Monday, August 18, 2025
Monday, August 18, 2025

ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಾ ? ಈ 6 ಸಲಹೆಗಳು ತಪ್ಪದೆ ಪಾಲಿಸಿ

ನೀವು ಮೊದಲ ಬಾರಿಗೆ ವಿಮಾನ ಪ್ರಯಾಣವನ್ನು ಕೈಗೊಳ್ಳುತ್ತಿದ್ದೀರಾ? ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಗೊಂದಲ, ಪ್ರಯಾಣ ಹೇಗಿರುತ್ತೋ ಎಂಬ ಭಯ ನಿಮಗಿದ್ದರೆ, ಈ ಲೇಖನ ನಿಮಗೆ ಸಹಕಾರಿಯಾಗಲಿದೆ.

ಮೊದಲ ಹೆಜ್ಜೆ, ಮೊದಲ ನೋಟ, ಮೊದಲ ಪ್ರೀತಿ, ಮೊದಲ ಪ್ರವಾಸ, ಹೀಗೆ ʻಮೊದಲ ಸಲʼ ಅನ್ನೋದು ಎಂದಿಗೂ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ಬುತ್ತಿಯನ್ನೇ ನೀಡುತ್ತವೆ..ಅದರಲ್ಲೂ ಮೊದಲ ವಿಮಾನ ಪ್ರಯಾಣವೆಂದರಂತೂ ಅದರ ಖುಷಿಯೇ ಬೇರೆ. ಪ್ರಯಾಣದ ಉದ್ದೇಶ ಯಾವುದೇ ಆದರೂ ವಿಮಾನವನ್ನು ಏರಿ ಆಗಸದಲ್ಲಿ ಮೋಡಗಳ ನಡುವೆ ಹಾರುವ ಸಂಭ್ರಮವನ್ನು ಹೇಳಲು ಪದಗಳೇ ಸಾಲದು. ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವುದುರಿಂದ ಪ್ರಾರಂಭವಾಗಿ, ಚೆಕ್‌ ಇನ್‌, ಸೆಕ್ಯುರಿಟಿ ಚೆಕ್‌, ಹೀಗೆ ಎಲ್ಲ ಹಂತಗಳನ್ನು ದಾಟಿ ಅಂತಿಮವಾಗಿ ವಿಮಾನವನ್ನೇರಿ ಪ್ರಯಾಣ ಬೆಳೆಸುವಾಗಲೂ ಯಾವುದೋ ಹೊಸ ಸಾಹಸವನ್ನು ಮಾಡುತ್ತಿರುವೆವೇನೋ ಅನಿಸಿಬಿಡುತ್ತದೆ.

ಮೊದಲ ಬಾರಿಗೆ ವಿಮಾನ ಪ್ರಯಾಣವೆಂದರೆ ಸಾಮಾನ್ಯವಾಗಿ ಉತ್ಸಾಹದ ಜೊತೆಗೆ ಭಯ, ಒತ್ತಡ, ಗೊಂದಲ ಹೀಗೆ ಎಲ್ಲ ಭಾವಗಳೂ ಮಿಶ್ರವಾಗಿರುತ್ತದೆ. ಯಾವ ತಪ್ಪಿನಿಂದ ಏನು ಸಮಸ್ಯೆ ಎದುರಾತು, ಪ್ರಯಾಣ ಅರ್ಧಕ್ಕೆ ನಿಂತುಬಿಟ್ಟೀತು ಹೀಗೆ ಅನೇಕ ಪ್ರಶ್ನೆಗಳು ಕಾಡುವುದಂತೂ ಸರ್ವೇ ಸಾಮಾನ್ಯ. ಆದ್ದರಿಂದ, ನೀವು ನಿಮ್ಮ ಮೊದಲ ವಿಮಾನ ಪ್ರಯಾಣಕ್ಕೆ ಸಿದ್ದರಾಗುತ್ತಿದ್ದರೆ ಅನುಭವಿಗಳಂತೆ, ಸಂಪೂರ್ಣವಾಗಿ ವೃತ್ತಿಪರರಂತೆ ಪ್ರಯಾಣಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

flight travel

ವಿಮಾನ ಪ್ರಯಾಣ ಮಾಡುವ ವೇಳೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ 6 ವಿಷಯಗಳು ಇಲ್ಲಿವೆ:

ಏರ್‌ ಪೋರ್ಟ್‌ ಗೆ ಮುಂಚಿತವಾಗಿ ಬನ್ನಿ

ನೀವು ಮೊದಲ ಬಾರಿಗೆ ವಿಮಾನ ಯಾನ ಕೈಗೊಳ್ಳುವವರಾದರೆ, ನಿಮ್ಮ ಮೆದುಳು ಗಂಟೆಗೆ ನೂರು ಮೈಲಿಗೂ ಹೆಚ್ಚಿನ ವೇಗದಲ್ಲಿ ಓಡುತ್ತಿರುತ್ತದೆ. ಆದರೆ ಗೊಂದಲದಲ್ಲಿ, ಅವಸರದಲ್ಲಿ ಅನಾಹುತಗಳನ್ನು ತಂದುಕೊಳ್ಳುವ ಬದಲು, ಮುಂಚಿತವಾಗಿಯೇ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಿ. ನಿರ್ಗಮನಕ್ಕೆ ಕನಿಷ್ಠ 1-2 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬನ್ನಿ. ಚೆಕ್-ಇನ್‌ನಿಂದ ಹಿಡಿದು ಭದ್ರತೆಯವರೆಗೆ ಎಲ್ಲ ಕೆಲಸಗಳನ್ನೂ ನಿಧಾನವಾಗಿ ಪೂರ್ತಿಗೊಳಿಸಿ. ಇದರಿಂದ ಒತ್ತಡವಿಲ್ಲದ ಪ್ರಯಾಣ ನಿಮ್ಮದಾಗುತ್ತದೆ.

ಆನ್‌ಲೈನ್‌ನಲ್ಲಿ ಚೆಕ್-ಇನ್ ಮಾಡಿ

ಇತ್ತೀಚೆನ ದಿನಗಳಲ್ಲಿ ಎಲ್ಲ ಸೌಲಭ್ಯಗಳನ್ನೂ ಡಿಜಿಟಲೀಕರಣಗೊಳಿಸಿದ್ದು, ಆನ್‌ ಲೈನ್‌ ಮೂಲಕವೇ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ತಿಗೊಳಿಸಹುದು. ಸದ್ಯ ಪ್ರತಿಯೊಂದು ವಿಮಾನಯಾನ ಸಂಸ್ಥೆಯು ಆನ್‌ಲೈನ್ ಚೆಕ್-ಇನ್ ಅವಕಾಶವನ್ನು ನೀಡುತ್ತಿದ್ದು, ಚೆಕ್‌ ಇನ್‌ ಗಾಗಿ ಸರತಿಸಾಲಿನಲ್ಲಿ ನಿಲ್ಲುವ ಸಮಯವನ್ನು ಉಳಿಸಬಹುದು. ಆದ್ದರಿಂದ ಟಿಕೆಟ್ ಬುಕ್ ಮಾಡಿದ ನಂತರ, ಆನ್‌ಲೈನ್‌ನಲ್ಲಿ ಚೆಕ್-ಇನ್ ಮಾಡಲು ಮರೆಯದಿರಿ.

ಅಗತ್ಯ ವಸ್ತುಗಳನ್ನು ಕ್ಯಾರಿ-ಆನ್ ಬ್ಯಾಗ್‌ನಲ್ಲಿರಿಸಿ

ವಿಮಾನ ಪ್ರಯಾಣದ ವೇಳೆ ಅಗತ್ಯ ವಸ್ತುಗಳು ಬೇಕೆಂದಾಗ ನಿಮ್ಮ ಬಳಿ ಸಿಗುವಂತಿದ್ದರೆ ಅರ್ಧಕ್ಕೆ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ಅಗತ್ಯ ವಸ್ತುಗಳೆದರೆ ಮುಖ್ಯವಾಗಿ ನಿಮ್ಮ ಪಾಸ್‌ ಪೋರ್ಟ್‌, ಸಂಬಂಧಿಸಿದ ದಾಖಲೆಗಳು, ಔಷಧಿ, ಮೊಬೈಲ್‌ ಹೀಗೆ ಅವುಗಳಿಲ್ಲದೆ ಪ್ರಯಾಣ ಸಾಧ್ಯವಿಲ್ಲ ಎಂಬಂಥ ವಸ್ತುಗಳನ್ನು ತಪ್ಪದೆ ಪ್ರತ್ಯೇಕವಾಗಿರಿಸಿಕೊಳ್ಳಿ. ಅದು ಉಳಿದ ವಸ್ತುಗಳೊಂದಿಗೆ ಸೇರಿಕೊಳ್ಳದಂತೆ, ಮಿಶ್ರವಾಗದಂತೆ ಇರಿಸಲು ಪ್ರತ್ಯೇಕವಾದ ಕ್ಯಾರಿ-ಇನ್‌ ಬ್ಯಾಗ್‌ ನಲ್ಲಿ ಅವುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಫ್ಲೈಟ್‌ ಎಂಟ್ರಿ ಪಾಯಿಂಟ್‌ ನಿಂದ ದೂರ ಹೋಗದಿರಿ

ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿರುವ ಮಂದಿಗೂ ಸಹ ವಿಮಾನ ನಿಲ್ದಾಣಕ್ಕೆ ಬರುತ್ತಲೇ ಗೊಂದಲವಾಗುವುದು ಸಾಮಾನ್ಯ. ಅಂಥದರಲ್ಲಿ ನೀವು ಮೊದಲ ಬಾರಿಗೆ ಬಂದವರಾಗಿದ್ದರೆ, ಸುತ್ತಲ ಪ್ರಪಂಚದ ಮೋಡಿಗೊಳಗಾಗಿ ಕಳೆದುಹೋಗದಿರಿ. ಶಾಪಿಂಗ್‌ ಮಾಡುತ್ತಾ, ಕೆಫೆಗಳನ್ನು ಹುಡುಕುತ್ತಾ ನಿಮ್ಮ ಫ್ಲೈಟ್‌ ಎಂಟ್ರಿ ಪಾಯಿಂಟ್‌ ನಿಂದ ಸಾಕಷ್ಟು ದೂರ ಹೋದಿರೆಂದರೆ ಮತ್ತೆ ಹುಡುಕಾಡುವುದು ಕಷ್ಟವೆನ್ನಿಸಬಹುದು. ಅಲ್ಲದೆ ಹತ್ತಿರದಲ್ಲೇ ಇದ್ದರೆ ಪ್ರಯಾಣದ ಬಗೆಗಿನ ಅನೌಂನ್ಸ್‌ ಮೆಂಟ್‌ ಗಳನ್ನು ಕೇಳಿ, ಅನುಸರಿಸಬಹುದು.

flight way new

ಆರಾಮದಾಯಕ ಉಡುಗೆಯ ಬಗ್ಗೆ ಗಮನಹರಿಸಿ

ನಮಗೆ ಒಪ್ಪಿಗೆಯಾಗುವಂಥ ಉಡುಗೆ ತೊಟ್ಟುಕೊಳ್ಳುವುದರಿಂದ ನಮ್ಮ ಆತ್ಮಸ್ಥೈರ್ಯ ಇಮ್ಮಡಿಗೊಳ್ಳುತ್ತದೆ. ಆದ್ದರಿಂದ ವಿಮಾನ ಪ್ರಯಾಣ ಮಾಡುತ್ತಿರುವ ತರಾತುರಿಯಲ್ಲಿ ನಿಮಗೆ ಒಪ್ಪದ ಉಡುಗೆ ತೊಟ್ಟು ಕಿರಿಕಿರಿ ಅನುಭವಿಸುವುದಕ್ಕಿಂತ, ಖುಷಿಯಿಂದ ಉಡುಗೆಗಳನ್ನು ಆಯ್ದು ತೊಟ್ಟುಕೊಂಡರೆ ಪ್ರಯಾಣ ಆರಾಮದಾಯಕವೆನಿಸುತ್ತದೆ. ಇನ್ನು ಪ್ರಯಾಣದ ಅಗತ್ಯಗಳಿಗೆ ಅನುಗುಣವಾಗಿ ಜಾಕೆಟ್, ಶಾಲು ಅಥವಾ ಕುತ್ತಿಗೆಯ ದಿಂಬನ್ನು ಇರಿಸಿಕೊಂಡರೆ ಇನ್ನೂ ಒಳ್ಳೆಯದು. ಇಂತಹ ಸಣ್ಣ ವಿಷಯಗಳ ಬಗ್ಗೆ ಗಮನಹರಿಸಿದರೆ ನಿಮ್ಮ ಪ್ರಯಾಣದ ಮೆಮೊರೆಬಲ್‌ ಆಗಲಿದೆ.

ಮನರಂಜನೆಗಾಗಿ ಈ ವಸ್ತುಗಳನ್ನು ಪ್ಯಾಕ್‌ ಮಾಡಿಕೊಳ್ಳಿ

ಅಂತರರಾಷ್ಟ್ರೀಯ ವಿಮಾನಯಾನ ಮಾಡುವವರು ನೀವಾದರೆ ಮನರಂಜನೆಗೆ ಅಲ್ಲಿಯೇ ಅವಕಾಶವಿದೆ. ಆದರೆ ದೇಶೀಯ ವಿಮಾನ ಪ್ರಯಾಣದಲ್ಲಿ ನಿಮಗೆ ಅಂಥ ಅವಕಾಶವಿರುವುದಿಲ್ಲ. ಈ ವೇಳೆ ಸಮಯ ಕಳೆಯಲು ಇಯರ್‌ಫೋನ್‌ಗಳು, ಟ್ಯಾಬ್ಲೆಟ್, ಐ ಪಾಡ್‌ ಗಳನ್ನೂ ಜತೆಗಿರಿಸಿಕೊಂಡರೆ ಬೇಸರಗೊಳ್ಳುವ ಪ್ರಶ್ನೆಯೇ ಬರುವುದಿಲ್ಲ.

ಈ ಸಲಹೆಗಳನ್ನು ನಿಮ್ಮ ಮೊದಲ ವಿಮಾನ ಪ್ರಯಾಣಕ್ಕೆ ಮುಂಚಿತವಾಗಿ ಅನುಸರಿಸಿಕೊಂಡರೆ, ಪ್ರಯಾಣ ಸುಖಕರವಾಗಿ ಹಾಗೂ ಆರಾಮದಾಯಕವಾಗಿಯೂ ಇರುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!