ಬೀರಿ ನೋಡ ಒಂದು ನೋಟ.. ಬಾ ಎಂದೀತು ಗಂಡಿಕೋಟ..!
ಲಾಂಗ್ ವೀಕೆಂಡ್ ಬಂದಾಗ ಎಲ್ಲಿ ಹೋಗುವುದೆಂದು ಯೋಚಿಸುತ್ತಿದ್ದೀರಾ? ಆಂಧ್ರ ಪ್ರದೇಶದ ಈ ಕೆಳಗಿನ ಸ್ಥಳಗಳು ಬೆಂಗಳೂರಿನಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿದ್ದು ಎರಡು ಮೂರು ದಿನದಲ್ಲಿ ನೋಡಿ ಬರಲು ಪ್ರಶಸ್ತ ತಾಣ.
- ಅಶ್ವಿನಿ ಸುನಿಲ್
ಅಮೆರಿಕದ ಅರಿಜೋನಾ ಪ್ರಾಂತ್ಯದಲ್ಲಿರುವ ಗ್ರ್ಯಾಂಡ್ ಕ್ಯಾನ್ಯೋನ್ ಬಗ್ಗೆ ಕೇಳಿರುತ್ತೀರಿ. ಕೊಲೆರಾಡೊ ನದಿಯ ಕೊರೆತದಿಂದ ಉಂಟಾದ ಈ ಕಂದಕಗಳು ಯುನೈಟೆಡ್ ಸ್ಟೇಟ್ಸ್ ನ ಅತ್ಯಂತ ಪ್ರಸಿದ್ಧ ಹಾಗೂ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ.
ವಿದೇಶಗಳಿಗೆ ಹೋದಾಗ ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಕೊಂಡಾಡುವ ನಮಗೆ ನಮ್ಮ ದೇಶದಲ್ಲಿಯೇ ಇಂಥ ಹಲವಾರು ಪ್ರಾಕೃತಿಕ ಸೌಂದರ್ಯ ಹೊಂದಿದ, ಜತೆಗೆ ಐತಿಹಾಸಿಕ ಮಹತ್ವವನ್ನು ಹೊಂದಿರುವ ಹಲವಾರು ತಾಣಗಳಿವೆ ಎನ್ನುವುದು ಗೊತ್ತೇ ಇರುವುದಿಲ್ಲ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಡಿಕೋಟ ಕೂಡಾ ಅಂಥ ಪ್ರದೇಶಗಳಲ್ಲೊಂದು.
ಗಂಡಿ ಕೋಟಾದ 'ಗ್ರೇಟ್ ಕ್ಯಾನ್ಯೋನ್ ಆಫ್ ಇಂಡಿಯಾ' ಪ್ರಕೃತಿಯ ಸುಂದರ ರಚನೆಗೆ ಒಂದು ಉದಾಹರಣೆಯಾದರೆ, ಅಲ್ಲಿಯೇ ಪಕ್ಕದಲ್ಲಿರುವ ಕೋಟೆಯು ಐತಿಹಾಸಿಕ ಮಹತ್ವವನ್ನು ಹೊಂದಿರುವಂಥದ್ದು.

ಸುಮಾರು ಐದು ಮೈಲು ಉದ್ದವಿರುವ ಕೆಂಪು ಕಲ್ಲಿನಿಂದ ಮಾಡಲ್ಪಟ್ಟ ಗಂಡಿಕೋಟೆಯ ಈ ಕೋಟೆಯು 13ನೇ ಶತಮಾನದ್ದು ಎನ್ನಲಾಗುತ್ತದೆ. ಪೆನ್ನಾ ನದಿಯ ತಟದಲ್ಲಿರುವ ಗಂಡಿಕೋಟೆಯು ಕಲ್ಯಾಣಿ ಚಾಲುಕ್ಯರ, ವಿಜಯನಗರ ಸಾಮ್ರಾಟರ, ಗೋಲ್ಕಂಡ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ತಿಮ್ಮಸಾನಿ ನಾಯಕರ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿದರು ಎನ್ನಲಾಗುತ್ತಿದೆ. ತೆಲುಗಿನ ಪ್ರಸಿದ್ಧ ಕವಿ ವೇಮನ ಸ್ವಲ್ಪ ಕಾಲ ಇಲ್ಲಿ ವಾಸಿಸುತ್ತಿದ್ದರಂತೆ.
ಗಂಡಿಕೋಟೆಯ ಈ ಕೋಟೆಯೊಳಗೆ ಸುಮಾರು 50ರಿಂದ 100 ಮನೆಗಳಿರುವ ಚಿಕ್ಕದೊಂದು ಊರು ಈಗಲೂ ಇದೆ. ಕೋಟೆಯ ಒಳಗೆ ಹೊಕ್ಕು ಊರಿನ ಮಧ್ಯದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ನಾವಿನ್ನೂ ರಾಜ ಮಹಾರಾಜರ ಕಾಲದಲ್ಲಿ ಇದ್ದಂತೆ ಒಂದು ಕ್ಷಣ ಭಾಸವಾಗುತ್ತದೆ.
ಗಂಡಿಕೋಟೆಯಲ್ಲಿ ಮುಖ್ಯವಾಗಿ ಎರಡು ದೇವಾಲಯಗಳಿವೆ. ಒಂದು ರಂಗನಾಥ ಸ್ವಾಮಿಯ ದೇವಾಲಯವಾದರೆ, ಇನ್ನೊಂದು ಮಾಧವರಾಯ ಸ್ವಾಮಿ ದೇವಸ್ಥಾನ. ವಿಜಯನಗರ ಸಾಮ್ರಾಟರ ಆಳ್ವಿಕೆಯ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯವು ಮುಂದೆ ಹೈದರಾಬಾದಿನ ನಿಜಾಮರದಿಂದ ಕೆಡವಲ್ಪಟ್ಟಿತು. ದೇವರಿಲ್ಲದೆ ಪಾಳು ಬಿದ್ದಿದ್ದರೂ ಈ ದೇವಾಲಯಗಳು ವಿಜಯನಗರ ಸಾಮ್ರಾಜ್ಯದ ಕಲಾಶ್ರೀಮಂತಿಕೆಯನ್ನು ಸಾರುತ್ತದೆ.
ಮುಂದೆ ಮುಸ್ಲಿಂ ರಾಜರ ಆಳ್ವಿಕೆಯ ಕಾಲದಲ್ಲಿ ಇಸ್ಲಾಮಿಕ್ ಶೈಲಿಯ ಕಟ್ಟಡಗಳು ನಿರ್ಮಾಣಗೊಂಡವು. ಇಲ್ಲಿಯೇ ಪಕ್ಕದಲ್ಲಿರುವ ಜಾಮಿಯಾ ಮಸೀದಿ ಹೈದರಾಬಾದಿನ ಚಾರ್ಮಿನಾರ್ ಅನ್ನು ನೆನಪಿಸುತ್ತದೆ. ಮಸೀದಿಯ ಎದುರಿಗೆ 'ಕತ್ತುಲ ಕೊನೆರು' ಎನ್ನುವ ಕೊಳವಿದೆ. ಇದು ರಾಜರುಗಳು ಯುದ್ಧದ ನಂತರ ಕತ್ತಿಯನ್ನು ತೊಳೆಯುತ್ತಿದ್ದ ಸ್ಥಳ ಎನ್ನಲಾಗುತ್ತದೆ. ಜಾಮಿಯಾ ಮಸೀದಿಯ ಪಕ್ಕದಲ್ಲಿ ಧಾನ್ಯಗಳ ಸಂಗ್ರಹಿಸುತ್ತಿದ್ದ ಉಗ್ರಾಣವಿದೆ. ಕೋಟೆಯೊಳಗಿನ ಮತ್ತೊಂದು ಆಕರ್ಷಣೆ ಎಂದರೆ ಆ ಕಾಲದಲ್ಲಿ ಕೈದಿಗಳನ್ನು ಬಂಧಿಸಿ ಬಿಡಲಾಗುತ್ತಿದ್ದ ಕಾರಾಗೃಹ.

ಇದೆಲ್ಲಾ ಗಂಡಿಕೋಟೆಯಲ್ಲಿರುವ ಐತಿಹಾಸಿಕ ಮಹತ್ವದ ಪ್ರದೇಶವಾದರೆ ನೈಸರ್ಗಿಕ ಸೌಂದರ್ಯಕ್ಕೇನೂ ಕಡಿಮೆ ಇಲ್ಲ. ಇಂಥ ಕೋಟೆಯ ರಕ್ಷಣೆಗೆ ಪ್ರಕೃತಿ ನಿರ್ಮಿತ ಆಳವಾದ ಕಂದಕವಿದೆ . ಎರ್ರಮಲೆ ಬೆಟ್ಟದ ತಟದಲ್ಲಿರುವ ಗಂಡಿಕೋಟೆ ಎಂಬ ಈ ಹಳ್ಳಿಯಲ್ಲಿ ಪೆನ್ನಾ ನದಿಯು, ಹರಿದು ಹೋಗುತ್ತಾ ಸೃಷ್ಟಿಯಾಗಿರುವ ಕೊರಕಲು ಪ್ರಕೃತಿ ನಿರ್ಮಿಸಿದ ಕಲಾತ್ಮಕ ದೃಶ್ಯ. ಇಲ್ಲಿಯ ವ್ಯೂ ಪಾಯಿಂಟ್ ನಲ್ಲಿ ಪೆನ್ನಾ ನದಿಯ ಗಾರ್ಜ್ ನ ವಿಹಂಗಮ ದೃಶ್ಯವನ್ನು ನೋಡಬಹುದು.
ಇಲ್ಲಿ ಸೂರ್ಯೋದಯ, ಸೂರ್ಯಾಸ್ತದ ಮನೋಹರ ದೃಶ್ಯವನ್ನು ನೋಡಲು ಬಯಸುವಿರಾದರೆ ಕ್ಯಾಂಪಿಂಗ್ ಮಾಡಲು ಅನುಕೂಲವಾಗುವಂತೆ ಟೆಂಟ್ ಹೌಸ್ ಸೌಲಭ್ಯವಿದೆ. ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಕಯಾಕಿಂಗ್ ಬೋಟಿಂಗ್ ನಂಥ ಚಟುವಟಿಕೆಗಳು ಕೂಡ ಈಗ ಇಲ್ಲಿ ಪ್ರಾರಂಭವಾಗಿದೆ.
ಬೆಂಗಳೂರಿನಿಂದ ಗಂಡಿಕೋಟೆಗೆ ಇರುವ ದೂರ ಸುಮಾರು 280 ಕಿಲೋಮೀಟರ್.
ಹತ್ತಿರದ ರೈಲ್ವೆ ನಿಲ್ದಾಣ ವೆಂದರೆ ಕಡಪ ರೈಲ್ವೆ ನಿಲ್ದಾಣವು 70 ಕಿಲೋಮೀಟರ್ ದೂರದಲ್ಲಿದೆ
ಇಲ್ಲಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ 'ಜಮ್ಮಲಮಡು' ಗೆ ಬೆಂಗಳೂರು ಸೇರಿದಂತೆ ಎಲ್ಲಾ ಊರುಗಳಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ.
ಗಂಡಿಕೋಟೆಯ ಸುತ್ತಮುತ್ತ ನೋಡಲು ಹಲವಾರು ಸ್ಥಳಗಳಿವೆ ಮುಖ್ಯವಾಗಿ ಬೇಲಂಗುಹೆ, ಯಾಗಂಟಿ ದೇವಾಲಯ, ಒರುವ ಕಲ್ಲು ರಾಕ್ ಗಾರ್ಡನ್, ಓಕ್ ಜಲಾಶಯ, ಅಹೋಬಿಲಂ
ಬೇಲಂಗುಹೆಗಳು
ಗಂಡಿಕೋಟೆಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಬೇಲಂಗುಹೆಗಳು ದೇಶದಲ್ಲಿಯೇ ಅತಿ ಉದ್ದವಾದ ಹಾಗೂ ಎರಡನೆಯ ದೊಡ್ಡ ನೈಸರ್ಗಿಕ ಗುಹೆ ಎಂದು ಖ್ಯಾತಿ ಪಡೆದಿದೆ. ಲಕ್ಷಾಂತರ ವರ್ಷಗಳ ಹಿಂದೆ ಸುಣ್ಣದ ಕಲ್ಲಿನ ನಿಕ್ಷೇಪಗಳ ಮೇಲೆ ಸತತವಾಗಿ ನೀರು ಹರಿದು ರಾಸಾಯನಿಕ ಪ್ರಕ್ರಿಯೆ ಉಂಟಾಗಿ ನಿರ್ಮಿತವಾದ ಗುಹೆ ಇದು.
ಗುಹೆಯ ಮೇಲೆ ಇರುವ ಕೃಷಿ ಭೂಮಿಯಲ್ಲಿ ಈಗಲೂ ಕೃಷಿ ಕಾರ್ಯ ನಡೆಯುತ್ತಿರುವುದು ಮತ್ತೊಂದು ವಿಶೇಷ. ಗುಹೆಯೊಳಗೆ ಸಾಗುತ್ತಾ ಹೋದಂತೆ ವಿಚಿತ್ರ ರಚನೆಗಳು ಕಾಣಸಿಗುತ್ತದೆ. ಕೆಲವೆಡೆ ನೇರವಾಗಿ ನಡೆಯಲಾಗದಿದ್ದರೆ ಮತ್ತೆ ಕೆಲವು ಕಡೆ ಸತತವಾಗಿ ಹರಿಯುವ ನೀರಿನಿಂದ ಪಾಚಿಗಟ್ಟಿ ಜಾರುವ ನೆಲದಲ್ಲಿ, ಅತಿ ಕಡಿಮೆ ಬೆಳಕಿನಲ್ಲಿ ನಡೆಯುವುದು ವಿಶೇಷ ಅನುಭವ ನೀಡುತ್ತದೆ.

ಯಾಗಂಟಿ ದೇವಾಲಯ
ಗಂಡಿಕೋಟೆಯಿಂದ 80 ಕಿಲೋಮೀಟರ್ ದೂರದಲ್ಲಿರುವ ಯಾಗಂಟಿಯ ಉಮಾಮಹೇಶ್ವರ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ಹರಿಹರ ಬುಕ್ಕರಾಯರ ಕಾಲದಲ್ಲಿ ನಿರ್ಮಿತವಾದದ್ದು. ಬೆಟ್ಟಗಳಿಂದ ಸುತ್ತುವರಿದಿರುವ ಈ ಸುಂದರ ದೇವಾಲಯದ ಸುತ್ತಲೂ ಪರ್ವತದ ನೀರಿನ ಒರತೆಯಿದ್ದು, ನೀರು ಸದಾ ಜಿನುಗುತ್ತಿರುತ್ತದೆ.
ಒರುವ ಕಲ್ಲು ರಾಕ್ ಗಾರ್ಡನ್
ಸುಮಾರು 1000 ಎಕರೆ ಯಷ್ಟು ವಿಸ್ತೀರ್ಣ ಹೊಂದಿದೆ ಒರುವ ಕಲ್ಲು ರಾಕ್ ಗಾರ್ಡನ್. ದೊಡ್ಡ ದೊಡ್ಡ ಬಂಡೆಕಲ್ಲುಗಳಿಂದ ನೈಸರ್ಗಿಕವಾಗಿ ರಚಿಸಲ್ಪಟ್ಟಿರುವ ಈ ಪಾರ್ಕ್ ನಲ್ಲಿ ನಡೆದಷ್ಟೂ ವಿವಿಧ ಗಾತ್ರ, ಆಕಾರದ ಕಲ್ಲು ಬಂಡೆಗಳು ಕಾಣುತ್ತವೆ. ಸಂಜೆಯ ವೇಳೆ ಹೋದರೆ ಸೂರ್ಯಾಸ್ತದ ಸುಂದರ ದೃಶ್ಯವನ್ನು ವೀಕ್ಷಿಸಬಹುದು. ಸಂಜೆ 6:00 ರ ನಂತರ ಇಲ್ಲಿಗೆ ಪ್ರವೇಶ ಇಲ್ಲದ ಕಾರಣ ಹೋಗುವ ಸಮಯವನ್ನು ಮೊದಲೇ ನಿರ್ಧರಿಸಿಕೊಳ್ಳುವುದು ಒಳಿತು. ಬೆಟ್ಟದ ಕೆಳಗಡೆ ಉಳಿದುಕೊಳ್ಳಲು ಕಾಟೇಜ್ ವ್ಯವಸ್ಥೆ ವ್ಯವಸ್ಥೆ ಇದೆ.
ಓಕ್ ಜಲಾಶಯ
ಗಂಡಿಕೋಟೆಯಿಂದ 70 ಕಿಲೋಮೀಟರ್ ದೂರದಲ್ಲಿರುವ ಓಕ್ ಜಲಾಶಯ ಮೂಲತಃ ಇಲ್ಲಿಯ ಹತ್ತಿರದ ಹಳ್ಳಿಗಳಿಗೆ ನೀರಿನ ಸೌಲಭ್ಯ ಒದಗಿಸಲೆಂದು ನಿರ್ಮಿತವಾದದ್ದು. ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ವಿವಿಧ ಬೋಟಿಂಗ್ ಚಟುವಟಿಕೆಗಳನ್ನು ಆರಂಭಿಸಿದೆ.
ಅಹೋಬಿಲಂ
ಗಂಡಿಕೋಟೆಯಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಅಹೋಬಿಲಂ ನ ನವ ನಾರಸಿಂಹ ಸ್ವಾಮಿ ದೇವಸ್ಥಾನವು ಐತಿಹಾಸಿಕ ಪ್ರಾಮುಖ್ಯತೆಯ ಜೊತೆಗೆ ಪ್ರಾಕೃತಿಕ ಸೌಂದರ್ಯವೂ ಮಿಳಿತವಾಗಿರುವ ಸ್ಥಳ. ನರಸಿಂಹ ಸ್ವಾಮಿಯ ಒಂಬತ್ತು ದೇವಾಲಯ ಇರುವುದು ಇಲ್ಲಿಯ ವಿಶೇಷತೆ. ಎಲ್ಲಾ ದೇವಾಲಯಗಳನ್ನು ನೋಡಲು ಒಂದೂವರೆ ದಿನವಾದರೂ ಬೇಕಾಗುವ ಕಾರಣ ಪ್ರವಾಸವನ್ನು ಅದಕ್ಕೆ ತಕ್ಕಂತೆ ಯೋಜಿಸುವುದು ಒಳ್ಳೆಯದು.
ಇತರ ಪ್ರೇಕ್ಷಣೀಯ ಸ್ಥಳಗಳು
ತಡಪತ್ರಿ ಯ ಚಿಂತಾಲ ವೆಂಕಟರಮಣ ಸ್ವಾಮಿ ದೇವಾಲಯ, ಮೈಲಾವರಂ ಜಲಾಶಯ , ಮಹಾನಂದಿ , ಕರ್ನೂಲಿನ ಕೊಂಡರೆಡ್ಡಿ ಕೋಟೆ, ರೊಲ್ಲಪಡು ಪಕ್ಷಿಧಾಮ ಇತ್ಯಾದಿ ಸ್ಥಳಗಳು ಕೂಡ ಹತ್ತಿರದಲ್ಲಿದೆ.
ಬಿಸಿಲು ಹೆಚ್ಚಿರುವ ಕಾರಣ ಈ ಪ್ರದೇಶಗಳಿಗೆ ಭೇಟಿಕೊಡಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಪ್ರಶಸ್ತ ಸಮಯ.