Friday, October 3, 2025
Friday, October 3, 2025

ಪ್ರಪಂಚದಾದ್ಯಂತವಿರುವ ಅದ್ಭುತ ಟ್ಯುಲಿಪ್ ಹೂದೋಟಗಳಿವು..

ಏಪ್ರಿಲ್ ತಿಂಗಳು ಬಂದರೆ ಸಾಕು ಎಲ್ಲೆಡೆ ಟ್ಯುಲಿಪ್ ಹೂವುಗಳು ಅರಳಿ ನಿಲ್ಲುತ್ತವೆ. ವರ್ಣರಂಜಿತ ಟ್ಯುಲಿಪ್ ತೋಟಗಳನ್ನು ನೋಡುವುದೇ ಸಂಭ್ರಮ. ವಸಂತಕಾಲದ ಸಂಕೇತವಾಗಿರುವ ಈ ಹೂವುಗಳು ದೇಶ ವಿದೇಶಗಳಲ್ಲಿ ಎಲ್ಲೆಲ್ಲಿ ಕಾಣಸಿಗುತ್ತವೆ ಗೊತ್ತಾ?

ಟ್ಯುಲಿಪ್‌ ಹೂವುಗಳ ಸೌಂದರ್ಯವನ್ನು ನೀವೆಂದಾದರೂ ಕಣ್ತುಂಬಿಕೊಂಡಿದ್ದೀರಾ..? ಒಂದು ಕಾಲದಲ್ಲಿ ಬಾಲಿವುಡ್‌ ನ ಕ್ಯೂಟ್‌ ಕಪಲ್‌ ಎಂದೇ ಖ್ಯಾತರಾಗಿದ್ದ ಅಮಿತಾಬ್‌ ಬಚ್ಚನ್‌ ಹಾಗೂ ರೇಖಾ ಜೋಡಿಯ ʻಸಿಲ್‌ಸಿಲಾʼ ಸಿನಿಮಾದ "ದೇಖಾ ಏಕ್‌ ಕ್ವಾಬ್‌ ಕೋ ಏ ಸಿಲ್‌ ಸಿಲೇ ಹುಯೇ" ಹಾಡನ್ನು ನೋಡಿದವರಂತೂ ಆ ಟ್ಯುಲಿಪ್‌ ಹೂಗಳನ್ನು, ಹೂದೋಟವನ್ನು ಕಂಡು ಮೈಮರೆತಿರಬಹುದು.. ಟ್ಯುಲಿಪ್‌ ಉದ್ಯಾನಕ್ಕೆ ಎಂದಾದರೊಮ್ಮೆ ಭೇಟಿ ನೀಡಲೇಬೇಕು ಎಂದುಕೊಂಡಿರಬಹುದು. ಆದರೆ ದೇಶ ವಿದೇಶಗಳ ಹೆಸರಾಂತ ಟ್ಯುಲಿಪ್‌ ಉದ್ಯಾನವನಗಳು ಯಾವುವು ನಿಮಗೆ ಗೊತ್ತಾ ? ಇಲ್ಲಿದೆ ಮಾಹಿತಿ.

ಕ್ಯುಕೆನ್‌ಹಾಫ್ ಗಾರ್ಡನ್ಸ್(Keukenhof), ನೆದರ್‌ಲ್ಯಾಂಡ್ಸ್

ನೆದರ್‌ ಲ್ಯಾಂಡ್‌ ನ ಲಿಸ್ಸೆಯಲ್ಲಿರುವ ಕ್ಯುಕೆನ್‌ಹಾಫ್ ಉದ್ಯಾನವನವು 32 ಹೆಕ್ಟೇರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, "ಯುರೋಪಿನ ಉದ್ಯಾನ" ಎಂದೇ ಖ್ಯಾತವಾಗಿದೆ. ಆಮ್ಸ್ಟರ್‌ಡ್ಯಾಮ್‌ನ ಹೊರಭಾಗದಲ್ಲಿರುವ ಈ ಉದ್ಯಾನವು ಏಳು ಮಿಲಿಯನ್‌ಗಿಂತಲೂ ಹೆಚ್ಚು ವರ್ಣರಂಜಿತ ಟ್ಯುಲಿಪ್‌ಗಳನ್ನು ಹೊಂದಿದ್ದು, ಇದರ ಜೊತೆಗೆ ಡ್ಯಾಫೋಡಿಲ್‌ಗಳು, ಕಾರ್ನೇಷನ್ಗಳು, ಲಿಲ್ಲಿ ಮತ್ತು ಹಯಸಿಂತ್‌ಗಳಂತಹ ಇತರ ಹೂವುಗಳ ತಾಣವಾಗಿದೆ. ಮಾರ್ಚ್ ಮಧ್ಯದಿಂದ ಮೇ ತಿಂಗಳ ನಡುವೆ ಕ್ಯುಕೆನ್‌ಹಾಫ್ ಹೂದೋಟಕ್ಕೆ ಭೇಟಿ ಕೊಟ್ಟರೆ ಬಣ್ಣಗಳದ್ದೇ ಹಬ್ಬವಾಗಿರುತ್ತದೆ.

Outside-the-main-entrance-of-Keukenhof-Gardens-Netherlands

ಟ್ಯುಲಿಪ್ ಗಾರ್ಡನ್, ಶ್ರೀನಗರ, ಭಾರತ

ಶ್ರೀನಗರದ ದಾಲ್‌ ಸರೋವರ ಮತ್ತು ಜಬಾರ್‌ ವಾನ್‌ ಬೆಟ್ಟಗಳ ನಡುವೆ ಇರುವ ಇಂದಿರಾಗಾಂಧಿ ಸ್ಮಾರಕ ಟ್ಯುಲಿಪ್‌ ಉದ್ಯಾನವನವು 55 ಎಕರೆ ವಿಸ್ತೀರ್ಣ ಹೊಂದಿದೆ. ಏಷ್ಯಾದ ಈ ಅತಿದೊಡ್ಡ ಟ್ಯುಲಿಪ್‌ ಉದ್ಯಾನವನದಲ್ಲಿ 74 ತಳಿಯ ಟ್ಯುಲಿಪ್‌ಗಳು ಅರಳಿ ನಿಂತಿರುತ್ತವೆ. ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಇಲ್ಲಿ ಟ್ಯುಲಿಪ್ ಹಬ್ಬವನ್ನು ಆಯೋಜಿಸಲಾಗುತ್ತದೆ. ಹಿಮಾಲಯ ಪರ್ವತಗಳ ಪ್ರಶಾಂತ ಹಿನ್ನೆಲೆಯಲ್ಲಿ ಅರಳುವ ಈ ಟ್ಯುಲಿಪ್‌ಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

maxresdefault

ಇಸ್ಪಾರ್ಟಾ(Isparta), ಟರ್ಕಿ

"ಗುಲಾಬಿಗಳ ನಾಡು" ಎಂದು ಕರೆಯಲ್ಪಡುವ ಟರ್ಕಿಯ ಇಸ್ಪಾರ್ಟಾವು ವಸಂತಕಾಲದಲ್ಲಿ ಅದ್ಭುತವಾದ ಟ್ಯುಲಿಪ್ ಹೂಗಳಿಂದ ಕಂಗೊಳಿಸುತ್ತವೆ. ಪ್ರತಿ ವರ್ಷ ಇಸ್ಪಾರ್ಟಾ ಟ್ಯುಲಿಪ್ ಉತ್ಸವವನ್ನು ಆಯೋಜಿಸುತ್ತಿದ್ದು, ದೇಶ ವಿದೇಶಿಗರನ್ನೂ ಆಕರ್ಷಿಸುತ್ತವೆ. ಈ ಉತ್ಸವವು ಹೂವುಗಳನ್ನು ಮಾತ್ರವಲ್ಲದೆ ಟರ್ಕಿಶ್ ಸಂಸ್ಕೃತಿಯ ಪ್ರದರ್ಶನಗಳನ್ನು ಸಹ ಒಳಗೊಂಡಿದೆ.

119855003

ಟ್ಯುಲಿಪ್‌ ತೋಟ, ಕ್ಯಾಲಿಫೋರ್ನಿಯಾ, ಯುಎಸ್‌ಎ

ಕ್ಯಾಲಿಫೋರ್ನಿಯಾದ ಕಾರ್ಲ್ಸ್‌ಬಾದ್ ನಲ್ಲಿರುವ ಟ್ಯುಲಿಪ್‌ ತೋಟವು 50 ಎಕರೆ ಪ್ರದೇಶದಲ್ಲಿ ಹರಡಿ ನಿಂತಿದ್ದು, ವಸಂತ ಕಾಲದಲ್ಲಿ ಬಣ್ಣಗಳ ಪ್ರದರ್ಶನವನ್ನೇ ಪ್ರವಾಸಿಗರಿಗೆ ನೀಡುತ್ತವೆ. ರಣನ್ಕುಲಸ್ ಹೂವುಗಳಿಗೆ ಹೆಸರುವಾಸಿಯಾಗಿದ್ದರೂ, ಟುಲಿಪ್‌ಗಳು ಇಲ್ಲಿ ಪ್ರವಾಸಿಗರಿಗೆ ಅಚ್ಚುಮೆಚ್ಚು. ಮಾರ್ಚ್‌ನಿಂದ ಮೇ ವರೆಗೆ ಇಲ್ಲಿನ ಉದ್ಯಾನವನಗಳು ಪ್ರವಾಸಿಗರಿಗೆ ಮುಕ್ತವಾಗಿರುತ್ತವೆ.

tulips garden

ಸ್ಕಗಿಟ್ ಕಣಿವೆ (Skagit Valley), ವಾಷಿಂಗ್ಟನ್, ಯುಎಸ್‌ಎ

ಪೆಸಿಫಿಕ್ ವಾಯುವ್ಯದಲ್ಲಿರುವ ಸ್ಕಗಿಟ್ ಕಣಿವೆಯು ವಸಂತಕಾಲದ ಆರಂಭದಲ್ಲಿ ಅರಳುವ ಅದ್ಭುತ ಟ್ಯುಲಿಪ್ ಹೊಲಗಳಿಗೆ ಹೆಸರುವಾಸಿಯಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಸ್ಕಗಿಟ್ ಕಣಿವೆಯಲ್ಲಿ ಟ್ಯುಲಿಪ್ ಉತ್ಸವವನ್ನು ಆಯೋಜಿಸುತ್ತಿದ್ದು, ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

istockphoto-1209163401-612x612

ಒಟ್ಟಾವಾ(Ottawa), ಕೆನಡಾ

ಪ್ರತಿ ವರ್ಷ ಮೇ ತಿಂಗಳಲ್ಲಿ ಕೆನಡಾದ ಒಟ್ಟಾವಾ ಪ್ರದೇಶವು ವರ್ಣರಂಜಿತವಾದ ಟ್ಯುಲಿಪ್‌ ಹೂಗಳಿಂದ ಕಾಣಿಸಿಕೊಂಡು ದೇಶ-ವಿದೇಶಿ ಜನರನ್ನು ಆಕರ್ಷಿಸುತ್ತವೆ. ಕೆನಡಿಯನ್ ಟ್ಯುಲಿಪ್ ಉತ್ಸವವು ವಸಂತ ಋತುವಿನಲ್ಲಿ ಆಚರಿಸುತ್ತಿದ್ದು, ನಗರದಾದ್ಯಂತ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಟುಲಿಪ್‌ಗಳು ಅರಳಿ ನಿಂತಿರುತ್ತವೆ. ಸುಂದರವಾದ ರೈಡೋ ಕಾಲುವೆಯ ಉದ್ದಕ್ಕೂ ಮತ್ತು ಪಾರ್ಲಿಮೆಂಟ್ ಹಿಲ್‌ನಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿಯೂ ಸುಂದರವಾದ ಟ್ಯುಲಿಪ್‌ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!