Monday, August 18, 2025
Monday, August 18, 2025

ಅಮೆರಿಕದಲ್ಲಿ ಗೊರೂರಿನ ಎಂಬತ್ತರ ಅಜ್ಜ

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಮೆರಿಕ ದೇಶದ ಪ್ರವಾಸ ಕಥನವಾದ "ಅಮೆರಿಕಾದಲ್ಲಿ ಗೊರೂರು" ಎಂಬ ಪುಸ್ತಕವು ಪ್ರವಾಸ ಕಥನಗಳ ಸಾಲಿನಲ್ಲಿ ಅಗ್ರಮಾನ್ಯವಾದುದು.

"ಅಮೆರಿಕದಲ್ಲಿ ಅನಿವಾರ್ಯವಾಗಿರುವ ಟೆಲಿವಿಷನ್‌ನಿಂದ ಅನೇಕ ಕೇಡುಗಳು ಸಂಭವಿಸುತ್ತವೆ. ಅಮೆರಿಕದ ಜನತೆ ಮೊದಲೇ ಮಾತನಾಡುವುದು ಕಡಿಮೆ. ಟೆಲಿವಿಷನ್ ಬಂದುದರಿಂದ, ಒಬ್ಬರನ್ನೊಬ್ಬರು ನೋಡಿ ಮಾತನಾಡುವುದಕ್ಕೆ ಹೋದರೂ ಟೆಲಿವಿಷನ್ ನೋಡುತ್ತ ಮೌನವಾಗಿ ಕುಳಿತು ಬಿಡುತ್ತಾರೆ" ಹೀಗೆ ಬರೆಯುತ್ತಾರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್. ಇದು 1970-80 ರ ದಶಕದ ಅಮೆರಿಕವನ್ನು ಅವರು ಕಟ್ಟಿಕೊಟ್ಟ ಪರಿ.

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಮೆರಿಕ ದೇಶದ ಪ್ರವಾಸ ಕಥನವಾದ "ಅಮೆರಿಕಾದಲ್ಲಿ ಗೊರೂರು" ಎಂಬ ಪುಸ್ತಕವು ಪ್ರವಾಸ ಕಥನಗಳ ಸಾಲಿನಲ್ಲಿ ಅಗ್ರಮಾನ್ಯವಾದುದು. 1977 ರ ಆಗಸ್ಟ್ ತಿಂಗಳ 15 ರಂದು ಪತ್ನಿಯೊಂದಿಗೆ ದೆಹಲಿಯಿಂದ ಅಮೆರಿಕಕ್ಕೆ ಹೊರಟ ರಾಮಸ್ವಾಮಿಯವರು ಅಲ್ಲಿ ಕೆಲವು ದಿನಗಳು ಪರದೇಸಿಯಾಗಿ ಅಮೆರಿಕ ಮತ್ತು ಕೆನಡಾ ದೇಶದಲ್ಲಿ ಅಲೆದಾಡುತ್ತಾರೆ. ಹಾಗೆ ಅಲ್ಲಿ ಕಂಡು ಅನುಭವಿಸಿದ ರಸಾನುಭವಗಳು, ಫಜೀತಿಗಳು, ಎದುರಿಸಿದ ತಾಪತ್ರಯಗಳು ಮತ್ತು ಅಮೆರಿಕ ದೇಶದ ಕುರಿತಾದ ಅವರ ಒಟ್ಟಾರೆ ಅನಿಸಿಕೆಗಳು ' ಈ ಕಥನದಲ್ಲಿದೆ.

download (2)

1977 ರ ಅಮೆರಿಕದ ಬೆಡಗು-ಬಿನ್ನಾಣವನ್ನು ಗೊರೂರು ಅತ್ಯಂತ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಗೊರೂರು ತಮ್ಮ 80ರ ಇಳಿವಯಸ್ಸಿನಲ್ಲಿ ಅಮೆರಿಕ ಪ್ರವಾಸಕ್ಕೆ ಹೊರಟಿದ್ದು ತೀರಾ ವಿಶೇಷ. ತಮ್ಮ ಪತ್ನಿಯೊಂದಿಗೆ ಅಮೆರಿಕದ ಬೀದಿ ಬೀದಿಗಳಲ್ಲಿ ಅಲೆದು ಅಲ್ಲಿನ ಎಲ್ಲಾ ಅನುಭವಗಳ ನೆನಪಿನ ಬುತ್ತಿಯನ್ನು ತಮ್ಮ ಪ್ರವಾಸ ಕಥನದಲ್ಲಿ ಉಣಬಡಿಸಿದ್ದಾರೆ. ಇಡೀ ಪ್ರವಾಸ ಕಥನವು ವಯೋವೃದ್ಧನೊಬ್ಬನ ಸ್ವಗತ ಸಂಭಾಷಣೆ ಅಥವಾ ವಟಗುಟ್ಟುವಿಕೆಯಾಗಿರದೆ ನವ ತರುಣನೊಬ್ಬನ ಅನುಭವ ಕಥನದಂತೆ ಓದುಗರಿಗೆ ಮುದ ನೀಡುತ್ತದೆ. ಅಂದಿನ ಅಮೆರಿಕ ದೇಶದ ರಾಜಕೀಯ ಸ್ಥಿತ್ಯಂತರ, ಶೈಕ್ಷಣಿಕ ಚಿತ್ರಣ, ಆರ್ಥಿಕತೆ, ಮಾನವೀಯ ಸಂಬಂಧ, ಆಧುನೀಕರಣ, ವರ್ತಮಾನದ ತಲ್ಲಣಗಳು ಹೀಗೆ ಹಲವು ರೀತಿಯಲ್ಲಿ ಅಮೆರಿಕ ಎಂಬ ವಿಸ್ಮಯ ದೇಶದ ಕುರಿತಾದ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಈ ಹಿಂದೆ ಸಾಕಷ್ಟು ಪ್ರವಾಸ ಕಥನಗಳು ಬಂದಿವೆಯಾದರೂ ಗೊರೂರು ಅವರ 'ಅಮೆರಿಕಾದಲ್ಲಿ ಗೊರೂರು' ಪ್ರವಾಸ ಕಥನವು ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗ. ಸರಳ ನಿರೂಪಣೆ, ನಿರಾಡಂಬರ ಭಾಷೆ, ವಿನೋದ ಮತ್ತು ಎಲ್ಲಿಯೂ ಸಪ್ಪೆಯೆನಿಸದ ಕಥೆಗಳು ಓದುಗರಿಗೆ ರಸಸ್ವಾದವನ್ನು ನೀಡಬಲ್ಲವು. ಅಮೆರಿಕ ಕಥನದಲ್ಲಿ ಗೊರೂರು ಭಾರತದ ಕನ್ನಡಿ ಹಿಡಿದಿರುವುದು ಪುಸ್ತಕದ ಹೆಚ್ಚುಗಾರಿಕೆ. ಅತ್ಯಂತ ಜನಮನ್ನಣೆಗೆ ಪಾತ್ರವಾಗಿರುವ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!