Saturday, January 17, 2026
Saturday, January 17, 2026

ಕ್ಯಾ… ಕ್ಯಾಮೆರಾ, ಕೂಲ್‌, ಆಕ್ಷನ್!

ಫೊಟೋಗ್ರಫಿ ಒಂದು ಕಲೆ. ‘A picture is worth a thousand words’ ಎಂಬ ಮಾತಿದೆ. ಅದು ಫೊಟೋಗ್ರಫಿಗಿರುವ ಸಾಮರ್ಥ್ಯ. ಫೊಟೋಗ್ರಾಫರ್‌ ಕಸುಬುದಾರನಾಗಿದ್ದರೆ ಫೊಟೋ ಮೂಲಕವೇ ಕಥೆ ಹೇಳುತ್ತಾನೆ. ಫೊಟೋಗ್ರಫಿ ಎಂಬುದು ಸುಮ್ಮನೆ ಒಲಿಯುವುದಿಲ್ಲ. ಶ್ರದ್ಧೆ ಬೇಕು. ನಿರಂತರವಾಗಿ ಕಲಿಯಬೇಕು. ಫೊಟೋಗ್ರಫಿಯ ಕೆಲವು ಟೆಕ್ನಿಕ್ ಮತ್ತು ಬೇಸಿಕ್‌ ಪಾಠಗಳನ್ನು ಹವ್ಯಾಸಿ ಫೊಟೋಗ್ರಾಫರ್‌ ಅನಂತ್‌ ಹರಿತ್ಸ ಇಲ್ಲಿ ಹೇಳಿದ್ದಾರೆ.

- ಅನಂತ್‌ ಹರಿತ್ಸ

ಇತ್ತೀಚಿನ ದಿನಗಳಲ್ಲಿ ಫೊಟೋಗ್ರಫಿಯ ಹವ್ಯಾಸ ವ್ಯಾಪಕವಾಗಿದೆ. ಪ್ರವಾಸ ಹೋದಾಗಲಂತೂ ಕ್ಯಾಮೆರಾ ಬೇಕೇಬೇಕು. ಕೆಲವು ಸಾವಿರ ರೂಗಳಿಗೆ ಸಿಗುವ ಕ್ಯಾಮೆರಾ ಇರುವ ಮೊಬೈಲ್ ಗಳಲ್ಲಿ ಅತ್ಯುತ್ತಮವಾಗಿ ಫೊಟೋ, ವಿಡಿಯೋ ತೆಗೆಯುವ ಜನರು ಬಹಳಷ್ಟಿದ್ದಾರೆ. ಆಸಕ್ತಿ ಇದ್ದು ಹಣ ಖರ್ಚು ಮಾಡುವುದಾದರೆ ದುಬಾರಿ ಕ್ಯಾಮೆರಾಗಳೂ ಇವೆ. ಕ್ಯಾಮೆರಾ ತೆಗೆದುಕೊಳ್ಳುವ ಮೊದಲು, ಕ್ಯಾಮೆರಾ, ಅದರ ಸಲಕರಣೆಗಳು ಹಾಗೂ ಅವುಗಳನ್ನು ಉಪಯೋಗಿಸುವ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ಲೆನ್ಸ್‌ ಬೇಕು ಗುರು

18

ನೀವು 18 - 50 mm ಲೆನ್ಸ್ ತೆಗೆದುಕೊಂಡರೆ ಹತ್ತಿರದಿಂದ ಗ್ರೂಪ್ ಫೊಟೋಗಳನ್ನು ತೆಗೆಯಲು ಅನುಕೂಲ. ಉದಾಹರಣೆಗೆ ಎಂಟು ಜನ ಅಕ್ಕಪಕ್ಕ ನಿಂತಿದ್ದಾರೆ ಎಂದುಕೊಳ್ಳಿ. ಹತ್ತು ಅಡಿಗಳಷ್ಟು ದೂರದಲ್ಲಿ ನಿಂತು 18 mm ನಲ್ಲಿ ನೋಡಿದರೆ ಎಲ್ಲರೂ ಫ್ರೇಮಿನಲ್ಲಿ ಬರುತ್ತಾರೆ. ಆದರೆ ಅಲ್ಲೇ, ನಿಂತಲ್ಲಿಂದಲೇ 50 mm ಜೂಮ್ ಮಾಡಿದರೆ ಇಬ್ಬರು ವ್ಯಕ್ತಿಗಳು ಅದೂ ಅರ್ಧ ಭಾಗವಷ್ಟೇ ಫ್ರೇಮಿನಲ್ಲಿ ಕಾಣುತ್ತಾರೆ. ಅಷ್ಟು ಜನರ ಚಿತ್ರವನ್ನು 70 - 210 mm ಲೆನ್ಸ್ ನಲ್ಲಿ ತೆಗೆಯುವುದಾದರೆ ಐವತ್ತು ಅರವತ್ತು ಅಡಿ ಹಿಂದೆ ಹೋಗಬೇಕು. 18 mm, ಲೆನ್ಸ್‌ , ಹತ್ತಿರದಿಂದ ಜಾಸ್ತಿ ಅಗಲವಾದ (ವೈಡ್‌ ಆಂಗಲ್‌) ಚಿತ್ರ ತೆಗೆಯಲು ಸಾಧ್ಯವಾದರೆ 50 mm ಅದರ ಅರ್ಧಕ್ಕಿಂತ ಕಡಿಮೆ ಪ್ರದೇಶದ ಫೊಟೋವನ್ನಷ್ಟೇ ತೆಗೆಯಲು ಆಗುವುದು. ಫೋಕಲ್‌ ಲೆನ್ತ್‌ ಜಾಸ್ತಿಯಾದಷ್ಟೂ (ಕ್ಯಾಮೆರಾದೊಳಗಿನ ಸೆನ್ಸಾರ್‌ ಹಾಗೂ ಲೆನ್ಸಿನ ದೂರ mm ನಲ್ಲಿ) ಫ್ರೇಮ್‌ ಸಣ್ಣದಾಗುತ್ತದೆ. ತೆಗೆಯುವ ವಸ್ತು ಹತ್ತಿರಕ್ಕೆ ಕಾಣುತ್ತದೆ. ಅಷ್ಟೂ ಜನರ ಫೊಟೋ ತೆಗೆಯಲು ನೀವು ಹಿಂದಕ್ಕೆ ಹೋಗಬೇಕು ಅಥವಾ ಜೂಮ್‌ ಕಡಿಮೆ ಮಾಡಬೇಕು. ಸ್ಟೇಜ್‌ ಮೇಲಿನ ಎಲ್ಲ ಜನರೂ ಫೊಟೋದಲ್ಲಿ ಕಾಣಿಸಲು 18 mm ಲೆನ್ಸ್ ಉಪಯೋಗಿಸಿ ಬೇಕಾದ ಫ್ರೇಮಿಗೆ 18 mm ವರೆಗೆ ಜೂಮ್‌ ಮಾಡಿಕೊಳ್ಳಬಹುದು. ದೂರದಲ್ಲಿ ಕುಳಿತಿರುವ ಹಕ್ಕಿಯನ್ನು ಸೆರೆ ಹಿಡಿಯಬೇಕಾದರೆ 210 mm ಅಥವಾ 400 / 600 mm ನ ಲೆನ್ಸ್ ಉಪಯೋಗಿಸಬೇಕಾಗುತ್ತದೆ.

CAMERA

ಲೆನ್ಸ್ ನಲ್ಲಿ ಮುಖ್ಯವಾಗಿ ಕಿಟ್ ಲೆನ್ಸ್ / ಜೂ಼ಮ್ ಲೆನ್ಸ್ , ಪ್ರೈಮ್ ಲೆನ್ಸ್ (ವೈಡ್‌ ಆಂಗಲ್‌, ಟೆಲಿ ಫೊಟೋ, ಫಿಶ್‌ ಐ / ಮ್ಯಾಕ್ರೋ ಲೆನ್ಸ್)‌ ಎಂದಿರುತ್ತದೆ. ಅತಿ ಚಿಕ್ಕ ವಸ್ತುವನ್ನು (ಉದಾಹರಣೆ – ಸಣ್ಣ ಕೀಟಗಳು) ದೊಡ್ಡದಾಗಿ, ವಿವರವಾಗಿ ಸೆರೆಹಿಡಿಯಲು ಮ್ಯಾಕ್ರೋ ಲೆನ್ಸ್‌ ಉಪಯೋಗಿಸಬಹುದು. ಪ್ರೈಮ್ ಲೆನ್ಸ್ ನಲ್ಲಿ ಪಟ ತೆಗೆಯುವಾಗ ಅದರ ಪ್ರೇಮ್ ನಲ್ಲಿ ಕಾಣುವಷ್ಟು ಮಾತ್ರ ಸೆರೆಹಿಡಿಯಬಹುದು. ಅಂದರೆ ಜೂ಼ಮ್ ಮಾಡಲು ಆಗುವುದಿಲ್ಲ. ಫೋಕಲ್ ಲೆನ್ತ್ ಫಿಕ್ಸಾಗಿರುತ್ತದೆ. ಒಂದು ವಸ್ತುವನ್ನು ಸೆರೆ ಹಿಡಿಯಲು ನಾವೇ ನಮಗೆ ಬೇಕಾದ ಫ್ರೇಮ್ ಆಯ್ದುಕೊಳ್ಳಲು ಹಿಂದೆ ಮುಂದೆ ಹೋಗಬೇಕಾಗುತ್ತದೆ. ಜೂ಼ಮ್ ಲೆನ್ಸ್ ನಲ್ಲಾದರೆ ನಾವು ನಿಂತ ಜಾಗದಿಂದಲೇ ವ್ಯಕ್ತಿಯನ್ನು ಬೇಕಾದ ಫ್ರೇಮಿನಲ್ಲಿ ಸೆರೆಹಿಡಿಯಬಹುದು.

ಮೂಡ್‌ ಅಲ್ಲ ಮೋಡ್‌ ಮುಖ್ಯ

ಕ್ಯಾಮೆರಾದಲ್ಲಿ ಮುಖ್ಯವಾಗಿ ಆಟೋ ಮೋಡ್, ಅಪಾರ್ಚರ್ ಮೋಡ್, ಶಟರ್ ಸ್ಪೀಡ್ ಮೋಡ್, ಮ್ಯಾನ್ಯುಯಲ್ ಮೋಡ್ ಗಳಿವೆ.

ಆಟೋ ಮೋಡ್‌ : ಆಟೋ ಮೋಡಿನಲ್ಲಿ ತೆಗೆಯುವವರು ಕ್ಯಾಮೆರಾದ ಬಗ್ಗೆ ಅನುಭವವಿರದವರು. ಕ್ಯಾಮೆರಾ ತನಗೆ ಬೇಕಾದ ಬೆಳಕು ಇತ್ಯಾದಿಗಳನ್ನು ತನ್ನಷ್ಟಕ್ಕೆ ತಾನೇ ಸರಿಹೊಂದಿಸಿ ಫೊಟೋಗಳನ್ನು ತೆಗೆಯುತ್ತದೆ.

ಅಪಾರ್ಚರ್ ಮೋಡ್: ಅಪಾರ್ಚರ್ ಮೋಡ್, ನಾವು ಕ್ಯಾಮೆರಾದ ಸೆನ್ಸಾರ್ ಗೆ ಎಷ್ಟು ಬೆಳಕನ್ನು ಹರಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಕ್ಯಾಮೆರಾದ ಸೆನ್ಸಾರ್ ಎದುರಿನಲ್ಲಿ ಒಂದು ಚಕ್ರವಿರುತ್ತದೆ. ನಾವು F 1.8 ಸೆಟ್ಟಿಂಗ್‌ ಮಾಡಿದಾಗ ಚಕ್ರವು ದೊಡ್ಡದಾಗಿ ಓಪನ್ ಆಗಿ ರಂಧ್ರದಿಂದ ಲೆನ್ಸ್ ಮೂಲಕ ಜಾಸ್ತಿ ಬೆಳಕು ಹರಿಯುವುದರಿಂದ ಬೊಕೆ ಫೊಟೋಗಳನ್ನು ತೆಗೆಯಲು ಸೂಕ್ತ. ಬೊಕೆ ಅಂದರೆ ನಾವು ತೆಗೆಯುವ ವಸ್ತು ಸುಂದರವಾಗಿ ಎದ್ದು ಕಾಣುವುದಲ್ಲದೆ ಅಕ್ಕಪಕ್ಕದಲ್ಲಿರುವುದೆಲ್ಲ ಬ್ಲರ್ ಆಗುತ್ತದೆ. F 8 ರಿಂದ F 22 ರಲ್ಲಿ ಫೊಟೋ ತೆಗೆದರೆ (ಪಾಯಿಂಟ್ ಜಾಸ್ತಿಯಾದಷ್ಟು ಚಕ್ರದ ರಂಧ್ರ ಚಿಕ್ಕದಾಗುತ್ತಾ ಹೋಗುತ್ತದೆ) ಫ್ರೇಮ್ ನಲ್ಲಿ ಕಾಣುವ ಎಲ್ಲವೂ ಸ್ಪಷ್ಟವಾಗಿ ಸೆರೆಯಾಗುತ್ತದೆ. ಅಂದರೆ ಹಿನ್ನೆಲೆ ಬ್ಲರ್ ಆಗುವುದಿಲ್ಲ. ಲೆನ್ಸಿನ F ಪಾಯಿಂಟ್‌ (1.8) ಕಡಿಮೆ ಇದ್ದಷ್ಟೂ ಅದು ಅತ್ಯುತ್ತಮ ಲೆನ್ಸ್‌ ಆಗಿರುತ್ತದೆ ಅಲ್ಲದೆ ಬೆಲೆ ಜಾಸ್ತಿ ಇರುತ್ತದೆ.

ಶಟರ್ ಸ್ಪೀಡ್ ಮೋಡ್‌ : ಶಟರ್ ಸ್ಪೀಡ್, ಓಡುತ್ತಿರುವ ವಸ್ತು / ಪ್ರಾಣಿ / ಪಕ್ಷಿ, ಚಲಿಸುತ್ತಿರುವ ಕಾರು, ರನ್ನಿಂಗ್ ರೇಸ್, ಕಾರ್ ರೇಸ್ ನ ಫೊಟೋಗಳನ್ನು ತೆಗೆಯಲು ಉಪಯೋಗಿಸುತ್ತೇವೆ. ಶಟರ್ ಸಂಖ್ಯೆಯನ್ನು ಜಾಸ್ತಿ ಇಟ್ಟು (500 - 2000) ತೆಗೆದಾಗ ಓಡುತ್ತಿರುವ ಫ್ಯಾನಿನ ರೆಕ್ಕೆಗಳು ನಿಂತಂತೆ ಕಾಣುತ್ತವೆ. ಅದೇ ಶಟರ್ ಸ್ಫೀಡ್ ಕಡಿಮೆ ಯಲ್ಲಿ ಸೆರೆಹಿಡಿದರೆ ಫ್ಯಾನಿನ ರೆಕ್ಕೆಗಳು ಕಾಣುವುದಿಲ್ಲ.

ಮ್ಯಾನ್ಯುಯಲ್ ಮೋಡ್: ಮ್ಯಾನ್ಯುಯಲ್ ಮೋಡ್ , ನಮಗೆ ಬೇಕಾದ ಅಪಾರ್ಚರ್, ಶಟರ್ ಸ್ಪೀಡ್, ಐ ಎಸ್ ಒ ನಲ್ಲಿ ಸೆರೆ ಹಿಡಿಯಬಹುದಾದ ಮೋಡ್. ನುರಿತ ಛಾಯಾಗ್ರಾಹಕರು ಈ ಮೋಡ್ ನಲ್ಲಿ ಚಿತ್ರ ಸೆರೆಹಿಡಿಯುತ್ತಾರೆ.

ಐಎಸ್ಒ

ISO

ನಾವು ಸೆರೆಹಿಡಿಯುವ ಪ್ರತಿಯೊಂದು ಸುಂದರ ಚಿತ್ರಕ್ಕೂ ಬೆಳಕು ಪ್ರಮುಖ ಪಾತ್ರವಹಿಸುತ್ತದೆ.

ಐ ಎಸ್ ಒ ಅನ್ನುವುದು ನಾವು ಸೆರೆ ಹಿಡಿಯಬೇಕಾದ ಜಾಗದ ಬೆಳಕನ್ನು ಕ್ಯಾಮೆರಾಗೆ ಸಾಕಾಗುವಷ್ಟು ಮಾಡಿಕೊಳ್ಳುವ ಸೆಟ್ಟಿಂಗ್. ಬಿಸಿಲಿನಲ್ಲಿ ಪಟ ತೆಗೆಯುವಾಗ ಐ ಎಸ್ ಒ 100 ಪಾಯಿಂಟ್ ಇಟ್ಟುಕೊಳ್ಳಬೇಕು, ಅದೇ ಮನೆಯ ಒಳಗಾದರೆ ಬೆಳಕು ಕಡಿಮೆ ಇರುವ ಕಾರಣ ಐ ಎಸ್ ಒ ವನ್ನು 250 - 500 ಇಟ್ಡುಕೊಳ್ಳಬಹುದು. ಬಿಸಿಲಿನಲ್ಲಿ ಐ ಎಸ್ ಒ ಹೆಚ್ಚು ಇಟ್ಟುಕೊಂಡಷ್ಟೂ ತೆಗೆಯುವ ಚಿತ್ರ ಬ್ಲೀಚ್‌ ಆಗುತ್ತದೆ. ಕಡಿಮೆ ಇಟ್ಟುಕೊಂಡರೆ ಚಿತ್ರ ಮಬ್ಬಾಗುತ್ತದೆ, ಕಪ್ಪಾಗುತ್ತದೆ. 25000 ಪಾಯಿಂಟುಗಳವರೆಗೂ ಐ ಎಸ್ ಒ ಸೆಟ್ಟಿಂಗ್ ಮಾಡಿಕೊಳ್ಳಬಹುದು. ಸೆಟ್ಟಿಂಗ್‌ ಇದೆ ಎಂದು 500 ಕ್ಕಿಂತ ಜಾಸ್ತಿ ಮಾಡಿಕೊಳ್ಳುವುದು ತಾಂತ್ರಿಕವಾಗಿ ಸೂಕ್ತವಲ್ಲ. ಆಗ ಜಾಸ್ತಿ ಲೈಟ್ ಗಳನ್ನು ಬಳಸುವುದು ಸೂಕ್ತ. ತುಂಬಾ ಬಿಸಿಲಿನಲ್ಲಿ ಚಿತ್ರ ಸೆರೆಹಿಡಿಯುವ ಅವಶ್ಯಕತೆ ಇದ್ದಾಗ ಕೂಲಿಂಗ್‌ ಫಿಲ್ಟರ್‌ ಗಳನ್ನು ಉಪಯೋಗಿಸಬಹುದು. ಶಟರ್‌ ಸ್ಪೀಡ್‌ ಜಾಸ್ತಿ ಮಾಡಿಕೊಳ್ಳಬಹುದು.

ಒಂದು ಜಲಪಾತವನ್ನು ಹಾಲ್ನೊರೆಯಂತೆ ಸೆರೆಹಿಡಿಯುವುದು ಕಲೆ. ಇಲ್ಲಿ ಶಟರ್ ಸ್ಪೀಡ್ ಬಹಳ ಕಡಿಮೆ ಮಾಡಿಕೊಳ್ಳಬೇಕು. (ರಾತ್ರಿ ರಸ್ತೆಯಲ್ಲಿ ಓಡಾಡುವ ವಾಹನಗಳ ಚಿತ್ರ ತೆಗೆದಾಗ ಲೈಟ್ ಬೆಳಕು ಗೆರೆಗಳಂತೆ ಕಾಣುತ್ತವೆ) ಕೊಂಚ ಬಿಸಿಲಿದ್ದಾಗಲೂ ಮುಳುಗುತ್ತಿರುವ ಸೂರ್ಯ ಕೆಂಪಾಗಿ ಕಾಣಬೇಕು ಹಾಗೆ ಆಗಸ ಕಪ್ಪಾಗಿ ಗೋಚರಿಸಲು ಶಟರ್ ಸ್ಪೀಡ್ ಬಹಳ ಜಾಸ್ತಿ ಇಟ್ಟುಕೊಂಡರೆ ಆಯ್ತು. ಶಟರ್ ಸ್ಪೀಡ್ ಜಾಸ್ತಿ ಮಾಡಿದಷ್ಟು ಕ್ಯಾಮೆರಾದಲ್ಲಿನ ಬೆಳಕು ಕಡಿಮೆಯಾಗುತ್ತದೆ. ಆಗ ಐ ಎಸ್ ಒ ಜಾಸ್ತಿ ಮಾಡಿಕೊಳ್ಳಬೇಕು. ದೊಡ್ಡ ಕ್ಯಾಮೆರಾಗಳಂತೆ ಬಹುತೇಹ ಎಲ್ಲಾ ಮೊಬೈಲ್ ಗಳಲ್ಲೂ ಈ ಸೆಟ್ಟಿಂಗ್‌ ಗಳು ಇರುತ್ತವೆ.

ಕ್ಯಾಮೆರಾದಲ್ಲಿ‌ ಡಿ ಎಸ್‌ ಎಲ್‌ ಆರ್‌, ಮಿರರ್‌ ಲೆಸ್ (ಕ್ರಾಪ್‌ ಸೆನ್ಸಾರ್‌, ಫುಲ್‌ ಸೆನ್ಸಾರ್)‌ ವಿಧ ವಿಧ ರೀತಿಯಲ್ಲಿ ಅತ್ಯಾಧುನಿಕ ಮಾಡೆಲ್‌ ಗಳು ಹಣಕ್ಕೆ ತಕ್ಕಂತೆ ದೊರಕುತ್ತವೆ.

ಎಲ್ಲವೂ ಅನುಭವವಾಗಲು ಕ್ಯಾಮೆರಾವನ್ನು ಬಳಸಿದರಷ್ಟೇ ತಿಳಿಯುವುದು. ಛಾಯಾಗ್ರಹಣ ಒಂದು ಕಲೆ. ತೆಗೆದಷ್ಟೂ, ತಿಳಿದಷ್ಟೂ ನಾವು ಉತ್ತಮ ಛಾಯಾಗ್ರಾಹಕರಾಗಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!