ವಿ’ಮಾನ’ ಉಳಿಸುವ ರೌಂಡ್ ಕಿಟಕಿಗಳು!
1952 ರಲ್ಲಿ ಪರಿಚಯಿಸಲಾದ ವಿಶ್ವದ ಮೊದಲ ವಾಣಿಜ್ಯ ಜೆಟ್‌ಲೈನರ್ ʻಡಿ ಹ್ಯಾವಿಲ್ಯಾಂಡ್ ಕಾಮೆಟ್ʼ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತ್ತು. ಆದರೆ ಇದರಲ್ಲಿ ಅಳವಡಿಸಲಾಗಿದ್ದ ಚೌಕಾಕಾರದ ಕಿಟಕಿಗಳ ಕಾರಣದಿಂದ ಹೊರಗಿನ ವಾತಾವರಣ ಹಾಗೂ ವಿಮಾನದೊಳಗಿನ ಒತ್ತಡ ಸರಿದೂಗಿಸಲು ಕಷ್ಟವಾಗಿ ಕಿಟಕಿಗಳ ಬಳಿ ಬಿರುಕು ಕಾಣಿಸಿಕೊಂಡಿತ್ತು. 1954 ರ ಹೊತ್ತಿಗೆ, ಅನೇಕ ದುರಂತಗಳು, ಅಪಘಾತಗಳು ಸಂಭವಿಸಿದ್ದವು.
ವಾಹನಗಳಲ್ಲಿ ಪ್ರಯಾಣಿಸುವಾಗ ಯಾವ ಸೀಟ್ ನಲ್ಲಿ ಕೂರುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸುವ ಮುನ್ನವೇ ವಿಂಡೋ ಸೀಟ್ ನಲ್ಲಿ ಕುಳಿತುಕೊಳ್ಳುವ ಮಂದಿ ನಮ್ಮ ನಡುವೆ ಹಲವರಿದ್ದಾರೆ. ಇಕ್ಕಟ್ಟಿನ ವಾತಾವರಣದಲ್ಲಿ ಕುಳಿತುಕೊಳ್ಳುವುದರಿಂದ ಉಸಿರಾಡಲು ಸಮಸ್ಯೆಯಾಗುವುದು, ವಾಕರಿಕೆ ಬರುವ ಅನುಭವವಾಗುವುದು, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಹೀಗೆ ವಿಂಡೋ ಸೀಟನ್ನು ಅಪ್ಪಿಕೊಳ್ಳಲು ಪ್ರತಿಯೊಬ್ಬರಿಗೂ ತನ್ನದೇ ಆದ ಕಾರಣಗಳಿರುತ್ತವೆ. ಆದರೆ ಸಾಮಾನ್ಯ ವಾಹನಗಳಲ್ಲಿ ಪ್ರಯಾಣಿಸುವಾಗ ಇರದ ಕೌತುಕ ವಿಮಾನ ಪ್ರಯಾಣದಲ್ಲಿ ಬಂದೇ ಬರುತ್ತೆ.
ವಿಮಾನದಲ್ಲಿ ಪ್ರಯಾಣಿಸುವಾಗಲೂ ವಿಂಡೋ ಪಕ್ಕದ ಸೀಟ್‌ನಲ್ಲಿ ಕುಳಿತು ಆಗಸದಿಂದ ಭೂಮಿಯನ್ನು ನೋಡುವ ಖುಷಿ, ಮೋಡಗಳ ನಡುವೆ ಹಾದುಹೋಗುತ್ತಿದ್ದೇವೆ ಎಂಬ ಸಂಭ್ರಮಗಳ ನಡುವೆಯೇ ಅರೆರೆ...ಈ ವಿಮಾನಗಳಲ್ಲಿ ವಿಂಡೋಗಳೇಕೆ ದುಂಡಗಿವೆ..? ಚೌಕಾಕಾರದಲ್ಲಿ ಕಾಣಸಿಗುವುದಿಲ್ಲವೇಕೆ ಎಂಬ ಪ್ರಶ್ನೆ ಅನೇಕರನ್ನು ಕಾಡಿರುತ್ತದೆ..

ನೋಡುವ ಕಣ್ಣುಗಳಿಗೆ ಹೊರ ಜಗತ್ತಿನ ನೋಟವನ್ನು ನೀಡುವ ಈ ಪೋರ್ಟಲ್‌ಗಳು ದುಂಡಗೆ ವಿನ್ಯಾಸಗೊಳಿಸಲು ಬಾಹ್ಯ ಸೌಂದರ್ಯವಷ್ಟೇ ಕಾರಣವಲ್ಲ. ಅದಕ್ಕೂ ಹೆಚ್ಚಾಗಿ ಇದೊಂದು ಆಯ್ಕೆಯೂ ಅಲ್ಲ. ಮನೆ ಅಥವಾ ಕಾರಿನಲ್ಲಿ ನೀವು ಕಾಣಬಹುದಾದ ಚೌಕಾಕಾರದ ಕಿಟಕಿಗಳಿಗಿಂತ ಭಿನ್ನವಾಗಿ, ವಿಮಾನದ ಕಿಟಕಿಗಳು ಹಾರಾಟದ ಅಗಾಧ ಒತ್ತಡಗಳನ್ನು ತಡೆದುಕೊಳ್ಳಲು, ಒತ್ತಡವನ್ನು ಸಮಾನವಾಗಿ ಹಂಚಿಕೊಳ್ಳಲು ಮತ್ತು ವಿಮಾನದ ರಚನೆಯ ಸಮಗ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ದುಂಡಾದ ಆಕಾರದಲ್ಲಿರುತ್ತವೆ.
ಇದನ್ನು ಓದಿ : ವಿಮಾನದ ಎತ್ತರಮಾಪಕ
ಆಧುನಿಕ ವಿಮಾನದ ಕಿಟಕಿಗಳು ಸದೃಢವಾಗಿದ್ದು, ಬಹು ಪದರಗಳಿಂದ ಕೂಡಿದೆ.
ಅವು ಬಲವಾದ ಅಕ್ರಿಲಿಕ್ ಅಥವಾ ಗಾಜಿನ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ. ಒತ್ತಡವನ್ನು ಕ್ರಮೇಣ ಸಮೀಕರಿಸಲು ಒಳಗಿನ ಪದರದಲ್ಲಿ ಸಣ್ಣ "ಬ್ಲೀಡ್ ಹೋಲ್" ಸೇರಿದಂತೆ ಬಹು ಫಲಕಗಳನ್ನು ಹೊಂದಿರುತ್ತವೆ. ಹೊರಗಿನ ಫಲಕವು ಅದರ ದುಂಡನೆಯ ಆಕಾರಗಳಿಂದಾಗಿಯೇ ಬಾಹ್ಯ ಶಕ್ತಿಗಳ ಭಾರವನ್ನು ನಿಭಾಯಿಸುತ್ತವೆ.
ವಿಮಾನದ ವಿಂಡೋಸ್ ದುಂಡಗಿರಲು ಸೌಂದರ್ಯದ ಉದ್ದೇಶವಷ್ಟೇ ಅಲ್ಲದೆ ವೈಜ್ಞಾನಿಕ ಕಾರಣಗಳೂ ಇವೆ.
ಬಿರುಕುಗಳನ್ನು ತಡೆಯಬಲ್ಲವು
ಸುರಕ್ಷತೆಯ ದೃಷ್ಟಿಯಿಂದ ವಿಮಾನದ ಕಿಟಕಿಗಳನ್ನು ದುಂಡಗೆ ರಚಿಸಲಾಗುತ್ತದೆ. ಇಂಥ ಕಿಟಕಿಗಳು ರಚನಾತ್ಮಕ ಶಕ್ತಿಯನ್ನು ಒದಗಿಸುತ್ತವೆ ಮತ್ತು ತೂಕವನ್ನು ಸಮವಾಗಿ ಹಂಚಿಕೊಳ್ಳುತ್ತದೆ. ಇದರಿಂದ ವಿಮಾನದ ಒಳ ಹಾಗೂ ಹೊರಭಾಗದಲ್ಲಿ ಬಿರುಕು ಬೀಳುವ ಸಾಧ್ಯತೆಯೂ ಕಡಿಮೆ.
ಕ್ಯಾಬಿನ್ ಒತ್ತಡ ಸರಿದೂಗಿಸಲು ಸಹಾಯಕ
ವಿಮಾನವು ಕ್ರೂಸಿಂಗ್ ಎತ್ತರಕ್ಕೆ ಏರಿದಾಗ, ಹೊರಗಿನ ಗಾಳಿಯ ಒತ್ತಡ ತೀವ್ರವಾಗಿ ಕಡಿಮೆಯಾಗುತ್ತದೆ. ಆದರೆ ಕ್ಯಾಬಿನ್ ಒತ್ತಡದಲ್ಲಿರುತ್ತದೆ. ಈ ಒತ್ತಡದ ವ್ಯತ್ಯಾಸವು ವಿಮಾನದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ದುಂಡಗಿನ ಕಿಟಕಿಗಳು ಬಲವಾಗಿದ್ದು, ಈ ಪುನರಾವರ್ತಿತ ಒತ್ತಡವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.
ದೀರ್ಘಾಯುಷ್ಯಕ್ಕೆ ಮೂಲ ಕಾರಣ
ವಿಮಾನದೊಳಗೆ ಹೆಚ್ಚಿನ ಒತ್ತಡ ಸೃಷ್ಟಿಯಾದರೆ ಇದು ವಿಮಾನದ ರಚನೆಯ ಮೇಲೆ, ಲೋಹದ ಮೇಲ್ಮೈಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ ಅಲ್ಲಿರುವ ದುಂಡಗಿನ ಕಿಟಕಿಗಳು ಈ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ವಿಮಾನದ ಚೌಕಟ್ಟಿನ ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ವಿಮಾನದ ನಿರ್ವಹಣೆ ಮತ್ತು ದುರಸ್ತಿಗಾಗಿ ಸಮಯ ಮತ್ತು ಹಣ ವ್ಯಯಿಸುವುದನ್ನು ಉಳಿಸಬಹುದು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ
ತುರ್ತು ಪರಿಸ್ಥಿತಿಯ ವೇಳೆ ಪ್ರತಿ ಸೆಕೆಂಡ್ ಸಹ ಅತಿ ಮುಖ್ಯವಾಗುತ್ತದೆ. ದುಂಡಗಿನ ಕಿಟಕಿಗಳ ಈ ವಿಶೇಷ ವಿನ್ಯಾಸ ವಿಮಾನದ ಒಳಾಂಗಣದ ಒತ್ತಡವನ್ನು ಕಡಿಮೆಗೊಳಿಸಿ, ಪ್ರಯಾಣಿಕರಿಗೆ ರಕ್ಷಣೆಯ ಪದರವನ್ನು ನೀಡುತ್ತದೆ. ಕಿಟಕಿಗಳು ಚೌಕವಾಗಿದ್ದರೆ, ಕ್ಯಾಬಿನ್ ಒತ್ತಡದಿಂದಾಗಿ ಕಿಟಕಿ ಒಡೆಯುವ ಸಾಧ್ಯತೆಯಿದ್ದು, ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡಬಹುದು.
ಕಣ್ಣು ಹಾಯಿಸೋದಕ್ಕೂ ಆರಾಮ
ದುಂಡಗಿನ ಕಿಟಕಿಗಳ ವಿಶೇಷ ವಿನ್ಯಾಸವು ವಿಮಾನದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಿಮಾನದೊಳಗಷ್ಟೇ ಅಲ್ಲದೆ, ಹೊರಾಂಗಣದಲ್ಲೂ ಆಕರ್ಷಕ ನೋಟವನ್ನು ನೀಡುತ್ತದೆ. ಚೌಕಾಕಾರದ ಕಿಟಕಿಗಳಿಗೆ ಹೋಲಿಸಿದರೆ ದುಂಡಗಿನ ಕಿಟಕಿಗಳ ಮೂಲಕ ಹೊರ ಜಗತ್ತನ್ನು ನೋಡುವುದೇ ಸುಲಭ ಎನ್ನುವ ಪ್ರಯಾಣಿಕರೇ ಹೆಚ್ಚು. ಇದು ದೃಷ್ಟಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ.
ಈ ಲೇಖನ ಓದಿದ ನಂತರ, ಮುಂದಿನ ಬಾರಿ ವಿಮಾನದಲ್ಲಿ ವಿಂಡೋಗಳನ್ನು ನೋಡಿದಾಗ ನಿಮಗೆ ದುಂಡನೆಯ ಕಿಟಕಿಗಳ ಬಗ್ಗೆ ವಿಶೇಷವಾಗಿ ಗಮನ ಹೋಗುವುದು ಖಚಿತ.