Friday, October 3, 2025
Friday, October 3, 2025

ಭಾರತದ ಪ್ರಮುಖ ಸರೋವರಗಳ ಬಗ್ಗೆ ನಿಮಗೆ ಗೊತ್ತಾ ? ಒಮ್ಮೆಯಾದರೂ ಇಲ್ಲಿಗೆ ಭೇಟಿ ಕೊಟ್ಟು ನೋಡಿ

ಸರೋವರಗಳನ್ನು ಮೆಚ್ಚಿಕೊಳ್ಳದವರಿಲ್ಲ. ತಂಪಾಗಿ ಬೀಸುವ ಗಾಳಿಯಲ್ಲಿ, ಹರಿಯುವ ನೀರಿನ ಸದ್ದಿನ ನಡುವೆ ದೋಣಿ ವಿಹಾರವನ್ನು ಕೈಗೊಳ್ಳಬೇಕೆನ್ನುವ ಆಸೆ ಅನೇಕರಿಗಿರುತ್ತದೆ. ಆದರೆ ನಿಮಗೆ ಗೊತ್ತಾ ಭಾರತದ ಪ್ರಮುಖ ಸರೋವರಗಳು ಯಾವುವು ಎಂಬ ವಿಚಾರ.

ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ ಸರೋವರಗಳಿವೆ. ಚಾರಣ, ಧಾರ್ಮಿಕ ಪ್ರವಾಸಗಳಷ್ಟೇ ಸರೋವರಗಳ ಪ್ರವಾಸವು ಮನಸ್ಸಿನ ಹೊಸ ಚೈತನ್ಯವನ್ನು, ನವ ಉಲ್ಲಾಸವನ್ನು ಉಂಟುಮಾಡುತ್ತದೆ. ಆದರೆ ಭಾರತದಾದ್ಯಂತ ಇರುವ ಜನಪ್ರಿಯ ಸರೋವರಗಳು ಯಾವುವು ಎಂಬುದು ನಿಮಗೆ ಗೊತ್ತಾ? ಅವುಗಳ ಮಾಹಿತಿ ನಿಮಗಾಗಿ.

ಪ್ಯಾಂಗಾಂಗ್ ತ್ಸೋ (Pangong Tso), ಲಡಾಖ್

ಮೋಡಿ ಮಾಡುವ ಸರೋವರಗಳ ಮೂಲಕವೇ ಹೆಸರಾಗಿರುವ ಲಡಾಖ್‌ ನ ಪ್ರಮುಖ ಸರೋವರ ಪ್ಯಾಂಗಾಂಗ್ ತ್ಸೋ. ಈ ಸರೋವರವು ಸಮುದ್ರ ಮಟ್ಟದಿಂದ 13,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ್ದು, ಭಾರತದಿಂದ ಟಿಬೆಟ್‌ವರೆಗೆ ವ್ಯಾಪಿಸಿದೆ. ಈ ಸರೋವರದ ನೀರಿನ ಬಣ್ಣವನ್ನು ನೋಡುವುದೇ ಒಂದು ಖುಷಿ. ಒಮ್ಮೆ ಕಡು ನೀಲಿ ಬಣ್ಣ, ಮತ್ತೊಮ್ಮೆ ತಿಳಿ ನೀಲಿ ಬಣ್ಣ ಹೀಗೆ ಹವಾಮಾನಕ್ಕೆ ತಕ್ಕಂಗೆ ವಿಶೇಷವಾಗಿ ಗೋಚರಿಸುತ್ತದೆ ಈ ಸರೋವರ ನೀರು.

Pangong Tso, Ladakh

ಲೋಕ್ತಕ್ ಸರೋವರ (Loktak Lake), ಮಣಿಪುರ

ವಿಶ್ವದ ಅತಿದೊಡ್ಡ ತೇಲುವ ಸರೋವರ ಮಣಿಪುರದ ಲೋಕ್ತಕ್ ಸರೋವರ. ಇದು ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನವನ್ನು ಒಳಗೊಂಡಿದ್ದು, ಅನೇಕ ಸ್ಥಳೀಯ ಜೀವವೈವಿಧ್ಯಗಳಿಗೂ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಸರೋವರಗಳಿಗಿಂತ ಭಿನ್ನವಾಗಿ, ಲೋಕ್ತಕ್ ನಿಧಾನವಾಗಿ ಹರಿಯುವ, ನೋಡುಗರನ್ನು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಇಲ್ಲಿ ಪರಿಸರ ಪ್ರವಾಸ, ಫಮ್ಡಿಗಳಲ್ಲಿ ಹೋಂ ಸ್ಟೇಗಳು, ಪಕ್ಷಿ ವೀಕ್ಷಣೆ ಮತ್ತು ದೋಣಿ ವಿಹಾರವನ್ನೂ ಕೈಗೊಳ್ಳಬಹುದು.

ಚಿಲಿಕ ಸರೋವರ(Chilika Lake), ಒಡಿಶಾ

ಏಷ್ಯಾದ ಅತಿದೊಡ್ಡ ಉಪ್ಪುನೀರಿನ ಸರೋವರ ಎಂದು ಜನಪ್ರಿಯವಾಗಿರುವುದು ಒಡಿಶಾದ ಚಿಲಿಕ ಸರೋವರ. ಪ್ರಕೃತಿ ಪ್ರೇಮಿಗಳಿಗಿದು ಒಳ್ಳೆಯ ಆಯ್ಕೆಯಾಗಿದ್ದು, ಇಲ್ಲಿ ಪಕ್ಷಿ ವೀಕ್ಷಣೆಗೆ ಮತ್ತು ಪ್ರಕೃತಿ ಪ್ರಿಯರ ಸ್ವರ್ಗವಾಗಿದೆ. ಫ್ಲೆಮಿಂಗೊಗಳು, ಡಾಲ್ಫಿನ್‌ಗಳು ಮತ್ತು ಹಲವಾರು ವಲಸೆ ಹಕ್ಕಿಗಳು ಇಲ್ಲಿನ ನೀರಿನಲ್ಲಿ ಪ್ರವಾಸಿಗರಿಗೆ ಕಾಣಲು ಸಿಗುತ್ತದೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಸರೋವರವನ್ನು ಕಣ್ತುಂಬಿಕೊಳ್ಳುವುದೇ ಪ್ರವಾಸಿಗರಿಗೊಂದು ಹಬ್ಬ.

Chilika Lake

ವೆಂಬನಾಡ್ ಸರೋವರ(Vembanad lake), ಕೇರಳ

ಭಾರತದ ಅತಿ ಉದ್ದದ ಸರೋವರವಷ್ಟೇ ಅಲ್ಲದೆ ಅತಿದೊಡ್ಡ ಸಿಹಿ ನೀರಿನ ಸರೋವರ ಎಂದೇ ಕರೆಸಿಕೊಂಡಿರುವ ವೆಂಬನಾಡ್ ಸರೋವರವು ಕೇರಳದ ಹಿನ್ನೀರಿನಲ್ಲಿದೆ. ತೇಲುವ ಹೌಸ್‌ಬೋಟ್‌ಗಳು ಹೊಂದಿರುವ ಕರಾವಳಿ ತೀರಗಳು, ಪ್ರವಾಸಿಗರನ್ನು ಮೋಡಿ ಮಾಡುತ್ತವೆ.

ನೈನಿತಾಲ್ ಸರೋವರ(Nainital Lake), ಉತ್ತರಾಖಂಡ

ನೈನಿತಾಲ್ ಸರೋವರವು ಪಚ್ಚೆ ಬೆಟ್ಟಗಳ ನಡುವೆ ನೆಲೆಸಿರುವ ಮುತ್ತುಗಳಿಂದ ಕಟ್ಟಿದ ಹಾರದಂತಿದೆ. ದೂರದ ಹಕ್ಕಿಗಳ ಹಾಡುಗಳು, ಮೃದುವಾದ ಹುಟ್ಟಿನ ಸದ್ದು ಮತ್ತು ಪಿಸುಗುಟ್ಟುವ ತಂಗಾಳಿಯ ಪ್ರಶಾಂತ ವಾತಾವರಣದಿಂದಾಗಿ ಇಲ್ಲಿ ದೋಣಿ ವಿಹಾರವು ವಿಶೇಷ ಅನುಭವವನ್ನೇ ನೀಡುತ್ತದೆ.

Nainital-Lake

ಗುರುಡೊಂಗ್ಮಾರ್ ಸರೋವರ(Gurudongmar Lake), ಸಿಕ್ಕಿಂ

ಸಿಕ್ಕಿಂ ರಾಜ್ಯದ ಮಂಗನ್ ಜಿಲ್ಲೆಯ ಗ್ರೇಟ್ ಹಿಮಾಲಯದಲ್ಲಿರುವ ಗುರುಡೊಂಗ್ಮಾರ್ ಸರೋವರವನ್ನು ಬೌದ್ಧರು ಮತ್ತು ಸಿಖ್ಖರು ಪವಿತ್ರವೆಂದು ಪರಿಗಣಿಸುತ್ತಾರೆ. ಹಿಮದಿಂದ ಆವೃತವಾದ ಶಿಖರಗಳ ನಡುವೆ, ಗುರುಡೊಂಗ್ಮಾರ್ ಸರೋವರವು ನೀಲಮಣಿಯಂತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!