ಅಮೆರಿಕಾ ಅಮೆರಿಕಾ
ಎಲ್ಲವನ್ನೂ ಕುತೂಹಲದಿಂದ ನೋಡುವ ವಯಸ್ಸಿನ ನನ್ನ ಮಗಳಿಗೆ ವಿಮಾನದಲ್ಲಿ ಕಂಡಿದ್ದೆಲ್ಲದರ ಬಗ್ಗೆ ಪ್ರಶ್ನೆಗಳು. ಟಿವಿ ನೋಡಬೇಕೆಂಬ ಆಸೆ, ತಿನ್ನಲು ಅದನ್ನು ಕೊಡಿಸು, ಇದನ್ನು ಕೊಡಿಸೆಂದು ಕಾಡಿಸಿದ ಪರಿ ಅಂಗಡಿಗೆ ಹೋದಾಗ ನಡೆಸುವ ಚೌಕಾಸಿ ಮಾತುಗಳಂತಿದ್ದವು. 24 ಗಂಟೆಗಳ ಸುದೀರ್ಘ ಪಯಣದ ಕೊನೆಯ ಎರಡು ಗಂಟೆಗಳ ಅವಧಿಯಲ್ಲಿ ತಂದಿರಿಸಿದ ಭಾವನೆಗಳ ಹೊಯ್ದಾಟಕ್ಕೆ ಮನಸ್ಸು ಜಗಳಕ್ಕೆ ಇಳಿಯಿತು.
- ಸೀಮಾ ಬುರ್ಡೆ, ಮೈಸೂರು
ಈ ಮೊದಲು ವಿಮಾನದಲ್ಲಿ ಪ್ರಯಾಣಿಸಿದ್ದ ನನಗೆ ವಿದೇಶ ಪ್ರಯಾಣ ಹೊಸತು. ಹೊಸ ಕನಸುಗಳನ್ನು ಕಟ್ಟಿಕೊಂಡು ವಿದೇಶ ಪ್ರಯಾಣಕ್ಕೆ ಮುಹೂರ್ತ ಸಿಕ್ಕಿದ್ದು ಮಾರ್ಚ್ 11, 2020 ಕ್ಕೆ. ಕೋವಿಡ್- 19 ಬಗ್ಗೆ ಚರ್ಚೆಗಳು, ಆತಂಕಗಳಾಗಲೇ ಸುದ್ದಿಯಲ್ಲಿದ್ದವು. ಪ್ರಯಾಣ ಪೂರ್ವ ನಿರ್ಧಾರಿತವಾಗಿದ್ದರಿಂದ ಬದಲಾಯಿಸುವ ಯೋಚನೆಯಿಂದ ದೂರವೇ ಉಳಿದಿದ್ದೆವು. ಫೆಬ್ರವರಿಯಲ್ಲೇ ಅಮೆರಿಕಾ ಸೇರಿದ್ದ ಪತಿರಾಯರ ಅಣತಿಯಂತೆ ಮಗಳೊಡನೆ ಮೊದಲ ವಿದೇಶ ಪ್ರಯಾಣಕ್ಕೆ ತಯಾರಿ ಆಗಿತ್ತು. ದೇಶ ಬಿಟ್ಟು ಹೊರಡುವ ದಿನದಂದು ವಿಮಾನದ ಪಥ ಬದಲಾವಣೆಯ ಸಂದೇಶ ಬಂದರೂ ಪ್ರಬಲವಾಗಿ ಕಾಡಿರಲಿಲ್ಲ. ಕಾಲಕ್ಕನುಗುಣವಾಗಿ ನಿದ್ರೆಯ ಸಮಯದಲ್ಲಿ ವಿಮಾನ ಏರುವ ಪ್ರಮೇಯ.
ಎಲ್ಲವನ್ನೂ ಕುತೂಹಲದಿಂದ ನೋಡುವ ವಯಸ್ಸಿನ ನನ್ನ ಮಗಳಿಗೆ ವಿಮಾನದಲ್ಲಿ ಕಂಡಿದ್ದೆಲ್ಲದರ ಬಗ್ಗೆ ಪ್ರಶ್ನೆಗಳು. ಟಿವಿ ನೋಡಬೇಕೆಂಬ ಆಸೆ, ತಿನ್ನಲು ಅದನ್ನು ಕೊಡಿಸು, ಇದನ್ನು ಕೊಡಿಸೆಂದು ಕಾಡಿಸಿದ ಪರಿ ಅಂಗಡಿಗೆ ಹೋದಾಗ ನಡೆಸುವ ಚೌಕಾಸಿ ಮಾತುಗಳಂತಿದ್ದವು. 24 ಗಂಟೆಗಳ ಸುದೀರ್ಘ ಪಯಣದ ಕೊನೆಯ ಎರಡು ಗಂಟೆಗಳ ಅವಧಿಯಲ್ಲಿ ತಂದಿರಿಸಿದ ಭಾವನೆಗಳ ಹೊಯ್ದಾಟಕ್ಕೆ ಮನಸ್ಸು ಜಗಳಕ್ಕೆ ಇಳಿಯಿತು. ಯಾವ ಸುಖಾರ್ಥಕ್ಕೆ ಇಷ್ಟು ದೂರದ ಪ್ರಯಾಣದ ಅವಶ್ಯಕತೆ ಇತ್ತು!? ನಿನಗೆಲ್ಲ ಇದು ಬೇಕಿತ್ತಾ ಎಂದು ಬಲವಾಗಿ ತಲೆ ಕುಟ್ಟಿ ಕೇಳಿದಂತಿತ್ತು. ಅವಕಾಶವಿದ್ದಿದ್ದರೆ ತಿರುಗಿ ಊರಿಗೆ ಹೋಗಲೇ ಎಂಬ ವಿಚಿತ್ರ ಯೋಚನೆಗಳು ಸುಳಿದಾಡಿದವು. ಸೂರ್ಯ ಚಂದ್ರರ ತಿರುಗಾಟದ ಸಮಯಕ್ಕೆ ಅಷ್ಟು ಬೇಗ ಒಗ್ಗದ ದೇಹಕ್ಕೆ ನಿದ್ದೆಯ ಮಂಪರು. ಅಸಹನೆಯ ಆಟಕ್ಕೆ ವಿಲವಿಲನೆ ಒದ್ದಾಡಿದಂಥ ಯಾತನೆ. ಅಂತೂ ಇಂತೂ ಸೇರಬೇಕಾದ ಜಾಗವನ್ನು ಸೇರಿದ್ದಾಯಿತು. ಯಾವ ಮುನ್ಸೂಚನೆ ಇರದೆ ಮರುದಿನದಿಂದ ಅಮೇರಿಕಾ ತಲುಪುವ ವಿಮಾನಗಳನ್ನೆಲ್ಲ ತಡೆಹಿಡಿಯಲಾಯಿತು. ಅಪ್ಪ,ಅಮ್ಮ,ಮಗಳ ಸಮಯಕ್ಕಾಗಿ ಅಮೇರಿಕಾ ಕಾದಿರಬೇಕು.

ಲಾಕ್‌ಡೌನ್ ಎಂಬ ಆಟದಲ್ಲಿ ನಲುಗಿ ಇನ್ನೊಮ್ಮೆ ಅಮೆರಿಕಾಕ್ಕೆ ಬರಬೇಕೆಂಬ ಉತ್ಕಟ ಭಾವ ಮೂಡಲೇ ಇಲ್ಲ. ಭಯ, ಆತಂಕ, ಹೆದರಿಕೆಯಲ್ಲಿಯೇ ಐದು ತಿಂಗಳನ್ನು ಒಟ್ಟಾಗಿ ಕಳೆದ ನೆನಪುಗಳ ಜತೆ ಅಮ್ಮ,ಮಗಳು ವಾಪಸ್ಸು ಹೊರಡುವ ಸಮಯ. ವಿಮಾನ ಪ್ರಯಾಣದ ದರ ಹೆಚ್ಚಳವಾಗಿದ್ದನ್ನು ಕಂಡು, ಯಾವ ರೀತಿಯಲ್ಲಿ ತಾಯ್ನಾಡನ್ನು ಸೇರಬೇಕೆಂಬ ಚರ್ಚೆಯು ಆತಂಕದಲ್ಲೇ ನಡೆಯಿತು. ಜೀವದ ಜತೆ ಆಟವಾಡುತ್ತಿದ್ದ ಕೊರೋನಾ ವೈರಸ್ ಸೃಷ್ಟಿಸಿದ ಅರಾಜಕತೆಯಲ್ಲಿ ಐದು ವರ್ಷದ ಮಗುವನ್ನು ಸಂಭಾಳಿಸಿಕೊಂಡು ಹೋಗಬಹುದೆಂಬ ಧೈರ್ಯಕ್ಕೆ ಏರ್ ಇಂಡಿಯಾ ವಿಮಾನದ ಸೌಲಭ್ಯ ಸಹಕರಿಸಿತು. PPE kit ಧರಿಸಿ ಹೊಸ ಅನುಭವಗಳೊಂದಿಗೆ ವಾಪಸ್ಸು ಪಯಣ. ಅಮೇರಿಕಾದಿಂದ ದೆಹಲಿಯನ್ನು ತಲುಪಿ, ಅಲ್ಲಿಂದ ಬೆಂಗಳೂರಿಗೆ ಇನ್ನೊಂದು ವಿಮಾನದಲ್ಲಿ ಪ್ರಯಾಣ ನಿರ್ಧಾರವಾಗಿತ್ತು.

ದೆಹಲಿಯಲ್ಲಿ ಬಹಳ ಹೊತ್ತು ಕಾದು ಹತ್ತಿದ ವಿಮಾನದಲ್ಲಿ ನಾವೇ ಮೊದಲಿಗರು. ತಂಪಾದ ವಾತಾವರಣವು ಸೃಷ್ಟಿಯಾಗಿರದೆ, ಒಳಗೆ ಹೋದಾಗ ಉಸಿರುಗಟ್ಟಿದಂತಾಗಿ ಗಡಿಬಿಡಿಯಲ್ಲಿ ಹೊರಗೆ ಓಡಿ ಬಂದೆವು. ಸುಧಾರಿಸಿಕೊಂಡ ಜೀವವು ಮತ್ತೆ ಉದ್ದದ ವಿಮಾನದಲ್ಲಿ ಕೂತಿತು.
ದೆಹಲಿಯಿಂದ ಹೊರಟ ವಿಮಾನವು ಯಾವುದೋ ಕಾರಣದಿಂದ ತಿರುವನಂತಪುರ ನಿಲ್ದಾಣಕ್ಕೆ ಇಳಿದು ಸ್ವಲ್ಪ ಸಮಯದಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಮರುದಿನ ಅದೇ ವಿಮಾನ ತಿರುವನಂತಪುರದಲ್ಲಿ ಅಪಘಾತವಾಗಿ ಸಾವು ನೋವುಂಟಾಯಿತು. ನಮ್ಮ ಅದೃಷ್ಟದಲ್ಲಿ ಬದುಕುಳಿಯಬೇಕಿತ್ತು ಎಂಬುದು ಸಾಬೀತಾಯಿತೇ?
ಒಟ್ಟಿನಲ್ಲಿ ಅಮೆರಿಕಾ ಎಂಬ ದೇಶಕ್ಕೆ ಹೊರಟ ನಮ್ಮ ಅನುಭವವು ಈ ರೀತಿಯಲ್ಲಿ ಹೊರಬರಬೇಕಾಯಿತು.