Friday, October 3, 2025
Friday, October 3, 2025

ಬೇಸಿಗೆ ರಜೆಯಲ್ಲಿ ಊಟಿ, ಕೊಡೈಕೆನಾಲ್ ಪ್ರವಾಸದ ಯೋಚನೆಯಲ್ಲಿದ್ದೀರಾ ? ಅದಕ್ಕೂ ಮುನ್ನ ಈ ಸುದ್ದಿ ಓದಿಕೊಳ್ಳಿ..

ಬೇಸಿಗೆ ಕಾಲ ಪ್ರಾರಂಭವಾಗಿದೆ. ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳೋದಕ್ಕೆ ಈ ಬೇಸಿಗೆ ರಜೆಯಲ್ಲಿ ಮಕ್ಕಳ ಜೊತೆಗೆ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣಗಳಾದ ಊಟಿ, ಕೊಡೈಕೆನಾಲ್‌ ಗೆ ಸ್ವಂತ ವಾಹನದಲ್ಲಿ ಹೋಗಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಟ್ರಿಪ್‌ ಪ್ಲಾನ್‌ ಮಾಡುವ ಮುನ್ನ ತಪ್ಪದೇ ಈ ಸುದ್ದಿ ಓದಿಕೊಳ್ಳಿ.

ಊಟಿ, ಕೊಡೈಕೆನಾಲ್‌ ಹೀಗೆ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣಗಳೆಂದರೆ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಸೂಕ್ತವಾದ ಪ್ರವಾಸಿ ಸ್ಥಳ. ಬೇಸಿಗೆ ಕಾಲದಲ್ಲಿ ಹನಿಮೂನ್‌ ಪ್ಲಾನ್‌ ಮಾಡಿಕೊಂಡು ಅಥವಾ ಮಕ್ಕಳ ಜೊತೆ ಆರಾಮವಾಗಿ ಕಾಲ ಕಳೆಯುವುದಕ್ಕೆ ಈ ಸ್ಥಳಗಳಿಗೆ ಭೇಟಿ ನೀಡಬೇಕೆಂದುಕೊಂಡರೆ ಸ್ವಲ್ಪ ಯೋಚಿಸಿ. ಅದರಲ್ಲೂ ಮುಖ್ಯವಾಗಿ ಎಪ್ರಿಲ್‌, ಮೇ, ಜೂನ್‌ ತಿಂಗಳುಗಳಲ್ಲಿ ನಿಮ್ಮ ಸ್ವಂತ ವಾಹನದಲ್ಲಿ ಅಲ್ಲಿಗೆ ತೆರಳಬೇಕೆಂದುಕೊಂಡರೆ ಖಡ್ಡಾಯವಾಗಿ ಇ-ಪಾಸ್‌ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ. ಮದ್ರಾಸ್‌ ಹೈಕೋರ್ಟ್‌ ಕಳೆದ ವರ್ಷದಿಂದಲೇ ಈ ರೂಲ್‌ ಜಾರಿಗೆ ತಂದಿದ್ದು, ಆನ್‌ ಲೈನ್‌ ಮೂಲಕ ಇ-ಪಾಸ್‌ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ. ಇ- ಪಾಸ್‌ ಇಲ್ಲದೇ ಊಟಿ, ಕೊಡೈಕೆನಾಲ್‌ ಗೆ ತೆರಳುವ ಅವಕಾಶವನ್ನು ನಿರಾಕರಿಸಿದೆ.

10216_2_5_2024_16_43_59_3_02_05_2024_KODAI_TRAFFIC_2

ಮದ್ರಾಸ್‌ ಹೈಕೋರ್ಟ್‌ ಮಹತ್ವದ ಸೂಚನೆ:

ಬೇಸಿಗೆ ಕಾಲದಲ್ಲಿ ಪ್ರವಾಸಿಗರ ಮೊದಲ ಆಯ್ಕೆ ಊಟಿ ಹಾಗೂ ಕೊಡೈಕೆನಾಲ್‌ ಆಗಿರುತ್ತದೆ. ಈ ಕಾರಣದಿಂದ ಬೇಸಿಗೆಯಲ್ಲಿ ಈ ಪ್ರವಾಸಿ ತಾಣಗಳಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಇದರಿಂದಾಗಿ ಊಟಿ ಹಾಗೂ ಕೊಡೈಕೆನಾಲ್‌ ಭಾಗದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಬಹುದು.

ಇದರ ಜೊತೆಗೆ ಬೆಟ್ಟದ ಪ್ರದೇಶಗಳಲ್ಲಿ ಅತಿಯಾದ ವಾಹನ ಸಂಚಾರದಿಂದ ಒತ್ತಡ ಹೆಚ್ಚಾದರೆ ಭವಿಷ್ಯದಲ್ಲಿ ಇದು ಮಾರಕ ಪರಿಣಾಮಕ್ಕೆ ಕಾರಣವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಮದ್ರಾಸ್‌ ಹೈಕೋರ್ಟ್‌ ಮಹತ್ವದ ಈ ನಿರ್ಧಾರವನ್ನು ಕಳೆದ ವರ್ಷದಿಂದಲೇ ಕೈಗೊಂಡಿದ್ದು, ಊಟಿಗೆ ವಾರದ ದಿನಗಳಲ್ಲಿ 6000 ಹಾಗೂ ವಾರಾತ್ಯದಲ್ಲಿ 8000 ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಅಲ್ಲದೆ ಕೊಡೈಕೆನಾಲ್‌ ಪ್ರವೇಶಕ್ಕೆ ವಾರದ ದಿನಗಳಲ್ಲಿ 4000, ವಾರಾಂತ್ಯದಲ್ಲಿ 6000 ವಾಹನಗಳನ್ನು ಬಿಡಲಾಗುತ್ತಿದೆ. ಮೊದಲೇ ನಿಗದಿತ ದಿನಗಳಿಗೆ ಇ-ಪಾಸ್‌ ಪಡೆದುಕೊಂಡವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, ಬೇಸಿಗೆ ಮುಗಿಯುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ.

320-160-23895786-thumbnail-16x9-epass-aspera

ಇ-ಪಾಸ್‌ ಪಡೆದುಕೊಳ್ಳಬೇಕಾ ?

ಸರ್ಕಾರದ ಅಧಿಕೃತ ವೆಬ್‌ ಸೈಟ್‌ epass.tnega.org ಮೂಲಕ ಸುಲಭವಾಗಿ ಇ-ಪಾಸ್‌ ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್‌ನಲ್ಲಿ ವಾಹನ ಸಂಖ್ಯೆ, ಇಂಧನ ಪ್ರಕಾರ, ಪ್ರಯಾಣಿಕರ ಸಂಖ್ಯೆ, ಪ್ರವೇಶ ಹಾಗೂ ನಿರ್ಗಮನದ ದಿನಾಂಕಗಳು ಜೊತೆಗೆ ನಿಮ್ಮ ಸಂಪರ್ಕ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ. ನಂತರ QR ಕೋಡ್‌ ನೊಂದಿಗೆ ಇ-ಪಾಸ್‌ ಲಭ್ಯವಾಗಲಿದೆ. ಊಟಿ ಹಾಗೂ ಕೊಡೈಕೆನಾಲ್‌ ಪ್ರವಾಸಿ ತಾಣಗಳಿಗೆ ಭೇಟಿ ಮಾಡುವ ನಡುವೆ ಇಲ್ಲಿನ ನಿಗದಿತ ಸ್ಥಳಗಳಲ್ಲಿ ನಿಮ್ಮ ಬಳಿಯಿರುವ ಇ-ಪಾಸ್‌ಗಳನ್ನು ಪರಿಶೀಲಿಸಿ, ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಇ-ಪಾಸ್‌ ಪಡೆದುಕೊಳ್ಳಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಲ್ಲ. ಆದರೆ ನೀಲಗಿರಿ ಜಿಲ್ಲೆಯ ಪ್ರವೇಶಕ್ಕೆ ಈಗಾಗಲೇ ಚಾಲ್ತಿಯಲ್ಲಿರುವ ಪ್ರವೇಶ ಶುಲ್ಕವನ್ನು ಪ್ರವಾಸಿಗರು ಪಾವತಿಸಬೇಕಾಗುತ್ತದೆ.

ಒಟ್ಟಿನಲ್ಲಿ ತಮಿಳುನಾಡಿನ ಈ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕೆಂದುಕೊಂಡಿದ್ದರೆ ತಪ್ಪದೇ ಇ-ಪಾಸ್‌ ಮಾಡಿಸಿಕೊಂಡು ಪ್ರವಾಸವನ್ನು ಆನಂದಿಸಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!