ಕಣ್ಣು ಬರೆದ ಮೇಲೆ ಭೂಮಿಗೆ ಬರುವ ದೇವಿ
ಕೋಲ್ಕತ್ತ ದುರ್ಗಾ ಪೂಜಾ ಉತ್ಸವದ ಪ್ರಮುಖ ಆಕರ್ಷಣೆ ಆಹಾರ. ಬಂಗಾಳಿ ಪಾಕಪದ್ಧತಿಯ ಅತ್ಯಂತ ರುಚಿಕರವಾದ ಭಕ್ಷ ಭೋಜನವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಸಂದೇಶ, ರಸಗುಲ್ಲಾ, ಚಂಪಾಕಲಿ, ಜಿಲೇಬಿ ಹೀಗೆ ನೂರಾರು ಸಿಹಿ ತಿನಿಸುಗಳು ಭೋಜನ ಪ್ರಿಯರನ್ನು ಸೆಳೆಯುವುದಂತು ಸುಳ್ಳಲ್ಲ. ಪಶ್ಚಿಮ ಬಂಗಾಳದ ಕೆಲವು ಸಮುದಾಯಗಳು ವಿಶೇಷವಾಗಿ ಮೀನುಗಾರರು ಮಾಂಸಹಾರವನ್ನು ನೈವೇದ್ಯದ ರೂಪದಲ್ಲಿ ನೀಡುವ ಪದ್ಧತಿಯನ್ನು ಹೊಂದಿದ್ದಾರೆ.
- ವಿಶಾಖಾ ಭಟ್ ಹೆಗ್ಗಾರ್
ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುವ ನಗರ, ದುರ್ಗೆಯನ್ನು ಆರಾಧಿಸಲು ಸಜ್ಜಾದ ಸುಂದರ ಪೆಂಡಾಲ್‌ಗಳು, ಹೊರ ರಾಜ್ಯಗಳಿಂದ ಹಬ್ಬ ನೋಡಲೇಂದೇ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಕಾದು ನಿಂತಿರುವ ಹಳದಿ ಬಣ್ಣದ ಟ್ಯಾಕ್ಸಿ. ಇಡೀ ನಗರವೇ ಸಿಹಿಯ ಘಮದಿಂದ ತೇಲುತ್ತಿದೆ. ಇದು ನವರಾತ್ರಿ ಸಂದರ್ಭದಲ್ಲಿ ಕೊಲ್ಕತ್ತಾದ ಚಿತ್ರಣವಿದು.
ಕಾಳಿ, ದುರ್ಗೆಯರು ನೆಲೆಸಿರುವ ಭೂಮಿಯಲ್ಲಿ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಣೆಯಾಗುತ್ತದೆ ಕೆಂಪು, ಬಿಳಿ, ಹಳದಿ ಬಣ್ಣ ಇಡೀ ನಗರವನ್ನೇ ಆವರಿಸುತ್ತದೆ. ಹೊರ ದೇಶಗಳಿಂದಲೂ ದುರ್ಗಾ ಮಾತೆಯ ವೈಭವನ್ನು ಕಣ್ತುಂಬಿಕೊಂಡು ಬಂಗಾಳದ ಸಾಂಸ್ಕೃತಿಕ ಆಚರಣೆಯಲ್ಲಿ ಮಿಂದೇಳಲು ಭಕ್ತರು ಆಗಮಿಸುತ್ತಾರೆ.

ಭಾರತದಾದ್ಯಂತ ನವರಾತ್ರಿಯನ್ನು ಅದ್ಧೂರಿಯಾಗಿಯೇ ಆಚರಿಸಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆ, ಸಂಪ್ರದಾಯ ವಿಭಿನ್ನವಾದರೂ, ದೇವಿಯನ್ನು ಆರಾಧಿಸುವ ಬಗೆಯೊಂದೆ. ಪುರಾಣಗಳ ಪ್ರಕಾರ ರಾಕ್ಷಸ ಮಹಿಷಾಸುರನ್ನು ದುರ್ಗಾ ದೇವಿ ಒಂಬತ್ತು ದಿನಗಳು ಹೋರಾಡಿ ಹತ್ತನೇ ದಿನಕ್ಕೆ ರಾಕ್ಷಸನನ್ನು ವಧೆ ಮಾಡಿದಳು. ಈ ದಿನವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ದುರ್ಗಾಪೂಜೆ ಪಶ್ಚಿಮ ಬಂಗಾಳದ ಮುಖ್ಯ ಹಬ್ಬ. ಮಹಾಲಯ ಅಮಾವಾಸ್ಯೆಯಂದು ನದಿ ಸ್ನಾನ ಮಾಡಿ ತರ್ಪಣ ಬಿಡುವುದರಿಂದಲೇ ಹಬ್ಬ ಆರಂಭವಾಗುತ್ತದೆ. ನವರಾತ್ರಿ ಪ್ರಾರಂಭಕ್ಕೂ ಒಂದು ತಿಂಗಳು ಮೊದಲೇ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕುಮಾರತುಲಿ ಎಂಬ ಜಾಗದಲ್ಲಿ ವಿಗ್ರಹಗಳ ತಯಾರಿಕೆ ಮಾಡಲಾಗುತ್ತದೆ. ಕೊಲ್ಕತ್ತ ನವರಾತ್ರಿಯ ಮತ್ತೊಂದು ವಿಶೇಷವೇನೆಂದರೆ ಇಲ್ಲಿ ಕೇವಲ ದುರ್ಗೆ ಮಾತ್ರ ಅಲ್ಲ, ಆಕೆಯ ಮಕ್ಕಳಾದ ಕಾರ್ತಿಕೇಯ ಹಾಗೂ ಗಣೇಶನೂ ಪೂಜಿಸ್ಪಡುತ್ತಾರೆ.
ನವರಾತ್ರಿ ಪ್ರಾರಂಭವಾಗುವ ಒಂದು ವಾರದ ಮೊದಲು, ದುರ್ಗಾ ದೇವಿಯ ವಿಗ್ರಹಗಳಿಗೆ ಬಣ್ಣ ಬಳಿದು ಸಿದ್ಧಪಡಿಸಲಾಗುತ್ತಿದೆ. ಆದರೆ ಕಣ್ಣುಗಳಿಗೆ ಮಾತ್ರ ಯಾವುದೇ ಬಣ್ಣಗಳನ್ನು ಮಾಡಲಾಗುವುದಿಲ್ಲ. ವಿಗ್ರಹಗಳ ಮೇಲೆ ಕಣ್ಣುಗಳನ್ನು ಬಿಡಿಸುವ ಸಮಯದಲ್ಲಿ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ವಿಗ್ರಹ ಪ್ರತಿಷ್ಠಾಪನೆಯ ಹಿಂದಿನ ದಿನ ಈ ಕಾರ್ಯ ನಡೆಯುತ್ತಿದೆ. ಸುಂದರವಾಗಿ ಅಲಂಕರಿಸಲ್ಪಟ್ಟ ಪೆಂಡಾಲ್ (ವೇದಿಕೆ) ಮೇಲೆ ದೇವಿ ಆಸೀನಳಾಗುತ್ತಾಳೆ. ಹೆಂಗಳೆಯರು ಕೆಂಪು ಸೀರಿಯನ್ನುಟ್ಟು ಮೊದಲ ದಿನ ದುರ್ಗೆಯನ್ನು ಆರಾಧಿಸುತ್ತಾರೆ. ಅಲ್ಲಿ ದುರ್ಗಾ ದೇವಿಯ ದಂತ ಕಥೆಗಳಿಂದ ಹಿಡಿದು ಮಹಾಕಾವ್ಯಕ್ಕೆ ಸಂಬಂಧಿಸಿದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. 1943 ರಲ್ಲಿ ಸ್ಥಾಪನೆಯಾದ ಏಕದಾಲಿಯಾ ಎವರ್‌ಗ್ರೀನ್ ಕೊಲ್ಕತ್ತಾದ ಪ್ರಸಿದ್ಧ ಪೆಂಡಾಲ್ ಆಗಿದ್ದು, ಇದನ್ನು ನೋಡಲೇಂದೇ ಲಕ್ಷಾಂತರ ಜನ ಸೇರುತ್ತಾರೆ.

ಕೋಲ್ಕತ್ತ ದುರ್ಗಾ ಪೂಜಾ ಉತ್ಸವದ ಪ್ರಮುಖ ಆಕರ್ಷಣೆ ಆಹಾರ. ಬಂಗಾಳಿ ಪಾಕಪದ್ಧತಿಯ ಅತ್ಯಂತ ರುಚಿಕರವಾದ ಭಕ್ಷ ಭೋಜನವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಸಂದೇಶ, ರಸಗುಲ್ಲಾ, ಚಂಪಾಕಲಿ, ಜಿಲೇಬಿ ಹೀಗೆ ನೂರಾರು ಸಿಹಿ ತಿನಿಸುಗಳು ಭೋಜನ ಪ್ರಿಯರನ್ನು ಸೆಳೆಯುವುದಂತು ಸುಳ್ಳಲ್ಲ. ಪಶ್ಚಿಮ ಬಂಗಾಳದ ಕೆಲವು ಸಮುದಾಯಗಳು ವಿಶೇಷವಾಗಿ ಮೀನುಗಾರರು ಮಾಂಸಹಾರವನ್ನು ನೈವೇದ್ಯದ ರೂಪದಲ್ಲಿ ನೀಡುವ ಪದ್ಧತಿಯನ್ನು ಹೊಂದಿದ್ದಾರೆ. ಮೀನು ಸಾರು ಹಾಗೂ ಕುರಿ ಮಾಂಸದ ಅಡುಗೆಯನ್ನು ದುರ್ಗೆಗೆ ನೀಡಲಾಗುತ್ತದೆ.
ಹಗಲೀಡೀ ಬಣ್ಣಗಳಿಂದ ಕಂಗೊಳಿಸುತ್ತಿರುವ ನಗರ ಕತ್ತಲಾದಂತೆ ದೀಪಗಳ ಬೆಳಕಿನಲ್ಲಿ ಮಿಂಚುತ್ತವೆ. ನವರಾತ್ರಿಯ ಸಾಂಸ್ಕೃತಿಕ ಸಂಜೆ ಹಬ್ಬದ ಮೆರಗನ್ನು ಹೆಚ್ಚಿಸುವುದರ ಜೊತೆಗೆ ಭವ್ಯವಾದ ಪರಂಪರೆಯನ್ನು ಸಾರುತ್ತದೆ. ಕೆಂಪಂಚಿನ ಬಿಳಿ ಸೀರೆಯುಟ್ಟ ಯುವತಿಯರು ಕೈಯಲ್ಲಿ ಮಣ್ಣಿನ ದೀಪ ಹಿಡಿದು ನೃತ್ಯ ಮಾಡುತ್ತಿದ್ದರೆ, ಮತ್ತೊಂದೆಡೆ ಮೈತುಂಬಾ ಬಣ್ಣ ಬಳಿದು ಹೆಜ್ಜೆ ಹಾಕುವ ಪುರುಷರು. ರಸ್ತೆಯುದಕ್ಕೂ ರಾಮಾಯಣ, ಮಹಾಭಾರತದ ಕತೆಯನ್ನೊಳಗೊಂಡ ಕೀರ್ತನೆ ಹಾಡುತ್ತ ನೃತ್ಯ ಮಾಡುವವರು ಗಮನ ಸೆಳೆಯುತ್ತಾರೆ. ನವರಾತ್ರಿಯ ವೈಭವವನ್ನು ನೋಡ ಬಯಸುವವರು ಕೊಲ್ಕತ್ತಾಕ್ಕೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು.