ಗ್ರೇಟ್ ಟ್ರಾವೆಲರ್ ನಾನು ಕಣ್ರೀ..
"ಲೋ.. ಪರಂಧಾಮ ಮುಚ್ಕೊಂಡು ಕೂತ್ಕೊ. ಮೂರ್ನಾಲ್ಕು ದೇಶ ಸುತ್ತಿಬಿಟ್ಟು ನೀನೇ ಗ್ರೇಟ್ ಟ್ರಾವೆಲರ್ ಅನ್ನೋ ರೇಂಜ್ ಗೆಲ್ಲ ಬಿಲ್ಡಪ್ ಕೊಡಬೇಡ. ನಮ್ಮ ವಿಶ್ವೇಶ್ವರ ಭಟ್ರೂ ಈವರೆಗೆ ನೂರು ದೇಶಗಳನ್ನು ಸುತ್ತಿ ಬಂದವ್ರೆ. ಅದೂ ಬರೋಬ್ಬರಿ ಮುನ್ನೂರು ಎಂಬತ್ತು ಸಲ. ಅಂತವ್ರೇ ದೊಡ್ಡವರಿದ್ದಾರೆ ಅಂಥ ಸುಮ್ನೆ ಕೂತಿದ್ದಾರೆ. ಇವನು ಯಾವನೋ ಬಂದುಬಿಟ್ಟ" ರಾಥೋಡ್ ಪರಂಧಾಮನನ್ನು ತರಾಟೆಗೆ ತೆಗೆದುಕೊಂಡ. ವಿಶ್ವೇಶ್ವರ ಭಟ್ಟರು ಇಬ್ಬರನ್ನೂ ಸುಮ್ಮನಿರಿಸಿದರು.
- ದೀಕ್ಷಿತ್ ನಾಯರ್
ಅದು ಗ್ರೇಟ್ ಟ್ರಾವೆಲರ್ ಗಳ ವಾರ್ಷಿಕ ಸಭೆ. ಸಾವಿರಾರು ಟ್ರಾವೆಲರ್ ಗಳು ಸಭಾಂಗಣದಲ್ಲಿ ಕಿಕ್ಕಿರಿದಿದ್ದರು. ಇಬ್ನ್ ಬಟೂಟ, ಮಾರ್ಕೊ ಪೋಲೊ, ಹ್ಯುಯೆನ್ ತ್ಸಾಂಗ್, ಫರ್ಡಿನೆಂಡ್ ಮೆಗಲನ್ ಸೇರಿದಂತೆ ಇನ್ನು ಹಲವರು ವಿಐಪಿ ಮತ್ತು ವಿವಿಐಪಿ ಸೀಟುಗಳಲ್ಲಿ ವಿರಾಜಮಾನರಾಗಿದ್ದರು. ಎಲ್ಲರದ್ದೂ ಗಂಭೀರ ವದನ. ಮೀಸೆ ತಿರುವುತ್ತಾ, ಗಡ್ಡ ಸವರಿಕೊಂಡು ಕೂತಿದ್ದರು. ಅವರ ಒಂಟೆ, ಕತ್ತೆ, ಕುದುರೆಗಳೆಲ್ಲ ಸಭಾಂಗಣದ ತುಂಬಾ ಓಡಾಡಿಕೊಂಡು ಗಬ್ಬೆಬ್ಬಿಸುತ್ತಿದ್ದವು. ಈ ಅತಿರಥ ಮಹಾರಥರು ಊರೂರು ತಿರುಗಿ ಹೋದಲೆಲ್ಲ ಒಂದೊಂದು ಮದುವೆಯಾಗಿ ಸಂತಾನದ ಬೀಜ ಬಿತ್ತಿದ್ದರಲ್ಲ; ಆ ಹೆಂಡಿರು ಮತ್ತು ಮಕ್ಕಳೂ ಗುಂಪು ಕಟ್ಟಿಕೊಂಡು ಬಂದಿದ್ದರು. ಇವರು ಮಾತ್ರ ಅದೇ ದರ್ಪದಲ್ಲಿ ತಮ್ಮ ತುತ್ತೂರಿ ತಾವೇ ಊದಿಕೊಳ್ಳುತ್ತಿದ್ದರು. ಎಲ್ಲರಲ್ಲೂ ಗತ್ತು ಗೈರತ್ತು. ಇಡೀ ಜಗತ್ತನ್ನು ಸುತ್ತಿದವರು ತಾವೆಂಬ ಹಮ್ಮು. ಈ ಮಧ್ಯೆ ವಾರ್ಷಿಕ ಸಭೆಯ ಅಧ್ಯಕ್ಷತೆಯ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಒಂದೆರಡು ದೇಶಗಳನ್ನು ಸುತ್ತಿ ಬಂದಿದ್ದ ಪರಂಧಾಮ ಎದ್ದು ನಿಂತವನೇ " ಈ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ನಾನು ವಹಿಸಿಕೊಳ್ಳುತ್ತೇನೆ. ಇತ್ತೀಚಿಗಿನ ದಿನಮಾನದಲ್ಲಿ ನಾನು ದಿ ಗ್ರೇಟ್ ಟ್ರಾವೆಲರ್. ತಿಂಗಳುಗಟ್ಟಲೆ ಮನೆ-ಮಠ ಬಿಟ್ಟು ದೇಶ-ವಿದೇಶ ಸುತ್ತಿದ್ದೇನೆ" ಎಂದನು. "ಲೋ.. ಪರಂಧಾಮ ಮುಚ್ಕೊಂಡು ಕೂತ್ಕೊ. ಮೂರ್ನಾಲ್ಕು ದೇಶ ಸುತ್ತಿಬಿಟ್ಟು ನೀನೇ ಗ್ರೇಟ್ ಟ್ರಾವೆಲರ್ ಅನ್ನೋ ರೇಂಜ್ ಗೆಲ್ಲ ಬಿಲ್ಡಪ್ ಕೊಡಬೇಡ. ನಮ್ಮ ವಿಶ್ವೇಶ್ವರ ಭಟ್ರೂ ಈವರೆಗೆ ನೂರು ದೇಶಗಳನ್ನು ಸುತ್ತಿ ಬಂದವ್ರೆ. ಅದೂ ಬರೋಬ್ಬರಿ ಮುನ್ನೂರು ಎಂಬತ್ತು ಸಲ. ಅಂತವ್ರೇ ದೊಡ್ಡವರಿದ್ದಾರೆ ಅಂಥ ಸುಮ್ನೆ ಕೂತಿದ್ದಾರೆ. ಇವನು ಯಾವನೋ ಬಂದುಬಿಟ್ಟ" ರಾಥೋಡ್ ಪರಂಧಾಮನನ್ನು ತರಾಟೆಗೆ ತೆಗೆದುಕೊಂಡ. ವಿಶ್ವೇಶ್ವರ ಭಟ್ಟರು ಇಬ್ಬರನ್ನೂ ಸುಮ್ಮನಿರಿಸಿದರು. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವಂತೆ ಇಬ್ನ್ ಬಟೂಟನಲ್ಲಿ ಮನವಿ ಮಾಡಿದರು. ಬಟೂಟ ರಾಜ ಗಾಂಭೀರ್ಯದಿಂದ ವೇದಿಕೆಗೆ ಹೋದನು. ಮೈಕ್ ಮುಂದೆ ನಿಂತು ಎರಡು ತಾಸು ಪಿಟೀಲು ಕುಯ್ದನು. "ನಾನು ನನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಅಪ್ಪ-ಅಮ್ಮ, ಕುಟುಂಬ ಮತ್ತು ಇಡೀ ಊರನ್ನು ತೊರೆದೆ. ಜಗತ್ತನ್ನು ಬರಿಗಾಲ ಫಕೀರನಂತೆ ತಿರುಗಿದೆ. ನಾನು ಹುಟ್ಟು ಅಲೆಮಾರಿ. ನನಗಾದರೂ ಈಗಿನಂತೆ ಕಾರು, ಬಸ್ಸು, ರೈಲು, ವಿಮಾನಗಳಿರಲಿಲ್ಲ. ಒಂಟೆ, ಕತ್ತೆ, ಕುದುರೆ ಮೇಲೆ ಕೂತುಕೊಂಡೇ ಸುತ್ತಿದೆ. ಹಲವು ಸಂದರ್ಭಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ನಡೆದೆ. ಮೊರಾಕೊದಿಂದ ಮಧ್ಯ ಪ್ರಾಚ್ಯ, ಅರಬ್, ಚೀನಾ, ಈಜಿಪ್ಟ್, ಭಾರತ ಅಷ್ಟೇ ಯಾಕೆ ಕರ್ನಾಟಕದ ಹೊನ್ನಾವರದವರೆಗೂ ಅಲೆಮಾರಿಯಂತೆ ಅಲೆಯುತ್ತಾ ಬಂದೆ. ಮೂರು ದಶಕಗಳು ಎಲ್ಲಿಯೂ ವಿರಮಿಸಲಿಲ್ಲ. ನನಗೆ ಹೋದಲೆಲ್ಲ ಹೆಂಡಿರು-ಮಕ್ಕಳು. ಈ ಸಭೆಗೆ ಅವರೂ ಬಂದಿದ್ದಾರೆ. ಆದರೆ ನನ್ನ ಸಂತಾನ ಯಾವುದು ಎಂದು ಪತ್ತೆಹಚ್ಚಲೂ ನನ್ನಿಂದ ಸಾಧ್ಯವಿಲ್ಲ. ತಿರುಗಾಲ ತಿಪ್ಪನಂತೆ ಅಲೆಮಾರಿತನವನ್ನೇ ಬದುಕಾಗಿಸಿಕೊಂಡ ನಾನು ದಿ ಗ್ರೇಟ್ ಟ್ರಾವೆಲರ್. ಇದರಲ್ಲಿ ಯಾವ ಅನುಮಾನವೂ ಬೇಡ. ಗ್ರೇಟ್ ಟ್ರಾವೆಲರ್ ಎಂಬ ಪಟ್ಟ ಶಾಶ್ವತವಾಗಿ ನನ್ನ ಮುಡಿಗೇರಲಿ. ಪ್ರತಿ ವರ್ಷವೂ ನಾನೇ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವೆ" ಎಂದು ಮಾತನಾಡಿದನು. ಮಾರ್ಕೊ ಪೋಲೊ, ಮೆಗಲನ್, ಹುಯ್ಯೆನ್ ತ್ಸಾಂಗ್ ಬಟೂಟನ ಮೈ ಮೇಲೆ ಎರಗಿದರು. ಅವನ ಕುತ್ತಿಗೆ ಪಟ್ಟಿ ಹಿಡಿದು ತಮ್ಮ ಸಾಧನೆಗಳನ್ನು ಕೊಚ್ಚಿಕೊಂಡರು. ಸಭಾಂಗಣದಲ್ಲಿ ಕೋಲಾಹಲ ತಾರಕಕ್ಕೇರಿತು. ವಿಶ್ವೇಶ್ವರ ಭಟ್ಟರು ಎಲ್ಲರನ್ನೂ ಸುಮ್ಮನಿರಿಸಲು ಪ್ರಯತ್ನಿಸಿದರು. ಜಟಾಪಟಿ ಮಾತ್ರ ನಿಲ್ಲಲೇ ಇಲ್ಲ. ತಾವು ಹೆಚ್ಚು ನಾವು ಹೆಚ್ಚು ಎಂಬ ಜಗಳ ಮುಂದುವರಿಯುತ್ತಾ ಹೋಯಿತು.
"ಕೂತ್ಕಳ್ರಯ್ಯ ಕೆಳಗಡೆ. ನಿಮಗೆ ನೀವೇ ಬಡಾಯಿ ಕೊಚ್ಚಿಕೊಳ್ಳಬೇಡಿ. ನಾನು ನಿಜವಾಗಿಯೂ ದಿ ಗ್ರೇಟ್ ಟ್ರಾವೆಲರ್. ನನ್ನ ಸಾಧನೆ ಮುಂದೆ ನೀವು ಬಚ್ಚಾ. ನನ್ನ ಹಾಗೆ ನೀವು ಇಡೀ ಜನ್ಮದಲ್ಲಿ ಸುತ್ತಲಾಗುವುದಿಲ್ಲ" ಸಭಾಂಗಣದಲ್ಲಿ ಹೊಸ ಧ್ವನಿಯೊಂದು ಕೇಳಿಸಿತು. "ಅರೆ.. ಯಾರು ಮಾತಾಡಿದ್ದು? ಎಲ್ಲಿಯೂ ಕಾಣ್ತಿಲ್ಲವಲ್ಲ. ಬರೀ ಧ್ವನಿ ಕೇಳ್ತಿದೆ" ಗುಸುಗುಸು ಶುರುವಾಯಿತು. ಆಕಾರ ಮತ್ತು ಬಣ್ಣ ಮತ್ತು ಎಂಥದ್ದೂ ಇಲ್ಲದ ವ್ಯಕ್ತಿಯೊಬ್ಬ ಮಾತನಾಡುತ್ತಿದ್ದಾನೆ. ಆದರೆ ಅವನು ಯಾರ ಕಣ್ಣಿಗೂ ಬೀಳುತ್ತಿಲ್ಲ. ಎಲ್ಲರಲ್ಲೂ ಗೊಂದಲ. ಇದು ಯಾವ ಟ್ರಾವೆಲರ್ ನ ಆತ್ಮ ಇರಬಹುದು? ಅವನು ಯಾವ ಊರು? ಯಾವ ಕೇರಿ? ಅವನ ಹೆಸರಾದರೂ ಏನು? ಹತ್ತಾರು ಪ್ರಶ್ನೆಗಳು ಕಾಡಿದವು. "ತುಂಬಾ ತಲೆಕೆಡಿಸಿಕೊಳ್ಳಬೇಡಿ. ನನ್ನ ಹೆಸರು ರೂಮರ್. ಸತ್ಯನಾಥನ ಕುಚಿಕು. ಆದರೆ ನನಗೂ ಅವನಿಗೂ ಅಜಗಜಾಂತರ. ನಾವಿಬ್ಬರೂ ಟ್ರಾವೆಲರ್ಸ್. ಆದರೆ ನನ್ನಷ್ಟು ಅವನು ಜಗತ್ತು ಸುತ್ತಿಲ್ಲ. ಅವನು ತನ್ನ ಶೂಸ್ ಲೇಸ್ ಕಟ್ಟಿಕೊಂಡು ಮನೆಯ ಹೊಸ್ತಿಲು ದಾಟಿಕೊಂಡು ಹೊರಬರುವಷ್ಟರೊಳಗೆ ನಾನು ಅರ್ಧ ಜಗತ್ತನ್ನು ಸುತ್ತಿ ಬಂದಿರುತ್ತೇನೆ. ಹಾಗಾಗಿಯೇ ನಮ್ಮಿಬ್ಬರದ್ದು ಎಣ್ಣೆ-ಸೀಗೆಕಾಯಿ ಸಂಬಂಧ. ಅವನು ಒಂದು ಸಣ್ಣ ಊರು ಸುತ್ತಿ ಬರಲು ಮೈಕೈ ಪೂರಾ ಮೆತ್ತಗಾಗಿಸಿಕೊಂಡು ದಣಿಯುತ್ತಾನೆ. ಅವನು ಎಷ್ಟೇ ಪ್ರಾಮಾಣಿಕವಾಗಿ ಸುತ್ತಿದರೂ ಹಲವರು ಅವನನ್ನು ಅನುಮಾನದಿಂದ ನೋಡುತ್ತಾರೆ. ನನ್ನದು ಹಾಗಲ್ಲ ಸ್ಕಾಟ್ ಲ್ಯಾಂಡ್ ಹೋಗಿಬಂದೆ ಎಂದರೂ ನಂಬುತ್ತಾರೆ. ವೈಟ್ ಹೌಸ್ ನಲ್ಲಿ ನಡೆದ ಔತಣ ಕೂಟದಲ್ಲಿ ಭಾಗವಹಿಸಿದ್ದೆ ಎಂದರೂ ಸುಲಭವಾಗಿ ನಂಬುತ್ತಾರೆ. ನನಗಿರುವ ಕಿಮ್ಮತ್ತು ಅವನಿಗಿಲ್ಲ. ಲೋ ಸತ್ಯ. ನೀನೂ ರೂಮರ್ ಅಂಥ ಹೆಸರು ಬದಲು ಮಾಡ್ಕೊಳೊ ಅಂತ ಸಾವಿರ ಸಲ ಹೇಳಿದ್ರೂ ಆಸಾಮಿ ಕಿವಿಗೇ ಹಾಕ್ಕೊಳಲ್ಲ" ರೂಮರ್ ನ ಅಶರೀರವಾಣಿಯನ್ನು ಎಲ್ಲರೂ ಗಂಭೀರವಾಗಿ ಕೇಳಿಸಿಕೊಂಡರು. ಒಬ್ಬರಿಗೂ ತಾಳುಬುಡ ಏನಂದರೇನೂ ಅರ್ಥವಾಗುತ್ತಿಲ್ಲ.
ಮತ್ತೆ ರೂಮರ್ ವಟಗುಟ್ಟಲು ಶುರುಮಾಡಿದ. "ನಿಮಗೆ ಈಗಲೂ ನನ್ನ ಬಗ್ಗೆ ಅರ್ಥ ಆಗಲಿಲ್ಲ ಅನ್ನೋದು ಗೊತ್ತಾಯ್ತು. ಮತ್ತೊಮ್ಮೆ ಕೇಳಿಸ್ಕೊಳಿ.
ನನ್ನ ಹೆಸರು ರೂಮರ್. ನಿಮ್ಮ ಭಾಷೆಯಲ್ಲಿ ನೀವು ವದಂತಿ, ಗಾಳಿಸುದ್ದಿ, ಪುಕಾರು, ಊಹಾಪೋಹ ಇನ್ನು ಏನೇನೋ ಹೆಸರಿಟ್ಟಿದ್ದೀರಿ. ನಾನು ಎಲ್ಲಿ ಹುಟ್ಟಿದೆ? ನನ್ನ ತಂದೆ ತಾಯಿ? ನನ್ನ ವಯಸ್ಸು? ಉಹೂಂ ಏನೂ ಗೊತ್ತಿಲ್ಲ. ಹುಟ್ಟಿದಾಗಿನಿಂದ ಗರಗರ ಅಂತ ಊರೂರು ಸುತ್ತುತ್ತಿದ್ದೀನಿ. ಲೋ ಬಟೂಟ ಏನೇನೋ ಇಷ್ಟು ಹೊತ್ತು ಒದರಿದ್ಯಲ್ಲ. ಕತ್ತೆ, ಕುದುರೆ, ಒಂಟೆ ಮೇಲೆಲ್ಲ ಕೂತು ಜಗತ್ತು ಸುತ್ತಿದೆ ಅಂತ. ನನಗೆ ಅದೂ ಬೇಡ ಕಣೋ. ಸುಮ್ನೆ ಗಾಳೀಲಿ ಹಾರ್ಕೊಂಡು ಸಮುದ್ರದಾಚೆಗೂ ವಿಷಯ ಮುಟ್ಟಿಸಿ ಬರ್ತೀನಿ. ನನಗೆ ಪಾಸ್ ಪೋರ್ಟ್ ಬೇಡ, ವೀಸಾ ಬೇಡ. ವಿಮಾನದಲ್ಲಿ ಎಕಾನಮಿ, ಬ್ಯುಸಿನೆಸ್, ಫಸ್ಟ್ ಕ್ಲಾಸ್ ಯಾವ ಸೀಟೂ ಬೇಡ. ನಾನು ಸರ್ವಾಂತರ್ಯಾಮಿ. ಬಟೂಟ ನಿನಗೆ ಗೊತ್ತಿರಲಿ. ನೀನು ಚೀನಾ ತಲುಪುವಷ್ಟರೊಳಗೆ ನೀನೊಬ್ಬ ಲೋಲುಪ ಅನ್ನೋ ರೂಮರ್ ನ ಎಲ್ಲೆಡೆ ಹಬ್ಬಿಸಿಬಿಟ್ಟಿದ್ದೆ. ನೀನು ಮಧ್ಯ ಪ್ರಾಚ್ಯ ದಾಟಿ ಬರುವ ಅಷ್ಟರೊಳಗೆ ನಾನು ಮೂವತ್ತು ದೇಶ ಸುತ್ತಿದ್ದೆ ಕಣೋ ಮುಟ್ಠಾಳ. ಅದೂ ನಿನ್ನ ಸುದ್ದಿ ಹೇಳೋಕೆ ಅಂತಾನೇ. ಎಷ್ಟೇ ಆದ್ರೂ ನನ್ನ ಹೆಸರು ಏನು ಹೇಳು? ರೂಮರ್" ಸಭಾಂಗಣದ ಛಾವಣಿ ಕಿತ್ತು ಹೋಗುವಂತೆ ರೂಮರ್ ನಕ್ಕನು. "ಏನ್ರಪ್ಪ ನೀವೆಲ್ಲರೂ ದಿ ಗ್ರೇಟ್ ಟ್ರಾವೆಲರ್ಸ್ ಗಳ? ನೀವೆಲ್ಲ ನೂರಾರು ದೇಶ ಸುತ್ತಿದ್ದೀರಿ ಗೊತ್ತು. ಆದರೆ ಲಕ್ಷ ಕಿ.ಮೀ ಸ್ಪೀಡ್ ನಲ್ಲಿ ನಾನು ಎಲ್ಲೆಲ್ಲಿ ಹೋಗಿ ಬಂದಿದ್ದೀನಿ ಗೊತ್ತಾ? ಏಕಕಾಲಕ್ಕೆ ಹತ್ತು ದೇಶಗಳಲ್ಲಿ ಸಂಚರಿಸುವ ತಾಕತ್ತಿದೆ ಕಣ್ರಯ್ಯಾ ನನಗೆ. ನೀವು ಈ ಆಡಿಟೋರಿಯಂ ದಾಟಿ ಬರುವಷ್ಟರೊಳಗೆ ಇಲ್ಲಿ ನಡೆಯಬಾರದ್ದನ್ನೂ ಹೇಳಿ ಅದಕ್ಕೊಂದಿಷ್ಟು ಒಗ್ಗರಣೆ ಸೇರಿಸಿ ಜಗತ್ತಿಗೆ ಹೇಳಿ ಬರ್ತೀನಿ ನೋಡ್ತೀರಾ?" ರೂಮರ್ ಮಾತನಾಡುತ್ತಲೇ ಇದ್ದ. ಅಲ್ಲಿ ಸೇರಿದ್ದ ಎಲ್ಲರಿಗೂ ರೂಮರ್ ನ ಸಾಧನೆಯ ಬಗ್ಗೆ ಗೊತ್ತಾಯಿತು. ಅವನ ಮುಂದೆ ತಾವೇನೂ ಅಲ್ಲ ಎಂಬುದನ್ನು ಅರಿತುಕೊಂಡರು. "ಹೇಗೋ ಮರ್ಯಾದೆಯಿಂದ ಬದುಕುತ್ತಿದ್ದೀವಿ. ಈ ರೂಮರ್ ಗ್ರೇಟ್ ಟ್ರಾವೆಲರ್ ಪಟ್ಟಕ್ಕಾಗಿ ಹಠತೊಟ್ಟು ತನಗೆ ತೋಚಿದಂತೆ ಮಾಡಿಬಿಡುತ್ತಾನೆ" ಸಭೆಯಲ್ಲೊಬ್ಬರು ಮಾತನಾಡಿದರು. "ರೂಮರ್ ಇಸ್ ದಿ ಗ್ರೇಟ್ ಟ್ರಾವೆಲರ್. ಆ ಪಟ್ಟ ಅವನಿಗೆ ಮಾತ್ರ. ಜಿಂದಾಬಾದ್ ಜಿಂದಾಬಾದ್ ರೂಮರ್ ಜಿಂದಾಬಾದ್" ಸ್ವತಃ ಬಟೂಟ, ಮಾರ್ಕೊ ಪೊಲೋ, ಮೆಗಲನ್, ತ್ಸಾಂಗ್ ಎಲ್ಲರೂ ಘೋಷಣೆ ಕೂಗಿದರು. ವಿಶ್ವೇಶ್ವರ ಭಟ್ಟರು ಒಂದು ಕಡೆ ನಿಂತು ಸುಮ್ಮನೆ ನಗುತ್ತಿದ್ದರು. ರೂಮರ್ "ಹಂಗೆ ಬನ್ನಿ ದಾರಿಗೆ" ಎಂದುಕೊಂಡು ಇದ್ದಕ್ಕಿದ್ದಂತೆ ಮಾಯವಾದ. ಈ ರೂಮರ್ ಏನು ಕಿತಾಪತಿ ಮಾಡಿದ್ದಾನೋ ಅಂದುಕೊಂಡು ಸಭೆಗೆ ಸೇರಿದ್ದ ಟ್ರಾವೆಲರ್ಸ್ ಗಳೆಲ್ಲರೂ ಕ್ಷಣಾರ್ಧದಲ್ಲಿ ಜಾಗ ಖಾಲಿ ಮಾಡಿದರು.