ಗೋವಾದಲ್ಲಿ ಹೊಸ ವರ್ಷದ ಆಚರಣೆ ಮಾಡಬೇಕೆಂದಿದ್ದೀರಾ ?
ಗದ್ದಲಗಳು ನನಗೆ ಸಲ್ಲದು. ನಾನು ನನ್ನವರು ಮಾತ್ರ ಪಾರ್ಟಿಯಲ್ಲಿರಬೇಕು ಎನ್ನುವವರಿಗೆ ಇದೊಂದು ಉತ್ತಮ ಆಯ್ಕೆ. ಪಾರ್ಟಿ, ಕ್ರೂಸ್‌ಗಳು ನದಿಯ ಮೇಲೆಯೇ ಭೋಜನ ಕೂಟ, ಡ್ರಿಂಕ್ಸ್, ಸಂಗೀತ ಮತ್ತು ಪಟಾಕಿಯ ಸಂಭ್ರಮ ಎಲ್ಲದಕ್ಕೂ ಅವಕಾಶ ಮಾಡಿಕೊಡುತ್ತದೆ. ನದಿಯ ಮೇಲೆ ಜನರ ಸಂದಣಿ ಇಲ್ಲದೆ, ನಿಮ್ಮಿಷ್ಟದಂತೆ ಆಚರಿಸಬಹುದು.
2026ರ ಹೊಸ ವರ್ಷ ಆಚರಣೆ ಕಣ್ಣಮುಂದೆಯೇ ಇದೆ. ವೈನ್ ಕುಡಿದೋ, ವೈನಾಗಿಯೋ, ವೈ ನಮೋನಮಃ ಎನ್ನುತ್ತಲೋ ಹೇಗೆ ಬೇಕಾದರೂ ನಾವು ಹೊಸವರ್ಷವನ್ನು ಸ್ವಾಗತಿಸಬಹುದು. ಇದಕ್ಕೆಲ್ಲ ಬೆಸ್ಟ್ ಪ್ಲೇಸ್ ಯಾವುದು? ಹೊಸವರ್ಷದಂದು ದೇವರನ್ನು ಕಣ್ತುಂಬಿಕೊಳ್ಳಬೇಕೆನ್ನುವವರು ಹಲವರಾದರೆ, ಸಮುದ್ರದ ಅಲೆಗಳ ಜತೆ ಕಾಲ ಕಳೆಯಬೇಕೆನ್ನುವವರು ಕೆಲವರು. ಮತ್ತೂ ಕೆಲವರಿಗೆ ಫೈರ್ ಕ್ಯಾಂಪ್ ಹಾಕಿಕೊಂಡು ಡಿಜೆ ಪಾರ್ಟಿಗಳಲ್ಲಿ ಚುಮುಚುಮು ಚಳಿಯ ಮಧ್ಯೆ ಎಣ್ಣೆಯನ್ನು ಸಿಪ್ ಬೈ ಸಿಪ್ ಸವಿಯುತ್ತ ಆಚರಿಸಬೇಕೆನ್ನುವ ಮನಸ್ಸು. ಅಂಥವರಿಗೆ ಗೋವಾ ಒಂದು ಉತ್ತಮ ಸ್ಥಳ. ಈ ಮೂರು ಅವತಾರಗಳಲ್ಲೂ ಗೋವಾ ನಿಮಗಾಗಿ ಹೇಳಿ ಮಾಡಿಸಿದಂಥ ತಾಣ.
ಮನರಂಜನೆಯ ನಗರಿ

ಗೋವಾ, ಇದು ಭಾರತ ಅತಿ ಚಿಕ್ಕ ರಾಜ್ಯ. ಇಲ್ಲಿನ ಕಡಲ ಕಿನಾರೆ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತದೆ. ಸಾಕಷ್ಟು ಸಂಖ್ಯೆಯ ದೇಶ-ವಿದೇಶದ ಪ್ರವಾಸಿಗರು ಇಲ್ಲಿ ಮೋಜು ಮಸ್ತಿಗಾಗಿ ಬರುತ್ತಾರೆ.
ಇಲ್ಲಿದೆ ಏಷ್ಯಾದ ಅತಿದೊಡ್ಡ ತೇಲುವ ಕ್ಯಾಸಿನೊ
ಗೋವಾ ಮನರಂಜನೆಯ ನಗರಿಯೆಂದು ಹೆಸರಾಗಿದೆ. ಇಲ್ಲಿ ಏಷ್ಯಾದ ಅತಿ ದೊಡ್ಡ ತೇಲುವ ಕ್ಯಾಸಿನೊ ಇದೆ. ಸಮುದ್ರದ ಮೇಲೆ ಇರುವುದರಿಂದ ಇದಕ್ಕೆ ಕಾನೂನುಗಳೂ ಕೊಂಚ ಸಡಿಲವಾಗಿದ್ದು, ಅಗ್ಗದ ಮದ್ಯ, ಐಷಾರಾಮಿ ಕಲೆಕ್ಷನ್‌ನ ಮದ್ಯ ಮತ್ತು ರೇವ್ ಪಾರ್ಟಿಗಳಿಗೂ ಈ ರಾಜ್ಯ ಜನಪ್ರಿಯವಾಗಿದೆ. ಆದರೆ, ಅಲ್ಲಿಂದ ಮದ್ಯವನ್ನು ಮಾತ್ರ ಗಡಿಯಾಚೆಗೆ ತರಲು ಪ್ರಯತ್ನಿಸಲೇಬೇಡಿ! ಅದು ಕಾನೂನು ಬಾಹೀರ! ಸಾಕಷ್ಟು ಕುಡಿದು, ಕುಣಿದು, ಶಾಂತವಾಗಿ ಒಂದಷ್ಟು ಸಮಯ ಕಳೆದು ಹೊಸವರ್ಷದ ಆರಂಭವನ್ನು ಆಚರಿಸಬಹುದು.
ಮಾಂಡೋವಿ ನದಿಯಲ್ಲಿ ಪಾರ್ಟಿ ಕ್ರೂಸ್‌ಗಳು

ಗದ್ದಲಗಳು ನನಗೆ ಸಲ್ಲದು. ನಾನು ನನ್ನವರು ಮಾತ್ರ ಪಾರ್ಟಿಯಲ್ಲಿರಬೇಕು ಎನ್ನುವವರಿಗೆ ಇದೊಂದು ಉತ್ತಮ ಆಯ್ಕೆ. ಪಾರ್ಟಿ ಕ್ರೂಸ್‌ಗಳು ನದಿಯ ಮೇಲೆಯೇ ಭೋಜನ ಕೂಟ, ಡ್ರಿಂಕ್ಸ್, ಸಂಗೀತ ಮತ್ತು ಪಟಾಕಿ ಸಂಭ್ರಮ ಎಲ್ಲದಕ್ಕೂ ಅವಕಾಶ ಮಾಡಿಕೊಡುತ್ತದೆ. ನದಿಯ ಮೇಲೆ ಜನರ ಸಂದಣಿ ಇಲ್ಲದೆ, ನಿಮ್ಮಿಷ್ಟದಂತೆ ಆಚರಿಸಬಹುದು.
ಇಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳು

ಅಂಜುನಾ ಬೀಚ್, ಕಾಂಡೋಲಿಮ್ ಬೀಚ್, ಕಾಲಂಗೋಟ್ ಬೀಚ್, ಮೋರ್ಜಿಮ್ ಬೀಚ್, ಅರಂಬೋಟ್ ಬೀಚ್ ಇಲ್ಲಿನ ಪ್ರಸಿದ್ಧ ಹಾಗೂ ಸುಂದರ ಸಮುದ್ರ ಕಿನಾರೆಗಳು. ಅರೇಬಿಯನ್ ಸಮುದ್ರದ ಕಿನಾರೆಯಲ್ಲಿನ ಏಷ್ಯಾದಲ್ಲೇ ಅತೀ ಪುರಾತನ ಲೈಟ್‌ಹೌಸ್ ಅಗೋಡಾ ಕೋಟೆ.
ಪ್ರವಾಸದಿಂದಲೇ ಅತಿಹೆಚ್ಚು ತಲಾ ಆದಾಯ
ರಫ್ತು ಆದಾಯದಿಂದ ಮಾತ್ರವಲ್ಲದೆ, ಇಲ್ಲಿನ ಬೀಚ್, ಅರಣ್ಯ, ಪಾರ್ಟಿ, ಬೋಟ್ ರೈಡಿಂಗ್, ರೆಸಾರ್ಟ್ ಉದ್ಯಮ, ವಾಟರ್ ಆಕ್ಟಿವಿಟಿಗಳು ಮೊದಲಾದ ಪ್ರವಾಸಿ ಚಟುವಟಿಕೆಗಳಿಂದ ಅತಿಹೆಚ್ಚು ತಲಾ ಆದಾಯ ಹೊಂದಿದೆ.
ಆಧ್ಯಾತ್ಮದೊಂದಿಗೆ ವರ್ಷಾರಂಭ

ನೀವು ರಾಮನ ಭಕ್ತರಾಗಿದ್ದು, ಹೊಸವರ್ಷಾಚರಣೆ ಶ್ರೀ ರಾಮನ ಸನ್ನಿಧಿಯಲ್ಲೇ ಆಚರಿಸಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಇದಕ್ಕೆ ಗೋವಾ ಅತ್ಯುತ್ತಮ ಸ್ಥಳ. ಹೌದು, ಏಕೆಂದರೆ ಇಲ್ಲೇ ವಿಶ್ವದ ಅತಿ ಎತ್ತರದ(77 ಅಡಿಗಳು) ಶ್ರೀ ರಾಮನ ಕಂಚಿನ ಪ್ರತಿಮೆ ಇದೆ. ಶ್ರೀ ರಾಮನ ವಿರಾಟ ರೂಪವನ್ನು ಕಣ್ತುಂಬಿಕೊಳ್ಳಬಹುದು. ಗೋಕರ್ಣ ಜೀವೋತ್ತಮ ಮಠದ 550ನೇಯ ವರ್ಷದ ಆಚರಣೆಯ ಭಾಗವಾಗಿ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಇದರ ಶಿಲ್ಪಿ ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಏಕತಾ ಪ್ರತಿಮೆಯ ನಿರ್ಮಾತೃ ಶಿಲ್ಪಿ ರಾಮ್ ಸುತಾರ್.
ಗೋವಾದ ಪ್ರಸಿದ್ಧ ಮತ್ತು ಯುನೆಸ್ಕೊ ಸಂರಕ್ಷಿತ ತಾಣ 'ಬಿಸಿಲಿಕಾ ಆಫ್ ಬೋಮ್ ಜೀಸಸ್' ಚರ್ಚ್, ಹತ್ತು ಹಲವು ಸಿನಿಮಾಗಳಲ್ಲಿ ಪರದೆ ಹಂಚಿಕೊಂಡಿರುವ ಇಮಾಕ್ಯುಲೇಟ್ ಕ್ಯಾಥೋಲಿಕ್ ಚರ್ಚ್ ಹೀಗೆ ಹಲವು ಚರ್ಚ್‌ಗಳಿವೆ. ಗೌಡ ಸಾರಸ್ವತ ಜನರ ಕುಲದೇವತೆ ಮತ್ತು 450 ವರ್ಷಗಳಿಗಿಂತಲೂ ಪುರಾತನವಾದ ಮಂಗೇಶ ದೇವಾಲಯ, ಕೊಂಕಣಿ ಭಾಷಿಕರ ಕುಲದೇವರಾದ ಶಾಂತದುರ್ಗಾ ದೇವಾಲಯ, ಮಹಾವಿಷ್ಣುವಿನ ಮೋಹಿನಿ ಅವತಾರದ ಮಹಾಲಸಾ ನಾರಾಯಣೇ ದೇವಾಲಯ ಹೀಗೆ ಹಲವು ಹಿಂದೂ ದೇವಾಲಯಗಳಿವೆ.
ಹೊಸ ವರ್ಷಕ್ಕೆ ಸಾರಿಗೆಯೇ ಸವಾಲು
ಡಿಸೆಂಬರ್ 31ರಿಂದಲೇ ಸಂಚಾರ ನಿರ್ಬಂಧಗಳು, ಪೊಲೀಸ್ ತಪಾಸಣೆಗಳು ಮತ್ತು ರಸ್ತೆ ತಡೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಹಾಗಾಗಿ ಟ್ಯಾಕ್ಸಿಗಳನ್ನು ಮೊದಲೇ ಬುಕ್ ಮಾಡಿ. ಗೋವಾಮೈಲ್ಸ್ ಅಪ್ಲಿಕೇಶನ್ ಬಳಸಿ. ತಲುಪಬೇಕಾದ ಸ್ಥಳ ಹತ್ತಿರದಲ್ಲೇ ಇದ್ದರೆ ಕಾಲಿಗೆ ಕೆಲಸ ಕೊಡಿ. ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ.