ಥೈಲ್ಯಾಂಡ್…ಇಲ್ಲಿ ಮಸಾಜು ಮಾತ್ರವಲ್ಲ ಬದುಕಿಗೊಂದು ಮೆಸೇಜೂ ಸಿಗುತ್ತದೆ!
ಬಹುತೇಕರು ಥೈಲ್ಯಾಂಡ್ ಎಂದರೆ ಓಹ್! ಅದು ಮಸಾಜಿಗಾಗಿಯೇ ಹೋಗುವ ದೇಶವೆಂದು ಭಾವಿಸಿಕೊಂಡಿದ್ದಾರೆ. ಮದುವೆಯಾಗದ ನವ ಯುವಕನೊಬ್ಬ ಥೈಲ್ಯಾಂಡ್ ಗೆ ಹೋಗಿ ಬಂದರಂತೂ ಗೆಳೆಯರ ಗುಂಪಿನಲ್ಲಿ ಗುಸುಗುಸು ಶುರುವಾಗುತ್ತದೆ. ಆಗಬಾರದ್ದು ಆಗಿದೆ ಮತ್ತು ಮಾಡಬಾರದ್ದನ್ನು ಮಾಡಿಕೊಂಡು ಬಂದಿದ್ದಾನೆ ಎಂದು ಗುಲ್ಲೆಬ್ಬಿಸುತ್ತಾರೆ. ಮಸಾಜಿನ ಆಚೆಗೆ ಥೈಲ್ಯಾಂಡ್ ನಿಜಕ್ಕೂ ಅದ್ಭುತವಾದ ದೇಶ.
- ಜಯರಾಮಚಾರಿ
ಹೌದು. ನೀವು ಥೈಲ್ಯಾಂಡ್ ಬರೀ ಮಸಾಜಿನ, ಬೆತ್ತಲೆ ಪೋಲ್ ಡ್ಯಾನ್ಸಿನ, ಹ್ಯಾಪಿ ಎಂಡಿಂಗಿನ ದೇಶವೆಂದುಕೊಂಡರೆ ನಿಮ್ಮ ಅಭಿಪ್ರಾಯ, ಗ್ರಹಿಕೆ ತಪ್ಪು. ನೀವು ಹಾಗೆಂದುಕೊಳ್ಳಲು ಕಾರಣ ಬರೀ ಮಸಾಜಿಗಷ್ಟೇ ಹೋಗಿ ಬಂದವರ 'ಹನಿ' ಕತೆಗಳು ಇರಬಹುದು. ಆದರೆ ನಿಮಗೆ ಗೊತ್ತಿಲ್ಲ, ಅಂಥವರಿಂದಾಗಿಯೇ ಥೈಲ್ಯಾಂಡ್ ನಲ್ಲಿ ಭಾರತೀಯರನ್ನು ಅಷ್ಟಾಗಿ ಗೌರವಿಸುವುದಿಲ್ಲ. ನೀವು ನಿಜ ಪ್ರವಾಸಿಗರಾಗಿದ್ದರೆ ಥೈಲ್ಯಾಂಡ್ ಮಸಾಜಿಗೂ ಮೀರಿ ಬೆಳೆದಿರುವ ಅದ್ಭುತ ರಾಷ್ಟ್ರವೆಂಬುದು ಅಲ್ಲಿ ಒಂದು ರೌಂಡ್ ಹೊಡೆದರೆ ಗೊತ್ತಾಗುತ್ತದೆ. ಹಾಗಾದರೆ ಥೈಲ್ಯಾಂಡ್ ನಲ್ಲಿ ಅಂಥದ್ದೇನಿದೆ ?

ಗಾಳಿಯಲ್ಲೂ ಉಸಿರಾಡುತ್ತಿರುವ ಸಂಸ್ಕೃತಿ
ಥೈಲ್ಯಾಂಡಿನ ಗಾಳಿಯೂ ಕೂಡ ಸಂಸ್ಕೃತಿಯನ್ನೇ ಉಸಿರಾಡುತ್ತಿದೆ. ಇನ್ನೂ ಜೀವಂತವಾಗಿರುವ ಪ್ರಾಚೀನ ನೃತ್ಯ 'ಕೋನ್' ಇರಲಿ, ಕೈ ಮುಗಿದು ಗ್ರೀಟ್ ಮಾಡುವ 'ವಾಯ್' ಇರಲಿ ಇಡೀ ದೇಶ ಶುದ್ಧ ಸಂಸ್ಕೃತಿಯನ್ನು ಉಸಿರಾಡುತ್ತಿದೆ. ಬ್ಯಾಂಕಾಕಿನ ಮನಮೋಹಕ ಅರಮನೆ, ವ್ಯಾಟ್ ಫೋನಾ ಸುವರ್ಣ ಬುದ್ಧ ದೇವಾಲಯ, ನಮ್ಮ ಹಂಪಿಯಂತೆ ಗತ ಕಾಲದ ವೈಭವದ ಕತೆ ಹೇಳುವ ಆಯುತ್ತಾನಾ ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಸಂಸ್ಕೃತಿ ಎನ್ನುವುದು ಥೈಲ್ಯಾಂಡ್ ನಲ್ಲಿ ಐತಿಹಾಸಿಕ ಕುರುಹು ಅಲ್ಲ. ನಿತ್ಯ ಜೀವನದ ನಾಡಿ ಮಿಡಿತ.
ಜಿಹ್ವಾ ಸ್ವರ್ಗ
ಥೈಲ್ಯಾಂಡ್ ನ ಪ್ರೀತಿಯ ಮತ್ತೊಂದು ಭಾಷೆಯೇ ಅಲ್ಲಿನ ಆಹಾರ. ಹಸಿರು ಬಣ್ಣದ ಚಿಯಾಂಗ್ ಮೈನ ಕರ್ರಿ, ಕ್ರಾಬಿಯ ತಾಜಾ ತಾಜಾ ಗ್ರಿಲ್ಡ್ ಸೀ ಫುಡ್, ಕೆನಾಲ್ ಸೈಡಿನ ಬೀದಿ ಬದಿಯಲ್ಲೇ ದೊರಕುವ 'ಬೋಟ್ ನೂಡಲ್ಸಿನ ಬೌಲ್' ಗಳು. ಹುಳಿ, ಸಿಹಿ, ಖಾರ, ಒಗರು, ಸಾಸು, ನೂಡಲ್ಸ್, ರೈಸ್ ಬೌಲ್ ಹೀಗೆ ಎಲ್ಲವನ್ನೂ ಒಳಗೊಂದು ಜಿಹ್ವಾ ಸ್ವರ್ಗವಾಗಿದೆ.

ಅಧ್ಯಾತ್ಮಿಕ ಕೇಂದ್ರ
ದಂಡುಗಟ್ಟಲೆ ಪ್ರವಾಸಿಗರು ಥೈಲ್ಯಾಂಡ್ ಗೆ ಬಂದಿಳಿಯುವುದು ಕೇವಲ 'ಎಂಟರ್ಟೇನ್ಮೆಂಟ್' ಗಾಗಿ ಅಷ್ಟೇ ಅಲ್ಲ 'ಎನ್ ಲೈಟ್ಮೆಂಟ್' ಗಾಗಿ ಕೂಡ. ದಟ್ಟ ಅರಣ್ಯಗಳ ನಡುವೆ ಧ್ಯಾನ ಕೇಂದ್ರಗಳಿಗೆ ಹೋಗಿ ನೀವು ಕಳೆದುಹೋದರೆ ಮೇಲಿನ ಸಾಲು ನಿಮಗೆ ಅರ್ಥವಾಗುತ್ತದೆ. ಬೌದ್ಧ ಧರ್ಮದವರೇ ಹೆಚ್ಚಿನ ಜನವಿದ್ದು, ಬುದ್ಧಿಸಂ ಉಸಿರಾಡುತ್ತಿರುವ ಈ ರಾಷ್ಟ್ರ ಚಿನ್ನದ ಬಣ್ಣದ ದೇವಾಲಯಗಳು, ಕಿತ್ತಳೆ ಬಣ್ಣದ ಸನ್ಯಾಸಿಗಳು, ಉದ್ದದ ಗಂಧದ ಬತ್ತಿಯ ಹಚ್ಚಿ ಮೊಣಕಾಲಿನಲ್ಲಿ ಕುಳಿತು ಬಾಗಿ ಮಾಡುವ ಪ್ರಾರ್ಥನೆಗಳು. ಹೀಗೆ ಪ್ರಪಂಚದ ಹಲವು ಅಧ್ಯಾತ್ಮಿಕ ಕೇಂದ್ರಗಳಲ್ಲಿ ಥೈಲ್ಯಾಂಡ್ ಕೂಡ ಒಂದು. ಲಾಟರಿ ಟಿಕೆಟ್ ಅಲ್ಲಿ ಬ್ಯಾನ್ ಆಗಿಲ್ಲ. ಲಾಟರಿ ಟಿಕೆಟ್ ಸಮೇತ ದೇವಾಲಯಕ್ಕೆ ಹೋಗುತ್ತಾ ಪ್ರಾರ್ಥಿಸುವ ಮುಖಗಳನ್ನು ನೀವು ಮಿಸ್ ಮಾಡದೇ ನೋಡಬೇಕು.
ಬರೀ ಬೀಚ್ ಅಲ್ಲೋ ಅಣ್ಣ
ಈ ಪ್ಯಾಕೇಜ್ ಟ್ರಿಪ್ಪುಗಳು, ಇನ್ ಸ್ಟಾ ರೀಲ್ಸ್ ಗಳು ಥೈಲ್ಯಾಂಡ್ ಅಂದ್ರೆ ಒಂದು ಮಸಾಜು ಇನ್ನೊಂದು ಬೀಚು ಎನ್ನುವಂತೆ ಮಾಡಿಬಿಟ್ಟಿವೆ. ಥೈಲ್ಯಾಂಡ್ ನಲ್ಲಿ ಬೀಚುಗಳು ಇವೆ. ಆದರೆ ಬೀಚುಗಳಿಗಿಂತ ಹಸಿರನ್ನೇ ಹೊದ್ದುಕೊಂಡ 'ಪೈ' ನಂತ ಪರ್ವತಗಳಿವೆ, ಮಂಜು ಮುಸುಕಿಕೊಂಡ 'ಖವೋ ಸೊಕ್' ನಂಥ ರಾಷ್ಟ್ರೀಯ ಉದ್ಯಾನಗಳಿವೆ, ನಕ್ಷತ್ರಗಳ ರಾಶಿ ನೋಡುತ್ತಾ ಫ್ಲೋಟಿಂಗ್ ಬಂಗ್ಲೆಯಲ್ಲಿ ನೀವು ನಿದ್ದೆ ಮಾಡಬಹುದು, ಕಾಡು ಆನೆಗಳು ಸುತ್ತಾಡುವ ಅಭಯಾರಣ್ಯಗಳಿವೆ, ಸುಣ್ಣದ ಗುಹೆಗಳಲ್ಲಿ ಪ್ರಾಚೀನ ಚಿತ್ರಕಲೆಗಳಿವೆ, ಕ್ರಿಸ್ಟಲ್ ಕ್ಲಿಯರ್ ಜಲಪಾತಗಳಿವೆ. ಮೌಂಟ್ ಬೇ ಅಂಥ 'ಬೀಚುಗಳು' ಕೂಡ ಇವೆ.
ಆಧುನಿಕ ಯುವಶಕ್ತಿ
ಸಂಸ್ಕೃತಿಯನ್ನೇ ಉಸಿರಾಡುತ್ತಿದ್ದರೂ ಥೈಲ್ಯಾಂಡ್ ಗತವೈಭವ ಹೇಳಿಕೊಂಡೇ ಕೂತಿಲ್ಲ. ಬ್ಯಾಂಕಾಕಿನ ಆರ್ಟ್ ಗ್ಯಾಲರಿಗಳು, ಅಂಡರ್ ಗ್ರೌಂಡಿನ ಸಂಗೀತ ಕಛೇರಿಗಳು, ಡಿಜಿಟಲ್ ಸ್ಟಾರ್ಟ್ ಅಪ್ ಜಾಗಗಳು ಇವೆಲ್ಲವುಗಳನ್ನು ನೋಡಿದರೆ ಥೈಲ್ಯಾಂಡ್ ಯುವಶಕ್ತಿ ಸಂಪ್ರದಾಯ ಜೊತೆಗೆ ಜಾಗತಿಕವಾಗಿಯೂ ಯೋಚಿಸುತ್ತಿದೆ ಎಂದು ಗೊತ್ತಾಗುತ್ತದೆ. ಎಕೋ ಟೂರಿಸಂ ಇಂದ ಸ್ಟ್ರೀಟ್ ಆರ್ಟ್, ಸಾಹಿತ್ಯ, ಸಿನಿಮಾ, ಉಡುಗೆ ಎಲ್ಲದರಲ್ಲೂ ಸೃಜನಶೀಲತೆ ಮೈದಳೆದಿದೆ.

ದೇಶ ಕಟ್ಟುವ ಜನ - ಕಥೆ ಹೇಳುವ ರಸ್ತೆಗಳು
ಥೈಲ್ಯಾಂಡ್ ಆಗಿರೋದು ಅಲ್ಲಿನ ನಾಗರಿಕರಿಂದಲೇ. ಸದಾ ಮುಖದಲ್ಲೊಂದು ನಗು ಇಟ್ಟುಕೊಂಡಿರುವ, ಅತಿಥಿಗಳನ್ನು ಬಲು ಗೌರವದಿಂದ ಕಾಣುವ, 'ಸುನೂಕ್' (ತಮಾಷೆ) ಯನ್ನು ಬದುಕಿನ ಭಾಗವೇ ಆಗಿಸಿಕೊಂಡಿರುವ ಥೈಲ್ಯಾಂಡ್ ಜನರು ದೇಶವನ್ನು ಕಟ್ಟುವ ಕಾಯಕದಲ್ಲಿ ನಿತ್ಯ ತೊಡಗಿದ್ದಾರೆ. ಬೆಚ್ಚನೆಯ ಆತ್ಮೀಯತೆ, ನಗು, ಮಾತು, ಆತಿಥ್ಯ ಎಲ್ಲದರಲ್ಲೂ ಥಾಯ್ ಟಚ್ಚಿದೆ. ಮಾರ್ಕೆಟ್ ಗಳಲ್ಲಿ ಚೌಕಾಸಿ ಮಾಡುವಾಗ, ಬೈಕು ಟ್ಯಾಕ್ಸಿ ಹಿಂದೆ ಕುಳಿತು ರಸ್ತೆಯಲ್ಲಿರುವಾಗ, ಮಸಾಜ್ ಸ್ಪಾಗಳಲ್ಲೂ ಕೂಡ ನಗುವಿರುತ್ತದೆ, ಕತೆಯಿರುತ್ತದೆ, ಬಂಧವೊಂದು ಬೆಸೆದುಕೊಂಡಿರುತ್ತದೆ.
ಇನ್ನಾದರೂ ಥೈಲ್ಯಾಂಡ್ ಮಸಾಜ್ ದೇಶ ಎನ್ನುವ ನಿಮ್ಮ ಭ್ರಮೆ ಕಳಚಿಕೊಂಡು ಮತ್ತೊಮ್ಮೆ ಆ ದೇಶಕ್ಕೆ ಹೋಗಿ. ಬ್ಯಾಂಕಾಕಿನಿಂದ ಫುಕೆಟ್ ವರೆಗೂ ಕಾರಿನಲ್ಲಿ ಡ್ರೈವ್ ಮಾಡಿ, ಬಂಡೆಗಳ ಮೇಲೆ ಬಿಡಿಸಿರುವ ಬುದ್ದನ ಚಿತ್ರ ನೋಡಿ, ರಂಗನಾಥ ಸ್ವಾಮಿಯಂತೆ ಮಲಗಿರುವ ಬುದ್ಧನ ದೇವಾಲಯಗಳ ನೋಡಿ, ಹಸಿರು ಕಾಡುಗಳಲ್ಲಿ ಉಸಿರಾಡಿ, ಬೀದಿ ಪಕ್ಕದಲ್ಲಿ ಸಿಗುವ ರೈಸ್ ಬೌಲ್ ತಿನ್ನಿ, ಪ್ಲಾಸ್ಟಿಕ್ ಕವರ್ ಗಳಲ್ಲಿ ಕತ್ತರಿಸಿಟ್ಟ ಬಣ್ಣ ಬಣ್ಣದ ಹಣ್ಣುಗಳನ್ನು ತಿನ್ನಿ, ಉದ್ದದ ಅಗರಬತ್ತಿಯ ಹಚ್ಚಿ ಪ್ರಾರ್ಥಿಸಿ. ಬೇರೆಯದೇ ಥೈಲ್ಯಾಂಡ್ ಕಾಣಿಸುತ್ತದೆ.