Friday, October 3, 2025
Friday, October 3, 2025

ಸುಂದರ ತಾಣಕ್ಕಿಲ್ಲ ಸುಸಜ್ಜಿತ ಬಸ್‌ ನಿಲ್ದಾಣ: ಭಕ್ತರ ವಾಸ್ತವ್ಯಕ್ಕಿಲ್ಲ ಯಾತ್ರಿನಿವಾಸ್‌ !

ಬಿಳಿಗಿರಿ ರಂಗನ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯ ಧಾರ್ಮಿಕ ಪ್ರವಾಸಿಗರ ನೆಚ್ಚಿರ ತಾಣ. ಆದರೆ ಈ ಸುಂದರವಾದ ಪ್ರವಾಸಿ ತಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

ರಾಜ್ಯದ ಗಡಿ ಜಿಲ್ಲೆಯ ಪುರಾಣ ಪ್ರಸಿದ್ದ ಸೋಲಿಗರ ಆರಾಧ್ಯ ದೈವ ಎಂದೇ ಪ್ರಖ್ಯಾತಿ ಪಡೆದಿರುವ ಬಿಳಿಗಿರಿ ರಂಗನ ಬೆಟ್ಟಕ್ಕೆ ವಿವಿಧ ಭಾಗದ ಕಡೆ ಯಿಂದ ಆಗಮಿಸುವ ಸಾವಿರಾರು ಭಕ್ತರಿಗೆ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ..! ಹೌದು. ಬಿಳಿಗಿರಿ ರಂಗನ ಬೆಟ್ಟದ ಶ್ರೀ ರಂಗನಾಥಸ್ವಾಮಿ ನಾಡಿನಾದ್ಯಂತ ಸಾಕಷ್ಟು ಭಕ್ತ ಸಮೂಹ ಹೊಂದಿದೆ. ಆದರೆ ಇಲ್ಲಿ ಮೂಲ ಸೌಕರ್ಯವೂ ಇಲ್ಲದೇ ಭಕ್ತರು ಪರದಾಡುವ ಸ್ಥಿತಿಗಳಿವೆ.

ಐತಿಹಾಸಿಕ ಸುಕ್ಷೇತ್ರ

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸುಮಾರು 5 ಸಾವಿರ ವರ್ಷಗಳ ಹಿಂದೆ ವಸಿಷ್ಠ ಮುನಿಗಳು ಇಲ್ಲಿ ತಪಸ್ಸು ಮಾಡಿರುವ ಇತಿಹಾಸವಿದೆ. ದೇವಾಲಯದ ಕಟ್ಟಡ ಪಾಳೆಗಾರರು ಸಾವಿರ ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಶ್ರೀರಾಮನೇ ವನವಾಸದ ವೇಳೆ ಈ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ಇತಿಹಾಸ ಹೇಳುತ್ತಿದೆ.

IMG_20190915_163515

ಗಿರಿಜನರ ಆರಾಧ್ಯ ದೈವ

ಇನ್ನು ದಟ್ಟ ಕಾಡಿನ ಮಧ್ಯೆ ವಾಸವಾಗಿರುವ ಗಿರಿಜನರು ಹಾಗೂ ನಾಯಕ ಸಮುದಾಯದವರಿಗೆ ಆರಾಧ್ಯ ದೈವನಾಗಿ ನೆಲೆಸಿರುವ ಬಿಳಿಗಿರಿ ರಂಗ ನಾಥಸ್ವಾಮಿ, ಎಲ್ಲರ ಅಪಾರ ನಂಬಿಕೆಯ ದೇವರಾಗಿದ್ದಾನೆ. ಬೆಟ್ಟದ ಮೇಲೆ ನೆಲೆಸಿರುವ ರಂಗನಾಥ ಸ್ವಾಮಿಗೆ ವರ್ಷಕ್ಕೆ 2 ಬಾರಿ ಜಾತ್ರೆ ನಡೆಯುತ್ತವೆ. ಚಿಕ್ಕ ಜಾತ್ರೆ ಜನವರಿ ಸಂಕ್ರಾಂತಿಯಲ್ಲಿ ರಥೋತ್ಸವ ನಡೆದರೆ, ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ಹಾಗೂ ಬ್ರಹ್ಮರಥೋತ್ಸವ. ಎರಡು ಜಾತ್ರೆ ರಥೋತ್ಸವಕ್ಕೂ ಮುನ್ನ ಗರುಡ ದರ್ಶನ ಹಾಗೂ ರಥದ ಸುತ್ತ ಪ್ರರ್ದಶನ ಆಗಲೇಬೇಕು. ಆಗಲೇ ರಥಕ್ಕೆ ಚಾಲನೆ. ಅಂದಿನಿಂದ ಇಂದಿನವರೆಗೂ ಗರುಡ ದರ್ಶನದ ಬಳಿಕವೇ ರಥೋತ್ಸವ ನಡೆಯುತ್ತ ಬಂದಿದೆ. ಒಂದು ಬಾರಿಯೂ ತಪ್ಪಿಲ್ಲ, ಇದು ಇಲ್ಲಿನ ಸಂಪ್ರದಾಯ ಹಾಗೂ ಅಪಾರ ನಂಬಿಕೆ ಕೂಡ.

ತಿರುಪತಿ ಮೂರ್ತಿ ರೂಪ

ಇನ್ನು ತಿರುಪತಿಯ ದೇವರ ಆಕಾರವನ್ನೇ ಹೊಂದಿರುವ ಅಲುಮೇಲಮ್ಮ ಸಮೇತ ಬಿಳಿಗಿರಿರಂಗನಾಥ ಸ್ವಾಮಿ, ಸುಮಾರು 30 ಕಿಲೋ ದೂರದ ಬೆಟ್ಟದ ಕೆಳಗೆ ಯಳಂದೂರಿನಲ್ಲಿ ಲಕ್ಷ್ಮಿ ವರಹಾಸ್ವಾಮಿ ದೇವಸ್ಥಾನ ಸಹ ಇದೆ. ಅದೇ ರೀತಿ ಬೆಟ್ಟ ತಪ್ಪಲಿನಿಂದ ನೋಡಿದರೆ ಸ್ವಾಮಿ ಮಲಗಿರುವ ಆಕಾರ ಸಹ ಕಾಣುವ ಮೂಲಕ ಚಿಕ್ಕ ತಿರುಪತಿ ಎಂದೇ ಕರೆಸಿಕೊಳ್ಳುತ್ತಿದ್ದಾನೆ ಈ ಬಿಳಿಗಿರಿರಂಗನಾಥ ಸ್ವಾಮಿ. ಇನ್ನು ತಿರುಪತಿ, ಬಿಳಿಗಿರಿರಂಗನ ಬೆಟ್ಟ ಹಾಗೂ ಕರಿಘಟ್ಟದಲ್ಲಿ ಮಾತ್ರ ಸಾಲಿಗ್ರಾಮದ ಜೊತೆ ವೆಂಕಟೇಶ್ವರಸ್ವಾಮಿ ನೆಲೆಸಿದ್ದಾನೆ ಎನ್ನಲಾ ಗಿದೆ. ರಾಜ್ಯವಷ್ಟೇ ಅಲ್ಲದೇ ದೇಶ ಹಾಗೂ ಹೊರ ದೇಶದ ಪ್ರವಾಸಿಗರು ಸಹ ಈ ಪ್ರಕೃತಿ ತಾಣದ ನಡುವಿನ ಯಾತ್ರಾ ಸ್ಥಳಕ್ಕೆ ಬರುತ್ತಾರೆ.

ಪ್ರಕೃತಿ ಸೌಂದರ್ಯ ಸಿರಿ

ಈ ಬೆಟ್ಟ ಇತ್ತೀಚಿಗೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಇಲಾಖೆ ಸಾಕಷ್ಟು ನಿರ್ಬಂಧಗಳನ್ನು ಹಾಕಿದೆ. ಬೆಟ್ಟಕ್ಕೆ 2 ಕಡೆ ರಸ್ತೆ ವ್ಯವಸ್ಥೆ ಇದೆ. ಒಂದು ಚಾಮರಾಜನಗರದಿಂದ ಕೆ.ಗುಡಿ ಮಾರ್ಗ, ಇನ್ನೊಂದು ಯಳಂದೂರು ಮೂಲಕ. ಆದರೆ ಎರಡು ಕಡೆಯಿಂದ ಸುಮಾರು 30 ಕಿ.ಮೀ. ಕಾಡಿನ ರಸ್ತೆ. ಸಂಜೆ 6 ಗಂಟೆ ಮೇಲೆ ಯಾರೂ ಸಂಚರಿಸುವಂತಿಲ್ಲ. ಕೆ.ಗುಡಿಯಲ್ಲಿ ವನ್ಯಜೀವಿ ದರ್ಶನಕ್ಕಾಗಿ ಸಫಾರಿ ಕೇಂದ್ರವಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯಲ್ಲೇ ವನ್ಯಪ್ರಾಣಿಗಳು ಸಿಗುತ್ತವೆ. ಜೊತೆಗೆ ಪ್ರಕೃತಿಯ ಅದ್ಭುತ ಸೌಂದರ್ಯವೂ ಕಣ್ಣುತುಂಬಿಸಿಕೊಳ್ಳಬಹುದು.

IMG_1690377516_20378

ಗಿರಿಗೆ ಸೌಕರ್ಯದ ಬರ

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದರೂ ಮುಜರಾಯಿ ಹಾಗೂ ಕಂದಾಯ ಭೂಮಿ ಸುಮಾರು 400 ಎಕರೆಗೂ ಹೆಚ್ಚು ಪ್ರದೇಶವಿದೆ. ಇದರಲ್ಲಿ 135 ಎಕರೆ ಭೂಮಿ ದೇವಸ್ಥಾನಕ್ಕೆ ಮೀಸಲಾಗಿದೆ. ಆದರೆ ಇಲ್ಲಿ ಕನಿಷ್ಠ ಮೂಲ ಸೌಲಭ್ಯ ಇಲ್ಲದೇ ಜನರು ಪರದಾಡುವ ಸ್ಥಿತಿಯಿದೆ. ಇಂತಹ ಐತಿಹಾಸಿಕ ದೇವಸ್ಥಾನದ ಸನ್ನಿಧಿಯಲ್ಲಿ ನೆಟ್ಟಗೊಂದು ಸುಸಜ್ಜಿತ ಬಸ್ ನಿಲ್ದಾಣವೇ ಇಲ್ಲ, ಭಕ್ತರು ಬಸ್ ಬರುವವರೆಗೂ ಬಿಸಿಲೂ ಮಳೆಯೂ ನೆರಳು ಇರುವ ಕಡೆ ಹೋಗಿ ನಿಲ್ಲಬೇಕು. ಇನ್ನು ಶೌಚಾಲಯಗಳಂತೂ ಕೇಳುವಂತೆ ಇಲ್ಲ. ಬಂದವರಿಗೆ ಬಿಳಿಗಿರಿ ರಂಗಪ್ಪನ ಪಾದವೇ ಗತಿ ಎನ್ನುವ ಸ್ಥಿತಿ. ಇಷ್ಟು ದೊಡ್ಡ ದೇವಾಲಯಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಪೈಪ್ ಲೈನ್ ಸಹ ಇಲ್ಲ. ಇನ್ನು ಭಕ್ತರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ.

ವಸತಿ ವ್ಯವಸ್ಥೆ ದುಬಾರಿ

ಇನ್ನು ಭಕ್ತರು ದೇವರ ದರ್ಶನ ಮಾಡಿಕೊಂಡು ನಂತರ ಪ್ರಕೃತಿಯ ಮಡಿಲಲ್ಲಿ ಒಂದು ದಿನ ತಂಗಬೇಕೆಂದರೆ ಅದು ಬಡ ಭಕ್ತರಿಗೆ ವಸತಿ ವ್ಯವಸ್ಥೆ ಇಲ್ಲ. ಏಕೆಂದರೆ ಇಲ್ಲಿ ಇರುವ ರೂಂಗಳು ಫಾರೆಸ್ಟ್ ಗೆಸ್ಟ್ ಹೌಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಕಟ್ಟಡದ ರೂಂಗಳು. ಇಲ್ಲಿ ಉಳಿದುಕೊಳ್ಳ ಬೇಕೆಂದರೆ ಕನಿಷ್ಟ ಒಂದು ಸಾವಿರ ರು. ದುಬಾರಿ ಶುಲ್ಕ ತೆರಬೇಕು. ಎರಡು ಸಾವಿರದಿಂದ ಹತ್ತು ಸಾವಿರ ರು.ವರೆಗೆ ಲಕ್ಷರಿ ಕೊಠಡಿಗಳಿವೆ. ಇನ್ನು ಊಟಕ್ಕೂ ಅಷ್ಟೇ ಅಲ್ಲಿ ಇರುವ ಒಂದು ಎರಡು ಹೋಟೆಲ್ ಗಳಲ್ಲಿ ಮೊದಲೇ ಹೇಳಿ ಅವರು ನಿಗದಿ ಮಾಡಿದ ದರ ಕೊಟ್ಟು ತಿನ್ನಬೇಕು.

cottages

ದಾಸೋಹ ಕಟ್ಟಡವೇ ಇಲ್ಲ

ದಿನನಿತ್ಯ ಬರುವ ಸಾವಿರಾರು ಭಕ್ತರಿಗೆ ಒಂದು ದಾಸೋಹ ಕಟ್ಟಡವಿಲ್ಲ, ಅಲ್ಲೇ ಒಂದು ಟೆಂಟ್ ಎನ್ನುವ ರೀತಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಸೆಡ್ಜ್ ನಲ್ಲೆ ನಡೆಯುತ್ತಿದೆ ದಾಸೋಹ. ಈವರೆವಿಗೂ ದಾಸೋಹ ಕಟ್ಟಡ ನಿರ್ಮಿಸಿ ಭಕ್ತರಿಗೆ ಒಳ್ಳೆಯ ದಾಸೋಹ ಮಾಡೋಣ ಎನ್ನುವ ಕನಿಷ್ಠ ಕಾಳಜಿ ಜನಪ್ರತಿನಿಧಿಗಾಗಲೀ, ಅಧಿಕಾರಿಗಳಿಗಾಗಲೀ ಬಾರದಿರುವುದು ದುರಂತ..!

ಭಕ್ತರ ಸಂಖ್ಯೆ ಇಳಿಮುಖ

ಹಿಂದೆ ವರ್ಷಕ್ಕೊಂದು ಬಾರಿಯಾದರೂ ಮನೆಯವರೆಲ್ಲ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದವರು ಇದೀಗ ಮನೆಗೊಬ್ಬರಂತೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಬಂದವರಿಗೆ ಮೂಲ ಸೌಕರ್ಯವೂ ಇಲ್ಲದೇ ದೇವರ ದರ್ಶನಕ್ಕೂ ಪರಿತಪಿಸುವಂತಾಗಿದೆ.

ರಸ್ತೆಯಲ್ಲೇ ಪ್ರವಾಸಿಗರ ಕಚ್ಚಾಟ

ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಸರಿನಲ್ಲಿ ರಸ್ತೆ ಆಗಲೀಕರಣವೂ ಆಗುತ್ತಿಲ್ಲ. ಮಳೆ ಬಂದು ರಸ್ತೆ ಪಕ್ಕ ಕೊರೆದ ಜಾಗಕ್ಕೆ ಕನಿಷ್ಠ ಮಣ್ಣು ಸಹ ಹಾಕದೇ ಏಕಕಾಲದಲ್ಲಿ ಎರಡು ವಾಹನ ಬಂದರೆ ರಸ್ತೆ ಬಿಟ್ಟು ಕೆಳಗೆ ಇಳಿಸಲಾಗದೇ ಗಲಾಟೆಗೆ ಇಳಿಯುತ್ತಾರೆ. ಪೋಸ್ಟ್ ನಲ್ಲಿ ಅರಣ್ಯಾಧಿಕಾರಿಗಳ ದರ, ಮೇಲೆ ಪಾರ್ಕಿಂಗ್ ಶುಲ್ಕ ಭಕ್ತರು ಹಾಗೂ ಪ್ರವಾಸಿಗರು ಮರು ಮಾತಿಲ್ಲದೇ ಪಾವತಿಸಿದರೂ ಇಲ್ಲಿ ಮೂಲ ಸೌಲಭ್ಯಗಳು ಮಾತ್ರ ಏಕಿಲ್ಲ ಎಂಬುದು ಪ್ರವಾಸಿಗರ ಮತ್ತು ಭಕ್ತರ ಪ್ರಶ್ನೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!