ತ ಸಂಬಂಧ? ಇದರ ಹಿಂದೆಯೂ ರೋಚಕ ಕಥೆಯಿದೆ. 2022ರಲ್ಲಿ ತೆರೆಕಂಡ ʼಕಾಂತಾರʼದ ಯಶಸ್ಸಿನ ಬಳಿಕ ರಿಷಬ್‌ ಅದರ ಪ್ರೀಕ್ವೆಲ್‌ನ ಸಿದ್ಧತೆಯಲ್ಲಿ ತೊಡಗಿದ್ದರು. ಇದು 4ನೇ ಶತಮಾನದ, ಬುಡಕಟ್ಟು ಜನಾಂಗದ ಕಥೆಯಾಗಿದ್ದರಿಂದ ಅವರು ಕಳರಿ ಕಲಿಯಬೇಕಾಗಿತ್ತು. ಕಳರಿ ತರಬೇತಿ ನೀಡುವವರಿಗಾಗಿ ಅವರು ಹಲವು ಕಡೆ ಹುಡುಕಾಟ ನಡೆಸಿದ್ದರು. ಈ ವೇಳೆ ಅವರ ಕಣ್ಣಿಗೆ ಬಿದ್ದಿದ್ದೇ ಆತ್ಮ ಕಳರಿಯ ಸೋಷಿಯಲ್‌ ಮೀಡಿಯಾ ಪೇಜ್‌. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗಳಲ್ಲಿರುವ ಆತ್ಮ ಕಳರಿ ಗುರುಕುಲದ ಪೇಜ್‌ ನೋಡಿ ಪ್ರಭಾವಿತರಾದ ರಿಷಬ್‌ ಬಳಿಕ ವಿಪಿನ್‌ ಅವರನ್ನು ಸಂಪರ್ಕಿಸಿದರು. ಹೀಗೆ ಆತ್ಮ ಕಳರಿ ಗುರುಕುಲ 2023ರಲ್ಲಿ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಭಾಗವಾಯಿತು.

ಮಂಗಳೂರಿನಲ್ಲಿ ತರಬೇತಿಗೆ ಶ್ರೀಕಾರ

ʼʼಅದೊಂದು ದಿನ ರಿಷಬ್‌ ಶೆಟ್ಟಿ ನನಗೆ ಕರೆ ಮಾಡಿ ಕಳರಿ ಪಯಟ್ಟು ಬಗ್ಗೆ ವಿಚಾರಿಸಿದರು.ʼಕಾಂತಾರʼದ ಪ್ರೀಕ್ವೆಲ್‌ ಬರುತ್ತಿದ್ದು ಅದಕ್ಕಾಗಿ ನನಗೆ ಕಳರಿ ತರಬೇತಿ ನೀಡಬೇಕು ಎಂದು ಕೇಳಿಕೊಂಡರು. ಕಳರಿಯ ಸಂಪೂರ್ಣ ಶಾಸ್ತ್ರೋಕ್ತ ತರಬೇತಿ ಬೇಕೆಂದು ವಿವರಿಸಿದರು. ಹೀಗೆ 2023ರಲ್ಲಿ ಮಂಗಳೂರಿನಲ್ಲಿ ತರಬೇತಿ ಆರಂಭಿಸಲಾಯಿತು. ನನಗೆ ಇಲ್ಲಿಯೂ ತರಗತಿ ನಡೆಸಬೇಕಾಗಿದ್ದರಿಂದ ಮತ್ತು ಇದು ದೀರ್ಘ ಕಾಲದ ಪ್ರಕ್ರಿಯೆಯಾಗಿದ್ದರಿಂದ ನಾನು 4 ಮಂದಿಯ ತಂಡವನ್ನು ಕಳುಹಿಸಿಕೊಟ್ಟೆ. ಗೋಕುಲ್‌, ಅವರ ಸಹೋದರಿ ಗೋಪಿಕಾ, ಅನುಶ್ರಿ ಮತ್ತು ವಿಜಿಲೇಶ್‌ ಅವರನ್ನೊಳಗೊಂಡ ನಾಲ್ವರ ಟೀಮ್‌ ನಿರಂತರ 2 ವರ್ಷಗಳ ಕಾಲ ಚಿತ್ರತಂಡದ ಜತೆಗಿದ್ದು ರಿಷಬ್‌ ಮತ್ತು ಸಹ ಕಲಾವಿದರಿಗೆ ತರಬೇತಿ ನೀಡಿದೆ. ಮಂಗಳೂರಿನಲ್ಲಿ ತರಬೇತಿ ಆರಂಭಿಸಲಾಯಿತಾದರೂ ಶೂಟಿಂಗ್‌ ಕುಂದಾಪುರದಲ್ಲಿ ನಡೆಯುತ್ತಿದ್ದರಿಂದ ಬಳಿಕ ಅಲ್ಲಿಗೆ ಸ್ಥಳಾಂತರಿಸಲಾಯಿತು.ನಾನು ಆಗಾಗ ಅಲ್ಲಿಗೆ ಹೋಗಿ ಕೆಲವು ದಿನಗಳ ಮಟ್ಟಿಗೆ ಇದ್ದು ಸೂಚನೆ ನೀಡಿ ಬರುತ್ತಿದ್ದೆ. ವಿಶೇಷ ಎಂದರೆ ತರಬೇತಿ ನೀಡಿದ ಗೋಕುಲ್‌ ಮತ್ತು ಅವರ ತಂಡ ಸೇರಿ ನಾಲ್ವರು ಚಿತ್ರದಲ್ಲಿ ಅಭಿನಯಿಸಿದ್ದಾರೆʼʼ ಎಂದು ವಿಪಿನ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಪರಶುರಾಮನ ಸೃಷ್ಟಿ

ಕಳರಿ ಪಯಟ್ಟಿಗೆ ಸುಮಾರು 3 ಸಾವಿರ ವರ್ಷಗಳ ಇತಿಹಾಸವಿದೆ. ಇದನ್ನು ಪರಶುರಾಮ ಆರಂಭಿಸಿದ್ದ ಎನ್ನಲಾಗುತ್ತಿದೆ. ಇನ್ನು ಆತ್ಮ ಕಳರಿ ಗುರುಕುಲದ ವಿಪಿನ್‌ ದಾಸ್‌ ಅವರಿಗೆ ಈ ಕಲೆ ವಂಶ ಪಾರಂಪರ್ಯವಾಗಿ ಬಂದಿದ್ದು, ಅವರು 8ನೇ ತಲೆಮಾರಿನವರು ಎನ್ನುವುದು ವಿಶೇಷ. ಸದ್ಯ ಕೇರಳದ ವಿವಿಧ ಕಡೆಗಳಲ್ಲಿ ಇವರ ತರಬೇತಿ ಕೇಂದ್ರದ ಶಾಖೆಗಳಿವೆ.

ಟೀಚರ್‌ ಟ್ರೇನಿಂಗ್‌ ಕೂಡ ಇದೆ

ವಿಶೇಷ ಎಂದರೆ ಆತ್ಮ ಕಳರಿಯಲ್ಲಿ ಅಕಡೆಮಿಕ್‌ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ. ಇಲ್ಲಿ 2 ತಿಂಗಳಿನಿಂದ ಹಿಡಿದು 1 ವರ್ಷದವರೆಗಿನ ಕೋರ್ಸ್‌ ಲಭ್ಯ. ಏಕಕಾಲಕ್ಕೆ 17 ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ಸೌಲಭ್ಯ ಒದಗಿಲಾಗುತ್ತದೆ ಎಂದು ವಿಪಿನ್‌ ಹೇಳುತ್ತಾರೆ. ಜತೆಗೆ ಟಿಟಿಸಿ (ಟೀಚರ್‌ ಟ್ರೈನಿಂಗ್‌ ಕೋರ್ಸ್‌) ಇಲ್ಲಿನ ಹೈಲೈಟ್‌. ಈ ಕೋರ್ಸ್‌ ಪೂರ್ಣಗೊಳಿಸಿದವರು ಶಾಲೆಗಳಲ್ಲಿ ಕಳರಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಬಹುದು.‌ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇವರು ವರ್ಕ್‌ಶಾಪ್‌ ಕೂಡ ನಡೆಸುತ್ತಾರೆ.

ಗಾಯಗೊಂಡಿದ್ದ ರಿಷಬ್

ಆತ್ಮ ಗುರುಕುಲ ಕ್ಯಾಂಪಸ್‌ನಲ್ಲೇ ಕಳರಿ ಚಿಕಿತ್ಸಾಲಯವೂ ಇದೆ. ಇದು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಆಯುರ್ವೇದದ ರೀತಿ ಕಾರ್ಯ ನಿರ್ವಹಿಸುತ್ತದೆ. ಅಭ್ಯಂಗ, ಮಸಾಜ್‌ ಮುಂತಾದ ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕಳರಿ ತರಬೇತಿ ಪಡೆಯುವವರು ಮಾತ್ರವಲ್ಲದೆ ಇತರ ಕ್ರೀಡೆಗಳಲ್ಲಿ ಭಾಗವಹಿಸಿ ಗಾಯಗೊಂಡವರು, ಅಸ್ವಸ್ಥಗೊಂಡವರು ಇಲ್ಲಿ ಟ್ರೀಟ್‌ಮೆಂಟ್‌ ಪಡೆದುಕೊಳ್ಳಬಹುದು. 1, 7, 14, 21 ದಿನ ಹೀಗೆ ಗಾಯದ ಪ್ರಮಾಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ರಿಷಬ್‌ ಶೆಟ್ಟಿ ಅವರಿಗೂ ಈ ಚಿಕಿತ್ಸೆ ನೀಡಲಾಗಿತ್ತು. ʼʼಕಳರಿ ಅಭ್ಯಾಸದ ವೇಳೆ ಗಾಯಗೊಂಡ ರಿಷಬ್‌ ಅವರಿಗೆ ಸಾಂಪ್ರದಾಯಿಕ ಪದ್ಧತಿಯಲ್ಲೇ ಚಿಕಿತ್ಸೆ ನೀಡಿದ್ದೇವೆ. ಇಲ್ಲಿಂದ ಮಸಾಜ್‌ ಆಯಿಲ್‌, ಹೇರ್‌ ಆಯಿಲ್‌ ತಯಾರಿಸಿ ಶೂಟಿಂಗ್‌ ಸ್ಥಳಕ್ಕೆ ಕೊಂಡೊಯ್ಡು ಅಲ್ಲಿ ಅವರಿಗೆ ಟ್ರೀಟ್‌ಮೆಂಟ್‌ ನೀಡಿದ್ದೇವೆʼʼ ಎಂದು ವಿಪಿನ್‌ ವಿವರಿಸಿದ್ದಾರೆ.

ಯಾರಿ ತರಬೇತಿ ಪಡೆಯಬಹುದು?

ಕಳರಿ ಅಭ್ಯಾಸವನ್ನು ಯಾರೂ ಕೂಡ ಮಾಡಬಹುದು. ಇದಕ್ಕೆ ಲಿಂಗ, ವಯಸ್ಸಿನ ಭೇದವಿಲ್ಲ. ಸಾಮಾನ್ಯ ವ್ಯಕ್ತಿಯನ್ನು ಒಬ್ಬ ಯೋಧನನ್ನಾಗಿ ಮಾಡುವ ಸಾರ್ಮಥ್ಯ ಕಳರಿಗಿದೆ. ಮಹಿಳೆಯರು ಸ್ವಯಂ ರಕ್ಷಣೆಗಾಗಿಯೂ ಇದನ್ನು ಅಭ್ಯಾಸ ಮಾಡಬಹುದು ಎನ್ನುತ್ತಾರೆ ವಿಪಿನ್‌.

ರಿಷಬ್‌ ಶೆಟ್ಟಿ ಪರಿಶ್ರಮಕ್ಕೆ ಮೆಚ್ಚುಗೆ

ʼಕಾಂತಾರ ಚಾಪ್ಟರ್‌ 1' ಚಿತ್ರಕ್ಕಾಗಿ ರಿಷಬ್‌ ನಡೆಸಿದ ತಯಾರಿ, ಗಾಯವನ್ನೂ ಲೆಕ್ಕಿಸದೆ ಕಳರಿ ಪಯಟ್ಟು ಅಭ್ಯಾಸ ನಡೆಸಿದ ರೀತಿಗೆ ವಿಪಿನ್‌ ಮೆಚ್ಚುಗೆ ಸೂಚಿಸುತ್ತಾರೆ. ʼʼಚಿತ್ರ ಆರಂಭವಾಗುವ ಎರಡು ವರ್ಷದ ಮೊದಲೇ ನಾವು ಅದರ ಭಾಗವಾಗಿದ್ದೆವು. ನಿರಂತರವಾಗಿ ಅಭ್ಯಾಸ ನಡೆಸಿದ್ದ ರಿಷಬ್‌ ಚಿತ್ರದಲ್ಲಿ ಪ್ರಾಣಿಗಳ ಚಲನೆಯ ರೀತಿಯನ್ನು ಅಳವಡಿಸಲು ಪ್ರಾಮುಖ್ಯ ನೀಡಿದ್ದಾರೆ. ಕಳರಿಯ ಅಷ್ಟವಡಿವುಗಳ್‌, ಮೊದಲ ಚಡಕ್ಕಂ ಮೊದಲಾದ ಮೂಮೆಂಟ್‌ ಪ್ರದರ್ಶಿಸಿದ್ದಾರೆ. ಸಾಕಷ್ಟು ಗಾಯಗಳಾಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ತರಬೇತಿ ಪಡೆದುಕೊಂಡಿದ್ದಾರೆ. ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ರೀತಿ ಇತರರಿಗೆ ಮಾದರಿʼʼ ಎಂದು ಹೇಳಿದ್ದಾರೆ.

ನಟನ ತರಬೇತಿ ಕೇಂದ್ರದಲ್ಲಿಯೂ ಕಳರಿ

ಕಳರಿ ಎನ್ನುವುದು ಕೇವಲ ಯುದ್ದ ಕಲೆಯಲ್ಲ. ಇದು ನಮ್ಮ ಮಾನಸಿಕ ಆರೋಗ್ಯ ವೃದ್ದಿಸಿ, ಆತ್ಮ ವಿಶ್ವಾಸ ಹೆಚ್ಚಿಸುವ ಜತೆಗೆ ಬಾಡಿ ಲಾಂಗ್ವೇಜ್‌, ದೇಹದ ಫ್ಲೆಕ್ಸಿಬಿಲಿಟಿಯನ್ನು ಸುಧಾರಿಸಲಿರುವ ಅದ್ಭುತ ಮಾರ್ಗವೂ ಹೌದು. ಹೀಗಾಗಿ ಕಲಾವಿದರು ಇತ್ತೀಚೆಗೆ ಕಳರಿ ತರಬೇತಿಯತ್ತ ಮುಖ ಮಾಡುತ್ತಿದ್ದಾರೆ. ಮುಂಬೈಯ ಫಿಲ್ಮ್‌ ಅಕಾಡೆಮಿಯಲ್ಲಿ ಕಳರಿಯನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ. ತಮ್ಮ ಅಭಿನಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎನ್ನುವ ಕಾರಣಕ್ಕೂ ಅನೇಕ ಕಲಾವಿದರು ಆತ್ಮ ಕಳರಿ ಗುರುಕುಲಕ್ಕೆ ಆಗಮಿಸುತ್ತಾರೆ ಎನ್ನುವುದು ವಿಪಿನ್‌ ಮಾತು.

kalari 2

ಕಳರಿ ಪಯಟ್ಟಿನ ಇತಿಹಾಸ

ಕೇರಳದ ಇತಿಹಾಸದಲ್ಲಿ ಕಳರಿ ಪುಯಟ್ಟು ಯುದ್ಧ ಕಲೆಗೆ ಪ್ರಮುಖ ಸ್ಥಾನವಿದೆ. ಕಳರಿಯಲ್ಲಿ ಉತ್ತರ ಮತ್ತು ದಕ್ಷಿಣ ಶೈಲಿ ಎನ್ನುವ 2 ವಿಧಗಳಿವೆ. ಅದರಲ್ಲಿಯೂ ಉತ್ತರದ ಶೈಲಿ ಅತ್ಯಂತ ಪ್ರಾಚೀನವಾದುದು ಎನ್ನಲಾಗುತ್ತಿದೆ. ಕೇರಳದಲ್ಲಿ ಕಳರಿ ಗಟ್ಟಿಯಾಗಿ ಬೇರೂರಲು ಕಾರಣವೂ ಇದೆ. ಹಿಂದೆಲ್ಲ ಅಲ್ಲಿ ಹೆಚ್ಚಾಗಿ ಸಾಮಂತ ರಾಜರೇ ಆಳ್ವಿಕೆ ನಡೆಸುತ್ತಿದ್ದರು. ಅವರು ತಮ್ಮ ನಾಡಿನ ರಕ್ಷಣೆಗೆ ಸೈನಿಕರನ್ನು ಆಶ್ರಯಿಸುತ್ತಿರಲಿಲ್ಲ. ಬದಲಾಗಿ ಕಳರಿಯ ಅಭ್ಯಾಸ ನಡೆಸುತ್ತಿದ್ದ ಕುಟುಂಬಗಳೇ ಇವರನ್ನು ಕಾಯುತ್ತಿದ್ದವು. ಅಂಥ ಸಾಕಷ್ಟು ಕುಟುಂಬಗಳನ್ನು ಅವರು ಪೋಷಿಸುತ್ತಿದ್ದರು. ಹೀಗಾಗಿ ಅವರು ಕಳರಿಗೆ ಸಾಕಷ್ಟು ಪ್ರಾಧಾನ್ಯ ನೀಡುತ್ತಿದ್ದರು. ಈ ಯುದ್ದ ಕಲೆ ತಲೆಮಾರಿನಿಂದ ತಲೆಮಾರಿಗೆ ದಾಟುತ್ತ ಬಂದು ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಈ ಕಳರಿ ಪಡೆ (ಯೋಧರು) ಎಷ್ಟು ಶಕ್ತಿಶಾಲಿಯಾಗಿತ್ತು ಎಂದರೆ ಇವರಿಗೆ ಭಯಪಟ್ಟು ಬ್ರಿಟಿಷರು 100 ವರ್ಷಗಳ ಕಾಲ ಕಳರಿಯನ್ನು ದಕ್ಷಿಣ ಕೇರಳದಲ್ಲಿ ನಿಷೇಧಿಸಿದ್ದರು. ಆದರೂ ಪಳಶ್ಶಿರಾಜ, ವೇಲುತಂಬಿ ದಳವ ಮುಂತಾದ ಅರಸರ ಕಾಲದಲ್ಲಿ ಗುಟ್ಟಾಗಿ ಮನೆಗಳಲ್ಲಿ ಕಳರಿ ತರಬೇತಿ ನಡೆಯುತ್ತಲೇ ಇತ್ತು.

ರಿಷಬ್‌ ಶೆಟ್ಟಿ ಮತ್ತು ಟೀಮ್‌ಗೆ ತರಬೇತಿ ನೀಡಲು ನಿಯೋಜಿಸಲಾದ ಗೋಕುಲ್‌ ನೇತೃತ್ವದ ತಂಡ ಇದಕ್ಕಾಗಿ ಸುಮಾರು 3 ವರ್ಷಗಳನ್ನು ಮೀಸಲಿಟ್ಟಿತ್ತು. ಆ ಬದ್ಧತೆಯ ಫಲಿತಾಂಶ ಇದೀಗ ತೆರೆಮೇಲೆ ಕಾಣ ಸಿಕ್ಕಿದೆ. ಪ್ರತಿ ಫೈಟ್‌ ಸೀನ್‌ ಸಹಜವಾಗಿ ಮೂಡಿಬಂದಿದೆ. ನಾವೂ ಈ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ.
ವಿಪಿನ್‌ ದಾಸ್‌, ಆತ್ಮ ಕಳರಿ ಗುರುಕುಲದ ಗುರು

ಎಲ್ಲಿದೆ?

ಕಳರಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಆತ್ಮ ಕಳರಿ ಗುರುಕುಲಕ್ಕೆ ಭೇಟಿ ನೀಡಬಹುದು. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಚೆಮ್ಮಲಶ್ಶೆರಿಯಲ್ಲಿದೆ. ಇದು ಜಿಲ್ಲಾ ಕೇಂದ್ರ ಮಲಪ್ಪುರಂನಿಂದ 20 ಕಿ.ಮೀ. ದೂರದಲ್ಲಿದೆ. ಸಮೀಪದ ರೈಲು ನಿಲ್ದಾಣ ಚೆರುಕೂರ್‌ (9 ಕಿ.ಮೀ.). ಕ್ಯಾಲಿಕಟ್‌ ವಿಮಾನ ನಿಲ್ದಾಣದಿಂದ 18 ಕಿ.ಮೀ. ದೂರವಿರುವ ಮಲಪ್ಪುರಂಗೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಹೋಗಬಹುದು. ಫೋನ್‌ ನಂಬರ್‌: 7025255518.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ