ಚಿತ್ರಸಂತೆ-23... ಇದು ಉದ್ಯಾನ ನಗರಿಯ ಹೆಮ್ಮೆ
ಪ್ರತಿ ವರ್ಷದ ಚಿತ್ರಸಂತೆಯಲ್ಲೂ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ ಕಳೆದ ಬಾರಿಯ ಚಿತ್ರಸಂತೆ ಸಮರ್ಪಣೆ ಮಾಡಲಾಗಿತ್ತು. ಆದರೆ ಈ ಬಾರಿ ಸ್ವಲ್ಫ ಭಿನ್ನವಾದ ಚಿಂತನೆಯೊಂದಿಗೆ ಪರಿಸರದ ಕಾಳಜಿಯನ್ನು ಮೆರೆಯಲಾಗುತ್ತಿದೆ. ಪರಿಸರ ಹಾಗೂ ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡುವಂಥ ಅನೇಕ ಪ್ರಯತ್ನಗಳು ಪ್ರಮುಖ ಆಕರ್ಷಣೆಯಾಗಲಿದೆ. ಚಿತ್ರಕಲಾ ಪರಿಷತ್ ಮುಖ್ಯದ್ವಾರವನ್ನು ಜೇನುಹುಳುಗಳು ಹಾಗೂ ಜೇನು ಗೂಡಿನಿಂದ ಅಲಂಕರಿಸಿ ಸಮಾಜಕ್ಕೆ ಜೇನು ಸಂಕುಲದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಯುವ ಚಿತ್ರಕಲಾವಿದರು, ಪಾರಂಪರಿಕ ಹಾಗೂ ವೃತ್ತಿನಿರತ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆ ಸೃಷ್ಟಿಯಾಗಬೇಕು, ಚಿತ್ರಕಲೆಯ ಅಧ್ಯಯನಕ್ಕಾಗಿಯೇ ವಿಶೇಷವಾದ ಮಹಾವಿದ್ಯಾಲಯವೊಂದು ನಿರ್ಮಾಣವಾಗಬೇಕೆಂಬ ಯೋಜನೆಯೊಂದಿಗೆ 1960ರಲ್ಲಿ ಸಂಸ್ಥಾಪಕ ಅಧ್ಯಕ್ಷ ದಿವಂಗತ ಎಂ. ಆರ್ಯ ಮೂರ್ತಿ ಮತ್ತು ಸಂಸ್ಥಾಪಕ ಕಾರ್ಯದರ್ಶಿ ದಿವಂಗತ ಪ್ರೊ.ಎಂ.ಎಸ್.ನಂಜುಡರಾವ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಸ್ಥಾಪಿಸಿದರು. ಬೆಂಗಳೂರಿನ ಕುಮಾರಕೃಪಾ ರಸ್ತೆಯ ಸಿಎಂ ನಿವಾಸ, ಗಾಂಧಿ ಭವನ ಹಾಗೂ ಗಾಲ್ಫ್ ಸ್ಟೇಡಿಯಂಗಳ ಆಸುಪಾಸಿನಲ್ಲೇ ನಿರ್ಮಾಣವಾಗಿರುವ ಕರ್ನಾಟಕ ಚಿತ್ರಕಲಾ ಪರಿಷತ್, 60ರ ದಶಕದ ಮಧ್ಯಭಾಗದಿಂದಲೇ ಬೆಂಗಳೂರಿನಲ್ಲಿ ದೃಶ್ಯಕಲೆಗಳ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ.

ಚಿತ್ರಸಂತೆಗೆ ಸಜ್ಜಾದ ಚಿತ್ರಕಲಾ ಪರಿಷತ್
ಕಲಾಸಕ್ತರ ಕೈಗೆಟುಕುವ ಬೆಲೆಯಲ್ಲಿ ಕಲಾಕೃತಿಗಳು ದೊರೆಯಬೇಕೆಂಬ ಮುಖ್ಯ ಉದ್ದೇಶದಿಂದ 2003ರಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ‘ಚಿತ್ರಸಂತೆ’ ಪ್ರಸ್ತುತ ದೇಶವಿದೇಶಗಳ ಚಿತ್ರ ಕಲಾವಿದರನ್ನು ಸೆಳೆಯುತ್ತಿದ್ದು, ಚಿತ್ರಸಂತೆಯನ್ನು ವೀಕ್ಷಿಸಲು ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದೆ. “ಕಲೆ ಎಲ್ಲರಿಗಾಗಿ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾದ ಚಿತ್ರಸಂತೆ ಇಂದು ಪರಿಷತ್ತಿನ ಆವರಣದಿಂದ ಮುಂಭಾಗದ ರಸ್ತೆಗಳಿಗೆ ವಿಸ್ತರಣೆಯಾಗಿ, ಕುಮಾರಕೃಪಾ ರಸ್ತೆಯಲ್ಲದೆ ಕ್ರೆಸೆಂಟ್ ರಸ್ತೆ ಮತ್ತು ಆಸುಪಾಸಿನ ಕಿರಿಯ ರಸ್ತೆಗಳಿಗೂ ವ್ಯಾಪಿಸಿಕೊಂಡಿದೆ.
ಚಿತ್ರಕಲಾ ಪರಿಷತ್‌ನ ಚಿತ್ರಕಲೆಯ ಈ ಹಬ್ಬಕ್ಕೆ ಈಗ 23ರ ಸಂಭ್ರಮ. ಪ್ರತಿ ವರ್ಷವೂ ಜನವರಿ ತಿಂಗಳ ಮೊದಲ ಭಾನುವಾರ ಕರ್ನಾಟಕ ಮಾತ್ರವಲ್ಲದೇ ಭಾರತ ಚಿತ್ರಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಕಲಾ ಪರಿಷತ್ ಆವರಣದಲ್ಲಿ ಸೇರಿ ಚಿತ್ರಕಲೆಗಳನ್ನು ಕೊಂಡು ಕೊಳ್ಳುವ ಈ ಮಾರುಕಟ್ಟೆಗೆ ಸಾಕ್ಷಿಯಾಗುತ್ತಲೇ ಇದ್ದಾರೆ. ಈ ಬಾರಿಯೂ ವರ್ಷದ ಪ್ರಾರಂಭದಲ್ಲೇ ಪರಿಷತ್ ಆವರಣದಲ್ಲಿ ಚಿತ್ರಸಂತೆಯ ತಯಾರಿ ಬಹು ಅದ್ದೂರಿಯಾಗಿ ನಡೆಯುತ್ತಿದೆ. ಜನವರಿ 4ರ ಭಾನುವಾರ ಬೆಳಗ್ಗೆ 8ರಿಂದ ಸಂಜೆ 8ರವರೆಗೂ ನಡೆಯುವ ಚಿತ್ರಸಂತೆಯಲ್ಲಿ ಈ ಬಾರಿ ಎಲ್ಲವೂ ವಿಶೇಷ. ಸ್ಥಳೀಯರಷ್ಟೇ ಅಲ್ಲ ರಾಜ್ಯ, ರಾಷ್ಟ್ರಗಳ ಗಡಿ ದಾಡಿ ಸುಮಾರು 5 ಲಕ್ಷಕ್ಕೂ ಅಧಿಕ ಕಲಾಪ್ರೇಮಿಗಳು ಚಿತ್ರಸಂತೆಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಈ ಬಾರಿ ಚಿತ್ರಸಂತೆಯಲ್ಲಿ 22 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಪಂಜಾಬ್, ಮೇಘಾಲಯ, ತ್ರಿಪುರ, ಅಸ್ಸಾಂ, ಜಮ್ಮು ಹಾಗೂ ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ, ಲಕ್ಷದ್ವೀಪ, ಹರಿಯಾಣ ಹಾಗೂ ಜಾರ್ಖಂಡ್‌ನಿಂದ ಕಲಾವಿದರು ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ದುಬೈ ಮೂಲದ ಕಲಾವಿದನ ಚಿತ್ರ ಪ್ರದರ್ಶನಕ್ಕೂ ಪರಿಷತ್ ಅವಕಾಶ ನೀಡಿದೆ. ಈಗಾಗಲೇ ಕಲಾವಿದರ ಆಯ್ಕೆ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, 3000ಕ್ಕೂ ಹೆಚ್ಚು ಅರ್ಜಿಗಳ ಪೈಕಿ 1500 ಕಲಾವಿದರಿಗೆ ನೇರ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆ ಕಲಾವಿದರಿಗೆ ಉಚಿತವಾಗಿ ಮಳಿಗೆ, ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತದೆ. ಹೊರನಾಡಿನಿಂದ ಆಗಮಿಸುವ ಸುಮಾರು 400 ಕಲಾವಿದರಿಗೆ ಪರಿಷತ್ ವತಿಯಿಂದ ಉಚಿತ ವಸತಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ತಿಂಗಳಿಡೀ ವರ್ಚುವಲ್ ಸಂತೆ!
ಸ್ಥಳಾವಕಾಶ ದೊರಕದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲು ಪ್ರತಿಬಾರಿಯಂತೆ ಈ ಸಲವೂ ವರ್ಚುವಲ್ ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿಪಡಿಸಲಾಗಿದೆ. ವಿಶೇಷವೆಂದರೆ ಈ ವರ್ಚುವಲ್ ವೇದಿಕೆಯ ಮೂಲಕ ಕಲಾವಿದರು ಜನವರಿ 4ರ ಭಾನುವಾರದಿಂದ ಪ್ರಾರಂಭವಾಗಿ ಜನವರಿ 31ರರೆಗೂ ಉಚಿತವಾಗಿ ಪ್ರದರ್ಶಿಲಾಗುತ್ತದೆ. ವಿಶ್ವದಾದ್ಯಂತ ವೀಕ್ಷಕರು ಈ ಗ್ಯಾಲರಿಯ ಕಲಾಕೃತಿಗಳನ್ನು ವೀಕ್ಷಿಸುವುದರ ಜತೆಗೆ ಪೋರ್ಟಲ್ ಮೂಲಕ ನೇರವಾಗಿ ಕಲಾವಿದರನ್ನು ಸಂಪರ್ಕಿಸಬಹುದು.
ವಿಕಲಚೇತನರಿಗೆ ಪ್ರೋತ್ಸಾಹ
23ನೇ ವರ್ಷದ ಚಿತ್ರಸಂತೆಯಲ್ಲಿ ಹಿರಿಯ ಕಲಾವಿದರು ವಿಶೇಷ ಚೇತನ ಕಲಾವಿದರಿಗಾಗಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ವಿಕಲಚೇತನರಿಗೆ ಅನುಕೂಲವಾಗುವಂತೆ ಮಳಿಗೆಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದು, ವೀಲ್‌ಚೇರ್ ಮೂಲಕವೂ ಸಂತೆಗೆ ಬಂದು ತಮ್ಮ ಕೃತಿಗಳನ್ನು ಪ್ರದರ್ಶಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಕೆಲವು ವಿಕಲಚೇತನ ವಿದ್ಯಾಸಂಸ್ಥೆಗಳು ತಮ್ಮ ಪ್ರತಿಭಾವಂತ ಕಲಾವಿದ್ಯಾರ್ಥಿಗಳೊಂದಿಗೆ ಚಿತ್ರಸಂತೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಅಲ್ಲದೆ ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಭಾಗವಹಿಸಲಿರುವ ಈ ಚಿತ್ರಸಂತೆಯಲ್ಲಿ ವಯಸ್ಸಿನ ಮಿತಿಯಿಲ್ಲದೆ ಎಲ್ಲ ಕಲಾವಿದರಿಗೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವ ಅವಕಾಶ ನೀಡಲಾಗಿದೆ.
ಇದು ಚಿತ್ತಾರಗಳ ಲೋಕ
ಬೆಂಗಳೂರು ಚಿತ್ರಸಂತೆ ಬೆರಗು ಮೂಡಿಸುವ ಬಣ್ಣದ ಲೋಕ. ದೇಶ ವಿದೇಶಗಳ 25ಕ್ಕೂ ಹೆಚ್ಚು ಪ್ರಕಾರಗಳ ಚಿತ್ರಗಳು ಅರಳಿ ನಿಲ್ಲುವ ಲೋಕವಿದು. ಮೈಸೂರು ಮತ್ತು ತಂಜಾವೂರು ಶೈಲಿಯ ಪರಂಪರೆಯ ಚಿತ್ರಕಲೆ, ರಾಜಸ್ಥಾನಿ, ಮಧುಬನಿ, ಶೈಲಿಯ ಕಲಾಕೃತಿಗಳು ಹಾಗೂ ಜಲಬಣ್ಣ, ತೈಲಬಣ್ಣ, ಅಕ್ರಿಲಿಕ್, ಪೆನ್ಸಿಲ್, ಮಸಿ ರೇಖಾಚಿತ್ರಗಳು, ಗ್ರಾಫಿಕ್ ಮಾಧ್ಯಮ ಕೃತಿಗಳು ಸೇರಿದಂತೆ ವಿವಿಧ ಪರಂಪರೆಯ ಆಧುನಿಕ ಮತ್ತು ಸಮಕಾಲೀನ ಶೈಲಿಯ ಕಲಾಕೃತಿಗಳು ಚಿತ್ರಸಂತೆಯಲ್ಲಿ ವೀಕ್ಷಣೆ ಮತ್ತು ಮಾರಾಟಕ್ಕೆ ಲಭ್ಯವಿದೆ. ಇನ್ನು ಸ್ಥಳದಲ್ಲೇ ಕಲಾಕೃತಿಗಳನ್ನು ರಚಿಸುವುದು, ಕ್ಯಾರಿಕೇಚರ್ ರಚನೆಗೂ ಪ್ರತಿಬಾರಿಯಂತೆ ಅವಕಾಶವಿದೆ.

ಚಿತ್ರಸಂತೆಗೆ ಫೀಡರ್ ಬಸ್ ಸೇವೆ
ಚಿತ್ರಸಂತೆಗೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆಗಮಿಸುವ ಕಲಾಸಕ್ತರಿಗೆ, ಕಲಾವಿದರಿಗೆ ಬೆಂಗಳೂರು ಮಹಾನಗರ ಪಾಲಿಕೆ ಮೆಜೆಸ್ಟಿಕ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಶಿವಾಜಿನಗರ ಮತ್ತು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣಗಳಿಂದಲೂ ಜ.4ರಂದು ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಫೀಡರ್ ಬಸ್ ಸೇವೆ ಕಲ್ಪಿಸುವಂತೆ ಸಾರಿಗೆ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ನಗರದ ನಾನಾ ಭಾಗಗಳಿಂದ ಮೆಟ್ರೋದಲ್ಲಿ ಬಂದು ಅಲ್ಲಿಂದ ಫೀಡರ್ ಬಸ್‌ಗಳಲ್ಲಿ ಚಿತ್ರಸಂತೆಗೆ ಭೇಟಿನೀಡಬಹುದು. ಇನ್ನು ಪೊಲೀಸ್, ಆರೋಗ್ಯ ಇಲಾಖೆ, ಅಗ್ನಿಶಾಮಕ, ವಿದ್ಯುತ್, ಬ್ಯಾಂಕ್‌ಗಳೂ ಅನುಕೂಲಗಳನ್ನು ಕಲ್ಪಿಸುತ್ತಿದ್ದು. ಕರ್ನಾಟಕ ಸರಕಾರ ಸಂತೆಗಾಗಿ ಪ್ರತಿವರ್ಷ ಅನುದಾನ ನೀಡುತ್ತಲೇ ಬಂದಿದೆ.
ಆರ್ಟ್ ಮಾರ್ಟ್ ಮಾರಾಟ ಮಳಿಗೆ
ಒಬ್ಬ ಕಲಾವಿದ ತನ್ನ ಮೂರು ಕಲಾಕೃತಿಗಳನ್ನು ಇಲ್ಲಿ ತಂದು ಮೂರು ತಿಂಗಳ ಕಾಲ ಪ್ರದರ್ಶನಕ್ಕಿಡಬಹುದು. ಅದಕ್ಕೆ ಯಾವುದೇ ಬಾಡಿಗೆ ನೀಡಬೇಕಿಲ್ಲ. ಆ ಕಲಾಕೃತಿ ಮಾರಾಟವಾದ ಸಂದರ್ಭದಲ್ಲಷ್ಟೇ ಕಲಾವಿದನ ಜತೆಗೆ ನೇರ ಸಂಪರ್ಕ ಮಾಡಿಸಿ ವ್ಯಾಪಾರ ಮಾಡಿಕೊಳ್ಳಲು ಅನುವು ಮಾಡಲಾಗುತ್ತದೆ. ಹೀಗೆ ಮಾರಾಟವಾದ ಮೇಲೆ ಈ ಆರ್ಟ್ ಮಾರ್ಟ್ ಮಳಿಗೆಗೆ 12-13% ಕಮಿಷನ್ ತೆಗೆದುಕೊಳ್ಳಲಾಗುತ್ತದೆ. ಆದರೆ 3 ತಿಂಗಳಾದರೂ ಕಲಾಕೃತಿ ಮಾರಾಟವಾಗಿಲ್ಲವೆಂದರೆ ಕಲಾಕೃತಿಯನ್ನು ಶುಲ್ಕ ಪಡೆಯದೆ ಹಿಂದಿರುಗಿಸಲಾಗುತ್ತದೆ. ಇದರಿಂದಾಗಿ ಸುಮಾರು 200-300 ಕಲಾವಿದರು ತಮ್ಮ ಕಲಾಕೃತಿಯನ್ನು ಇಲ್ಲಿ ಪ್ರದರ್ಶನಕ್ಕೆ ಇಡಲು ಸಾಧ್ಯವಾಗಿದೆ.
ಚಿತ್ರಸಂತೆಯಲ್ಲಿ ಪರಿಸರ ಜಾಗೃತಿ
ಪ್ರತಿ ವರ್ಷದ ಚಿತ್ರಸಂತೆಯಲ್ಲೂ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ ಕಳೆದ ಬಾರಿಯ ಚಿತ್ರಸಂತೆ ಸಮರ್ಪಣೆ ಮಾಡಲಾಗಿತ್ತು. ಆದರೆ ಈ ಬಾರಿ ಸ್ವಲ್ಫ ಭಿನ್ನವಾದ ಚಿಂತನೆಯೊಂದಿಗೆ ಪರಿಸರದ ಕಾಳಜಿಯನ್ನು ಮೆರೆಯಲಾಗುತ್ತಿದೆ. ಪರಿಸರ ಹಾಗೂ ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡುವಂಥ ಅನೇಕ ಪ್ರಯತ್ನಗಳು ಪ್ರಮುಖ ಆಕರ್ಷಣೆಯಾಗಲಿದೆ. ಚಿತ್ರಕಲಾ ಪರಿಷತ್ ಮುಖ್ಯದ್ವಾರವನ್ನು ಜೇನುಹುಳುಗಳು ಹಾಗೂ ಜೇನು ಗೂಡಿನಿಂದ ಅಲಂಕರಿಸಿ ಸಮಾಜಕ್ಕೆ ಜೇನು ಸಂಕುಲದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅಲ್ಲದೆ ಕಲಾಸಕ್ತರಿಗಾಗಿ 124 ಕ್ಕೂ ಹೆಚ್ಚು ಪರಿಸರ ಸಾಧಕರ ಪರಿಚಯವನ್ನು ಬಿತ್ತರಿಸುವ ಎಲ್‌ಇಡಿ ವಾಲ್‌ಗಳು ಈ ಬಾರಿಯ ವಿಶೇಷತೆಗಳಲ್ಲಿ ಒಂದು.